ಮಳೆಯ ಮುಂಬಾಗಿಲು ಮುಂಗಾರು ತೆರೆಯಿತೀಗ....

ಮಳೆಯ ಮುಂಬಾಗಿಲು ಮುಂಗಾರು ತೆರೆಯಿತೀಗ....

ನೆಲ ಮುಗಿಲು ಮಗದೊಂದು ಭಾವ ಮೀಟುವ ವರ್ಷಾಧಾರೆಗೆ ಭಾಷ್ಯ ಬರೆಯುತ್ತಿದೆ. ಮೈ ಮನಸ್ಸು ಪುಳಕಗೊಳ್ಳುವ ಈ ಸವಿಸಮಯವನ್ನು ಯಾವ ಜೀವಿಯು ತಾನೆ ಒಂದಿನಿತು ಬಿಡದೆ ತನ್ನ ಭಾವಕೋಶದಲ್ಲಿ ಗರ್ಭೀಕರಿಸಿಕೊಳ್ಳದೆ ಇರಬಲ್ಲ?  ಅದರಲ್ಲೂ ಈ ಮಳೆ ಭಾವಜೀವಿಯ ಹೃದಯದಲ್ಲಿ ಭಾವನೆಗಳ ಮಹಾಪೂರವನ್ನೇ ಸುರಿಯ ತೊಡಗುತ್ತದೆ. ಒಮ್ಮೊಮ್ಮೆ ನನಗೆ ಭಯವಾಗಿ ಬಿಡುತ್ತದೆ ,ಏಕೆಂದರೆ ಮಳೆಗೆ ನನಗಿಂತಲೂ ಹೆಚ್ಚು ಭಾವನೆಗಳಿವೆಯೆಂದು!

ವರುಷ ವರುಷವು ಬಿಡದೆ ಸುರಿಯುವ ಈ ಮಳೆ ನಮ್ಮ ನೆಲೆ. ನೆಲವನ್ನು ಜೊತೆಗೆ ಮನಸ್ಸನ್ನೂ ಆರ್ದ್ರಗೊಳಿಸುತ್ತದೆ. ಅದಕ್ಕಾಗಿ  ಈ ಮಳೆಗೆ ಜನಮಾನಸದಲ್ಲಿ ಪ್ರಮುಖ ಸ್ಥಾನ.ಹಸಿರು ಉಕ್ಕಿಸಿ ಹರುಷ ತರುವ ಮಳೆಯ ಹೊಂಗನಸನ್ನು ನಾವು ಚಿವುಟಬಾರದು. ತುದಿ ಮೊದಲಿಲ್ಲದ ಮಳೆಯ ಗೆರೆಯನ್ನು ಮೀಟಿ ಶ್ರುತಿ ಹೊರ ಹೊಮ್ಮಿಸಬೇಕು.ಹಾಗೆ ನೋಡಿದರೆ ಮಳೆಯ ನಾದವೆ ಒಂದು ಸಂಗೀತ  ಸರ್ವಕಾಲಕ್ಕೂ ನಮ್ಮ ಹೃದಯವನ್ನು ತಂಪಾಗಿರಿಸಿ ಸುಪ್ತ ನಾದಗಳನ್ನು ಹೊರಗೆಳೆದು ತನ್ನ ತಾಳವನ್ನು ಸೇರಿಸಿ ಮೃದುವಾಗಿ ಗುನುಗಿಕೊಳ್ಳುತ್ತದೆ ಈ ಮಳೆ .ಸಹ್ಯವಾದ ಒಂಟಿತನದೊಂದಿಗೆ ಮಳೆಯ ನಾದದ ಕಂಪು ಸೂಸುತ್ತಿದ್ದರೆ ಜೀವನವೇ ಸಾರ್ಥಕ್ಯ ಭಾವ ಹೊಂದಿದಂತೆ ಭಾಸವಾಗಿ ಬಿಡುತ್ತದೆ. ನಾವೇ ಸೃಷ್ಟಿಸಿಕೊಳ್ಳುವ ಈ ಏಕಾಂಗಿತನ ನಮಗೆಲ್ಲ ವರ್ಷಾಧಾರೆಯ ಉಡುಗೊರೆ ಎಂದರು ತಪ್ಪಲ್ಲ.

