ವಿವಾದಗಳ ದಸರಾ ಬೇಕಿದೆಯೇ ದೂಸ್ರಾ?

ಕಳೆದ ಸಲ ಮೈತ್ರಿ ಸರ್ಕಾರ ಇನ್ಪೋಸಿಸ್‍ನ ಸುಧಾಮೂರ್ತಿಯನ್ನ ಕರೆಸಿ ಟೀಕೆಗೊಳಗಾಗಿದ್ದರೆ, ಈ ಸಲ  ಬಿಜೆಪಿ ಸರ್ಕಾರ ಬಲಪಂಥೀಯ ಎಸ್.ಎಲ್. ಭೈರಪ್ಪರಂಥವರನ್ನ ಕರೆದು ಉದ್ಬಾಟನೆ ಮಾಡಿಸಿ ಅವರಾಡಿದ ಮಾತಿನಿಂದ ತೀರಾನೆ ಮುಜುಗರಕ್ಕೊಳಗಾಗಿದೆ.  

ವಿವಾದಗಳ ದಸರಾ ಬೇಕಿದೆಯೇ ದೂಸ್ರಾ?

ಆಳುವವರ ತೀಟೆ ತೆವಲಿಗೆ, ಅಧಿಕೃತವಾಗಿ ಘೋಷಿತವಾಗಿಲ್ಲವಾದರೂ ನಾಡಹಬ್ಬ ಎಂದೇ ಕರೆಸಿಕೊಂಡು ಬೀಗುವ ದಸರಾವೆಂಬ ಒಡ್ಡೋಲಗವೂ ಆಚರಣೆಗಿಂತ ಹೆಚ್ಚಾಗಿ ವಿವಾದಗಳನ್ನೇ ಮೈಗಂಟಿಸಿಕೊಳ್ಳುತ್ತಿದೆ.

ಪುರಾಣ ಇತಿಹಾಸಗಳೇನಾದರೂ ಇರಲಿ, ಒಂದು ಕಾಲಘಟ್ಟದಲ್ಲಿ ಅರಮನೆ ಆಚರಿಸುವ ದಸರ ನಿಂತೇ ಹೋಯಿತು ಎಂಬಂತಾದಾಗ ಸ್ಥಳೀಯ ಮುಖಂಡರೆಲ್ಲ ಸೇರಿ ತಾವೇ ಮೆರವಣಿಗೆ ಹೊರಡಿಸಿದ್ದರು, ತದನಂತರ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಇದನ್ನ ಸರ್ಕಾರೀ ಹಬ್ಬವನ್ನಾಗಿಸಿದರು.  ಅಲ್ಲಿಂದಾಚೆಗೆ ಪ್ರವಾಸೋದ್ಯಮದ ಉತ್ತೇಜನಕ್ಕೆ ಬೇಕೇಬೇಕೆಂಬ ಒತ್ತಾಯದ ಪೋಷಾಕು ಧರಿಸಿಕೊಂಡು ಎಂಥದ್ದೇ ಬರ, ನೆರೆ ಬಂದು ಎಷ್ಟು ಜನರ ಬದುಕನ್ನ ಹಾಳು ಮಾಡಿದರೂ ಸರಿ, ದಸರ ಮಾತ್ರ ಬೇಕೇಬೇಕು ಎಂಬಂತಾಗಿ ಹೋಗಿದೆ.  ಇಷ್ಟೊಂದು ಅದ್ದೂರಿ ಬೇಡವೆಂದು ಸಂಸದ ಶ್ರೀನಿವಾಸ ಪ್ರಸಾದ್ ಬಡಕೊಂಡರೂ ಯಾರಿಗೂ ಕೇಳಿಸಿಲ್ಲ. 

ಅಧಿಕಾರಿಗಳು ರಾಜಕಾರಣಿಗಳ ದರ್ಬಾರ್ ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ದಸರಾ ಉದ್ಬಾಟಿಸುವವರು ಯಾರು ಎಂಬುದರಿಂದಲೇ ಪರ ವಿರೋಧಗಳ ನರಳಾಟ ಹುಟ್ಟಿಕೊಳ್ಳುತ್ತೆ. ಕಾಂಗ್ರೆಸ್ ಸರ್ಕಾರವಿದ್ದಾಗ ಎಡಪಂಥೀಯ ವಿಚಾರಧಾರೆಯ ಪ್ರಗತಿಪರರಿಗೆ ಮಣೆಹಾಕುವುದರಿಂದ ಬರಗೂರು ರಾಮಚಂದ್ರಪ್ಪನಂಥವರು ಚಾಮುಂಡಿ ಗುಡಿಯೊಳಗೆ ಹೋಗದ್ದು, ಗಿರೀಶ್ ಕಾರ್ನಾಡ್‍ರಂಥವರು ತನ್ನ ವಿಚಾರಧಾರೆ ಮಂಡಿಸುವಂಥದ್ದಕ್ಕೆಲ್ಲ ಕೇಸರಿ ಪಕ್ಷ ಮತ್ತು ಸಂಘಟನೆಯವರು ವಿರೋಧಿಸುವುದು, ಕಳೆದ ಸಲ ಮೈತ್ರಿ ಸರ್ಕಾರ ಇನ್ಪೋಸಿಸ್‍ ನ ಸುಧಾಮೂರ್ತಿಯನ್ನ ಕರೆಸಿ ಟೀಕೆಗೊಳಗಾಗಿದ್ದರೆ, ಈ ಸಲ  ಬಿಜೆಪಿ ಸರ್ಕಾರ ಬಲಪಂಥೀಯ ಎಸ್.ಎಲ್. ಭೈರಪ್ಪರಂಥವರನ್ನ ಕರೆದು  ಉದ್ಬಾಟನೆ ಮಾಡಿಸಿ ಅವರಾಡಿದ ಮಾತಿನಿಂದ ಅತಿ ತೀರಾನೆ ಮುಜುಗರಕ್ಕೊಳಗಾಗಿದೆ.

ಪ್ರಧಾನಿ ನರೇಂದ್ರ ಮೋದಿ `ಬೇಟಿ ಪಡಾವೋ, ಬೇಟಿ ಬಚಾವೋ' ನಾರಿ ಶಕ್ತಿಗೆ ಮನ್ನಣೆ ಎಂದು ದೇಶದ ಉತ್ತರಭಾಗದಲ್ಲಿ ಹೇಳುತ್ತಿದ್ದರೆ, ಅವರನ್ನ ಕ್ಷಣಕ್ಷಣವೂ ಹೊಗಳುವ ಎಸ್.ಎಲ್. ಭೈರಪ್ಪ `ಮುಟ್ಟಾದ ಹೆಂಗಸು' `ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮುಸ್ಲಿಮ್ ಮಹಿಳೆಯರನ್ನ ಕರೆದೊಯ್ದಿದ್ದು' ಇತ್ಯಾದಿ ವಿಚಾರಗಳನ್ನೆಲ್ಲ ಮಂಡಿಸುತ್ತಲೇ ರಾಜಕಾರಣಿಗಳ ಬಗ್ಗೆಯೂ ಖಂಡಿಸಿ, ಓತಪ್ರೇತವಾಗಿ ಹರಿಸಿದ್ದ ಚಿಂತನಾಲಹರಿ, ಭೈರಪ್ಪ ಹೇಳಿದ್ದೇ ವೇದವಾಕ್ಯವೆನ್ನುವ ಸಂಸದ ಪ್ರತಾಪ ಸಿಂಹನೇ ಸಮಯವಾಯಿತು ಭಾಷಣ ನಿಲ್ಲಿಸಿ ಎಂದು ಉಸುರುವಂತಾಯಿತೆಂದರೆ, ಉಳಿದವರ ಪಾಡೇನಾಗಿರಲ್ಲ?

ಶಬರಿ ಮಲೈಗೆ ಮಹಿಳೆಯರಿಗೂ ಅವಕಾಶ ಎಂದಿರುವ  ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೂ, ಸಂವಿಧಾನದ ಸಮಾನತೆಯ ಹಕ್ಕನ್ನು  ಗಣನೆಗೆ ತೆಗೆದುಕೊಳ್ಳದೆ, ಹೆಣ್ಣು ಮಕ್ಕಳ ಗುಡಿ ಪ್ರವೇಶ, ಮುಟ್ಟಿನ ಬಗ್ಗೆಯೂ ತಾನೇ ದೇವತೆ ಎಂದು ಪ್ರತಿಪಾದಿಸುವ ಚಾಮುಂಡೇಶ್ವರಿ ದೇಗುಲದೆದುರೇ ಮಾತನಾಡಿದ್ದು, ಆ ದೇವತೆಗೆ ಮುಜುಗರ ಮಾಡಿದಂತಾಗಲಿಲ್ಲವೇ ಎಂಬ ಪ್ರಶ್ನೆಗಳೆದ್ದಿವೆ.

ಪ್ರತಾಪ ಸಿಂಹ ಸಂಸದನಾದಾಗಿಂದಲೂ ಭೈರಪ್ಪರಿಗೆ ದಸರಾ ಉದ್ಬಾಟಿಸಲು ಅವಕಾಶ ಕೊಡಿ ಎಂದು ಕೋರುತ್ತಲೇ ಇದ್ದುದು, ಈ ಸಲ ಈಡೇರಿತಾದರೂ, ಅವರ ಭಾಷಣ ಸಂಸದರಿಗೇ ಬೇಸರ ತರಿಸಿದೆ, ಈಗಾಗಲೇ ಮಹಿಷ ದಸರ ವಿಚಾರದಲ್ಲಿ ಇರಲಾರದೆ ಇರುವೆ ಬಿಟ್ಟುಕೊಂಡಂತೆ ಪರದಾಡುತ್ತಿರುವ  ಪ್ರತಾಪಸಿಂಹರ ಪ್ರಕರಣದೊಡನೆ, ಭೈರಪ್ಪ ಭಾಷಣಾಂಶಗಳೂ ಬೆರೆತುಕೊಂಡು ಬರುವ ದಸರಾಗಳು ಸಲೀಸಾಗಿ ಆಗಲ್ಲ, ಕೊನೆಕೊನೆಗೆ ಅಯೋಧ್ಯಾ ವಿವಾದವೋ, ಬಾಬಾಬುಡನ್ ಗಿರಿ ದತ್ತ ಪೀಠ, ಹುಬ್ಬಳ್ಳಿ ಈದ್ಗಾ ಮೈದಾನ, ಹುಣಸೂರಿನ ಹನುಮ ಜಯಂತಿ, ಟಿಪ್ಪೂ ಜಯಂತಿಯಂಥದೋ ಒಂದು ವಿವಾದದ ನೆಲೆಯಾಗಿ ಬಿಡಬಹುದೇನೋ ಎಂಬ ಸಂದೇಹಗಳು ಇವಾಗಿಂದಲೇ ಜನ್ಮವೆತ್ತಿವೆ.