ಕಣ್ಕಟ್ಟು ವಿದ್ಯೆಯೊಳಗಣ ದಸರೆಯಲ್ಲಿ ಹಳ್ಳ ಹಿಡಿದ ಭೈರಪ್ಪ ಪುಸ್ತಕದಂಗಡಿ ಯೋಜನೆ

ಕಣ್ಕಟ್ಟು ವಿದ್ಯೆಯೊಳಗಣ ದಸರೆಯಲ್ಲಿ ಹಳ್ಳ ಹಿಡಿದ ಭೈರಪ್ಪ ಪುಸ್ತಕದಂಗಡಿ ಯೋಜನೆ

ಅತಿಶೀಘ್ರವೇ ಜ್ಞಾನಪೀಠಕ್ಕೆ, ಸಾಧ್ಯವಾದರೆ ನಿಧಾನಕ್ಕೆ ನೊಬೆಲ್ ಮೇಲೆ ಕಣ್ಣಿಟ್ಟಿರುವ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಉದ್ವಾಟಿಸಿದ ದಸರಾ ಬರಿವಿವಾದಗಳಿಂದಲೇ ತುಳುಕಾಡುತ್ತಿರುವುದರಿಂದ ಉಸ್ತುವಾರಿ ಸೋಮಣ್ಣ ಪಟ್ಟ ಶ್ರಮವೆಲ್ಲ ಢಾಳಾಗುತ್ತಿದೆ.

ನೆರೆಹಾವಳಿಗಿಂತ ಹೆಂಗಸಿನ ಮುಟ್ಟು ತಟ್ಟುಗಳ ಸುತ್ತಲೇ ಮುಕ್ಕಾಲು ಗಂಟೆ ಕೊರೆದು, ಕೊನೆಗೆ ತನ್ನನ್ನ ಆರಾಧಿಸುವ ಸಂಸದ ಪ್ರತಾಪಸಿಂಹ ನಿಂದಲೇ ತಡವಾಯಿತು ಭಾಷಣ ನಿಲ್ಲಿಸಿ ಎಂದೇಳಿಸಿಕೊಂಡು ನಗೆಪಾಟಲಿಗೀಡಾಗಿದ್ದು ಹಳೇಸಂಗತಿ, ಆದರೆ ಇದರೊಟ್ಟಿಗೆಯೇ ಮುಚ್ಚಿ ಹೋದ ಸಂಗತಿ ಈಗ ಬೆಳಕಿಗೆ ಬಂದಿದೆ.

