My cup of coffee ಕನಸುಗಳ ಕಲರವ (Cup 4)

My cup of coffee ಕನಸುಗಳ ಕಲರವ (Cup 4)

ತತ್ವಾರದಲ್ಲೂ ವೀಕ್ ಎಂಡ್ ಸಂಭ್ರಮ

‘ಇಲ್ಲ ಕಣೊ. ಆಗಲ್ಲ ಅಂದರೆ ಆಗಲ್ಲ.’ ಇಷ್ಟು ಹೇಳಿದ ಮೇಲೂ ಮಾತು ಕೇಳಲ್ಲ ಅಂದರೆ ಇನ್ನೂ ಹೇಗೆ ಹೇಳಲಿ? ಕೆಟ್ಟ ಹಟ ನಿಂದು ಅಂದ್ರೆ, ಕೋಪಕ್ಕೇನೂ ಕಮ್ಮಿಯಿಲ್ಲ. ’ಸಾತ್ವಿಕ ಹಟ ನಂದು’ ಎನ್ನುವ ಜೋರು ಬೇರೆ. ನೋವು ಕೊಡ್ತಿದಿಯಾ ಪ್ಲೀಸ್. ಎಷ್ಟು ಸತಾಯಿಸುವೆ? ನಾನೇನಾದರೂ ‘ಜೀವ ತಿನ್ನುವೆ’ ಅಂದರೆ ಸಾಕು. ಏನೊ ಬಾಯಿ ತಪ್ಪಿ ಅಂದ ಮಾತ್ರಕ್ಕೆ, ಆ ಎರಡು ಶಬ್ದಗಳನ್ನೇ ಹಿಡಿದುಕೊಂಡು ರಾದ್ಧಾಂತ ಮಾಡಿ ಜಗಳವಾಡಿದೆ. ನನಗೆ ಸುಸ್ತಾಗಿ ಹೋಯಿತೊ. ಈ ಕಡೆ ಕೆಲಸ ಮಾಡಲೆ? ನಿನ್ನೊಂದಿಗಿನ ಡಿಫರೆನ್ಸ್ ಬಗೆ ಹರಿಸಿಕೊಳ್ಳಲೆ? ಯಾಕೊ ಹೀಗೆ ಮಾಡ್ತೀಯ? ನಂಗೊತ್ತು ಬಿಟ್ಟಿರಲಾರದ ಸಂಕಟಕ್ಕೆ ನೀ ಹೀಗೆಲ್ಲಾ ಆಡೋದು.

 

ನಿನಗೆ ಯಾಕೋ ಭ್ರಮೆ ಆಗುತ್ತೆ. ನಾ ನಿನ್ನ ಪ್ರೀತಿಸುವುದೇ ಇಲ್ಲ ಅಂತ. ಆಗ ನೀನು ಹೇಳಿದ್ದು ಚೆನ್ನಾಗಿ ನೆನಪಿದೆ. ‘ನಿನ್ನ ನಾನೇ ಪ್ರೀತಿ ಮಾಡೋದು. ನಿನಗೆ ಪ್ರೀತಿ ತೊಗೊಳಕ್ಕೆ ಬರುತ್ತೆ ಅಷ್ಟೆ. ನನಗಿರೋ ತೀವ್ರತೆ ನಿನಗಿಲ್ಲ. ಯಾವಾಗಲೂ ಭೇಟಿನ ಮುಂದೆ ಮುಂದೆ ದೂಡೋದೊಂದೆ ಗೊತ್ತು. ತುಂಬಾ ಹಚ್ಕೊಂಡಿದಿನಲ್ಲ ಅದಕ್ಕೆ ಸೊಕ್ಕು, ಧಿಮಾಕು. ಒಮ್ಮೆ ಮುಖ ತಿರುಗಿಸಿ ಹೋದೆ ಅಂದರೆ ಮುಗೀತು, ಯಾವತ್ತು ನಿನಗೆ ಮುಖ ತೋರಿಸಲ್ಲ.’ ಹೀಗೆಲ್ಲ ಹೇಳೊ ನೀ ಒಂದು ದಿನ ಮಾತಾಡದೆ ಸುಮ್ನಿರು ನೋಡೋಣ. ಮುಖ ತೋರಿಸದವನ ಮುಖ ನೋಡು. ಸಿಟ್ಟಲ್ಲಿ ಹೇಳಿ, ಹೇಗೆ ಗುರಾಯಿಸ್ತೀಯ, ಭಯ ಹುಟ್ಟಿಸೊ ಹಾಗೆ.

