ಮೈಸೂರು ದಸರಾ, ಇತಿಹಾಸ, ತರ್ಕರಹಿತ ನಂಬಿಕೆ, ವಾಸ್ತವ, ವಿವಾದ…

ಈ ಸಲ ಚಾಮುಂಡಿ ವಿಗ್ರಹಕ್ಕೆ ಸರ್ಕಾರ ಅಥವಾ ಮೇಯರ್ ಕೊಟ್ಟ ಸೀರೆಯನ್ನೇ ಉಡಿಸಬೇಕು ಎಂದು ಸಚಿವ ಸೋಮಣ್ಣ ನಿರ್ಧರಿಸಿದ್ದಾರೆ. 

ಮೈಸೂರು ದಸರಾ, ಇತಿಹಾಸ, ತರ್ಕರಹಿತ ನಂಬಿಕೆ, ವಾಸ್ತವ, ವಿವಾದ…

ಮೈಸೂರು ದಸರಾವೆಂಬುದು ವಿವಾದಗಳ ಆಗರ. ವಿಜಯನಗರ ಕಾಲದ ಪರಂಪರೆ ಎಂಬುದರಿಂದ ಹಿಡಿದು ಸಿಂಹಾಸನ ಪಾಂಡವರದು, ಹಂಪಿಯದು ಎಂಬಿತ್ಯಾದಿ ಕಥಾನಕಗಳೆಲ್ಲ ಇವೆ. ಇದು ಮೈಸೂರಿಗೆ ಬರುವುದಕ್ಕೆ ಮುನ್ನ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿತ್ತೆಂಬ ನಂಬಿಕೆಗಳಿವೆ ಆದರೆ ಇದನ್ನ ಸಮರ್ಥಿಸುವ ಅಂಶಗಳೇ ಇಲ್ಲ

ಶ್ರೀರಂಗಪಟ್ಟಣವನ್ನ ರಾಜಧಾನಿ ಮಾಡಿಕೊಂಡಿದ್ದ ಒಂದನೇ ರಾಜ ಒಡೆಯರ್ 1610 ರಿಂದ ಅಲ್ಲೆ ದಸರಾ ಆಚರಿಸುತ್ತಿದ್ದರು, ಮೈಸೂರು ರಾಜಧಾನಿಯಾದಾಗ 1799 ರಿಂದ ಇಲ್ಲಿಯೇ ಮುಂದುವರಿಸಿಕೊಂಡು ಬಂದರೆಂಬ ಉಲ್ಲೇಖಗಳಿವೆ.  ಶ್ರೀರಂಗಪಟ್ಟಣದಲ್ಲಿ  ಆಚರಣೆಯಾಗುತ್ತಿದ್ದಾಗ ಮೆರವಣಿಗೆ ಹೊರಡುತ್ತಿದ್ದುದು ಇಲ್ಲೇ ಎಂದು ವಾದಿಸಿರುವ  ದಸರಾ ಮಂಟಪ ಈಗಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದ್ದು, ಕಳೆದ ಕೆಲ ವರ್ಷಗಳಿಂದ ಇಲ್ಲೂ ಸರ್ಕಾರಿ ವೆಚ್ಚ ದಸರಾ ನಡೆಯುತ್ತಿದೆ.  ಆದರೆ ಈ ದಸರಾ ಮಂಟಪ ಮತ್ತು ಶ್ರೀರಂಗಪಟ್ಟಣದ ನಡುವೆ ನದಿ ಹರಿಯುತ್ತಿದೆ. ಈ ನದಿಗೆ ವೆಲ್ಲೆಸ್ಲಿ ಸೇತುವೆ ಕಟ್ಟಿದ್ದು ಟೀಪೂ ಪತನಾನಂತರ 1803 ರಲ್ಲಿ.  ನಾಲ್ಕನೇ ಮೈಸೂರು ಯುದ್ದದಲ್ಲಿ ನದಿಯ ಪ್ರವಾಹ ಇಳಿಯುವುದಕ್ಕಾಗಿ ಇಂಗ್ಲಿಷ್ ಸೈನಿಕರು ಕಾಯುತ್ತಿದ್ದರು, ಎಷ್ಟೋ ಮಂದಿ ಪ್ರವಾಹದಲ್ಲಿ ಕೊಚ್ಚಿಹೋದರು ಎಂಬ ಉಲ್ಲೇಖಗಳೂ ಇವೆ. ಅಂದರೆ ಆಗ ನದಿ ದಾಟಿಯೇ ಹೋಗಬೇಕಿತ್ತು. ಅಂದ ಮೇಲೆ ದಸರಾದಲ್ಲಿ  ಆರತಿ ಹಿಡಿದ ಮಹಿಳೆಯರು, ಕುದುರೆ ಆನೆಗಳು ಹೇಗೆ  ನದಿ ದಾಟಿ ಹೋಗುತ್ತಿದ್ದರೆಂಬುದಕ್ಕೆ ಉತ್ತರಗಳಿಲ್ಲ. 

