ಓಪನ್ ಬರೋಮಟಾ ಊಟಾ ಇಲ್ಲಾ....ಕ್ಲೋಜ್ ಬರೋಮಟಾ ನಿದ್ದಿ ಇಲ್ಲಾ

ಓಪನ್ ಬರೋಮಟಾ ಊಟಾ ಇಲ್ಲಾ....ಕ್ಲೋಜ್ ಬರೋಮಟಾ ನಿದ್ದಿ ಇಲ್ಲಾ

ಯಾಕೋ ಬಸಣ್ಣಾ, ರಾತ್ರಿ ಹತ್ತಾದ್ರು ಇನ್ನು ಹೊರ್ಗ ತಿರಗಾಕ ಹತ್ತೀಯಲ್ಲೋ? "ಹಲ್ಲಾಗ ಕಡ್ಡಿ ಬ್ಯಾರೆ ಚುಚ್ಚಾಕ ಹತ್ತೀ"...? "ಏನ್ಪಾ  ಹೊಡ್ತಾ ಜೋರಾಗಿರ್ಬೇಕು.? ಲಕ್ಷ್ಮೀ ಮತ್ತ ಹೊಡ್ದಾಳೇನೂ"?. "ನಿ.... ಹಲ್ಲಾಗ್ ಕಡ್ಡಿ ಚುಚ್ಚಾಕ ಹತ್ತಿದ್ದು ನೋಡಿದ್ರ ಗೊತ್ತಾಕ್ಕೇತಿ, ನಿನ್ನೆ ಓಸಿ ಲಾಟ್ರೀ ಹೊಡದೈತಿ ಅಂತ್".

ಕಾಕಾರ ನೀವು ಬಾಳ ಬೆರ್ಕಿ ಅದೀರಿ, ಅಲ್ಲಾ ನಾ "ಹಲ್ಲಾಗ ಕಡ್ಡಿ ಚುಚ್ಚದ್ಕೂ ನನ್ಗ ಓಸಿ ಹೊಡೆದ್ಕೂ ಏನ್ ಸಂಬಂಧ ಅಂತನೀ."...? "ಅದೇಂಗ್ ಕಂಡ ಹಿಡ್ದ್ರೀ ನೀವು!.... ನನ್ಗ ಓಸಿ ಹೊಡ್ದಿದ್ದು"..?

ಇದ್ರಾಗ ಕಂಡ್ ಹಿಡೇದ್ ಎಲ್ಲಿಂದಾ ಬಂತೋ ಬಸಣ್ಣ, ನಿ.... "ದಿನಾ ಮುಂಜಾನೆ, ರಾತ್ರಿ ಕತ್ಲಾದ್ರ ಓಸಿ ಕುಮಾರನ್ ಅಂಗ್ಡಿಗೆ, ಶಬ್ಬಿ ಅಂಗ್ಡಿಗೆ, ಮೂಲೇನ್ ಪಕ್ಕಾನ ಅಂಗ್ಡಿಗೆ ಯಾಕ ಹೊಕ್ಕಿ ಅಂತ್ ನನ್ಗ್ ಗೊತ್ತಿಲ್ಲ ಅಂತ್ ತಿಳ್ಕೋಂಡಿ ಏನೂ"?. "ಶಾಲಿಮನಿಗೆ ಹೋಗೋ ಮಕ್ಕಳಿಂದ ಹಿಡ್ದು ವಯಸ್ಸಾದ್ ಮುದ್ಕ್ರಮಟಾ ಎಲ್ಲಾರು ಓಸಿ ಬರಸವ್ರ"....! "ಇತ್ಲೀತ್ಲಾಗ್ ಕೆಲವು ಹೆಣ್ಣಮಕ್ಳು ಸೈತ್ ಓಸಿ ಆಡಾಕ್ ಹತ್ಯಾರ"...! "ಅದೆಲ್ಲಾ ನನ್ಗ ಗೊತ್ತೈತಿ ಬಿಡು, ನಿನ್ನೆ ಎಷ್ಟ ಓಸಿ ಹೊಡದೈತಿ ಅದ್ನ ಹೇಳ್ ಮಗ್ನ್ ಮೊದ್ಲ ".!

