"ಇವ್ರೀಗೆ ಜನರ ಜೀವಕ್ಕಿಂತ ರೊಕ್ಕಾನ ಮುಖ್ಯ....!"

  ರೀ...ಪಾಟೀಲ್ರ...... ನಿಲ್ಲರೀ..ಕರೆದ್ರೂ ಹಂಗ ಹೊಂಟಿರಲ್ಲ! ಎಲ್ಲೆ ಅಂತ ನಿಮ್ಮನ್ನ ಹುಡುಕೋದು?. ನಿಮ್ಮನ್ನ ಹುಡುಕ್ಕೊಂಡು ಹೈಸ್ಕೂಲ್ ಮೈದಾನಕ್ಕೆ ಹೋಗಿದ್ದೇ. ಅಲ್ಲೆ ಕಿತಬಿ ಸಂಗಪ್ಪ ಇವತ್ತ ನಿಮ್ಮ ಪಾಟೀಲ್ರು ವಾಕಿಂಗ್ ಬಂದಿಲ್ಲಪಾ ಬಸಣ್ಣ. ಯಾಕ ಬಾಳಾ ಗಾಭರ್ಯಾಗಿ.... ಪಾಟೀಲರನ್ನ ಹುಡುಕಾಕಹತ್ತಿಯಲ್ಲ. ಏನೈತಪಾ ಅಂತಾ ವಿಷಯಾ? ಅಂದಾ. ನಾನು ಏನು ಇಲ್ಲ ಬಿಡ್ರಿ. ಅಂತ ಹೇಳಿ ಅವನಕಡಿಂದ ತಪ್ಪಿಸಿಕೊಂಡು ಬರೋದಾಗ್ರ ಸಾಕಸಾಕಾಗಿ ಹೋತು ನೋಡ್ರೀ.
ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಅಂತ ಸರ್ಕಲ್ ಕಡಿಗೆ ಹೋಗಿ ಬಾಬಾಸಾಹೇಬರ ಪುತ್ಥಳಿಗೆ ಮಾಲಿ ಹಾಕಿ ಇದ ಈಗ ಬರಾಕಹತ್ತಿದ್ದೆ.... ಅಷ್ಟರಾಗ ನೀ ಬಂದಿ ನೋಡು. ಏನಪಾ ಅಂತಾ ತಲಿ ಹೋಗೋ ವಿಷಯಾ?.
ಅಂತಾದ್ದೇನು ಇಲ್ರಿ..... ಮೂಲಿಮನಿ ಮಲ್ಲಪ್ಪ "ನಿನ್ನೆ ರಾತ್ರಿ ರಕ್ತವಾಂತಿ ಮಾಡಿಕೊಂಡಿದ್ದನಂತ್… ರಾತ್ರಿನ ಅದ್ಯಾವೊದೋ ಖಾಸಗಿ ಆಸ್ಪತ್ರಿಗೆ ಅವನ್ ಸೇರಿಸ್ಯಾರಂತ ನೋಡ್ರೀ.. ಪಾಪಾ ಎಂತಾ ಮನುಷ್ಯಾಗ ಎಂತಾ ರೋಗ"!.
"ರೋಗ ಅಲ್ಲೋ ಅದು, ಬಿಸಿಲನ ತಾಪ....! ಬಿಸಿಲಿನ ತಾಪ 40 ಡಿಗ್ರಿ ತಲಪೇತಿ, ಹಿಂಗಾಗಿ ಹೀಟಿಗೆ ರಕ್ತವಾಂತಿ ಆಗಿರಬೇಕು ಬೀಡು". ಆತು ಮಲ್ಲಪ್ಪ ಎಲ್ಲೆ ಅದಾನ ಅಂತ ಪತ್ತೆ ಹಚ್ಚಿ ಎನೂ ಮತ್ತ......?
ಹೌದ್ರೀ ಪತ್ತೆ ಹಚ್ಚೇನಿ... "ಊರ ಹೊರಗ ಐತೆಲ್ಲ ಹೊಸಾ ದಾವಾಖಾನಿ ಅಲ್ಲಿಗೆ ಮಲ್ಲಪ್ಪನ್ನ ಸೇರಿಸ್ಯಾರ ಅಂತ ಬೆಳಿಗ್ಗೆ ವಾಕಿಂಗ್ ಮಂದಿ ಮಾತಾಡತಿದ್ರು".
ಹೌದ... ಹಂಗಾರ ನಡೆ ನಾವು ಅಲ್ಲಿಗೆ ಹೋಗಿ ಬರೋಣ ನಡಿ. ಪಾಪ ಬಡಪಾಯಿಗೆ ದಿಕ್ಕು ದೆಸಿಯಾರು ಇಲ್ಲ.ಹಣ್ಣಿನಂಗಡ್ಯಾಗ ಹಣ್ಣು ತಗೋ.... ಇಕಾ ರೊಕ್ಕ ಹಿಡಿ ಎಂದ ಪಾಟೀಲರು ಜೇಬಿನಿಂದ ಐದ ನೂರರ  ನೋಟು ನೀಡಿದರು. 
ಬೆಳಿಗ್ಗೆ ಬೆಳಿಗ್ಗೆ ಅಂಗಡಿಯಾವ ಚಿಲ್ಲರೆ ಕೋಡಬೇಕಲ್ಲರೀ... ನನ್ನ ಕಡಿಗೆ ಅದಾವು ನಡ್ರೀ.... ಎನ್ನುತ್ತಾ ಹಣ್ಣು ಖರೀದಿಸಿ ಪಾಟೀಲರು-ಬಸಣ್ಣ ಖಾಸಗಿ ಆಸ್ಪತ್ರೆಯ ಕಡೆಗೆ ನಡೆದರು 
"ಹೆಂಗ್‍ಅದೀಪಾ ಮಲ್ಲಪ್ಪ" ?.
ಬರ್ರೀ ಪಾಟೀಲರ, ಬಾ ಬಸಣ್ಣ ಕೂಡ್ರಿ... ಸ್ವಲ್ಪ ಅರಾಮ ಅನಿಸೇತಿ.
"ನೋಡಪಾ ಎಸನಾ ಮಾಡಬ್ಯಾಡೋ. ಸಾಲ ಎಲ್ಲಾರಿಗೂ ಇರೋದ... ನಮ್ಮ ದೇಶನಾ ಸಾಲದಾಗ ಐತಿ.! ಅಂತದ್ರಾಗ ನಿನ್ನ ಸಾಲ, ನನ್ನ ಸಾಲ ಯಾವ ಲೆಕ್ಕೋ?. ಮನಿಯೋಳಗ ಚಲೋ ಅದಾರ, ಮಕ್ಕಳು ಚಲೋ ಅದಾರ, ಮತ್ತೇನಾ ಪಾ ನಿನ್ನ ಚಿಂತಿ..."! ಚಿಂತಿಯಲ್ಲಾ ಬಿಡೂ. ಅಂದಂಗ ಬಿಲ್ಲು ಎಷ್ಟ ಮಾಡ್ಯಾರೋ?.
"ಇನ್ನು ಬಿಲ್ ಮಾಡಿಲ್ರೀ. ಇನ್ನು ಚಿಕಿತ್ಸೆ ಮುಂದವರೆಸ್ಯಾರ." ನಾಲ್ಕ ದಿನದಿಂದ ಬೆಳಿಗ್ಗೆ ಒಬ್ರು ಬರ್ತಾರ ಇಷ್ಟು ಉದ್ದಾ ಸೂಜಿ ಚುಚ್ಚಿ ರಕ್ತಾ ಹೀರಿಕೊಂತಾರ, ಮಧ್ಯಾಹ್ನ ಒಬ್ರು ಬರ್ತಾರ ಅವರು ಸೂಜಿ ಚುಚ್ಚಿ ರಕ್ತಾ ಹೀರ್ತಾರ. ಸಂಜಿ ಮುಂದ ಒಬ್ರು ಬಂದು ಅವ್ರು ರಕ್ತಾ ಹೀರಿಕೊಂಡು ಹೊಕ್ಕಾರ....." ಆದ್ರ "ಗೌಡ್ರ, ಬಡವರು ಇಂತಾ ದಾವಾಖಾನಿಗೆ ಬರಬಾರದ್ರೀ. ಬರಬಾರದು.." "ಬಂದ್ರ ಬರಬಾದ್ ಆಗಿ ಹೊಕ್ಕಾರ. ಅದಕ ನಾನಾ ಉದಾಹರಣೆ..."
