ಹುಚ್ಚರ ಲೋಕದ ಚಿದಂಬರ ರಹಸ್ಯಗಳು !

ಹುಚ್ಚರ ಲೋಕದ ಚಿದಂಬರ ರಹಸ್ಯಗಳನ್ನು ಭೇದಿಸುವುದು ಹೇಗೆ? ಯಾವುದೋ ಕಾರಣಕ್ಕಾಗಿ ಹುಚ್ಚು ಹಿಡಿಸಿಕೊಂಡು ಬೀದಿಗೆ ಬಿದ್ದಿರುವ ಅವರ ಪರ ಮಾನವೀಯ ಕಾಳಜಿ ತೋರಿಸಬೇಕಿದೆ. ಆ ಮನುಷ್ಯತ್ವ ತೋರಿಸಿದರೆ ಆ ಹುಚ್ಚರು ಕೂಡ ಮತ್ತೆ ಮನುಷ್ಯರ ಸಹಜ ಲೋಕಕ್ಕೆ ಮರಳಬಲ್ಲರು.

ಹುಚ್ಚರ ಲೋಕದ ಚಿದಂಬರ ರಹಸ್ಯಗಳು !

ಊರೆಂದ ಮೇಲೆ ಹುಚ್ಚರೂ ಇರ್ತಾರೆ. ಆ ಹುಚ್ಚರು ಅದೇ ಊರಿನ `ಮಾನಸಿಕ/ದೈಹಿಕ ಪ್ರತೀಕ’ ಎಂಬಂತೆ ಓಡಾಡಿಕೊಂಡಿರುತ್ತಾರೆ. ಅಳಿಯುವ- ಉಳಿಯುವ ಯಾವುದೇ ಭಯವಿಲ್ಲದೇ, ತನ್ನ ಜನರ ಮಧ್ಯದಿಂದಲೇ ಬಂಡಾಯವೆದ್ದಂತೆ ಕಾಣಬರುವ ಈ ಹುಚ್ಚರು ನಿಜವಾಗಲೂ ಹುಚ್ಚರಾ? ಅಂಥ ಹುಚ್ಚುತನ ಅವರಿಗೇಕೆ ಅಂಟಿಕೊಂಡಿತು? ಯಾವ ಒತ್ತಡಕ್ಕೆ ಬಲಿಯಾಗಿ `ಹುಚ್ಚ’ ಪಟ್ಟಕ್ಕೆ ತಲುಪಿದರು? ಜ್ಞಾಪಕ ಚಿತ್ರಶಾಲೆಯನ್ನು ಹೊಕ್ಕುವ ಮುನ್ನ ಈ ಒಂದು ಟಿಪ್ಪಣಿ, ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡವು.

ಅವನು ಪೇಟ್ಲು ಮಾಮು. ಮಕ್ಕಳೆಲ್ಲ ಪೇಟ್ಲು ಮಾಮು ಅಂತ ಕರೀತಿದ್ರೆ, ದೊಡ್ಡವರು ಬಿಲ್ಲಾಲಿ ಅಂತ ಕರೀತಿದ್ರು. ಬಿಲ್ಲಾಲಿ ಅನ್ನೋದು ಆ ದಢೂತಿ ಮನುಷ್ಯನ ಹೆಸರಿರಬಹುದು. ಟಿವಿಯಲ್ಲಿ ರಾಮಾಯಣ ಬರುತ್ತಿದ್ದ ಕಾಲವದು. ಈ ಪೇಟ್ಲು

ಮಾಮು ಥೇಟು ಘಟೋದ್ಗಜನಂತೆಯೇ ನನಗೆ ಕಾಣುತ್ತಿದ್ದ; ಆ ಪರಿಯ ಆಕಾಶ ಮುಟ್ಟೋ ರೀತಿಯ ದಢೂತಿ ಅವನು. ಹೊಟ್ಟೆಯೂ ಹಾಗೇ ದಪ್ಪ ದಪ್ಪ...

