ಮುಸಲೋನಿಯ ಆಡಳಿತಾವಧಿ

ಮುಸಲೋನಿಯ ಆಡಳಿತಾವಧಿ
ಬೆನಿಟೊ ಮುಸಲೋನಿ

(ಕಳೆದ ಭಾನುವಾರದಿಂದ...)

 

1919ರ ಸೋಷಿಯಲಿಸ್ಟ್ ಪಕ್ಷದ ಅಧಿವೇಶನದಲ್ಲಿ, ಹಾಲಿ ಬೂಜ್ರ್ವಾ ಪ್ರಜಾಪ್ರಭುತ್ವವನ್ನು ಪಲ್ಲಟಗೊಳಿಸುವ ಸಲುವಾಗಿ ಇಟಲಿಯಾದ್ಯಂತ ರೈತರು ಮತ್ತು ಕಾರ್ಮಿಕರ ಸೋವಿಯತ್ತುಗಳನ್ನು ಸಂಘಟಿಸಬೇಕು ಎಂಬ ಗೊತ್ತುವಳಿಯನ್ನು ಮಂಡಿಸಿ, ಆ ಗೊತ್ತುವಳಿ ಬಹುಮತದಿಂದ ಅಂಗೀಕಾರವಾಗುವ ಹಾಗೆ ನೋಡಿಕೊಂಡವರೂ ಎಡಪಂಥೀಯರೇ. ಎಡಪಂಥದವರು ಸೋವಿಯತ್‍ಗಳ ಅವಶ್ಯಕತೆಯನ್ನು ಬಲು ಉತ್ಸಾಹದಿಂದಲೆ ಜನರ ಮಧ್ಯೆ ಪ್ರಚಾರ ಮಾಡಿದರು. ಜನರು ಕೂಡ ತುಂಬು ವಿಶ್ವಾಸದಿಂದ ಈ ವಿಚಾರವನ್ನು ಬೆಂಬಲಿಸಿದರು. 1919ರ ಚುನಾವಣೆಗಳಲ್ಲಿ ಸೋಷಿಯಲಿಸ್ಟ್ ಪಕ್ಷ 20 ಲಕ್ಷ ಮತಗಳನ್ನು ಪಡೆದು, ಪಾರ್ಲಿಮೆಂಟಿನ ಒಟ್ಟು 508 ಸ್ಥಾನಗಳಲ್ಲಿ 156 ಸ್ಥಾನಗಳನ್ನು ಗೆದ್ದಿತು; 1918ರಲ್ಲಿ, ಮಹಾಯುದ್ಧ ಕೊನೆಯಾದಾಗ 87 ಸಾವಿರ ಇದ್ದ ಪಕ್ಷದ ಸದಸ್ಯತ್ವ 1920ರಲ್ಲಿ 1 ಲಕ್ಷ 80 ಸಾವಿರಕ್ಕೆ ಏರಿತು. ಸಾಮಾನ್ಯ ಸದಸ್ಯತ್ವ 2 ಲಕ್ಷದಿಂದ 20 ಲಕ್ಷಕ್ಕೆ ಏರಿತು. ಇದೇ ಸಮಯದಲ್ಲಿ ಜಮೀನುದಾರರ ಭೂಮಿಯನ್ನು ದಕ್ಷಿಣ ಇಟಲಿಯ ಬಡ ರೈತರು ಮತ್ತು ಗೇಣಿದಾರರು ವಶಪಡಿಸಿಕೊಳ್ಳುವ ಚಳವಳಿಯನ್ನು ಪ್ರಾರಂಭಿಸಿದ್ದರು. ಸೋಷಿಯಲಿಸ್ಟ್ ಪಕ್ಷಕ್ಕೆ ದಕ್ಷಿಣ ಇಟಲಿಯಲ್ಲಿ ನೆಲೆಯೇ ಇರಲಿಲ್ಲ. ಈ ಚಳವಳಿಯನ್ನು ಕ್ಯಾಥೋಲಿಕ್ ಚರ್ಚಿನ ಪರವಾಗಿದ್ದ ಪಾಪ್ಯುಲರ್ ಪಾರ್ಟಿಯು ಸಂಘಟಿಸಿತ್ತು. ಇಂಥ ಸನ್ನಿವೇಶದಲ್ಲಿ ಬಹುಸಂಖ್ಯಾತ ಕಾರ್ಮಿಕರು ಸ್ವಯಂಸ್ಫೂರ್ತಿಯಿಂದ ಫ್ಯಾಕ್ಟರಿ ಕೌನ್ಸಿಲ್ ಚಳವಳಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಬಂಡವಾಳಶಾಹಿಗಳ ಕೊರಳುಪಟ್ಟಿ ಹಿಡಿದುಕೊಂಡಿದ್ದರು; ಇಡೀ ಯುರೋಪಿನ ಕಾರ್ಮಿಕರು ಇಟಲಿಯ ಚಳವಳಿಯಿಂದ ಸ್ಫೂರ್ತಿ ಪಡೆದು ತಮ್ಮ ದೇಶಗಳಲ್ಲಿ ಕ್ರಾಂತಿಕಾರಿ ಚಳವಳಿಗಳನ್ನು ಸಂಘಟಿಸುವ ಉತ್ಸಾಹದಲ್ಲಿದ್ದರು. ಇಷ್ಟಿದ್ದರೂ ಕಾರ್ಮಿಕರ ಹರಿಕಾರನೆಂದು ಘೋಷಿಸಿಕೊಂಡಿದ್ದ ಪಕ್ಷವು ಚಳವಳಿಯನ್ನು ಬೆಂಬಲಿಸಲು ಹಿಂದೇಟು ಹಾಕತೊಡಗಿತ್ತು. ಸುಧಾರಣಾವಾದಿಗಳು ಜವಾಬ್ದಾರಿಯನ್ನು ಎಡಪಂಥದ ಮೇಲೆ ಹೊರಿಸಲು ನೋಡುತ್ತಿದ್ದರೆ, ಎಡಪಂಥದವರು ‘ಲಾ ಆರ್ಡಿನೊ ನೊವೊ’ಗುಂಪಿನ ಮೇಲೆ ಹೊರೆಯನ್ನು ಜಾರಿಸಿ ಕೈತೊಳೆದುಕೊಳ್ಳಲು ಹಾತೊರೆಯುತ್ತಿದ್ದರು. ‘ಲಾ ಆರ್ಡಿನೊ ನೊವೊ’ಗುಂಪಿನವರಿಗೆ ಟ್ಯೂರಿನ್ ನಗರದಲ್ಲಿ ಸಾಕಷ್ಟು ಜನಬೆಂಬಲವಿತ್ತಾದರೂ ಬೇರೆ ಕಡೆಗಳಲ್ಲಿ ಅವರ ಪ್ರಭಾವ ನಗಣ್ಯವಾಗಿತ್ತು. 1920ರಲ್ಲಿ ಚಳವಳಿಯು ಉತ್ತುಂಗದಲ್ಲಿದ್ದಾಗ, ಸೋಷಿಯಲಿಸ್ಟ್ ಪಕ್ಷದ ಮಹಾಧಿವೇಶನವನ್ನು ಚಳವಳಿಯ ಕೇಂದ್ರಬಿಂದುವಾಗಿದ್ದ ಟ್ಯೂರಿನ್ ನಗರದಲ್ಲಿ ಆಯೋಜಿಸಲಾಗಿತ್ತು. ಚಳವಳಿಯ ಒತ್ತಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಧಿವೇಶನದಲ್ಲಿ ‘ಲಾ ಆರ್ಡಿನೊ ನೊವೊ’ ಗುಂಪು ಚಳವಳಿಯ ಪರವಾಗಿ ಮಂಡಿಸಿದ ಗೊತ್ತುವಳಿಯನ್ನು ಚರ್ಚೆಗೆ ಕೂಡ ಸ್ವೀಕರಿಸದೆ ತಳ್ಳಿಹಾಕಲಾಯಿತು. ಸೋಷಿಯಲಿಸ್ಟ್ ಪಕ್ಷದ ಮುಖವಾಣಿಯಾಗಿದ್ದ ‘ಅವಂತಿ!’ಯಂತೂ ಎರಡು ವರ್ಷಗಳ ಕಾಲ ನಡೆದ ಚಳವಳಿಯ ಬಗ್ಗೆ ಒಂದು ಸಾಲನ್ನೂ ಬರೆಯಲಿಲ್ಲ.

