ಐಪಿಎಲ್ ಫೈನಲ್‌ಗೆ ಮುಂಬೈ ಇಂಡಿಯನ್ಸ್: ಸಿಎಸ್‌ಕೆಗೆ ಮೂರನೇ ಸೋಲು

ಐಪಿಎಲ್ ಫೈನಲ್‌ಗೆ ಮುಂಬೈ ಇಂಡಿಯನ್ಸ್: ಸಿಎಸ್‌ಕೆಗೆ ಮೂರನೇ ಸೋಲು

ಚೆನ್ನೈ: 12ನೇ ಆವೃತ್ತಿಯ ಐಪಿಎಲ್‌ನಲ್ಲಿ, ಚೆಪಾಕ್ ಅಂಗಳದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಫೈನಲ್‌ನತ್ತ ಹೆಜ್ಜೆ ಇಟ್ಟಿದೆ. 6 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿದ ರೋಹಿತ್ ಪಡೆಗೆ, ಸರಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೂರನೇ ಗೆಲುವು ಇದಾಗಿದೆ. 

ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ತಂಡ ಮೊದಲು ಬ್ಯಾಟಿಂಗ್ ಮಾಡಿ 4 ವಿಕೆಟ್ ಪತನಕ್ಕೆ 131 ರನ್ ಕಲೆಹಾಕಿತು. ಅಂಬಟಿ ರಾಯ್ಡು 37 ಎಸೆತಕ್ಕೆ 42* ರನ್ ಬಾರಿಸಿದರೆ ಎಂಎಸ್ ಧೋನಿ 29 ಎಸೆತಗಳಲ್ಲಿ 37* ರನ್ ಬಾರಿಸುವ ಮೂಲಕ ಬ್ಯಾಟಿಂಗ್ ಮುಗಿಸಿದರು. 

ಮುಂಬೈ ಇಂಡಿಯನ್ಸ್ ತಂಡದಿಂದ ಆರಂಭಿಕ ಆಟಗಾರನಾಗಿ ಬ್ಯಾಟ್ ಹಿಡಿದು ಬಂದ ರೋಹಿತ್ ಶರ್ಮಾ ಕೇವಲ ನಾಲ್ಕು ರನ್‌ಗಳಿಗೆ ಔಟ್ ಆಗುವ ಮೂಲಕ ಭಾರೀ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೆ ಕ್ವಿಂಟನ್ ಡಿಕಾಕ್ 8 ರನ್‌ಗಳಿಗೆ ವಿಕೆಟ್ ಕೊಟ್ಟಿದ್ದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಚಿಂತೆಗೆ ಕಾರಣವಾಗಿತ್ತು. ಸೂರ್ಯಕುಮಾರ್ ಯಾದವ್ (71 ರನ್) ಹಾಗೂ ಇಶಾನ್ ಕಿಶನ್ (28 ರನ್) ಜೋಡಿ ತಂಡದ ಮೇಲಿದ್ದ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರು. ಹಾರ್ದಿಕ್ (13) ಮತ್ತು ಸೂರ್ಯಕುಮಾರ್ ಜೋಡಿಯಿಂದಾಗಿ ತಂಡ ಜಯ ಸಾಧಿಸುವಂತಾಯಿತು. ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜೀನರಾದರು.

ಮುಂಬೈ ವಿರುದ್ಧ ಸೋತರೂ ಸಿಎಸ್‌ಕೆಗೆ ಫೈನಲ್ಸ್‌ಗೆ ಹೋಗಲು ಇನ್ನೊಂದು ಅವಕಾಶವಿದೆ. ಶುಕ್ರವಾರ ವೈಜಾಗ್‌ನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದರೆ ಸಿಎಸ್‌ಕೆ ಫೈನಲ್ ತಲುಪಬಹುದು. ಬುಧವಾರ ಡೇರ್‌ ಡೆವಿಲ್ಸ್‌ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಸಿಎಸ್‌ಕೆಗೆ ಎರಡನೇ ಕ್ವಾಲಿಫೈಯರ್ನಲ್ಲಿ ಎದುರಾಳಿಯಾಗಲಿದೆ. 

ಅತಿ ಹೆಚ್ಚು ಬಾರಿ ಐಪಿಎಲ್ ಫೈನಲ್‌ಗೇರಿದ ಪಟ್ಟಿಯಲ್ಲಿ ಚೆನ್ನೈ (7) ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ (5) ಎರಡನೇ ಸ್ಥಾನದಲ್ಲಿ, ಆರ್‌ಸಿಬಿ (3) ಮೂರನೇ ಸ್ಥಾನದಲ್ಲಿದೆ.