ಹೂವು ಬಿದ್ದ ಸದ್ದು ಹಾಗೆಯೇ ಪರಸ್ಪರ ಮಾತುಗಳ ಶಬ್ದವು ಈ ಸುರಿಮಳೆಯ ನಡುವೆ ಕೇಳುತ್ತಿಲ್ಲ. ಮಳೆಯ ರಾಗದಿಂದಾಗಿ ಎಲ್ಲಾ ಕಡೆಯೂ ಮನಸ್ಸಿನ ಮಾತೇ! ಪ್ರತಿ ಕ್ಷಣವು ಹೊಸದಾಗಿ ಸುರಿಯುವ ವರ್ಷಾಧಾರೆಯ ರಾಗವು ಹೊಸದು. ಮಳೆ ಮತ್ತು ಮನಸ್ಸು ಅಕ್ಕಪಕ್ಕ ಕುಳಿತು ಮಾತನಾಡುತಿದ್ದರೆ ಇಹಪರದ ಅರಿವು ನಮಗಿರದು. ವರ್ಷಧಾರೆಯ ನಾದ ನಮ್ಮನ್ನು  ಇಷ್ಟು ಉನ್ಮಾದಗೊಳಿಸಿರುವುದರಿಂದಲೇ ಅದೆಷ್ಟೋ ಸುಂದರ ಗೀತೆಗಳು ನಮ್ಮ ನಡುವೆ ಹುಟ್ಟಿವೆ . ಮಳೆಗಾಲ ಹಾಗೆ, ಅದು ಅನುದಿನದ ಗೀತೆಗಳ ಭಾವಯಾನ!

ಕೆಸುವಿನೆಲೆಯ ನಡುವೆ ಮುದುರಿ ಕುಳಿತ ಮುತ್ತು ಯಾವುದರ ಹಂಗಿಲ್ಲದೆ ತನ್ನ ಪಾಡಿಗೆ ತಾನು ಮಳೆಯ ಆಸೆಯ ಪೂರೈಸುತ್ತಿದೆ. ಬೊಗಸೆ ತುಂಬಿದ ನೀರು ಒಂದು ಕ್ಷಣದ ಹಂಬಲಕ್ಕಾಗಿ ಧ್ಯಾನಿಸುತ್ತಿದೆ.ಇದ್ಯಾವುದರ ಪರಿವೆಯಿಲ್ಲದೆ ಕದವಿಕ್ಕಿ ಕುಳಿತರೂ  ಮನದೊಳಗೆ ಮಳೆ ಸುರಿವ ಅಚ್ಚರಿಗೆ ಎದೆ ತೇವಗೊಳ್ಳುತ್ತದೆ.ಇಳೆಯು ಬಯಸಿದ ಪ್ರೀತಿಯನ್ನೆಲ್ಲ ಮಳೆಯ ರೂಪದಲ್ಲಿ ಮುಗಿಲು ಧಾರೆಯೆರೆಯುತ್ತಿದೆ.ಮೊಳಕೆಯೊಡೆಯುವ ಪ್ರತಿ ಬೀಜದ ದನ್ಯತಾಭಾವ ಕಣ್ಣಂಚಿನಲ್ಲಿ ಹನಿಯೊಡೆದು ಹೊಳೆದು ಹೋಗುತ್ತಿದೆ. ಸುರಿವ ಎಲ್ಲಾ ಹನಿಗಳು ಭೂಮಿ ಸೇರುವ ತವಕದಲ್ಲಿ ತನ್ನ ಇರುವಿಕೆಯನ್ನು ಗುರುತಿಸುವ ಪ್ರತಿ ಮನಸ್ಸಿನಲ್ಲಿ ಇಣುಕಿ ನೋಡುತ್ತಿವೆ. ಮಳೆಯ ಭಾವಪ್ರಪಂಚಕ್ಕೆ ಒಗ್ಗಿ ಹೋದ ಮನಸ್ಸುಗಳಿಗೆ ಇಳೆಯ ತಂಪು ಹಿಗ್ಗಿಸಿದ ಒಲವು ಹೇಳತೀರದು.

ಬದುಕು ನಿಂತ ನೀರಲ್ಲ ಎಂದು ಮೆಲ್ಲುಸುರುತ್ತ ಸನ್ನಿಹಿತವಾಗುವ ಮುಂಗಾರು ಮಳೆ ಸರ್ವರ ಜೀವನಾಡಿ. ಮುಂಗಾರಿನ ಆರ್ಭಟ ಅತಿ ಭಯಂಕರವೆನಿಸಿ ಅಪಾರ ಹಾನಿಮಾಡಿದರೂ ಜನರು ಈ ಮುಂಗಾರಿನ ಅಭಿಷೇಕವನ್ನು ಸ್ವಾಗತಿಸುವ ಪರಿ ಮಾತ್ರ ಅಭೂತಪೂರ್ವ. ನೆಲದ ನಲ್ಮೆಯನ್ನು ಕಂಡು ಮಳೆಯೇ ಮೂಕವಿಸ್ಮಿತಗೊಳ್ಳುವಷ್ಟು ಅಕ್ಕರೆ.ಕಡಲಾಗುವ ಹಂಬಲದಲ್ಲಿ ಸಣ್ಣ ಸಣ್ಣ ತೊರೆಗಳೆಲ್ಲವು ಹರಿದು, ಝರಿಗಳೆಲ್ಲವು ಇಳಿದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಮಳೆಗಾಲದ ಈ ಮನಸ್ಸಿನ ಹಿತ ಮಳೆಬಿಂದು ಮನದೊಳಗೆ ಬಂದು ಎಚ್ಚರಿಸಿದಾಗಲೇ ತಿಳಿಯುವುದು.
   

ಭೂಮಿ ನೆನೆದು  ಮೊಳಕೆಯೊಡೆಯುವ ಪ್ರತಿ ಬೀಜದ ಗುಟ್ಟು ಮಳೆಗೆ  ತಿಳಿದಿದೆ. ಮೃದು ನವಿರು ಚಿಗುರು ಜೀವ ಹೆಣೆಯುತ್ತ ಕೂತಿರಲು ಮಳೆಯೊಡನೆ ರೈತನು ಅದರ ಆರೈಕೆಗೆ ನಿಂತು ಬಿಡುತ್ತಾನೆ. ಮೊಳಕೆ ಬಂದ ಜೀವ ಇವರಿಬ್ಬರಿಗೂ ಅಭಾರಿ.

ರೈತಾಪಿ ವರ್ಗಕ್ಕು ಮತ್ತು ಮಳೆಗೂ ಬಾನು ಭುವಿಯ ಸಂಬಂಧ. ಇವರು ಮಳೆ ನಕ್ಷತ್ರಗಳನ್ನು ಒಂದೊಂದು ನುಡಿಗಟ್ಟಿನಂತೆ ಹೇಳಿ ಅದನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆರ್ದ್ರಾ ಮಳೆಗೆ  ದಾರಿದ್ರ್ಯ ಹೋಗುತ್ತದೆ, ಸ್ವಾತಿ ಮಳೆ ಬಂದರೆ ನೆಲದಲ್ಲಿ ಮುತ್ತು ಬೆಳೆಯುತ್ತದೆ, ಪುನರ್ವಸು ಮಳೆಗೆ ಹೆಣ ಎತ್ತಲು ಆಗುವುದಿಲ್ಲ, ಭರಣಿ ಮಳೆಗೆ ಬೀಜ ಬಿತ್ತಬೇಕು, ಆಶ್ಲೇಷಾ ಮಳೆಗೆ ಮನೆಯಲ್ಲಿ ತಿನಿಸು ಕೂಡಿಟ್ಟವನು ಹೊರಗೆ ಹೊರಡಲಾರ... ಇತ್ಯಾದಿಗಳು. ಇವೆಲ್ಲ ಮಳೆಗಾಲದಲ್ಲಿ ಮಾತ್ರವೇ ಜನರ ಜೀವನದಲ್ಲಿ ಹಾಸುಹೊಕ್ಕಾದ ಪರಿ ಬೆರಗು ಮೂಡಿಸುತ್ತದೆ. ಈ ಮಾತುಗಳ ಹಿನ್ನೆಲೆಯು ಅರ್ಥಗರ್ಭಿತವಾಗಿದೆ. ಒಟ್ಟಿನಲ್ಲಿ ಈ ಜಲತರಂಗದ ಇಂಪು ನಮ್ಮನ್ನೆಲ್ಲಾ ಕಾಡದೆ ಇರುವುದಿಲ್ಲ. 

