ಮೊನಾಲಿಸಾಳ ಕಂಗಳಲ್ಲಿ ಡಾವಿಂಚಿ ಲವ್ ಸ್ಟೋರಿ!

"ಮೊನಾಲಿಸಾಳ ಕಣ್ಣುಗುಡ್ಡೆಗಳಲ್ಲಿಯೇ ನನಗೆ ಲಿಯೋನಾರ್ಡೋ ಡಾವಿಂಚಿಯ ಜೀವನ ಚರಿತ್ರೆ ಇದ್ದಂತೆ ತೋರುತ್ತಿದೆ. ನಿಗೂಢವಾಗಿ ರೂಪಿಸಿರುವ ಸಂಕೇತಗಳ ಮೂಲಕ ಡಾವಿಂಚಿ ಇಡೀ ಜಗತ್ತಿಗೆ ಏನೋ ಹೇಳಲು ಹೊರಟಂತಿದೆ. ಅದೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ’

ಮೊನಾಲಿಸಾಳ ಕಂಗಳಲ್ಲಿ ಡಾವಿಂಚಿ ಲವ್ ಸ್ಟೋರಿ!

ಮೊನಾಲಿಸಾಳ ರಹಸ್ಯ ಬಯಲಾಗಿದೆ! ಡಾವಿಂಚಿ ಕೊಡ್ ನಿಜವಾಗಲೂ ಬೆತ್ತಲಾಗಿದೆ!! ಹೆಣ್ಣಿನ ಕಣ್ಣಿನಲ್ಲಿ ಜಗತ್ತಿನ ರಹಸ್ಯ ಅಡಗಿರುತ್ತದೆ ಎಂಬ ಮಾತು ಮೊನಾಲಿಸಾ ವಿಚಾರದಲ್ಲೂ ನಿಜವಾಗಿದೆ. ಮೊನಾಲಿಸಾಳ ಅತ್ಯಪರೂಪದ ಮುಗುಳ್ನಗೆಯಲ್ಲಿ ಮೈಮರೆತಿದ್ದ ಜಗತ್ತು ಆಕೆಯಲ್ಲಿ ಅಡಗಿರುವ ರಹಸ್ಯಗಳನ್ನು ಮುಗುಳ್ನಗೆ ಸೂಸುತ್ತಿರುವ ತುಟಿಗಳಲ್ಲಿ ಹುಡುಕುತ್ತಿತ್ತು. ರಹಸ್ಯಗಳಿರುವುದು ಅವಳ ತುಟಿಗಳಲ್ಲಿ ಅಲ್ಲ; ಆಕೆಯ ಕಣ್ಣುಗಳಲ್ಲಿ ಎಂಬುದು ಈಗ ಪತ್ತೆಯಾಗಿದೆ. ಮೊನಾಲಿಸಾಳ ಕಣ್ಣುಗಳಲ್ಲಿರುವ ರಹಸ್ಯ ಸಂದೇಶಗಳಾದರೂ ಏನು? ಜಗತ್ತೇಕೆ ಅವಳ ರಹಸ್ಯಗಳ ಬಗ್ಗೆ ತಿಳಿದುಕೊಳ್ಳಲು ನಿದ್ದೆ, ಊಟ ಬಿಟ್ಟು ಪ್ರಯತ್ನಿಸುತ್ತಿದೆ?

