ರಾತ್ರಿಗೆ ಸುಂದರ ರೆಕ್ಕೆಗಳಿವೆ!

ರಾತ್ರಿಗೆ ಸುಂದರ ರೆಕ್ಕೆಗಳಿವೆ!

 

ಸಾಕೆನಿಸುವಷ್ಟು ಬಿಸಿಲಿನಲ್ಲಿ ದಟ್ಟ ನೆರಳು ಮತ್ತು ಹಿತವಾದ ಗಾಳಿ ಬೀಸಿದರೆ ಆ ಖುಷಿ ನೈತಿಕವೋ ಅನೈತಿಕವೋ ವ್ಯಾಖ್ಯಾನಿಸುತ್ತ ಶುಷ್ಕವಾಗಲಾರೆ. ಅಂತೆಯೇ ಪ್ರೀತಿ. ಅದರ ಮತ್ತೊಂದು ಅಭಿವ್ಯಕ್ತಿ ಕಾಮ. ಎಲ್ಲ ಜೀವಿಗಳ ಸಹಜ ಅಪೇಕ್ಷೆಯಂತೆಯೇ ಮನುಷ್ಯನಲ್ಲೂ ಇದೆ. ತರ್ಕ ಬುದ್ಧಿ ತತ್ವದಾಚೆಗಿನ ತೀವ್ರ ಹಸಿವಿದು. ಗಂಡಿಗಾಗಲೀ ಅಥವಾ ಹೆಣ್ಣಿಗಾಗಲೀ ಹೆಚ್ಚು ಕ್ರಿಯಾಶೀಲವಾಗಿರಲು, ತನ್ನ ಹುಡುಕಾಟಕ್ಕೆ, ಕನಸಿಗೆ ಚಾಲಕ ಶಕ್ತಿ ಒದಗಿಸಿ ಸಂತೋಷ ನೀಡಲು ಈ ಪ್ರೀತಿಯೇ ಕಾರಣ.

ಬಣ್ಣ ಬಣ್ಣದ ಹೂಗಳಲ್ಲಿ ನಮ್ಮೊಳಗಿನ ವರ್ಣಗಳ ಕಂಡು ಆನಂದಿಸುವುದು, ಎಲೆ ಮೇಲಿನ ಇಬ್ಬನಿಯ ನಾಲಗೆಗೆ ಹನಿಸಿಕೊಂಡು ಆ ತಾಜಾ ತಂಪನ್ನು ಆಸ್ವಾದಿಸುವುದು, ಹಕ್ಕಿಗಳ ತುಂಟ ಸಲ್ಲಾಪದಲ್ಲಿ ನಾವೂ ಮಗ್ನರಾಗಿ ಮೈಮರೆಯುವುದು, ತೆಳು ಹೊನಲು, ಜೋರು ಝರಿ, ಬೆಣ್ಣೆ ಮೋಡ, ಬೆಳದಿಂಗಳು ಎಲ್ಲದರಲ್ಲೂ ನಮ್ಮ ಖಾಸಗಿ ಅಪೇಕ್ಷೆಯನ್ನದ್ದಿ ಸಂತೃಪ್ತರಾಗುವುದು ಪ್ರೀತಿಯ ಕಾರಣಕ್ಕಾಗಿ. ಹಾಗಾಗಿ ಇದೆಲ್ಲವೂ ನಮ್ಮನ್ನು ನಾವು ಪ್ರಾಮಾಣಿಕವಾಗಿ ಕೊಟ್ಟು ಪಡೆಯುವ ಕ್ರಿಯೆ. ಕಲ್ಪನೆ ವಾಸ್ತವವನ್ನು ಬಯಸುವ, ವಾಸ್ತವ ಕಲ್ಪನೆಯಾಗುವ ಲೀಲೆ.

