ದೇಶಭಕ್ತಿ ಪ್ರದರ್ಶನಕ್ಕಲ್ಲ, ಅದು ಅಂತರಂಗಕ್ಕೆ

ರಾಷ್ಟ್ರ ರಾಷ್ಟ್ರ ಗೀತೆ ಎಂಬ ಅಭಿಮಾನ ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನೊಬ್ಬ ಭಾರತೀಯನಾಗಿ ಇದ್ದೇ ಇರುತ್ತದೆ. ಅದನ್ನು ಎಲ್ಲರೆದುರು ನನ್ನ ದೇಶ, ನನ್ನ ರಾಷ್ಟ್ರಗೀತೆ ಎಂದು ತೋರ್ಪಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಇದೆ.

ದೇಶಭಕ್ತಿ ಪ್ರದರ್ಶನಕ್ಕಲ್ಲ, ಅದು ಅಂತರಂಗಕ್ಕೆ

ಇತ್ತೀಚಿಗೆ ಪಿವಿಆರ್ ನಲ್ಲಿ ನಡೆದ ಒಂದು ಘಟನೆ ಭಾರೀ ಚರ್ಚೆಯಾಗುತ್ತಿದ್ದು ಪರ ವಿರೋಧಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿವೆ ನಟ ಅರುಣ್ ಗೌಡ ಹಾಗೂ ನಟಿ ಐಶ್ವರ್ಯಾ 23 ರಂದು ಒರಿಯನ್ ಮಾಲ್ ನಲ್ಲಿ 'ಅಸುರನ್' ಸಿನಿಮಾವನ್ನು ನೋಡಲು ಪಿವಿಆರ್ ಗೆ ಹೋಗಿದ್ದಾಗ ಎಂದಿನಂತೆ ಸಿನಿಮಾ ಶುರುವಾಗುವ ಮುಂಚೆ ರಾಷ್ಟ್ರಗೀತೆಯನ್ನು ಹಾಕಲಾಗಿದೆ ಆಗ ಎಲ್ಲರು ಎದ್ದು ನಿಂತು ರಾಷ್ಟ್ರ ಗೀತೆಗೆ ಗೌರವ ಸೂಚಿಸಿದ್ದಾರೆ ಅದರಲ್ಲಿ ಕೆಲವರು ಮಾತ್ರ ರಾಷ್ಟ್ರ ಗೀತೆ ಹಾಕಿದ್ದರು ಸಹ ಎದ್ದು ನಿಂತಿರಲಿಲ್ಲ ಇದರಿಂದ ಅಕ್ರೋಶಗೊಂಡ ನಟ ಮತ್ತು ನಟಿ ಅವರನ್ನು ಎದ್ದು ನಿಲ್ಲಿಸಲು ಪ್ರಯತ್ನಿಸಿದ್ದಾರೆ ಮತ್ತು ಅವರ ನಡುವೆ ಮಾತಿನ ಚಕಮಕಿ ಸಹ ನಡೆದಿದೆ ಆದರೆ ಅವರು ಎದ್ದು ನಿಲ್ಲಲು ಒಪ್ಪದೆ ಇದ್ದ ಕಾರಣ ನಟ ಮತ್ತು ನಟಿ “ನೀವೇನು ಪಾಕಿಸ್ತಾನ ಉಗ್ರರಾ?” ಎಂದು ಪ್ರಶ್ನಿಸಿ ಅವರನ್ನು ಸಿನಿಮಾ ನೋಡಲು ಬಿಡದೇ ಹೊರಗೆ ಕಳಿಸಿರುವ ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ.

ರಾಷ್ಟ್ರ ರಾಷ್ಟ್ರ ಗೀತೆ ಎಂಬ ಅಭಿಮಾನ ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನೊಬ್ಬ ಭಾರತೀಯನಾಗಿ ಇದ್ದೇ ಇರುತ್ತದೆ. ಅದನ್ನು ಎಲ್ಲರೆದುರು ನನ್ನ ದೇಶ, ನನ್ನ ರಾಷ್ಟ್ರಗೀತೆ ಎಂದು ತೋರ್ಪಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಇದೆ. ಅದನ್ನು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ ಮತ್ತು ಇನ್ನೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಕ್ಕೆ ಅಡ್ಡಿ ಪಡಿಸುವ ಹಕ್ಕನ್ನು ಯಾರಿಗೂ ನೀಡಿರುವುದಿಲ್ಲ. 

ಕಳೆದ ವರ್ಷ(2018) ಸುಪ್ರೀಂ ಕೋರ್ಟ್ನಲ್ಲಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಇದ್ದ ಪೀಠವೇ ಚಿತ್ರ ಮಂದಿರಗಳಲ್ಲಿ ರಾಷ್ಟ್ರ ಗೀತೆ ಹಾಕುವುದು ಮತ್ತು ಎದ್ದು ನಿಲ್ಲುವುದು ಕಡ್ಡಾಯವೇನಲ್ಲ ಎಂದು ಆದೇಶ ಹೊರಡಿಸಿತ್ತು. ಆದರೆ ಅದನ್ನು ಅರಿಯದ ಕೆಲ ಅಂಧಾಭಿಮಾನಿಗಳು ಇಂತಹ ಕೃತ್ಯಗಳನ್ನು ಎಸಗುತ್ತಲ್ಲೇ ಇರುತ್ತಾರೆ. ದೇಶ ಎಂದರೆ ಏನು, ಅದರ ಪರಿಕಲ್ಪನೆಗಳೇನು ಎಂಬ ವಿಷಯಕ್ಕೆ ಇನ್ನೂ ಸರಿಯಾದ ಉತ್ತರವೇ ಸಿಕ್ಕಿಲ್ಲ ಆದರೂ ನಾವೆಲ್ಲ ಭಾರತೀಯರು ಎಂಬ ಕಲ್ಪನೆಯಲ್ಲೇ ನಾನೊಬ್ಬ/ಳು ಭಾರತೀಯ ಎಂಬ ಅಚ್ಚನ್ನು ಒತ್ತಿಸಿಕೊಂಡು ಬದುಕುತ್ತಿದ್ದೇವೆ.