ಯಾಕೆಂದರೆ, ಅವಳು ಸಾಮಾನ್ಯ ಹೆಣ್ಣಲ್ಲ! ಜಗದ್ವಿಖ್ಯಾತ ಕಲಾವಿದ ಲಿಯೋನಾರ್ಡೋ ಡಾವಿಂಚಿಯ ಕಲಾ ದೇವತೆ. ಅವಳ ಹೆಸರೇ ಮೊನಾಲಿಸಾ. ಪ್ಯಾರಿಸ್‍ನ ಮುಸಿದು ಲೋರೆ ಮ್ಯೂಸಿಯಮ್ಮಿನಲ್ಲಿ ವಾಸವಿದ್ದಾಳೆ ಈ ಮೊನಾಲಿಸಾ. ಇವಳನ್ನು ನೋಡಲು, ಸ್ನಿಗ್ಧ ಮುಗುಳ್ನಗೆಯನ್ನು ಸವಿಯಲೆಂದೇ ಪ್ರತಿವರ್ಷ ಜಗತ್ತಿನಾದ್ಯಂತದಿಂದ 6 ಮಿಲಿಯನ್‍ಗಿಂತ ಹೆಚ್ಚಿನ ಜನ ಬರುತ್ತಾರೆ. ಅಷ್ಟರ ಮಟ್ಟಿಗೆ ಕಲಾವಿದ ಲಿಯೋನಾರ್ಡೋ ಡಾವಿಂಚಿ ಗ್ರೇಟ್. 1503ರಲ್ಲಿ ಮೊನಾಲಿಸಾಳನ್ನು ಆಯಿಲ್ ಪೈಂಟಿಂಗ್‍ನಲ್ಲಿ ಪೊಪ್ಲಾರ್ ಮರದ ಕ್ಯಾನ್ವಾಸಿನ ಮೇಲೆ ಸೃಷ್ಟಿಸಲು ಆರಂಭಿಸಿದ ಡಾವಿಂಚಿಯ ಅದ್ಭುತ ಸೃಷ್ಟಿ ಮುಗಿಯುವುದು 1506ರಲ್ಲಿ. ಸತತ 14 ವರ್ಷಗಳ ಅದ್ಭುತ ಶ್ರಮದಿಂದ ಮೂಡಿದವಳೇ ಮೊನಾಲಿಸಾ. 77 x 53 ಸೆಂ.ಮೀ. ಗಾತ್ರದ ಮೊನಾಲಿಸಾ ಜಗತ್ತಿನ ತುಂಬಾ ಕುತೂಹಲ ಮೂಡಿಸಿದವಳು. ಅಲ್ಲಿಂದ ಇಲ್ಲಿಯವರೆಗೆ ಶತ-ಶತಮಾನಗಳನ್ನು ದಾಟಿದರೂ ತನ್ನಲ್ಲಿರುವ ರಹಸ್ಯವನ್ನು ಬಿಟ್ಟುಕೊಟ್ಟವಳಲ್ಲ.