ಮಗುವಿನಂತೆ ಸೆಳೆಯುವ ಈ ಮಳೆಗೆ ಬೊಗಸೆಯೊಡ್ಡುವಾಗೆಲ್ಲಾ ಅದರೊಂದಿಗೆ ಬೆಸೆದ ಬೆಚ್ಚಗಿನ ನೆನಪುಗಳು ಗರಿಬಿಚ್ಚುತ್ತವೆ. ಕಳೆದ ಸೋನೆ ಮಳೆಯಲ್ಲಿ ಒಂದೇ ಕೊಡೆಯಡಿಯಲ್ಲಿ ಸಾಗಿದ ನಾವಿಬ್ಬರೂ ಈಗ ಜೊತೆಗಿಲ್ಲದಿದ್ದರೂ ಆ ನೆನಪು ಮಾತ್ರ ಮೈನಡುಕವನ್ನು ಬೆಚ್ಚಗೆ ಆಲಂಗಿಸಿದೆ! ನಟ ಚಾರ್ಲಿ ಚಾಪ್ಲಿನ್ ,ಮಳೆಯಡಿಯಲ್ಲಿ ನಿಂತು ಅತ್ತರೆ ನಮ್ಮ ಕಣ್ಣೀರು ಯಾರಿಗೂ ತಿಳಿಯುವುದಿಲ್ಲ ಎನ್ನುತ್ತಿದ್ದನಂತೆ. ಮಳೆಯಡಿಯಲ್ಲಿ ತನ್ನಂತೆ ನಿಂತು ಅಳುವವರನ್ನೆಲ್ಲ ಕಂಡುಹಿಡಿಯಬೇಕೆಂಬ ಆಸೆ.ಕಣ್ಣೀರಿನ ಪಸೆಯ ಆಳ ಹುಡುಕುವ ಕುತೂಹಲ. ನೀರಿನ ಬಿಂಬದಲ್ಲಿ ಎಲ್ಲ ಹುಡುಕಬಲ್ಲೆ ಎಂಬ ಹುಚ್ಚು ಹುಡುಗಾಟಿಕೆ .ಮಳೆಯೆಂದರೆ ಪ್ರೀತಿ ತಾನೆ ? 