ಮೊನ್ನೆ ಸಂಜೆ ಡಾಲ್ಫಿನ್ ಐಸ್ ಪಾರ್ಲರ್ನಲ್ಲಿ ಫ್ರೂಟ್ ಜ್ಯೂಸ್ ತರಲು ಹೇಳಿ ಕೂತೆ. ನನ್ನ ಬಲ ಬದಿಯ ಕಂಪಾರ್ಟ್ಮೆಂಟ್ನಲ್ಲಿ ಎದುರು ಬದುರಾಗಿ ಒಬ್ಬ ಹುಡುಗಿ ಮತ್ತು ಹುಡುಗ ಕೂತಿದ್ದರು. ಹುಡುಗ ಕಡು ನೀಲಿ ಅಂಗಿ, ಬಿಸ್ಕತ್ತಿನ ಬಣ್ಣದ ಪ್ಯಾಂಟ್ ಧರಿಸಿದ್ದರೆ ಹುಡುಗಿ ನೀಲಿ ಬಿಳಿ ಅಗಲವಾದ ಅಡ್ಡ ಪಟ್ಟಿಯ ಟೀ ಶರ್ಟ್ ಮತ್ತು ಆಕಾಶ ನೀಲಿಯ ಮುಕ್ಕಾಲು ಪ್ಯಾಂಟ್ ಹಾಕಿದ್ದಳು. ಅಂಗೈಯಗಲದ ಚೌಕಾಕಾರದ ಸ್ಟ್ರಾಬೆರ್ರಿ ಐಸ್ ಕ್ರೀಂ ಕೆನ್ನೆಗೆ ಚಮಚದ ನಾಲಗೆಯಿಂದ ಮೃದುವಾಗಿ ಸವರಿದ ಅವಳು ಹುಡುಗನನ್ನು ಅರಳುತ್ತಿರುವ ಮೊಗ್ಗಿನಂತೆ ನೋಡಿ, ಎಡ ಮೊಳಕೈಯನ್ನು ಟೇಬಲ್ ಮೇಲೂರಿ ಮುಂಗೈಯನ್ನು ಬಾತಿನ ಕೊಕ್ಕಿನಂತೆ ವೈಯಾರದಿ ಬಾಗಿಸಿ, ಅದಕ್ಕೆ ಹಣೆಯ ಎಡ ಬದಿಯ ಒರಗಿಸಿಕೊಂಡಳು. ಐಸ್ ಕ್ರೀಂ ನಂತೆಯೇ ತಿಳಿ ಗುಲಾಬಿ ಬಣ್ಣದಲ್ಲಿ ನಾಚಿ, ಟೇಬಲ್ ಅಡಿಗೆ ತನ್ನ ಮೀನಿನಂತಹ ಪಾದಗಳಿಂದ ಅವನ ಶೂ ಕಚ್ಚುತ್ತಿದ್ದಳು. ನಾನು ಕುಡಿಯುತ್ತಿದ್ದ ಹಣ್ಣಿನ ರಸಕ್ಕೆ ಮತ್ತಷ್ಟು ಪರವಶ ಬೆರೆತು ಜರ್ಮನ್ ಕವಿ ರಿಲ್ಕೆಯ 

"ಸ್ಪರ್ಶದುಲ್ಲಾಸಕ್ಕೆ ಅಲೆಯ ಮೇಲಲೆ ಎದ್ದು

ಮೆದುವಾಗೆತ್ತಿ, ಓಲೈಸಿ, ಒಯ್ಯುವ

ಜಲದ ಗಮಕದ

ಎರಡು ಸೀಳಿನ ಮಧ್ಯ ಅನಾಯಾಸ

ನೀಡಿಕೊಳ್ಳುವ ಹಂಸ

ಬಗೆದೊಲೆಯುತ್ತ, ತಟಸ್ಥ ತೇಲುತ್ತ

ಅಗಾಧ ನೀರವದಲ್ಲಿ ತಲ್ಲೀನ"

(ಶತಮಾನದ ಕವಿ ರಿಲ್ಕೆ/ ಯು.ಆರ್.ಅನಂತಮೂರ್ತಿ) ಈ ಸಾಲುಗಳು ತಂಗಾಳಿಯಂತೆ ಸುಳಿದವು‌.

