ಕೇಂದ್ರ ಸರ್ಕಾರದಿಂದ ಟಿಕ್ ಟಾಕ್ ಗೆ ನೋಟೀಸ್ 

ಕೇಂದ್ರ ಸರ್ಕಾರದಿಂದ ಟಿಕ್ ಟಾಕ್ ಗೆ ನೋಟೀಸ್ 

ತನ್ನ ವೇದಿಕೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಆರೋಪ ಹೊತ್ತಿರುವ ಟಿಕ್ ಟಾಕ್ ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ.  

ಸಣ್ಣ ವಿಡಿಯೋ ಆಪ್ ಟಿಕ್ ಟಾಕ್ 2019ರಆರಂಭದಿಂದಲೂ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತ ಬಂದಿದೆ. ಕಳೆದ ವರ್ಷದಲ್ಲಿ ಅಬ್ಬರದ ಪ್ರಚಾರ ಗಿಟ್ಟಿಸಿ, ಕಾಡ್ಗಿಚ್ಚಿನಂತೆ ಹಬ್ಬಿದ್ದರೂ ಈ ವರ್ಷದಲ್ಲಿ ತನ್ನ ಉಳಿವಿಗಾಗಿ ಹೋರಾಡುತ್ತಿದೆ. ಕಾರಣ ಅದರ ನಿಷೇಧಕ್ಕೆ ಆಗ್ರಹಿಸುತ್ತಿರುವ ಧ್ವನಿಗಳಿಂದಾಗಿ. 

ಈ ವರ್ಷದ ಆರಂಭದಲ್ಲಿ ಕಂಪನಿಯ ವಿರುದ್ಧ ಮದ್ರಾಸ್ ಹೈ ಕೋರ್ಟ್ ನೀಡಿದ್ದ ನಿಷೇಧ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅದಕ್ಕನುಗುಣವಾಗಿ ತನ್ನೆಲ್ಲ ನಕಾರಾತ್ಮಕ ಅಂಶಗಳನ್ನು ಆಪ್ ನಿಂದ ಕಂಪನಿಯು ತೆಗೆದಿದ್ದರೂ ಸಹ ಅದಕ್ಕೆ ಮತ್ತೊಂದು ನಿಷೇಧ ಸಂಕಷ್ಟ ಎದುರಾಗಿದ್ದು ಅದು ಮುಂದಿನ ವಾರದಲ್ಲೇ ಜಾರಿಗೆ ಬರುವ ಸಂಭವವಿದೆ. 

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಗವಾದ ಸೈಬರ್ ಲಾ ಮತ್ತು ಇ – ಸೆಕ್ಯೂರಿಟಿಯು ಬುಧವಾರ ಟಿಕ್ ಟಾಕ್ ಅಭಿವೃದ್ಧಿಪಡಿಸಿದವರಿಗೆ ನೋಟಿಸ್ ಒಂದನ್ನು ಜಾರಿ ಮಾಡಿದೆ. ಅದರಲ್ಲಿ ಈ ಆಪ್, ನಮ್ಮ ಸಮಾಜ ಸೇರಿದಂತೆ ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಬಳಕೆಯಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಲು ಹೇಳಿದೆ. 

ಈ ನೋಟಿಸಿನೊಂದಿಗೆ ಒಂದು ಪ್ರಶ್ನಾವಳಿಯನ್ನು ಲಗತ್ತಿಸಿದ್ದು ಅದು ತನಿಖಾ ರೂಪದ ಪ್ರಶ್ನೆಗಳನ್ನೊಳಗೊಂಡಿದೆ. ಇದರೊಂದಿಗೆ ಕುತೂಹಲಕಾರಿ ಅಂಶವೇನೆಂದರೆ ನೋಟಿಸ್, ಪ್ರಶ್ನಾವಳಿಯ ಜೊತೆಗೆ ಸಚಿವಾಲಯವು ಇದೇ ಜುಲೈ 22 ರ ಒಳಗೆ ಉತ್ತರ ತಲುಪದ್ದಿದ್ದಲ್ಲಿ, ಕಂಪನಿಯು ಭಾರತೀಯ ಕಾಯಿದೆ ಪ್ರಕಾರ ನಿಷೇಧಕ್ಕೆ ಒಳಗಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದೆ.  

ಈ ಕುರಿತು ಪ್ರತಿಕ್ರಿಯಿಸಿರುವ ಟಿಕ್ ಟಾಕ್ ಸರ್ಕಾರದ ಆದೇಶಕ್ಕೆ ಸಹಕರಿಸುತ್ತೇವೆ ಎಂದಿದೆ.