ಮುಂಬೈ ಇಂಡಿಯನ್ಸ್‌ಗೆ ರೋಚಕ ಜಯ

ಮುಂಬೈ ಇಂಡಿಯನ್ಸ್‌ಗೆ ರೋಚಕ ಜಯ

ಹೈದರಾಬಾದ್: ಐಪಿಎಲ್ 12ನೇ ಸರಣಿಯ ಕಿರೀಟ ಮುಂಬೈ ಇಂಡಿಯನ್ಸ್ ಪಾಲಿಗೆ ಸೇರಿದೆ. ನಿನ್ನೆ ನಗರದ ರಾಜೀವ್‌ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಚೈನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಮುಂಬೈ ತಂಡ ಜಯಭೇರಿ ಬಾರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ  ತಂಡ 20 ಒವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ಕೀರನ್ ಪೊಲಾರ್ಡ್ 25 ಎಸೆತಗಳಲ್ಲಿ 41* ರನ್ ಗಳಿಸಿ ಮುಂಬೈ ತಂಡದ ಬ್ಯಾಟಿಂಗ್ ಮರ್ಯಾದೆ ಕಾಪಾಡಿದರು. 

ಹೆಚ್ಚೇನು ಅಲ್ಲದ ರನ್‌ಗಳನ್ನು ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್ ಪತನಕ್ಕೆ 147 ರನ್ ಗಳಿಸಿ ಒಂದೇ ಒಂದು ರನ್ನಿಂದ ಸೋಲೊಪ್ಪಿಕೊಂಡಿತು. ಮುಂಬೈ ತಂಡದ ಕಳಪೆ ಫೀಲ್ಡಿಂಗ್‌ನಿಂದಾಗಿ ಶೇನ್ ವಾಟ್ಸನ್ ಮೂರು ಬಾರಿ ಕ್ಯಾಚ್ ಔಟ್ ಆಗಬೇಕಿದ್ದವರು ಬಚಾವಾದರು. ಕೊನೆಯ ಓವರ್ನಲ್ಲಿ ರನ್ ಔಟ್ ಆಗಿ ಗೆಲುವಿನ ಬಗ್ಗೆ ಇದ್ದ ನಿರೀಕ್ಷೆಯನ್ನು ಹುಸಿ ಮಾಡಿದರು. 

ಕೊನೆಯ ಓವರ್ನ ನಾಲ್ಕನೇ ಎಸೆತಕ್ಕೆ ಶೇನ್ ವಾಟ್ಸನ್ ರನ್ ಔಟ್ ಆದರೆ 5ನೇ ಎಸೆತಕ್ಕೆ ಶಾರ್ದೂಲ್ ಠಾಕೂರ್ ಎರಡು ರನ್ ಗಿಟ್ಟಿಸಕೊಂಡರು. ಕೊನೆಯ ಬಾಲ್ ಎಸೆದ ಮಲಿಂಗ ಶಾರ್ದೂಲ್‌ರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ತಂಡದ ಜಯಕ್ಕೆ ಕಾರಣವಾದರು.

ಈ ಗೆಲುವಿನ  ಮೂಲಕ 4 ಬಾರಿ ಐಪಿಎಲ್ ಕಪ್ ಗೆದ್ದ ಖುಷಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ. ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಸತತ 4 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಏಕೈಕ ತಂಡ ಎನ್ನುವ ಹೆಗ್ಗಳಿಕೆಯೂ ಸಹ ಮುಂಬೈ ತಂಡಕ್ಕೆ ಸಿಕ್ಕಿದೆ.