 

ನನಗೆ ನಿನ್ನ ಪ್ರೀತಿನೂ ಗೊತ್ತು ಕೋಪನೂ ಗೊತ್ತು. ಇದೆಲ್ಲ ಅಸಹಾಯಕತೆ ಬಿಡು. ಲೈಫ್ ಸರಿಯಾಗಿ ಒಂದು ಹಂತ ತಲುಪಿ ನಿಲ್ಲುವವರೆಗೆ ಇದು ಇದ್ದದ್ದೇ. ಎಲ್ಲಾ ದಿನಗಳು ಒಂದೇ ತರಹ ಇರುವುದಿಲ್ಲ. ಹರಿಯುವ ನದಿಯ ಹಾಗೆ. ಎಲ್ಲವೂ ಸರಿ ಹೋಗುವುದು. ಆ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬೇಕಷ್ಟೆ.

 

‘ನಮ್ಮ ಪರಿಸರ, ಪರಿಸ್ಥಿತಿ ಎಲ್ಲಾ ಅರ್ಥ ಮಾಡಿಕೊಂಡು ಬದುಕುವುದನ್ನು ಕಲಿಯಬೇಕು ತಾನೆ? ಹಪಾಹಪಿ ಒಳ್ಳೆಯದಲ್ಲ ಇರಲೂ ಬಾರದು.’ ಹೀಗೆ ಹೇಳಿದ್ದೇ ತಡ ನಿನ್ನ ಪಿತ್ತ ನೆತ್ತಿಗೇರಿತು ನೋಡು. ಫೈನಲಿ ಕೊನೆಗೊಂದು ದಿನ ನಿನಗೂ ಸಿಟ್ಟು ಬಂತು. ಹಾಗಂತ ಒಳಗೊಳಗೇ ಸಂಭ್ರಮಿಸಿದೆ. ‘ನೀ ಭಾಳ ಶಾಣೆ ನೋಡು. ನನಗೇ ಫಿಲಾಸಫಿ ಹೇಳಲು ಬರ್ತಾಳೆ.’ ರಪ್ಪಂತ ಕಾಲ್ ಕಟ್ ಮಾಡಿಬಿಟ್ಟೆ. ಅಬ್ಬಾ ಒಂದು ದಿನವಾದರೂ ರೇಗಿದೆಯಲ್ಲ ಅಂತ ಸಮಾಧಾನ.

 

ಗೊತ್ತು ಮಾರಾಯ ನೀ ತುಂಬ ಕಷ್ಟದಲ್ಲಿರುವೆ. ಕಷ್ಟಗಳು ಮನುಷ್ಯನಿಗೆ ಬರದೆ ಮರಕ್ಕೆ ಬರಲು ಸಾಧ್ಯವೆ ಹೇಳು? ಏನೇ ಬರಲಿ ಏನೇ ಹೋಗಲಿ ನೀ ಮಾತ್ರ ಹಟ ಹಿಡಿದು ಛಲದಿಂದ ಸಾಧಿಸುವವನು. ನಿನ್ನೊಳಗಿನ ಆ ಆತ್ಮವಿಶ್ವಾಸವಿದೆಯಲ್ಲ, ಅದಕ್ಕೊಂದು ದೊಡ್ಡ ಸಲಾಮ್. ಪಾರ್ಟನರ್ ಅಂದರೆ ನೀನು! ಗಂಡು ಅಂದರೆ ಹೀಗೆಯೇ ಇರಬೇಕು.