ಮತ್ತೊಂದು ವಾದದ ಅನುಸಾರ ಕೋಟೆಯೊಳಗಿಂದಲೇ ದಸರಾ ಮೆರವಣಿಗೆ  ದರಿಯಾ ದೌಲತ್ ಬಳಿಯಿದ್ದ ಬನ್ನಿಮಂಟಪಕ್ಕೆ ಹೋಗುತ್ತಿತ್ತು. ಇದನ್ನ ಗಣನೆಗೆ ತೆಗೆದುಕೊಂಡರೂ, ಕೋಟೆಗಿದ್ದ ಬಾಗಿಲು ಆಗ ಅತಿ ಚಿಕ್ಕದು. ಈಗಿರುವ ದೊಡ್ಡದಾದ ಆನೆಬಾಗಿಲು ಕಟ್ಟಿಸಿದ್ದು ಟೀಪೂಸುಲ್ತಾನ್ 1792 ರಲ್ಲಿ. ಹೀಗಾಗಿ ದಸರಾ ನಡೆಯುತ್ತಿದ್ದ ಸಮಯದಲ್ಲಿ ಚಿಕ್ಕ ಬಾಗಿಲಲ್ಲೇ ಆನೆ ಹೋಗುತ್ತಿದ್ದುದು ಹೇಗೆ ಎಂಬ ಪ್ರಶ್ನೆಗಳಿವೆ, ಉತ್ತರಗಳಿವೆ. ಇದಕ್ಕೆ ಸಮಾಧಾನಕರವಾಗಿರುವ ಒಂದಂಶವೆಂದರೆ ರಾಜ ಕುದುರೆ ಮೇಲೆ ಕೋಟೆಯಿಂದ ಹೊರಕ್ಕೆ ಬರುತ್ತಿದ್ದ, ಅಲ್ಲಿ ಸಿದ್ದವಾಗಿರುತ್ತಿದ್ದ ಆನೆಯನ್ನೇರಿ ಬನ್ನಿಮಂಟಪಕ್ಕೆ ಹೋಗುತ್ತಿದ್ದಿರಬಹುದು ಎಂಬ ಊಹೆಗಳನ್ನ ಮಾಡಲಾಗಿದೆ. ಇದನ್ನಷ್ಟು ಒಪ್ಪಬಹುದಾದರೂ, ಖಚಿತ ಇಲ್ಲ. ಹೀಗಿದ್ದರೂ ಶ್ರೀರಂಗಪಟ್ಟಣದ ಸಮೀಪದ ದಸರಾ ಮಂಟಪದ ಬಳಿಯೂ ದಸರಾ ಆಚರಿಸಲಾಗುತ್ತಿದೆ! ಇಲ್ಲಿ ದಸರಾ ನಡೆಯುತ್ತಿದ್ದಕ್ಕೆ ಆಧಾರಗಳೇ ಇಲ್ಲ.

