ಮಹಿಷ ಮೋಹಿನಿಗೆ ಮಾರುಹೋದ ಮುರುಗೆಪ್ಪ!

ಮಹಿಷ ಮೋಹಿನಿಗೆ ಮಾರುಹೋದ ಮುರುಗೆಪ್ಪ!

ಆಗಿನ ಕಾಲದ ಮುಲ್ಕೀ ಪರೀಕ್ಷೆ ಪಾಸಾಗಿದ್ದ ಮುರಿಗೆಪ್ಪ, ಹುಬ್ಬಳ್ಳಿಯ ಅಮೀನಾ ಸಾಹೇಬ ಕಮಡೊಳ್ಳಿ, ಮಿಣಜಗಿ, ಕೃಷ್ಣಾ ಕ್ಷತ್ರಿಯ ಅವರ ಚಿತ್ರಕಲೆಗೆ ಮಾರು ಹೋಗಿ ಕುಂಚದ ಮಾಯೆಗೆ ಸಿಲುಕಿದ್ದ. ಕುಂದಗೋಳ ತಾಲೂಕು ಗುಡಗೇರಿಯ ಮುರಿಗೆಪ್ಪನಿಗೆ ಎಡವಿ ಬಿದ್ದರೆ ಹುಬ್ಬಳ್ಳಿ ಸಿಕ್ಕುತಿತ್ತು. ಹುಬ್ಬಳ್ಳಿಯ ಇಂಥ ಕಲಾವಿದರ ಕೈಯಲ್ಲಿ ಪಳಗುತ್ತಲೇ ಹೈಸ್ಕೂಲೊಂದರಲ್ಲಿ ಡ್ರಾಯಿಂಗ್ ಮಾಸ್ತರಿಕೆಯ ಕೆಲಸವೂ ಸಿಕ್ಕಿತ್ತು. ಮುರಿಗೆಪ್ಪನ ತಮ್ಮ ಶಿವಪ್ಪ  ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿದ್ದ. ಗುಡಗೇರಿಯಲ್ಲಿ ಇವರದು ಎಂಟೆತ್ತಿನ ಕಮ್ತ. ಅರಮನೆಯಂಥ ಅಟವಾಳಗಿ ಮನೆ. ಕುಸುಬಿ ಎಣ್ಣೀಯ ಗಾಣ ಕೂಡ ಇತ್ತು. ಶಿಶುನಾಳ ಶರೀಫ ಶಿವಯೋಗಿಗಳ ಜಾತ್ರೆಗೆ ಬರುವ ಭಕ್ತರಿಗಾಗಿ ಇವರ ಮನೆಯಲ್ಲಿ ಪ್ರತಿವರ್ಷ ದಾಸೋಹವೂ ನಡೀತಿತ್ತು. ಇಬ್ಬರೂ ಮಕ್ಕಳು ನೌಕರಿ ಸೇರಿದ್ದರಿಂದ ಕಮ್ತ ಮಾಡೋರಿನ್ಯಾರು ಅಂಥ ಮುರಿಗೆಪ್ಪನ ಅಪ್ಪ ಬಸಪ್ಪ ಬಹಳಷ್ಟು ಹೊಲಗಳನ್ನು ಮಾರಿಬಿಟ್ಟರು. ಇನ್ನೊಬ್ಬ ತಮ್ಮ ಗೂಳಪ್ಪ ಉಳಿದ ಹೊಲಗಳೊಂದಿಗೆ ಕಮ್ತದ ಉಸ್ತುವಾರಿ ನೋಡಿಕೊಳ್ಳತೊಡಗಿದ. ಸ್ವಭಾವತಃ ಅಲೆಮಾರಿಯಾದ ಮುರಿಗೆಪ್ಪ ನೌಕರಿಗೆ ಸೇರಿದ್ದೇ ಪವಾಡವಾಗಿತ್ತು. `ಇವ್ನೇನ್ ಭಾಳ ದಿನ ನೌಕರಿ ಮಾಡಂಗಿಲ್ಲ ಬಿಡು' ಅಂತ ನೆರೆಹೊರೆಯವರು ಆಡಿಕೊಂಡಿದ್ದೂ ಉಂಟು.  ನೌಕರಿ ಸಿಕ್ಕು ದಾರಿಗೆ ಹತ್ತಿದ ಹಿರಿಯ ಮಕ್ಕಳಿಬ್ಬರಿಗೂ ಮದುವೆ ಮಾಡುವ ಪ್ರಯತ್ನಗಳೂ ಸುರುವಾದವು. 

