ಅಂತಃ ಪ್ರಜ್ಞೆಯನ್ನು ಅಣಕಿಸುವ ದೇಹ ಸಂತೆ             

ಅಂತಃ ಪ್ರಜ್ಞೆಯನ್ನು ಅಣಕಿಸುವ ದೇಹ ಸಂತೆ             

ಆಕೆ ಓಡಿಸ್ಸಾದವಳು. ಪೂರ್ವದ ಹೆಸರು  ’ಜುನ್ನಾದೇವಿ’. ಹುಟ್ಟಿದಾಗ ಅಪ್ಪ ಜೈಲಿನಲ್ಲಿದ್ದನಂತೆ.  ಹುಟ್ಟಿಸಿದವ ಜೈಲಿನಲ್ಲಿದ್ದು ಜನನಿಂದನೆಯ ಭೀತಿಗೆ ಹಡೆದವ್ವ ಎಳೆ ಕೂಸನ್ನು ತಿಪ್ಪೆಗೆಸೆದಳಂತೆ. ಮಗುವಿನ ಅಳು ಕೇಳಿ ಇನ್ನೊಬ್ಬಳು ಎತ್ತಿಕೊಂಡು ಬಂದು ಬೈದು ಮತ್ತೆ ಅವಳವ್ವನ ಉಡಿಗೆ ಹಾಕಿ ಬದುಕಿಸಿದಳಂತೆ. 

ಹೀಗೆ ಹುಟ್ಟಿದ್ದೇ ಭೂಮಿಗೆ ಭಾರವೆಂಬಂತೆ ನಿರ್ಲಕ್ಷ್ಯದಲ್ಲಿಯೇ ಬೆಳೆಯತೊಡಗಿದಳು. ತಾಯಿ ಒಂದಿನವೂ  ಮುದ್ದುಗರೆಯಲಿಲ್ಲ. ಜೈಲಿನಿಂದ ಬಂದ ಅಪ್ಪನಿಗೂ ಅಷ್ಟೇನೂ ಖುಷಿ ತರಲಿಲ್ಲ. ಈಗಾಗಲೇ ಹೆಣ್ಣುಮಕ್ಕಳಿದ್ದರು ಮನೆತುಂಬ. ಸುಮ್ಮನೇ ಬಿದಿರಕೋಲಿನಂತೆ ಬೆಳೆಯುತ್ತಿದ್ದ ಹೆಣ್ಣಿನ ಯಾವ ಲಕ್ಷಣಗಳು ಮೂಡದ ಹದಿಮೂರು ಕಳೆದರೂ ಮೈನೆರೆಯದ  ಅವಳನ್ನು ಕೇರಿಯ ಜನ ’ಹಿಜಡಾ’ ಅನ್ನತೊಡಗಿದರಂತೆ. ಇನ್ಯಾವುದೋ ಗ್ರಹದೋಷ, ಗಾಳಿದೋಷವಿರಬಹುದೆಂದು ಹಳ್ಳಿಗರು ಅವ್ವ ಅಪ್ಪನ ತಲೆತುಂಬತೊಡಗಿದ್ದರು.  ಇನ್ನೇನು ಅವಳ ಮೇಲಿನ ’ದೆಯ್ಯ’ ದೋಷವನ್ನು ಹೇಗಾದರೂ ಬಿಡಿಸಲೇಬೇಕೆಂದು ಯಾವುದೋ ಬಾಬಾನ ಬಳಿ ಅವಳವ್ವ ಕರೆದೊಯ್ದಳು. ಅವನು ಏಕಾಂತದಲ್ಲಿ ಪೂಜೆ - ಮಂತ್ರ ಎಂದು ದಿನವೂ ಅವಳ ಮೇಲೆ ಅತ್ಯಾಚಾರವೆಸಗಿದ. ಆಕೆ ತಾಯ ಬಳಿ ಹೇಳಿಕೊಂಡು ಅತ್ತಳು. ತಾಯಿಗೆ ನಂಬಿಕೆ ಬರಲಿಲ್ಲವೋ ಇಲ್ಲ ಆ ಬಾಬಾ ಹೇಗೂ ಮಗಳನ್ನು ’ಹೆಣ್ಣಾ’ಗಿಸುತ್ತಿದ್ದಾನೆಂದು ನಂಬಿದ ಮೂಢ ತಾಯಿ ಬಾಯಿಮುಚ್ಚಿಕೊಂಡಳು.  