ಮೊದಲ ಮಹಾಯುದ್ಧ ಪ್ರಾರಂಭವಾದಾಗ ಮುಸಲೋನಿ ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯ ಗುಂಪಿನ ನಾಯಕನಾಗಿದ್ದ. ಎಲ್ಲ ದೇಶದ ಬಂಡವಾಳಶಾಹಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಾರಂಭಿಸಿರುವ ಯುದ್ಧವನ್ನು ಸಮಾಜವಾದಿಗಳು ಬೆಂಬಲಿಸ ಕೂಡದು ಎಂಬ ಸೋಶಿಯಲಿಸ್ಟ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಅಂತಾರಾಷ್ಟ್ರೀಯ ಒಕ್ಕೂಟವಾದ ‘ಎರಡನೆಯ ಇಂಟರ್‍ನ್ಯಾಷನಲ್’ನ ನಿರ್ಣಯವನ್ನು ಇಟಲಿಯಲ್ಲಿ ಮುಸಲೋನಿ ಬಲವಾಗಿ ಪ್ರತಿಪಾದಿಸಿದ್ದ. ಆದರೆ 1915ರ ಹೊತ್ತಿಗೆ ಆತ ತನ್ನ ನಿಲುವನ್ನು ಬದಲಾಯಿಸಿ, ಪಕ್ಷವನ್ನು ತೊರೆದು, ಇಟಲಿಯ ಸೈನ್ಯದ ದಂಡನಾಯಕನಾಗಿ ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡ. 1918ರಲ್ಲಿ ಯುದ್ಧ ಕೊನೆಗೊಂಡಾಗ ಇಟಲಿಯ ಸಾಮಾನ್ಯ ಜನರ ಜೀವನದ ಸ್ಥಿತಿ ತುಂಬ ಕೆಟ್ಟದಾಗಿತ್ತು. ಯುದ್ಧದಿಂದ ಮರಳಿದ ಮುಸಲೋನಿ, ಮಾಜಿ ಯೋಧರ, ನಗರದ ನಿರುದ್ಯೋಗಿ ಯುವಕರ, ಸಮಾಜವಾದಿ ರಾಜಕೀಯ ಸಫಲವಾದರೆ ತಮ್ಮ ಬದುಕಿನ ಸವಲತ್ತುಗಳಿಗೆ ಸಂಚಕಾರ ಬರುತ್ತದೆ ಎಂಬ ಹೆದರಿಕೆ ಇಟ್ಟುಕೊಂಡಿದ್ದ ಸಣ್ಣ ವರ್ತಕರ ಹಾಗೂ ಮಧ್ಯಮ ವರ್ಗದ ಜನರ ಬೆಂಬಲವನ್ನು ಗಳಿಸಿಕೊಂಡು ‘ಫಾಸಿ’ ಎಂಬ ಸಂಘಟನೆಯನ್ನು ಕಟ್ಟಿದ. ಇಟಲಿಯ ಜನ ದರಿದ್ರ ಸ್ಥಿತಿಯಲ್ಲಿ ಇರುವುದಕ್ಕೆ ದೇಶ ಒಪ್ಪಿಕೊಂಡಿರುವ ಪಾರ್ಲಿಮೆಂಟರಿ ಪ್ರಜಾಪ್ರಭುತ್ವವೇ ಕಾರಣವಾಗಿದೆ; ಬೆನ್ನೆಲುಬಿಲ್ಲದ ಜನ ದೇಶದ ಅಧಿಕಾರ ಹಿಡಿದಿರುವುದರಿಂದ ಇಟಲಿಯ ರಾಷ್ಟ್ರೀಯ ಪ್ರಭುತ್ವವನ್ನು ಯಾರು ಬೇಕಾದರೂ ಹೆದರಿಸಿ ಮಣಿಸುವ ವಾತಾವರಣ ನಿರ್ಮಾಣವಾಗಿದೆ (ಇಟಲಿಯು ಮೊದಲ ಮಹಾಯುದ್ಧದಲ್ಲಿ ವಿಜಯಿ ಮೈತ್ರಿಕೂಟದ ಭಾಗವಾಗಿದ್ದರೂ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳು ಇಟಲಿಗೆ ನೀಡಿದ್ದ ಯಾವ ಭರವಸೆಯನ್ನು ಈಡೇರಿಸಿರಲಿಲ್ಲ) ಎಂದು ಆತ ವಾದಿಸತೊಡಗಿದ. ಈ ಹೊತ್ತಿನಲ್ಲೇ, ಸಮಾಜವಾದಿಗಳು ಪ್ರಬಲರಾಗಿ ದೇಶದ ಭದ್ರತೆ, ಇಟಲಿಯ ಪರಂಪರಾನುಗತ ಸಂಸ್ಕೃತಿಗಳಿಗೆ ಅಪಾಯ ತರುತ್ತಿದ್ದಾರೆ; ಇಂಥ ಸನ್ನಿವೇಶದಲ್ಲಿ, ಸರ್ವಶಕ್ತ ರಾಷ್ಟ್ರಪ್ರೇಮಿ ನಾಯಕನ ಮಾರ್ಗದರ್ಶನ ದಲ್ಲಿ, ಕಳೆದುಹೋಗಿರುವ ರೋಮನ್ ಸಾಮ್ರಾಜ್ಯದ ವೈಭವವನ್ನೂ, ಶುದ್ಧ ಇಟಾಲಿಯನ್ ಸಂಸ್ಕೃತಿಯನ್ನೂ ಮರುಸ್ಥಾಪಿಸುವಂತಹ ಸಶಕ್ತ ಪ್ರಭುತ್ವದ ಅಗತ್ಯವಿದೆ ಎನ್ನುವ ವಿಚಾರಗಳನ್ನು ಮುಸಲೋನಿ ಪ್ರತಿಪಾದಿಸತೊಡಗಿದ. ಆ ಹೊತ್ತಿನಲ್ಲಿ ಮುಸಲೋನಿ ‘ಫಾಸಿ’ ಒಂದು ರಾಜಕೀಯ ಪಕ್ಷವಲ್ಲ, ಒಂದು ರಾಷ್ಟ್ರಪ್ರೇಮಿ ಸ್ವಯಂಸೇವಾ ಸಂಸ್ಥೆ ಎಂದು ಪ್ರಚಾರ ಮಾಡಿದ; ‘ಬ್ಲ್ಯಾಕ್ ಷಟ್ರ್ಸ್’ ಎಂಬ ಗೂಂಡ ಅರೆಸೈನಿಕ ಪಡೆ ಕಟ್ಟಿ, ದೇಶದ ಯಾವ ಕಾನೂನನ್ನು ಲೆಕ್ಕಿಸದೆ ತನ್ನ ವಿರೋಧಿಗಳ ಮೇಲೆ ಭಯೋತ್ಪಾದಕ ಆಕ್ರಮಣ ಮಾಡುವ ಕಾರ್ಯತಂತ್ರವನ್ನು ಮುಸಲೋನಿ ಸಂಯೋಜಿಸಿದ. ಇಟಲಿಯ ಭೂ ಮಾಲೀಕರು, ಬಂಡವಾಳಶಾಹಿಗಳು ಮತ್ತು ಈ ವರ್ಗಗಳ ಹಿತಾಸಕ್ತಿಯನ್ನೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡಿದ್ದ ಸರ್ಕಾರವು ಸಮಾಜವಾದಿಗಳನ್ನು, ರೈತ ಬಂಡುಕೋರರನ್ನು ಮತ್ತು ಕ್ರಾಂತಿಕಾರಿ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಸ್ವಯಂತಂತ್ರವಾದಿಗಳನ್ನು(ಲಿಬರಲ್‍ಗಳು) ಮಟ್ಟ ಹಾಕಲು ‘ಫಾಸಿ’ ಸರಿಯಾದ ಸಂಘಟನೆ ಎಂದು ಪರಿಗಣಿಸಿ, ಅದಕ್ಕೆ ಸರ್ವರೀತಿಯ ಸಹಕಾರ ನೀಡಿತು. ಆಗ ಪ್ರಧಾನಮಂತ್ರಿಯಾಗಿದ್ದ ಗಿಯಲೊಟ್ಟಿಯಂತೂ ಈ ದೇಶಪ್ರೇಮಿ ಸಂಘಟನೆಯಲ್ಲಿ ಯುವಕರು ಸೇರಿಕೊಳ್ಳಬೇಕು ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದ. 1921ರಲ್ಲಿ ಮುಸಲೋನಿ ಇಟಲಿಯ ಸಂಸತ್ತಿಗೆ ಆಯ್ಕೆಯಾದ ತಕ್ಷಣವೆ ‘ಫಾಸಿ’ ಸಂಘಟನೆಯನ್ನು ‘ನ್ಯಾಷನಲ್ ಫಾಸಿಸ್ಟ್ ಪಾರ್ಟಿ’ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತಿಸಿದ. 1922ರಲ್ಲಿ ಪ್ರಭುತ್ವದ ಮುಖ್ಯಸ್ಥನಾದ ಇಟಲಿಯ ರಾಜ ಮೂರನೆಯ ವಿಕ್ಟರ್ ಇಮ್ಯಾನುಯಲ್ ವಿಶೇಷಾಧಿಕಾರವನ್ನು ಉಪಯೋಗಿಸಿ ತನ್ನನ್ನು ಪ್ರಧಾನಮಂತ್ರಿಯನ್ನಾಗಿ ನೇಮಿಸಬೇಕು ಎಂದು ಮುಸಲೋನಿ ಒತ್ತಾಯಿಸತೊಡಗಿದ. ಇಟಲಿಯ ಪಾರ್ಲಿಮೆಂಟಿನ ಬಹುಪಾಲು ಸದಸ್ಯರು ಈ ಬೇಡಿಕೆಯನ್ನು ವಿರೋಧಿಸಿದರು. ತನ್ನ ಬೇಡಿಕೆ ಈಡೇರದಿದ್ದರೆ ಫಾಸಿಸ್ಟ್ ಪಡೆಗಳು ರಾಜಧಾನಿಯಾದ ರೋಂ ನಗರಕ್ಕೆ ಮುತ್ತಿಗೆ ಹಾಕುತ್ತವೆ ಎಂದು ಮುಸಲೋನಿ ಬೆದರಿಸಿದ. ಅಂತೆಯೇ 1921ರ ಮಾರ್ಚ್ ತಿಂಗಳಲ್ಲಿ ಫಾಸಿಸ್ಟ್ ಪಡೆ ರೋಂ ನಗರಕ್ಕೆ ಮುತ್ತಿಗೆ ಹಾಕಿತು. ರಾಜನು ಪಾರ್ಲಿಮೆಂಟಿನ ವಿರೋಧವನ್ನು ತಳ್ಳಿಹಾಕಿ ಮುಸಲೋನಿಯನ್ನು ಪ್ರಧಾನಮಂತ್ರಿಯಾಗಿ ನೇಮಕ ಮಾಡಿದ. ಇದಲ್ಲದೆ ಒಂದು ವರ್ಷದ ಮಟ್ಟಿಗೆ ತಾನು ಸರ್ವಾಧಿಕಾರಿಯಾಗಿ ಆಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಮುಸಲೋನಿಯ ಬೇಡಿಕೆಯನ್ನೂ ರಾಜ ಒಪ್ಪಿಕೊಂಡ. 1924ರಲ್ಲಿ ಸಂಸತ್ತಿಗೆ ಚುನಾವಣೆ ನಡೆಯುವುದಿತ್ತು. ಈ ಚುನಾವಣೆಗಳಲ್ಲಿ ಯಾವ ಪಕ್ಷಕ್ಕೆ ಸರಳವಾದ ಬಹುಮತ ದೊರಕುತ್ತದೆಯೋ ಆ ಪಕ್ಷಕ್ಕೆ ಮುಕ್ಕಾಲು ಪಾಲು ಪಾರ್ಲಿಮೆಂಟ್ ಸ್ಥಾನಗಳನ್ನು ಕೊಡಬೇಕು ಎನ್ನುವ ವಿಚಿತ್ರವಾದ ‘ಅಸೆರ್ಬ್ ಕಾನೂನನ್ನು’ ಮುಸಲೋನಿ ಜಾರಿ ಮಾಡಿದ. ಈ ಚುನಾವಣೆಗಳಲ್ಲಿ ಫಾಸಿಸ್ಟ್ ಪಕ್ಷ ಶೇ. 