ಚರ್ಚೆಯೇ ಇಲ್ಲದೆ ಮಸೂದೆಗಳಿಗೆ ಅಂಗೀಕಾರ:ಪ್ರಜಾಸತ್ತೆಗೆ ಮಾರಕ 

ಚರ್ಚೆಯೇ ಇಲ್ಲದೆ ಮಸೂದೆಗಳಿಗೆ ಅಂಗೀಕಾರ:ಪ್ರಜಾಸತ್ತೆಗೆ ಮಾರಕ 

ಪ್ರಜಾಸತ್ತಾತ್ಮಕ ವ್ಯವಸ್ಥೆ ಎಂದರೆ ವಿಪಕ್ಷಗಳು ದುರ್ಬಲವಾಗಿದ್ದರೂ ಅವುಗಳ ಅಭಿಪ್ರಾಯವನ್ನೂ ಕೇಳುವಂಥ ಸರ್ಕಾರ ಇರಬೇಕು. ನಡೆದದ್ದೇ ದಾರಿ ಎನ್ನುವಂತೆ ವರ್ತಿಸುವ ಸರ್ಕಾರ ಪ್ರಜಾಸತ್ತೆಯನ್ನು ಗೌರವಿಸುವುದಿಲ್ಲ. ಶಾಸನಗಳನ್ನು ರಚಿಸುವುದು ಶಾಸನಸಭೆಯ ಅಧಿಕಾರ. ಆದರೆ ಚರ್ಚೆಯೇ ಇಲ್ಲದೇ ಅಂಗೀಕಾರ ನೀಡುವುದು ಸಮರ್ಥನೀಯವಲ್ಲ ಎನ್ನುತ್ತಾರೆ ಜಿ.ಆರ್.ಸತ್ಯಲಿಂಗರಾಜು. 

ವಿಷಯ ಸಮಿತಿಗೆ, ಆಯ್ಕೆ ಸಮಿತಿಗೂ ಹೋಗದೆ 35 ಮಸೂದೆಗಳು ಈ ಸಲದ ಆಯವ್ಯಯ ಸಂಸತ್ ಅಧಿವೇಶನದಲ್ಲಿ ಅಂಗೀಕಾರವಾಗಿರುವುದು ವಿಶೇಷವಾದರೂ, ಚರ್ಚೆಯೇ ಇಲ್ಲದೆ ಮಸೂದೆಗಳು ಕಾನೂನಾಗುತ್ತವೆಂದರೆ ಇದು ಪ್ರಜಾತಾಂತ್ರಿಕತೆಯ ಲಕ್ಷಣವೇ?

ಸಂಸತ್ತು, ವಿಧಾನಸಭೆಗಳಿರುವುದೇ ಕಾನೂನು ಮಾಡಲು. ಆದರೆ  ಸಾಧಕ ಬಾಧಕಗಳನ್ನ ಒರೆಗೆ ಹಚ್ಚದೆ, ಅದರಲ್ಲೂ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದವನ್ನ ಚರ್ಚೆ ಮಾಡದೇ ಅಂಗೀಕಾರ ಪಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬುದೇ ಪ್ರಶ್ನಾರ್ಹವಾಗಿದೆ. ಆಯವ್ಯಯ ಅಧಿವೇಶನದಲ್ಲಿ ಕಲಾಪಗೊಂಡಿದ್ದು 37 ಸಲ. ಇದರಲ್ಲಿ ಅಂಗೀಕಾರವಾದ ಒಟ್ಟು 35 ಮಸೂದೆಗಳಲ್ಲಿ, 28 ನ್ನ ಅಲ್ಲೇ ಮಂಡಿಸಿ, ಅಂಗೀಕರಿಸಿದಂಥವು. ಅದರಲ್ಲೂ 2 ಮಸೂದೆಯನ್ನ ರಾಜ್ಯಸಭೆಯಲ್ಲಿ, ಒಂದನ್ನ ಲೋಕಸಭೆಯಲ್ಲಿ ಆಗಲೇ ಮಂಡಿಸಿ, ಆಗಲೇ ಅನುಮೋದನೆಯನ್ನೂ ಪಡೆದುಬಿಡಲಾಗಿದೆ.

ತ್ರಿವಳಿ ತಲಾಖ್, ಜಮ್ಮು ಕಾಶ್ಮೀರ ವಿಭಜನೆ, ಮಾಹಿತಿ ಹಕ್ಕು, ವೈದ್ಯಕೀಯ ಆಯೋಗ ಇತ್ಯಾದಿಯಂಥ ಪ್ರಮುಖ ಮಸೂದೆಗಳು ಇದರಲ್ಲಿ ಸೇರಿದ್ದು, ಒಂದೇ ಒಂದು ಮಸೂದೆಯೂ ಆಯ್ಕೆ ಸಮಿತಿಗೂ ಹೋಗಿಲ್ಲ, ಪರಿಶೀಲನಾ ಸಮಿತಿಗೂ ಹೋಗಿಲ್ಲ. 2009 ರ ಚಳಿಗಾಲ ಮತ್ತು 18 ರ ಮಳೆಗಾಲದ ಅಧಿವೇಶನದಲ್ಲಿ ಹೀಗೇ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿದ್ದ ಮಸೂದೆಗಳು 10. ಆದರೆ ಈಗ ಅದನ್ನ ಮೀರಿಸುವ ರೀತಿಯಲ್ಲಿ 35 ಮಸೂದೆಗಳು ಅಂಗೀಕಾರವಾಗಿದ್ದು, ಜಮ್ಮು ಕಾಶ್ಮೀರದ ವಿಚಾರದಲ್ಲಿ ನಾಲ್ಕು ಗಂಟೆಯಷ್ಟು ಚರ್ಚೆ ಹೊರತಾಗಿ ಇನ್ನಾವುದಕ್ಕೂ ಚರ್ಚೆಯೇ ಆಗಿಲ್ಲ.
ಸದನದ ಸದಸ್ಯರಲ್ಲಿ ಬಹುಸಂಖ್ಯೆಯನ್ನ ಆಡಳಿತ ಪಕ್ಷ ಹೊಂದಿದ್ದರೆ, ವಿಪಕ್ಷಗಳ ಅಗತ್ಯವೂ ಇಲ್ಲದೆ, ಚರ್ಚೆಯೂ ಇಲ್ಲದೇ ಮಸೂದೆಗಳ ಅಂಗೀಕಾರವಾಗುವುದು ಪ್ರಜಾಸತ್ತಾತ್ಮಕವಾಗಿ ಸನ್ನಡತೆಯೇನಲ್ಲ.