ದಸರಾ  'ಸ್ತಬ್ದ'ತೆಯಲ್ಲೇ ಪ್ರಶ್ನೆಗಳ   `ಉದ್ಬವ'

ದಸರಾ  'ಸ್ತಬ್ದ'ತೆಯಲ್ಲೇ  ಪ್ರಶ್ನೆಗಳ   `ಉದ್ಬವ'

ಸರ್ಕಾರದ ಅನುದಾನ,  ಇಲಾಖೆಗಳು ಮಾಡುವ ವೆಚ್ಚ ಎಲ್ಲಾ ಸೇರಿ ಸುಮಾರು ನಲವತ್ತು ಕೋಟಿರುಪಾಯಿ ಖರ್ಚಾಗುವ ದಸರಾ ಎಂದಿನಂತೆ ಬಂದು ಹೋಗಿಯಾಗಿದೆ.   ಆದರೆ ಜಂಬೂ ಸವಾರಿಯಲ್ಲಿ ತಮ್ಮ ತಮ್ಮ ಜಿಲ್ಲೆಯ ಸಾಧನೆ,  ಪ್ರೇಕ್ಷಣೀಯ ಸ್ಥಳಗಳನ್ನೋ ಆದ್ಯತೆಯಾಗಿ ತೋರಿಸಬೇಕಾಗಿದ್ದ ಎಷ್ಟೋ ಜಿಲ್ಲೆಗಳು ಚಂದ್ರಯಾನ,  ಏರ್ ಸ್ಟ್ರೈಕ್,  ಹೆಣ್ಣುಮಕ್ಕಳ ರಕ್ಷಿಸಿ ಇತ್ಯಾದಿಯಂಥ ಕೇಂದ್ರಸರ್ಕಾರದ ಯೋಜನೆಗಳನ್ನ ಸ್ತಬ್ದಚಿತ್ರವಾಗಿಸಿದರೆ,

ಓರ್ವ ಮಠಾಧಿಪತಿಯದಿದ್ದರೆ ಅನರ್ಥವಾದೀತು ಎಂಬ ಮುಂದಾಲೋಚನೆಯಿಂದ ಉಡುಪಿ,  ಆದಿಚುಂಚನಗಿರಿ,  ಸುತ್ತೂರು,  ಸಿದ್ದಗಂಗೆ ಇವೆಲ್ಲದರ ಚಿತ್ರಗಳ ಮೆರಣಿಗೆ ಮಾಡಿಸಲಾಯಿತು.

ಅಲ್ಲಿಗೆ ಇದರ ಹಿಂದೆ ಇರುವ ಕೇಸರಿ ಮತ್ತು ಕೇಂದ್ರ ಸರ್ಕಾರವನ್ನ ಮೆರೆಸುವ ಇರಾದೆ ಕಂಡೂ ಕಾಣದಂತೆ ಅಡರಿಕೊಂಡಿತ್ತು.

ಸ್ತಬ್ದಚಿತ್ರವೆಂಬುದು ರೇಡಿಯೋ, ಸಿನಿಮಾ, ದೂರದರ್ಶನ ಇಲ್ಲದ ಕಾಲದಲ್ಲಿ ಜನರಿಗೆ ಮನರಂಜನೆ ಮಾಧ್ಯಮವಾಗಿ ಬೆಳೆದು ಬಂದ ಪ್ರದರ್ಶಕರ ಪ್ರಕಾರ.  ಹದಿನೆಂಟು ಹತ್ತೊಂಬತ್ತನೇ ಶತಮಾನದಲ್ಲಿ ನಾಟಕಗಳೇ ಜನರ ಮನರಂಜನೆಗಾಗಿ ಇತ್ತು.  ಆಗ ಬೆತ್ತಲೆ ಅರೆಬೆತ್ತಲೆಯೇ ಪ್ರಧಾನವಾಗಿತ್ತು

ಅಮೆರಿಕ ಮತ್ತು ಇಂಗ್ಲೆಂಡ್ ನಲ್ಲಿ ಇಂಥ ಬೆತ್ತಲೆ ತನಕ್ಕೆ ಸೆನ್ಸಾರ್ ಹಾಕಿದ್ದರ ಫಲವಾಗಿ  `ಜೀವಂತ ಚಿತ್ರ' ಎಂಬರ್ಥ ಕೊಡುವ ಫ್ರೆಂಚ್ ನ ಪದಗಳಾದ ಟ್ಯಾಬ್ಯೋವಿವಾಂಟ್ ಎಂಬುದು ಆವಿಷ್ಕಾರಗೊಂಡಿತು.