ಎಪ್ಪ...ಎಪ್ಪಾ... ಕಾಕಾರ ನಿಮ್ಮನ್ನ ಏನೋ ಅಂತ್ ತಿಳ್ಕೊಂಡಿದ್ದೆ!, ಎಲ್ಲಾ ಗೊತ್ತೈತಲ್ರೀ ನಿಮ್ಗ,! "ಓಸಿ ಕುಮಾರನ್ ಹೆಸ್ರು, ಶಬ್ಬಿ ಹೆಸ್ರು.....ವಜ್ಜಾತ್ರೀ..ವಜ್ಜಾತು... ಅಲ್ಲಾ.... ಕಾಕಾ ಇದೇಲ್ಲಾ ನಿಮ್ಗ ಹೆಂಗ್ ಗೊತ್ತಾತು ಅಂತ"..?

ಇದ್ರಾಗ್ ಗೊತ್ತಾಗೋದೂ ಏನೈತೋ!,...."ವಜ್ಜೀನು ಇಲ್ಲಾ.... ಹಗ್ರು ಇಲ್ಲಾ... ಬಿಡ್ಲೇ", "ಹಳ್ಳಿ ಇಂದ್ ಹಿಡ್ದ್ ದಿಲ್ಲಿಮಟಾ ಈಓಸಿ ಅನ್ನೋ ಜೂಜು  ಕರ್ಕಿ ಬೇರೂ ಹಬ್ಬಿದಂಗ್ ಹಬ್ಬೇತಿ"!. "ಇದ್ನ ಕಿತ್ತೋಗೆದು ಅಷ್ಟ ಸರಳಲ್ಲ"?. "ಇದ್ರಾಗ್ ಸಣ್ಣೋರಿಂದ ಹಿಡ್ದು ದೊಡ್ಡೋರ ವರ್ಗೂ ರೊಕ್ಕಾ ಹರದಾಡತ್ಯತಿ".! "ಪ್ರತಿ ತಿಂಗ್ಳೂ ಲಕ್ಷಗಟ್ಲೆ ರೊಕ್ಕಾ ಕೈಯಿಂದ್ ಕೈ ಬದ್ಲಾಯಿಸತೈತಿ". ಹಿಂಗಾಗಿ "ಎಲ್ಲಾ ಗೊತ್ತಿದ್ದ್ರೂ ಪೊಲೀಸ್ರು ನಮ್ಗ ಏನೂ ಗೊತ್ತಿಲ್ದ ರೀತಿ ಅದಾರಾ"..! ಇನ್ನ "ಮೇಲಾಧಿಕಾರಿಗಳ್ಗೆ ಇದೇಲ್ಲಾ ಗೊತ್ತಿದ್ದ್ರೂ ಅವ್ರಿಗೆ ಇದ್ನೇಲ್ಲಾ ವಿಚಾರಸ್ಕಾರ ವೇಳ್ಯಾ ಎಲ್ಲಿರತೈತಿ.".? ಹಿಂಗಾಗಿ "ಓಸಿ ಅನ್ನೋ ಮನಿ ಮುರ್ಕ ಆಟ ಹಂಗ್ ನಡ್ಕೋತನಾ ಬಂದೈತಿ" ನೋಡು.