 

ಮುರಿಗೆಪ್ಪ ನಮ್ಮೂರಿಗೆ ಮೊದಲು ಬಂದಿದ್ದೇ ಕನ್ಯೆ ನೋಡಲು ಅಂತ. ವಿಲಕ್ಷಣ ಸ್ವಭಾವದ ಮುರಿಗೆಪ್ಪ ನೋಡಲು ಬಂದ ಹುಡುಗಿಯನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆ ಆದದ್ದೂ ಕೂಡ ಒಂದು ವಿಲಕ್ಷಣ ಕಥೆಯೇ!

 

ರೈಲುಗಾಡಿಯಲ್ಲಿ ಗುಡಗೇರಿಯಿಂದ  ದೇವರಗುಡ್ಡ ಸ್ಟೇಷನ್ನಿಗೆ ಇಳಿದರೆ ಅಲ್ಲಿಂದ ನಮ್ಮೂರು ಒಂದೂವರೆ ಕಿಮೀ ಇದೆ ಅಷ್ಟೆ. ಪರಿಚಿತ ಆಪ್ತೇಷ್ಟರು ಇಂಥ ಮನೆಯಲ್ಲಿ ಕನ್ಯೆ ಇರುವುದಾಗಿ ತಿಳಿಸಿದ್ದರು. ಹೋಗಿ ನೋಡಿಕೊಂಡು ಬರುವ ದಿನದ ಕುರಿತು ಹಿತೈಷಿಗಳಿಗೆ ತಿಳಿಸುವುದು, ಮುರಿಗೆಪ್ಪ ಏನೋ ಕಾರಣ ಹೇಳಿ ತಪ್ಪಿಸಿಕೊಳ್ಳೋದು ಹೀಗೆ ನಡೆದೆ ಇತ್ತು. ನಿಜ ಹೇಳಬೇಕೆಂದರೆ, ಮದುವೆ, ಸಂಸಾರ ಇದೆಲ್ಲ ಅವನಿಗೆ ಒಗ್ಗದ ವಿಷಯವೇ ಆಗಿತ್ತು. ಬದುಕನ್ನು ಗಂಭೀರವಾಗಿ ಎಂದೂ ನೋಡದ ಮುರಿಗೆಪ್ಪ  ಎಲ್ಲವನ್ನೂ ಉಢಾಪೆ ಅಥವಾ ಒಂದು ರೀತಿಯ ತುಂಟತನದಿಂದಲೆ ಕಾಣುತಿದ್ದ. ಆಗಲೇ ಸಿದ್ಧಿಪುರುಷರನ್ನು ಸಾಧು ಸಂತರನ್ನು ಹುಡುಕಿಕೊಂಡು ಅಲೆಯುತಿದ್ದ, ಅವರ ಉಪದೇಶಾಮೃತಕ್ಕೆ ಮಾರು ಹೋಗುತ್ತ ಬದುಕಿನ ಬಗ್ಗೆ ತನ್ನದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದ. ಯಾವಾಗಲೂ ಲಗಾಮಿಲ್ಲದ ಕುದುರೆಯಂತಿರಬೇಕೆಂದು ಬಯಸುತಿದ್ದ ಮುರಿಗೆಪ್ಪನಿಗೆ ಈಗ ಲಗಾಮು ಹಾಕುವ ಪ್ರಯತ್ನ ಸುರುವಾಗಿತ್ತು. `ಈ ಅಡ್ನಾಡಿ ಮುರುಗ್ಯಾ ನನ್ನ ಮಾತು ಕೇಳ್ತಾನೋ ಇಲ್ಲ ಹೀಂಗ್ ಹೊಕ್ಕಾನೋ' ಅನ್ನುವ ಅನುಮಾನವೂ ಅವನ ಅಪ್ಪ ಬಸಪ್ಪನಿಗೆ ಕಾಡತೊಡಗತ್ತು. `ಇಂವಾ ಒಪ್ಪಿದರೂ, ಏನಾದರೂ ಎಡವಟ್ಟು ಮಾಡೇ ಮಾಡ್ತಾನ!' ಅಂತ ಅವರಿಗೂ ಮತ್ತೆ ಮತ್ತೆ ಅನಿಸುತ್ತಿತ್ತು.