ಅಂತೂ ಬಾಬಾನ ಮಾಂತ್ರಿಕದ ಪ್ರಭಾವವೋ ಎಂಬಂತೆ ಆಕೆ ಮೈನೆರೆದಳು. ಅನಕ್ಷರತೆ ಬಡತನ ಮೌಢ್ಯ ತುಂಬಿದ ಹಳ್ಳಿಯ ಆ ತಂದೆ ಒಬ್ಬನೇ ಮಗಳನ್ನು ಕರೆದುಕೊಂಡು ಯಾವುದೋ ಊರಿಗೆ ಹೋಗಿ ಯಾರಿಗೋ ಮದುವೆ ಮಾಡಿ ಬಂದನಂತೆ. ವಾಲಗವಿಲ್ಲ, ದಿಬ್ಬಣವೂ ಇಲ್ಲ. ಆ ಗುಡಿಸಲಲ್ಲಿ ಮದುವೆಯಾದ ಹುಡುಗ ಮತ್ತು ಅವನ ತಂದೆ ಬಿಟ್ಟರೆ ಬೇರೆ ಹೆಣ್ಣು ಜೀವವಿಲ್ಲ. ಹುಡುಗನನ್ನು ಕೂಲಿ ದುಡಿಯಲು ಅಟ್ಟಿ ಹುಡುಗಿಯನ್ನು ’ಮಾವ’ ಇಬ್ಬರಿಗೂ ಹಂಚಿಕೊಂಡಿರು ಎಂದು ಪೀಡಿಸತೊಡಗಿದನಂತೆ. ಸಂಕಟ ಕೇಳಲು ಯಾರೂ ಇಲ್ಲ. ಮಾತು ಕೇಳದ್ದಕ್ಕೆ ಮಾವ ಮೈ ಬಾಸುಂಡೆ ಬರುವಂತೆ ಥಳಿಸಿ ಉಪವಾಸ ಕೆಡವುತ್ತಿದ್ದನಂತೆ. ಹೇಗೋ ಆ ಕೂಪದಿಂದ ತಪ್ಪಿಸಿಕೊಂಡು ತವರಿಗೆ ಹೋದವಳು ಮತ್ತೆ ಹೋಗಲಿಲ್ಲ.

ಮತ್ತೆ ತಂದೆ ಗಂಟು ಗದಡಿ ಕಟ್ಟಿಕೊಂಡು ಮತ್ತೊಂದು ಹಳ್ಳಿಗೆ ಹೋಗಿ ಮತ್ತೊಬ್ಬನಿಗೆ ಮದುವೆಮಾಡಿಕೊಟ್ಟನಂತೆ. ಹುಡುಗ ಮತ್ತು ಮನೆಯವರು ಒಳ್ಳೆಯ ಜನ. ಅಷ್ಟು ಇಷ್ಟು ಸುಖ ಕಂಡಿತೇನೋ. ಆದರೆ ಅವಳ ವಿಧಿಗೆ ಅದು ಹಿಡಿಸಲಿಲ್ಲ.  ಆ ವರ್ಷ  ಓಡಿಸ್ಸಾದಲ್ಲಿ ನೆರೆಬಂದು ಪ್ರವಾಹದಲ್ಲಿ ಗಂಡನ ಮನೆಯವರೆಲ್ಲ ಕೊಚ್ಚಿಹೋಗಿ ಇವಳು ಮತ್ತು ಗಂಡನ ಚಿಕ್ಕಪ್ಪನ ಕುಟುಂಬದ ಕೆಲವರು ಬದುಕುಳಿದರಂತೆ.  ಮತ್ತೆ ಲೈಂಗಿಕ ಕಿರುಕುಳ ಆ ಚಿಕ್ಕಪ್ಪನಿಂದ. ಅಲ್ಲಿಂದ ಓಡಿ ಅಲಹಾಬಾದಿನ ಅಜ್ಜಿ ಬಳಿ ಬಂದಳು. ಅಲ್ಲಿಯೇ ಒಬ್ಬನನ್ನು ಮದುವೆಯಾಗಿ ಮಕ್ಕಳೂ ಆಗಿ ಸಧ್ಯ ಉತ್ತರಪ್ರದೇಶದಲ್ಲಿರುವ ನಮ್ಮ ಕಂಪನಿಯಲ್ಲಿ ಹೌಸ್ ಕೀಪಿಂಗ್ ಮತ್ತು ಕ್ಯಾಂಟೀನ್ ಸಿಬ್ಬಂದಿಯಾಗಿದ್ಡಾಳೆ. ತನ್ನ ಕಥೆಯನ್ನು ನನ್ನ ಹತ್ತಿರ ಹೇಳಿಕೊಂಡು ಮನಸಾರೆ ಅತ್ತಳು. 

