ನಿರುದ್ಯೋಗ ನಿವಾರಣೆ ಸಮೀಕ್ಷೆ ಮಾಡದ ರಾಜ್ಯ ಸರ್ಕಾರ: ಲಭ್ಯವಿರುವ ಅಂಕಿ ಅಂಶಗಳೆಲ್ಲ ಲೊಳಲೊಟ್ಟೆ 

ನಿರುದ್ಯೋಗ ನಿವಾರಣೆ ಸಮೀಕ್ಷೆ ಮಾಡದ ರಾಜ್ಯ ಸರ್ಕಾರ: ಲಭ್ಯವಿರುವ ಅಂಕಿ ಅಂಶಗಳೆಲ್ಲ ಲೊಳಲೊಟ್ಟೆ 

ದೇಶದಲ್ಲಿ 2017-18ನೇ ಸಾಲಿಗೆ 70 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಪ್ರಧಾನಿ ಮೋದಿ ಮತ್ತು ಹಿಂದಿನ ಹಣಕಾಸು ಮಂತ್ರಿಗಳ ಪ್ರತಿಪಾದನೆಗಾಗಲೀ, ಉದ್ಯೋಗ ಸೃಷ್ಟಿಯಾಗಿದ್ದ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂಬ ಮಾಹಿತಿಗಾಗಲೀ ತಲೆಬುಡವೇ ಇಲ್ಲ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಮತ್ತು ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ದೊರಕಿರುವುದು ಹೊರತುಪಡಿಸಿದರೆ ಖಾಸಗಿ ವಲಯದ ಯಾವುದೇ ಮಾಹಿತಿ ರಾಜ್ಯ ಸರ್ಕಾರದ ಬಳಿ ಇಲ್ಲ. ಸಂಬಂಧಪಟ್ಟ ಇಲಾಖೆ ಬಳಿ ಲಭ್ಯ ಇರುವ ಮಾಹಿತಿಯೂ ವ್ಯತಿರಿಕ್ತವಾಗಿದೆ. ಈ ಕುರಿತು ಜಿ.ಮಹಂತೇಶ್ ಬೆಳಕು ಚೆಲ್ಲಿದ್ದಾರೆ. 

ಅತಿ ಹೆಚ್ಚು ಉದ್ಯೋಗ ಸೃಷ್ಟಿಸಿದ ಮೂರು ರಾಜ್ಯಗಳಲ್ಲಿ ಒಂದಾಗಿದೆ ಎಂದು ಹೆಮ್ಮೆಯಿಂದ ಬೀಗುತ್ತಿರುವ ಕರ್ನಾಟಕದಲ್ಲಿ ನಿರುದ್ಯೋಗ ದರ ಮತ್ತು ಉದ್ಯೋಗ ಸೃಷ್ಟಿ ಪ್ರಮಾಣದ ಬಗ್ಗೆ ಸರ್ಕಾರದಿಂದ ಈವರೆಗೂ ಒಂದೇ ಒಂದು ಸಮೀಕ್ಷೆಯೂ ನಡೆದಿಲ್ಲ. 

ಈ ಸಂಬಂಧ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧಿಕಾರಿಗಳು ಮತ್ತು ಇಲಾಖೆ ಸಚಿವರ ಬಳಿಯೂ ನಿಖರವಾದ ಮಾಹಿತಿ ಇಲ್ಲ. ಉದ್ಯೋಗ ಸೃಷ್ಟಿಯ ಅಧಿಕೃತ ಮಾಹಿತಿ ವ್ಯವಸ್ಥೆ ಇಲ್ಲದಿರುವುದು ಗೊತ್ತಿದ್ದರೂ ಕರ್ನಾಟಕ ಸರ್ಕಾರ ಈ ಸಂಬಂಧ ಕಾರ್ಯಪಡೆಯನ್ನೂ ರಚಿಸುವ ಗೋಜಿಗೆ ಹೋಗಿಲ್ಲ. ಸಚಿವರು ಮತ್ತು ಇಲಾಖೆ ಅಧಿಕಾರಿಗಳ ಬಳಿ  ಇರುವ ಮಾಹಿತಿಯೂ ವ್ಯತಿರಿಕ್ತದಿಂದ ಕೂಡಿವೆ. 
ರಾಜ್ಯದ ಪ್ರತಿ ಜಿಲ್ಲೆಯಲ್ಲಿ  ಉದ್ಯೋಗ ಮತ್ತು ವಿನಿಮಯ ಕೇಂದ್ರಗಳಿದ್ದರೂ ನಿರುದ್ಯೋಗಿಗಳ ಸಂಖ್ಯೆ ಎಷ್ಟಿದೆ ಮತ್ತು ಎಷ್ಟು ಮಂದಿ ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ ಎಂಬುದನ್ನು ಗೊತ್ತುಪಡಿಸಿಕೊಳ್ಳುವಲ್ಲಿಯೂ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ.  ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿದರೆ ಖಾಸಗಿ ಉದ್ಯಮಗಳ ವಲಯದಲ್ಲಿ ವಿಭಾಗವಾರು ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಬಳಿ ಇಲ್ಲ.

