ಖರೀದಿ ವಿಚಾರದಲ್ಲಿ ಬಹುತೇಕ ಕನ್ನಡ ಚಲನಚಿತ್ರಗಳು ಅನಾಥ : ಆರ್ಥಿಕವಾಗಿ ನಿರ್ಮಾಪಕ ಗೋತ  

ಕನ್ನಡ ಚಲನಚಿತ್ರಗಳನ್ನು ವಾಹಿನಿಗಳು ಒಳ್ಳೆ ಬೆಲೆ ನೀಡಿ ಖರೀದಿಸುತ್ತಿದ್ದ ದಿನಗಳು ಈಗ ಇತಿಹಾಸ. ಯಾವ್ಯಾವುದೋ ನಿಯಮಗಳು ನಿರ್ಮಾಪಕರ ಬಂಡವಾಳ ವಾಪಸ್ ಪಡೆಯುವುದಕ್ಕೂ ಅಡ್ಡಿಯಾಗಿವೆ.

ಖರೀದಿ ವಿಚಾರದಲ್ಲಿ ಬಹುತೇಕ ಕನ್ನಡ ಚಲನಚಿತ್ರಗಳು ಅನಾಥ : ಆರ್ಥಿಕವಾಗಿ ನಿರ್ಮಾಪಕ ಗೋತ  

ಕಿರುತೆರೆ ವಾಹಿನಿಗಳು ಬಂದ ಹೊಸತರಲ್ಲಿ ಕನ್ನಡ ಸಿನಿಮಾಗಳನ್ನ ಎಂಟರಿಂದ ಹತ್ತು ಲಕ್ಷದವರೆಗೆ ಕೊಳ್ಳುತ್ತಿದ್ದರಿಂದ ಸಣ್ಣ ಪ್ರಮಾಣದ ನಿರ್ಮಾಪಕರಿಗೆ ಬಂಪರ್ ಬಹುಮಾನ ಸಿಕ್ಕಿದಂತಾಗಿತ್ತಲ್ಲದೆ, ಇಷ್ಟೊಂದು ಹಣ ತಂದು ಕೊಡುವುದು ಖಚಿತವಾದ್ದರಿಂದ ವರ್ಷಕ್ಕೆ ನಾಲ್ಕಾರು ಸಿನಿಮಾ ಸುತ್ತಿಕೊಡುವವರೂ ವಿಜೃಂಭಿಸಿ, ನಾಲ್ಕೈದು ಲಕ್ಷಕ್ಕೆ ಸಿನಿಮಾ ನಿರ್ಮಿಸಿ, ಆರೇಳು ಲಕ್ಷಕ್ಕೆ ವಾಹಿನಿಯವರಿಗೆ ಕೊಟ್ಟು ಆದಾಯ ಮಾರ್ಗ ಕಂಡುಕೊಂಡಿದ್ದರು.

ಎಂತೆಂಥದ್ದೋ ಸಿನಿಮಾಗಳು ತಯಾರಾಗುತ್ತಿದ್ದರಿಂದ, ವಾಹಿನಿಗಳು ಬೇಕಾಬಿಟ್ಟಿ ಸಿನಿಮಾ ಖರೀದಿ ನಿಲ್ಲಿಸಿದವು. ಅಲ್ಲಿಂದಾಚೆಗೆ ಸಿನಿಮಾ ನಿರ್ಮಾಣವನ್ನ ಆದಾಯದ ಮೂಲವಾಗಿಸಿಕೊಂಡಿದ್ದ ಹಲವರು ಉದ್ಯಮದಿಂದಲೇ ಹೊರಗುಳಿವಂತಾಯಿತು. ಆದರೆ ನಿಜಕ್ಕೂ ಕಾಳಜಿಯಿಂದ ಸಿನಿಮಾ ತಯಾರಿಸಿಕೊಂಡಿದ್ದವರಿಗೆ ಆಘಾತವಾಯಿತು. ಏಕೆಂದರೆ ಹಾಕಿದ ಬಂಡವಾಳದಲ್ಲಿ ಒಂದಿಷ್ಟಾದರೂ ಟಿವಿ ಹಕ್ಕು ಮತ್ತು ಸರ್ಕಾರದ ಸಬ್ಸಿಡಿಯಿಂದಾದರೂ ಮರಳಿ ಬರುತ್ತೆ ಎಂಬ ನಂಬಿಕೆ ಇದ್ದುದು ಕೂಡ, ವಾಹಿನಿಗಳವರು ಖರೀದಿ ನಿಲ್ಲಿಸಿದ್ದರಿಂದಾಗಿ ಕಷ್ಟಕ್ಕೆ ಸಿಲುಕಿಕೊಂಡರು. ಬಹುತೇಕ ಮಂದಿ ಸಿನಿಮಾ ತಯಾರಿಸುವುದನ್ನೇ ನಿಲ್ಲಿಸಿದರು.