ಮೊನಾಲಿಸಾ ಮೋಹಕವಾಗಿ ಮುಗುಳ್ನಗುತ್ತಲೇ ಸಾವಿರ ಪ್ರಶ್ನೆಗಳನ್ನು ಮೂಡಿಸಿದವಳು. ಮೊನಾಲಿಸಾ ಎಂಬುದು ಕಲ್ಪನೆಯೋ? ನಿಜವಾದ ಹೆಣ್ಣನ್ನು ತನ್ನ ಮುಂದೆ ಕುಳ್ಳಿರಿಸಿಕೊಂಡು ಲಿಯೋ ನಾರ್ಡೋ ಡಾವಿಂಚಿ ಚಿತ್ರ ಬರೆದಿದ್ದೋ? ಎಂಬಲ್ಲಿಂದ ಆರಂಭವಾಗುವ ರಸಿಕರ ಕುತೂಹಲಕ್ಕೆ 500 ವರ್ಷಗಳ ಇತಹಾಸವಿದೆ. 16ನೇ ಶತಮಾನದಲ್ಲಿ ಮೂರ್ತ ರೂಪ ಪಡೆದ ಮೊನಾಲಿಸಾ ನಿಜವಾಗಲೂ ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನಗಳು ನಡೆಯುತ್ತಲೇ ಇವೆ. ಮೊನಾಲಿಸಾ ಬೇರೆ ಯಾರೂ ಅಲ್ಲ-ಅವಳು ಅರಗೋನ್‍ಳ ಇಸಬೆಲ್ಲಾ. ಮಿಲನ್ ಸಾಮ್ರಾಜ್ಯದ ದೊರೆಯ ಆಸ್ಥಾನದಲ್ಲಿ ಚಿತ್ರಕಲಾವಿದನಾಗಿದ್ದ ಲಿಯೋನಾರ್ಡೋ ಡಾವಿಂಚಿ ಇಸಬೆಲ್ಲಾಳನ್ನು ಮುಂದೆ ಕುಳ್ಳಿರಿಸಿಕೊಂಡು ಸೃಷ್ಟಿಮಾಡಿದ್ದೇ `ಮೊನಾಲಿಸಾ’ಳನ್ನು ಎನ್ನುವವರಿದ್ದಾರೆ. ಇದನ್ನು ನಂಬದ ದೊಡ್ಡ ಇತಿಹಾಸತಜ್ಞರ ಬಳಗವೂ ಇದೆ. 1512ರಿಂದ 1516ರ ಸಂದರ್ಭದಲ್ಲಿದ್ದ ಫ್ಲೋರೆನ್ಸ್‍ನ ಗಿಲಿಯಾನೋದೆ ಮೆಡಿಸಿ ಎಂಬಾತನ ಪತ್ನಿಯದು ಈ ಕಲಾಕೃತಿ ಎಂದು ವಾದಿಸುವವರಿದ್ದಾರೆ. ಇತ್ತೀಚೆಗಷ್ಟೇ ಡಾ.ಲಿನಿಯಾನ್ ಸ್ಚೆವಟ್ರ್ಸ್ ಎಂಬ ಇತಿಹಾಸ ತಜ್ಞ, ``ಮೊನಾಲಿಸಾ ‘ಡಾವಿಂಚಿ’ಯದೇ ಹೆಣ್ಣು ಮುಖ. ಮೊನಾಲಿಸಾ ಮುಖದಲ್ಲಿರುವುದು ಡಾವಿಂಚಿ ಮುಖದ ಲಕ್ಷಣಗಳೇ ಹೊರತು ಬೇರೆಯದಲ್ಲ’’ ಎಂದೇ ವಾದಿಸಿದ್ದಾನೆ. ಆದರೂ ಸಂಶೋಧನೆ ನಿಂತಿಲ್ಲ. ಹಾಗೆಯೇ ಮುಂದುವರೆದ ಮತ್ತೊಂದು ಸಂಶೋಧನೆ ಕುತೂಹಲಗಳಿಗೆ ಒಂದಿಷ್ಟು ನೆಮ್ಮದಿ ನೀಡಿದಂತಿದೆ.

ಮೊನಾಲಿಸಾ ಎಂದರೆ ``ಮೇಡಂ ಲಿಸಾ’’ ಎಂದು ಅರ್ಥವಂತೆ. ಮೊನಾಲಿಸಾ ಕಲಾಕೃತಿಯ ರೂಪದರ್ಶಿ ಲಿಸಾ ಘೇರರ್ ದಿನಿ(Lisa Gherardini)ಯಂತೆ. ಈಕೆ ರೇಶಿಮೆ ವ್ಯವಹಾರಸ್ಥ ಫ್ರಾನ್ಸಿಸ್ಕೋ ಡೆಲ್‍ಗಿಯೋ ಕೊಂಡೊ ಎಂಬಾತನ ಮೂರನೇ ಹೆಂಡತಿ. 1550ರಲ್ಲಿಯೇ ಜಿಯಾರ್ಜಿಯೋ ವಸರಿ ಎಂಬಾತ ಡಾವಿಂಚಿಯ ಆತ್ಮಕಥೆ ಬರೆದಿದ್ದಾನೆ. ಈ ಪುಸ್ತಕದಲ್ಲಿ ಮೊನಾ (Mona)  ಎಂಬ ಪದವನ್ನು ಸಾಮಾನ್ಯವಾಗಿ ಬಳಸುವ ಕುರಿತು, Madonna ಎಂಬ ಇಟಾಲಿಯನ್ ಪದ ಇದರ ಮೂಲವೆಂದು, ಇದು ಇಂಗ್ಲೀಷಿಗೆ `Madam’ಎಂದು ತರ್ಜುಮೆ ಆಗಿದೆ ಎಂದು ವಿವರಣೆ ದೊರೆಯುತ್ತದೆ. ಈ ಆಧಾರದ ಮೇಲೆ "Monalisa’’ ಅಂದರೆ "Madam Lisa’’ ಎಂದರ್ಥವಂತೆ.