ಬುದ್ಧಿ ಬೆಳೆಯದ ಅವಳನ್ನು ಸಾಕಲಾರದೇ ಮಾರುತ್ತಿದ್ದ ಆ ತಂದೆಯನ್ನೂ ಇವತ್ತು ಈ ಮಗಳೇ ಸಾಕುತ್ತಿದಾಳೆ. ಭರಪೂರ ದುಃಖವನ್ನು, ದೌರ್ಜನ್ಯವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬದುಕುತ್ತಿರುವ ಹೆಣ್ಣೊಬ್ಬಳ ಸತ್ಯ ಕಥೆ ಇದು.   

ಇತ್ತೀಚೆಗಷ್ಟೇ ತಂದೆಯಿಂದ ಮಾರಲ್ಪಟ್ಟು ಗಂಡನ ಕೈವಾಡದಿಂದಲೇ ಅತ್ಯಾಚಾರಕ್ಕೊಳಗಾಗಿ ಬದುಕೇ ಬೇಡವೆಂದು ಸುಟ್ಟುಕೊಂಡವಳ ಕಥೆ ಎದೆಯನ್ನು ಸುಡುತ್ತಿದೆ. “ಈಗ ನನ್ನ ದೇಹ  ಸುಟ್ಟುಹೋಗಿದೆ ಯಾರೂ ಈಗ ನನ್ನ ಮೇಲೆ ಅತ್ಯಾಚಾರ ಮಾಡುವುದಿಲ್ಲ” ಎಂದವಳ  ಕರುಳು ಹಿಂಡುವ ಮಾತುಗಳು ಗಾಸಿಗೊಳಿಸುತ್ತಿವೆ.  ಹಸಿಮಾಂಸಕ್ಕೆ ಎರಗುವ ಹದ್ದುಗಳಂತೆ ಅಮಾಯಕ ಎಳೆಯ ಬಾಲಿಕೆಯರ ಮೇಲೆ, ಅಸಹಾಯಕ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಕೊನೆಯೆಂಬುದಿಲ್ಲವೇ ? 

ಮಲತಂದೆಯೇ ಅತ್ಯಾಚಾರವೆಸಗಿ ಬಸುರಾಗಿ ನರಳಿದ ಹತ್ತು ವರ್ಷದ ಬಾಲೆ ನೆನಪಾಗುತ್ತಾಳೆ. ಕರುಳಕುಡಿಗಳನ್ನು ಕೈಯ್ಯಾರೆ ಹೊಸಕಿಹಾಕುವ ಆತ್ಮಸಾಕ್ಷಿಯೇ ಸತ್ತುಹೋದ ಇವರೂ ಮನುಷ್ಯರಾ? ಇವರ ವಿಕೃತಿಗಳಿಗೆ ಬಲಿಯಾದ ಜೀವಗಳು ಮಾನಸಿಕ ಆಘಾತ, ದೈಹಿಕ ಯಾತನೆ, ಸಮಾಜದ ನಂಜಿನ ಬುತ್ತಿಯನ್ನೂ ಉಡಿಯಲ್ಲಿಟ್ಟುಕೊಂಡ ರೌರವ ನರಕದ ಬಾಳೆಷ್ಟು ಘೋರವಿರಬಹುದು !  

