ಐತಿಹಾಸಿಕತೆ ಅಲಕ್ಷ್ಯಕ್ಕೆ ಬೀಳುತ್ತಿದೆ ಅಗ್ನಿಶಾಮಕ ಕಟ್ಟಡ

ಐತಿಹಾಸಿಕತೆ ಅಲಕ್ಷ್ಯಕ್ಕೆ ಬೀಳುತ್ತಿದೆ ಅಗ್ನಿಶಾಮಕ ಕಟ್ಟಡ

ಇತಿಹಾಸ ಪ್ರಜ್ಞೆ ಕೊರತೆಯಿಂದಾಗಿ ಬಹುಮುಖ್ಯ ಕಟ್ಟಡವೊಂದು ಕುಸಿದು ಬೀಳುತ್ತಿದ್ದರೂ, ತಿರುಗಿಯೂ ನೋಡದ ಜನಪ್ರತಿನಿಧಿಗಳು ಅಧಿಕಾರಿಗಳ ವರ್ಗ ಮೈಸೂರೆಂಬ ಮೈಸೂರಿಗೆ ವಕ್ಕರಿಸಿರುವುದು ನಾಚಿಕೆಗೇಡಿನ ಸಂಗತಿ.

ಮೈಸೂರಿನ ಅಗ್ನಿಶಾಮಕ ದಳ ಮೊಟ್ಟ ಮೊದಲಿಗೆ ಆರಂಭವಾಗಿದ್ದು ಸರಸ್ವತಿ ಪುರಂನ ಕಟ್ಟಡದಲ್ಲಿ. ಇಲ್ಲಿಯೇ ಆಡಳಿತ ಕಚೇರಿ, ಪೆರೇಡ್‍ ಎಲ್ಲವೂ ನಡೆಯುತ್ತಿತ್ತು. ಮನಮೋಹಕವಾದ ಕಟ್ಟಡವೂ ಇದಕ್ಕಿದ್ದು, ಇಡೀ ಇಲಾಖೆಯೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಕಟ್ಟಡದ ಭದ್ರತೆಗೆ ಮಾತ್ರ ಗಮನ ಕೊಡದೇ ಇದ್ದುದರಿಂದ ಇದು ಕಣ್ಣೆದುರೇ ಧರಾಶಾಹಿಯಾಗುವಂತಾಗಿದೆ.

ಈ ಕಟ್ಟಡದ ಇತಿಹಾಸ ಕೆದಕುತ್ತಾ ಹೋದರೆ, ವಸ್ತುಪ್ರದರ್ಶನದೊಡನೆ ಲಿಂಕ್ ಹೊಂದಿರುವುದು ಸ್ಪಷ್ಟವಾಗುತ್ತೆ. ಪ್ರಸ್ತುತ ಮೈಸೂರು ಜಿಲ್ಲಾದಿಕಾರಿ ಕಚೇರಿ, ವಿಶ್ವವಿದ್ಯಾಲಯದ ಆಡಳಿತ ಕಚೇರಿ, ಪ್ರಾಚ್ಯವಸ್ತು ಸಂಗ್ರಹಾಲಯ ಇವೆಲ್ಲ ರಾಜರ ಆಡಳಿತ  ಕಾಲದಲ್ಲಿ ಗುಡ್ಡ ಪ್ರದೇಶ. 1888 ರಲ್ಲಿ ಚಾಮರಾಜೇಂದ್ರ ಒಡೆಯರ್ ಈ ಗುಡ್ಡದಲ್ಲಿಯೇ ಒಂದು ವರ್ಷ ವಸ್ತು ಪ್ರದರ್ಶನ ನಡೆಸಿ,  ಕಾರಣಾಂತರಗಳಿಂದ ಮುಂದೆ ಅದನ್ನ ನಡೆಸಿರಲಿಲ್ಲ. ಇವರು 1894 ರಲ್ಲಿ ನಿಧನವಾದಾಗ, ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಹತ್ತುವರ್ಷ. ಇದಕ್ಕೂ ಎರಡು ವರ್ಷ ಮುನ್ನವೇ ಅಂದರೆ 1902ರಲ್ಲೇ ಇವರಿಗೆ ಪಟ್ಟಾಭಿಷೇಕವಾಗಿರುತ್ತೆ.

