ಕಿರುತೆರೆಗಳಲ್ಲಿ ಪ್ರೇಕ್ಷಕರ ಮೇಲೆ ಏಕತಾನತೆಯ ನೀರಸ  ಧಾರಾವಾಹಿಗಳ ದಾಳಿ

ಕಿರುತೆರೆಗಳಲ್ಲಿ ಪ್ರೇಕ್ಷಕರ ಮೇಲೆ ಏಕತಾನತೆಯ ನೀರಸ  ಧಾರಾವಾಹಿಗಳ ದಾಳಿ

ಕಿರುತೆರೆಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಅತ್ಯಂತ ನೀರಸ ಯಾವುದೆಂಬ ಬಗ್ಗೆ ಸ್ಪರ್ಧೆಯೇ ನಡೆಯುತ್ತಿದೆ. ಅವುಗಳಲ್ಲಿ ನಟಿಸುವ ಬಹುತೇಕರು ಅಭಿನಯಕ್ಕಿಂತ ಸಂಭಾಷಣೆ ಒಪ್ಪಿಸುವುದೇ ತಮ್ಮ ಕರ್ತವ್ಯ ಎಂಬಂತೆ ಯಾಂತ್ರಿಕವಾಗಿರುತ್ತಾರೆ. ಈ ಕುರಿತು ಸ್ನೇಹಾ ನೀಲಪ್ಪಗೌಡ ವರದಿ.

ಇತ್ತೀಚೆಗಿನ ವರ್ಷಗಳಲ್ಲಿ ಕಿರುತೆರೆ ಧಾರಾವಾಹಿಗಳು ನೋಡುಗರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿವೆ. ಸಿನಿಮಾ ನಟನಟಿಯರಷ್ಟೇ ಅಲ್ಲದೇ ಧಾರಾವಾಹಿ ಕಲಾವಿದರು ಕೂಡ ಮನೆಮಾತಾಗಿದ್ದಾರೆ. ದಿನ ಸಂಜೆಯಾದ್ರೆ ಸಾಕು ಎಲ್ಲಾ ಚಾನಲ್‌ಗಳಲ್ಲೂ ಸೀರಿಯಲ್‌ದೇ ಹವಾ. ಆದ್ರೆ ಬದಲಾದ ಕಾಲ, ಮನಸ್ಥಿತಿಗೆ ಅವುಗಳು ಒಗ್ಗಿಕೊಳ್ತಿಲ್ಲ. ಅಭಿರುಚಿಗೆ ತಕ್ಕಂತೆ ಧಾರಾವಾಹಿಗಳು ಮೂಡಿ ಬರ್ತಿಲ್ಲ. ಪೌರಾಣಿಕ ಧಾರಾವಾಹಿಗಳನ್ನು ಹೊರತುಪಡಿಸಿ ಮತ್ತುಳಿದೆಲ್ಲಾ ಧಾರವಾಹಿಗಳಲ್ಲೂ ಒಂದಲ್ಲ ಒಂದು ಕಾಮನ್ ಫ್ಯಾಕ್ಟ್‌ ಇದ್ದೇ ಇರತ್ತೆ. . ಅದೇ ಅಳುಮುಂಜಿ ಮುಖಗಳು, ಕನೆಕ್ಟೇ ಆಗದ ದೃಶ್ಯಗಳು, ರೌದ್ರ ಮುಖದ ವಿಲನ್‌ಗಳು, ಸಾಂಸಾರಿಕ ತಾಪತ್ರಯಗಳು, ಅಂದಾಜಿಗೆ ನಿಲುಕದ ಪಾತ್ರಗಳ ಸ್ಟೇಟಸ್ಸು.. ಇಂಥ ಸಂಗತಿಗಳು ಎಷ್ಟು ದಿನ ತಾನೆ ನೋಡುಗರನ್ನು ರಂಜಿಸೋಕೆ ಸಾಧ್ಯ? ಇದನ್ನೆಲ್ಲಾ ನೋಡ್ತಿದ್ರೆ ಕಾಮಿಡಿ ಸೀರಿಯಲ್ಸ್ ಗಿಂತಲೂ ಇವುಗಳೇ ಹೆಚ್ಚು ಹಾಸ್ಯಾಸ್ಪದವಾಗಿವೆ. 

 

 ಅಂದು.. ಇಂದು.. ಎಂದಿಗೂ ಬದಲಾಗದ ಧಾರಾವಾಹಿ ಕಥೆಗಳು..

ಯಾವುದಾದ್ರೂ ಹೊಸ ಧಾರಾವಾಹಿ ಆರಂಭ ಆಗಿ ಒಂದು ಎಪಿಸೋಡ್ ಮುಗಿದ್ರೆ ಸಾಕು ಸಾಮಾನ್ಯ ಜನರೇ ನಿರ್ಧರಿಸಬಹುದು ಮುಂದೆ ಈ ಸಿನಿಮಾದ ಕಥೆ ಹೀಗೇ ಇರತ್ತೆ ಅಂಥ. ಪ್ರತಿ ಧಾರಾವಾಹಿಯಲ್ಲೂ ಅದೇ ಕಥೆ ಅದೇ ವ್ಯಥೆ. ಇಷ್ಟವಿಲ್ಲದ ಮದುವೆ, ಬಳಿಕ ಪ್ರೀತಿ ಹುಟ್ಟೋದು, ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಯಾವುದಾದ್ರೂ ಷಡ್ಯಂತ್ರ ನಡೆಯೋದು, ಮನೆಯೊಳಗೆಯೇ ವಿರೋಧಿಗಳು ಸಂಚು ನಡೆಸೋದು, ಒಂದು ಹುಡುಗನಿಗೆ ಇಬ್ಬರು ಪ್ರೇಯಸಿಯರು ಅಥವಾ ಇಬ್ಬರು ಹೆಂಡತಿಯರಿರೋದು, ಜೊತೆಗಿದ್ದವರ ಪೂರ್ವಾಪರ ಗೊತ್ತಾಗದಿರೋದು ಹೀಗೆ ಹೇಳ್ತಾ ಹೋದ್ರೆ ಸೀರಿಯಲ್‌ಗಳ ಕಾಮನ್ ಫ್ಯಾಕ್ಟ್ಸ್‌ ಪಟ್ಟಿಯೇ ಸಿಗತ್ತೆ. ನಾವೆಲ್ಲಾ ಜೀವಿಸ್ತಿರೋದು ಕಲಿಯುಗದಲ್ಲಿ. 21ನೇ ಶತಮಾನವಿದು ಅದ್ರಲ್ಲೂ ಮಾನವ ಬುದ್ಧಿಜೀವಿ. ಯಾವುದು ಒಳಿತು ಯಾವುದು ಕೆಡುಕು ಅನ್ನೋದನ್ನು ನಿರ್ಧರಿಸೋ ಜಾಣ್ಮೆ ಅವನಿಗಿರತ್ತೆ. ಹೀಗಿರುವಾಗ ನಂಬಿಕೆ ದ್ರೋಹ, ಪ್ರೀತಿ ಪ್ರೇಮ, ವಾತ್ಸಲ್ಯ ಯಾವುದು ಅಂಥ ಗುರುತಿಸೋಕೆ ನಮಗೆ ಅಸಾಧ್ಯಾನಾ..? ಈ ಅಂಶಗಳು ನಿರ್ದೇಶಕ, ಕಥೆಗಾರರ ತಲೆಯಲ್ಲಿ ಇರೋದೆ ಇಲ್ವಾ..? ಇರತ್ತೆ ಅನ್ನೋದಾದ್ರೆ ಒಂದೇ ರೀತಿಯ ಕಥೆಗಳ್ಯಾಕೆ..?

ಮುಗ್ಧತೆಯ ಮಿತಿಯನ್ನೂ ಮೀರಿಸುತ್ತವೆ ಕೆಲವು ಪಾತ್ರಗಳು.. 

ಧಾರಾವಾಹಿಗಳ ಕಥೆಯಲ್ಲಿ ಕೆಲವು ಪಾತ್ರಧಾರಿಗಳು ಹಳ್ಳಿಯಿಂದ ಪಟ್ಟಣಕ್ಕೆ ಬಂದಿರ್ತಾರೆ. ಅನಿರೀಕ್ಷಿತವಾಗಿ ಯಾರದಾದ್ರೂ ಮನೆ ಸೇರ್ತಾರೆ. ಕೊನೆಗೊಂದು ದಿನ ಇವ್ರೇ ಆ ಮನೆ ಮಗ ಅಥವಾ ಮಗಳು ಅಂಥ ತೋರಿಸಲಾಗತ್ತೆ. ಆ ಪಾತ್ರಧಾರಿ ಹುಡುಗಿಯಾಗಿದ್ರೆ ಆಕೆಗೆ ಮನೆಯಲ್ಲೇ ಇರೋ ಶತ್ರಗಳು ಮೇಲಿಂದ ಮೇಲೆ ಕಾಟ ಕೊಡ್ತಿರ್ತಾರೆ. ನನ್ನ ಪ್ರಕಾರ ಮನುಷ್ಯನಿಗೂ ತಾಳ್ಮೆಯ ಮಿತಿ ಇರತ್ತೆ. ಯಾವುದಾದ್ರೂ ಒಂದು ಸಮಯದಲ್ಲಿ ಅಸಮಾಧಾನದ ಕಟ್ಟೆಯೊಡೆಯತ್ತೆ. ಆದ್ರೆ ಧಾರವಾಹಿ ನಟನಟಿಯರಲ್ಲಿ ಈ ಅಂಶಗಳು ಅಷ್ಟಾಗಿ ಕಂಡು ಬರೋದೆ ಇಲ್ಲ. ಕನಿಷ್ಟ ಪಕ್ಷ ೧ ವರ್ಷ ೨ ವರ್ಷ ೫ ವರ್ಷವಾದ್ರೂ ಬೇಕಾಗತ್ತೆ ನಾವು ಹೇಳಿದ ಸ್ಥಿತಿ ಸೀನ್‌ನಲ್ಲಿ ಕಾಣೋಕೆ.

 

ಒಂದು ದಿನ ಸೀರಿಯಲ್ ಮಿಸ್ ಆಯ್ತು ಅಂತ ಬೇಸರ ಪಡ್ಬೇಡಿ ಎಲ್ಲೂ ಹೋಗಲ್ಲ ಅಲ್ಲೇ ಇರತ್ತೆ ಕಥೆ

ನಾನು ಹಾಸ್ಟೆಲ್‌ನಲ್ಲಿದ್ದ ದಿನಗಳವು. ಕಲೆ, ಬಣ್ಣದ ಬದುಕನ್ನು ಸಹಜವಾಗಿ ನಾನು ಪ್ರೀತಿಸ್ತಿದ್ದೆ ಈಗಲೂ ಕೂಡ. ನನಗೆ ಧಾರಾವಾಹಿಗಳ ಬಗ್ಗೆ ಯಾವ ರೀತಿ ಭಾವನೆ ಇತ್ತು ಅಂದ್ರೆ, ಸಿನಿಮಾಗಳು ಒಂದು ಸರಿ ಬಂದು ಹೋಗ್ತಾವೆ ಆದ್ರೆ ಸೀರಿಯಲ್‌ಗಳು ನಮ್ಮ ಜೊತೆಯೇ ಇರತ್ತವೆ ಅಂಥ. ಇದು ನನ್ನ ತಪ್ಪು ಕಲ್ಪನೆಯೂ ಇರಬಹುದು. ಆದ್ರೆ ಅದು ಇಲ್ಲಿ ಮುಖ್ಯವಲ್ಲ. ಹಾಸ್ಟೆಲ್‌ನಿಂದ ಮನೆಗೆ ಬಂದಾಗಲೆಲ್ಲಾ ನಾನು ಟಿವಿ ಮುಂದೆ ಕೂರ್ತಿದ್ದೆ. ನಾನು ಮನೆಗೆ ಹೋಗ್ತಿದ್ದಿದ್ದು ೨-೩ ತಿಂಗಳಿಗೊಮ್ಮೆ. ವಿಪರ್ಯಾಸ ಅಂದ್ರೆ ಧಾರವಾಹಿ ಕಥೆಗಳು ನಾನು ಏನ್ ನೋಡಿ ಹೋಗಿದ್ದೆ ಅಲ್ಲೇ ಇರ್ತಿದ್ವು ಮುಂದೆ ಹೋಗಿಯೇ ಇರ್ತ್ತಿರ್ಲಿಲ್ಲ.

ವಾಸ್ತವ ಸ್ಥಿತಿಗೆ ನಿಲುಕದ ಧಾರವಾಹಿಗಳು

ಸಾಮಾನ್ಯವಾಗಿ ಯಾವುದೇ ಸೀರಿಯಲ್ ಆರಂಭದಲ್ಲಿ ಪಾತ್ರಗಳ ಪರಿಚಯ ಇದ್ದೇ ಇರತ್ತೆ. ಉದಾಹರಣೆಗೆ ಇವನ ಹೆಸರು ಇದು, ಪ್ರತಿಷ್ಠಿತ ಕಂಪೆನಿಯ ಸಿಇಓ ಈತ, ದಿನದ 24 ಗಂಟೆಯೂ ಇವನಿಗೆ ಸಾಕಾಗಲ್ಲ. ಯಾವಾಗ್ಲೂ ಕೆಲಸ ಕೆಲಸ ಅಂಥ ಬ್ಯುಸಿ ಇರ್ತಾನೆ ಅಂತೆಲ್ಲಾ..ಆದ್ರೆ ಧಾರವಾಹಿ ಆರಂಭವಾಗಿ 1 ವಾರಕ್ಕೆ ನಾಯಕನ ಮೇಲೆ ಸಂಸಾರದ ಭಾರ ಬಿದ್ದಿರತ್ತೆ. ಒಂದು ಸಣ್ಣ ಬಟ್ಟೆ ತೊಗೋಳೋದ್ರಿಂದ ಹಿಡಿದು, ಅಡುಗೆ ಮನೆ ಜಗಳದ ತೀರ್ಪಿಗೂ ಆತನೇ ಬರಬೇಕಾಗತ್ತೆ. ಪಾಪ ಗ್ರಾಮೀಣ ಭಾಗದ ಜನತೆ ಮುಗ್ಧರಿರ್ತಾರೆ. ಅವ್ರು ಈ ರೀತಿ ಧಾರಾವಾಹಿ ನೋಡಿದಾಗ ಅಂದುಕೊಳ್ಳೋದಿಷ್ಟೆ, ಎಂಥ ಶ್ರೀಮಂತ್ರ ಮನೆಯಲ್ಲೂ ಕಷ್ಟ ತಪ್ಪಿದ್ದಲ್ಲ ಅಂಥ. ಆ ಮಟ್ಟಿಗೆ ಇದೊಂದು ಪ್ಲಸ್ ಪಾಯಿಂಟ್ ಆಗತ್ತೆ.

 

ಟಿಆರ್‌ಪಿ ಇಳಿದಾಗ ಕಣ್ಮರೆಯಾಗೋ ಮೆಗಾ ಸೀರಿಯಲ್‌ಗಳು

ಈಗಿನ ಕಮರ್ಷಿಯಲ್ ದುನಿಯಾದಲ್ಲಿ ಯಾವುದೇ ರೀತಿಯ ಸೀರಿಯಲ್‌ಗಳು ಬಂದ್ರೂ ನೆಲೆಯೂರೋದು ತೀರಾ ಕಷ್ಟ. ಅದೆಷ್ಟೇ ರೊಮ್ಯಾನ್ಸ್  ಸೀನ್ ಕ್ರಿಯೇಟ್ ಮಾಡಿ ಅದೇನೆ ಗಿಮಿಕ್ ಮಾಡಿದ್ರೂ ಕೆಲವೊಮ್ಮೆ ಏನೂ ವರ್ಕ್ ಆಗಲ್ಲ. ಸೀರಿಯಲ್ ಹೇಗೂ ಆಮೆಗತಿಯಲ್ಲಿ ಸಾಗ್ತಿರತ್ತೆ. ಯಾವುದೇ ಟ್ವಿಸ್ಟ್ಸ್ ಅಂಡ್ ಟರ್ನ್ಸ್ ಬಂದೇ ಇರಲ್ಲ.  ಒಂದು ವರ್ಷದಿಂದ ಹೀಗಾಗಿದ್ರೆ ಚೆನ್ನಾಗಿರತ್ತೆ. ಹಾಗಾಗಿದ್ರೆ ಚೆನ್ನಾಗಿರ್ತಿತ್ತು ಅಂಥ ಫ್ಯಾನ್ಸ್ ಅನ್ಕೊತಿರ್ತಾರೆ. ಕೆಲವ್ರು ಇವತ್ತಲ್ಲ ನಾಳೆ ಚೆನ್ನಾಗಿ ತೋರಿಸ್ತಾರೆ ಅಂಥ ಕಾಯ್ತಾರೆ. ಆದ್ರೆ ಇನ್ನು ಕೆಲವ್ರು ಸಹವಾಸವೇ ಬೇಡಪ್ಪಾ ಅಂತ ಧಾರಾವಾಹಿ ನೋಡೋದನ್ನೇ ಬಿಟ್ ಬಿಡ್ತಾರೆ. ಈ ಪರಿಣಾಮ ಏಕ್‌ಧಮ್ ಟಿಆರ್‌ಪಿ ಕಡಿಮೆಯಾಯ್ತು ಅಂತ ಗೊತ್ತಾಗತ್ತೆ. ಆಗ ಇನ್ನು ತರುಣರಂತಿರೋ ನಟನಟಿಯರನ್ನ ಮುದುಕರನ್ನಾಗಿ ಮಾಡ್ತಾರೆ. ಇಲ್ಲ ಅಂದ್ರೆ ಮುಂದಿನ ಜೆನರೇಷನ್‌ ನ ಹೊಸ ಅಧ್ಯಾಯ ತೆರಿತಾರೆ. ಪ್ರೆಗ್ನೆಂಟ್ ಆಗದವ್ರಿಗೆ ಸಡನ್‌ ಆಗಿ ಮಕ್ಕಳಾಗತ್ತೆ. ಇದ್ಯಾವುದು ಆಗಿಲ್ಲ ಅಂದ್ರೆ ಕ್ಲೈಮ್ಯಾಕ್ಸ್ ಸೀನ್‌ ಬಂದುಬಿಡತ್ತೆ. ಈ ಕೆಲಸ ಮುಂಚೆಯಿಂದಲೇ ಮಾಡಿದ್ರೆ ಕೊನೆಪಕ್ಷ ರೆಗ್ಯುಲರ್ ವೀಕ್ಷಕರಾದ್ರೂ ಕೈ ಹಿಡಿತಿದ್ರಲ್ವಾ..?