 

ಹೆಣ್ಣಿಗೆ ಸಂಪತ್ತೆ ಎಲ್ಲಾ ಅಲ್ಲ ಅಂತ ನೀವು ಗಂಡುಗಳಿಗೆ ಗೊತ್ತಿರುವುದಿಲ್ಲ. ನೀ ಕೊಡೊ ಪ್ರೀತಿ ಮುಂದೆ ಆ ಅಷ್ಟೈಶ್ವರ್ಯವೆಲ್ಲ ಕಾಲಕಸಕ್ಕಿಂತ ಕಡೆ ಇದ್ದಂಗೆ. ಬದುಕಿನಲ್ಲಿ ಒಲವ ಜೀವನವಿದ್ದರೆ ಅಷ್ಟೆ ಸಾಕು. ಏನು ಬೇಕಾದರೂ ಗಳಿಸಬಹುದು. ಮನಸು ಮಾಡಿದರೆ ಏನು ಬೇಕಾದರೂ ಪಡೆಯಬಹುದು. ನೀನೊಂದು ಹಂತ ತಲುಪಿದ ಮೇಲೆ ನೋಡು, ಮಹಾರಾಜನ ತರಹ ಬಾಳ್ತೀಯ. ಜೊತೆಲಿ ನಾನೂ ಇರುವೆ.

 

ಈ ಬದುಕು ತುಂಬಾ ವಿಚಿತ್ರ. ಜೀವನ ಅನ್ನೊ ದೋಣಿ ನಡೆಸುವಾಗ ಉರಿ ಬಿಸಿಲು, ಬಿರುಗಾಳಿ, ಧೋ ಎಂದು ಸುರಿವ ಮಳೆ, ಕರುಳು ಕೊರೆಯುವ ಚಳಿ, ಏನೆಲ್ಲಾ ಅನುಭವಿಸಬೇಕು. ದೋಣಿ ಮುಳುಗದ ಹಾಗೆ ನೋಡಿಕೊಳ್ಳೋದೆ ಜಾಣತನ. ನಮ್ಮಿಬ್ಬರ ಪಯಣ, ಆ ಪಯಣದ ಗಮ್ಯ, ದೂರ ಬಹು ದೂರವಿದೆ. ಇಷ್ಟು ಬೇಗ ತಾಳ್ಮೆ ಕಳೆದುಕೊಳ್ಳುವಂತಿಲ್ಲ. ಸುಮ್ಮನೆ ನಿನ್ನ ಕೆಲಸ ನೋಡಿಕೊಂಡಿರು ಎಂದು ಜೋರು ಮಾಡಿ ತೆಪ್ಪಗಿರಿಸುವ ಪ್ರಯತ್ನ ಹುಸಿ ಹೋಯಿತು.

 

ಯಾರಿಂದಲಾದರೂ ಬುದ್ಧಿ ಹೇಳಿಸಿಕೊಂಡು ಪಾಠ ಕಲಿಯ ಬೇಕಾದವನಲ್ಲ. ನಾನಂತೂ ನಿನಗೆ ಹೇಳುವ ಯೋಗ್ಯತೆಯೇ ಇಲ್ಲದವಳು ಎನಿಸುವುದು. ಎಷ್ಟು ಜೋರು! ಎಷ್ಟು ಜಾಣ! ಆದರೂ ಕೆಲವೊಮ್ಮೆ ಬದುಕು ಒಡ್ಡುವ ಸವಾಲುಗಳಿಗೆ ಧೃತಿಗೆಡುವುದು ಸಹಜ. ನಿನಗಿಂತ ಚಿಕ್ಕವಳಿದ್ದರೂ ಬದುಕನ್ನು ನಾನೂ ಎದುರಿಸಿರುವೆ. ಕಷ್ಟಗಳಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಲು ಆಗುವುದಿಲ್ಲ. ಹಾಗಾಗಿ ಈ ಜೀವನವೇ ಹೇಳಿಕೊಟ್ಟದ್ದರಲ್ಲಿ ಅಷ್ಟೊ ಇಷ್ಟೊ ಕಲಿತಿರುವೆ.

