ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ನೋ.ಸಿಎಎ ಟೀ-ಶರ್ಟ್ ಪ್ರದರ್ಶನ

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ನೋ.ಸಿಎಎ ಟೀ-ಶರ್ಟ್ ಪ್ರದರ್ಶನ

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ  ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 16 ವಿದ್ಯಾರ್ಥಿಗಳ ಗುಂಪೊಂದು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಾಣಿ ವಿರುದ್ದ, ʼನೊ ಸಿಎಎʼ, ʼನೊ ಎನ್‌ ಆರ್‌ ಸಿʼ, ʼನೊ ಎನ್‌ ಆರ್‌ ಪಿʼ ಎಂದು ತಮ್ಮ ಟೀ-ಶರ್ಟ್‌ಗಳ ಮೇಲೆ ಒಂದೊಂದು ಅಕ್ಷರವನ್ನು ಬರೆದುಕೊಂಡು ಪ್ರದರ್ಶಿಸಿದ್ದಾರೆ.

ಈ ವಿದ್ಯಾರ್ಥಿಗಳು ಮುಂಬೈ ಮೂಲದವರೆಂದು ತಿಳಿದು ಬಂದಿದೆ. ಪಂದ್ಯ ಮುಗಿಯುವುದಕ್ಕೂ ಮುನ್ನವೇ ಇವರು ಕ್ರೀಡಾಂಗಣವನ್ನು ಬಿಟ್ಟು ಹೋಗಿದ್ಧಾರೆ. ಈ ಪಂದ್ಯದಲ್ಲಿ ಭಾರತವು 49.9 ಓವರ್‌ಗಳಲ್ಲಿ 255 ರನ್‌ಗಳಿಸಿ ಸೋತಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಜನರು ಹೋರಾಡುತ್ತಿದ್ದು, ಆ ಪರಿಣಾಮ ಆಟದ ಮೇಲೂ ಬೀರಬಹುದೆಂದು ಮುಂಬೈ ಪೊಲೀಸರು ಈ ಬಾರಿ ನಡೆಯುತ್ತಿರುವ ಕ್ರಿಕೆಟ್‌ ಪಂದ್ಯದಲ್ಲಿ ಬರುತ್ತಿರುವ ವೀಕ್ಷಕರು ಯಾವುದೇ ಕಾರಣಕ್ಕೂ ಪೋಸ್ಟರ್‌, ಬ್ಯಾನರ್‌ಗಳನ್ನು ತರುವಂತಿಲ್ಲ ಎಂದು ನಿಬಂಧನೆಯನ್ನು ಹೇರಿತ್ತು. ಮುಂಬೈ ಪೊಲೀಸರು ತೆಗೆದುಕೊಂಡ ಈ ನಿರ್ಧಾರದಿಂದ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ತಿಳಿಸಿದೆ.

ಅಷ್ಟೇ ಅಲ್ಲದೇ ಕಪ್ಪು ಬಟ್ಟೆಯನ್ನು ಧರಿಸಿದ ಜನರನ್ನು ಸಹ ಕ್ರೀಡಾಂಗಣದಲ್ಲಿ ಪ್ರವೇಶ ನೀಡಿಲ್ಲ. ಹಾಗಾಗಿ ಕಪ್ಪು ಬಟ್ಟೆ ತೊಟ್ಟುಕೊಂಡು ಬಂದವರೆಲ್ಲ ಮತ್ತೆ ತಮ್ಮ ಬಟ್ಟೆಯನ್ನು ಬದಲಾಯಿಸಿಕೊಂಡರು ಎಂಬುವುದು ವರದಿ ಆಗಿತ್ತು. ಆದರೆ ಕ್ರಿಕೆಟ್‌ ಅಸೋಸಿಯೇಷನ್‌ ಈ ವಿಷಯವನ್ನು ತಳ್ಳಿ ಹಾಕಿದೆ. ಬಟ್ಟೆ ಯಾವುದೇ ಬಣ್ಣದಿರಲಿ ಅದರಿಂದ ಯಾವುದೇ ತೊಂದರೆ ಇಲ್ಲ. ಅದು ಜನರ ಇಷ್ಟಕ್ಕೆ ಬಿಟ್ಟದ್ದು ಎಂದು ತಿಳಿಸಿದೆ.