ಚಾಮುಂಡೇಶ್ವರಿ ವಿಗ್ರಹ 

ಚಾಮುಂಡೇಶ್ವರಿ ಮತ್ತು ಮಹಿಷನ ಕುರಿತ ವಾದ ವಿವಾದಗಳು ರಂಗೇರಿವೆ. ಅದನ್ನ ಬಿಟ್ಟು ನೋಡುವುದಾದರೆ ಜನರ ದಸರಾವನ್ನಾಗಿ ಆಚರಿಸಲು ಶುರುಮಾಡಿದಾಗಿನಿಂದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನ ಕೂರಿಸಿ, ಮೆರೆಸುವುದು ನಡೆದುಬರುತ್ತಿದೆ. ಈ ವಿಗ್ರಹಕ್ಕೆ ಉಡಿಸುವ ಸೀರೆ ಯಾರದ್ದು ಎಂಬ ವಿವಾದಗಳು ಇತ್ತೀಚೆಗೆ ಗಂಭೀರ ರೂಪ ಪಡೆದಿವೆ.

ನವರಾತ್ರಿ ಸಂದರ್ಭದಲ್ಲಿ ಚಾಮುಂಡಿ ವಿಗ್ರಹಕ್ಕೆ ನಾವು ಕೊಡಿಸುವ ಸೀರೆ ಉಡಿಸಬೇಕೆಂಬುದು ದೊಡ್ಡ ಮಟ್ಟದ ರಾಜಕೀಯ ಪ್ರಭಾವಕ್ಕೆ ಒಳಗಾಗಿರುವಂಥದ್ದು. ಕಳೆದ ಸಲ ಜಂಬೂಸವಾರಿಯಲ್ಲಿ ಸಾಗುವ ಚಾಮುಂಡಿಗೆ ಉಡಿಸಿದ್ದ ಸೀರೆ ಕೊಟ್ಟಿದ್ದು  ಸಿದ್ದರಾಮಯ್ಯ ಪತ್ನಿ. ಅಷ್ಟರೊಳಗೆ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮತ್ತು ಮೈಸೂರಿನ ಮೇಯರ್ ಆಗಿದ್ದವರ ಮೂರೂ ಸೀರೆಗಳೂ ಬಂದವು. ಅರ್ಚಕರಿಗೆ ಕಸಿವಿಸಿಯಾಗಿ ಕೊನೆಗೆ, ಉಡಿಸಿದ್ದ ಸಿದ್ದು ಪತ್ನಿ ಕೊಡಿಸಿದ್ದ ಸೀರೆ ಮೇಲೆ ಅನಿತಾ ಕುಮಾರಸ್ವಾಮಿ ಸೀರೆಯನ್ನ ಅಂಗವಸ್ತ್ರದಂತೆ ಇಳಿ ಬಿಡಲಾಗಿತ್ತು.

ಇಂಥ ಪ್ರಭಾವ ಬೇಡವೇ ಬೇಡ, ಸರ್ಕಾರದ ಅಥವಾ ಮೇಯರ್ ಕೊಟ್ಟ ಸೀರೆಯನ್ನೇ ಉಡಿಸಬೇಕು ಎಂಬ ನಿರ್ಣಯ ಸಚಿವ ಸೋಮಣ್ಣ ಈ ಸಲ ತೆಗೆದುಕೊಂಡಿದ್ದಾರೆ.

