ಗಬ್ಬೆದ್ದು ನಾರುತ್ತಿರುವ ಕಸದ ರಾಶಿಯ ನಡುವೆ ಸ್ವಚ್ಛನಗರ ಪ್ರಶಸ್ತಿಗಾಗಿ ಸಿಂಗಾರಗೊಳ್ಳುತ್ತಿದೆ ಅರಮನೆ ನಗರಿ ಮೈಸೂರು!

ದೇಶದ ಸ್ವಚ್ಛನಗರ ಎಂಬ ಪ್ರಶಸ್ತಿ ಪಡೆಯುವ ಸಲುವಾಗಿ ಪರಿಶೀಲನಾ ಸಮಿತಿ ಬರುವ ಸಂದರ್ಭದಲ್ಲಿ ರಸ್ತೆಬದಿಯ ಆಹಾರದ ತಳ್ಳುಗಾಡಿಗಳ ಅಂಗಡಿಗಳನ್ನು ಮುಚ್ಚಿಸಲಾಗುತ್ತದೆ. ಪರಿವೀಕ್ಷಣೆಗಾಗಿಯೇ ಕಸದ ರಾಶಿಯಿಂದ ಗಬ್ಬೆದ್ದಿರುವ ಮೈಸೂರನ್ನು ತಾತ್ಕಾಲಿಕವಾಗಿ ಸಿಂಗರಿಸಲಾಗುತ್ತದೆ.

ಗಬ್ಬೆದ್ದು ನಾರುತ್ತಿರುವ ಕಸದ ರಾಶಿಯ ನಡುವೆ ಸ್ವಚ್ಛನಗರ ಪ್ರಶಸ್ತಿಗಾಗಿ ಸಿಂಗಾರಗೊಳ್ಳುತ್ತಿದೆ ಅರಮನೆ ನಗರಿ ಮೈಸೂರು!

`ಉದರ ನಿಮಿತ್ತಂ ಬಹುಕೃತ ವೇಷಂ’ಎಂಬುದನ್ನೇನಾದರೂ ಮೈಸೂರು ಮಹಾನಗರ ಪಾಲಿಕೆಗೆ ಅನ್ವಯಿಸಿದರೆ,  ಹನ್ನೊಂದು ತಿಂಗಳಿಡೀ ಸಾಕಷ್ಟು ಗಬ್ಬೆದ್ದಿದ್ದರೂ, ಭಾರತದ ಸ್ವಚ್ಛ ನಗರ ಎನಿಸಿಕೊಳ್ಳಲು ಹೊಸ ವರ್ಷದ ಮೊದಲ ತಿಂಗಳಲ್ಲಿ ಮಾತ್ರ ನಾನಾ ಬಗೆಯ ವೇಷಗಳನ್ನು ತೊಡಲು ಆರಂಭಿಸಿಬಿಡುತ್ತೆ.

ರಾಷ್ಟ್ರ ಮಟ್ಟದಲ್ಲಿಅತ್ಯಂತ ಸ್ವಚ್ಛ ನಗರ ಎಂಬ ಪ್ರಶಸ್ತಿ ಕೊಡುವ ಪರಿಪಾಠವನ್ನು ಮೋದಿ ಸರ್ಕಾರ ಆರಂಭಿಸಿದೆ. ಇದನ್ನು ಮೈಸೂರು ಎರಡು ಸಲ ಮುಡಿಗೇರಿಸಿಕೊಂಡು, ಮೂರನೇ ಸಲವೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಕನಸು ಕಳೆದ ವರ್ಷ ನುಚ್ಚು ನೂರಾಯಿತು. ಅದನ್ನೇನಾದರೂ ಮಾಡಿ ಈ ಸಲ ಪಡೆಯಲೇಬೇಕೆಂಬ ಹಠದಿಂದ ಹೊರಟಿರುವುದೇನೋ ಸರಿ, ಆದರೆ ಅದಕ್ಕಾಗಿ ವರ್ಷವಿಡೀ ಸ್ವಚ್ಛತೆ ಕಾಯ್ದುಕೊಳ್ಳದೆ, ಪ್ರಶಸ್ತಿ ಸಮಿತಿಯವರು ಪರಿಶೀಲನೆಗೆ ಬಂದಾಗ ಮಾತ್ರವೇ ನಗರವನ್ನು ಸೌಂದರ್ಯಯುತವನ್ನಾಗಿಸುವ ನಾಟಕ  ಮಾತ್ರ ಅತಿರೇಕದ್ದು.

ವರ್ಷಕ್ಕೆ ಮೂರೂವರೆ ಕೋಟಿಯಷ್ಟು ಪ್ರವಾಸಿಗರು ಬರುತ್ತಾರೆ. ಇವರಲ್ಲಿ ಅರ್ಧಕ್ಕರ್ಧ ಮಂದಿ ಹೊಟ್ಟೆ ತುಂಬಿಸುತ್ತಿರುವುದು ರಸ್ತೆ ಬದಿಯ ತಳ್ಳು ಗಾಡಿ ಹೋಟೆಲ್‍ಗಳು. ಜತೆಗೆ ನಗರದ  ವಾಸಿಗಳಿಗೂ ಪಾನಿಪುರಿ, ಗೋಬಿ ಇತ್ಯಾದಿಯಂಥವನ್ನು ಒದಗಿಸುತ್ತಿರುವ ಈ ಕ್ಷೇತ್ರವನ್ನೇ ನಂಬಿ ಸಾವಿರಾರು ಕುಟುಂಬಗಳಿವೆ. ದಿನಕ್ಕೇ ಏನಿಲ್ಲವೆಂದರೂ ಇಡೀ ನಗರದಾದ್ಯಂತ 20 ಲಕ್ಷ ರುಪಾಯಿಗಳಷ್ಟು ವಹಿವಾಟು ನಡೆಯುತ್ತಿದೆ.  ಇವರಿಗೆಲ್ಲ ನಿಗದಿತ ಸ್ಥಳ ಒದಗಿಸಿ, ಸ್ವಚ್ಚತೆ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸುವಂಥದ್ದನ್ನೆಲ್ಲ ಪಾಲಿಕೆ ಮಾಡಬೇಕು.

ಹಸಿವು ನೀಗಿಸುವಲ್ಲಿಇಷ್ಟೊಂದು ಮಹತ್ವ ಹೊಂದಿರುವ, ಸಾವಿರಾರು ಕುಟುಂಬಗಳಿಗೆ ಜೀವನೋಪಾಯವಾಗಿರುವ ಈ ಬೀದಿ ಬದಿ ಅಂಗಡಿಗಳನ್ನು ಸ್ವಚ್ಛ ನಗರದ ಕಿರೀಟ ತೊಡಿಸುವ ಸಲುವಾಗಿ, ಪ್ರತೀ ವರ್ಷ 20 ದಿನ ಮುಚ್ಚಿಸಲಾಗುತ್ತಿದೆ, ರಸ್ತೆ ಬದಿಗೆಲ್ಲ ಬಣ್ಣ ಬಳಿದು, ರಸ್ತೆ ವಿಭಜಕಗಳಲ್ಲಿ ನಾನಾ ರೀತಿಯ ಗಿಡಗಳನ್ನು ನೆಟ್ಟು ಆಕರ್ಷಕಗೊಳಿಸಲಾಗುತ್ತೆ. ಖಾಸಗಿಯ ಸಹಭಾಗಿತ್ವದಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನೂ ಅಚ್ಚುಕಟ್ಟು ಮಾಡಲಾಗುತ್ತೆ. ಇವೆಲ್ಲ ಬಹುಮಾನಕೊಡುವವರು ಬಂದು ಪರಿವೀಕ್ಷಣೆ ಅವಧಿಯಲ್ಲಿ ಮಾತ್ರ ಆಗುವಂಥದ್ದು. ಅವರು ಅತ್ತ ಹೋಗುತ್ತಿದ್ದಂತೆಯೇ ಗಲೀಜು ಯಥಾಸ್ಥಿತಿಗೆ ಬಂದು ಬಿಡುತ್ತೆ.  ಹೀಗಾಗಿ ಈ ಪ್ರಶಸ್ತಿ ಪಡೆಯುವುದಕ್ಕಾಗಿ ಮಹಾನಗರಪಾಲಿಕೆ ಕೇಂದ್ರ ಸರ್ಕಾರಕ್ಕೆ ಮಾಡುವ  ಮೋಸ ಎಂದರೂ ತಪ್ಪಿಲ್ಲ.