ಯಾಕೋ ಅಂತಾದ್ದೇನಾತೋ...?
ಏನಲ್ರೀ.... ಡಾಕ್ಟರ್ ಪ್ರಶ್ನೆ ಮಾಡಿದ್ರು.. ನಿಮ್ಮ ವಯಸ್ಸೆಷ್ಟು? 
ನಾನು 49 ಎಂದೇ, ಏನು ಕೆಲಸ ಮಾಡುತ್ತೀರಿ... ನಾನು ಕೂಲಿ ಕೆಲಸಾ ಎಂದೆ.
ಅವರು ಬಿಡಿ ಸೇದತಿರಾ ....?
ನಾನು ಇಲ್ಲ ಎಂದೆ, ಸಿಗರೇಟು..? ಇಲ್ಲ…. ಗುಟುಕಾ ..? ಇಲ್ಲ...ಕುಡಿತೀರಾ..? ನಾನು “ಹೌದು ಕುಡಿತಿನಿ ಎಂದೆ".. ಎಷ್ಟು ವರ್ಷದಿಂದ ಎಂದು ಡಾಕ್ಟರ್ ಪ್ರಶ್ನೆಮಾಡಿದರು. 
 40 ವರ್ಷಗಳಿಂದ ಇರಬಹುದು ಎಂದೆ...!. ಏನ್ರೀ 9 ವರ್ಷದವಾ ಇದ್ದಾಗಿಂದ   ಕುಡಿಯೋ ಚಟಾ ಅಂಟಿದೆಯಾ ನಿಮಗೆ ?ಎಂದರು. 
 ಡಾಕ್ಟರ್ ನಾನು 40 ವರ್ಷಗಳಿಂದ ದಿನಾನು ಹಾಲು ಕುಡಿತಾ ಬಂದಿರುವೆ  ಎಂದೆ. ಅದಕ್ಕೆ ಅವರು ನಾನು ಕೇಳಿದ್ದು "ಹಾಲಿನ ವಿಷಯಾ ಅಲ್ಲರಿ... ಆಲ್ಕೋಹಾಲಿನ ವಿಷಯ" ಎಂದರು. ನಾನು ಇಲ್ಲ ಡಾಕ್ಟರ್ ನಾನು  ಹಾಲು ಬಿಟ್ಟು ಅಲ್ಕೋಹಾಲು ಯಾವತ್ತು ಕುಡದಿಲ್ಲ ಎಂದೆ.   
ಬ್ಯಾರೇ ಯಾವರ ಚಟಾ ಅದಾವನು ಮತ್ತ.....? "ರಕ್ತದೊಳಗ, ಕಫಾದೊಳಗ ಸಮಸ್ಯೆ ತೋರಸಾಕ ಹತ್ತೇತಿ ಅಂದ್ರು". ನಾನು ಅಪ್ಪಿತಪ್ಪಿ ಯಾವು ಚಟಾ ಇಲ್ರೀ ನನಗ... ಯಾವಾಗರ ಅಡಿಕಿ ಎಲಿ, ಸಾದಾ ಪಾನು ಹಾಕಿತಿರತೇನಿ ಅಂದೆ. 
ಅದಕ ಅವರು "ದೊಡ್ಡ ಡಾಕ್ಟರ್‍ನ ಕರಸತೇವಿ ಅಂದ್ರು. ನಾನು ಕರಸ್ರೀ ಎಂದೆ.."
ಅವತ್ತ ರಾತ್ರಿ ಆ ಆಸ್ಪತ್ರಿ ಇಬ್ಬರು ಅಕರಾಳ - ವಿಕರಾಳಾಗಿ ಇದ್ದ ನೋಡಾಕ ಥೇಟ ಕರಟಕ-ಧಮನಕನಂತ ಇಬ್ಬರು ಅದೇನೋ "ಪ್ಯಾಡು-ಪೆನ್ನು ಹಿಡಕೊಂಡು ಬಂದು “ನೀವು ಆಸ್ಪತ್ರಿಗೆ ಬಂದದಿನ ಕಟ್ಟಿದ 4 ಸಾವಿರ ರೂಪಾಯಿ ಇಲ್ಲಿಗೆ ಮುಗಿದು ಹೋಗಿದೆ. ಮತ್ತ ನೀವು ನಾಲ್ಕ ಸಾವಿರ  ಕಟ್ಟಬೇಕು" ಎಂದರು.