ವಾಹಿನಿಗಳು ಕೂಡ ದೊಡ್ಡ ನಾಯಕ ನಟರದ್ದಾದರೆ ಕೋಟ್ಯಂತರ ರುಪಾಯಿ, ಮಧ್ಯಮ ಪ್ರಮಾಣದ ಕಲಾವಿದರಿದ್ದರೆ ಎಂಟತ್ತು ಲಕ್ಷದವರೆಗೆ ಸಿನಿಮಾ ತೆಗೆದುಕೊಳ್ಳಲು ಆರಂಭಿಸಿದ್ದು, ಫೈಟಿಂಗ್ ಇರಲೇ ಬೇಕು, ಹಾಡುಗಳು ಹೇಗಿವೆ, ಕಲಾವಿದರು ಯಾರಿದ್ದಾರೆ ಎಂಬಂಥ ಮಾನದಂಡವನ್ನ ಇಟ್ಟುಕೊಂಡಿತು. ಇವೆರಡೂ ಪ್ರವರ್ಗದಲ್ಲಿ ಬಾರದ ಸಿನಿಮಾಗಳಿಗೆ ಅದೆಷ್ಟೇ ಲಕ್ಷ ಸುರಿದಿರಲಿ ಒಂದರಿಂದ ಒಂದೂಕಾಲು ಲಕ್ಷ ರುಪಾಯಿಗೆ ಮಾತ್ರವೇ ಖರೀದಿಸುವಂಥದ್ದು ಈಗಲೂ ಚಾಲ್ತಿಯಲ್ಲಿದೆ. ಅದರಲ್ಲಿಯೂ ಜಿಎಸ್‍ಟಿ, ಕಮಿಷನ್ ಎಂಬಿತ್ಯಾದಿ ಹೋದರೆ ನಿರ್ಮಾಪಕನಿಗೆ ಒಂದು ಲಕ್ಷ ರುಪಾಯಿ ಸಿಕ್ಕಿದರೂ ಹೆಚ್ಚು ಎಂಬ ಸ್ಥಿತಿಯಿದೆ.

ಇದೆಲ್ಲ ಶಾಪಗ್ರಸ್ತ ಸ್ಥಿತಿ ಕಳೆಯುವಂತೆ ಮಾಡುತ್ತಿದೆ ಎನ್ನುವಂತೆ ನೆಟ್‍ಫ್ಲಿಕ್ಸ್, ಅಮೆಝಾನ್ ಮೊದಲಾದವು ಇತ್ತೀಚೆಗೆ ಕನಿಷ್ಠ ಎಂಟು ಲಕ್ಷ ರುಪಾಯಿವರೆಗೆ ಸಿನಿಮಾ ಖರೀದಿಸುತ್ತಿವೆ. ಬಹುಪಾಲು ಚಿತ್ರೋದ್ಯಮಿಗಳಿಗೆ ಇದು ಅನುಕೂಲ ಎನಿಸುತ್ತಿರುವಾಗಲೇ ಇಲ್ಲೂ ಕೂಡ ನಿಯಮಾವಳಿಗಳನ್ನ ರೂಪಿಸಿಕೊಂಡು, ಅನೇಕ ಸಿನಿಮಾಗಳನ್ನ ಖರೀದಿಸುತ್ತಿಲ್ಲ. ಇದರಲ್ಲಿ ಮಹಾತ್ಮ ಗಾಂಧಿ ಕುರಿತಂತೆ ಪಿ.ಶೇಷಾದ್ರಿ ನಿರ್ದೇಶಿಸಿರುವ `ಮೋಹನದಾಸ' ಸಿನಿಮಾವೂ ಸೇರಿದೆ.