60ರಷ್ಟು ಮತ ಗಳಿಸಿ, ಒಟ್ಟು 525 ಸ್ಥಾನಗಳಲ್ಲಿ 375 ಸ್ಥಾನಗಳನ್ನು ಪಡೆದುಕೊಂಡಿತು. ಇಲ್ಲಿಂದ ಮುಂದೆ ‘ಬ್ಲ್ಯಾಕ್ ಷರ್ಟ್’ಗಳು, ಫಾಸಿಸ್ಟ್ ಗುಪ್ತ ಪೊಲೀಸರು ಹಾಗೂ ಅರೆಮಿಲಿಟರಿ ಪಡೆಗಳು ಪ್ರಭುತ್ವವನ್ನು ತಮ್ಮ ಕೈಗೆ ತೆಗೆದುಕೊಂಡರು. ಎಷ್ಟೋ ಊರುಗಳಲ್ಲಿ ಫಾಸಿಸ್ಟರು ತಮ್ಮದೇ ಆದ ಪೊಲೀಸು ಮತ್ತು ಕಾನೂನು ವ್ಯವಸ್ಥೆ ಸ್ಥಾಪಿಸಿದ್ದರು. 1924ರಲ್ಲಿ ಫಾಸಿಸ್ಟ್ ಆಡಳಿತವನ್ನು ತಕ್ಷಣ ಬರಖಾಸ್ತುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದ ಸೋಷಿಯಲಿಸ್ಟ್ ನಾಯಕ ಮೆಟ್ಟಿಯೊಟ್ಟಿಯನ್ನು ಅಪಹರಿಸಿ ಹತ್ಯೆ ಮಾಡಲಾಯಿತು; ಈ ಹತ್ಯೆಗೆ ವ್ಯಕ್ತವಾದ ಅಲ್ಪಸ್ವಲ್ಪ ಪ್ರತಿಭಟನೆಯನ್ನು ಫಾಸಿಸ್ಟ್ ಪಡೆಗಳು ಕ್ರೂರ ರೀತಿಯಲ್ಲಿ ತುಳಿದುಹಾಕಿದವು. ತನ್ನ ವಿರೋಧಿಗಳನ್ನು ಬೇಟೆಯಾಡಿ, ಇವರನ್ನು ಕೂಡಿಹಾಕಲೆಂದೇ ಲಿಯಾಪಾರಿ ದ್ವೀಪದಲ್ಲಿ ನಿರ್ಮಿಸಲಾಗಿದ್ದ ದೊಡ್ಡಿಗಳಿಗೆ ಸಾಗಿಸಲು ‘ಒವ್ರಾ’ ಎಂಬ ವಿಶೇಷ ಪೊಲೀಸ್ ಪಡೆಯನ್ನೇ ಮುಸಲೋನಿ ನಿಯೋಜಿಸಿದ. 1928ರಲ್ಲಿ ಇಟಲಿಯ ಪಾರ್ಲಿಮೆಂಟ್ ಹಾಗೂ ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬರಖಾಸ್ತು ಮಾಡಿದ ಮುಸಲೋನಿ ಫಾಸಿಸ್ಟ್ ಸರ್ವಾಧಿಕಾರಿ ಪ್ರಭುತ್ವವನ್ನು ಇಟಲಿಯ ಜನರ ಮೇಲೆ ಹೇರಿದ. ರೋಮನ್ ಕ್ಯಾಥೋಲಿಕ್ ಚರ್ಚ್ ಮೊದಲಿಗೆ ಫಾಸಿಸ್ಟ್ ಆಳ್ವಿಕೆಯನ್ನು ವಿರೋಧಿಸಿತ್ತು. ಆದರೆ 1929ರಲ್ಲಿ ಮುಸಲೋನಿ ಪೊಲಿಪ್‍ರ ಜೊತೆ ‘ಲ್ಯಾಟರನ್ ಒಪ್ಪಂದ’ವನ್ನು ಮಾಡಿಕೊಂಡು ರೋಂ ನಗರದ ಒಳಗೇ ಸಂಪೂರ್ಣ ಚರ್ಚಿನ ಸ್ವಯಂ ಆಡಳಿತಕ್ಕೆ ಸೇರಿದ ವ್ಯಾಟಿಕನ್ ನಗರವನ್ನು ಕಟ್ಟಿಕೊಟ್ಟ. ಚರ್ಚ್ ನಿಯುಕ್ತಿಗೊಳಿಸಿದ ಎಲ್ಲ ಪುರೋಹಿತರಿಗೆ ಸರ್ಕಾರದಿಂದ ಸಂಬಳ, ಶಾಲೆಗಳಲ್ಲಿ ಕ್ಯಾಥೋಲಿಕ್ ಧರ್ಮದ ಕಡ್ಡಾಯ ಬೋಧನೆ ಮುಂತಾದ ಸವಲತ್ತುಗಳನ್ನು ನೀಡಿದ ನಂತರ ಪೊಲೀಪ್ ಫಾಸಿಸ್ಟರಿಗೆ ಬೇಷರತ್ ಬೆಂಬಲ ಘೋಷಿಸಿದ. ಎಲ್ಲ ರಾಜಕೀಯ ಪಕ್ಷಗಳು, ಕಾರ್ಮಿಕ, ರೈತ ಸಂಘಟನೆಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಯಿತು. ಹೆಂಗಸರು ಮನೆಯ ಹೊರಗಿನ ಪ್ರಪಂಚಕ್ಕೆ ಕಾಲಿಡದೆ, ಮನೆಯಲ್ಲಿ ಒಳ್ಳೆಯ ಗೃಹಿಣಿಯರಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಇಟಲಿಗೆ ಹೆಚ್ಚೆಚ್ಚು ಮಕ್ಕಳನ್ನು ಅಗತ್ಯವಾಗಿ ಹಡೆದುಕೊಡಬೇಕು ಎಂಬ ಆಜ್ಞೆಗಳನ್ನು ಮುಸಲೋನಿ ಹೊರಡಿಸಿದ. ಹೆಂಗಸರನ್ನು ಹೆರುವ ಕಾರ್ಖಾನೆಗಳನ್ನಾಗಿಸುವ ಈ ಆಜ್ಞೆಗೆ ಮುಸಲೋನಿ ಮಹಾಶಯ ಕೊಟ್ಟ ಹೆಸರು ‘ಮಕ್ಕಳನ್ನು ಹೆರುವ ಯುದ್ಧ!’. ಸೋಶಿಯಲಿಸ್ಟ್/ಕಮ್ಯುನಿಸ್ಟ್‍ರ ನಡುವೆ ಬಹಳ ಜನಪ್ರಿಯವಾಗಿದ್ದ, ಅಂತಾರಾಷ್ಟ್ರೀಯ ಕಮ್ಯುನಿಸ್ಟ್ ಚಳವಳಿಯಲ್ಲಿಯೂ ಗುರುತಿಸಿಕೊಂಡು ಎರಡನೆಯ ಕಮ್ಯುನಿಸ್ಟ್ ಇಂಟರ್‍ನ್ಯಾಶನಲ್‍ನಲ್ಲಿಯೂ ಭಾಗವಹಿಸಿದ್ದ, ಸೋಶಿಯಲಿಸ್ಟ್ ಮುಖವಾಣಿಯ ‘‘ಅವಂತಿ!’’ಯ ಸಂಪಾದಕನಾಗಿದ್ದ ಮುಸ್ಸಲೋನಿಯ ನಂತರದ ರಾಜಕೀಯ ಹೆಜ್ಜೆಗಳನ್ನು ರಾಜಕೀಯ ಅವಕಾಶವಾದಿತನ ಎಂದರೆ ಅದು ಒಂದು ರೀತಿಯ ಸುಲಭ ಮಾದರಿಯ ಸಾರ್ವತ್ರ್ರೀಕರಣವಾಗುತ್ತದೆ. ಮುಸಲೋನಿಯು ‘ಯು’ ಟರ್ನ್ ತೆಗೆದುಕೊಂಡು ಕಮ್ಯುನಿಸ್ಟ್ ಚಳವಳಿಯಲ್ಲಿದ್ದ ತನ್ನ ಜೊತೆಗಾರರನ್ನು, ಕಾರ್ಯಕರ್ತರನ್ನು ಫಾಸಿಸ್ಟ್ ಪಡೆಯ ಮೂಲಕ ಮಾರಣಹೋಮ ಮಾಡಿದನು. ಇಟಲಿಯ ‘‘ರಾಷ್ಟ್ರೀಯತೆ’’ಯ ಪ್ರತಿಷೆವಿ ಮತ್ತು ಗೌರವದ ಸಂಕೇತ ತಾನು ಎಂಬಂತೆ ಬಿಂಬಿಸಿಕೊಂಡು ಆ ಮೂಲಕ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹೀನಾಯವಾಗಿ ಸೋತು ಇಟಲಿಯು ಜಗತ್ತಿನೆದುರು ಮಂಡಿಯೂರಿ ನಿಲ್ಲುವಂತೆ ಮಾಡಿದ ಮುಸಲೋನಿಯ ರಾಕ್ಷಸೀಯ ರಾಜಕೀಯ ನಿಲುವುಗಳ ಮರುಚಿಂತನೆ ಅಗತ್ಯವಾಗಿದೆ.

 

(ಮುಂದಿನ ಭಾನುವಾರಕ್ಕೆ...)