ಹಿಂಗ್ ಒಮ್ಮೆಕ ರೊಕ್ಕ ಕಟ್ರೀ... ಅಂದ್ರ ಅದೇಲ್ಲಿಂದ ತರಬೇಕು ರೊಕ್ಕ!, "ರೊಕ್ಕ  ಮರದಾಗ ಬಿಟ್ಟಿರತಾವೇನು ನಿಮಗ ತಗೊಂಬಂದ ಕೊಡಾಕ"?. ಈಗ ಹೇಳಿರಲ್ಲ.... ನಾಳೇ ನಿಮ್ಮ ರೊಕ್ಕ ಕೊಡತೇನಿ ಅಂದೆ.
ಅದಕ ಅವರು ಆಗೋದಿಲ್ರೀ.... "ಡಾಕ್ಟರ್ ದುಡ್ಡ ಕಟ್ಟಿಸಿಕೊಳ್ಳಾಕ ಹೇಳ್ಯಾರ, ನೀವು ಕಟ್ಟಾಕ ಬೇಕು. ಇಲ್ಲಾ ಅಂದ್ರ ನಮಗ ಬೈತಾರೆ ಅಂದ್ರು"
"ಅಲ್ರೋ ಈಗ ರಾತ್ರೋರಾತ್ರಿ ರೊಕ್ಕಾ ಕಟ್ರೀ ಅಂದ್ರ ಹೆಂಗ್ಯ."!.  ನೀವೇನೂ "ಮನುಷಾರದೀರ...ಪೊಲೀಸ್‍ರು ಅದೀರ್ಯ..." ಮೊನ್ನೆ ಪೊಲೀಸರು ಹೆಲ್ಮೇಟ್ ಇಲ್ಲ ಅಂತ ಗಾಡಿ ಹಿಡಿದಾಗ ಅವರು ದಂಡ ಕಟ್ಟರಿ ಗಾಡಿ ತಗೋಂಡು ಹೋಗ್ರೀ, ಇಲ್ಲ ಅಂದ್ರ ಕೋರ್ಟಿಗೆ ಬಂದು ದಂಡ ಕಟ್ಟಿ ಗಾಡಿ ಬಿಡಿಸಿಕೊಂಡು ಹೋಗ್ರೀ ಅಂದಿದು"್ರ.  ನೀವು ಅವರಕಿಂತ ಕಡಿ ಆದ್ರಲ್ಲೋ. "ನಾನು ಇನ್ನು ಜೀವಂತ ಅದೇನಿ. ಬೆಳಿಗ್ಗೆ ನಿಮ್ಮ ರೊಕ್ಕಾ ಕಟ್ಟತೇನ ಅಂದ್ರು ಕೇಳವಲ್ರೀ". ಅದಕ ದೊಡ್ಡೋರು ಹೇಳ್ಯಾರ "ಸುಂಕದವ್ರ ಹತ್ರ ಸು:ಖ-ದು:ಖ ಹೇಳಿಕೋಬಾರ್ದು ಅಂತ." "ನೀವು ಈಗಿಂದಿಗ್ಲೇ ರೊಕ್ಕ ಕೊಡ್ರಿ ಅಂದ್ರ ನನ್ನ ಹತ್ರ ಅಂತು ರೊಕ್ಕ ಇಲ್ಲಾ. ಬೇಕಂದ್ರ ನಿಮ್ಮ ಆಸ್ಪತ್ರಾಗ ಇಟಕೋರಿ.... ಬ್ಯಾಡಂದ್ರ ಹೊರಗ ಹಾಕ್ರೀ..." "ನಿಮ್ಮ ಡಾಕ್ಟರ್ಗ ಪೋನು ಹಚ್ಚಿಕೊಡ್ರಿ ನಾನು ಮಾತಾಡ್ತನಿ, ನಾನು ಇದ ಊರವಾ ಅದೇನಿ. ಎಲ್ಲಿ ಓಡಿ ಹೋಗೋದಿಲ್ಲ ಅಂದೆ".
ಹಂಗೆಲ್ಲಾ ಪೋನು ಹಚ್ಚಿಕೊಡಾಕ ಆಗೋದಿಲ್ರೀ....ಅಂದ ಆ ಕರಟಕ-ಧಮನಕರು ಕೈಯಾಗ ಹೊತಿಗಿ ಹಿಡಕಂಡು ಹಂಗ್ ನಿಂತಿದ್ರು..... 