 

ವ್ಯಕ್ತಿಗೆ ಯಾರು ಏನೇ ಹೇಳಿದರೂ ಕೇಳುವ ಮನಃಸ್ಥಿತಿ ಇದ್ದರೆ ಚಂದ ಕಣೊ. ಯಾಕೆ ಗೊತ್ತ? ತನಗೆ ತಿಳಿಯದಾದಾಗ ತನ್ನ ಮೊಳಕಾಲಿಗಾದರೂ ಕೇಳು ಅಂತಾರಲ್ಲ, ಹಾಗೆ ಆತ್ಮಾವಲೋಕನ ಬೇಕು ಅಷ್ಟೆ.

 

ಅಲ್ವೊ, ನಿನ್ನ ಆತ್ಮ ಅಂದರೆ ನಾನೇ ತಾನೆ? ಅದೇ ಹಕ್ಕಿನಿಂದ ಅಧಿಕಾರ ಚಲಾಯಿಸುವೆ. ಬೇಸರ ಮಾಡ್ಕೊ ಬೇಡ. ಹೀಗೆ ಹೇಳಿದಾಗ ಹತ್ತಿಯಂತೆ ಮೆತ್ತಗಾಗಿದ್ದು ನೋಡಿದರೆ, ಇವನೇನಾ ನನ್ನ ಹೀರೊ? ಅಂತ ಅನುಮಾನ ಹುಟ್ಟುತ್ತೆ. ತಮಾಷೆಗೆ ಹೇಳುತ್ತಿರುವೆ. ಬೇಸರ ಮಾಡಿಕೊಳ್ಳುವುದು ಸರಿಯಲ್ಲ.

 

ಮನ್ತ್ ಎಂಡ್ ನಲ್ಲಿ ನಿನ್ನ ವಾಲೆಟ್ ಅನಾಥ ಅಂತ ಗೊತ್ತು ಅದಕ್ಕೇ ಬೇಡ ಅಂದೆ. ವೀಕ್ ಎಂಡ್ ತಿರುಗಾಟ ಮಾಡಿ ಇನ್ನೂ ಭಾರ ಆಗಿಬಿಟ್ರೆ, ಮುಂದಿನ ತಿಂಗಳು ಹೇಗೆ ನಿಭಾಯಿಸುವೆ? ಸ್ವಲ್ಪ ದಿನ ಭೇಟಿಯಾಗದಿದ್ದರೆ ಯಾವ ಸೀಮೆನೂ ಹಾಳಾಗಲ್ಲ. ತಾಳ್ಮೆಯಿಂದ ದಿನದೂಡಬೇಕು. ಈ ವೇದಾಂತ ನಿನಗಿಷ್ಟವಿಲ್ಲ. ನಿನ್ನೊಂದಿಗೆ ಸಮಯ ಕಳೆಯುವುದಕ್ಕಿಂತ ದೊಡ್ಡದು ಏನಿದೆ? ಆದರೂ ಬದುಕು ಅಂದರೆ ಹೊಂದಾಣಿಕೆ ತಾನೆ?

 

ಸುಖ ದುಃಖ ಎಲ್ಲಾ ಒಂದೇ ಅಂದುಕೊಂಡು ಎಲ್ಲಾನು ಸ್ವೀಕಾರ ಮಾಡಿದರೆ ಸರಿ. ಇಂಥ ಮಾತಿಗೆ ನೀನು ಸೊಪ್ಪು ಹಾಕಲ್ಲ ಅಂತ ಗೊತ್ತಿದ್ದರೂ, ಹಾಗೇ ಒಂದಿಷ್ಟು ಉಪದೇಶ ಮಾಡಿದೆ. ನೀನು ಕೇಳಬೇಕಲ್ಲ.