ಅದಿರ್ಲಿ, ನಿನ್ನೆ ಎಷ್ಟ ಹೊಡದೈತಿ ಓಸಿ ನಿನ್ಗ?. ಅಂತೇದ್ದೇನು ಇಲ್ರ ಬಿಡ್ರೀ..... "ಹತ್ತ್ ರುಪಾಯಿ ಇರ್ಲಿ ಅಂತ್ ಕಟ್ಟಿದ್ದೇ,.... ನಾ ಕಟ್ಟಿದ್ ನಂಬರ್ಗೆ ಓಸಿ ಬಿದ್ದೈತಿ..... ಇವನ್ವನ್ 800ರೂಪಾಯಿ ಬಂದ್ವ್, ಅದ್ಕ್ ಮನ್ಯಾಗ ಮಟನ್ ಸಾರು, ನೆಲ್ಲಕ್ಕಿ ಅನ್ನ.....ಹಿಂಗ್ ವಿಶೇಷಾ ಇತ್ತು". ಅದ್ಕ ಅನ್ನೊಂಡೆ....., "ಮಟನ್ ಕತ್ತರ್ಸಿ ಈಮಗಾ ಹಲ್ಲಾಗ ಕಡ್ಡಿ ಚುಚ್ಚಾಕ ಹತ್ಯಾನ ಅಂತ್",  ಲೇ ..ಲೇ .."ಈ ಓಸಿ ಚಟಾ ಒಳ್ಳೇದಲ್ಲ ಮಗ್ನ, ಮನಿ-ಮಠಾ ಮಾರ್ಕೆಂಡ್ ಹೊಕ್ಕಿ , ಮರ್ಯಾದಿ ಇಂದ ಇದ್ನೇಲ್ಲಾ ಬಿಟ್ಟು ತಣ್ಗ ದುಡ್ದ ತಿನ್ನ ಮಗ್ನ".

"ದುಡ್ದ ತಿನ್ನೋದ್ರೀ ಕಾಕಾ, ಇನ್ನೇನೂ ಯಾರ್ನರ್ ಹೊಡ್ದ ತಿನ್ನಾಕ ಆಕೈತಾ"?. ಆದ್ರ "ದುಡ್ಯಾಕ ಕೆಲ್ಸ್-ಬಗ್ಸಿ ಎಲ್ಲೈತಿ ಹೇಳ್ರೀ".?.." ಮಳಿ ಇಲ್ಲಾ...ಮಾರ್ ಇಲ್ಲಾ...ಜೂನ್ ತಿಂಗ್ಳೂ ಮುಗ್ಯಾಕ ಬಂದೈತಿ, ಇನ್ನೂ ಮಳೆ ಸಲ್ಲ ಇಲ್ಲಾ. ಗಳೆಹೂಡಿ ತಿಂಗ್ಳಾತು, ಎತ್ತುಗಳಿಗೆ ಮೇವು ಇಲ್ದ ಅವುಗಳ ಗೋಳ್ ನೋಡಲಾರ್ದ ಕೈಗೆ ಬಂದ್ ರೊಕ್ಕಕ್ಕ ಅವ್ನ ಮಾರೇನಿ"..

ಎತ್ತ ಯಾಕ್ ಮಾರಾಕ ಹೋದಿ....! ನಾಳಿ ಮಳಿ ಬಿದ್ರ ಏನ್ ಮಾಡ್ತೀ..? ಏನ್ ಮಾಡೋದ್ರೀ,  ಪರಿಸ್ಥಿತಿ ಹಂಗಿತ್ರೀ. ಎಂತಾ ಪರಿಸ್ಥಿತಿಲೇ ಇವುಂದ್. ಅಂತಾದ್ದೇನ್ ಆಗಿತ್ಪಾ..?

"ಎತ್ತಿಗೆ ಮೇವು ಇರ್ಲಿಲ್ಲಾ ಒಂದ ಕಡೆ", "ಮಕ್ಕಳಶಾಲಿ ಫೀ ಕಟ್ಟಾಕ ರೊಕ್ಕಾ ಇರ್ಲಿಲ್ಲ ಇನ್ನೊಂದಕಡೆ", ಮೇಲಾಗಿ ಹೋದ ವರ್ಷ ಮನಿ ಕಟ್ಟಾಕಂತ್ "ಅರ್ಬನ್ ಬ್ಯಾಂಕ್‍ನ್ಯಾಗ ಮಾಡಿದ್ದ ಸಾಲಕ್ಕ ಬಡ್ಡಿ ಕಟ್ಟಿಲ್ಲ ಅಂತ್ ಬ್ಯಾಂಕ್‍ನವ್ರು ಬಡ್ಡಿ ಕಟ್ರೀ ಅಂತ್ ನೋಟಿಸ್ ಕೊಟ್ಟಿದ್ರು". ಅದ್ಕ ಏನ್ ಮಾಡೋದು ಅಂತ್ ತಿಳಿಲಾರ್ದ "ಎತ್ತಗಳನ್ ಮಾರ್ದೆ ನೋಡ್ರೀ...