ದರ್ಬಾರ್ ಹಾಲ್

ಅಧಿಕಾರಿಗಳ ದರ್ಬಾರ್ ಎಂಬ ಹಣೆಪಟ್ಟಿ ಯಾವತ್ತಿಗೂ ಕಿತ್ತುಕೊಳ್ಳಲು ಆಗದ ಸ್ಥಿತಿಯಲ್ಲಿರುವ ದಸರಾ ಜಂಬೂಸವಾರಿ ದಿನ, ಅರಮನೆ ದರ್ಬಾರ್ ಹಾಲ್‍ನಲ್ಲಿ ರಾಜ ಕುಟುಂಬದವರು ಮಾತ್ರವೇ ಕೂರುತ್ತಿದ್ದರು. ಇವರ ಸಂಖ್ಯೆ ಇಪ್ಪತ್ತನ್ನೂ ಮೀರುತ್ತಿರಲಿಲ್ಲ. ಆದರೆ ಆರಕ್ಷಕ ಆಯುಕ್ತನಾಗಿದ್ದ ಸಲೀಂ ಅವಧಿಯಲ್ಲಿ ನ್ಯಾಯಾಧೀಶರ ಕುಟುಂಬ ವರ್ಗದವರನ್ನೆಲ್ಲ ಇಲ್ಲಿ ಕೂರಿಸಿ, ಬಿಸ್ಕತ್, ಚಾಕೊಲೊಟ್, ನೀರು ಇತ್ಯಾದಿಯಂಥದ್ದನ್ನೆಲ್ಲ ಕೊಡುವುದಕ್ಕೆ ಆರಂಭಿಸಿದ್ದರಿಂದಾಗಿ, ಇಲ್ಲೀಗ ನ್ಯಾಯಾಧೀಶರ ಬೆಂಗಾವಲಿಗರು, ಮತ್ತವರ ಕುಟುಂಬದವರು ಇತರ ಗಣ್ಯರೆಲ್ಲ ಸೇರಿ ಇನ್ನೂರಕ್ಕೂ ಹೆಚ್ಚು ಜನ ಕೂರುವಂತಾಗಿರುವುದು ಮಾತ್ರವಲ್ಲ, ಅವರು ತಿಂದು ಬಿಸಾಡುವ ಪ್ಲಾಸ್ಟಿಕ್, ಕಾಗದಗಳೆಲ್ಲ ದರ್ಬಾರ್ ಹಾಲ್‍ನಲ್ಲಿ ವಿಜೃಂಭಿಸುವಂತಾಗಿದೆ.  ಇಲ್ಲಿ ಬೇರ್ಯಾರಿಗೂ ಕೂರಿಸಲು ಬಿಡಬೇಡಿ ಎಂಬ ಅಹವಾಲು ಸಚಿವ ಸೋಮಣ್ಣಗೆ ಸಲ್ಲಿಕೆಯಾಗಿದೆ. ಫಲಿತಾಂಶ ಜಂಬೂ ಸವಾರಿಯಂದು ಗೊತ್ತಾಗುತ್ತೆ.

ಅಲಮೇಲಮ್ಮ ಕತೆ

ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ದೊರೆಗೆ ಮಕ್ಕಳಾಗದಿರಲಿ....ಎಂಬ ಶಾಪ ಯದು  ವಂಶಕ್ಕಿರುವ ಕತೆಗಳೆಲ್ಲ ಹರಿದಾಡುತ್ತಿವೆ. ಶ್ರೀಕಂಠದತ್ತ ಒಡೆಯರ್ ಆ ಅಲಮೇಲಮ್ಮ ಆತ್ಮದ ಜತೆ ಮಾತಾಡುತ್ತಿರುತ್ತೇನೆ ಎಂದೆಲ್ಲ ಹೇಳಿಕೊಂಡಿದ್ದೂ ಉಂಟು.