ಟಿವಿ, ಮೊಬೈಲುಗಳ ಹ್ಯಾಂಗ್ ಓವರ್ ಇಲ್ಲದ ಸಂದರ್ಭದಲ್ಲಿ ನಮ್ಮನ್ನೆಲ್ಲ ರಂಜಿಸಲೆಂದೇ ಹುಟ್ಟಿಕೊಂಡಂತಿದ್ದ ಪೇಟ್ಲು

ಮಾಮು. ತಲೆಗೊಂದು ಹ್ಯಾಟು ಹಾಕಿಕೊಂಡು, ಕಾಲಿಗೆ ಹರಕಾಪರಕಾ ಶೂ ಧರಿಸಿಕೊಂಡು, ಹೆಗಲ ಮೇಲೆ ಬಟ್ಟೆಗಳ ರಾಶಿ ಎಳೆದುಕೊಂಡು, ಉದುರುದುರೋ ಬೆಲ್‍ಬಾಟಂ ಪ್ಯಾಂಟನ್ನು ಎರಡೂ ಕೈಗಳಿಂದ ಆಗಾಗ ಏರಿಸಿಕೊಂಡು ನಮ್ಮ ಮುಂದೆ ಪ್ರತ್ಯಕ್ಷನಾಗುತ್ತಿದ್ದ ಪೇಟ್ಲು ಮಾಮು. ಕಟಿಂಗ್ ಶಾಪಿನಲ್ಲೋ ಹೋಟೆಲ್‍ನಲ್ಲೋ ಇರುತ್ತಿದ್ದ ರೇಡಿಯೋ ಆಗಾಗ `ಏ ಜೂತಾ ಹೈ ಜಪಾನಿ...’ ಹಾಡು ಹಾಡುತ್ತಿತ್ತು. ಆ ಹಾಡು ಕೇಳಿಬಿಟ್ಟನೆಂದರೆ ಪೇಟ್ಲು ಮಾಮುಗೆ ಎಲ್ಲಿಲ್ಲದ ಸಂತೋಷ; ಇದ್ದಬದ್ದ ಕುಣಿಯೋ ಟ್ಯಾಲೆಂಟನ್ನೆಲ್ಲ ಬಳಸಿ ಡ್ಯಾನ್ಸ್ ಶುರುಹಚ್ಚಿಕೊಳ್ಳುತ್ತಿದ್ದ. ಬೇರೆ ಹಾಡುಗಳ ಬಗ್ಗೆ ಆ ಥರದ ಜೋಶ್ ತೋರಿಸುತ್ತಿರಲಿಲ್ಲ ಅವನು. `ಇದಕ್ಕೂ ಕುಣಿ... ಇದಕ್ಕೂ ಕುಣಿ’ ಅಂತ ಸುತ್ತ ಸೇರುತ್ತಿದ್ದ ಜನರ ಬೇಡಿಕೆಗಳಿಗೆ ಪೇಟ್ಲು ಮಾಮು ಕಿಮ್ಮತ್ತು ಕೊಟ್ಟಿದ್ದು ನಾನು ನೋಡಲಿಲ್ಲ.

ಯಾವಾಗ ಏಳುತ್ತಿದ್ದನೋ? ಯಾವಾಗ ಮಲಗುತ್ತಿದ್ದನೋ? ಕಂಡವರಿರಲಿಲ್ಲ. ಎಲ್ಲಿ ಸಾಧ್ಯವೋ ಅಲ್ಲೆಲ್ಲ ಮಲಗಿರುತ್ತಿದ್ದ. ಮುಖದಲ್ಲಿ ಕುರುಚಲು ಗಡ್ಡ, ಸದಾ ನಗುತ್ತಿದ್ದವನ ಹಲ್ಲುಗಳು ತುಕ್ಕು ಹಿಡಿಸಿಕೊಂಡಂತಿದ್ದವು. ಆದರೂ ಮಕ್ಕಳಿಗೆ ಪೇಟ್ಲು ಮಾಮು ಪ್ರಿಯ ವ್ಯಕ್ತಿಯಾಗಿದ್ದ. ಮಕ್ಕಳು ಇವನ ಬೆನ್ನೇರಿ ಕೂಸುಮರಿ ಆಡುತ್ತಿದ್ದವು. ಕೆಲವರು ರೇಗಿಸುತ್ತಿದ್ದರು. ಈಗವನನ್ನು ನೆನೆಸಿಕೊಂಡರೆ ಕಿಂದರಜೋಗಿಯೇ ಅವನೇನೋ ಅನ್ನೋ ಫೀಲಿಂಗು ಉದ್ಭವಿಸುತ್ತದೆ. ನಾನೂ ಅವನ ಬೆನ್ನೇರಿ ಅದೆಷ್ಟು ಸಲ ಕೂಸುಮರಿ ಆಟವಾಡಿದ್ದೀನೋ?