ಕಾದಂಬರಿಕಾರರಾಗಿ ಭೈರಪ್ಪಗಳಿಸಿರುವ ಓದುಗ ಬಳಗದ ಬಗ್ಗೆ ಎರಡನೇ ಮಾತಿಲ್ಲ. ದಸರಾಗೆ ಇವರೇ ಚಾಲನೆ ಕೊಟ್ಟಿರುವುದರಿಂದ, ದಸರಾ ಪುಸ್ತಕ ಮೇಳದಲ್ಲು ಇವರ ಕೃತಿಗಳಿಗೆ ಸಖತ್ ಬೇಡಿಕೆ ಬಂದು ಬಿಡುತ್ತೆ ಎಂಬ ಆಸೆಯಿಂದ ಪುಸ್ತಕ ವ್ಯಾಪಾರಿಗಳು ಕನಸು ಕಂಡಿದ್ದೇ ಕಂಡಿದ್ದು. ಆದರೆ ಇದು ನನಸಾಗಿಲ್ಲ, ಇವರ ಕೃತಿಗಳಿಗೆ ಬೇಡಿಕೆ ಬಂದಿಲ್ಲ. ಅಂತೆಯೇ ಇದೇ ಲೆಕ್ಕದಿಂದ ಸಂಸದ ಪ್ರತಾಪಸಿಂಹ ಈ ಸಲ ಪ್ರಭಾವ ಬೀರಿ ವಸ್ತುಪ್ರದರ್ಶನದ ಪ್ರಮುಖ ಭಾಗದಲ್ಲಿ ಮಳಿಗೆ ಇಡಲು ಜಾಗ ಕೊಡಿಸುತ್ತೇನೆ, ಅಲ್ಲಿ ಬರೀ ಭೈರಪ್ಪ ಅವರ ಕೃತಿಗಳನ್ನೆ ಮಾರಬೇಕು ಎಂದು ಪುಸ್ತಕ ವ್ಯಾಪಾರಿಯೊಬ್ಬರಿಗೆ ತಿಳಿಸಿದ್ದರು. ಅದಕ್ಕೆ ವ್ಯಾಪಾರಿ ಒಪ್ಪಿದ್ದೂ ಆಯಿತು. ಆದರೆ ಮೂರು ತಿಂಗಳಷ್ಟೇ ನಡೆವ ವಸ್ತು ಪ್ರದರ್ಶನದಲ್ಲಿ ಮಳಿಗೆಗೆ ಮೂರು ಲಕ್ಷ ರುಪಾಯಿ ಬಾಡಿಗೆ ಕಟ್ಟಿ, ಲಾಭ ಎತ್ತಲಾದೀತೇ ಎಂಬ ಆತಂಕದಿಂದ ಕಡೇ ಕ್ಷಣದಲ್ಲಿ ಈ ಪ್ರಸ್ತಾಪಕ್ಕೆ ತರ್ಪಣ ಬಿಟ್ಟಿದ್ದರಿಂದಾಗಿ, ವಸ್ತು ಪ್ರದರ್ಶನದಲ್ಲಿ ಏಕೈಕ ಭೈರಪ್ಪ ಅವರ ಕೃತಿಗಳನ್ನೇ ಮೆರೆಸಲು ಯತ್ನಿಸಿದ್ದ ಸಂಸದನಿಗೆ ಮುಖಭಂಗವಾಗಿದೆ.

ಇನ್ನೊಂದೆಡೆ ಸರ್ಕಾರೀ ವೆಚ್ಚದ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ, ನಿವೇದಿತಾಗೌಡ ಉಂಗುರ ಬದಲಿಸಿಕೊಂಡು ಖಾಸಗಿ ವೀಳ್ಯೆಶಾಸ್ತ್ರ ಮಾಡಿಕೊಳ್ಳಲು ಹೊರಟಿದ್ದೀಗ ಹೊಸ ತಲೆಬಿಸಿ ತರಿಸಿದೆ.

ಈ ಹಿಂದೆಯೂ ಸಿನಿಮಾ ಒಂದರಲ್ಲಿ ಗಾಂಜಾ, ಅಪೀಮು ಸೇವನೆಗೆ ಪ್ರಚೋದನೆ ನೀಡುವಂಥ ಸಾಹಿತ್ಯವಿದ್ದ ಹಾಡು ಹಾಡಿದ್ದ ಚಂದನ್ ಅರಕ್ಷಕ ಠಾಣೆಗೆ ಅಲೆದಿದ್ದರು. ಈಗ ಸರ್ಕಾರೀ ವೆಚ್ಚದ ದಸರಾ ಮೇಳದಲ್ಲಿ ಖಾಸಗಿ ಸಂಬಂಧ ಮಾಡಿಕೊಳ್ಳಲು ಹೋಗಿದ್ದು, ಭಾರೀ ವಿವಾದವಾಗಿ, ಸಚಿವ ಸೋಮಣ್ಣನೇ ವ್ಯಗ್ರವಾಗಿ ಬಿಟ್ಟಿದ್ದಾರೆ. 

ಮತ್ತೊಂದೆಡೆ ಮಹಿಷ ದಸರ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಪ್ರತಾಪ ಸಿಂಹನಿಗೆ ಬಿಸಿ ತಾಕಿಸುತ್ತಲೇ ಇದೆ. ದಲಿತ ಪ್ರಗತಿ ಪರ ವರ್ಗದವರ ಹೋರಾಟಗಳು ತೀವ್ರವಾಗುತ್ತಿರುವಂತೆಯೇ, ಕ್ಷಮೆ ಕೋರುತ್ತೇನೆ ಎಂಬ ರಾಜಿ ಸಂಧಾನಕ್ಕೆ ಮುಂದಾಗಿದ್ದರೂ, ಬಹಿರಂಗವಾಗಿ ಕೇಳಿ ಎಂದು ಸಂಘಟನೆಗಳು ಹಿಡಿದಿರುವ ಪಟ್ಟನ್ನ ಸಡಿಲಿಸಲ್ಲ.