ಆತು ಬೀಡು, ಎತ್ತ ಮಾರಿದ ರೊಕ್ಕಾನ ಹಿಂಗ್ ಓಸಿ ಆಡಿ ಹಾಳ್ ಮಾಡ್ದೆ, ಮಕ್ಕಳಶಾಲಿ ಫೀ, ಬ್ಯಾಂಕಿಗೆ ಬಡ್ಡಿ ಕಟ್ಟಿದೇ ಇಲ್ಲ..?ಕಟ್ಟೇನ್ರೀ...ಅದ್ಕ ಮಕ್ಕಳು ಶಾಲೆಗೆ ಹೊಂಟಾವು.... ಬ್ಯಾಂಕಿನವ್ರು ತಣ್ಣ್ಗ ಅದಾರ್.ಅಲ್ಲಲೇ "ಈ ಓಸಿ ಆಡಾಕ್ ರೊಕ್ಕಾ ಎಲ್ಲಿಂದ್ ಬರ್ತಾವ್‍ಲೇ ನಿನ್ಗ"..? "ದುಡ್ಯಾಕು ಹೋಗಂಗಿಲ್ಲ....., ಮನ್ಯಾಗೂ ರೊಕ್ಕ ಇಲ್ಲ ಅಂತಿರ್ತೀ, ಏನ್ ನಿನ್ನ ಹಕಿಕತ್.? ಎಲ್ಲೆರ್ ಕೊಳ್ಳಿಹೊಡ್ಯಾಕ ಹೊಕ್ಕೀಯನು ಮತ್ತ'..?

"ಕೊಳ್ಳಿಎಲ್ಲೆ ಹೊಡ್ಯಾಕ್ ಆಕೈತ್ರೀ....ಅದೇಲ್ಲಾ ದೊಡ್ಡರ್ ಸಮಾಚಾರ್"!. "ನಂದೇನಿದ್ರು ಸಣ್ಣ-ಪುಟ್ಟ ಕೇಸ್". "ಮನ್ಯಾಗ ಅಗಳಿಗಿಂಡಾಗ್ ಕೂಡಿಟ್ಟಿರತಾಳಲ್ಲ ನಮ್ಮಾಕಿ ಚಿಲ್ರೆ-ಗಿಲ್ರೆ" ಅಲ್ಲಿಂದ ಕದ್ದಕೊಂಡು ಬಂದ್ ಓಸಿ ನಂಬರ್ ಹಚ್ಚೋದು, "ಬಂದ್ರ್ ಒಂದರೂಪಾಯಿಕ್ ಎಂಬತ್ತ ರೂಪಾಯಿ, ಹೋದ್ರ ಒಂದ್ ರುಪಾಯಿ" ನೋಡ್ರೀ.

"ಲೇ.. ಲೇ ಮಸ್ಯಾನಂತವ್ನ, ನಾಚ್ಕಿ ಆಗೋದಿಲ್ಲ ನಿನ್ಗ, ಎಂತಾವಲೇ ನೀ, ಹೆಣ್ಮಕ್ಕಳೂ ಕೂಡಿಟ್ಟ ರೊಕ್ಕಾನ  ಕದ್ದು ಓಸಿ ಆಡ್ತಿ ಅಂದ್ರ ತೂ ನಿನ್ನ ಜನ್ಮಕ್ಕಿಷ್ಟ ಬೆಂಕಿ ಹಾಕಾ"... "ಇದ್ರಾಗ ನಾಚ್ಕಿ ಎಲ್ಲಿಂದಾ ಬಂತು ಕಾಕಾರ, ಒಮ್ಮೆಮ್ಮೆ ಓಸಿ ಬಿದ್ರ ಅದ್ರಾಗ್ ಬಂದ್ ರೊಕ್ಕಾನ ಮನಿಗೆ ಖರ್ಚಮಾಡ್ತನಿ"...
"ಲೇ... ಲೇ.. ಅಂತಾ ಪಾಪದ್ ರೊಕ್ಕಾನ ಮನಿಗೆ ಖರ್ಚಮಾಡ್ತನಿ ಅಂತ್ ಹೇಳ್ತಿಯಲ್ಲಲೇ ... ಎಪ್ಪಾ ಏನ್ ಹೇಳ್ಬೇಕು ನಿನ್ನ ಬುದ್ದಿಗೆ, ನೀ ಉದ್ದಾರ ಆಗಂಗಿಲ್ಲಲೇ, ನೀ ಉದ್ದಾರ ಆಗಂಗಿಲ"್ಲ."ಓಸಿ ಆಡಿ ಮನ್ನೆ ಹಾನಗಲ್ಲಿನ ಕಬ್ಬಿಣದ ಅಂಗಡಿ ಹೂಡ್ಗಾ  ಉರ್ಲ ಹಾಕ್ಕೊಂಡು ಸುದ್ದಿ ಓದಿ ಇಲ್ಲ"..!