 

ಬಸಪ್ಪಜ್ಜನ ಎರಡನೇ ಮಗ ಶಿವಪ್ಪ ಅವನಿಗೆ ಚಿಕ್ಕಂದಿನಿಂದಲೂ ನಾಟಕದ ಹುಚ್ಚು. ಊರಿಗೆ ಯಾವುದಾದರೂ ನಾಟಕದ ಕಂಪನಿ ಬಂದ್ರೆ ತೀರಿತು. ಅವರ ಉಸ್ತುವಾರಿಗೇ ನಿಂತುಬಿಡುತಿದ್ದ. ಇವ್ನಿಗೆ ಮದುವೀ ಮಾಡದಿದ್ರ ಇಂವಾ ಕಂಪನಿ ಜತೀಗೆ ಜಿಗಿದ್ರ ಜಿಗದ್ನ ಅಂತಾ ಇವರಿಗೆ ಅವನ ಬಗೆಗೂ ಆತಂಕವಿತ್ತು. ಕೊನೆಗೆ ಬಂಧುಬಳಗದ ಹಿರೀಕರನ್ನು ಕರೆಸಿ ಮುರಿಗೆಪ್ಪನನ್ನು ಕೂಡಿಸಿ ಅವನಿಗೆ ಇದನ್ನೆಲ್ಲ ಮನದಟ್ಟು ಮಾಡುವಲ್ಲಿ ಅವರು ಯಶಸ್ವಿಯಾದರು.

 

ಅಂತೂ ಅಪ್ಪನ ಹಿತವಚನಕ್ಕೆ ತಲೆಬಾಗಿದ ಮುರಿಗೆಪ್ಪ, ಕನ್ಯೆ ನೋಡುವ ದಿನಕ್ಕೆ ಜುಬ್ಬಾ ಅಂಗಿ, ಬಿಳಿಧೋತರ ತೊಟ್ಟು, ಕಾಲಿಗೆ ಜಿರ್ಬುರಕಿ ಜೋಡು ಮೆಟ್ಟಿಕೊಂಡು ಸಿದ್ಧನಾದ.

ಆ ಪ್ರಕಾರ ಮುರಿಗೆಪ್ಪ ಮತ್ತು ಅವನ ಸಂಗಡಿಗರು ದೇವರಗುಡ್ಡ ಸ್ಟೇಷನ್ನಿಗೆ ಬಂದಿಳಿದರು.

 