ಮದುವೆಯಾಗಲು ಹೆಣ್ಣುಗಳೇ ಸಿಗದ ಹರಿಯಾಣದ ಮೇವಾತಿನಲ್ಲಿ ದೂರದ ರಾಜಸ್ಥಾನ, ಮಧ್ಯಪ್ರದೇಶ, ಓಡಿಸ್ಸಾ , ಜಾರಖಂಡದಂಥ ರಾಜ್ಯಗಳಿಂದ ಹೆಣ್ಣುಗಳನ್ನು ಖರೀದಿಸಿ ತರುತ್ತಾರೆ.  ಅವರನ್ನು ’ಮೋಲ್ಕಿ’ , ’ಪಾರೋ’ಎನ್ನಲಾಗುತ್ತದೆ. ಕರ್ನಾಟಕಕ್ಕೂ ’ಗುಜ್ಜರ ಕಿ ಶಾದಿ” ಹೆಸರನ ಈ ಹದ್ದು ತನ್ನ ರೆಕ್ಕೆ ಬೀಸಿದೆ. ಬಡತನದ ಬೇಗೆಯಲ್ಲಿ ಬೆಂದವರು ಹಣದಾಸೆಗೆ ತಮ್ಮ  ಹೆಣ್ಣುಮಕ್ಕಳನ್ನು ಹತ್ತು ಹದಿನೈದು ಸಾವಿರಕ್ಕೆಲ್ಲ ಮಾರಿಕೊಳ್ಳುವ ಕರುಳನಿರಿವ  ಕತೆಗಳು ಕಾಲದ ನೆಲದಲ್ಲಿ ಹೂತುಹೋಗಿವೆ.  ಈ ಕುರಿತು The Firstpost, The guardian , The Hindu ದಂಥ ಪ್ರಮುಖ ಪತ್ರಿಕೆಗಳಲ್ಲಿಯೂ ಸಾಕಷ್ಟು ವರದಿಗಳು ಬಂದಿವೆ. ಇದೇ ವಿಷಯಾಧಾರಿತ ನಾನು ಬರೆದ ’ಮೋಲ್ಕಿ’ ಎನ್ನುವ ಕತೆ ಹಿಂದೆ ಮಯೂರದಲ್ಲಿ ಪ್ರಕಟವಾಗಿತ್ತು. 

ಅಪ್ಪನಷ್ಟೇ ಅಲ್ಲ ಕಟ್ಟಿಕೊಂಡ ಗಂಡನೂ ಹಣದಾಸೆಗೆ ಬೇರೆ ಊರಿಗೆ ಮೋಸದಿಂದ ಮಾರಿಕೊಂಡ ದಾರುಣ ಕಥೆಗಳಿವೆ. “ಯತ್ರ್ಯ ನಾರ್ಯಂತು ಪೂಜತೆ” ಎನ್ನುವ ಆಷಾಡಭೂತಿಗಳು ಹೆಣ್ಣನ್ನು ಮನುಷ್ಯಳಂತೆ ಕಾಣದೇ ಮಾರುವ ಮಾರಿಕೊಳ್ಳುವ ಉಪಭೋಗದ ವಸ್ತುವನ್ನಾಗಿಸಿದ್ದು ಈ ಗಂಡಾಳಿಕೆಯ ಸಮಾಜ. 

