ತೆರೆಗೆ ಬರದ ಚಿತ್ರಗಳಿಗೂ ಬಂತು ರಾಷ್ಟ್ರೀಯ ಪ್ರಶಸ್ತಿ! 

ತೆರೆಗೆ ಬರದ ಚಿತ್ರಗಳಿಗೂ ಬಂತು ರಾಷ್ಟ್ರೀಯ ಪ್ರಶಸ್ತಿ! 

ಕನ್ನಡ ಚಿತ್ರಗಳಿಗೆ ದಾಖಲೆ ಪ್ರಮಾಣದಲ್ಲಿ ಪ್ರಶಸ್ತಿಗಳು ಪ್ರಕಟವಾಗಿದ್ದರೂ ಅದನ್ನು ಸಂಭ್ರಮಿಸುವಂಥ ಪರಿಸ್ಥಿತಿ ಇಲ್ಲ ಎಂದು ಜಿ.ಆರ್.ಸತ್ಯಲಿಂಗರಾಜು ಹೇಳುತ್ತಾರೆ.

ಕನ್ನಡಕ್ಕೆ ಡಜನ್‍ಗಟ್ಟಳೆ ರಾಷ್ಟ್ರೀಯ ಪ್ರಶಸ್ತಿಗಳು ಬಂದವೆಂದು ಸಂಭ್ರಮಿಸಬೇಕಾ, ಇವು ತೆರೆಗೇ ಬರಲ್ಲವಲ್ಲ ಎಂದು ದುಃಖಿಸಬೇಕಾ ಎಂಬುದೇ ಪ್ರೇಕ್ಷಕನನ್ನ ಗೋಜಲಿಗೆ ತಳ್ಳಿದೆ.

ಪ್ರತೀವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲೆ ರಾಷ್ಟ್ರಿಯ ಪ್ರಶಸ್ತಿಗಳು ಪ್ರಕಟವಾಗಬೇಕು. ಚುನಾವಣೆ ನೆಪದಿಂದ ಐದಾರು ತಿಂಗಳು ತಡವಾಗಿ ಪ್ರಕಟವಾಗಿದ್ದರೂ, ಕನ್ನಡದ ಪಾಲಿಗೆ ಹರ್ಷವನ್ನೇ ತಂದುಕೊಟ್ಟಿದೆ.

ಸ್ವರ್ಣ ಕಮಲ ಪಡೆದಿರುವ ಮಕ್ಕಳ ಚಿತ್ರ `ಕಾಸರಗೋಡು ಕನ್ನಡ ಹಿರಿಯ ಪ್ರಾಥಮಿಕ ಶಾಲೆ' ಬಾಕ್ಸ್ ಆಫೀಸ್‍ನಲ್ಲೂ ಭಾರೀ ಯಶಸ್ಸು ಕಂಡ ಚಿತ್ರ. ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳಿಸಿರುವ `ನಾತಿಚರಾಮಿ' ತೆರೆಗೆ ಬಂದರೂ, ಹೆಚ್ಚು ದಿನ ಓಡಲೇ ಇಲ್ಲ. ಕೆ.ಜಿ.ಎಫ್ ಅದ್ದೂರಿ ಗಾಫಿಕ್ ಮತ್ತು ಸಾಹಸ ಎರಡು ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದು, ಇದು ಕೂಡ ಬಾಕ್ಸ್ ಆಫೀಸ್‍ನಲ್ಲಿ ಹಣ ಬಾಚಿತಾದರೂ, ಹೈಪ್ ಸೃಷ್ಟಿಸಿದ್ದಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಕನ್ನಡದಲ್ಲೇ ನೂರು ಕೋಟಿ ಕ್ಲಬ್ ಸೇರಿದ ಚಿತ್ರ ಎಂಬೆಲ್ಲ ಹೊಗಳಿಕೆಗೆ ಪಾತ್ರವಾದರೂ, ಶತದಿನದ ಗಡಿ ಮುಟ್ಟಲಿಲ್ಲ. ಅಷ್ಟರೊಳಗೆ ಯಶ್ ಆದಾಯ ತೆರಿಗೆ ದಾಳಿಗೆ ಸಿಲುಕಿದ್ದು ಕೂಡ ಕಲೆಕ್ಷನ್ ಮೇಲೆ ಪರಿಣಾಮ ಬೀರಿತ್ತು.