ಅವು ಕಾರಹುಣ್ಣಿವೆಯ ನಂತರದ ದಿನಗಳು ಶ್ರಾವಣದ ಸಂಭ್ರಮಕೆ ಭೂದೇವಿ ತಾನೂ ಸಿಂಗಾರಗೊಳ್ಳುತಿದ್ದಳು. ಎತ್ತ ನೋಡಿದರೂ ಹಸಿರು ಹಾಸಿರುವ ಗುಡ್ಡ ಕಣಿವೆ ತಪ್ಪಲು. ಸಾವಿ, ನವಣಿ, ಹೆಸರು, ಅಲಸಂದಿ, ಶೇಂಗಾ ಬೆಳೆಗಳ ಹೊಲಗಳು, ಅಲ್ಲಲ್ಲಿ ಹೊಲಗಳ ಮೇಲೆ ಸಾಲುಗಟ್ಟಿ ಹಾರುವ ಹಕ್ಕಿಗಳು, ಅವುಗಳ ಇಂಚರ ಕಿವಿತುಂಬುತಿತ್ತು. ಅರ್ಧ ತಾಸಿನ ಹಾದಿ ಸವೆಸಿದರೆ ಊರು, ಅಲ್ಲಿ ಅದ್ಯಾವ ಮನೆಯಲ್ಲಿ ಅದ್ಯಾವ ದೇವತೆ ನನಗಾಗಿ ಕಾದಿರಬಹುದು ಎಂದುಕೊಳ್ಳುತ್ತಲೆ ಮುರಿಗೆಪ್ಪ ತನ್ನಷ್ಟಕೆ ನಕ್ಕ.

ಇದನ್ನು ಗಮನಿಸಿದ ಅವನ ಹಿರಿಯ ಸಂಗಾತಿ ಮಲ್ಲಣ್ಣ` ಯಾಕಲೇ, ಮುರಗ್ಯಾ ನಗಾಕತ್ಯೀ ಮಗನ, ಇನ್ನೂ ಊರ ಬಂದಿಲ್ಲ, ಹುಡುಗೀ ನೋಡಿಲ್ಲ. ಆಲೇ ಅದೇನ್ ಹುಕೀ ಬಂತಲೇ ನಿನಗ' ಅಂತ ಆಷಾಡಿದ‌.

 

ಯಾಕೋ ಮುರಿಗೆಪ್ಪ ಮಾತ್ರ ಅನ್ಯಮನಸ್ಕನಾಗಿಯೇ ಇದ್ದ. ಹಕ್ಕಿ ಹಾಂಗ ಇದ್ದವನ ರೆಕ್ಕಿ ಕತ್ತರಿಸಿದಂತೆ ಒಳಗೊಳಗೆ ತತ್ತರಿಸುತಿದ್ದ. ನಿರೀಕ್ಷೆಯಂತೆ ಕನ್ಯೆ ನೋಡುವ ಶಾಸ್ತ್ರ ಮುಗಿಯಿತು. ಹೊಟ್ಟೆ ಉಪಚಾರವೂ ಆಯಿತು. ಹುಡುಗಿ ಇವನನ್ನು ಯಾವಾಗ ನೋಡಿದಳೊ, ಇವನು ಅವಳನ್ನು ಯಾವಾಗ ನೋಡಿದನೋ ಎಲ್ಲವೂ ಕತ್ತಲೆಯಲ್ಲೇ ಎಲ್ಲ ಸರಿದು ಹೋದಂಗಾತು. ವಾಡಿಕೆಯಂತೆ ಹುಡುಗನ ಒಪ್ಪಿಗೆ ಕುರಿತ ಸಂಗತಿಯನ್ನು ತಿಳಿಸುವುದಾಗಿ ಹೇಳಿ ಅಲ್ಲಿಂದ ಹೊರಬಿದ್ದರು.

 

ಬಂದ ಕೆಲಸ ಆದ ಮೇಲೆ ಮಲ್ಲಣ್ಣನ ದೋಸ್ತ ನಾಗಪ್ಪನ ಮನೆಗೆ ಬಂದರು. ಅಲ್ಲೇ ಊಟ ಆಯಿತು. ಊರಿಗೆ ಮರಳಲು ಗಾಡಿ ಸಂಜೆಗೆ ಇತ್ತು. `ಅಲ್ಲೀವರೆಗೂ ಏನ್ ಮಾಡ್ತೀರಿ. ಬರ್ರಿ ನಮ್ಮ ತ್ವಾಟಕ್ಕಾದರೂ ಹೋಗಿ ಬರೋಣ'  ಅಂತ ನಾಗಣ್ಣ ಕರೆದ.