ಖಾಲಿ ಇರುವ ಉದ್ಯೋಗಗಳ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಿರುವ ಖಾಸಗಿ ಉದ್ಯಮಗಳು, ಈ ಸಂಬಂಧ ಉದ್ಯೋಗ ವಿನಿಮಯ ಅಧಿಕಾರಿಗಳಿಗೆ  ಕನಿಷ್ಠ ಮಾಹಿತಿಯನ್ನೂ ನೀಡುತ್ತಿಲ್ಲ. ಈ ಬಗ್ಗೆ ಕೌಶಲ್ಯಾಭಿವೃದ್ಧಿ ನಿಗಮವು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಮೂಲಕ ಬರೆದಿರುವ  ಹಲವು ನೆನಪೋಲೆಗಳನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಖಾಸಗಿ ಉದ್ಯಮಗಳ ಯಾವ ಯಾವ ವಿಭಾಗದಲ್ಲಿ ಎಷ್ಟೆಷ್ಟು ಉದ್ಯೋಗಗಳು ಖಾಲಿ ಇವೆ ಎಂಬುದನ್ನು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಲಾಗಿಲ್ಲ. 

ಈ ಎಲ್ಲ ಬೆಳವಣಿಗೆಗಳ ನಡುವೆ ಗ್ರಾಮೀಣ ಮತ್ತು ನಗರದ ದೊಡ್ಡ ಯುವ ಸಮೂಹವು ಉದ್ಯೋಗಗಳಿಗಾಗಿ ಒತ್ತಾಯಿಸಿ ಬೀದಿಗಿಳಿದಿದ್ದಾರೆ. ಆದರೂ ಸರ್ಕಾರಿ, ನರೇಗಾ ಹೊರತುಪಡಿಸಿ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಯತ್ತ ಸರ್ಕಾರ ರಚನಾತ್ಮಕವಾಗಿ ಕಾರ್ಯೋನ್ಮುಖವಾಗುತ್ತಿಲ್ಲ.

ನಿರುದ್ಯೋಗ ನಿವಾರಣೆಗಾಗಿ ಕೌಶಲ್ಯ ಮಿಷನ್ ಅರಂಭಿಸಿರುವ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಗೆ 2017-18 ಮತ್ತು 2018-19ರಲ್ಲಿ ಬಿಡುಗಡೆಯಾಗಿದ್ದ 275 ಕೋಟಿ ರು. ಪೈಕಿ ಒಟ್ಟು 115.67 ಕೋಟಿ ರು.ಖರ್ಚಾಗಿದೆಯಲ್ಲದೆ 159.33 ಕೋಟಿ ರು.ಬಾಕಿ ಉಳಿಸಿಕೊಳ್ಳಲಾಗಿದೆ. ಅದೇ ರೀತಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ  ಯೋಜನೆಯಡಿ ನಿಗಮಕ್ಕೆ 41.60 ಕೋಟಿ ರು.ಅನುದಾನ ಒದಗಿಸಿದೆ. ಈ ಪೈಕಿ 33.28 ಕೊಟಿ ರು.ಅನುದಾನ ಬಿಡುಗಡೆಯೂ ಆಗಿದೆ. ಜತೆಗೆ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ  ನಡೆದಿದೆ. 2018-19ನೇ ಸಾಲಿನಲ್ಲಿ ನಡೆದಿರುವ 180 ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಒಟ್ಟು 1,00,997 ಮಂದಿ ಅಭ್ಯರ್ಥಿಗಳ ಪೈಕಿ 25,300 ಮಂದಿಗಷ್ಟೇ ಉದ್ಯೋಗ ಲಭಿಸಿರುವುದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ 2019-20ನೇ ಸಾಲಿನ ಕಾರ್ಯನಿರ್ವಹಣೆ ವರದಿಯಿಂದ ತಿಳಿದು ಬಂದಿದೆ. 