`ಪೇಟ್ಲು ಮಾಮು ಬಂದ... ಪೇಟ್ಲು ಮಾಮು ಬಂದ’ ಅಂತ ಅವನು ಬಂದಾಗಲೆಲ್ಲ ಮಕ್ಕಳೆಲ್ಲ ನಾವು ಥೀಮ್‍ಸಾಂಗ್ ಹಾಡುತ್ತಿದ್ದೆವು. ಅವನು ಹಲ್ಕಿರಿಯುತ್ತಾ ಚಪ್ಪಾಳೆ ತಟ್ಟುತ್ತಿದ್ದ. ಒಂದಿಬ್ಬರು ತರಲೆಗಳು ಮಾತ್ರ ಪೇಟ್ಲು ಮಾಮುಗೆ ಗೋಳು ಹೊಯ್ದುಕೊಳ್ಳುತ್ತಿದ್ದವು. ಅವರು ಕೆಟ್ಟದಾಗಿ ಕೂಗಿದರೆ ಇವನೂ ಕೂಗುತ್ತಿದ್ದ. ಅವರನ್ನು ಹಿಡಿಯಲೆಂದೇ ಓಡುತ್ತಿದ್ದ. ಹಾಗೆ ಓಡುವಾಗ ಪೇಟ್ಲು ಮಾಮುನ ಪ್ಯಾಂಟು ಉದುರುದುರಿ ಬೀಳುತ್ತಿತ್ತು. ಅದೇ ಒಂದು ಮಜಾ ಆಗ ಬಹಳ ಜನಕ್ಕೆ.

ಮಕ್ಕಳ ಜೊತೆ ಹೆಚ್ಚು ಆಡುತ್ತಾನಲ್ಲ ಎಂಬ ಕಾರಣಕ್ಕೆ ಕೆಲವರು ಒಮ್ಮೆ ಪೇಟ್ಲು ಮಾಮುನನ್ನು ಬಲವಂತವಾಗಿ ಕೂರಿಸಿಕೊಂಡಿದ್ದರು. ಕೃಷ್ಣಪ್ಪನ ಹೋಟೆಲ್ ಮುಂದೇನೇ ಕಲ್ಲುಬೆಂಚಿನ ಮೇಲೆ ಪೇಟ್ಲು ಮಾಮು ವಿರಾಜಮಾನನಾಗಿದ್ದ. ಕೆಲವರು ಕತ್ತರಿ ತಂದು ಸಮವಾಗಿ ಕೂದಲು ಕತ್ತರಿಸಿದರು. ಬಟ್ಟೆ ತೆಗೆಸಿ ಸಾಬೂನು ಹಚ್ಚಿ ಅವನ ಇಡೀ ದೇಹ ತೊಳೆದರು. ಅದೆಷ್ಟೋ ವರ್ಷ ಸ್ನಾನ ಕಾಣದಿದ್ದ ದೇಹ, ಈಗ ಸ್ವಚ್ಛವಾಗಿತ್ತು. ಅವನ ಸೈಜಿನ ಪ್ಯಾಂಟು ಹುಡುಕಿ ತಂದು, ಅದಕ್ಕೆ ಹುರಿ ಬಿಗಿದು ಅವನ ಸೊಂಟದ ಮೇಲೆ ಕೂರಿಸಿದರು. ಶರ್ಟ್ ತೊಡಿಸಿ ಮತ್ತೆ ಮೈದಾನಕ್ಕೆ ಬಿಟ್ಟರು. ಈಗವನು ಥೇಟು ಶೋಲೆಯ ಗಬ್ಬರ್‍ಸಿಂಗ್ ಪಾತ್ರಧಾರಿ ಅಮ್ಜದ್ ಖಾನೇ ಆಗಿಬಿಟ್ಟಿದ್ದ!