"ಉರ್ಲ ಹಾಕ್ಕೊಂಡ್ನ....! ಯಾವ್‍ರೀ ಅವಾ"..?  ನೀ ಪೇಪರ್ ಓದೋದಿಲ್ಲಾ...?ದಿನಾ ಲೈಬ್ರೀಗೆ ಹೋಗಿ ಎಲ್ಲಾ ಪೇಪರು ತಿರುವಿಹಾಕಿ ಬರ್ತನಿ, ಈಸುದ್ದಿನ ನಾ ಓದಿಲ್ಲ...!

"ಇಂತಾ ಸುದ್ದಿ ಹೆಂಗ್ ನಿನ್ನ ಕಣ್ಣಿಗೆ ಬಿಳ್ತಾವು"....! "ನಿ.. ಬರೀ ನಂಬರ್ ಹುಡ್ಕಾವ್. ಮೊನ್ನೆ "ಪ್ರಜಾವಾಣಿ" ಪೇಪರ್‍ನ್ಯಾಗ್ ಮುಖಪುಟ್ದಾಗ್ ಓಸಿ ಸುದ್ದಿ ಬಂದಿತ್ತು..... "ಕಬ್ಬಿಣದಂಗ್ಡಿ ಹುಡ್ಗ್ ಒಂದ್ ನಂಬರ್ ಓಸಿ ಬೆನ್ನತ್ತಿ ಕಬ್ಬಿಣಾ ಮಾರಾಕಾ ಹತ್ತೆದಾವ್ ದಬ್ಬಣಾ ಮಾರಾ ಸ್ಥಿತಿಗೆ ಬಂದಿದ್ನಂತ್". ಕಡಿಗೆ "ಇವಾ ಸಾಲಾ ಮಾಡಿ ಐದ್‍ಸಾವ್ರ ರೊಕ್ಕಾನ ಹಚ್ಚಿದ್ ನಂಬರ್ಗೆ ಓಸಿ ಬಿದ್ದಿಂತ್", "ಆದ್ರ ಓಸಿ ಹೊಡ್ದ ದೊಡ್ಡ ರೊಕ್ಕಾನ ಕೊಡಾಕ ಓಸಿ ನಂಬರ್ ಬರ್ಕಂಡ್ ಏಜೆಂಟ್ ಇವತ್ತ ಕೊಡ್ತನಿ,... ನಾಳೆ ಕೊಡ್ತನಿ ... ಅಂತ್ ಓಸಿ ಲಾಟ್ರೀ ರೊಕ್ಕಾ ಕೊಡ್ದ ತಪ್ಪಿಸಕೊಂಡು ಓಡಾಡಾಕ ಹತ್ತಿದ್ನಂತ್", ಅದ್ಕ "ಕಬ್ಬಣದಂಗ್ಡಿ ಹುಡ್ಗ ನನ್ಗ ಓಸಿ ರೊಕ್ಕಾ ಕೊಡ್ಸ್ರೀ ಅಂತ್ ಪೊಲೀಸ್ ಸ್ಟೇಶನ್ಗೆ ಕಂಪ್ಲೇಟ್ ಕೊಟ್ಟಾನಂತ್ ಅಂತ್ ಸುದ್ದಿ ಬಂದಿತ್ತು" ಓಸಿ ಲಾಟ್ರೀ ರೊಕ್ಕಾ ಪೊಲೀಸ್ರು ಕೊಡ್ಸಿದ್ರಂತೇನ್ರೀ...?

