ಒಕ್ಕಲಿಗೀಕರಣ ರಾಜಕಾರಣದ ಹೊಸ ಆಯಾಮ:  ಬಿಜೆಪಿ, ಸಿದ್ದು ಥಂಡಾ

ಒಕ್ಕಲಿಗೀಕರಣ ರಾಜಕಾರಣದ ಹೊಸ ಆಯಾಮ:  ಬಿಜೆಪಿ, ಸಿದ್ದು ಥಂಡಾ

ಪಕ್ಷ ಬೇರೆ ಇದ್ದರೂ ಪರವಾಗಿಲ್ಲ, ಒಕ್ಕಲಿಗರ ರಾಜಕೀಯ ಹಿಡಿತ ನಮ್ಮ ನಮ್ಮಲ್ಲೇ ಇರಬೇಕು ಎಂಬ ಗುರಿಯಿಂದಲೇ, ಕುಮಾರಸ್ವಾಮಿ ನೇರಾನೇರವಾಗಿಯೇ ಡಿಕೆಶಿ ಬೆನ್ನಿಗೆ ನಿಂತುಬಿಟ್ಟಿದ್ದಾರೆ.

ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ್ದು, ಕಾಫೆ ಡೇ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದ್ದು, ಡಿ.ಕೆ.ಶಿವಕುಮಾರ್ ಬಂಧನಕ್ಕೊಳಗಾಗಿರುವುದು ಇವೆಲ್ಲ ಒಕ್ಕಲಿಗರನ್ನ ಟಾರ್ಗೆಟ್ ಮಾಡುತ್ತಿರುವ ವೈಖರಿ ಎಂಬುದೇ ಪುಂಖಾನುಪುಂಖವಾಗಿ ಹರಡುತ್ತಿರುವುದರಿಂದ, ಒಕ್ಕಲಿಗ ಸಮುದಾಯದ ಮತಬ್ಯಾಂಕ್ ಕ್ರೋಡೀಕರಣ ಹೊಸ ದಿಕ್ಕಿನತ್ತ ಹೊರಳಿದೆ.

ತನ್ನ ಅಳಿಯನ ಹಿತರಕ್ಷಣೆಗಾಗಿಯೇ ಎಸ್. ಎಂ.ಕೃಷ್ಣ ಇಳಿ ವಯಸಿನಲ್ಲಿ ಮೋದಿಗೆ ಪರಾಕು ಹೇಳಿದರೂ, ಅಳಿಯ ಜೀವ ಸಹಿತ ಉಳಿಯಲಿಲ್ಲ. ಇದಕ್ಕೆ ಆದಾಯ ತೆರಿಗೆ ಮುಖಾಂತರ ಬಿಜೆಪಿ ಕೊಡಿಸಿದ್ದ ಏಟುಗಳೇ ಕಾರಣ; ಕುಮಾರಸ್ವಾಮಿ ಮುಖ್ಯಮಂತ್ರಿ ಗಾದಿಯಿಂದ ಇಳಿಯುವಂತೆ ಮಾಡಿದ್ದರಲ್ಲೂ ಬಿಜೆಪಿಯ ಕೈವಾಡವೇ ಇದೆ. ಹಾಗೇ ಶಿವಕುಮಾರ್ ಬಂಧನಕ್ಕೊಳಗಾಗಿರುವುದು ಕೂಡ ಒಕ್ಕಲಿಗರನ್ನ ಗುದುಮುವ ಕಾರ್ಯಕ್ರಮ ಎಂಬ ಬೀಜ ಮೊಳಕೆಯೊಡೆಯಲು ಆರಂಭಗೊಂಡಿದೆ.