ನಟ ನಟಿಯರೇ ನಾಟಕದ ಒಂದು ದೃಶ್ಯದಲ್ಲಿನಂತೆ ವಿನ್ಯಾಸ ಮಾಡಿಕೊಂಡು ಆಕರ್ಷಕವಾದ ಭಂಗಿಯಲ್ಲಿ ಮೌನವಾಗಿ ನಿಲ್ಲುತ್ತಿದ್ದರು.   ಸಿರಿವಂತರ ಮದುವೆ ಇತ್ಯಾದಿ ಸಂದರ್ಭದಲ್ಲಿ ಈ ರೀತಿಯ ಸ್ತಬ್ದ ಚಿತ್ರಗಳು ಮಾಮೂಲಿಯಾಗಿದ್ದವು. ವಿಂಡ್ ಮಲ್ ನಂಥ ಕ್ಲಬ್ ಕೂಡ ಆಕರ್ಷಣೆಗಾಗಿ ಸ್ತಬ್ದಚಿತ್ರ ಬಳಸುತ್ತಿತ್ತು. ಒಂದು ಹಂತದಲ್ಲಿ ಕರಿಯ ಜನರನ್ನ ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೂ ಸ್ತಬ್ದಚಿತ್ರಗಳು ಬಳಕೆಯಾಗಿದ್ದಂತೆಯೇ,  ಪುರುಷರನ್ನ ಆಕರ್ಷಿಸಲು ಇಲ್ಲೂ ಕೂಡ ಮಹಿಳೆಯರನ್ನ ಬೆತ್ತಲೆ ಅರೆಬೆತ್ತಲೆಯಾಗಿ ನಿಲ್ಲಿಸುತ್ತಿದ್ದುದು ಉಂಟು.  1900  ರಲ್ಲಿ ಜರ್ಮನಿಯ ನೃತ್ಯಗಾತಿ ಓಲ್ ಗಡೆಸ್ ಮಾಡಿ ಕೊಟ್ಟಿದ್ದ `ಈವನಿಂಗ್ ಆಫ್ಬ್ಯೂಟಿ'   ಎಂಬಂಥದ್ದುಪ್ರಖ್ಯಾತವಾದುದು.  

ವಿಕ್ಟೋರಿಯಾ ರಾಣಿ ಅವಧಿಯಲ್ಲಿ ಪ್ರದರ್ಶಕ ಕಲೆಯಾಗಿ ಬೆಳೆದ ಇದರ ಕಲಿಕೆಗಾಗಿಯೇ ಶಾಲೆಗಳಿವೆ.  ಇಂಗ್ಲೆಂಡ್ ನಿಂದ ಅಮೆರಿಕವನ್ನೂ ಇದು ವ್ಯಾಪಿಸಿಕೊಂಡಿತು.  ಮಹಿಳೆಯರಿಗೆ ಮತದಾನದ ಹಕ್ಕುಬೇಕು ಎಂದು ಹೋರಾಟಗಾರ್ತಿಯರು ಸ್ತಬದ್ದಚಿತ್ರಗಳನ್ನ ಬಳಸಿಕೊಂಡಂತೆ,  1913 ರಲ್ಲಿ ಜವಳಿ ಗಿರಣಿಗಳ ಕಾರ್ಮಿಕರು ತಮ್ಮ ಶೋಷಣೆ ವಿರುದ್ದ ಸ್ತಬ್ಧಚಿತ್ರಗಳನ್ನ ಬಳಸಿಕೊಂಡಿರುವ ಉದಾಹರಣೆಗಳು ಇವೆ.

ಈಗ ತಂತ್ರಜ್ಞಾನ ಬೆಳೆದು ಟ್ಯಾಬ್ಲೋ ಹೆಸರಿನ ತಂತ್ರಾಂಶವೇ ಬಂದಿದೆ.  ಬೆರಳ ತುದಿಯಲ್ಲೇ ಮನರಂಜನೆ ಮಾಹಿತಿಗಳು ದೊರಕುತ್ತಿವೆ.  ಆದರೂ ಸ್ತಬ್ದಚಿತ್ರಗಳು ಮಹತ್ವ ಕಳೆದು ಕೊಂಡಿಲ್ಲ.  ತಮ್ಮ ತಮ್ಮ ಸಾಧನೆ ಹೇಳಲು,  ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಬಳಕೆಯಾಗಬೇಕಾದ ಇವುಗಳು ಕೂಡ ರಾಜಕೀಯ ಪಕ್ಷಗಳ ವರ್ಣನೆಗೆ ಬಳಕೆಯಾಗುತ್ತಿರುವುದು ವಾಸ್ತವ. ನಾಡಹಬ್ಬ ಎಲ್ಲಾ ಧರ್ಮಕ್ಕೂ ಸೇರಿದ್ದಾಗಿರುವುದರಿಂದ ಅಲ್ಪಸಂಖ್ಯಾತರ ಬಗೆಗಿನ ಸ್ತಬ್ಧಚಿತ್ರಗಳೇಕಿಲ್ಲ ಎಂಬ ಪ್ರಶ್ನೆಗಳೂ ಇವೆ.