1906 ರಲ್ಲಿ ಪತ್ನಿ ಮೇರಿಯಾ ಜತೆ ಇಂಗ್ಲೆಂಡ್‍ ಯುವರಾಜ 5 ನೇ ಜಾರ್ಜ್ ಮೈಸೂರಿಗೆ ಬಂದುಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗೆ ಅಡಿಪಾಯ ಹಾಕುತ್ತಾರೆ. ಆಗ ನಾಲ್ವಡಿ ಪ್ರಸ್ತುತ ಅಗ್ನಿಶಾಮಕ ದಳವಿರುವ ಕಟ್ಟಡದಲ್ಲಿ ನಿಂತು ಹೋಗಿದ್ದ ವಸ್ತುಪ್ರದರ್ಶನವನ್ನ ಆರಂಭಿಸುತ್ತಾರೆ. ಇದು 5 ನೇ ಜಾರ್ಜ್ ಬಂದಿದ್ದರ ನೆನಪಿಗಾಗಿಯೂ ಇರಬಹುದು. ನಾಲ್ಕು ವರ್ಷ ಇದೇ ಕಟ್ಟಡದಲ್ಲಿ ವಸ್ತುಪ್ರದರ್ಶನ ನಡೆದು, ಆನಂತರ ಬೆಂಗಳೂರಿನಿಂದ ಸ್ಥಳಾಂತರವಾಗಿದ್ದ ಮೈಸೂರು ವೈದ್ಯಕೀಯ ಕಾಲೇಜು ಆವರಣಕ್ಕೆ ಸ್ಥಾನಾಂತರವಾಗುತ್ತೆ. ಕಾಲಕ್ರಮೇಣ ಇದು ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದ ಈಗಿನ ಸ್ಥಳದಲ್ಲಿ  ಶಾಶ್ವತವಾಗಿ ನೆಲೆಗೊಂಡಿದೆ. 

ನಾಲ್ಕು ವರ್ಷ ವಸ್ತುಪ್ರದರ್ಶನ ನಡೆದ, 121 ವರ್ಷಗಳಾಗಿರುವ ಪಾರಂಪರಿಕ ಕಟ್ಟಡದಲ್ಲಿ ಅಗ್ನಿಶಾಮಕ ದಳ ಕಾರ್ಯನಿರ್ವಹಿಸಿದರೂ ಅದರ ದುರಸ್ತಿಯ ಗೊಡವೆಗೇ ಹೋಗದೆ ತೋರಿದ ನಿರ್ಲಕ್ಷ್ಯದಿಂದಾಗಿ ಇದೀಗ ಕುಸಿಯುತ್ತಾ ಸಾಗಿದೆ.  ಇದರ ನವೀಕರಣಕ್ಕಾಗಿ ಮಹಾನಗರ ಪಾಲಿಕೆಗೆ ಪ್ರಸ್ತಾಪ ಕಳುಹಿಸಿದರೆ, ಮತ್ತೇನೋ ವಿವರ ಕೇಳಿ ಮತ್ತೆ ವಾಪಸ್ಸು ಕಳುಹಿಸಿ ಬಿಡಲಾಗಿದೆ. ಹೀಗಾಗಿ ಆರಕ್ಷಕ ಇಲಾಖೆ ಅಡಿಯಲ್ಲಿರುವ ಅಗ್ನಿಶಾಮಕ  ದಳ, ಮಹಾನಗರ ಪಾಲಿಕೆ ನಡುವಣ ಆಮೆ ನಡಿಗೆಯಿಂದಾಗಿ ಐತಿಹಾಸಿಕ ಕಟ್ಟಡವೇ ಕುಸಿಯುವಂತಾಗಿದೆ.