 

ದೆವ್ವ, ಸರ್ಪದ ಟ್ರೆಂಡ್‌ ಸೀರಿಯಲ್ಸ್‌ಗಿಲ್ಲ ಮೊದಲಿನಷ್ಟು ಮನ್ನಣೆ

ಕಳೆದ ಎರಡು ವರ್ಷಗಳಲ್ಲಿ ಪ್ರತಿ ಚಾನಲ್‌ನ ಸ್ಲಾಟ್ ಗಮನಿಸಿದಾಗ ಎರಡು ಕಾಮನ್ ಫ್ಯಾಕ್ಟರ್ ನಮಗೆ ಕಾಣಿಸ್ತಿತ್ತು. ಒಂದು ದೆವ್ವದ ಸೀರಿಯಲ್, ಇನ್ನೊಂದು ಸರ್ಪದ ಸೀರಿಯಲ್.  ನಾಗ ಅದು ನಾಗ ಇದು ಅಂಥ ಚಿತ್ರ ವಿಚಿತ್ರವಾದ ಟೈಟಲ್‌ನಿಂದ ಒಂದಷ್ಟು ದಿನ ಸದ್ದಾಯ್ತು. ಆ ಸೀರಿಯಲ್‌ಗಳಲ್ಲಿ ಹೇಗೆ ಅಂದ್ರೆ ಹಾವುಗಳು ಮನುಷ್ಯರ ಹಾಗೆ. ಬೇರೆ ಲೋಕದಿಂದ ಬಂದು ವಾಸಿಸೋದೇನು, ಮನುಷ್ಯರಂತೆ ತಿನ್ನೋದೇನು, ಬೇಕಾದಾಗ ಗೆಟ್‌ ಅಪ್‌ ಕೂಡ ಬದಲಾಯಿಸಿಕೊಳ್ಳೋದೇನು.. ಅಬ್ಬಬ್ಬಾ.. ಇದನ್ನೆಲ್ಲಾ ಹೇಳೋಕಿಂತ ನೋಡಿದ್ರೇನೆ ಚಂದ. ಇನ್ನು ದೆವ್ವದ ಸೀರಿಯಲ್‌ಗಳು  ಗೊಂಬೆ ಮೇಲೆ ದೆವ್ವ ಬರೋದು. ಗೊಂಬೆ ಮಾತಾಡೋದು, ಗೊಂಬೆನೇ ತನ್ ತಾನೆ ನಡೆಯೋದು, ಕಾರ್‌ ಬ್ರೇಕ್ ಇದ್ದಕಿದ್ದಂತೆ ಫೈಲ್ಯೂರ್ ಆಗೋದು ಹೀಗೆ ತರಹೇವಾರಿ ಸೀನ್‌ಗಳು ಈ ಎರಡು ಬಗೆ ಸೀರಿಯಲ್‌ ಕಂಡು ಬರತ್ತೆ. ಸಾಮಾನ್ಯ ಜನ ಹಾವು, ದೆವ್ವಗಳನ್ನು ಸ್ನೇಹಿತರಂತೆ ನೋಡುವ ಮಟ್ಟಿಗೆ. ಹಿಂದಿನ ಎರಡು ವರ್ಷಗಳಲ್ಲಿ ಅಗ್ರಸ್ಥಾನದಲ್ಲಿದ್ದ ಈ ಬಗೆಯ ಧಾರವಾಹಿಗಳು ಮೂಲೆಗುಂಪಾಗಿವೆ. ಜನರೂ ಕೂಡ ಈ ಧಾರವಾಹಿಗಳ ಬಗ್ಗೆ ಅಷ್ಟಾಗಿ ಗಮನ ಹರಿಸ್ತಿಲ್ಲ.

 