ಮಲ್ಲಣ್ಣನಿಗೂ ಅದೇ ಸರಿ ಎನಿಸಿತು. ಅವರು ಮೂವರು ತೋಟದ ಕಡೆ ಹೆಜ್ಜೆ ಹಾಕಿದರು.

 

ಅದು ಹೊಲದ ಹಾದಿ. ಈಗಿನಂತೆ ಆಗ ರಸ್ತೆಗಳಿರಲಿಲ್ಲ. ಗಟಾರು ಇಲ್ಲದ ಹಾದಿ. ಮಳೆ ಬಂದರೆ ಹಾದಿ ತುಂಬ ನೀರು. ಹೀಗಾಗಿ ಹಾದಿಯ ಇಕ್ಕೆಲಗಳಲ್ಲಿ ಆಷಾಡದ ಹೊತ್ತಿಗೆ ಭರಪೂರ ಹುಲ್ಲು ಬೆಳೆದು. ಹಸಿರಾಗಿರುತಿತ್ತು.

ಆಗಲೇ ಸೂರ್ಯ ನೆತ್ತಿ ಮೇಲೆ ಬಂದಿದ್ದ. ಆಚೀಚೆ ಬಾನ ಹಾದಿಯಲ್ಲಿ ಮೋಡಸಾಲು ತೇಲುತಿದ್ದವು. ಮುರುಗೆಪ್ಪನ ಮನದಲ್ಲೂ ಅವೇ ಮೋಡ ಸಾಲುಗಟ್ಟಿದ್ದವು. ಕರಗುವುದೋ ಹಾಗೇ ಜರುಗುವುದೋ ಎಂಬ ತುಮುಲ ಅಲ್ಲೂ ಹೆಪ್ಪುಗಟ್ಟುತಿತ್ತು. 

 

ಹಾದಿಯ ಬದಿಗೆ ಎಮ್ಮೆ ಹುಲ್ಲು ಮೇಯುತಿದ್ದವು. ಸ್ವಲ್ಪ ದೂರದಲ್ಲಿ ಒಬ್ಬ ಹುಡುಗಿ ಎಮ್ಮೆ ಮೇಲೆ ಕೂತು ಅವುಗಳಿಗೆ ಒದರುತಿದ್ದಳು. ಅವಳು ಸಮೀಪಿಸುತ್ತಲೇ ಮುರುಗೆಪ್ಪನ ಅನ್ಯಮನಸ್ಕತೆ ಒಮ್ಮೆಲೆ ಕಳಚಿಬಿತ್ತು. ಹುಡುಗಿಯತ್ತ ಕುತೂಹಲದ ಕಣ್ಣು ನೆಟ್ಟವು. ಅದೇ ವೇಳೆ ಈ ಅಪರಿಚಿತನತ್ತ ನೋಟ ಬೀರಿದ ಆ ಬಾಲೆ ನಾಚಿ ಮುಖ ಹೊರಳಿಸಿದಳು. ಆ ಕ್ಷಣಕ್ಕೆ ಏನಾಯಿತೋ ಮುರುಗೆಪ್ಪ ಎಡವೀ ಬಿದ್ದುಬಿಟ್ಟ. 'ಏಯ್ ಹುಶಾರೋ ಮುರುಗೆಪ್ಪ' ಮಲ್ಲಣ್ಣನೊಂದಿಗೆ ಮಾತಿನಲ್ಲಿ ಮುಳುಗಿದ್ದ ನಾಗಪ್ಪ ನಗಾಡುತ್ತ ಸಂಭಾಳಿಸುವಷ್ಟರಲ್ಲಿ ಆ  ಮಹಿಷಪಾಲಿಕೆಯೂ ಮತ್ತೊಮ್ಮೆ ಮುರುಗೆಪ್ಪನನ್ನು ನೋಡಿ ಕಿಲಕ್ಕನೆ ನಕ್ಕು ಬಿಟ್ಟಳು. ಮುರುಗೆಪ್ಪ ತಡಾಬಡಾಯಿಸುತ್ತಲೆ ಸಾವರಿಸಿಕೊಂಡು ಮುಂದೆ ಹೆಜ್ಜೆ ಹಾಕಿದ.