ರಸ್ತೆ ಬದಿಯದ್ದನ್ನು ಹೇಗೋ ತಾತ್ಕಾಲಿಕವಾಗಿ ಸರಿಪಡಿಸಿಕೊಂಡರೂ, 65 ವಾರ್ಡುಗಳಿಂದ ದಿನ ನಿತ್ಯ 400 ಟನ್‍ಗಳಷ್ಟು ಸಂಗ್ರಹವಾಗುವ ತ್ಯಾಜ್ಯವನ್ನ ವಿಲೇವಾರಿ ಮಾಡುವುದಕ್ಕೆ ನೆಟ್ಟಗಿನ ವ್ಯವಸ್ಥೆ ಹೊಂದಿಲ್ಲದಿರುವುದನ್ನ ಸರಿಪಡಿಸಿಕೊಳ್ಳಲು ಮಾತ್ರ ಹೋಗುತ್ತಿಲ್ಲ.

ನಗರಾದ್ಯಂತ ದಿನಕ್ಕೆ ಸಂಗ್ರಹವಾಗುವ ತ್ಯಾಜ್ಯ 400 ಟನ್‍ಗಿಂತ ಹೆಚ್ಚು, ಇದನ್ನ ಸಂಸ್ಕರಿಸಲು ಒಂಬತ್ತು ಕೇಂದ್ರಗಳಿವೆಯಾದರೂ, ಕೆಲಸ ಮಾಡುತ್ತಿರುವುದು ಏಳು ಮಾತ್ರ. ಅದರಲ್ಲೂಅತ್ಯಂತ ದೊಡ್ಡದಾದ, ಕಸ ಪರಿವರ್ತನಾ ಘಟಕ ವಿದ್ಯಾರಣ್ಯಪುರಂ ಸೂಯೇಜ್ ಫಾರಂನಲ್ಲಿದೆ. ಇಲ್ಲಿಕಸವನ್ನೇ ಗೊಬ್ಬರವಾಗಿಸುವ ವ್ಯವಸ್ಥೆಯಿದ್ದರೂ, ಇದು ಪ್ರಯೋಜನಕ್ಕೆ ಬಂದಿಲ್ಲ. ಸದರಿ ಸ್ಥಳದಲ್ಲೀಗ 2.5 ಲಕ್ಷ ಟನ್‍ ಕಸವಿದ್ದು, ಇದರ ವಾಸನೆಯಿಂದ ಸುತ್ತಮುತ್ತಲ ನಿವಾಸಿಗಳು ರೋಗರುಜಿನಗಳಿಗೆ ತುತ್ತಾಗಿದ್ದಾರೆ. ನಮಗೆ ಆರೋಗ್ಯದಿಂದ ಬದುಕುವ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಲೇ ಇದ್ದಾರೆ.

ನಗರದಾದ್ಯಂತ ಕಸ ಸಂಗ್ರಹಿಸಿಕೊಳ್ಳಲು 37 ಟ್ರ್ಯಾಕ್ಟರ್‍ಗಳು, 400 ಕೈಗಾಡಿಗಳು, 170 ಆಟೋಗಳು ಇವೆ. ಕಸ ಸಂಗ್ರಹಿಸಿ ಸಾಗಿಸುವುದನ್ನು ಗುತ್ತಿಗೆ ಕೊಡಲಾಗಿದೆ. ಆ ಗುತ್ತಿಗೆದಾರಿಕೆಯಲ್ಲಿನ ಗೋಲ್‍ಮಾಲ್‍ ಕತೆಯದ್ದೇ ಇನ್ನೊಂದು ಮುಖ. ಅಂತೆಯೇ 100 ಕೆಜಿ ಒಣ ಕಸ ಸಂಗ್ರಹಿಸಿದ ಪೌರಕಾರ್ಮಿಕರಿಗೆ ಸ್ಥಳದಲ್ಲೆ ನೂರು ರುಪಾಯಿ ಕೊಡುವಂಥ ಪ್ರೋತ್ಸಾಹಕ ಯೋಜನೆಯನ್ನೂ, ಮನೆ ಮನೆಯವರೇ ಒಣ ಮತ್ತು ಹಸಿ ಕಸ ವಿಂಗಡಿಸಿ ಕೊಡಿ ಎಂದು ಪುಕ್ಕಟೆ ಬಕೀಟುಗಳನ್ನೂ ಕೊಡಲಾಗಿದೆ. ಈ ಬಕೀಟು ಖರೀದಿ ಮತ್ತು ಹಂಚಿಕೆಯಲ್ಲೂಅಪರಾತಪರಾವಾಗಿರುವ ವಿವಾದಗಳೂ  ಇವೆ. ರಸ್ತೆಗಳಲ್ಲಿ ನೇತು ಹಾಕಿದ್ದ ಪ್ಲಾಸ್ಟಿಕ್ ಕಸದ ಡಬ್ಬಿಗಳೂ ಮಾಯವಾಗಿವೆ.