ಪ್ರತಿಭೆಯುಳ್ಳವರಿಗೆ ಹೆಚ್ಚಾಗಿ ಮಣೆಹಾಕದ ನಿರ್ದೇಶಕ, ನಿರ್ಮಾಪಕರು


ಮೊದಲೆಲ್ಲಾ ನಟನಾ ಕೌಶಲ್ಯಕ್ಕೆ ಹೆಚ್ಚಾಗಿ ಬೆಲೆ ಕೊಡ್ತಿದ್ರು. ಕನ್ನಡ  ಚಿತ್ರರಂಗದ ಹಳೆಯ ನಟಿಯರನ್ನೇ ಗಮನಿಸಿದ್ರೆ ನಮಗೆ ಗೊತ್ತಾಗತ್ತೆ. ಕಲ್ಪನಾ ಅವರ ಚರ್ಮ ಸರಿಯಿಲ್ಲ ಅಂಥ ಆ ಕಾಲದಲ್ಲೇ ನಿರಾಕರಿಸಿದ್ರಂತೆ. ಆದ್ರೂ ಕಲೆಯನ್ನ ಪ್ರೋತ್ಸಾಹಿಸುವವರ ಸಹಾಯದಿಂದ ಕಲ್ಪನಾ ಅಭಿನೇತ್ರಿಯಾಗಿ, ಮಿನುಗುತಾರೆಯಾಗಿ ಮನೆಮಾತಾದ್ರು. ಇನ್ನು ಸರಿತಾ ಅವ್ರು ನೋಡೋಕೆ ಕಪ್ಪಿದ್ದರೂ ಅವ್ರ ಪ್ರತಿಭೆ ಮುಂದೆ ಯಾವುದೇ ತಕರಾರುಗಳು ನಿಲ್ಲಲಿಲ್ಲ. ಆದ್ರೆ ಪ್ರತಿಭೆಯನ್ನು ಪ್ರೋತ್ಸಾಹಿಸೋ ಮನಸ್ಥಿತಿ ಈಗಿನ ನಿರ್ದೇಶಕ, ನಿರ್ಮಾಪಕರಿಗೆ ಯಾಕೆ ಕಡಿಮೆ. ಕೆಲ ಸೀರಿಯಲ್‌ಗಳಲ್ಲಂತೂ ನಟ ನಟಿಯರ ಭಾವನೆಗೂ ಸನ್ನಿವೇಶಕ್ಕೂ ಮ್ಯಾಚ್‌ ಆಗೋದೆ ಇಲ್ಲ. ಅಳು ಅಳುವೇ ಅನಿಸೋಲ್ಲ.ನಗು ನಗುವನಿಸೋಲ್ಲ. ಸಾಕಷ್ಟು ಜನ ಊರಿಂದ ಊರಿಗೆ ಬಂದು ಕಲಾವಿದರಾಗಬೇಕು ಅನ್ನೋ ಆಸೆ ಹೊತ್ತಿರ್ತಾರೆ. ಅವ್ರಲ್ಲೂ ಪ್ರತಿಭೆ ಇರತ್ತೆ. ಅಂಥವರನ್ನು ಗುರುತಿಸೋ ಪ್ರಯತ್ನ ಯಾಕೆ ನಡೆಯೋದಿಲ್ಲ. ಸುಮ್ಮನೆ  ಪ್ರಚಾರಕ್ಕಾಗಿ ಆಡಿಷನ್‌ ನಡೆಸಿ ಕೊನೆಗೆ ಪರಿಚಿತ ಕಲಾವಿದರನ್ನೇ ಸೀರಿಯಲ್‌ಗಳಿಗೆ ಆಯ್ಕೆ ಮಾಡಿಕೊಳ್ಳೋದ್ಯಾಕೆ..  ಬರೀ ಸೌಂದರ್ಯವೇ ನಟಿಯಾಗೋಕೆ ಮಾನದಂಡನಾ..? ಇನ್ನು ರಂಗಭೂಮಿ ಕಲಾವಿದರು ಕೂಡ ಸಾಕಷ್ಟು ಜನ ಇದ್ದಾರೆ. ನಟನೆ ಕಲಿತಿದ್ರೂ ಕೂಡ ಅವರ್ಯಾಕೆ  ಅವಕಾಶ ವಂಚಿತರಾಗ್ತಾರೆ..? ಹೀಗೆ ಸಾಕಷ್ಟು ಪ್ರಶ್ನೆಗಳು ಮೇಲಿಂದ ಮೇಲೆ ಮೂಡುತ್ತಲೇ ಹೋಗುತ್ತವೆ.