ಈ ಪೇಟ್ಲು ಮಾಮು ಹೀಗೇಕಾದ? ಹುಚ್ಚು ಹಿಡಿಸಿಕೊಂಡ ಇವನಿಗೆ ಚಿಕಿತ್ಸೆ ಕೊಡಿಸುವ ಅಪ್ಪ-ಅಮ್ಮ ಇರಲಿಲ್ಲವೇ? ಯಾರ ಮಗ? ಇದೇ ಊರಿನವನಾ?- ಈ ಯಾವುದೇ ಪ್ರಶ್ನೆಗಳಿಗೆ ಉತ್ತರವೇ ಇರಲಿಲ್ಲವೋ... ಉತ್ತರವಿದ್ದರೂ ನನಗೆ ದಕ್ಕಲಿಲ್ಲವೋ... ನಾವು ಬೆಳೆದಂತೆಲ್ಲಾ ಪೇಟ್ಲು ಮಾಮು ಕಣ್ಮರೆಯಾಗುತ್ತಾ ಹೋದ. ಅವನನ್ನು ನೋಡಿಯೇ ಅದೆಷ್ಟೋ ವರ್ಷಗಳಾಗಿ ಹೋದವು. ನಮ್ಮ ಬಾಲ್ಯವನ್ನು ಆನಂದಗೊಳಿಸಿದ ಪೇಟ್ಲು ಮಾಮು ಈಗ ಬದುಕಿದ್ದಾನಾ?

ಶಿವಮೊಗ್ಗ ಎಂದ ಮೇಲೆ ಮೈಲಾರಿ ಅಲ್ಲಿ ಕಾಣಸಿಗುತ್ತಾನೆ. ಕಳೆದ ಮೂರ್ನಾಲ್ಕು ದಶಕಗಳಿಂದ ಮೈಲಾರಿ ತನ್ನ `ಹವಾ’ ಬಿಟ್ಟುಕೊಟ್ಟಿಲ್ಲ! ನೇಪಾಳಿ ಯುವಕನಾಗಿ ನಗರಕ್ಕೆ ಎಂಟ್ರಿ ಪಡೆದಾಗ ಈ ಮೈಲಾರಿಯ ಬಗ್ಗೆ ನಾನಾ ಕಥೆಗಳು ಉದ್ಭವವಾಗಿದ್ದವು. ಇವನು ಶಿವಮೊಗ್ಗದಲ್ಲಿ ಕಾಣಿಸಿಕೊಳ್ಳುವುದಕ್ಕೂ ಸಾಂಗ್ಲಿಯಾನ ಎಸ್.ಪಿ.ಆಗಿ ಬರುವುದಕ್ಕೂ ಒಂದೇ ಆಗಿ ಹೋಗಿತ್ತು. ಪ್ರತಿದಿನ ಹೊಸ ಹೊಸ ಕಥೆಗಳು. ಸಾಂಗ್ಲಿಯಾನ ವೇಷ ಮರೆಸ್ಕೊಂಡು ಕಳ್ಳರನ್ನು ಬೇಟೆಯಾಡ್ತಾರೆ, ರೌಡಿಗಳ ಅಂಡರ್ ವಲ್ರ್ಡ್ ಗೆ ಬೇರೆ ಬೇರೆ ವೇಷ ಹಾಕ್ಕೊಂಡು ಹೋಗಿ ಸದೆ ಬಡೀತಿದಾರೆ ಅಂತೆಲ್ಲ ಹವಾ ಎದ್ದಿತ್ತು. ಸಾಂಗ್ಲಿಯಾನರ ಮಾರುವೇಷವೇ `ಮೈಲಾರಿ’ ಅಂತಲೂ ಆಗಿ, ಈ ಹುಚ್ಚ ಮೈಲಾರಿ ಜನರ ನಡುವೆ ಬೇರೆಯದೇ ರೀತಿಯಲ್ಲಿ ಪ್ರಸಿದ್ಧನಾಗಿ ಹೋಗಿದ್ದ. ಈ ಮೈಲಾರಿ ಹಗಲಿಗಿಂತ ಹೆಚ್ಚು ‘ಜನರ ಕಣ್ಣಿಗೆ’ ಬೀಳುತ್ತಿದ್ದುದು ರಾತ್ರಿಯ ಹೊತ್ತಲ್ಲಿ!

ಹಳೇಪಳೇ ಬಟ್ಟೆಗಳಿರುತ್ತಿದ್ದ ಪೋಟ್ಲಿ ಕಟ್ಟಿಕೊಂಡು, ಆ ಪೋಟ್ಲಿಯನ್ನು ಉದ್ದನೆ ಕೋಲಿಗೆ ಸಿಗಿಸಿಕೊಂಡು ಊರ ತುಂಬಾ ಪಾದಯಾತ್ರೆ ಮಾಡುತ್ತಿದ್ದ ಮೈಲಾರಿ. ಒಂದಿಷ್ಟು ದಿನ ಈ ಮೈಲಾರಿಯನ್ನು ಜನ ಡೆಲ್ಲಿಯಿಂದ ಬಂದ ಸಿಐಡಿ ಅಧಿಕಾರಿ ಅಂತಾನೂ ಅಂದುಕೊಂಡಿದ್ರು. ಜುಬ್ಬಾ, ಜೀನ್ಸ್ ಪ್ಯಾಂಟ್ ಹಾಕಿಕೊಂಡು, ಜುಬ್ಬದ ಮೇಲೆ ಕೋಟು ಧರಿಸಿಕೊಂಡು, ಕೊರಳಲ್ಲಿ ಪೀಪಿ ಕಟ್ಟಿಕೊಂಡು ರಪರಪನೆ ಬೀಸುಕಾಲು ಹಾಕಿಕೊಂಡು ಪೊಲೀಸ್ ಖದರಿನಲ್ಲೇ ಓಡಾಡುತ್ತಿದ್ದ ಮೈಲಾರಿಗೆ ಈಗ ವಯಸ್ಸಾಗಿದೆ. ಆದರೆ, ಈಗಲೂ ಅದೇ ಹುಮ್ಮಸ್ಸಿನಿಂದ ಓಡಾಡಿಕೊಂಡಿದ್ದಾನೆ. ಹೊಟ್ಟೆ ಹಸಿದಾಗ ಮಾತ್ರ ಕೈಚಾಚಿ ದುಡ್ಡು ಕೇಳ್ತಾನೆ. ಹತ್ತು ರೂಪಾಯಿಯೇ ಕೊಡಬೇಕು; ಅದಕ್ಕಿಂತ ಕಡಿಮೇನೂ ಮುಟ್ಟಲ್ಲ- ಜಾಸ್ತೀನೂ ಮುಟ್ಟಲ್ಲ. ಅವನ ಪ್ರಕಾರ ಹತ್ತು ರೂಪಾಯಿ ಮಾತ್ರ ದುಡ್ಡು. ಆ ಹತ್ತು ರೂಪಾಯಿಗಳಿಂದಷ್ಟೇ ಅನ್ನ ಕೊಳ್ಳಲು ಸಾಧ್ಯ!

ಮೈಲಾರಿಯ ಮುಖದ ಮೂಲ ಹಿಡಿದು ಹೊರಟರೆ ಪಕ್ಕಾ ನೇಪಾಳಿ. ಆದರೆ, ನನ್ನೂರಿಗೆ ಯಾಕೆ ಬಂದ? ಹೇಗೆ ಬಂದ? ಬಂದವನು ಇಲ್ಲಿಯೇ ನೆಲೆಸಿಬಿಟ್ಟನಲ್ಲ! ಅವನನ್ನು ಎದುರಾಬದುರಾ ಕೂರಿಸಿಕೊಂಡು ಅದೆಷ್ಟೇ ಕೆದಕಿ ಕೆದಕಿ ಕೇಳಿದರೂ ಊಹುಂ... ಉತ್ತರ ಸಿಕ್ಕೋದೇ ಇಲ್ಲ. ಅಷ್ಟೊಂದು ನಿಗೂಢ ಈ ಮೈಲಾರಿ!!

ಈಗ ನಮ್ಮೂರಿನ ಲೇಟೆಸ್ಟ್ ಕುತೂಹಲಕಾರಿ ಮನುಷ್ಯ ಮಂಜುನಾಥ ಆಚಾರಿ @ ಮಂಜ್ಯಾ. ಜಿಲ್ಲಾ ಕೋರ್ಟಿನಲ್ಲಿ ಡ್ಯೂಟಿ ಮಾಡ್ತಿದಾನೆ. ಜಿಲ್ಲಾ ಪಂಚಾಯತ್ ಕಛೇರಿ, ಡಿಸಿ ಆಫೀಸು, ಬಿಜೆಪಿ ಆಫೀಸು, ಕುವೆಂಪು ರೋಡು, ಗೋಪಿ ಸರ್ಕಲ್ಲು, ದುರ್ಗಿಗುಡಿ ಎಂದೆಲ್ಲಾ ಟ್ರಾಫಿಕ್ ಪೊಲೀಸರ ಥರಾ ಡ್ಯೂಟಿ ಮಾಡ್ಕೊಂಡು ಬಹಳ ಜನರ ಗಳಸ್ಯ ಕಂಠಸ್ಯ ಆಗಿದ್ದ ಮಂಜ್ಯಾ ಈಗ ಡ್ಯೂಟಿ ಬದಲಾಯಿಸಿದ್ದಾನೆ. ಟ್ರಾಫಿಕ್ ಡ್ಯೂಟಿ ಬಿಟ್ಟು ಕೋರ್ಟ್ ಕಾಯುವ ಸೆಕ್ಯೂರಿಟಿ ಮ್ಯಾನ್ ಆಗಿದ್ದಾನೆ. ಬರುವ- ಹೋಗುವ ವಕೀಲರಿಗೆ ಸೆಲ್ಯೂಟ್ ಹೊಡೀತಾನೆ. `ತನ್ನ ಬಳಿ ಕೊಲೆ ಕೇಸೊಂದಿದೆ. ಪತ್ರಕರ್ತ ಮುದ್ದುಗೆ ಒಳಗೆ ಹಾಕಿಸ್ಬೇಕು. ಲಂಚ ತಿಂದು ಮುಚ್ಚಾಕಿದಾರೆ’ ಅಂತೆಲ್ಲ ವಕೀಲರ ಕಿವಿ ಹತ್ತಿರ ಪುಸುಪುಸು ಮಾತಾಡಿ ವಕೀಲರ ಆತಂಕದ ದುನಿಯಾದಲ್ಲಿ ಸ್ವಲ್ಪ ರಿಲೀಫ್ ಮೂಡಿಸುತ್ತಿರುತ್ತಾನೆ.

ಬೊಮ್ಮನಕಟ್ಟೆಯಲ್ಲಿ ಮನೆ ಹೊಂದಿರೋ ಮಂಜ್ಯಾ ಒಂದಿಷ್ಟು ವರ್ಷಗಳ ಹಿಂದಿನವರೆಗೆ ಗುಡ್ ಕಾಮನ್ ಮ್ಯಾನ್ ಆಗಿಯೇ ಇದ್ದ. ಮರದ ಕೆಲಸ ಮಾಡಿಕೊಂಡಿದ್ದ. ಯಾವಾಗ ಹೆಂಡತಿ ಕೈಕೊಟ್ಟು ಸಂಸಾರ ಬದಲಾಯಿಸಿಕೊಂಡಳೋ ಆಗಿಂದ ಮಂಜ್ಯಾನ ತಲೆಗೆ ಟೆನ್ಷನ್ ನುಗ್ಗಿ ಹೀಗಾದ ಅನ್ನೋರಿದಾರೆ. ಕೈಯಲ್ಲಿ ಕೋಲು, ಪೇಪರುಗಳ ರಾಶಿ ತುಂಬಿಕೊಂಡ ಬ್ಯಾಗು ಇವನ ಆಸ್ತಿ. ಕೈಯಲ್ಲೊಂದು ಪೀಪಿ. ಯಾರಾದರೂ ಸಂಚಾರಿ ನಿಯಮ ಪಾಲಿಸುತ್ತಿಲ್ಲ ಅಂತ ಕಣ್ಣಿಗೆ ಬಿದ್ದುಬಿಟ್ಟರೆ ಸಾಕು- ಅಲ್ಲಿ ಪೀಪಿ ಊದುತ್ತಾ ಮಂಜ್ಯಾ ಹಾಜರ್. ತಟತಟನೆ ಪೆನ್ನು ಪೇಪರು ತೆಗೆದುಕೊಂಡು ಆ ವಹಿಕಲ್ ನಂಬರ್ ಬರೆದುಕೊಂಡೇ ಬಿಡುತ್ತಾನೆ. `ತಡೀ ನಿಂಗಿದೆ, ರವಿ ಚನ್ನಣ್ಣ ಬರ್ತಾರೆ, ಒದೀತಾರೆ... ಬುದ್ದಿ ಬರುಸ್ತಾರೆ...’ ಅಂತೆಲ್ಲ ಮಂತ್ರ ಜಪಿಸಿ ಮುಂದಿನ ಟ್ರಾಫಿಕ್ ಬೇಟೆಗೆ ಸಿದ್ಧನಾಗಿಬಿಡುತ್ತಿದ್ದ. ಅವನ ಬ್ಯಾಗಿನಲ್ಲಿ ಇಂಥ ನೂರಾರು ವಾಹನಗಳ ನಂಬರ್‍ಗಳಿವೆ!

ರಾಶಿ ರಾಶಿ ಪತ್ರಿಕೆಗಳನ್ನು ತುಂಬಿಕೊಂಡಿರೋ ಬ್ಯಾಗಿನಲ್ಲಿ ಮಂಜ್ಯಾನ ಮತ್ತದ್ಯಾವ ರಹಸ್ಯ ಅಡಗಿದೆಯೋ? ರವಿ ಡಿ.ಚನ್ನಣ್ಣನವರ್ ಅಂದರೆ ಇವನಿಗೆ ಬಹಳ ಅಭಿಮಾನವೆಂದು ಕಾಣುತ್ತೆ. ಎಲ್ಲದಕ್ಕೂ ಅವರದೇ ಉದಾಹರಣೆ ಕೊಡುತ್ತಿರುತ್ತಾನೆ. ಪೊಲೀಸರಂತೆಯೇ ವರ್ತಿಸುವ ಮಂಜ್ಯಾ, ತಾನು ಪೊಲೀಸ್ ಇಲಾಖೆಗೆ ಸೇರುವ ಕನಸು ಕಂಡಿದ್ದನಾ? ಸುಪ್ತವಾಗಿದ್ದ ಅವನ ಈ ಆಸೆ ಹುಚ್ಚು ಹಿಡಿದ ಮೇಲೆ ಹೊರಕ್ಕೆ ಇಣುಕಿತಾ? ಈಗ ಜಿಲ್ಲಾ ಕೋರ್ಟಲ್ಲಿ ಒಂದೆರಡು ಬಾರಿ ಸುತ್ತಾಡಿದ ಮಂಜ್ಯನಿಗೆ ಅಲ್ಲಿನ ವಕೀಲರು ಮಾನವೀಯತೆ ತೋರಿಸಿ ಊಟ, ತಿಂಡಿಗೆ ವ್ಯವಸ್ಥೆ ಮಾಡಿದ್ದಾರೆ. ಅವನ ಆಸೆಯಂತೆ ಮಿಲಿಟರಿ ಡ್ರೆಸ್ ಕೊಡಿಸಿ ವಕೀಲರ ಭವನ ಕಾಯಲಿಟ್ಟುಕೊಂಡಿದ್ದಾರೆ. 

ಇದೇ ನಮ್ಮೂರಲ್ಲಿ ಮತ್ತೊಬ್ಬ ಹುಚ್ಚನಿದ್ದ. ‘ಅಂಗ್ರೇಝೀ ಕ್ರಾಕ್’ ಅಂತ ಕರೆಯೋರು ಅವನನ್ನ. ಇಂಗ್ಲೀಷನ್ನು ಪಟಪಟನೇ ಮಾತಾಡ್ತಿದ್ದ ಆ ಹುಚ್ಚ ನಮ್ಮೂರಿನ ಜನರಂತಿರಲಿಲ್ಲ; ಇಂಗ್ಲೇಂಡಿನಿಂದ ಈಗತಾನೇ ನಮ್ಮೂರಿಗೆ ಬಂದವನಂತೆ ಕಾಣುತ್ತಿದ್ದ. ಬೆಳ್‍ಬೆಳ್ಳಗಿದ್ದ. ತನ್ನ ಸ್ಟ್ಯಾಂಡರ್ಡಿನ ಜನ ಕಂಡರೆ ಮಾತ್ರ ರಪ್ಪನೆ ಎದ್ದು ನಿಂತು ಮಿಲಿಟರಿ ಸ್ಟೈಲಿನಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದ. ಹಾಗೆ ಸೆಲ್ಯೂಟ್ ಹೊಡೆದವನೇ ‘ಗಿವ್ ಮಿ ಯೆ ಟೂ ರುಪೀಸ್ ಪ್ಲೀಸ್’ ಅಂದುಬಿಡುತ್ತಿದ್ದ. ಅವನ ಆ ಸೆಲ್ಯೂಟ್‍ಗೆ ದಂಗಾಗುತ್ತಿದ್ದ ಜನ ಕೇಳಿದಷ್ಟು ಹಣ ಕೊಡೋರು... ಆ ಹಣದಲ್ಲಿ ಅವನು ಗೋಪಿ ಸರ್ಕಲ್ಲಿನ ಅಂಗಡಿಯೊಂದರಿಂದ ಇಂಗ್ಲೀಷ್ ಪತ್ರಿಕೆ ಖರೀದಿಸುತ್ತಿದ್ದ! ಆ ಪತ್ರಿಕೆಯನ್ನು ತಲೆಯಿಂದ ಬುಡದವರೆಗೂ ಓದುತ್ತಿದ್ದ!!