ಕೊಡ್ಸತಾರ ಮಗ್ನ ನಿನ್ಗ, "ಮೊದ್ಲ ಓಸಿ ಅನ್ನೋದು ಜೂಜಾಟ, ಈ ಜೂಜಾಟಕ್ಕ ಕಾಯ್ದೆ-ಕಾನೂನ್ಯಾಗ ಅವಕಾಶ ಇಲ"್ಲ.. "ಇಂತಾದ್ರಾಗ ಓಸಿ ರೊಕ್ಕಾ ಅವ್ರೆಲ್ಲೆ ಕೊಡ್ಸತಾರ...!. ಗಾದಿ ಮಾತ ಕೇಳಿ ಇಲ್ಲ, "ಪಾಪಿಯ  ರೊಕ್ಕ ಪ್ರಾಯಶ್ಚಿತ್ತಕ್ಕಲ್ದ ಸತ್ ಪಾತ್ರಕ್ಕ ಸಲ್ಲದಯ್ಯ" ಅನ್ನೊಂಹಂಗ್ ಆಗೇತಿ.. "ಪಾಪದ ಹಣ ಬೆನ್ನಹತ್ತಿದ್ರ ಹಿಂಗ್ ಆಗೋದ ಮಗ್ನ". "ನೋಡ ಓಸಿ ಹೊಡಿತೈತಿ ಅಂತ್ ಕಬ್ಬಿಣಾ ಮಾರೋದ ಬಿಟ್ಟು ಆ ಹುಡ್ಗ ಹಾಳಾಗಿ ಹೋಗ್ಯಾನ, ಕಡಿಗೆ ಉರ್ಲ ಹಾಕ್ಕೋಳ್ಳಾಕ ಹೋಗಿದ್ನಂತ್, ಯಾರೋ ನೋಡಿ ಕುಡಗೋಲಿಂದ್ ಹಗ್ಗಾ ಕೋದು ಇವ್ನ ಜೀವಾ ಉಳಿಸ್ಯಾರ್ ". ನೀನು ಹಂಗ್ ಆಗಬ್ಯಾಡ, "ತಣ್ಣ ದುಡ್ಡ ತಿನ್ನೋದು ಕಲಿ ಮಗ್ನ". "ಅಲ್ಲಲೇ ಮಾಹಾಭಾರ್ತಾ ಓದಿಇಲ್ಲ....! ಜೂಜಾಟಕ್ಕಾಗಿನ್ ಪಾಂಡವ್ರು ಮನಿ-ಮಠ, ಕಡಿಗೆ ಹಂಡ್ತಿನೂ ಕಳಕೊಂಡು ದಿಕ್ಕಾಪಾಲಾಗಬೇಕಾತು,  ಜೂಜಾಟ ಆಡಿ ಯಾರರ್ ಉದ್ದಾರಾಗೇರೇನು ಹೇಳೂ"..?

"ಯಾಕಿಲ್ರೀ.... ಬೇಕಾದಷ್ಟು ಮಂದಿ ಆದಾರಾ,.... ಮಾಸೂರ  ಶಿವಪ್ಪನ್ನ ನೋಡಿರಿಲ್ಲ!. ಅವಾ ಓಸಿ , ಇಸ್ಪೇಟ್ ಆಡ್ಸಿ ನಾಲ್ಕ ಅಂತಸ್ಥಿನ್ ಮನಿ ಕಟ್ಸ್ಯಾನ್, ಹನ್ನೇರಡ್ ಎಕ್ರೆ ನೀರಾವರಿ ಹೊಲಾ ಹಿಡ್ದಾನ"!, ಮೊದ್ಲ ಏನಿದ್ರೀ ಅವಾ,  "ಸೈಕಲ್ ಹೊಡ್ಕೋತಾ ಓಡಾಡ್ತಿದ್ದ, ಈಗ್ ನೋಡಿದ್ರ ಅವ್ನ ಮನಿ ಮುಂದ ನಾಲ್ಕ ಕಾರು, ದಾಬಾರಿ ಬೈಕು ನಿಂತಿರ್ತಾವು".