ಇಂಥ ಮೇಲಾಟಗಳ ಜತೆಯಲ್ಲೇ, ಕಾರ್ಯಕ್ರಮಗಳ ಹೆಸರಲ್ಲಿ ಹಣಮಾಡಿಕೊಳ್ಳುತ್ತಿರುವ ದಂದೆಗೆ ಯಾವ ಕಡಿವಾಣವೂ ಬಿದ್ದಿಲ್ಲ. ಕಲಾವಿದರಿಗೆ ಐನೂರು ರುಪಾಯಿ ಗೌರವಧನ ಹೆಚ್ಚಿಸಿದ್ದೇವೆ ಎಂದು ಸೋಮಣ್ಣ ಹೇಳಿದ್ದರೂ, ಅಸಲಿಗೆ ಹೋದ ಸಲ ಕೊಟ್ಟಿದ್ದ ಮೊತ್ತದಲ್ಲಿ ಅರ್ಧಕ್ಕಿಂತಲು ಕಡಿಮೆ ಮಾಡಿಡಲಾಗಿದೆ.

ಮೊದಲೆ ಇಷ್ಟು ಹಣಕೊಡುತ್ತೇವೆ ಎಂದು ಹೇಳದೆ, ಇಂಥ ದಿನಾಂಕ ಇಷ್ಟು ಗಂಟೆಗೆ ಬಂದು ಕಾರ್ಯಕ್ರಮ ಕೊಡಿ ಎಂದೇಳಿ, ಅವರೆಸರನ್ನ ಕಾರ್ಯಕ್ರಮ ಪಟ್ಟಿಯಲ್ಲೂ ಮುದ್ರಿಸಲಾಗಿದೆ. ಅದರನುಸಾರ ಸ್ಥಳಕ್ಕೆ ಬಂದ ನಂತರವೇ ಕೊಡುವುದಿಷ್ಟು ಬೇಕಿದ್ದರೆ ಕಾರ್ಯಕ್ರಮ ಕೊಡಿ, ಇಲ್ಲ ಹೋಗುತ್ತಿರಿ ಎಂದು ಕಲಾವಿದರೆಂಬ ಕನಿಷ್ಟ ಸೌಜನ್ಯವನ್ನೂ ಕೊಡದೆ ವರ್ತಿಸುತ್ತಿದ್ದಾರೆ

ಉಹಾಹರಣೆಗೆ ಅರ್ಧಗಂಟೆ ಜನಪದ ಹಾಡುಗಳನ್ನೇಳಲು ಕಳೆದವರ್ಷ ಹತ್ತರಿಂದ ಹದಿನೈದು ಸಾವಿರ ಕೊಡಲಾಗಿತ್ತು, ಈ ಸಲ ಅದೇ ತಂಡಕ್ಕೆ ಐದು ಸಾವಿರ ಮಾತ್ರ ನಿಗಧಿಸಿದೆ, ಪಕ್ಕ ವಾದ್ಯದವರು ಸಹ ಹಾಡುಗಾರರಿಗೆ 6 ಸಾವಿರ ಕೊಡಬೇಕಾಗಿರುವ ತಂಡದ ಮುಖ್ಯಸ್ತ ತನ್ನ ಕೈಯಿಂದಲೇ ಒಂದು ಸಾವಿರ ಕಳೆದುಕೊಳ್ಳುವ ಜತೆಗೆ ಸಾರಿಗೆ ,ಊಟ ತಿಂಡಿ ವೆಚ್ಚವನ್ನು ಕೈಯಿಂದಲೇ ಭರಿಸುವಂತಾಗಿ, ಇದೇತಕ್ಕೆ ಬೇಡವೇ ಬೇಡ ಸಹವಾಸ ಎಂದು ಕಾರ್ಯಕ್ರಮ ಕೊಡದೆ ವಾಪಸೋಗಿರುವ ಘಟನೆಗಳೂ ನಡೆದಿವೆ.