 

ಅಚಾನಕ್ಕಾಗಿ ಕಾಲ್ ಮಾಡಿ, ‘ಬೈಕ್ ಟ್ಯಾಕ್ ಫುಲ್ ಮಾಡಿದಿನಿ. ನಾಳೆ ಹೊರಡು. ಬೆಟ್ಟಕ್ಕೆ ಹೋಗೋಣ. ಇಡೀ ದಿನ ನಿನ್ನ ನಾ ನೋಡ್ತಾ ಇರಬೇಕು. ಊಟ ಬೇಡ ತಿಂಡಿ ಬೇಡ. ಒಂದು ಹನಿ ನೀರೂ ಬೇಡ.’ ಅಬ್ಬಾ! ಇದು ಮಾತು ಅಂದರೆ ಮಾತು ಮಾರಾಯ. ನಾ ಬೆಸ್ತು ಬಿದ್ದು ಸುಸ್ತಾಗಿ ಹೋದೆ. ನೀ ಹೋದ ತಿಂಗಳು ಖರೀದಿಸಿದ್ದ latest ಬೈಕಿನಿಂದಾಗಿ, ನನ್ನ ಅದೃಷ್ಟವೇ ಜೋರು ನೋಡು.

 

ಆ ದಿನ ಕಾಲ್ ಮಾಡಿ ನೀ ಉಗಿದೆ ನೋಡು, ನನ್ನೆಲ್ಲಾ ಆದರ್ಶ, ವೇದಾಂತ ಎಲ್ಲ ಡಿಲೀಟ್ ಮಾಡಿಬಿಟ್ಟೆ. ಈಮೇಲ್ ತರಹ ಫಾಸ್ಟಾಗಿ ನಾಳೆ ನಿನ್ನ ರೀಚ್ ಆಗೊ ಭ್ರಮೆಯಲ್ಲಿ ಎಲ್ಲಾ ಕೆಲಸ ಅದಲುಬದಲು. ಸುತ್ತಮುತ್ತ ಇದ್ದವರಿಗೆ ಇವಳಿಗೇನೊ ಹುಚ್ಚು ಹಿಡಿದಿದೆ ಎನ್ನುವ ರೀತಿಯಲ್ಲಿ ಮೈಯೊಳಗೆ ಏನೋ ಸೇರಿಯಾಗಿತ್ತು. ವೀಕ್ ಎಂಡ್ ಲಾಂಗ್ ಡ್ರೈವ್ ಕನಸು ಕಾಣುವಂತೆ ಮಾಡಿದ್ದು ಎಂಥ ಥ್ರಿಲ್ ಗೊತ್ತ? ರಾತ್ರಿ ಇಡೀ ಅದೇ ಗುಂಗು.

 

ಬೈಕ್ ಮೇಲೆ ನಿನಗಂಟಿಕೊಂಡು ಕುಳಿತು, ಹಾರುವ ಕೂದಲಿನ ಕಚಗುಳಿಗೆ ಉನ್ಮಾದ, ನಿನ್ನ ಮಾತಿನ ತಮಾಷೆಗೆ, ಬೂರ್ರೆಂದು ಹೋಗೊವಾಗ ಸಿಗುವ ಖುಶಿಗೆ ಈಗಲೆ ಮೈಯೊಳಗೆ ಪುಳಕ ಹೊಕ್ಕಂತೆ.

 

ಈ ನಿರೀಕ್ಷೆ ಎಷ್ಟು ಚಂದ ಅಂತಿಯಾ. ಕಾಯುತ್ತ ಇನ್ನೂ ಇಪ್ಪತ್ತನಾಲ್ಕು ಗಂಟೆ ಕಳೆಯಬೇಕು. ಇಪ್ಪತ್ತನಾಲ್ಕು ಯುಗವೇ ಆಗಿ ಹೋಯಿತು ಬಿಡು.