ವಾಸ್ತವವನ್ನ ಕೆದಕುತ್ತಾ ಹೋದರೆ,  ಆನೆ ಮೇಲೆ ಅಂಬಾರಿ ಕೂರಿಸಲು ಇಡುವ ಹಾಸಿಗೆ(ಗಾದಿ), ಕುಚ್ಚುಗಳು ಇತ್ಯಾದಿಯನ್ನ ಇವತ್ತಿಗೂ ಸಿದ್ದಗೊಳಿಸುತ್ತಿರುವವರೇ ಮುಸ್ಲಿಮರು. ಹಿಂದೂ ದೇವತೆಗೆ ಮುಸ್ಲಿಮರು ಏಕೆ ಎಂಬ ತಕರಾರನ್ನ ಬಹಳ ವರ್ಷಗಳ ಹಿಂದೆಯೇ ತೆಗೆಯಲಾಗಿತ್ತಾದರೂ,  ಇಂಥ ಕೆಲಸದಲ್ಲಿ ಅವರೇ ನಿಷಾತರು ಬೇರೆಯವರು ಮಾಡಲಾಗಲ್ಲ ಎಂಬ ನಿಜದರ್ಶನ ಮಾಡಿಸಿದಾಗ ಮೌನವಾದರು.

ಇದಕ್ಕೂ ಹಿಂದಿನ ಕಾಲಘಟ್ಟದಲ್ಲಿ ಸಾಮಾಜಿಕ ನ್ಯಾಯವನ್ನ ಪ್ರಥಮವಾಗಿ ಅಳವಡಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್,  ದರ್ಬಾರ್ ಹಾಲ್ ನಲ್ಲಿ ಆಂಗ್ಲರು ಕುರ್ಚಿಯ ಮೇಲೆ, ಸ್ಥಳೀಯರು ನೆಲದ ಮೇಲೆ ಕೂರುತ್ತಿದ್ದುದು ಅಸಮಾನತೆಯ ಸಂಕೇತ ಎಂದು ಭಾವಿಸಿ,  ಎಲ್ಲರಿಗೂ ಕುರ್ಚಿ ಮೇಲೇ ಕೂರುವ ವ್ಯವಸ್ಥೆ ತಂದರು.   ದಲಿತರಿಗೆ ಪ್ರವೇಶ ಇಲ್ಲದಿದ್ದಾಗ ಆ ಸಮುದಾಯದ ಮರಿದಂಡಯ್ಯ ಎಂಬುವವರನ್ನ ಆಹ್ವಾನಿಸಿ ಕರೆಸಿಕೊಂಡಿದ್ದೂ ಇವರೇ. ರಾಜರ ಅಂಗರಕ್ಷಕ ಪಡೆಯವರಿಗಾಗಿ ನಿರ್ಮಾಣವಾದ ಜಾಕಿ ಕ್ವಾರ್ಟಸ್ ನಲ್ಲಿ ಸಣ್ಣಗುಡಿಯನ್ನೂ ಕಟ್ಟಲಾಯಿತು.  ಆದರೆ ಮುಸ್ಲಿಮರಿಗೇಕಿಲ್ಲ ಎನಿಸಿ, ಚಾಮುಂಡಿ ಬೆಟ್ಟದ ತಪ್ಪಲಿಗೆ ಹೊಂದಿ ಕೊಂಡಂತೆ ಬೊಕ್ಕಸದಿಂದಲೇ ಮಸೀದಿ ಕಟ್ಟಿಸಿ ಕೊಟ್ಟಿದ್ದ ಉದಾಹರಣೆಗಳು ಇವತ್ತಿಗೂ ಜೀವಂತವಾಗಿವೆ.