 ಅಷ್ಟ್ರಾಗ ನನ್ನ ಮಗ ಬಂದ... ಏ ಹೋಗಲೇ ಆ ವಾಗೀಶ ಪಾಟೀಲ ಅಂಕಲ್ ಹತ್ರ ಹೋಗಿ "ನಾ ಹೇಳೆನಂತ ಹೇಳಿ ಐದು ಸಾವಿರಾ ರೊಕ್ಕಾ ಇಸಗೊಂಡು ಬಾ ಹೋಗು ಅಂತ ಕಳಿಸಿದೆ. ಮಗಾ ಹೋಗಿ ರೊಕ್ಕಾ ಇಸಗೊಂಡು ಬಂದ ನಂತರ ಈ ಕರಟಕ-ಧಮನಕರ ಮುಖದ ಮ್ಯಾಲ ಎಸದೇ.... ರೊಕ್ಕಾ ತಗೋಂಡ ಮ್ಯಾಲ ಈಬ್ರು ಆಸಾಮಿಗಳು ಜಾಗಾ ಖಾಲಿ ಮಾಡಿದ್ರು. ಇಲ್ಲಾ ಅಂದಿದ್ರ ನನ್ನ ಖಾಲಿ ಮಾಡಿಸುತಿದ್ದರು".....
ಅದೇನೂ ರಕ್ತ ಚೆಕ್ ಮಾಡಿದ್ರು ಅಂತೀರಿ. ನಾಲ್ಕ ದಿನ ದಾವಾಖಾನೆಗೆ ಅಡ್ಮಿಟ್ ಆಗಿದ್ದೆ. ಹತ್ತ ಸಲ ರಕ್ತ ಹಿರೀದ್ರು. ಎಡ್ಸ್ ನಿಂದ ಪೀಡ್ಸ್, ಶುಗರ್ , ಬಿಪಿ, ಇಜಿಜಿ, ಆಸಿಜಿ, ಓಸಿಜಿ, ಕಫಾ, ಕೆಮ್ಮು ದಮ್ಮು, ಕಿಡ್ನಿ ಹಿಂಗ್ ನೂರಾ ಎಂಟ್ ನಾನಾ ನಮೂನಿ ಚಕ್ ಮಾಡಿ ರಕ್ತದ ಜೊತಿಗೆ ಚೆಕ್ ಮಾಡ ಪೀ ಅಂತ ನಾಲ್ಕು ಸಾವಿರಾ ಸಣ್ಯಗ ಹೆರದ್ರು. ಮದಲ ನಾನು ರಕ್ತ ಕಡಿಮಿ ಇರವಾ. ಇವರು ಹತ್ತಾರ ಸಲ ರಕ್ತ ತಗೊಂಡಿದ್ರಿಂದ ದಾವಖಾನೆ ಸೇರೋಮುಂದ 65 ಕೆಜಿ ತೂಕಾ ಇದ್ದಾವ ಡಿಸ್‍ಜಾರ್ಜ್ ಆಗ ಹೊತ್ತಿನ್ಯಾಗ 60ಕೆಜಿಗೆ ತೂಕ ಇಳಿದಿತ್ತು. ಹೊಗ್ಯೋ ಇವನವನ್ ಈ ದವಾಖಾನಿ ಸಹವಾಸಾನಾ ಸಾಕು ಅಂತ ಮನಿ ಕಡಿಗೆ ಓಡಿ ಬಂದೆ ನೋಡ್ರೀ.
ಅಲ್ಲೋ ನಿನ್ನ ಹಂಗ ಬಿಟ್ರನು ಅವ್ರು? 