 

ನಾಳೆ ನೀ ಬರುವೆ, ನನ್ನ ನೋಡುವ ಕುತೂಹಲದ ಆ ನಿನ್ನ ಮುಖ, ಕಂಡೊಡನೆ ಮೂಡುವ ನಗುವಿನ ಮಿಂಚು, ನಿನ್ನಲ್ಲಾಗುವ ಪುಳಕ, ತೊರಿಸಿಕೊಳ್ಳದೆ ಇರಲು ಸಾಧ್ಯವಾಗದೆ, ತೋರಿಸಿಕೊಳ್ಳಲು ಮುಜುಗರ, ಏನೂ ತೋಚದೆ ಬೆಪ್ಪನಂತೆ ಒಂದು ಕ್ಷಣ, ಮತ್ತೆ ಎಲ್ಲಾ ಸಿಕ್ಕ ಸಂಭ್ರಮ. ಕ್ಷಣಾರ್ಧದಲ್ಲಿ ಅದೆಷ್ಟು ಭಾವನೆಗಳು ಮೂಡಿ ಬದಲಾಗುತ್ತವೆ. ಅದಕ್ಕಾಗಿ ಕ್ಷಣಕ್ಷಣವೂ ಕಾಯುವಿಕೆ.

 

ನೀನಂದುಕೊಂಡಿದ್ದು ಮಾಡಿಯೇ ತೀರುವವನು. ನಿಜ ಹೇಳಬೇಕು ಅಂದರೆ ನನಗೂ ಇದೇ ಬೇಕೆನಿಸಿತ್ತು. ಸುಮ್ಮನೆ ನಿನಗೆ ವೇದಾಂತ ಎಲ್ಲಾ ರೀಲ್ ಬಿಟ್ಟ ಹಾಗೆ. ನಮಗಾಗಿ ಸಮಯ ಕಸಿದುಕೊಳ್ಳದಿದ್ದರೆ ಸಿಗುವುದೇ ಇಲ್ಲ. ಬೆಟ್ಟಕ್ಕೆ ಹೋಗಿ ಕೂತು ಬಿಡೋಣ. ಒಂದಷ್ಟು ಹೊತ್ತು ನಾವೇ ನಮ್ಮ ಪ್ರಪಂಚದಲ್ಲಿ ಹಾಯಾಗಿ ಇದ್ದು ಬಿಡೋಣ.

 

ಎಲ್ಲಾ ನೀನಂದು ಕೊಂಡಂತೆ, ನಾ ಬಯಸಿದಂತೆಯೇ ನಡೆಯಿತು. ವೇಗವಾಗಿ ಓಡೊ ಬೈಕ್, ಅದಕ್ಕಿಂತಲೂ ವೇಗ ನಮ್ಮ ಮನಸು, ತೀರಾ ಹತ್ತಿರದ ನಿನ್ನ ಸಾಮಿಪ್ಯ, ಏನು ಹೇಳಲಿ ಮಾರಾಯ? ನನಗಂತೂ ಉಸಿರುಗಟ್ಟಿ ಹಿಡಿದು, ಹಾಗೆ ನಿನ್ನ ಗಟ್ಟಿಯಾಗಿ ಹಿಡಿದುಕೊಂಡು ಹಿಂದೆ ಕೂತು, ಆ ಪರಿ ಸ್ಪೀಡ್ ನಲ್ಲಿ ಹೋಗೊ ಎಕ್ಸಪೀರಿಯನ್ಸ್, ಅದನ್ನು ಅನುಭವಿಸುವುದ ಬಿಟ್ಟರೆ ಇನ್ನೇನು ಹೇಳು? ಪ್ರಪಂಚವೇ ನಮ್ಮ ಕೈಯಲ್ಲಿದ್ದಂತೆ. ಯಾರ ಕೇರೂ ಇಲ್ಲದ ಆನಂದ. ಗಾಳಿಯ ಜೊತೇಲಿ ಭರ್ರ್…ಅಂತಹೋಗಿದ್ದೇ ಹೋಗಿದ್ದು.

