ವಿದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ:ಜಾರಿ ನಿರ್ದೇಶನಾಲಯದಿಂದ ಕೆ.ಜೆ.ಜಾರ್ಜ್ ವಿಚಾರಣೆ?

ಸಂಸದ ಡಿ ಕೆ ಸುರೇಶ್ ಗೆ ಸಮನ್ಸ್ ಜಾರಿಗೊಳಿಸಿರುವ ಜಾರಿ ನಿರ್ದೇಶನಾಲಯ ಇದೀಗ ಫೆಮಾ ಕಾಯ್ದೆಯಡಿ ಮಾಜಿ ಸಚಿವ ಕೆ ಜೆ ಜಾರ್ಜ್ ವಿರುದ್ಧ ವಿಚಾರಣೆ ಕೈಗೆತ್ತಿಕೊಂಡಿದೆ.

ವಿದೇಶದಲ್ಲಿ ಅಪಾರ ಪ್ರಮಾಣದ ಆಸ್ತಿ:ಜಾರಿ ನಿರ್ದೇಶನಾಲಯದಿಂದ ಕೆ.ಜೆ.ಜಾರ್ಜ್ ವಿಚಾರಣೆ?

ವಿದೇಶದಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಹಾಗೂ ಶಾಸಕ ಕೆ.ಜೆ.ಜಾರ್ಜ್ ವಿರುದ್ಧದ ದೂರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ತನಿಖೆ ನಡೆಸುವ ಮೊದಲು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಕಾಯ್ದೆಯಡಿ ವಿಚಾರಣೆ ಆರಂಭವಾಗಿದೆ  ಎಂದು ಹೇಳಲಾಗುತ್ತಿದೆ.

ಈ ಪ್ರಕರಣದಲ್ಲಿ ಆರೋಪಗಳು ಸಾಬೀತಾದ ನಂತರ ಕ್ರಿಮಿನಲ್ ಅಪರಾಧ ಮೊಕದ್ದಮೆಗೆ ಪರಿವರ್ತಿಸಲಾಗುತ್ತದೆ. ಆ ನಂತರ ಆರೋಪಿ ಜಾರ್ಜ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಾರಿ ನಿದೇಶನಾಲಯದ ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಈಗಾಗಲೇ ತಿಹಾರ್ ಜೈಲಿನಲ್ಲಿರಿಸಲಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಅಕ್ಟೋಬರ್ 14ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೇ ಅವರ ಸೋದರ ಹಾಗೂ ಸಂಸದ ಡಿ ಕೆ ಸುರೇಶ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ. ಈ ಎಲ್ಲ ಬೆಳವಣಿಗೆಗಳು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿರುವ ಮಧ್ಯೆಯೇ ಕೆ ಜೆ ಜಾರ್ಜ್ ಅವರ ವಿರುದ್ಧದ ದೂರಿನ ವಿಚಾರಣೆಯನ್ನು  ಬಿರುಸುಗೊಳಿಸಿ, ಕೆ ಜೆ ಜಾರ್ಜ್ ಅವರನ್ನು ಭೀತಿಯಲ್ಲಿರಿಸಿದೆ.

ಇದೇ ದೂರಿನ ಪ್ರಕರಣ ಸಂಬಂಧ ಕೆ ಜೆ ಜಾರ್ಜ್ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಸುದ್ದಿಯೊಂದು ಹರಿದಾಡಿತ್ತು. ಈ ಸಂಬಂಧ 'ಡೆಕ್ಕನ್'ನ್ಯೂಸ್ ಗೆ ಪ್ರತಿಕ್ರಿಯಿಸಿದ ಜಾರಿ ನಿರ್ದೇಶನಾಲಯದ ನಿರ್ದೇಶಕ ರಮಣ್ ಗುಪ್ತಾ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರಲ್ಲದೆ, ನೋಟೀಸ್ ಜಾರಿಗೊಳಿಸಿರುವ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆ.ಜೆ.ಜಾರ್ಜ್ ಹಾಗೂ ಅವರ ಸಂಬಂಧಿಕರು ಅಮೆರಿಕದ ನ್ಯೂಯಾರ್ಕ್ನಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದು, ಇದರ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿಯವರು  ಜಾರಿ ನಿರ್ದೇಶನಾಲಯಕ್ಕೆ ದಾಖಲೆ ಸಮೇತ ದೂರು ನೀಡಿದ್ದರು.

ನ್ಯೂಯಾರ್ಕ್ನಲ್ಲಿರುವ ಶಾಸಕ ಜಾರ್ಜ್ ಅವರ ಪುತ್ರಿ ರೆನಿಟಾ ಅಬ್ರಹಾಂ, ಅಳಿಯ ಕೆವಿನ್ ಅಬ್ರಹಾಂ ಕೋಟ್ಯಂತರ ರೂ.ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರೆ. ಅದರ ಪೈಕಿ ಒಂದು ಆಸ್ತಿ ಜಾರ್ಜ್, ಅವರ ಪತ್ನಿ ಸುಜಾ ಜಾರ್ಜ್, ಸಹೋದರ ಕೆ.ಜೆ. ಕುರುವಿಲ್ಲಾ ಅವರ ಹೆಸರಿನಲ್ಲಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಆಸ್ತಿಯ ವಿವರವಾದ ಮಾಹಿತಿಯನ್ನು 2014 ಹಾಗೂ 2015ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ನಮೂದಿಸಿದ್ದರು.

ಆದರೆ, 2013 ಹಾಗೂ 2018ರ ಚುನಾವಣಾ ಅಫಿಡವಿಟ್ ನಲ್ಲಿ ಮರೆಮಾಚಿದ್ದಾರೆ ಎಂದು ಆರೋಪಿಸಿದ್ದರು. ಜಾರ್ಜ್ ಹಾಗೂ ಅವರ ಕುಟುಂಬಸ್ಥರು ಹಲವು ನಕಲಿ ಕಂಪನಿಗಳು, ಬ್ಯಾಂಕ್ ಸಾಲದ ಮೂಲಕ ಅಪಾರ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಲ್ಲ ಆಸ್ತಿಗಳನ್ನು ಭ್ರಷ್ಟಾಚಾರ ಎಸಗಿ ಖರೀದಿ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ, ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದರು.