ಹೆದ್ದಾರಿಯಲ್ಲಿ ಮುಚ್ಚಿ ಹೋಗುತ್ತಿದೆ `ಗಾಂಧಿ' ಕಾಲಿಟ್ಟಿದ್ದ ತಾಣ

ಹೆದ್ದಾರಿಯಲ್ಲಿ ಮುಚ್ಚಿ ಹೋಗುತ್ತಿದೆ `ಗಾಂಧಿ' ಕಾಲಿಟ್ಟಿದ್ದ ತಾಣ

ಮೈಸೂರು-ಬೆಂಗಳೂರು ನಡುವೆ ಎಂಟು ಪಥದ ಹೆದ್ದಾರಿಯೊಳಗೆ ಶ್ರೀ ಕೃಷ್ಣರಾಜೇಂದ್ರ ಹತ್ತಿಗಿರಣಿ(ಕೆ.ಆರ್. ಮಿಲ್) ಕೊಚ್ಚಿಹೋಗುವುದರೊಡನೆ ಐತಿಹಾಸಿಕ ಹಿನ್ನೆಲೆಯೊಂದು ನಾಮಾವಶೇಷವಾಗುತ್ತಿದೆ.

ಸ್ವದೇಶಿ ಬಟ್ಟೆ ಬಳಸಿ ಎಂದು ಗಾಂಧೀಜಿ ಕರೆ ಕೊಟ್ಟು, ಚರಕ ಬಳಸಿ ಕೈಯಿಂದಲೇ ಹತ್ತಿ ನೂಲು ತೆಗೆಯುವಂಥದ್ದನ್ನ ಜನಪ್ರಿಯಗೊಳಿಸುತ್ತಿದ್ದರು. ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದ ಇದಕ್ಕೆ ಓಗೊಟ್ಟ ನಾಲ್ವಡಿ ಕೃಷ್ಣರಾಜಒಡೆಯರ್, ಮೈಸೂರು ಸಂಸ್ಥಾನದಲ್ಲಿ ಜನರಿಗೆ ಉದ್ಯೋಗವನ್ನ ಕಲ್ಪಿಸುವ ಸಲುವಾಗಿ ಹತ್ತಿಗಿರಣಿಯನ್ನ ಆರಂಭಿಸಿದರು. (ಮೈಸೂರಿಗೆ ಅಂಟಿಕೊಂಡೇ ಇರುವ ಆರು ಕಿಮೀ ಫಾಸಲೆಯೊಳಗೇ ಬೆಂಗಳೂರು ಹೆದ್ದಾರಿಯಲ್ಲೇ ಇದಿದೆ)  ಮಹಾತ್ಮಾಗಾಂಧಿ ಇಲ್ಲಿಗೆ 1927 ರಲ್ಲಿ ಭೇಟಿ ಕೊಟ್ಟು ರಾಜರ ಬೆನ್ನು ತಟ್ಟಿದ್ದರು. ತದ ನಂತರ ನಂಜನಗೂಡು ಬಳಿಯ ಬದನವಾಳುನಲ್ಲಿರುವ ಖಾದಿ ನೂಲುವ ಕೇಂದ್ರಕ್ಕೂ 1934 ರಲ್ಲಿ ಭೇಟಿ ನೀಡಿದ್ದರು. ಆಗ ಅಲ್ಲಿನ ಕೆಲಸಗಾರರು ಹೆಚ್ಚುವರಿ ಕೆಲಸ ಮಾಡಿ, ಬಂದ ಹಣವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಗಾಂಧೀಜಿಯವರಿಗೆ ಅರ್ಪಿಸಿದ್ದರು.

ಆಸುಪಾಸು ಹತ್ತಿರತ್ತಿರದ ಅವಧಿಯಲ್ಲೇ ಕಾರ್ಯನಿರ್ವಹಿಸಲು ಆರಂಭಿಸಿದ ಕೆ.ಆರ್. ಮಿಲ್‍ ಕ್ರಮೇಣ ಆಧುನಿಕತೆಯನ್ನ ಅಳವಡಿಸಿಕೊಳ್ಳುತ್ತಾ ಬಂತಲ್ಲದೆ ಕಾರ್ಮಿಕ ವಿವಾದ, ವ್ಯವಹಾರ ಇತ್ಯಾದಿ ಕಾರಣದಿಂದ ಕಾರ್ಯ ಚಟುವಟಿಕೆ ನಿಲ್ಲಿಸಿತು.  ಆದರೆ ಇವತ್ತಿಗೂ ಬದನವಾಳುವಿನಲ್ಲಿ ಖಾದಿ ಕೇಂದ್ರದಲ್ಲಿ ಕೈಯಿಂದಲೇ ನೂಲು ತೆಗೆಯುವುದನ್ನ ಮುಂದುವರಿಸಿಕೊಂಡು, ನೇಯ್ಗೆಯ ಮಗ್ಗಕ್ಕೆ ಮಾತ್ರ ವಿದ್ಯುತ್ ಶಕ್ತಿ ಬಳಿಸಿಕೊಂಡು ಕಾರ್ಯತತ್ಪರವಾಗಿಯೇ ಇದೆ.  ದಲಿತ ಸಮುದಾಯದವರೇ ಹೆಚ್ಚು ಇರುವುದೂ ಒಳಗೊಂಡಂತೆ ಅನೇಕ ಮಂದಿಗೆ ಉದ್ಯೋಗ ಕೊಟ್ಟಿದೆ.