ಮುಂಗಾರಿನ ಮುನ್ಸೂಚನೆಯೊಂದಿಗೆ ಮಳೆಗಾಲಕ್ಕೆ ಬೇಕಾದ ಪೂರ್ವಾಪರಗಳನ್ನು ಜೋಡಿಸುವ ಅಮ್ಮ ಮಳೆಗಾಲದಲ್ಲಿ ಭಾವುಕತೆಯ ಪರಮಾವಧಿಯನ್ನು ತಲುಪುತ್ತಾಳೆ.ತಂತಿ ಮೇಲೆ ಪೋಣಿಸಿದ ನೀರ ಕಣಜದ ಸಾಲುಗಳನ್ನು ಕೈಯಲ್ಲಿ ತುಂಬಿಕೊಳ್ಳುತ್ತ ಬಟ್ಟೆ ಒಣಗಲು ಹಾಕುವ ಆಕೆಯ ನಿತ್ಯದ ಸುಂದರ ಕಾಯಕಕ್ಕೆ ಏನೆಂದು ಹೆಸರಿಡೋಣ? ತತ್ವಜ್ಞಾನಿ ಸಾಕ್ರೆಟಿಸ್, ಮಳೆನೀರಿನಲ್ಲಿ ತೊಯ್ದು ತೊಪ್ಪೆಯಾದ ಮೇಲೆ ' ಆಹಾ ಇದು ಆ ದೇವರು ಮಾಡಿಸಿದ ಮಜ್ಜನ 'ಎಂದಿದ್ದನಂತೆ.ನಮ್ಮ ಗೃಹಲಕ್ಷ್ಮಿಯರು ಸೆರಗನ್ನು ತಲೆಯ ಮೇಲೆ ಹೊದ್ದು ಅವಸರದಲ್ಲಿ ಏನನ್ನಾದರೂ ಮಾಡಿ ತೊಯ್ದು ತೊಪ್ಪೆಯಾಗಿ ಹಸನ್ಮುಖಿಗಳಾಗಿರುತ್ತಾರೆ.  ಹೀಗಿದ್ದ ಮೇಲೆ ಪ್ರತಿ ಮನೆಯೊಡತಿಯೂ ಅವರವರ ಭಾವಕ್ಕೆ ತಕ್ಕಂತೆ ತತ್ವಜ್ಞಾನಿಗಳೇ ಅಲ್ಲವೇ? 

ಮಳೆಯನ್ನು ಒಂದು ದೃಶ್ಯ ಕಾವ್ಯವನ್ನಾಗಿ ,ದಾರ್ಶನಿಕವಾಗಿ ಕಂಡವರು ಲೆಕ್ಕವಿಲ್ಲದಷ್ಟು.ಇದು ಮಳೆಯ ಮೋಡಿ. ಮೋಡ ಮುಸುಕಿ, ಮಂಜು ಕವಿದರೂ, ಅಗುಳಿ ಹಾಕಿದ ಕದದೊಳಗೆ ಮನಸ್ಸು ಮಾತ್ರ ತೆರೆದುಕೊಳ್ಳುವ ಸುಸಮಯವಿದು.ಕಣ್ಣಾಲಿ ಕದಲಿಸಲು ಮನಸಾಗದ ಮಳೆಗಾಲವೇ ನೀನೆಂದಿಗೂ ಬದಲಾಗದಿರೆಂದು ಮನಸ್ಸು ಹಾರೈಸುತ್ತದೆ.ಒಂದೊಮ್ಮೆ ಪಾದದಡಿ ಚಲಿತ ನೀರು ಮತ್ತೆ ಬರುವುದಿಲ್ಲ. ಮಳೆಯೆಂದರೆ ಹೀಗೆಯೇ ನಮ್ಮೊಳಗೆ ಸದ್ದಿಲ್ಲದೆ ಹೊಸ ನೀರ ಹಾಯಿಸಿಬಿಡುತ್ತದೆ.ಕಾಗದದ ದೋಣಿ  ತೇಲಿಬಿಟ್ಟ ಸಡಗರದ ನೆನಪನ್ನು ನಿಡುಗಾಲ ಕಾಯುತ್ತದೆ. ಇವನ್ನೆಲ್ಲ ಕಾವ್ಯದಲ್ಲಿ ಕಡೆದಿಟ್ಟ ಸಾಹಿತಿ ದಿಗ್ಗಜರು ಅಪಾರ ಸಂಖ್ಯೆಯಲ್ಲಿದ್ದಾರೆ.