ಹಂಗ್ ಹೆಂಗ್ಯ ಬಿಡ್ತಾರೀ.! ಬಿಟ್ಟರ ಈ ಆಸಾಮಿ ಮತ್ತ ನಮಗ ಸಿಗೋದಿಲ್ಲ ಅಂತ ಕಾಲ ಲಕ್ಷ ರೂಪಾಯಿ ಬಿಲ್ಲ ಮಾಡಿ ಮತ್ತೋಟು ನನಗ ಜಡ್ ಹೆಚ್ಚು ಮಾಡಿದ್ರು, ಬೆಳಿಗ್ಗೆ ಡಾಕ್ಟರ್ ಭೇಟಿ ಕೊಟ್ಟಿದು ನಾಲ್ಕ ಸಾವಿರಾ ಮಧ್ಯಾಹ್ನ ನರ್ಸಮ್ಮಗಳು ಭೇಟಿ ಕೊಟ್ಟಿದ್ದು ಮೂರು ಸಾವಿರಾ ರಾತ್ರಿ ಡಾಕ್ಟರ್ ಭೇಟಿ ಕೊಟ್ಟಿದ್ದು, ಸ್ಪೆಷಲ್ ಡಾಕ್ಟರ್ ಭೇಟಿ ಕೊಟ್ಟಿದ್ದು ನಾಲ್ಕ ಸಾವಿರ, ಔಷಧ, ಗುಳಗಿ ಅದು-ಇದು ಮಣ್ಣು-ಮಸಿ ಅಂತ ನನ್ನ ಜೀವನಾ ತಗದಾರಿ ಇವ್ರು. ಕೊಟ್ಟ 25 ಸಾವಿರಾ ದುಡಿಬೇಕಂದ್ರ ನಾನು 4 ತಿಂಗಳ ದುಡಿಬೇಕು. ಬಡವರ ಕಷ್ಟ ಈ ದೊಡ್ಡ ಮಂದಿಗೆ ಹೆಂಗ್ಯ ಗೊತ್ತಾಗಬೇಕು ನೀವ ಹೇಳ್ರೀ?
ಹೌದೋ ಮಲ್ಲಪ್ಪ ಈ ದಾವಾಖಾನಿ ಸಹವಾಸ ನನಗೂ ಹೊಸಾದಲ್ಲ. ಆದ್ರ "ಇವ್ರು ರೊಕ್ಕಕ್ಕ ನಿಂತ ಬಿಟ್ಟಾರ" ಏನಪಾ..... "ಇವ್ರೀಗೆ ಜನರ ಜೀವಕ್ಕಿಂತ ರೊಕ್ಕಾನ ಮುಖ್ಯ."! "ಜನ್ರು ಸತ್ರ ಸಾಯಿಲಿ ನಮಗ ರೊಕ್ಕ ಕೊಟ್ಟ ಸಾಯಲಿ ಅನ್ನೋ ಮಂದಿ ಇವ್ರು".  "ನಾಳೆ ಸತ್ತಾಗ ರೊಕ್ಕಾನ ಎದಿಮ್ಯಾಗ ಹೇರಿಕೊಂಡು ಹೊಕ್ಕಾರ ಇವ್ರು.... ಏನೂ ಇಲ್ಲ". ಮೊನ್ನೆ ನಮ್ಮ ಪೈಕಿ ಒಬ್ರು ಹಾರ್ಟ್ ಅಟ್ಯಾಕ ಆಗಿ ಈ ಆಸ್ಪತ್ರೆಗೆ ದಾಖಲಾಗಿದ್ರು... ಈ ಡಾಕ್ಟರು ಆರಾಮ ಆಕ್ಕಾರ ಅಂತ ಹೇಳ್ತ ಹೇಳ್ತ ಎಪ್ಪತ್ತು ಸಾವಿರ ರೊಕ್ಕಾ ತಿಂದ್ರು.... ಮುಂದ ನಮ್ಮ ಮನುಷಾಗ "ತ್ರಾಸ್ ಆದಮ್ಯಾಲ್ ಹುಬ್ಬಳ್ಳಿಗೆ ಕರಕೊಂಡು ಹೋಗ್ರಿ ಅಂದ್ರು.." ಕಾರ ಮಾಡಿಕೊಂಡು ಹುಬ್ಬಳ್ಳಿಗೆ ಕರಕೊಂಡು ಹೋಗಿ... ಅಲ್ಲಿ ದೊಡ್ಡ ಆಸ್ಪತ್ರಿಗೆ ದಾಖಲ ಮಾಡಿದ್ವಿ. ಅಲ್ಲೆ ಹದಿನೈದ ದಿನಾ ಇದ್ದು ನಮ್ಮ ಮನುಷಾ ಆರಾಮ ಆಗಿ ಈಗ ಊರಿಗೆ ಬಂದಾನ ನೋಡು.