1936 ರಲ್ಲಿ ಮಹಾರಾಜರು ಅಂಬಾರಿ ಹಿಂದಿನ ಭಾಗದಲ್ಲಿ ದಿವಾನ ಮಿರ್ಜಾ ಇಸ್ಮಾಯಿಲ್ ರನ್ನೂ ಕೂರಿಸಿಕೊಂಡಿದ್ದರು.  ಇದು ಮೆರವಣಿಗೆ ನೋಡಲು ನೆರೆದಿದ್ದ ಜನರಿಗೆ ಗೊತ್ತಾಗಿ ತೀವ್ರ ಗಲಾಟೆ ನಡೆಸಿದ್ದರು.  ಆಗಿನಿಂದ ತನ್ನ ಸೋದರಮಾವನನ್ನೇ ಕೂರಿಸಿಕೊಳ್ಳುವ ಪದ್ದತಿ ಬಂತು.(ಈಗಿಲ್ಲ) 1972  ರಲ್ಲಿ ಸರ್ಕಾರವೇ ನಾಡಹಬ್ಬ ಆಚರಿಸುತ್ತಿರುವುದರಿಂದ ಚಾಮುಂಡೇಶ್ವರಿ ವಿಗ್ರಹವನ್ನ ಇಡಲಾಗುತ್ತಿದೆ.

ಹೈದರಾಲಿ ಅವಧಿಯಲ್ಲಿ ರಾಜನಿಲ್ಲದಿದ್ದ ಮೂರು ವರ್ಷಗಳ ಕಾಲ ರಾಜಮನೆತನದವರನ್ನೇ ಅಂಬಾರಿಯಲ್ಲಿ ಕೂರಿಸಿ,  ತಾನು ಅದರಿಂದೆ ಇನ್ನೊಂದು ಆನೆ ಮೇಲೆ ಕೂತಿರುತ್ತಿದ್ದ. ಇದಕ್ಕೆ  1796 ರಲ್ಲಿ ಖಾಸಾ ಚಾಮರಾಜ ಒಡೆಯರ್ ನ್ನ ಕೂರಿಸಿದ್ದುದರ ಇತಿಹಾಸವಿದೆ.  ಟಿಪ್ಪು ಆಳ್ವಿಕೆಯಲ್ಲಿ ರಾಜರನ್ನ ಮೆರೆಸುವ ಇಂಥ ಮೆರವಣಿಗೆ ಇರಲಿಲ್ಲ. 

ಶತಮಾನಗಳ ಹಿಂದಿನ ಘಟನಾವಳಿಗಳು ಇವಾದರೆ, ಧರ್ಮಸಿಂಗ್ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ತನ್ವಿರ್ ಸೇಠ್ ಮುಂಚೂಣಿಯಲ್ಲೆ ದಸರಾ ನಡೆಯಿತು,   ಅವರಾಗ ಸಂಪ್ರದಾಯಕ ಪೂಜೆಗಳಲ್ಲೂ ಭಾಗವಹಿಸಿದ್ದರು (ದಸರಾ ಉದ್ಬಾಟಕ ಡಾ. ಬರಗೂರು ರಾಮಚಂದ್ರಪ್ಪ ಬೆಟ್ಟದಲ್ಲಿ ದೇವಾಯಲಕ್ಕೆ ಹೋಗಿರಲಿಲ್ಲ) ಧರ್ಮ ನಿರಪೇಕ್ಷಿತತೆಯ ಕುರಿತಂತೆಯೂ ದಸರ ಮತ್ತು ರಾಜಮನೆತನದ ಇತಿಹಾಸ ಪುಟಗಳಲ್ಲಿ ದಾಖಲುಗಳಿವೆ.   ಆದರೆ ಇತ್ತೀಚೆಗೆ ಇದು ಒಂದು ಧರ್ಮದ ಪ್ರತೀಕ ಎಂದಾಗಿಸುತ್ತಿದೆ.  ಇದನ್ನೇ ಸ್ತಬ್ದಚಿತ್ರಗಳ ವಿಚಾರದಲ್ಲು ತಾರತಮ್ಯ ಮಾಡಲಾಗುತ್ತಿದೆ.  ಮತ್ತೊಂದು ಧರ್ಮದ ಬಗ್ಗೆ,  ಸಾಮರಸ್ಯ ಸಾರುವಂಥದ್ದರ ಒಂದಾದರೂ ಸ್ತಬ್ದಚಿತ್ರ ಇರಬಾರದಾ ಎಂಬ ಪ್ರಶ್ನೆಗಳ ಮೆರವಣಿಗೆ ಹೊರಟಿದೆ.