ನೆಟ್ಟಗಿಲ್ಲದ ಆರ್ಥಿಕತೆ ಅರ್ಥ ಸಚಿವೆ ಮುಂದಿದೆ ದೊಡ್ಡ ಸವಾಲು

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹವಾಮಾನ ವೈಪರಿತ್ಯದಿಂದಾಗಿ ಫಸಲುಗಳೂ ಕೊರತೆಯಾಗಿ, ದವಸ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಇವೆಲ್ಲವನ್ನು ಸರಿದೂಗಿಸಿಕೊಂಡು, ಸರ್ಕಾರದ ಜನಪ್ರಿಯತೆಯನ್ನೂ ಉಳಿಸಿಕೊಳ್ಳುವ ಕಸರತ್ತನ್ನೂ ಆಯವ್ಯಯದಲ್ಲಿ ಮಾಡಬೇಕಿರುವ ಸವಾಲು ಅರ್ಥ ಸಚಿವೆ ಮುಂದಿದೆ.

ನೆಟ್ಟಗಿಲ್ಲದ ಆರ್ಥಿಕತೆ ಅರ್ಥ ಸಚಿವೆ ಮುಂದಿದೆ ದೊಡ್ಡ ಸವಾಲು

ಆರು ವರ್ಷಗಳಲ್ಲಿ ಅತಿ ಕಡಿಮೆಯದ್ದಾದ ಶೇ.4.5 ರಷ್ಟಕ್ಕೆ ಜಿಡಿಪಿ ಕುಸಿದಿದೆ. 45 ವರ್ಷಗಳಲ್ಲೇ ಇಲ್ಲದಷ್ಟು ನಿರುದ್ಯೋಗ ಸಮಸ್ಯೆ ಉಲ್ಪಣಗೊಂಡಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ವ್ಯವಹಾರ ಕುಸಿದಿದೆ. ಬೆಲೆ ಏರಿಕೆಯಾಗಿದೆ. ಇಂಥವೆಲ್ಲದರ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಆಯವ್ಯಯ ಮಂಡಿಸಲು ಸಜ್ಜಾಗುತ್ತಿದ್ದಾರೆ.

ಪ್ರಧಾನಿ ನೇತೃತ್ವದ ಸರ್ಕಾರ ಎರಡನೇ ಸಲ ಅಧಿಕಾರಕ್ಕೆ ಬಂದಾಗ, ಜುಲೈ 5 ರಂದು ಮಧ್ಯಂತರ ಆಯವ್ಯಯವನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದರು. ಅದಾದ ಬಳಿಕ ಆರ್ಥಿಕ ಸ್ಥಿತಿ ನೆಟ್ಟಗಿಲ್ಲದ್ದರಿಂದ ನಡುವೆ ಒಂದಷ್ಟು ಕಾರ್ಪೊರೇಟ್ ತೆರಿಗೆಗಳನ್ನು  ಇಳಿಸಿ, ಉದ್ಯಮಗಳನ್ನು ಸೆಳೆಯುವ ಯತ್ನ ಮಾಡಿದರು.

ಕಾರ್ಪೊರೇಟ್‌ ತೆರಿಗೆಯ  ಹಾಲಿ ಮಟ್ಟ ನೋಡುವುದಾದರೆ, ಜಪಾನ್‌ ನಲ್ಲಿ ಶೇ.30.6, ಹಾಂಗ್‌ ಕಾಂಗ್‌ ನಲ್ಲಿ ಶೇ. 16.5, ಸಿಂಗಾಪೂರ್‌ ನಲ್ಲಿ ಶೇ.17, ಇಂಡೋನೇಷಿಯಾದಲ್ಲಿ ಶೇ. 24 ಮತ್ತುಅತಿ ಕಡಿಮೆ ಕಾರ್ಪೊರೇಟ್‌ ತೆರಿಗೆ ಶೇ.20 ರಷ್ಟುಇರುವುದು ತೈವಾನ್ ಮತ್ತು ವಿಯೆಟ್ನಾಂನಲ್ಲಿ. ಭಾರತ ಇವೆಲ್ಲಕ್ಕೂ ಸಡ್ಡು ಹೊಡೆದು ಉದ್ದಿಮೆಗಳನ್ನು ಆಕರ್ಷಿಸಬೇಕಿದೆ, ಅದರಲ್ಲೂ ಚೀನಾ ಮತ್ತು ದಕ್ಷಿಣಕೊರಿಯಾಗೆ ಪೈಪೋಟಿ ಕೊಡಬೇಕಿದೆ, ಹೀಗಾಗಿಯೇ ಶೇ.30 ರಷ್ಟಿದ್ದಕಾರ್ಪೊರೇಟ್‌ ತೆರಿಗೆಯನ್ನು ಶೇ. 22 ಕ್ಕೆ ಇಳಿಸಿಕೊಂಡಿದೆ.

ಮತ್ತೊಂದೆಡೆ ಸಿಜಿಎಸ್‌ಟಿ ಸಂಗ್ರಹದ ಗುರಿ 5,26,000ಕೋಟಿ ರೂಪಾಯಿಗಳಾಗಿತ್ತು, ಆದರೆ ಬಂದಿರುವುದು ಕೇವಲ 3,28,365 ಕೋಟಿ ಮಾತ್ರ. ಹೀಗಾಗಿ ತೆರಿಗೆ ಸಂಗ್ರಹವೂ ಮುಗ್ಗರಿಸಿದ್ದು, ರಾಜ್ಯಕ್ಕೆ ಕಟ್ಟಿ ಕೊಡಬೇಕಾದ ಪರಿಹಾರವನ್ನೂತುಂಬಿಕೊಡಲಾಗಿಲ್ಲ.