ಮೊನಾಲಿಸಾಳ ಮುಗುಳು ನಗು ಕೆಲವರಿಗೆ ಬದುಕಲು ಚೈತನ್ಯ ನೀಡಿದಂತೆಯೇ ಕೆಲವರಿಗೆ ಸಾವಿನ ಬಾಗಿಲನ್ನೂ ತೋರಿಸಿದೆ. ಅಂಥದ್ದೊಂದು ವಿಚಿತ್ರ ಉದಾಹರಣೆಯೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 1852ರಲ್ಲಿ ಲುಕ್ ಮಸ್ಪೆರೋ ಎಂಬ ಫ್ರೆಂಚ್ ಕಲಾವಿದನ ಆತ್ಮಹತ್ಯೆಯ ಹಿಂದೆ ಮೊನಾಲಿಸಾಳ ಮೋಹಕ ಮುಗುಳ್ನಗುವಿನ ಕೈವಾಡವಿದೆ! ಲುಕ್ ಮಸ್ಪೆರೋ ತಾನು ಉಳಿದುಕೊಂಡಿದ್ದ ಹೋಟೆಲ್‍ನ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಒಂದು ಡೆತ್‍ನೋಟನ್ನು ಬರೆದಿಟ್ಟಿದ್ದ; ``ಹಲವಾರು ವರ್ಷಗಳ ಕಾಲ ಪ್ರಯತ್ನಿಸಿದರೂ ಮೊನಾಲಿಸಾಳ ಅತ್ಯಾಕರ್ಷಕ ಮುಗುಳ್ನಗುವಿನ ಹಿಂದೆ ಇರುವ ರಹಸ್ಯ ತಿಳಿಯಲಿಲ್ಲ. ಅದಕ್ಕಾಗಿ...’’ ಮೊನಾಲಿಸಾ ಎಷ್ಟು ಕ್ರೂರಿ!? ಇನ್ನೆಷ್ಟು ಜನಕ್ಕೆ ಕೊಂದಿದ್ದಾಳೋ-ದೈಹಿಕವಾಗಿ, ಮಾನಸಿಕವಾಗಿ!!


 

ಹೀಗೆ, ಜಗತ್ತು ಮೊನಾಲಿಸಾಳ ಮುಗುಳ್ ನಗೆಯಲ್ಲಿ ಮುಳುಗಿರುವಾಗ ಆಕೆಯ ಕಣ್ಣುಗಳಲ್ಲಿ ಇಣುಕಿ ನೋಡಿದವನು ಫ್ರೆಂಚ್ ಇಂಜಿನಿಯರ್ ಹಾಗೂ ವಿಜ್ಞಾನಿಯೂ ಆಗಿರುವ ಪಾಸ್ಕಲ್‍ ಕಾಟ್ಟೆ. ನುರಿತ ತಜ್ಞರ ತಂಡವೊಂದನ್ನು ಕಟ್ಟಿಕೊಂಡು ಮೊನಾಲಿಸಾ ಕಣ್ಣುಗಳ ಸರೋವರದಲ್ಲಿ ಇಳಿಯುತ್ತಾನೆ. 240 ಮೆಗಾಪಿಕ್ಸಲ್ ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಕ್ಯಾಮರಾವನ್ನು ತಾನೇ ತಯಾರಿಸಿಕೊಳ್ಳುತ್ತಾನೆ. ಈ ಕ್ಯಾಮರಾದಲ್ಲಿ 13 ವೇವ್‍ಲೆನ್ತ್ಗಳ ಇನ್‍ಫ್ರಾರೆಡ್ ಅಲ್ಟ್ರಾವೈಲೆಟ್ ಬೆಳಕಿನ ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿ ರೂಪಿಸಿ ಸಂಶೋಧನೆಗೆ ನಿಲ್ಲುತ್ತಾನೆ. ಪ್ರತಿಯೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಅಭ್ಯಸಿಸುತ್ತಾನೆ. ಈವರೆಗೆ ಎಲ್ಲರಿಗೆ ಕಂಡಿದ್ದಕ್ಕಿಂತ ಮೊನಾಲಿಸಾ ಅತ್ಯದ್ಭುತವಾಗಿ ಕಾಣಿಸಿಕೊಳ್ಳತೊಡಗುತ್ತಾಳೆ, ಪ್ಯಾಸ್ಕಲ್‍ಕಾಟ್ಟೆಗೆ.