ಅಗ್ನಿಶಾಮಕ ದಳದ ಇತಿಹಾಸ

ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳಲ್ಲೂ ಅಗ್ನಿಶಾಮಕ ದಳ ಇದೆ. ಮೂಲತಃ ಇದರ ಹುಟ್ಟು ಕ್ರಿ.ಪೂ. 3 ನೇ ಶತಮಾನದಲ್ಲೇ ಈಜಿಪ್ಟ್ ನಲ್ಲಾಗಿತ್ತು. ಕ್ರಿ.ಪೂ. 24ರಲ್ಲೇ ರೋಮ್‍ನಲ್ಲಿ ಆಗುಸ್ತಸ್ 600 ಮಂದಿ ಸೇವಕರನ್ನ ಅಗ್ನಿ ವಿರುದ್ದ ಹೋರಾಡಲು ನೇಮಿಸಿದ್ದ, ಇವರು ನೀರೆರಚಲು ಬಕೆಟ್‍ ನಂಥದ್ದನ್ನ ಬಳಸುತ್ತಿದ್ದರಲ್ಲದೆ, ನಗರದಾದ್ಯಂತ ಸಂಚರಿಸುತ್ತಾ ನಿಯಮ ಉಲ್ಲಂಘಿಸಿದವರನ್ನ ಶಿಕ್ಷೆಗೊಳಪಡಿಸುತ್ತಿದ್ದರು.  1666 ರಲ್ಲಿ ಲಂಡನ್‍ನಲ್ಲಿ ಮಹಾ ಅಗ್ನಿದುರಂತ ಸಂಭವಿಸಿತು. ಆಗ ಪ್ರಚಲಿತದಲ್ಲಿದ್ದ ವಿಮಾ ಕಂಪನಿಗಳು  ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಅಗ್ನಿ ನಿರೋಧಕ ಪಡೆ, ತಂತ್ರಗಳನ್ನ ಅಳವಡಿಸಿಕೊಂಡಿದ್ದು ಇತರೆಡೆಗೆಲ್ಲ ಹರಡಿಕೊಂಡಿತು. 1824 ರಲ್ಲಿ ಸ್ಕಾಟ್‍ಲ್ಯಾಂಡಿನ ಎಡಿನ್‍ ಬರ್ಗ್‍ನಲ್ಲಿ ವ್ಯವಸ್ಥಿತ ರೀತಿಯಲ್ಲಿ ಅಗ್ನಿಶಾಮಕ ದಳ ಮತ್ತು ಸಾಧನಗಳು ಬಂದು, ಲಂಡನ್‍ನಲ್ಲಿ 1832 ರಲ್ಲಿ ಇವು ಅಸ್ತಿತ್ವ ಪಡೆದವು.   

1913 ರಲ್ಲಿಅಗ್ನಿಆರಿಸುವ ಯಂತ್ರದ ಆವಿಷ್ಕಾರವಾಯಿತು. ಇದನ್ನ ಕುದುರೆಯಲ್ಲಿ ಎಳೆದುಕೊಂಡು ಹೋಗುವಂಥದ್ದು 1920 ರಲ್ಲಿ ಬಂತು.  1925 ರಲ್ಲೇ ಮೈಸೂರು ಸಂಸ್ಥಾನಕ್ಕೆ ಡೆನ್ನಿಮ್ ಸಂಸ್ಥೆಯಿಂದ `ಪಂಪರ್' ಬಂದಿತ್ತು. ನಂತರ ಪೆಟ್ರೋಲ್‍ನಿಂದ ಚಲಿಸುವ ಅಗ್ನಿಶಾಮಕ  ವಾಹನವೂ ಬಂತು, ಆದರೆ ಅದನ್ನ ಪೆರೇಡ್‍ ಇತ್ಯಾದಿಯಂಥ ಸಂದರ್ಭದಲ್ಲಿ ಮಾತ್ರವೇ ಪ್ರದರ್ಶನಕ್ಕೆ ಹೊರತೆಗೆಯಲಾಗುತ್ತಿತ್ತು. ಆನಂತರದಲ್ಲಿ ಅಗ್ನಿಶಾಮಕ ದಳ ಭಾರತದಲ್ಲಿ ವ್ಯವಸ್ಥಿತವಾಗಿ ರೂಪುಗೊಂಡು, ಕರ್ನಾಟಕದಲ್ಲು 1942 ರಲ್ಲಿ ಶುರುವಾಗಿ ಹೊಸಾ ಹೊಸಾ ಆವಿಷ್ಕಾರಗಳನ್ನ ಒಳಗೊಳ್ಳುತ್ತಿದೆ. ಪ್ರತೀ ಹೋಬಳಿಗೂ ಒಂದು ಅಗ್ನಿಶಾಮಕ ದಳ  ಇರಬೇಕೆಂಬ ನಿಲುವನ್ನ ಸರ್ಕಾರ ಘೋಷಿಸಿಯೂ ಇದೆ. ಆದರೆ ಅಂದುಕೊಂಡ ಮಟ್ಟಿಗೆ ಅವೆಲ್ಲ ಆಗಿಲ್ಲ.
ಇಂಥ ಕೊರತೆ ಸಮಸ್ಯೆಗಳ ನಡುವೆಯೇ, ಮೈಸೂರಿನಲ್ಲಿ ತಾನು ಕಾರ್ಯನಿರ್ವಹಿಸುತ್ತಿದ್ದ ಪಾರಂಪರಿಕ ಕಟ್ಟಡವನ್ನೇ ಸುವ್ಯವಸ್ಥಿತವಾಗಿ ನೋಡಿಕೊಳ್ಳಲಾಗಲಿಲ್ಲ ಎಂಬ ಟೀಕೆಗೂ ಒಳಗಾಗಿದೆ.