ಪ್ರೇಮದ ಗುಂಗು ಹೊಕ್ಕರೆ ಅಷ್ಟು ಸುಲಭವಾಗಿ ತೊರೆಯದು. ಅದೊಂಥರ ಹೂವಿನಂಥಹುದೇ ಸೂಜಿ ಚುಚ್ಚಿ ಚುಚ್ಚಿ ಕಾಡಿ ಕೆಣಕುವಂಥದ್ದು. ಅಕ್ಕನ ತೀಕ್ಷ್ಣತೆಯದು, ಅಲ್ಲಮನ ಮಾಯಾವಿತನದ್ದು, ಶಂಕರಿಗೆ ಸ್ವರವೊಪ್ಪಿಸಿ ಲೋಕ ಟೀಕಿಸುತ್ತಲೇ ದಾಟಿ ನಿಂತ ಶರೀಫನ ಉನ್ಮಾದದಂತಲೆಯುವುದು. 

ಈ ಸ್ಫೂರ್ತಿಹೀನ ಬೇಸಗೆಯ ಬೇಗುದಿ ಒಬ್ಬಂಟಿತನದಲ್ಲಿ ಮನಸ್ಸನ್ನು ಸ್ಮಶಾನ ಮಾಡಿಬಿಟ್ಟಿರುವಾಗ, ಹೊಳೆ ತೀರದಿ ಕುಳಿತು, ಅದೊಳಗೆ ಗಾಳವೆಸೆದು ದಾರದ ತುದಿಯ  ಸೆಳೆತದ ಅಂತೆಯೇ ಹಗೂರ ತೇಲುವ ಅನುಭೂತಿಗೆ ಒಡ್ಡಿ ನನ್ನೊಳಗಿನ ನನ್ನದೆಲ್ಲವ ಹೊರಗಿಟ್ಟು ತೇಲಬೇಕೆನ್ನಿಸುತ್ತಿತ್ತು. ಪ್ರೇಮದ ಮೋಹವೇ ಹಾಗೆ! ಗಾಯವ ಸವರಿಕೊಳ್ಳುತ್ತಾ ಸಂಜೆಯ ಸೊಬಗಿನಲ್ಲಿ ನೆನಪುಗಳ ಈಜಲು ಬಿಟ್ಟು, ಘೋರ ರಾತ್ರಿಗೆ ಆಹುತಿಯಾಗಿ ಕತ್ತಲಿನಲ್ಲಿ ಹುಚ್ಚೆದ್ದು ಒಳಗಿನ ಹಸಿವಿಗೆ ಬೇಕಾದ ಏನನ್ನೋ ಹುಡುಕುವಂಥದ್ದು. ಹಕ್ಕಿ ಮರಿಗಳಂತೆ ಸುತ್ತ ನಕ್ಷತ್ರಗಳ ನೆರವಿಕೊಂಡು ತದೇಕ ಮೌನದಲ್ಲಿ ಕಾಲವನ್ನು ಸೆರೆಗೊಳಿಸುವುದು. ಪ್ರೇಮ ಬಂಧಿಯಾದ ಕಾಲ ಸಿಹಿಯ ಲೋಲುಪತೆಯಲ್ಲಿ ಕಹಿಯ ರುಚಿಯನ್ನೂ ನೋಡಬಲ್ಲದು. ಈ ವೇಳೆ ವಿಜಯಶ್ರೀ ಹಾಲಾಡಿಯವರ ಈ ಸಾಲುಗಳು

  " ಮಿಂಚು ಗರಿಗಳ ಆ

    ಹಕ್ಕಿಗೆ ರೆಕ್ಕೆಗಳಿರಲಿಲ್ಲ

    ಒಂಟಿ ಕಾಲಿತ್ತು

    ಅಲ್ಲೇ ಸಿಕ್ಕ ಬೇವಿನಹಣ್ಣು

    ತಿಂದು ಸಣ್ಣಗೆ ಹಾಡುತ್ತ

    ಕಡ್ಡಿ ಆಯುತ್ತಿತ್ತು

    ಅದೇನಾಯಿತೋ

    ಒಂದು ಬೆಳಿಗ್ಗೆ

    ಸೀಮೆಯ ಹಕ್ಕಿಗಳೆಲ್ಲ ಬಂದು

    ಬೇವಿನ ಹಣ್ಣನ್ನು ಹುಡುಕಿ

    ರುಚಿನೋಡತೊಡಗಿದವು"