ಈ ಮೂರು ಘಟನೆಗಳ ಹಿಂದೆ ವಾಸ್ತವ ಅಥವಾ ಸಮರ್ಥನೆಗಳೇನೇ ಇರಲಿ, ಒಕ್ಕಲಿಗ ಸಮುದಾಯ ಮಾತ್ರ ಕಮಲ ಪಕ್ಷದಿಂದ ಹಿಂದೆ ಸರಿಯುತ್ತಿರುವುದು ಸ್ಪಷ್ಟವಾಗುತ್ತಿದೆ. ಇತ್ತಿತ್ತಲಾಗಿ ದಲಿತ ಸಮುದಾಯ ಹೇಗೆ ಮೋದಿ ಮೇನಿಯಾಗೆ ಒಳಗಾಗಿದೆಯೋ, ಅದೇ ರೀತಿ ಒಕ್ಕಲಿಗ ಜನಾಂಗದ ಯುವ ಸಮೂಹವೂ ಮೋಡಿಗೊಳಗಾಗುತ್ತಿತ್ತು.  ಆದರೆ ಮಹಾನ್ ಆಸೆಗಳನ್ನಿಟ್ಟುಕೊಂಡ ಡಿ.ಕೆ.ಶಿವಕುಮಾರ್ ಬೆಳಗಾದರೆ ಇ.ಡಿ. ಕಚೇರಿಯಲ್ಲಿ ವಿಚಾರಣೆಗೆ, ರಾತ್ರಿಯಾದರೆ ತುಘಲಕ್ ರಸ್ತೆ ಆರಕ್ಷಕ ಠಾಣೆಯಲ್ಲಿ ಮಲಗಲು ಹೋಗುವಂಥ ಸ್ಥಿತಿಗೆ ತಲುಪಿಕೊಂಡಿರುವುದು, ಸಿದ್ದಾರ್ಥ ಪ್ರಾಣ ಕಳೆದುಕೊಂಡಿದ್ದು, ಎಚ್‍ಡಿಕೆ ಅಧಿಕಾರ ಕಳೆದುಕೊಂಡಿದ್ದು ಈ ಮೂರೂ ಒಕ್ಕಲಿಗರ ದಮನಕಾರಿ ನೀತಿ ಎಂಬುದನ್ನೇ ಈ ಜನಾಂಗದಲ್ಲಿ ಬಿತ್ತನೆ ಮಾಡಲಾಗುತ್ತಿದೆ.

ಪರಿಣಾಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಒಕ್ಕಲಿಗರನ್ನ ಓಲೈಸುವಂಥದ್ದರ ಕಡೆ ನಿಗಾ ಇಡುವಂತೆ ಮಾಡಿದ್ದರೆ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಬಳಗ ನಿಸ್ತೇಜವಾಗುತ್ತಿದೆ.  ಮೊದಮೊದಲಿಗೆ ಸಿದ್ದು ಕೂಡ ಡಿ.ಕೆ.ಬಂಧನ ಸರಿಯಲ್ಲ ಎಂದು ಹೋರಾಟ ಆರಂಭಿಸಿದರೂ, ಜನತಾದಳದವರು ಇಡೀ ಹೋರಾಟವನ್ನ ಹೈಜಾಕ್ ಮಾಡಿಕೊಂಡುಬಿಟ್ಟಿದೆ. ಪರಿಣಾಮವಾಗಿ ಕಾಂಗ್ರೆಸ್‍ಗಿಂತ ದಳದವರ ಬೆಂಬಲವೇ ಡಿಕೆಶಿಗೆ ಲಭ್ಯವಾಗುತ್ತಿದೆ.

ಸದಾ ಪೈಪೋಟಿದಾರಾಗಿಯೇ ಕಾಣಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ತನ್ನದೇ ವರ್ಚಸ್ಸು ವೃದ್ದಿಸುತ್ತಿರಬೇಕು, ಇನ್ನೊಂದು ಅವಧಿಗೆ ಸಿಎಂ ಆಗಬೇಕು ಎಂಬ ಲೆಕ್ಕದಿಂದ ಹೊರಟಿದ್ದಕ್ಕೆ, ಡಿ.ಕೆ.ಶಿವಕುಮಾರ ಪ್ರಕರಣ ಪೆಟ್ಟು ಕೊಟ್ಟುಬಿಟ್ಟಿದೆ. ಕಾಂಗ್ರೆಸ್‍ನಲ್ಲೇ ಡಿಕೆಶಿ ಬಣ ಸಿದ್ದು ಬಣ ಸ್ಪಷ್ಟವಾಗಿ ಗುರುತಾಗುತ್ತಿದ್ದು, ದಳದೊಡನೆ ಸೇರಿಕೊಂಡು ಮುಂದಿನ ರಾಜಕಾರಣ ಮಾಡಲು ಡಿಕೆ ಬಣ ಮುನ್ನುಗ್ಗುತ್ತಿರುವುದು, ಮೈತ್ರಿ ಬೇಡ ಎಂಬ ವಾದ ಮಂಡಿಸುತ್ತಿದ್ದ ಸಿದ್ದು ಬಳಗಕ್ಕೆ ಜಾಪಾಳ ಮಾತ್ರೆ ತಿಂದಂತಾಗಿದೆ.

