ನೆರೆ ಹಾಲು ತಂದಿಟ್ಟ ಸಂಕಟ..!

ನೆರೆ ಹಾಲು ತಂದಿಟ್ಟ ಸಂಕಟ..!

  ಪಕ್ಷದೊಳಗಿನ ಆಂತರಿಕ ಯುದ್ದದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಗೆದ್ದರೂ, ಬಾಹ್ಯವಾಗಿ ಏಳುತ್ತಿರುವ ರೈತರ ಆಕ್ರೋಶ, ನೆರೆ ಪೀಡಿತರ ಆಕ್ರಂದನದ ವಿರುದ್ದ ಗೆಲ್ಲುವರೇ ಎಂಬುದು ಪ್ರಾಮುಖ್ಯತೆ ಪಡೆಯುತ್ತಿದೆ.

 ರೈತಾಪಿವರ್ಗದ ಆರ್ಥಿಕ ಚೈತನ್ಯಕ್ಕಾಗಿ ಹೈನುಗಾರಿಕೆಯನ್ನ ಬೆಳೆಸಲಾಗಿದೆ. ಪಶುಸಂಗೋಪನೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳ ಸಂಖ್ಯೆ ಸಾಕಷ್ಟಿದ್ದು, ಡೈರಿ ಒಕ್ಕೂಟದಲ್ಲೇ 25 ಲಕ್ಷದಷ್ಟು ಸದಸ್ಯರಿದ್ದಾರೆ, ಪ್ರತೀ ಹಳ್ಳಿಹಳ್ಳಿಯಲ್ಲೂ ಉತ್ಪಾದಕರಿದ್ದಾರೆ.  ಇವರಿಗೆ ಅನುಕೂಲವಾಗಲು ಸಹಾಯ ಧನವನ್ನೂ ಸರ್ಕಾರ ಕೊಡುತ್ತಿರುವುದು, ರಾಜಕೀಯ ಲಾಭದ ಲೆಕ್ಕಾಚಾರವನ್ನೂ ಒಳಗೊಂಡಿರುವಂಥದ್ದೇ.

  ಆರ್‍ಸಿಇಪಿ ಒಪ್ಪಂದದ ಅನುಸಾರ ಹೊರ ದೇಶಗಳ ಹಾಲು ಕಡಿಮೆ ಬೆಲೆಗೆ ಬರುವುದರಿಂದ, ಸ್ಥಳೀಯ ಉತ್ಪಾದಕರಿಗೆ ಭಾರೀ ಹೊಡೆತ ಕೊಡುವುದು ಖಚಿತ. ಇದನ್ನೆ ವಿಪಕ್ಷ ಕಾಂಗ್ರೆಸ್ ಮತ್ತು ಜನತಾ ದಳ ಮುಖ್ಯ ಅಸ್ತ್ರವಾಗಿಸಿಕೊಂಡು ಬಿಜೆಪಿ ವಿರುದ್ದ ಹೋರಾಟಕ್ಕೆ ಅಣಿಯಾಗುತ್ತಿವೆ.

 ಹಳ್ಳಿ ಮಟ್ಟದಿಂದಲೇ ರೈತರನ್ನ ಸಂಘಟಿಸಿಕೊಂಡು, ಬಿಜೆಪಿ ವಿರುದ್ದದ ಅಲೆ ಎಬ್ಬಿಸಲು ವಿಪಕ್ಷಗಳೆರಡೂ ಸಜ್ಜಾಗಿರುವುದು ಯಡಿಯೂರಪ್ಪಗೆ ಸಂಕಷ್ಟ ತರುತ್ತಿದೆ. ರೈತರನ್ನ ಎದುರಾಕಿಕೊಂಡರೆ ಕಷ್ಟ ತಪ್ಪಿದ್ದಲ್ಲ ಎಂಬ ಅರಿವಿರುವುದರಿಂದ ಪಶುಸಂಗೋಪನಾ ಸಚಿವರಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಿ, ಹಾಲನ್ನ ಇದರಿಂದ ಹೊರಗಿಡಿ ಎಂಬು ಮನವಿ ಮಾಡಿಸಿದ್ದಾರೆ.  ಆದರೆ ಇದು ಫಲ ಕೊಡುವುದು ಅನುಮಾನ.

 ಮತ್ತೊಂದೆಡೆ ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಇದು ಕರ್ನಾಟಕದಲ್ಲಿನ ನೆರೆ ಪೀಡಿತ ಪ್ರದೇಶ ವ್ಯಾಪ್ತಿಯಲ್ಲೂ ಪುನರಾವರ್ತನೆಯಾಗುವ ಆತಂಕವೂ ಯಡಿಯೂರಪ್ಪರನ್ನ ಕಾಡುತ್ತಿದೆ. ಹೀಗಾಗಿ ರೈತ ಮತ್ತು ನೆರೆ ಪೀಡಿತ ಎರಡೂ ಸಮಷ್ಟಿ ದೃಷ್ಟಿಯಿಂದ ವಿಸ್ತಾರ ಬಾಹುಳ್ಯತೆಯನ್ನೊಂದಿರುವಂಥವು. ಇದನ್ನೇ ವಿಪಕ್ಷಗಳು ಅಸ್ತ್ರವಾಗಿಸಿಕೊಂಡು ನಿಲ್ಲುತ್ತಿವೆ. ಕಾಂಗ್ರೆಸ್ ಇದೇ ವಿಚಾರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುವುದಕ್ಕೂ ಮುಂದಾಗಿದೆ.

 ಆಂತರಿಕ ಯುದ್ದವನ್ನೂ ಜಯಿಸಿಕೊಳ್ಳಲು ಒದ್ದಾಡುತ್ತಿರುವ ಮುಖ್ಯಮಂತ್ರಿಗೆ,  ಹಾಲು-ನೆರೆಯ ವಿಚಾರವೇ ಇನ್ನಷ್ಟು ಪ್ರಪಾತದೆಡೆಗೆ ದೂಕುತ್ತಿದೆ.