ಮಧ್ಯಪ್ರದೇಶದ ಮಂದಸೋರ್, ರತಲಾಮ್, ನಿಮೂಚ್ನ ಬಾಂಛಡಾ ಆದಿವಾಸಿ ಸಮುದಾಯದವರಲ್ಲಿ ಹೆಣ್ಣು ಹುಟ್ಟಿದರೆ ಹಬ್ಬ. ವೇಶ್ಯಾವೃತ್ತಿಯೇ ಕುಲಕಸಬು. ಒಂದು ಕಾಲಕ್ಕೆ ’ರಾಯಿ’ ಲೋಕನೃತ್ಯ ಮತ್ತು ಸಂಗೀತಕ್ಕೆ ಹೆಸರಾದ ಈ ಸಮುದಾಯಗಳು ಇಂದು ಹೊಟ್ಟೆಪಾಡಿಗಾಗಿ ವೇಶ್ಯಾವೃತ್ತಿಯನ್ನು ಅವಲಂಬಿಸಿದ್ದು ಶೋಚನೀಯ. ದೇಹವನ್ನು ಮಾರಿ ಕುಟುಂಬವನ್ನು ಸಲುಹುವ ಹೊಣೆ ಈ ಶಾಪಗ್ರಸ್ತ ಮಹಿಳೆಯರದ್ದೇ. ರಾಜಕಾರಣವಿರಲಿ, ಚುನಾವಣೆಯಿರಲಿ ಹೆಣ್ಣು ದೇಹವೆಂಬುದು ದೊಡ್ಡ ಬಂಡವಾಳವೆಂಬುದು ಸುಡುಗೆಂಡದಂಥ ಸತ್ಯ !                              

ಕರ್ನಾಟಕ ರಾಜ್ಯ ಸರ್ಕಾರ ಜಯಮಾಲರ ಅಧ್ಯಕ್ಷತೆಯಲ್ಲಿ  21 ಸದಸ್ಯೆಯರ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ ರಚಿಸಿ ಈ ಮೂಲಕ ವೇಶ್ಯವೃತ್ತಿಯಲ್ಲಿ ತೊಡಗಿರುವವರ ಸಮಸ್ಯೆ ಆಲಿಸಲು 30 ಜಿಲ್ಲೆಗಳ 178 ತಾಲೂಕುಗಳಿಗೆ ಭೇಟಿ  ನೀಡಿತ್ತು. ಬರಗಾಲ, ಬಡತನದಲ್ಲಿ ನರಳುವ ದಮನಿತ ಮಹಿಳೆಯರು ಅನಕ್ಷರಸ್ಥರು. ಮಕ್ಕಳ ಲಾಲನೆ ಪಾಲನೆ ಕುಟುಂಬ ನಿರ್ವಹಣೆಗೆ ಕಾಸಿಲ್ಲ. ಮಗುವಿಗೆ ಹಾಲಿಗೆ, ಅನಾರೋಗ್ಯಕ್ಕೆ  ಕಾಸಿಲ್ಲದವಳು ಅಸಹಾಯಕತೆಯಲ್ಲಿ ದೇಹವನ್ನು ತೆತ್ತು ಹಣವನ್ನು ಹೊಂದಿಸಿಕೊಳ್ಳುವಂಥ ಕರುಣಾಜನಕ ಸ್ಥಿತಿ ಹಳ್ಳಿಪ್ರದೇಶಗಳಲ್ಲಿದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಆರೋಗ್ಯದ ಸ್ಥಿತಿ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿ ಈ ಸಮಿತಿ ವರದಿ ಸಲ್ಲಿಸಿತ್ತು. ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಕೋಟಿಗಟ್ಟಲೆ ಹಣವನ್ನು ಸರಕಾರ ವ್ಯಯಿಸುತ್ತಿದ್ದರೂ ಅನೇಕ ಯೋಜನೆಗಳು ಅವರನ್ನು ಸಮರ್ಪಕವಾಗಿ ತಲುಪುತ್ತಿಲ್ಲ. ಆ ಕುರಿತು ಸಮೀಕ್ಷೆಯಾಗಬೇಕು. 