ಬಾಲ್ಯಕಾಲದ ಮಳೆಗಾಲದಲ್ಲಿ ಶಾಲೆಗೆ ಹೋಗಿಬರುವ ದಾರಿಯಲ್ಲಿ ನಡೆದ ಮಳೆಯೊಂದಿಗಿನ ಕನವರಿಕೆಗಳು ಹೇಳಿದಷ್ಟು ಮುಗಿಯಲಾರವು. ಮಳೆಗೆ ಒಳಗೆಲ್ಲ ತೊಯ್ದು ತೊಪ್ಪೆಯಾದಂತೆ ಏನೋ ಒಂದು ಅನುಭೂತಿ! ನಮಗೆಲ್ಲ ಮಳೆಗೆಂದು ಶಾಲೆಗೆ ರಜೆ ನೀಡಿದರೆ ಮಳೆಯಲ್ಲಿ ನೆನೆದು, ದೋಣಿ ತೇಲಿ ಬಿಟ್ಟು, ಕೊಡೆಯೊಂದಿಗೆ ಆಟವಾಡಿ, ನೀರು ತುಂಬಿದಲ್ಲೆಲ್ಲ ಕುಣಿದಾಡಿ ರಜೆಯ ಸವಿಯನ್ನು ಈ ರೀತಿ ಅನುಭವಿಸಿ ಬಿಡುತ್ತಿದ್ದೆವು.ಮಳೆಯ ಕಾಲದಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವ ಖುಷಿಗೆ ಅದನ್ನು ಆಯ್ದು ತರಲು ಎಲ್ಲೆಂದರಲ್ಲಿ ಹೋಗುತ್ತಿದ್ದೆವು. ಮಳೆಯ ಭಾರವನ್ನು ಹಗುರವಾಗಿ ಸ್ವೀಕರಿಸುವ ಶಕ್ತಿ ಬಾಲ್ಯಕ್ಕಿತ್ತು. ಮಳೆಗಾಲದಲ್ಲಿ ಎಲ್ಲರೂ ಉಪಯೋಗಿಸುವ ಅತ್ಯಮೂಲ್ಯ ವಸ್ತುವೆಂದರೆ ಕೊಡೆ. ಕೊಡೆಗೆ ಮಳೆಯನ್ನು ನಿಲ್ಲಿಸಲಾಗದು. ಆದರೆ ಎಂತಹ ಜಡಿಮಳೆಯ ನಡುವೆಯೂ ನಾವು ನಿಲ್ಲುವಂತಹ ಅದಮ್ಯ ಧೈರ್ಯ ,ಉತ್ಸಾಹ, ಸಾಮರ್ಥ್ಯವನ್ನು ಈ ಕೊಡೆಯೆಂಬ ಪುಟ್ಟ ಚೇತನ ನಮಗೆ ನೀಡುತ್ತಿತ್ತು. ನನ್ನ ಪಾಲಿಗಂತೂ ಕೊಡೆ ತುಂಬಾ ಆಪ್ಯಾಯಮಾನವಾದ ವಸ್ತು. ಮಳೆಗಾಲದಲ್ಲಿ ಅದನ್ನು ತಿರುಗಿಸುತ್ತಾ ಅದರಿಂದ ಗೆಳತಿಯರಿಗೆ ನೀರನ್ನು ಚಿಮುಕಿಸುತ್ತ ಸಾಗುವುದೆಂದರೆ ಎಲ್ಲಿಲ್ಲದ ಖುಷಿ.ರಭಸದ ಮಳೆಯಲ್ಲಿ ನಡೆಯುತ್ತ ಕೊಡೆಯಿಂದ ಬೀಳುವ ಹನಿಗಳಿಗೆ ಕೈಯೊಡ್ಡಿ ಕವಿತೆಯನ್ನು ಗುನುಗುತ್ತ ಸಾಗುವುದೆಂದರೆ ಇನ್ನೂ ಖುಷಿ.ಒಟ್ಟಿನಲ್ಲಿ ಹಿತ -ಅಹಿತಗಳ ನಡುವೆ ಸಮತೋಲನ ಕಾಯ್ದಿರಿಸಿಕೊಳ್ಳುವ ಮಳೆಗಾಲವೆಂದರೆ ಅದು ಕೊಡೆ ಅರಳುವ ಸಮಯ!