ಪಿ.ಶೇಷಾದ್ರಿಯ ಮೂಕಜ್ಜಿಯ ಕನಸುಗಳು ಇನ್ನೂ ತೆರೆಗೆ ಬಂದಿಲ್ಲ. ಉಳಿದಂತೆ`ಒಂದಲ್ಲ ಎರಡಲ್ಲ' `ಸರಳ ವಿರಳ' ಪ್ರೇಕ್ಷಕನಿಗೆ ಲಭ್ಯವಿಲ್ಲದಂತಾಗಿವೆ. ಕೋಟಿಕೋಟಿ ಬಂಡವಾಳ, ಖ್ಯಾತ ತಾರಾಬಳಗ ಇರುವ ಚಿತ್ರಗಳೇ ಗೋತಾಹೊಡೆಯುತ್ತಿವೆ, ಬಹುತೇಕ ಸಿನಿಮಾಗಳ ವಿತರಣೆಗೆ ಯಾರೂ ಮುಂದಾಗಲ್ಲ. ಅಂಥದ್ದರಲ್ಲಿ ಪ್ರಶಸ್ತಿ ಪಡೆದ ಚಿತ್ರಗಳೆಂದರೆ `ಪ್ರಶಸ್ತಿಪೀಡಿತ' ಎಂಬಂತಾಗಿ ಹೋಗಿದ್ದು, ಇಂಥ ಚಿತ್ರ ಕೊಳ್ಳಲು ಹಂಚಿಕೆದಾರರೂ ಸಿಗಲ್ಲ. ನಿರ್ಮಾಪಕನೇ ಬಿಡುಗಡೆ ಮಾಡಿಕೊಳ್ಳಲು ಹೋದರೆ ಸಿನಿಮಾ ಮಂದಿರಗಳೇ ಸಿಗಲ್ಲ. ಅಲ್ಲೊಂದು ಇಲ್ಲೊಂದು ಸಿಕ್ಕರೆ ಅದಕ್ಕೆ ಕಟ್ಟುವ ಬಾಡಿಗೆಯೂ ಕಲೆಕ್ಷನ್ ಆಗಲ್ಲ. ಪರಿಣಾಮವಾಗಿ ಅದೆಷ್ಟೋ ಸಿನಿಮಾಗಳು ಪ್ರಶಸ್ತಿ ಪಡೆದರೂ ಥಿಯೇಟರ್ ಗೆ ಬರಲ್ಲ

ಆದರೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳಿಗೆ, ದೂರದರ್ಶನ ಭಾರೀ ಮೊತ್ತ ಕೊಟ್ಟ ಖರೀದಿಸುತ್ತವೆ. ರಾಜ್ಯದಲ್ಲಿ ಸಬ್ಸಿಡಿಯೂ ಯಾವ ಆಯ್ಕೆ ಮಂಡಳೀ ಮುಂದೆ ಹೋಗದೆ ಸಿಕ್ಕೆ ಸಿಗುತ್ತೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳನ್ನ ಹಿಡಿದುಕೊಂಡು ಓಡಾಡುವ ಅವಕಾಶವೂ ಸಿಗುತ್ತೆ. ಹೀಗಾಗಿಯೇ ಇಂಥ ಸಿನಿಮಾಗಳು ಪ್ರೇಕ್ಷಕನಿಗೆ ಲಭ್ಯವಾಗದಿದ್ದರೂ, ನಿರ್ಮಾಪಕ ನಿರ್ದೇಶಕರಿಗೆ ಹೆಸರು, ಲಾಭವನ್ನಂತೂ ತಂದುಕೊಡುತ್ತವೆ. ವಿಶೇಷವೆಂದರೆ ಈ ಸಲ ಥಿಯೇಟರ್ ಗೆ ಬಂದಿದ್ದ ಸಿನಿಮಾಗಳೆ ಪ್ರಶಸ್ತಿ ಗಳಿಸಿರುವುದು.  

ರಾಜ್ಯ ಪ್ರಶಸ್ತಿ ಪ್ರಕಟವಾಗಲು ದಿನಗಣನೆ ಆರಂಭವಾಗಿದ್ದರೂ, ಆಯ್ಕೆ ಸಮಿತಿ ತನ್ನ ಪಟ್ಟಿಕೊಡಲು ವಾರ್ತಾ ಮಂತ್ರಿಯೇ ಇಲ್ಲ.