ಬೆಟ್ಟದ ಬುಡದಲ್ಲಿ ಪಾನಿಪುರಿ. ಇವತ್ತು ರಸ್ತೆ ಬದಿಲಿ ಇದನ್ನೇ ಹೊಟ್ಟೆ ತುಂಬ ತಿಂದು ಬಿಡೋಣ ಎಂದಾಗ ಹೃದಯ ಕರಗಿ ಹೋಯಿತು. ಕೂಡಲೆ ಕಾಲೇಜಿನಲ್ಲಿ ಓದುವಾಗಿನ ಸಾಲುಗಳು ನೆನಪಾದವು. ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವು ನಾವು ಅದಕು ಇದಕು ಎದುಕು.’ ಅವನ ಮೇಲೆ ಪ್ರೀತಿಯುಕ್ಕಿ ರಸ್ತೆ ಅನ್ನೋದು ಮರೆತು ಅವನ ಕೈಹಿಡಿದುಕೊಂಡು, ‘ಬೇಡ ಬಿಡು ಈ ಪಾನಿಪುರಿನೂ ಬೇಡ. ಹಾಗೇ ಇದ್ದು ಬಿಡೋಣ.’

ನಿನ್ನ ಮನಸು ಕರಗಿ ನನ್ನೆಡೆಗೆ ನೋಡಿದೆ ನೋಡು, ನನ್ನೆದೆಯೊಳಗೆ ಹೊಕ್ಕು ತಲ್ಲಣ ಎಬ್ಬಿಸಿದಂತಾಯಿತು. ‘ಹೇ ಹಾಗೆ ನೋಡ್ಬೇಡ. ನೋಡ್ಬೇಡ ಕಷ್ಟ ಆಗುತ್ತೆ’ ಎನ್ನುತ್ತ ದೂರ ಸರಿದರೆ, ನಿನಗೆ ಕಷ್ಟ ಆಗಬೇಕಾ? ಪಾನಿಪುರಿಯವನು ನಮ್ಮನ್ನು ಗಮನಿಸಿ ಸಿನಿಮಾ ನೋಡಿದಂತೆ ನಗುತ್ತ ನೋಡಬೇಕೆ?

ಪಾನಿಪುರಿ ತಿಂದು ಬೆಟ್ಟಕ್ಕೆ ಹೊರಟರೆ, ಮಳೆ ಬರುವ ಸನ್ನಾಹ. ಹನಿಯುದುರುವ ಮೊದಲೆ ಅಲ್ಲಿರುವ ಮಂಟಪ ಸೇರುವ ಗಡಿಬಿಡಿ. ಅದೊಂದು ಪುಳಕದ ಧಾವಂತ. ತುಂತುರು ಮಳೆಯಲ್ಲಿ ನೆನೆಯುತ್ತ ಸಾಗಿದೆವು. ಇರಲಿ ಬಿಡು ಹೀಗೆ ಹೋಗುವುದು ಚಂದವೇ. ಅವಸರ ಬೇಡವೆಂದು ತಿಳಿಸಿದಾಗ, ನೀ ರೋಮ್ಯಾಂಟಿಕ್ ಆಗಿ ನೋಡಬೇಕೆ? ಬೈಕ್ ನಿಲ್ಲಿಸುತ್ತ ತಿಂದೇ ಬಿಡುವಂತೆ ನೋಡುವುದೇ? ನಾ ಓಟಕ್ಕೆ ನೀ ಬೆನ್ನ ಹಿಂದೆ. ಅಯ್ಯೋ ಇದೆಂಥ ಫಜೀತಿ ಮಾರಾಯ.

ಇಷ್ಟು ದಿನದ ಮೇಲೆ ಹೀಗೆ ಸಿಕ್ಕಾಗ, ಮಳೆ ಬಂದು, ಮೈ ಮನವೆಲ್ಲಾ ತೋಯ್ದು ತೊಪ್ಪೆ. ಒಂದು ಕ್ಷಣ ನಿನಗೇನು ಬೇಕೋ ಅದನ್ನೇ ಮಾಡಿಕೊಂಡು ಹೋಗಲೆಂದು ಮನಸು ತೆರೆದುಕೊಂಡಿತು. ನೀ ಸಂಯಮಿ, ಸಹನಾಮಯಿ, ಧೇನಿಸುವ ಜೀವ, ನನ್ನ ಜೀವಕ್ಕೇ ಜೀವ ಕೊಡುವವ, ಎದುರಿಗೆ ಕೂರಿಸಿಕೊಂಡು, ಕಣ್ತುಂಬಿಕೊಂಡೆ. ನಾ ನಡುಗಿದಾಗ, ಸಿನಿಮಾ ಹೀರೊ ರೋಲ್ ನಿಭಾಯಿಸಿದೆ. ಜಾಕೆಟ್ ತೆಗೆದು ಎರಡೂ ಭುಜದ ಮೇಲೆ ಹಾಕಿದೆ. ನಾ ಪುಣ್ಯ ಮಾಡಿದ್ದೆ ಎನಿಸಿತು.

ನಿನ್ನ ಮಾತಿನಂತೆ ಆ ದಿನವಿಡೀ ಕಣ್ಣೆದುರಿನಿಂದ ಕದಲದಂತೆ ನೋಡಿದೆ. ಕಣ್ ರೆಪ್ಪೆಯಂತೆ ನೋಡಿಕೊಂಡೆ. ಸುತ್ತಲೂ ಗುಡ್ಡ ಬೆಟ್ಟಗಳು. ಮಳೆ ನಿಂತು ಹೋಗಿತ್ತು. ಇನಿಯನ ಮಡಿಲಲ್ಲಿ ಪ್ರಕೃತಿಯ ಇನಿದಾದ ಇಂಚರ ಕೇಳುತ ಕಣ್ಮುಚ್ಚಿದ್ದರೆ, ಸಮಯ ಸರಿದದ್ದೇ ಗಮನಕ್ಕೆ ಬರಲಿಲ್ಲ. ಕೊನೆಗೆ ನನ್ನ ಪ್ರೀತಿಸುವ ಜೀವ ಎಚ್ಚರಿಸಿ, ಕರೆದುಕೊಂಡು ಗೂಡು ತಲುಪಿಸಿತು.

ಶುಭ ರಾತ್ರಿ ಹೇಳಿ ಹೋಗುವಾಗ ಇಬ್ಬರಿಗೂ ಮೈಮನವೆಲ್ಲಾ ಭಾರವೆನಿಸಿತು. ಮತ್ತೆ ಅದೇ ನೋವು. ಅನಿವಾರ್ಯದ ಅಗಲುವಿಕೆ. ನಮ್ಮ ನೋವಿಗೆ ಮತ್ತೆ ಪ್ರಕೃತಿಯೇ ಕಣ್ಣೀರು ಹಾಕಿದಂತೆ ಸಣ್ಣಗೆ ಮಳೆಹನಿ ಉದುರಲು ಆರಂಭ. ಮೋಡ ತುಂಬಿದ ಕಾರ್ಮೋಡ, ಹನಿಹನಿ ವರ್ಷ, ಫಳ್ಳೆಂದು ಹೊಳೆಯುವ ಮಿಂಚು, ಆಗಾಗ ಘರ್ಜಿಸುವ ಗುಡುಗು. ಎಲ್ಲವೂ ಸೇರಿ ಏಕತಾನತೆಯಲ್ಲಿ ಗುನುಗುನಿಸಿದ ಭಾವ. ಸುತ್ತಲೂ ಅದೇ ಗುಯ್ಗುಡುವಿಕೆ...

‘ರಸವೇ ಜನನ ವಿರಸವೇ ಮರಣ ಸಮರಸವೇ ಜೀವನ’

 

*ಸಿಕಾ*