ಅದೇ ರೀತಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆರಂಭವಾದ ದಿನದಿಂದ 2019ರ ಫೆಬ್ರುವರಿವರೆಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ 21 ಮೆಗಾ ಉದ್ಯೋಗ ಮೇಳಗಳು ನಡೆದಿವೆ. ಈ ಮೂಲಕ 51,122 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಹಿಂದಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಪಿ ಟಿ ಪರಮೇಶ್ವರ್ ನಾಯಕ್ ಅವರು 2019ರ ಫೆ.11ರಂದು ಸದನಕ್ಕೆ ಮಾಹಿತಿ ಒದಗಿಸಿದ್ದರು. 

ಪಿ.ಟಿ ಪರಮೇಶ್ವರ್ ನಾಯಕ್ ಅವರು ಸದನದಲ್ಲಿ ಒದಗಿಸಿದ್ದ ಮಾಹಿತಿಯ ಪ್ರತಿ

ಈ ಅಂಕಿ ಸಂಖ್ಯೆಗಳತ್ತ ಕಣ್ಣಾಡಿಸಿದರೆ ತರಬೇತಿ, ಉದ್ಯೋಗ ನೀಡಿಕೆಗೆ ಸಂಬಂಧಿಸಿದಂತೆ ಇಲಾಖೆ ಮತ್ತು ಸಚಿವರ ಬಳಿಯೇ ನಿಖರವಾದ ಮಾಹಿತಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಉದ್ಯೋಗ ಮೇಳಗಳಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗದಿರುವುದು ಸೂಕ್ತ ಕೌಶಲ್ಯ ತರಬೇತಿ ಇರಲಿಲ್ಲ ಎಂಬುದನ್ನೂ  ಎತ್ತಿ ತೋರಿಸುತ್ತದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಹೊರತುಪಡಿಸಿದಂತೆ ರಾಜ್ಯದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 2019ರ ಜನವರಿ ಅಂತ್ಯಕ್ಕೆ ಒಟ್ಟು 3,44,292 ಮಂದಿ ನಿರುದ್ಯೋಗಿಗಳು , ಕೌಶಲ್ಯಾಭಿವೃದ್ಧಿ ನಿಗಮದಲ್ಲಿ 2019ರ ಜುಲೈ ಅಂತ್ಯಕ್ಕೆ 9,42,243 ಸಂಖ್ಯೆಯಲ್ಲಿ ಕೌಶಲ್ಯ ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ. 9 ಲಕ್ಷದ ಪೈಕಿ 5,61,827 ಮಂದಿ ಪುರುಷರಿದ್ದರೆ, 3,63,026 ಮಹಿಳೆಯರಿದ್ದಾರೆ. ನೋಂದಾಯಿಸಿಕೊಂಡಿರುವ ಒಟ್ಟು ನಿರುದ್ಯೋಗಿಗಳ ಪೈಕಿ ಸಾಮಾನ್ಯ ವರ್ಗದ 2,30,071, ಅಲ್ಪಸಂಖ್ಯಾತ ಸಮುದಾಯದ 1,28,643 ಮಂದಿ , ಪರಿಶಿಷ್ಟ ಜಾತಿಯ 2,15,913, ಪರಿಶಿಷ್ಟ ಪಂಗಡದ 76,351, ವಿಶೇಷ ಚೇತನರಾದ 11,204 ಮಂದಿ ನಿರುದ್ಯೋಗಿಗಳಿದ್ದಾರೆ.