ಸೂಯೆಜ್ ಫಾರಂನ ಎರಡೂವರೆ ಲಕ್ಷಟನ್‍ ಕಸದಗುಡ್ಡೆಯನ್ನು ಕರಗಿಸಲು, 18 ಕೋಟಿ ರೂಪಾಯಿ ವೆಚ್ಚದ ಕೊರಿಯನ್‍ ತಂತ್ರಜ್ಞಾನದ ಯಂತ್ರ ಅಳವಡಿಸಿಕೊಂಡು, ದಿನ ನಿತ್ಯ 1000 ಟನ್‍ ಕಸವನ್ನು ಸಂಸ್ಕರಣೆ ಮಾಡಿ ಕೊಡಲು ಜಿಗ್ಮಾ ಎಂಬ ಕಂಪನಿ ಮುಂದೆ ಬಂದಿದೆ ಯಾದರೂ, ಪ್ರಗತಿ ಪಥಕಾಣುತ್ತಿಲ್ಲ.

ಒಳಗೆ ಇಂಥ ಲಕ್ಷಗಟ್ಟಲೇ ಟನ್‍ ತ್ಯಾಜ್ಯವನ್ನಿಟ್ಟುಕೊಂಡು, ಅದನ್ನು ತೋರಿಸದೆ ಬೀದಿಬದಿ ವ್ಯಾಪಾರಸ್ಥರನ್ನ ತಾತ್ಕಾಲಿಕವಾಗಿ ಒಕ್ಕಲೆಬ್ಬಿಸಿ, ಹೊಟ್ಟೆಗಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಮುಡಿದು ಕೊಳ್ಳಲು ಮೈಸೂರು ಮಹಾನಗರ ಪಾಲಿಕೆ  ಹೊರಟಿದೆ. ಹೋದ ವರ್ಷ ಪರಿವೀಕ್ಷಕರ ಕಣ್ಣಿಗೆ ಕಾಣಿಸುವಂತೆ ಜೋಡಿಸಿದ್ದ ರಸ್ತೆ ಮಧ್ಯದ ಹೂಗಿಡಗಳ ಕುಂಡಗಳೇ ಒಡೆದಿವೆ. ಗಿಡಗಳು ನೀರಿಲ್ಲದೆ ಒಣಗಿವೆ. ಈಗ ಅವನ್ನೆಲ್ಲ ತರಾತುರಿಯಾಗಿ ಬದಲಿಸುವ ಕೈಂಕರ್ಯಕ್ಕೆ ಪಾಲಿಕೆ ತೊಡಗಿಕೊಂಡಿರುವುದು ಹೊರ ನೋಟದ್ದು ಮಾತ್ರ.

ಅಂದ ಹಾಗೇ 1903ರಲ್ಲೇ ನಗರಯೋಜನೆ ವಿಶ್ವಸ್ಥ ಮಂಡಳಿಯನ್ನು ರಚಿಸಿದ್ದ ಮೈಸೂರು ರಾಜರು, 1908 ರಲ್ಲೇ ಬೀದಿ ದೀಪ ಅಳವಡಿಸಿದ್ದರು. 1910ರಲ್ಲೇ ಒಳಚರಂಡಿ ವ್ಯವಸ್ಥೆಯನ್ನೂ ಮಾಡಿದ್ದರು. ಅವೆಲ್ಲ ನೂರು ವರ್ಷಗಳಷ್ಟು ಮುನ್ನೋಟ ಇಟ್ಟುಕೊಂಡು ಮಾಡಿದ್ದುದು. ಅವೇ ಇವಾಗಲೂ ಇವೆ. ಅದನ್ನೆ ಸರಿಯಾಗಿ ನಿರ್ವಹಣೆ ಮಾಡಿಕೊಂಡು ಬರಲೂ ವಿಫಲವಾಗಿರುವ ಪಾಲಿಕೆ ವರ್ಷಕ್ಕೊಮ್ಮೆ ಮಾತ್ರ ಬಹುಮಾನದ ಆಸೆಗಾಗಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತಿದೆ. ಮೇಲೆಲ್ಲ ಥಳುಕು ಒಳಗೆಲ್ಲ ಹುಳುಕು ಎಂಬುದನ್ನ ಮತ್ತೆ ಮತ್ತೆ ನೆನಪಿಸುತ್ತಿದೆ.