 

ನಾಲ್ಕಾರು ಹೆಜ್ಜೆ ಮುಂದಿಟ್ಟಿರಲಿಲ್ಲ. `ಮಲ್ಲಣ್ಣ' ಎಂದ ಮುರುಗೆಪ್ಪ. ಯಾಕೆ ಎಂಬಂತೆ ನೋಡಿದ ಮಲ್ಲಣ್ಣ. `ತಡೀಯಿಲ್ಲೆ' ಅಂದ ಮುರುಗೆಪ್ಪ. ದನ ಕಾಯುತಿದ್ದ ಆ ಹುಡುಗಿಯತ್ತ ಹೊರಳಿ ` ಏಯ್ ಹುಡುಗಿ ಬಾಯಿಲ್ಲೆ' ಅಂದ. ಹುಡುಗಿ ಎಮ್ಮೆ ಸವಾರಿ ಮಾಡುತ್ತಲೇ ಇವರ ಬಳಿ ಬಂದಳು. `ನಿನ್ನ ಹೆಸರೇನು?' ಕೇಳಿದ ಮುರುಗೆಪ್ಪ. `ನೀಲಾ' ಎಂದಳಾಕೆ.

` ನೀಲಾ...ನನ್ನ ಮದುವಿ ಆಕ್ಕಿಯ ನೀನು' ಕೇಳಿದ ಮುರುಗೆಪ್ಪ. ಲಂಗ ದಾವಣಿಯಲ್ಲಿ ನವಿಲಿನಂತೆ ನಲಿಯುತಿದ್ದ ಅವಳಿಗೆ ಅದೇನು ತಿಳಿಯಿತೋ, ಅಪರಿಚಿತನ ಬಾಯಲ್ಲಿ ತನ್ನ ಹೆಸರು ಪಡೆದ ದನಿಗೆ ರೋಮಾಂಚಿತಳಾದಂತೆ.

` ಹ್ಞೂಂ ಆಕ್ಕನೀ' ಎಂದು ರಾಗವಾಗಿ ಉಲಿದೇ ಬಿಟ್ಟಳು ಆ ಪೋರಿ.

 

`ಮಲ್ಲಣ್ಣಾ, ನಾನು ಮದುವೆ ಆಗೋದಾದರ ಈ ಹುಡ್ಗೀನ ಆಕ್ಕನೀ. ಇವ್ಳ ದಾತಿಕರಿಗೆ ವಿಷಯ ತಿಳ್ಸಿ ಒಪ್ಸೋ ಕೆಲ್ಸಾ ಮತ್ತ ಮುಂದಿನ ಜವಾಬ್ದಾರಿಯೆಲ್ಲ ನಿಂದು.' ಎಂದವನೇ ಮುರುಗೆಪ್ಪ ಮುಂದೆ ಹೆಜ್ಜೆ ಹಾಕಿದ.

 

ಮಟಮಟ ಮಧ್ಯಾಹ್ನವೇ ಅನಿರೀಕ್ಷಿತ ಮಳೆಗೆ ಸಿಕ್ಕು ತೊಯ್ಸಿಕೊಂಡವನಂತೆ ಮಲ್ಲಣ್ಣ ಬೆಪ್ಪುತಕ್ಕಡಿಯಾಗಿದ್ದ.

 

ಆಗಲೇ, ಚಿತ್ತಭಿತ್ತಿಯಲ್ಲಿ ಮಹಿಷಮೋಹಿನಿಯ ಚಿತ್ರ  ಬಿಡಿಸಿಕೊಂಡಿದ್ದ ಮುರುಗೆಪ್ಪ ಅರಸದೆ ತೊಡರಿದ ಮೋಹದ ಬಳ್ಳಿಯಲ್ಲಿ ಮುಗ್ಗರಿಸಿ ಬಿದ್ದಿದ್ದ!