ಸಾಕಷ್ಟು ಇಂಗ್ಲೀಷ್ ಓದಿಕೊಂಡಿದ್ದ ಅವನಿಗೆ ಅದೇನು ಹೆಸರಿತ್ತೋ... ಅವನಿಗೆ ನಮ್ಮ ಜನ ಮಾತ್ರ ‘ಅಂಗ್ರೇಝಿ ಕ್ರಾಕ್( ಇಂಗ್ಲೀಷ್ ಹುಚ್ಚ)’ ಅಂತಲೇ ಕರೆಯುತ್ತಿದ್ದರು. ಅವನು ಅದೆಲ್ಲಿಂದ ಇಲ್ಲಿ ಉದುರಿದ್ದನೋ... ನೋಡಲು ಸುಂದರವಾಗಿದ್ದ. ನೆಲದ ಮೇಲೆ ಸಿಕ್ಕ ಯಾವುದೇ ಇಂಗ್ಲೀಷ್ ಪತ್ರಿಕೆಯ ತುಂಡನ್ನು ಬಿಡದೇ ಆಯ್ದುಕೊಳ್ಳುತ್ತಿದ್ದ. ತನ್ನಷ್ಟಕ್ಕೆ ತಾನೇ ಇಂಗ್ಲೀಷಲ್ಲಿ ಮಾತಾಡುತ್ತಾ, ಯಾರಿಗಾದರೂ ಬೈಯುವುದಿದ್ದರೆ ಇಂಗ್ಲೀಷಲ್ಲೇ ಬೈಯುತ್ತಾ ಇಡೀ ಗೋಪಿ ಸರ್ಕಲ್ಲಿನ ಆಕರ್ಷಣೆಯಾಗಿದ್ದ. ಅದೊಂದು ದಿನ ಐಷಾರಾಮಿ ಕಾರಲ್ಲಿ ಬಂದಿಳಿದ ಇಬ್ಬರು ಈ ಇಂಗ್ಲೀಷ್ ಹುಚ್ಚನನ್ನು ಕರೆದೊಯ್ದರಂತೆ. ಹಾಗೆ ಹೋಗುವಾಗ ಸರ್ಕಲ್ಲಿನಲ್ಲಿದ್ದ ಜನಕ್ಕೆ ಕೈ ಮುಗಿದು ಹೋದರಂತೆ.  

ಹುಚ್ಚರ ಲೋಕದ ಇಂತಹ ಚಿದಂಬರ ರಹಸ್ಯಗಳನ್ನು ಭೇದಿಸುವುದು ಹೇಗೆ? ಯಾವುದೋ ಕಾರಣಕ್ಕಾಗಿ ಹುಚ್ಚು ಹಿಡಿಸಿಕೊಂಡು ಬೀದಿಗೆ ಬಿದ್ದಿರುವ ಅವರ ಪರ ಮಾನವೀಯ ಕಾಳಜಿ ತೋರಿಸಬೇಕಿದೆ. ಆ ಮನುಷ್ಯತ್ವ ತೋರಿಸಿದರೆ ಆ ಹುಚ್ಚರು ಕೂಡ ಮತ್ತೆ ಮನುಷ್ಯರ ಸಹಜ ಲೋಕಕ್ಕೆ ಮರಳಬಲ್ಲರು.