ನಮ್ಮ ನಮ್ಮ ಕಿತ್ತಾಟದ ಪ್ರಯೋಜನ ಬೇರೆಯವರು ¥ಡೆಯೋದು ಬೇಡ, ಪಕ್ಷ ಬೇರೆ ಇದ್ದರೂ ಪರವಾಗಿಲ್ಲ, ಒಕ್ಕಲಿಗರ ರಾಜಕೀಯ ಹಿಡಿತ ನಮ್ಮ ನಮ್ಮಲ್ಲೇ ಇರಬೇಕು ಎಂಬ ಗುರಿಯಿಂದಲೇ, ಕುಮಾರಸ್ವಾಮಿ ನೇರಾನೇರವಾಗಿಯೇ ಡಿಕೆಶಿ ಬೆನ್ನಿಗೆ ನಿಂತುಬಿಟ್ಟಿದ್ದಾರೆ. ಶಿವಕುಮಾರ ಕಾಂಗ್ರೆಸ್‍ನ ಎಷ್ಟೇ ಕಟ್ಟಾಳು ಆಗಿದ್ದರೂ, ಬೆಂಗಳೂರಿನ ಆರಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಗೆ ಸಹಕರಿಸುತ್ತಿದ್ದರು ಎಂಬ ಮಾತುಗಳಿವೆ. ಇದರಿಂದಾಗಿಯೇ ಬಿಎಸ್‍ವೈ ಜತೆ ಅಭೂತಪೂರ್ವ ಗೆಳೆತನವನ್ನೂ ಹೊಂದಿದ್ದಾರೆ. ಇದಕ್ಕೆ ಬೆನ್ನಿಗಾನಹಳ್ಳಿ ಭೂ ಪರಿವರ್ತನೆಯಲ್ಲಿ ಇವರಿಬ್ಬರ ಹೆಸರು ಇದೆ. ಅಷ್ಟೊಂದು ಮಟ್ಟಿಗೆ ಕೊಡುಕೊಳ್ಳು ಸ್ನೇಹಸಂಬಂಧ ಇವರಿಬ್ಬರ ನಡುವೆ ಇರುವುದು ರಹಸ್ಯವೇನಲ್ಲ. ಈಗ ಡಿಕೆಶಿ ಎಚ್‍ಡಿಕೆ ಜತೆಯಾಗಿರುವುದರಿಂದ ಇಂಥ ಹೊಂದಾಣಿಕೆ ರಾಜಕೀಯಕ್ಕೆ ಪೆಟ್ಟುಬಿದ್ದಿದ್ದು, ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಗಳೂರು ಭಾಗದಲ್ಲಿ ಈಗನಷ್ಟು ಸಂಖ್ಯೆಯ ಗೆಲುವನ್ನ ಬುಟ್ಟಿಗಾಕಿಕೊಳ್ಳುವುದು ಆಗಲ್ಲ. ಅಷ್ಟರಮಟ್ಟಿಗೆ ಒಕ್ಕಲಿಗ ಸಮುದಾಯ ಮತ್ತು ಶಿವಕುಮಾರ್ ಬಂಧನ ಪ್ರಕರಣ ಪ್ರಭಾವ ಬೀರುತ್ತಿದೆ.

ಎತ್ತಲಿಂದ ನೋಡಿದರೂ ಬಿಜೆಪಿಗೆ ಒಕ್ಕಲಿಗರ ಮತಬ್ಯಾಂಕ್ ಸಿಗದಂತಾಗಿ, ಈ ಸಮುದಾಯದ ಮುಖ್ಯರನ್ನ ಬಲಿ ತೆಗೆದುಕೊಳ್ಳಲು ಹೊರಟಿದೆ, ಲಿಂಗಾಯತರನ್ನ ಎತ್ತಿಕಟ್ಟುತ್ತಿದೆ ಎಂಬ ಭಾವನೆ ಬಿತ್ತನೆ ಮಾಡಲಾಗುತ್ತಿದೆ. ಇದೇ ರೀತಿಯ ಕಹಿ ಭಾವನೆ ಸಿದ್ದರಾಮಯ್ಯ ವಿರುದ್ದವೂ ಮೊಳೆಯುವಂತಾಗಿದೆ.