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹವಾಮಾನ ವೈಪರಿತ್ಯದಿಂದಾಗಿ ಫಸಲುಗಳೂ ಕೊರತೆಯಾಗಿ, ದವಸ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಇವೆಲ್ಲವನ್ನು ಸರಿದೂಗಿಸಿಕೊಂಡು, ಸರ್ಕಾರದ ಜನಪ್ರಿಯತೆಯನ್ನೂ ಉಳಿಸಿಕೊಳ್ಳುವ ಕಸರತ್ತನ್ನೂ ಆಯವ್ಯಯದಲ್ಲಿ ಮಾಡಬೇಕಿರುವ ಸವಾಲು ಅರ್ಥ ಸಚಿವೆ ಮುಂದಿದೆ. ಅದರಲ್ಲೂ ಪೌರತ್ವತಿದ್ದುಪಡಿಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ಜಮ್ಮು ಕಾಶ್ಮೀರದ ವಿಚಾರ ಇವೆಲ್ಲದರಿಂದ  ಕೇಂದ್ರ ಸರ್ಕಾರಕ್ಕೆ ಕವಿದಿರುವ ಕಪ್ಪನ್ನು ಹೋಗಲಾಡಿಸುವ ಸವಾಲನ್ನು ಇವರು ಹೇಗೆ ಸ್ವೀಕರಿಸುತ್ತಾರೆ ಎಂಬುದೇ ಕುತೂಹಲ ಕೆರಳಿಸಿದೆ.

ಚೀನಾ ವಸ್ತುಗಳಿಗೆ ಕೊಕ್ಕೆ;

ಬೇರೆ ರಾಷ್ಟ್ರಗಳಿಂದ ಅದರಲ್ಲೂ ಚೀನಾದಿಂದಲೇ ಅಧಿಕ ಪ್ರಮಾಣದಲ್ಲಿ ಅನಗತ್ಯ ಸರಕುಗಳು ಭಾರತ ಪ್ರವೇಶಿಸುತ್ತಿವೆ. ಅದರಲ್ಲೂ ಗುಣಮಟ್ಟದ ಖಾತರಿಯೇ ಅವಕ್ಕಿಲ್ಲ. ಹೀಗಾಗಿ ಕೇಂದ್ರ ಸಚಿವಾಲಯವೀಗ 371 ಬಗೆಯ ವಸ್ತುಗಳನ್ನು ಬಿಐಎಸ್ ಗುಣಮಟ್ಟಕ್ಕೊಳಪಡಿಸಿ, ಅರ್ಹತೆಗೆ ಅನುಗುಣವಾಗಿ ಇಲ್ಲದ್ದನ್ನು ತರಿಸಿಕೊಳ್ಳದಿರಲು ಮುಂದಾಗಿದೆ.

ರಾಸಾಯನಿಕ ಮತ್ತು ಪೆಟ್ರೋಲಿಯಂ ಖಾತೆಗೆ ಸಂಬಂಧಿಸಿದ 111, ಭಾರೀ ಉದ್ದಿಮೆಗೆ ಸೇರಿದ 68, ವಿದ್ಯುದ್ಮಾನೀಯ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ 2, ಕೈಗಾರಿಕೆಗೆ ಸಂಬಂಧಿಸಿದ 61, ಸ್ಟೀಲ್‌ಗೆ ಸಂಬಂಧಿಸಿದ 44, ಟೆಲಿಕಾಂಗೆ ಸಂಬಂಧಿಸಿದ 25 ವಸ್ತುಗಳು ಅನಗತ್ಯವಾಗಿ ಮತ್ತು ಗುಣಮಟ್ಟ  ಖಾತರಿಯಿಲ್ಲದೆ  ಚೀನಾದಿಂದ ಬರುತ್ತಿದ್ದು, ಅದನ್ನೆಲ್ಲ ನಿಷೇಧಿಸಲು ಸರ್ಕಾರ ಮುಂದಾಗಿದೆ. ಬಹುತೇಕವಾಗಿ ಪ್ಲಾಸ್ಟಿಕ್ ಮತ್ತು ಗೊಂಬೆಗಳೇ ಈ ಪಟ್ಟಿಯಲ್ಲಿರುವ ಸರಕುಗಳಾಗಿವೆ.

ಚೀನಾದೊಡನೆ ಭಾರತದ ವಿದೇಶೀ ಕೊರತೆ ಸಾಕಷ್ಟಿದೆ. ಅದೆಲ್ಲ ಭಾರವನ್ನು ಕಡಿಮೆ ಮಾಡಿಕೊಂಡು, ಅನಗತ್ಯ ಸರಕನ್ನು ತರಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಇಂಥಾ ಕಠಿಣಕ್ರಮ ತೆಗೆದುಕೊಳ್ಳದಂತೆ ಕೆಲ ವ್ಯಾಪಾರಿ ಕುಳಗಳು ಪ್ರಭಾವ ಬೀರಲು ಮುಂದಾಗಿದ್ದರೂ, ಅದಕ್ಕೆಲ್ಲ ಮಣಿಯಲ್ಲ ಎಂದು ಸಚಿವಾಲಯ ಹೇಳಿದೆ.