ಸಮಿತಿಯವರಂತೂ ಇದಕ್ಕೇನೂ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ, ರದ್ದುಗೊಳಿಸಿಕೊಂಡು ಹೋದವರ ಸಮಯದವರೆಗೆ ಹಿಂದಿನ ಕಾರ್ಯಕ್ರಮವನ್ನೇ ಮುಂದುವರಿಸಿಕೊಳ್ಳುವುದೋ, ಮುಂದಿನ ತಂಡ ಅರ್ಧ ಗಂಟೆ ಬೇಗ ಬರುವಂತೆ ಮಾಡುವುದರ ಮೂಲಕವೋ ಹೊಂದಿಸಿಕೊಂಡು, ಅವರಿಗೆ ಒಂದೆರಡು ಸಾವಿರ ಹೆಚ್ಚುವರಿಯಾಗಿ ಕೊಟ್ಟು, ಉಳಿದಿದ್ದನ್ನ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ

ಕೆಲ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕೊಟ್ಟು ಹಣಕ್ಕೆ ಕೈ ಎತ್ತಿರುವುದರ ವಾಸನೆಯೂ ಹೊಡೆಯುತ್ತಿದೆ. ಇದಕ್ಕು ಮೀರಿ ಒಂದು  ತಂಡದ ಸದಸ್ಯರಾಗಿ ಬರುವ ತಬಲ, ರಿದಂಪ್ಯಾಡ್ ನ್ನು ನುಡಿಸುವವರು ಮುಂದಿನ ಹಿಂದಿನ ಕಾರ್ಯಕ್ರಮಗಳಿಗು ಮುಂದುವರಿದು ಸಿಕ್ಕಷ್ಟನ್ನೆ ಜೇಬಿಗಿಳಿಸಿಕೊಳ್ಳುವ ಜಾಲವೂ ಬೆಳೆದಿರುವುದರಿಂದ, ನೈಜ ಕಲಾವಿದರು ಗೋಳಾಡುತ್ತಿದ್ದಾರೆ.

ಪಕ್ಕವಾದ್ಯದವರು ಹಾಗು ಇತ್ಯಾದಿ ತಂಡವನ್ನ ಒಂದು ಬಗೆಯಲ್ಲಿ ಹಣ ಹೊಡೆಯುವ ದಂದೆಯಾಗಿ ಪರಿವರ್ತಿಸಿ ಕೊಂಡಿರುವ ಅನೇಕ ಉಪಸಮಿತಿಯವರು ಹಣ ಜೇಬಿಗಿಳಿಸಿಕೊಳ್ಳುವ ನಾನಾ ವರಸೆಗಳನ್ನ ಪ್ರಯೋಗಿಸುತ್ತಿದ್ದಾರೆ. ಇವು ಮೇಲ್ನೋಟಕ್ಕೆ ಲೆಕ್ಕಕ್ಕೂ ಸಿಗಲ್ಲ, ಜಮೆಗೂ ಸಿಗಲ್ಲ.
ಪಾಸ್ ಗಳಂತೂ ಅದ್ವಾನವೆದ್ದು ಹೋಗಿದೆ. ಬಿಲ್ ಗಳ ಕಣ್ಕಟ್ಟು ವಿದ್ಯೆಗಳಿಂದಾಗಿ ದಸರಾವೆಂಬುದೇ ಗೊಟಕ್ ಎನ್ನುವಂತಾಗಿ,. ಉಸ್ತುವಾರಿ ಸೋಮಣ್ಣ ಏನೇ ಮಾಡಿದರು ಇದನ್ನೆಲ್ಲ ತಪ್ಪಿಸಲು ಆಗಿಯೂ ಇಲ್ಲ, ಆಗುವುದು ಇಲ್ಲ ಎಂಬಷ್ಟರ ಮಟ್ಟಿಗೆ ದಂದೆ ಚಿಗುರಿ ಕೊಂಡಿದೆ.