ಕಾಂಗ್ರೆಸ್‍ನ ರಾಜ್ಯ ಉಸ್ತುವಾರಿ ಹೊಂದಿರುವ ವೇಣುಗೋಪಾಲ್ ಕೇರಳದವರು. ಈ ರಾಜ್ಯದ ವಯನಾಡಿನಿಂದಲೇ ರಾಹುಲ್ ಗಾಂಧಿ ಗೆದ್ದಿದ್ದಾರೆ. ವಯನಾಡು ಕೊಡಗಿಗೆ ಅಂಟಿಕೊಂಡಿರುವುದರಿಂದ ಕರ್ನಾಟಕದೊಡನೆ ಸಂಬಂಧವಿದ್ದೇ ಇದೆ. ಇದರ ಹಿನ್ನೆಲೆಯಲ್ಲಿಯೇ ಡಿಕೆಶಿವಕುಮಾರ್ ಬಂಧನವನ್ನ ಕೇರಳದಲ್ಲೂ ಪ್ರತಿಭಟಿಸಲು ಕಾಂಗ್ರೆಸ್ ಮುಂದಾಗಿದೆ, ಇದು ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಕಾರಣದಿಂದಾಗಿ ಆ ರಾಜ್ಯದಲ್ಲೂ ಹೆಚ್ಚಿನ ಮಹತ್ವ ಪಡೆಯುತ್ತಿರುವಂತೆ, ಆಲ್ಲಿನ ಸರ್ಕಾರದಲ್ಲೂ ಭಾಗೀದಾರತನ ಹೊಂದಿರುವ ಜನತಾದಳ ಕೂಡ ಬೀದಿಗಿಳಿದಿದೆ. ಹೀಗಾಗಿ ಶಿವಕುಮಾರ್ ಪರವಾಗಿನ ಹವಾ ನೆರೆ ರಾಜ್ಯದಲ್ಲೂ ಇದೆ ಎನುವಂತಾಗಿಸಲು ಕಾಂಗ್ರಸ್-ಜನತಾದಳ ಮುಂದಾಗಿವೆ.

ರಾಜ್ಯದ ಗಡಿಯಾಚೆಗೂ ಈ ವಿಚಾರ ಕೊಂಡೊಯ್ಯುವ ಮುಖೇನ ಡಿಕೆಗೆ ಏಕ್‍ಧಂ ನಾಯಕತ್ವಕ್ಕೇರಿಸಲಾಗಿದೆ. ಇವರನ್ನ ಬಲಿ ಹಾಕಬೇಕೆಂದುಕೊಂಡಿದ್ದ ಸಿದ್ದರಾಮಯ್ಯರೇ ಇಡೀ ಪ್ರಕರಣವನ್ನ ದಳ ಹೈಜಾಕ್ ಮಾಡಿಕೊಂಡು ಹೋಗುತ್ತಿರುವ ಪರಿ ಕಂಡು ದಿಗಿಲಿಗೊಳಗಾಗಿದ್ದಾರೆ.

 ಒಕ್ಕಲಿಗ ಸಮುದಾಯದ ಆಕ್ರೋಶ ಹೆಚ್ಷಿಸಿಕೊಳ್ಳುತ್ತಿರುವ ಬಿಜೆಪಿ ಮುಂದೆ ಸಮುದಾಯ ಓಲೈಕೆಗೆ ಬೇಕಾದ್ದೆಲ್ಲ ಮಾಡಬೇಕಾದ ಅನಿವಾರ್ಯತೆಗೆ ಸಿಗೇ ಬಿದ್ದಿದೆ.

 ಮುಂದಿನ ದಿನಗಳಲ್ಲಿ ಶಿವಕುಮಾರ್-ಕುಮಾರಸ್ವಾಮಿ ಜೋಡೆತ್ತಿನ ರಾಜಕೀಯವೇ ನಿರ್ಣಾಯಕವಾಗುವಂಥ ತಿರುವು ತೆಗೆದುಕೊಳ್ಳುತ್ತಿದೆ. ಇದು ಪಕ್ಕಾ ಒಕ್ಕಲಿಗ ರಾಜಕಾರಣದ ನೆಲೆಯಲ್ಲೇ ಮುನ್ನಡೆಯುತ್ತೆ.