ಉದ್ಯೋಗಕ್ಕಾಗಿ ತರಬೇತಿ ಪಡೆಯಲು  ನೋಂದಾಯಿಸಿಕೊಂಡಿರುವ ಜಿಲ್ಲೆಗಳ ಪೈಕಿ  ಕಲಬುರಗಿ ಜಿಲ್ಲೆ (75,624) ಮೊದಲ ಸ್ಥಾನದಲ್ಲಿದ್ದರೆ, ರಾಯಚೂರು(71,665) ಎರಡನೇ ಮತ್ತು ಗಣಿ ಜಿಲ್ಲೆ ಬಳ್ಳಾರಿ(54,737) ಮೂರನೇ ಸ್ಥಾನದಲ್ಲಿದೆ. 

ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ನೋಂದಾಯಿಸಿ ಕೊಂಡಿರುವ ವಿವರದ ಪ್ರತಿ

ಇನ್ನು, ಪ್ರಧಾನಮಂತ್ರಿಗಳ ವಿಕಾಸ ಯೋಜನೆ(ಪಿಎಂಕೆವಿವೈ)ಯಡಿಯಲ್ಲಿ 2019ರ ಜುಲೈ 15ರ ಅಂತ್ಯಕ್ಕೆ ಕೇವಲ 390 ಅಭ್ಯರ್ಥಿಗಳಿಗಷ್ಟೇ ಉದ್ಯೋಗ ಅವಕಾಶ ದೊರೆತಿದೆ. ಕಳೆದ 3 ವರ್ಷಗಳಲ್ಲಿ ಉದ್ಯೋಗ ತರಬೇತಿ ಇಲಾಖೆ ಮೂಲಕ 37,190 ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಹಾಗೂ ಕೌಶಲ್ಯ ಮಿಷನ್ ಯೋಜನೆಯಡಿ 2017-18ರಿಂದ 2019ರ ಫೆಬ್ರುವರಿ ಅಂತ್ಯಕ್ಕೆ 86,543 ಅಭ್ಯರ್ಥಿಗಳಿಗೆ ಉದ್ಯೋಗ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ. 

ಇನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2018ರ ಡಿಸೆಂಬರ್ 20ರ ಅಂತ್ಯಕ್ಕೆ 2,51,423 ಹುದ್ದೆಗಳು ಖಾಲಿ ಇವೆ. ಹಾಗೆಯೇ ಕರ್ನಾಟಕ ಲೋಕಸೇವಾ ಆಯೋಗವು 2001ರಿಂದ 2019ರ ಜುಲೈ 18ರ ಅಂತ್ಯಕ್ಕೆ ಪತ್ರಾಂಕಿತ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇವಲ 1,917 ಮಂದಿಯನ್ನು ನೇಮಕ ಮಾಡಿಕೊಂಡಿರುವುದು ತಿಳಿದು ಬಂದಿದೆ. 

ದೇಶದ ಔಪಚಾರಿಕ ಕ್ಷೇತ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳನ್ನು ಅಂದಾಜು ಮಾಡಲು ಯಾವುದೇ ವೈಧಾನಿಕ ಪರಿಕ್ಷೆಗೊಳಪಡದ ಹೊಸ ಪದ್ಧತಿಯೊಂದನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅಳವಡಿಸಲಾರಂಭಿಸಿದೆ. ಹೀಗಾಗಿಯೇ ದೊರಕುತ್ತಿರುವ ಆ ಎಲ್ಲಾ ಮಾಹಿತಿಗಳು ವಿಶ್ವಾಸಾರ್ಹವಾದ ಮತ್ತು ಇತರ ಹಲವಾರು ಮೂಲದಿಂದ ದೊರಕುತ್ತಿರುವ ಉದ್ಯೋಗ ಮಾಹಿತಿಗೆ ವ್ಯತಿರಿಕ್ತವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 

ಅಲ್ಲದೆ ಸರ್ಕಾರವು ತನ್ನ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಈ ಹೊಸ ಪದ್ಧತಿಯನ್ನು  ಕಂಡುಕೊಂಡಿತ್ತು. 2018ರ ಏಪ್ರಿಲ್ 25ರಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ), ಕಾರ್ಮಿಕರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಗಳು(ಪಿಎಫ್ಆರ್ ಡಿಎ) ವೇತನ ಪಟ್ಟಿ(ಪೇ ರೋಲ್) ವರದಿಯನ್ನು ಆಧರಿಸಿ ಔಪಚಾರಿಕ ಉದ್ಯೋಗಗಳ ದತ್ತಾಂಶಗಳನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.