ಆ ಕ್ಷಣಗಳಲ್ಲಿ ರೋಮಾಂಚಿತಗೊಳ್ಳುವ ಪಾಸ್ಕಲ್, ``ಅವಳ ಮುಖವೇ ಒಂದು ಅತ್ಯಪರೂಪದ ಕಲ್ಪನೆ. ಮುಗುಳ್ನಗು ಈ ಜಗತ್ತಿನ ಎಲ್ಲಾ ರೀತಿಯ ನಗುಗಳ ತಾಯಿಬೇರು. ಕಣ್ಣುಗಳೂ ಎಲ್ಲಕ್ಕಿಂತ ಭಿನ್ನ...’’ ಎಂದು ಕವಿಯಂತೆ ವರ್ಣನೆಗೆ ನಿಲ್ಲುತ್ತಾನೆ. 

ಮೊನಾಲಿಸಾಳ ಮುಖದ ಮೇಲಾಗಲೀ, ಕಣ್ಣುಗಳಲ್ಲಾಗಲೀ, ಹುಬ್ಬುಗಳಲ್ಲಾಗಲೀ ಒಂದೇ ಒಂದು ಕೂದಲಿಲ್ಲ ಎಂದು ಸಂಶೋಧನೆ ಮುಗಿಸಿದ್ದ ವಿಜ್ಞಾನಿಗಳಿಗೆ ಪಾಸ್ಕಲ್‍ ಕಾಟ್ಟೆ ತನ್ನ ಆರಂಭಿಕ ಸಂಶೋಧನೆಯಲ್ಲಿಯೇ ಬೆಚ್ಚಿಬೀಳಿಸುತ್ತಾನೆ-``ಮೊನಾಲಿಸಾಳ ಕಣ್ಣುಗಳ ಆಳ ಅಭ್ಯಾಸಿ ನಾನು. ಹುಬ್ಬಿನಲ್ಲಿ ಒಂದೇ ಒಂದು ಕೂದಲಿದೆ. ಅದನ್ನು ನಾನು ಕಂಡುಹಿಡಿದಿದ್ದೇನೆ!’’ ಎಂದು ಅಚ್ಚರಿ ಮೂಡಿಸಿದ್ದಾನೆ.

ಮೊನಾಲಿಸಾ ಮೊದಲಬಾರಿ ಎಂಬಂತೆ ಪಾಸ್ಕಲ್‍ ಕಾಟ್ಟೆಯ ಸೂಕ್ಷ್ಮ ಪತ್ತೆದಾರಿಕೆಗೆ ಸ್ಪಂದಿಸತೊಡಗುತ್ತಾಳೆ. ಮೊನಾಲಿಸಾಳ ಹುಬ್ಬಿನ ಒಂದೇ ಒಂದು ಕೂದಲಿನ ಕಥೆ ಕೇಳಿದವರಿಗೆ ಸಾಮಾನ್ಯವಾಗಿ ನಗು ಬರಬಹುದು.  ಆದರೆ, ಮೊನಾಲಿಸಾಳ ರಹಸ್ಯ ಭೇದಿಸಲು ನಿಂತಿರುವ ಜಗತ್ತಿನ ಮಟ್ಟಿಗೆ ಅದೊಂದು ಆಶ್ಚರ್ಯದ ಹಾಗೂ ಅತ್ಯಪರೂಪದ ಸುದ್ದಿಯೇ! ಹೀಗೆ, ತನ್ನ ಸೂಕ್ಷ್ಮ ಪತ್ತೆದಾರಿಕೆಯ ಮೂಲಕ ಆಶ್ಚರ್ಯಗಳನ್ನು ಮೂಡಿಸುತ್ತಲೇ ಹೋಗುವ ಕಾಟ್ಟೆ, ಕೊನೆಗೂ 500 ವರ್ಷಗಳಿಂದಲೂ ರಹಸ್ಯವಾಗಿಯೇ ಉಳಿದಿದ್ದ `ಮೊನಾಲಿಸಾಳ ಗುಪ್ತತೆ’ಯನ್ನು ಬಯಲು ಮಾಡುತ್ತಾನೆ. ಜೊತೆಗೆ 'ಮೊನಾಲಿಸಾ’ಳನ್ನು ಸೃಷ್ಟಿಸಿದ ಲಿಯೋನಾರ್ಡೋ ಡಾವಿಂಚಿಯ ಕಲಾಕೃತಿ ಸೃಷ್ಟಿಸುವಾಗಿನ ಮನೋಸ್ಥಿತಿಯನ್ನೂ ಒಂದೊಂದಾಗಿ ಬಯಲು ಮಾಡುತ್ತಾ ಹೋಗುತ್ತಾನೆ. ಮೊನಾಲಿಸಾಳ ಎಡಗೈಯ ಒಂದು ಬೆರಳು ಸಂಪೂರ್ಣವಾಗಿ ಚಿತ್ರಿತಗೊಂಡಿಲ್ಲ. ಕಣ್ಣಿನ ತೀರದಲ್ಲಿ ಚಿತ್ತು ಮಾಡಲಾಗಿದ್ದು, ಆಕೆ ರೋಗ ಪೀಡಿತೆಯಾಗಿದ್ದಳು ಎನ್ನುತ್ತಾನೆ!