ಮಹಾತ್ಮಾ ಗಾಂಧಿ ಚಿತ್ರವನ್ನೇ ನೆಟ್‍ಫ್ಲಿಕ್ಸ್ ಕಂಪನಿ ನಿಯಮಗಳಿಗೆ ಹೊಂದಲ್ಲ ಎಂದು ಖರೀದಿಸಿಲ್ಲದಿರುವುದು, ಈ ಸಂಸ್ಥೆಗಳಿಗೆ ಇನ್ನೆಂಥ ಸಿನಿಮಾಗಳು ಬೇಕು ಎಂಬ ಜಿಜ್ಞಾಸೆ ಮೂಡಿಸಿವೆ. ಜತೆಗೆ ಇಂಥ ಸಂಸ್ಥೆಗಳೊಡನೆ ವ್ಯವಹಾರ ಕುದುರಿಸುವ  ತಂಡವೇ ಗಾಂಧಿನಗರದಲ್ಲಿದ್ದು, ಮೊದಲಿಗೆ ಈ ಏಜೆಂಟರಿಗೆ 50 ಸಾವಿರ ರೂಪಾಯಿ ಓಡಾಟದ ಖರ್ಚುವೆಚ್ಚಕ್ಕಾಗಿ ಕೊಟ್ಟುಬಿಡಬೇಕು. ತದನಂತರ ಅವರೇನಾದರೂ ವ್ಯವಹಾರ ಕುದುರಿಸಿದರೆ, ಅದರಲ್ಲಿ ಶೇ.30 ರಷ್ಟು ಕಮೀಷನ್ ಕೂಡ ಕೊಡಬೇಕು. ಹೀಗಾಗಿ ನಿರ್ಮಾಪಕನಿಗಿಂತ ಸುಲಭವಾಗಿ ಹಣ ಏಜೆಂಟನಿಗೆ ಸಿಕ್ಕುವ ಧಂದೆಯೂ ಬಲಯುತವಾಗಿ ಬೆಳೆದುಕೊಂಡಿದೆ. ಮತ್ತೆ ನಿರ್ಮಾಪಕರು ದಾರಿ ಕಾಣದಂತಾಗಿದ್ದಾರೆ.

ದೂರದರ್ಶನ ಚಂದನ ವಾಹಿನಿ ಸಿನಿಮಾ ಪ್ರಸಾರದ ಹಕ್ಕುಗಳನ್ನ ಅದೆಷ್ಟೋ ವರ್ಷಕ್ಕೊಮ್ಮೆ ಖರೀದಿಸಿಕೊಳ್ಳುತ್ತೆ. ಆದರೆ ಒಟ್ಟಿಗೆ ಹಣ ಕೊಡಲ್ಲ. ಬದಲಿಗೆ ಮೊದಲ ಸಲ ಪ್ರಸಾರವಾದರೆ ಇಷ್ಟು, ಎರಡನೇ ಸಲಕ್ಕೆ ಇಷ್ಟು ಎಂದು ಹಣ ಕೊಡುತ್ತಾ ಹೋಗುತ್ತೆ. ಇದಾದರೂ ಸಿಕ್ಕರೆ ಸಾಕೆಂದು ಹಲವು ನಿರ್ಮಾಪಕರು ಹಾತೊರೆಯುತ್ತಿದ್ದರೂ, ಚಿತ್ರಗಳ ಆಯ್ಕೆಗಾಗಿ ಅರ್ಜಿ ಕರೆದು, ಶುಲ್ಕ ಕಟ್ಟಿ ಸಿನಿಮಾದ ಪ್ರತಿಗಳನ್ನ ಸಲ್ಲಿಸಿ ನಾಲ್ಕು ವರ್ಷ ಉರುಳಿವೆ, ಆದರೆ ಆಯ್ಕೆ ಪ್ರಕ್ರಿಯೆ ಮಾತ್ರ ಇನ್ನೂ ಮುಗಿದೇ ಇಲ್ಲ. ಈಗಾಗಲೇ ತನ್ನ ಬಳಿಯಿರುವ ಸಿನಿಮಾಗಳನ್ನೆ ಪ್ರತೀ ವಾರವೂ ಅದದನ್ನೆ ಪ್ರಸಾರ ಮಾಡುತ್ತಿದೆ.  ಈ ರೀತಿ ಪುನರಾವರ್ತಿತ ಪ್ರಸಾರ ಮಾಡುವುದರ ಹಿಂದೆಯೂ ಲಾಬಿ, ಕಮೀಷನ್ ಇತ್ಯಾದಿಯ ವಾಸನೆಯೂ ಹೊಡೆಯುತ್ತಿದೆ.

ಇಂಥ ಅನೇಕಾನೇಕ ಸಂಕಷ್ಟಗಳು ಕನ್ನಡ ಸಿನಿಮಾರಂಗವನ್ನ ಆಳುತ್ತಿದ್ದರೂ, ಸರ್ಕಾರವಿರಲಿ ಸಂಬಂಧಿಸಿದ ವಾಣಿಜ್ಯ ಮಂಡಳಿಯೂ ವಿಚಾರಿಸುವ ಯತ್ನವನ್ನೇ ಮಾಡುತ್ತಿಲ್ಲ.