ಅಷ್ಟಕ್ಕೂ ಈ ಅಲಮೇಲಮ್ಮ, ಶ್ರೀರಂಗಪಟ್ಟಣ ಆಳುತ್ತಿದ್ದ ಶ್ರೀರಂಗರಾಯರ ಪತ್ನಿ. ಈ ಅವಧಿಯಲ್ಲಿ ಮೈಸೂರು ರಾಜನಾಗಿದ್ದು ರಾಜ ಒಡೆಯರ್. ಒಂದು ಕಥಾನಕದನುಸಾರ ಶ್ರೀರಂಗರಾಯರಿಗೆ ಬೆನ್ನುಫಣಿ ರೋಗ ಬಂದು ಸ್ನೇಹಿತರಾಗಿದ್ದ ರಾಜ ಒಡೆಯರ್ ಗೆ ಆಡಳಿತವನ್ನೊಪ್ಪಿಸಿ ಪತ್ನಿ ಸಮೇತ ಮಾಲಂಗಿಗೆ ಹೋಗಿಬಿಟ್ಟರು. ಇನ್ನೊಂದರ ಅನುಸಾರ ಒಡೆಯರ್ ಯುದ್ದ ಮಾಡಿ ಶ್ರೀರಂಗರಾಯರನ್ನ ಓಡಿಸಿದರು. ಆಗ ಅಲಮೇಲಮ್ಮ ಒಡವೆಗಳನ್ನ ಶ್ರೀರಂಗನಾಥ ದೇವಾಲಯಕ್ಕೆ ಕೊಡುವಂತೆ ರಾಜ ಒಡೆಯರ್ ಬೆನ್ನು ಬಿದ್ದರು. ಅದಕ್ಕೊಪ್ಪದ ಅಲಮೇಲಮ್ಮ ಅದನ್ನೆಲ್ಲ ಮಾಲಂಗಿ ಬಳಿ ನೀರಿಗೆಸೆದು, ರಾಜನಿಗೆ ಶಾಪವಿತ್ತು ತಾನೂ ನೀರಿಗೆ ಹಾರಿಕೊಂಡರು.

ಇವೆರಡು ಭಿನ್ನ ಕತೆಯಾದರೂ, ಅಲಮೇಲಮ್ಮ ಇದ್ದರು. ತಮ್ಮ ವಂಶಕ್ಕೇ ಶಾಪ ಕೊಟ್ಟ ಅವರನ್ನ ಯದು ಕುಲದವರು ಹೇಗೆ ಪರಿಗಣಿಸುತ್ತಾರೆ ಎಂಬುದೂ ಕುತೂಹಲಕಾರಿಯಾದುದು.

ಅಮಲ ದೇವತೆ ಎಂದು ಕರೆಯಲ್ಪಡುವ ಮುಕ್ಕಾಲು ಅಡಿ ಎತ್ತರದ ವಿಗ್ರಹ, ಅರಮನೆ ಆವರಣದ ಸಣ್ಣ ಕೊಠಡಿಯಲ್ಲಿರಿಸಲಾಗಿದೆ. ಇದಕ್ಕೆ ಪೂಜಿಸುವ ತಮ್ಮಡಿ ಕುಟುಂಬವೂ ಇದೆ. ದಸರಾ ವೇಳೆಯಲ್ಲಿ ಅರಮನೆಯಲ್ಲಿ ಎಲ್ಲಾ ಶಕ್ತಿ ದೇವತೆಗಳಿಗೂ ಪೂಜೆ ಸಲ್ಲಿಸಲಾಗುವುದರಿಂದ, ಬೆತ್ತದ ಬುಟ್ಟಿಯೊಂದರಲ್ಲಿ ಅಮಲ ದೇವತೆ ವಿಗ್ರಹವನ್ನ ತಂದು, ಶಾರದೆ ಮಂಟಪದ ಕೆಳಗಿಟ್ಟು ಸುತ್ತಲೂ ಬಟ್ಟೆ ಕಟ್ಟಿ ಮರೆಮಾಡಲಾಗುತ್ತೆ. ರಾಜ ವಂಶದವರು ಶಾರದೆಗೆ ಪೂಜೆ ಮಾಡುವ ಮೂಲಕವೇ,ಮರೆಯಾಗಿ ಬುಟ್ಟಿಯಲ್ಲಿರುವ ಅಮಲ ದೇವತೆಗೂ ಪೂಜೆ ಸಲ್ಲಿಸುತ್ತಾರೆ. ಇದನ್ನ ನೋಡಲ್ಲ. ನವರಾತ್ರಿ ಬಳಿಕ ಅಮಲ ದೇವತೆ ವಿಗ್ರಹವನ್ನ ಮತ್ತೆ ಸ್ವಸ್ಥಾನಕ್ಕೆ ಸೇರಿಸಲಾಗುತ್ತೆ.