ಅಲ್ರೀ ಕಾಕಾರ "ಈ ಖಾಸಗಿ ಡಾಕ್ಟರ್ಗಳಿಗೆ ಹೇಳೋರು ಕೇಳೋರು ಯಾರು ಇಲ್ಲನ್ರೀ..".?
ಯಾಕ ಇಲ್ಲೋ ಅದಾರ.... ಆದ್ರ "ಈ ಡಾಕ್ಟರಗಳೂ ಭಯಂಕರ ಶಾಣ್ಯಾರು ಅದಾರೇನಪಾ..".!. "ಇತ್ಲಾಗ ಸರ್ಕಾರಿ ಪಗಾರಾನು ತಗೊಂತಾರ, ಆತ್ಲಾಗ ಖಾಸಗಿ ಪ್ಯ್ರಾಕ್ಟಿಸು ಮಾಡ್ತಾರ". "ಸರಕಾರನ ಇವರ ಬೇಡಿಕಿಗೆ ಬಗ್ಗಿ ಬಂವ್ ಅಂದೈತಿ"..... ಇಲ್ಲಾಂದ್ರ ಈ ಡಾಕ್ಟರರು ಸ್ಟ್ರೈಕ್ ಮಾಡ್ತಾರ.... "ನಾವು ರೋಗಿಗಳನ್ನು ನೋಡೋದಿಲ್ಲ ಅಂತ ಪ್ರತಿಭಟನೆ ಮಾಡ್ತಾರ". ಹೋದ ವರ್ಷ ನೋಡಿದಿಲ್ಲ.. "ಈ ಡಾಕ್ಟರ್ ಪ್ರತಿಭಟನಾ ಮಾಡಿದ್ದರಿಂದ  ಪಾಪಾ ಏಷ್ಟೋ ರೋಗಿಗಳು ಚಿಕಿತ್ಸೆ ಸಿಗದ ಶಿವನ ಪದಾ ಸೇರಿದ್ರು.....ಹಿಂಗಾಗಿ ಸರಕಾರನೂ ಇವ್ರ ಹೇಳಿದಂಗ ಕೇಳ್ತಾರ, ಇವ್ರೀಗೆ ಹೆದರ್ತಾರ"....
ಹಂಗಾರ ಇದಕ ಔಷಧಾ ಇಲ್ಲಾ ಅಂತೀರೇನೂ.....?
ಯಾಕಿಲ್ಲೋ.. ಎಲ್ಲಾ ರೋಗಕ್ಕೂ ಒಂದ ಔಷಧ ಇದ್ದ ಇರತೈತಿ....!.ಕಾಲಾನ ಎಲ್ಲಾರಿಗೂ ಬುದ್ದಿ ಕಲಿಸತೈತಿ?. ನೀ ಈ ಡಾಕ್ಟರ್ ಬಗ್ಗೆ ತಲಿ ಕೆಡಿಸಿಕೊಳ್ಳಬಾಡ....! ಮೊದಲ ಅರಾಮ ಆಗಿ ಓಡಾಡಂಗ ಆಗೂ... ಆಮ್ಯಾಲ ಈ ಸಮಸ್ಯೆ ಬಗ್ಗೆ ಯೋಚನೆ ಮಾಡುವಂತಿ. ಎನರ ಸಹಾಯ ಬೇಕಂದ್ರ ನಾ ಅದೇನಿ ಅನ್ನೋದು ಮರಿ ಬ್ಯಾಡ. ಎಲ್ಲಾ ಡಾಕ್ಟರು ಕೆಟ್ಟರೂ ಇರೋದಿಲ್ಲ. ಅವರಲ್ಲಿ ಒಳ್ಳೆಯವರು ಇರ್ತಾರ. ನಿ ಎಲ್ಲಾರಿಗೂ ಒಳಿತು ಮಾಡಿ, ನಿನಗೂ ಒಳ್ಳೆದ ಆಕೈತಿ. ಆರೋಗ್ಯದ ಕಡಿಗೆ ಲಕ್ಷಾ ಕೊಡು ಎನ್ನುತ್ತಾ ಪಾಟೀಲರು, ಬಸಣ್ಣ ಆಸ್ಪತ್ರೆ ಬಿಲ್ಡಿಂಗ್ ಇಳಿದು ಹೋದರು.