ಮಳೆಯನ್ನು ನಾವೆಷ್ಟು ಆಸ್ವಾದಿಸಿದರೂ,ಮುಂಗಾರು ಮಳೆಗೆ ರುದ್ರ ಭೀಕರವಾದ ಇನ್ನೊಂದು ಮುಖವಿದೆ.ಕೇವಲ ಮಳೆಯ ಅಂದ ಚಂದದ ಜೊತೆಗೆ ಅದರ ಅನುಕೂಲಗಳನ್ನು ಮಾತ್ರವೇ ಹೇಳಿ ಸುಮ್ಮನಾಗುವುದು ಒಳಿತಲ್ಲ. ಮಳೆಯ ರುದ್ರತಾಂಡವದ ದರ್ಶನದ ಅರಿವು ಹಲವರಿಗೆ ಆಗಿದೆ. ಮಲೆನಾಡಿನ ಮಳೆಯ ಕುರಿತು ಅಪಾರ ಕವಿತೆಗಳನ್ನು ಬರೆದಿರುವ ರಾಷ್ಟ್ರಕವಿ ಕುವೆಂಪು ಕೂಡ ಮಳೆಯ ಆರ್ಭಟದ ಕುರಿತು ' ವರ್ಷ ಭೈರವ 'ಎಂಬ ದೀರ್ಘ ಕವಿತೆಯನ್ನು ಬರೆದಿದ್ದಾರೆ. ಅದನ್ನು ಓದಿದರೆ ಮಳೆಯ ರೋಷದ ಅರಿವಾಗುತ್ತದೆ .ಗಾಳಿ, ಗುಡುಗು, ಸಿಡಿಲುಗಳ ಆರ್ಭಟ ಮುಂಗಾರಿನ ಪ್ರಾರಂಭದಲ್ಲಿ ಸಾಮಾನ್ಯ. ಆಗ ಆಗುವ ಪ್ರಾಣ ಹಾನಿ ನಮ್ಮೆಲ್ಲರನ್ನು ಕಂಗೆಡಿಸುತ್ತದೆ.ಮರಗಳೆಲ್ಲ ಧರೆಗುರುಳುತ್ತವೆ.ಭಯದ ವಾತಾವರಣ ಸೃಷ್ಠಿಯಾಗುತ್ತದೆ. ಮಳೆ ಜೋರು ಜೋರಾಗಿ ಬಂದರೆ ಪ್ರಳಯದ ಆವೇಶ ಎಲ್ಲೆಡೆ ಬಂದು ಬಿಡುತ್ತದೆ.ಮನೆಯೊಳಗೆ ನೀರು ನುಗ್ಗಿ ಅಪಾರ ಕಷ್ಟ ನಷ್ಟವಾಗಿಬಿಡುತ್ತದೆ.ಮನುಷ್ಯರು ಹೆದರಿಕೊಂಡು ದಿನ ಕಳೆಯುವ ಸಮಯವು ಈ ಮಳೆಯಿಂದಾಗಿ ಬಂದು ಬಿಡುತ್ತದೆ. ಹಳ್ಳ ಕೊಳ್ಳಗಳನ್ನು ದಾಟಿಕೊಂಡು ನಡೆದಾಡುವ ಹಳ್ಳಿಗರಿಗೆ ಇದು ಸವಾಲಿನ ಸಮಯ. ಇದರೊಂದಿಗೆ ಇನ್ನೊಂದು ಕೆಡುಕೆಂದರೆ ಮಳೆ ಪ್ರಾರಂಭವಾದೊಡನೆ ಹಲವಾರು ರೀತಿಯ ರೋಗ ರುಜಿನಗಳು ಬೆಂಬಿಡದೆ ಬಂದು.ಬಿಡುತ್ತವೆ.ಇದು ಮಳೆಯಿಂದಾಗುವ ಅತಿಯಾದ ಭಯದ ವಿಚಾರ.ಇದನ್ನು ಸರಿಪಡಿಸುವಲ್ಲಿ ಮಳೆಗಾಲ ಹೆಣಗಬೇಕಾಗುತ್ತದೆ. ಪ್ರತಿ ವರುಷವು ಮುಂಗಾರಿನ ಪ್ರಾರಂಭದಲ್ಲಿ ಆಗುವ ಸಂಕಷ್ಟಗಳು ಜನರನ್ನು ಸಣ್ಣ ಮಟ್ಟಿನಲ್ಲಿ ಕಂಗೆಡಿಸುವುದು ನಿಜ. ಇದು ಬಿಟ್ಟರೆ ಮಳೆ ಸರ್ವರಿಗೂ ಮಹದಾನಂದ. 