ಎಂಬಂತೆ ಆಸ್ವಾದ್ಯವಾಗಬಲ್ಲವು. (ಅಲೆಮಾರಿ ಇರುಳು/ ವಿಜಯಶ್ರೀ ಹಾಲಾಡಿ)

ಪ್ರೇಮದ ಎಲ್ಲ ವರ್ಣಗಳ ಜನ್ಮಸ್ಥಾನ ಗಾಢವಾದ ಇರುಳು. ಪ್ರೇಮಕ್ಕೆ ರಾತ್ರಿಯೆಂದರೆ ಕತ್ತಲಲ್ಲ, ಅದು ಬೆಳಕು. ಹಗಲಿಗೆ ಅಂಜಿಕೊಂಡ ಎಲ್ಲವೂ ಅಲ್ಲಿ ವೇಷ ಕಟ್ಟಿಕೊಂಡು ಕುಣಿಯುತ್ತವೆ. ಹಗಲು ಒಳಬಿಟ್ಟುಕೊಂಡ ಅನುಭವಗಳನ್ನು ಈ ಕತ್ತಲ ಹೊಳೆಯಲ್ಲಿ ಉಜ್ಜಿ ತೊಳೆದರೆ, ಹೀನವೆಂದದ್ದು ಹೊಳಪುಗೂಡಿರುತ್ತದೆ. ಶ್ರೇಷ್ಠವೆಂದುಕೊಂಡದ್ದು ಇದ್ದಿಲಾಗಿರುತ್ತದೆ. ಈ ಇರುಳೆಂಬ ನಿರ್ಭೀತ ಅವಕಾಶದಲ್ಲಿ ಒಡಲಿನ ಎಣ್ಣೆ ಬರಿದಾಗುವಷ್ಟು ಹೊತ್ತಿ ಉರಿದು, ಮುರಿದ ಬಂಧಗಳು ಮತ್ತೆ ಕೂಡಿ; ಸರಾಗ ದಾರಿಗಳು ಮುಗ್ಗರಿಸಿ; ಹರಡಿದ ಬಣ್ಣಗಳು ಬೇಕೆಂದದ್ದರಲ್ಲಿ ಬೆರೆತು, ಬೆರೆತ ಬಣ್ಣಗಳು ಕಿತ್ತಾಡಿ ಹೊರಬಂದು; ಒಟ್ಟಾರೆ ಕತ್ತಲ ಭಿತ್ತಿಯ ಮೇಲೆ ಅಸಂಗತ ಚಿತ್ರಗಳು! ಇರುಳೆಂದರೆ ಅದು ಮುಡಿ ಬಿಚ್ಚುವ ಸಮಯ! ಅವಳ ಕಪ್ಪು ಕೂದಲು ಅಲೆಯಲೆಯಾಗಿ ಅಲೆಯುತ್ತ ಹರಡಿದಷ್ಟೂ ನೆನಪುಗಳ ಸಮ್ಮೋಹಕ ವಾಸನೆ! ಎಂದೋ ಓದಿದ್ದ ಬೋದಿಲೇರ್ ನ ಈ ಸಾಲುಗಳು:

"ನಿನ್ನ ಕೂದಲ ವಾಸನೆಯನ್ನು ಆಳವಾಗಿ, ಬಹು ಆಳವಾಗಿ ಆಘ್ರಾಣಿಸಲು ಬಿಡು. ಬಾಯಾರಿದವನು ನೀರಿನ ಬುಗ್ಗೆಯಲ್ಲಿ ಮುಖ ಅದ್ದುವಂತೆ ನನ್ನ ಇಡೀ ಮುಖವನ್ನು ಅದ್ದಲು ಬಿಡು. ಕೂದಲನ್ನು ನನ್ನ ಸುಗಂಧಭರಿತ ಕರ್ಚೀಫಿನಂತೆ ಅಲ್ಲಾಡಿಸಲು ಬಿಡು--ನೆನಪುಗಳನ್ನು ನಾನು ಗಾಳಿಯಲ್ಲಿ ಅಲ್ಲಾಡಿಸುವ ಹಾಗೆ.

ನಿನ್ನ ಕೂದಲಲ್ಲಿ ನಾನು ಕಂಡದ್ದು, ಕೇಳಿದ್ದು ನಿನಗೆ ಗೊತ್ತಿಲ್ಲ! ಜನರ ಮನಸ್ಸು ಸಂಗೀತದಲ್ಲಿ ತೇಲುವಂತೆ ನನ್ನ ಚೇತನ ನಿನ್ನ ಕೂದಲ ವಾಸನೆಯಲ್ಲಿ ತೇಲುತ್ತದೆ" (ಪಾಪದ ಹೂವುಗಳು/ಚಾರ್ಲ್ಸ್ ಬೋದಿಲೇರ್/ ಅನುವಾದ ಪಿ.ಲಂಕೇಶ್) ಹೀಗೆ ನಿರಾಳವಾಗಿಸುತ್ತಲೇ ನೆನಪಿನ ಉತ್ತುಂಗದಲ್ಲಿ ತೇಲಿಸಿಬಿಡುತ್ತವೆ. ಹಾಗಾಗಿ ಈ ಇರುಳೆಂಬುದು ನಿತ್ಯ ಒಲಿದು ಬರುವ ಸ್ವಾತಂತ್ರ್ಯ ಗೀತ. ಇದು ಸೌಮ್ಯ, ಇದು ಗಂಭೀರ, ಇದು ಘೋರ! ಮೃದುವಾಗಿ ಸುತ್ತಿಕೊಳ್ಳುತ್ತಲೇ ಹೆಬ್ಬಾವಿನಂತೆ ಎಲುಬುಗಳ ನುರಿಸಬಲ್ಲದು. ಅಂತೆಯೇ ಸಾವಿನ ಶೃಂಗದಿಂದ ಜಿಗಿದು ಜೀವ ಉಳಿಸಿಕೊಂಡ ಆನಂದ ಕೊಡಬಲ್ಲದು. ಬಹುಶಃ ಪ್ರೇಮ ಕೂಡ ಅಂತಹುದೇ!

ಈ ಅನುಭವ ಲೋಕವೇ ಹಾಗಿರುವುದು. ಸ್ವಸ್ಥ ಹೊನಲಿನಾಳದ ಅಸ್ವಸ್ಥ ಅಂತರ್ ಪ್ರವಾಹ. ಮನುಷ್ಯನ ಸಾಮಾಜಿಕ ಮುಖವಾಡವನ್ನು ಕಿತ್ತೆಸೆಯಬಲ್ಲ  ನೈಜ ನೆಲೆ. ಬ್ರೆಕ್ಟ್ ನ 'ಕಾಮಿ' ಹೆಸರಿನ ಕವಿತೆಯ ಸಾಲುಗಳು ಹೀಗಿವೆ :

    "ಮುಚ್ಚುಮರೆ ಏಕೆ? ರಕ್ತ ಮಾಂಸದ ಈ ದೇಹ ದುರ್ಬಲ

     ಗೆಳೆಯನ ಹೆಂಡತಿ ಕೊಡಬಲ್ಲ ರುಚಿ ತಿಳಿದ ನಾನು

     ನನ್ನ ಕೋಣೆಯಲ್ಲಿ ಇರಲಾರೆ, ರಾತ್ರಿ ನಿದ್ರಿಸಲಾರೆ.