ಆದರೆ ಆಧುನಿಕತೆಯ ವ್ಯಾಮೋಹಕ್ಕೆ ಬಿದ್ದ ಕೆ.ಆರ್.ಮಿಲ್‍ ಕಾಲಾನುಕ್ರಮದಲ್ಲಿ ಬಾಂಬೆ ಮೂಲದ ಖಾಸಗಿ ವ್ಯಕ್ತಿ ಖರೀದಿಸಿಕೊಂಡಿದ್ದೂ ಆಯಿತು. 71 ಎಕರೆ ಭೂಮಿಯನ್ನ  ಆಗ 7.1 ಕೋಟಿ ರುಪಾಯಿಗೆ ಕೊಟ್ಟಿದ್ದೇ ಅವ್ಯವಹಾರದ ವಾಸನೆಗಳಿವೆ ಎಂಬ ಆರೋಪಗಳಿವೆ. ಜತೆಗೆ ಕಾರ್ಮಿಕರಿಗೆ ನ್ಯಾಯಾಲಯ ಕೊಟ್ಟ ತೀರ್ಪಿನ ಅನುಸಾರ ಇನ್ನೂ ಪರಿಹಾರಗಳು ದೊರೆತಿಲ್ಲ. ಕಳೆದ ವಾರ ಕೂಡ ಕೇಂದ್ರದ ನೂತನ ಜವಳಿ ನೀತಿಯಡಿಯಲ್ಲಿ ಹೆಚ್ಚು ಪರಿಹಾರಕ್ಕೆ ನಾವು ಅರ್ಹರು ಎಂದು ಉಳಿದಿರುವ ಮಾಜಿ ಕಾರ್ಮಿಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಸದರಿ ಕಾರ್ಖಾನೆ ಕಾರ್ಯನಿರ್ವಹಿಸುತ್ತಿಲ್ಲ. ಸಾವಿರಾರು ಉದ್ಯೋಗಿಗಳು ಬೀದಿಪಾಲಾಗಿ ಅದೆಷ್ಟೋ ವರ್ಷಗಳಾಗಿದ್ದರೂ, ಕೆಲ ವರ್ಷಗಳ ಹಿಂದೆಯೂ 2013-18 ರ ಸಾಲಿನ ಕೇಂದ್ರದ ನೂತನ ಜವಳಿ ನೀತಿಯಡಿಯಲ್ಲಿ ಪುನರುಜ್ಜೀವನಗೊಳಿಸಿದರೆ 20ಸಾವಿರ ಮಂದಿಗೆ ಉದ್ಯೋಗ ಕೊಡಬಹುದು, ಹೀಗಾಗಿ ಆಗಿ ಹೋಗಿರುವುದನ್ನೆಲ್ಲ ಸರಿಪಡಿಸಿಕೊಂಡು ಕಾರ್ಖಾನೆ ಮತ್ತೆ ಆರಂಭಿಸುವ ಪ್ರಯತ್ನಗಳಾಬೇಕು ಎಂದು ರಾಜಕಾರಣಿಗಳೂ  ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಿಂದ ಒಂದಷ್ಟು ಜನ ಉದ್ಯೋಗ ಸಿಗಬಹುದೆಂಬ ಕನಸು ಕಟ್ಟಿಕೊಳ್ಳುತ್ತಿದ್ದರು.

ಆದರೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನ ಎಂಟು ಪಥದ್ದಾಗಿಸುವ ಕಾಮಗಾರಿ ನಡೆಯುತ್ತಿರುವುದರಿಂದ, ಐತಿಹಾಸಿಕ ಹಿನ್ನೆಲೆಯನ್ನೊಂದಿರುವ ಕೆ.ಆರ್. ಮಿಲ್‍ ಕಟ್ಟಡವೇ ನಾಮಾವಶೇಷವಾಗುತ್ತಿದೆ. ಮೈಸೂರಿನ ಸುತ್ತಮುತ್ತ ನೂರಾರು ಪಾರಂಪರಿಕ ಕಟ್ಟಡಗಳಿದ್ದು, ಒಂದೊಂದಾಗಿ ಅವು ಭೂಗತವಾಗುತ್ತಿರುವುದರಿಂದ ಹಿಂದಿನ ತಲೆಮಾರಿನ ಇತಿಹಾಸವೂ ಮಣ್ಣುಗೂಡುತ್ತಿದೆ.