ಎಳೆಯ ವಯಸ್ಸಿನಲ್ಲಿ ಕಡುಕಷ್ಟಗಳನ್ನು ದೈಹಿಕ ಮಾನಸಿಕ ಹಿಂಸೆಯನ್ನುಂಡ ’ಜುನ್ನಾದೇವಿ” ಇಂದು ಮಕ್ಕಳನ್ನು ಪಬ್ಲಿಕ್ ಸ್ಕೂಲಿನಲ್ಲಿ ಓದಿಸುತ್ತಿದ್ಡಾಳೆ. ಹೆಣ್ಣಾಗಿದ್ದ ಕಾರಣದಿಂದಲೇ ಸುಲಭದಲ್ಲಿ ಸಿಗುತ್ತಾಳೆಂದು ಹಿಂದೆ ಬೀಳುವ ಲಂಪಟರಿಗೆ  “ನನ್ನ ಮಕ್ಕಳ  ಫೀಸು ಕಟ್ಟಬೇಕು. ಕಟ್ತೀಯಾ? ಅಂತ ಸವಾಲೆಸೆಯುವ ಜುನ್ನಾ ತಾನುಂಡ ಯಾತನೆಯ ಲೆಕ್ಕವನ್ನು ಚುಕ್ತಾ ಮಾಡಬೇಕೆಂಬ ಹಠ ತೊಟ್ಟವಳಂತೆ ಆಕೆ ಮಾಡುತ್ತಿರುವ ಎಲ್ಲವೂ ಈ ಪುರುಷಕೇಂದ್ರಿತ ಸ್ವಾರ್ಥಲೋಕದಲ್ಲಿ ನ್ಯಾಯಯುತ ಎಂಬುದು ಅವಳ ನಿಲುವು. 

ಈ ಸಮಯದಲ್ಲಿ ನಿರಂಜನರ ’ಕೊನೆಯ ಗಿರಾಕಿ’ಯ ಕಾಣಿ ನೆನಪಾಗುತ್ತಾಳೆ. ಮುಗ್ಧ ಪ್ರೀತಿಯಿಂದ ಬದುಕನ್ನು ಬಾಚಿಕೊಂಡಿದ್ದ ಜೀವನ್ಮುಖಿ ಕಾಣಿಯನ್ನು ಅವಳು ಎದ್ದು ಬರಲಾರದ ಪ್ರಪಾತಕ್ಕೆ ನಿರ್ದಯವಾಗಿ ತಳ್ಳಿಬಿಟ್ಟ ಸಮಾಜ ಅವಳ ಉಡಿಯಲ್ಲಿ ಮರಳಿ ಬದುಕನ್ನು ನೀಡುವುದಿಲ್ಲ. ಅವಳ ದೇಹವನ್ನು ಇಂಚಿಂಚಾಗಿ ಹರಿದು ಮುಕ್ಕಿದವರಾರಿಗೂ ಅವಳ ಹೀನ ಸಾವು ಕಾಡುವುದೇ ಇಲ್ಲ. ಅಂತ್ಯದಲ್ಲಿ ಕಾಣಿಯ ದೇಹದ ಹಂಸಿಮಾಂಸವನ್ನು ಕುಕ್ಕಿ ಕುಕ್ಕಿ ತಿನ್ನಲು ’ಕೊನೆಯ ಗಿರಾಕಿ’ ಗಿಡುಗವೊಂದು ಸುತ್ತಿ ಸುತ್ತಿ ಬರುತ್ತಿರುತ್ತದೆ. 

ಲಿಂಗ, ಪಿತೃಪ್ರಭುತ್ವ, ಮತ್ತು ಜಾತಿ ಇವು ಸಮಾಜದಲ್ಲಿ ಘಟಿಸುವ ಹಿಂಸಾಚಾರದ ನಡುವಿರುವ  ಸೂಕ್ಷ್ಮ ವ್ಯತ್ಯಾಸಗಳಿಗೆ ಕನ್ನಡಿ ಹಿಡಿಯುತ್ತವೆ. ಘಾಸಿಗೊಂಡ ಅದೆಷ್ಟು ಕಾಣಿಯರ, ಜುನ್ನಾರ ನಿಟ್ಟುಸಿರುಗಳು ಈ ಗಾಳಿಯನ್ನು ಸುಡುತ್ತಿವೆಯೋ, ಅದೆಷ್ಟು ಶವಾಗಾರಗಳ ದುರ್ಗಂಧ ಶಪಿಸುತ್ತಿದೆಯೋ ! ಅವೆಲ್ಲವನ್ನೂ ವೃತ್ತ ಪತ್ರಿಕೆಯ ಸುದ್ದಿಯೆಂಬಂತೆ ಓದಿ ಮರೆತುಬಿಡಬಹುದು. ಆದರೆ ನಮ್ಮ  ಅಂತಃಸಾಕ್ಷಿಗೆ ಬೆನ್ನುಹಾಕಿ ದೂರ ಓಡಲಾಗದು !