"ಲೇ ...ಲೇ ..ಕಬರಗೇಡಿ ಎಲ್ಲಾರು ಶಿವಣ್ಣನ ಹಂಗ್ ಆಗಾಕ್ ಆಗೋದಿಲ್ಲೋ ಅವ್ಗ ದೊಡ್ಡೋರ ಆಶೀರ್ವಾದ ಐತಿ", "ಅದೃಷ್ಟಾನು ಅವ್ನ ಕೈ ಹಿಡದೈತಿ, ಅವಾ ಓಸಿ ಒಳ್ಗ ಉದ್ದಾರಾ ಆಗ್ಯಾನ ಅಂತ್ ನಿ ಓಸಿನ ಬೆನ್ನಹತ್ತಬ್ಯಾಡ ಮಗ್ನ", "ಜೂಜಾಟ ಆಡಿ ಯಾರು ಉದ್ದಾರಾ ಆಗಿಲ"್ಲ. "ಸುಮ್ನ ಮನಿಕಡೆ ನಡಿ, ಮೈಮುರ್ದು ದುಡಿ, ಹೊಟ್ಟಿತುಂಬಾ ಹೊಡಿ, ನಡಿ..ನಡಿ.

"ತಡ್ರೀ ಕಾಕಾ ಇನ್ನು ಗಜಾನನ ಬಸ್ ಬಂದಿಲ್ಲ!, ಅದ್ರಾಗ ಯಾರೋ ಪಾರ್ಸಲ್ ಕಳೇಸೇನಿ ಅಂತ ಪೋನ್ ಮಾಡಿದ್ರು ಅದ್ಕ ಬಸ್ಸಿಗೆ ಕಾಯಾಕ ಹತ್ತೇನಿ.".. ನಿಮ್ಗ ಹೊತ್ತಾತು ಅಂದ್ರ ನೀವು ಮನಿಗೆ ನಡ್ರಿ, ನಾನು ಬಸ್ ಬಂದ್ ಮ್ಯಾಕ್ ಪಾರ್ಸಲ್  ತಗೊಂಡು ಬರ್ತನಿ. ನಿನ್ನ ಪಾರ್ಸಲ್ ಏನು ಅಂತ್ ಗೊತ್ತೈತಿ, ಅದ ಓಸಿ ಸೀಟ್ ಹೌದಲ್ಲ!, ಅದ್ರ ಸಲವಾಗಿ ನೀ ಕಾಯಾಕ ಹತ್ತೀ.... ನನ್ಗ ಗೊತ್ತೈತೋ "ಓಪನ್ ಬರೋಮಟಾ ಊಟಾ ಇಲ್ಲಾ....ಕ್ಲೋಜ್ ಬರೋಮಟಾ ನಿದ್ದಿ ಇಲಾ"್ಲ.....ಅಂತ್.  "ನೈಟ್ ಬೀಟ್ ಪೊಲೀಸ್ರು ಬರೋ ಹೊತ್ತಾತು, ಇಲ್ಯಾಕ ರಾತ್ರಿ ಇಷ್ಟಹೊತ್ತಿನ್ಯಾಗ ನಿಂತೀರಿ ಅಂತ್ ದಂಡಾ ಹಾಕಿದ್ರು ಹಾಕಬಹ್ದು"!, "ಪೊಲೀಸ್ರ ಬುದ್ದಿ ಹೆಂಗ್ಯ ಇರ್ತೈತೋ ಹೇಳಾಕ ಬರೋದಿಲ್ಲ" ಎನ್ನುತ್ತಾ  ಕಾಕಾ, ಬಸ್ಯಾನನ್ನು  ಮನೆಕಡೆಗೆ ದೂಡಿ ತಮ್ಮ ಮನೆಯ ಹಾದಿ ಹಿಡಿದರು.