ಕಳೆದ ವರ್ಷ ಮಳೆಗಾಲದಲ್ಲಿ ಯಾರು ಕಂಡರಿಯದ ಮತ್ತು ಕೇಳರಿಯದ ಭಯಾನಕವೊಂದು ಕೊಡಗಿನಲ್ಲಿ ನಡೆದು ಹೋಗಿ ಇತಿಹಾಸ ಸೇರಿತು.ಮಳೆಯಿಂದಾಗಿ ಕೊಡಗಿನ ಇತಿಹಾಸದಲ್ಲೇ ನಡೆದ  ಮೊದಲ ದುರಂತವಿದು. ಇಲ್ಲಿಗೆ ಸಮುದ್ರವು ಸುರಕ್ಷಿತವಲ್ಲ, ಗುಡ್ಡವು ಸುರಕ್ಷಿತ ಅಲ್ಲ , ಜೀವನವೇ ಶಾಶ್ವತವಲ್ಲ ಎಂಬುದನ್ನು ಮಳೆ ನಮಗೆ  ಸಾಬೀತುಪಡಿಸಿತು. ಯಾರೂ ಊಹಿಸಲಾಗದ ಪ್ರಕೃತಿಯ ತೀವ್ರತರ ಮುನಿಸಿಗೆ‌ ನಾವು ಸೋಲಲೇಬೇಕಾಯಿತು. ಕುಸಿದ ಬೆಟ್ಟಗುಡ್ಡಗಳ ಮಣ್ಣು ತೊಳೆದು ಹೋಗುವಷ್ಟು ಕಣ್ಣೀರು ಕೊಡಗಿನ ಜನತೆಯ ಕಣ್ಣಿಂದ ಹರಿಯುವುದು ಸಾಮಾನ್ಯವಾಗಿತ್ತು. ಕುಸಿದು ಕುದ್ದು ಹೋದ  ಬದುಕು ನಿಲ್ಲುವುದೆಂತು‌ ಎಂಬ ಚಿಂತೆ ಹತ್ತಿದಾಗ ದಿಗಿಲು ಮೇರೆ ಮೀರಿ ನಿಂತಿತ್ತು. ಸತ್ತ ಕಳೇಬರಗಳೇ ಸಿಗದಿದ್ದಾಗ ಉಳಿದ ಮುರುಕು ಮನೆಗಳ ಜೊತೆಗೆ ಬದುಕೂ ಛಿದ್ರಗೊಂಡಿತ್ತು.

ಮತ್ತೆ ದಿನ ಕಳೆದವು.ಮೌನ ಆವರಿಸಿತು. ಮಳೆ ನಿಂತರೂ ಮಳೆಹನಿಗಳು ಮಾತ್ರ ನಿಲ್ಲುವುದಿಲ್ಲ ಎಂಬ ಮಾತಿನಂತೆ  ಅದರ ಒಡನಾಟದ ಕಹಿ ಮತ್ತು ಸಿಹಿ ನೆನಪುಗಳು ಹಾಗೆಯೆ ನಮ್ಮಂತರಂಗದಲ್ಲಿ ಸುರಿಯುತ್ತಲೇ ಇರುತ್ತವೆ.  ಮಳೆಯ ಏರಿಳಿತಗಳ ಬಗ್ಗೆ ಅದೆಷ್ಟೋ ಮುನ್ನೆಚ್ಚರಿಕೆಯನ್ನು ಪ್ರಾರಂಭದಲ್ಲಿಯೇ ಕೊಟ್ಟರೂ ಭೀಕರ ಮಳೆಯೆದುರು ದನಿಯಡಗಿಬಿಡುತ್ತದೆ!  ಏನೇ ಆಗಲಿ ಮಳೆ ಸೃಷ್ಟಿ ಮತ್ತು ಲಯದ  ದ್ವಂದ್ವ ಸಂಗೀತ.