ದೇಶಾಭಿಮಾನ ಎಂಬ ಹೆಸರಿನಲ್ಲಿ ಈ ದೇಶದ ಪ್ರಜೆಗಳನ್ನೇ ಶೋಷಿಸುತ್ತಿರುವ ಒಂದು ದೊಡ್ಡ ಸಮೂಹವೇ ಇದೆ. ಆದರೆ ಅದು ‘ನ್ಯಾಯದೇವತೆಗೆ ಕಟ್ಟಿರುವ ಕಪ್ಪು ಬಟ್ಟೆಯಂತೆ’ ಇದೆಯೇ ಹೊರತು ಅದು ನೈಜವಾಗಿ ಎಲ್ಲರ ಕಣ್ಣಿಗೂ ಕಾಣಿಸುವುದಿಲ್ಲ. 

ರಾಷ್ಟ್ರಗೀತೆಗೆ, ರಾಷ್ಟ್ರ ಧ್ವಜಕ್ಕೆ, ರಾಷ್ಟ್ರಕ್ಕೆ ಗೌರವ ತೋರಿಸದಿದ್ದರೆ ಅಂತವರು ಈ ದೇಶದಲ್ಲಿ ಆ ಕ್ಷಣವೇ ದೇಶದ್ರೋಹಿಗಳಾಗಿ ಬಿಡುತ್ತಾರೆ. ಅವರು ಈ ದೇಶದ ಉಗ್ರರು ಎಂದೆ ಪರಿಗಣಿಸಿ ಅವರನ್ನು ಮಾನಸಿಕವಾಗಿ ಹಿಂಸಿಸಲಾಗುತ್ತದೆ ಮತ್ತು ರಾಷ್ಟ್ರ ಗೀತೆ ಬಂದಾಗ ಅದಕ್ಕೆ ಎದ್ದು ನಿಂತು ಗೌರವ ಸಲ್ಲಿಸಿದರೆ ಮಾತ್ರ ದೇಶಾಭಿಮಾನ ಎಂಬ ವ್ಯಾಖ್ಯಾನ ನೀಡುತ್ತಾರೆ.

ಉದಾ : ಕನ್ನಡದಲ್ಲಿ ಮೂಡಿ ಬಂದ ಅತಿ ಹೆಚ್ಚು ಗಳಿಕೆ ಕಂಡ ಯಶ್ ಅಭಿನಯದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸಿನಿಮಾದಲ್ಲೂ ಸಹ ನಾಯಕ ಫೈಟಿಂಗ್ ಮಾಡುವ ವೇಳೆ ರಾಷ್ಟ್ರ ಗೀತೆ ಬಂದಾಗ ತಕ್ಷಣವೇ ಅವನು ಗಂಭೀರವಾಗಿ ನಿಂತು ಗೌರವ ನೀಡುವ ದೃಶ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದರಿಂದ ಎಷ್ಟೇ ಕಠಿಣ ಪರಿಸ್ಥಿತಿಯಲ್ಲಿ ಇದ್ದರೂ ಸಹ ದೇಶಕ್ಕೆ ಗೌರವ ಸಲ್ಲಿಸಬೇಕು ಎಂಬ ಸಂದೇಶವಿದೆ. ಅದು ನೋಡುಗರಿಗೆ ಉತ್ತಮ ಸಂದೇಶವೇ ಆಗಿರಬಹುದು ಬದಲಾಗಿ ಅದು ಹೇರಿಕೆಯೂ ಆಗಿರಬಹುದು ದೇಶ, ದೇಶಾಭಿಮಾನ ಎನ್ನುವುದು ಅವರವರ ವೈಯಕ್ತಿಕ ವಿಷಯವಾಗಿರುತ್ತದೆ ಅದನ್ನು ತೋರ್ಪಡಿಕೊಳ್ಳಬೇಕೆಂಬ ಅವಶ್ಯಕತೆ ಇರುವುದಿಲ್ಲ ಮತ್ತು ಅದನ್ನು ಪ್ರಶ್ನಿಸುವ ಅಧಿಕಾರ ಸಹ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಇಲ್ಲ ಹಾಗೇ ಚಿತ್ರಮಂದಿರದಲ್ಲಿ ನಡೆದ ಈ ಘಟನೆಯಲ್ಲಿ ಕೆಲವರು ಎದ್ದು ನಿಂತು ಗೌರವ ನೀಡದಿದ್ದಕ್ಕೆ ಅವರನ್ನು ದೇಶದ್ರೋಹಿಗಳು ಎಂದು  ಸಿನಿಮಾ ನೋಡಲು ಬಿಡದೆ ಹೊರಗೆ ಕಳಿಸಿದ ನಟ ಅರುಣ್ ಗೌಡ ಮತ್ತು ನಟಿ ಐಶ್ವರ್ಯಾ  ಮಾಡಿದ್ದು ಅಪರಾಧ ಮತ್ತು ಅಮಾನವೀಯ ಎನಿಸುತ್ತದೆ.