     ಆಲಿಸಲು ಕಾಯುತ್ತೇನೆ

     ಅವರು ಸುಖದಲ್ಲಿ ಬಿಕ್ಕುವುದನ್ನು

     ಗೊತ್ತು ಇದು ಹೀನ, ಕ್ಷಮೆಯಿರಲಿ

     ಸಮಸ್ಯೆಯೆಂದರೆ ಅವರ ಕೋಣೆಯ ಪಕ್ಕವೇ ನನ್ನದು

    ಅವರು ಪಿಸುಗುಡುವುದನ್ನು ಕೇಳದೇ ಇರಲಾರೆ

 ಕೇಳದಿದ್ದರೆ ಅದೂ ಕೂಡ ಸಂಕಟವೆ." (ಮತ್ತೆ ಮತ್ತೆ ಬ್ರೆಕ್ಟ್/ ಯು.ಆರ್.ಅನಂತಮೂರ್ತಿ)

ಹಾಗಾಗಿ ಸಾಮಾಜಿಕ ವಿಷಯಗಳನ್ನು ಒರೆ ಹಚ್ಚುವ ನಿಕಷದಲ್ಲಿ‌ ಈ ಅನುಭವ ಲೋಕವನ್ನು ಒರೆಯಲು ಹೋದಾಗೆಲ್ಲ ಸುಳ್ಳಿನಿಂದ ತೃಪ್ತರಾಗಬಹುದಷ್ಟೇ. ಅನ್ನಾಳ ಬಗ್ಗೆ ಲಂಕೇಶ್ ಬರೆಯುತ್ತಾ 

"ಹುಟ್ಟಿನಿಂದಲೇ ದ್ವಂದ್ವವನ್ನು ಕಟ್ಟಿಕೊಂಡು ಬಂದ ಅನ್ನಾ ಮನುಕುಲದ ಪ್ರತಿನಿಧಿ. ವ್ಯಭಿಚಾರ, ಸಾಮಾಜಿಕ ನೀತಿಸಂಹಿತೆ ಮುಂತಾದವೆಲ್ಲ ಚಿಲ್ಲರೆ ಎನ್ನಿಸುವಂತೆ ಮನುಷ್ಯನ ಅಂತರಾಳದಲ್ಲಿ ಜೀವದ ಬಿರುಗಾಳಿ, ರೊಚ್ಚು ಇವೆ" ಎನ್ನುತ್ತಾರೆ (ಎಲ್ಲ ವಿವರಣೆಯ ಆಚೆಗೆ/ ಮನಕೆ ಕಾರಂಜಿಯ ಸ್ಪರ್ಶ/ ಪಿ.ಲಂಕೇಶ್).

ಬದುಕಿಗೆ ಪ್ರಾಮಾಣಿಕವಾಗುವುದೆಂದರೆ  ನಮ್ಮೊಳಗಿಗೆ ನಿಷ್ಕಪಟಿಗಳಾಗದೆ ಎದುರಾಗುವುದು. ಪೊಳ್ಳಿನ ವೈಭವೀಕರಣಗಳೇ ಜಗದ ಪರಮಸತ್ಯಗಳೆನ್ನುವಂಥ ಈ ಕೆಟ್ಟ ಕಾಲದಲ್ಲಿ ಗೆಳೆಯ ಆನಂದ ಕುಂಚನೂರನ ಈ ಕವಿತೆಯ ಸಾಲುಗಳ ನಿಮ್ಮ ಓದಿಗಿಟ್ಟು ವಿರಮಿಸುತ್ತೇನೆ:

"ಸರೀ ರಾತ್ರಿಯ ಸಮೆಯು ಉರಿಯುತಿದೆ ಒಂದೇ ಸಮ     ಅರ್ಪಿಸಿಕೊಂಡರೆ

  ಕಾಣುವವು ಜೋಡಿ ಪಾರಿವಾಳಗಳು

  ಹೊರಟರೆ ಅದರದೇ ಲೋಕ ಅದರದೇ ಜಗ

  ಶ್ಶ್..ಸುಮ್ಮನೆ ಹೊದ್ದು ಮಲಗಿಬಿಡಿ

  ಈ ರಾತ್ರಿಗೆ ಸುಂದರ ರೆಕ್ಕೆಗಳಿವೆ." (ವ್ಯೋಮ ತಂಬೂರಿ ನಾದ/ ಆನಂದ ಕುಂಚನೂರ)