ಕಣ್ಣುಗಳಲ್ಲಿರುವ ರಹಸ್ಯವೇನು?

ಪಾಸ್ಕಲ್‍ ಕಾಟ್ಟೆಯಂತೆಯೇ ಮೊನಾಲಿಸಾಳ ಕಣ್ಣುಗಳಲ್ಲಿ ಆಳವಾಗಿ ಇಳಿದವನು ಇಟಲಿಯ ನ್ಯಾಷನಲ್ ಕಮಿಟಿ ಫಾರ್ ಕಲ್ಚರಲ್ ಹೆರಿಟೇಜ್‍ನ ಅಧ್ಯಕ್ಷ ಹಾಗೂ ಕಲಾ ಇತಿಹಾಸ ತಜ್ಞ ಸಿಲ್ವನೋ ವಿನ್‍ ಸೆಟಿ. ಕೇವಲ ನಮ್ಮ ನಗ್ನ ಕಣ್ಣುಗಳಿಂದ ಮೊನಾಲಿಸಾಳ ಕಣ್ಣುಗಳಲ್ಲಿರುವ ನಿಗೂಢವನ್ನು ನಗ್ನಗೊಳಿಸಲು ಸಾಧ್ಯವಿಲ್ಲ. ಮ್ಯಾಗ್ನಿಫೈಯಿಂಗ್ ಕನ್ನಡಿಯ ಮೂಲಕ ಮಾತ್ರ ನಿಗೂಢಗಳು ತೆರೆದುಕೊಳ್ಳುತ್ತವೆ ಎಂದು ಕುತೂಹಲದ ವಿಷಯವೊಂದನ್ನು ಹೇಳುವ ಮೊದಲು ಪೀಠಿಕೆ ಹಾಕುತ್ತಾನೆ ವಿನ್‍ ಸೆಟಿ.

"ಮೊನಾಲಿಸಾಳ ಕಣ್ಣುಗುಡ್ಡೆಗಳಲ್ಲಿಯೇ ನನಗೆ ಲಿಯೋನಾರ್ಡೋ ಡಾವಿಂಚಿಯ ಜೀವನ ಚರಿತ್ರೆ ಇದ್ದಂತೆ ತೋರುತ್ತಿದೆ. ನಿಗೂಢವಾಗಿ ರೂಪಿಸಿರುವ ಸಂಕೇತಗಳ ಮೂಲಕ ಡಾವಿಂಚಿ ಇಡೀ ಜಗತ್ತಿಗೆ ಏನೋ ಹೇಳಲು ಹೊರಟಂತಿದೆ. ಅದೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ’’ ಎಂದು ಕುತೂಹಲಕ್ಕೆ ಬರುವ ಮುನ್ನ ವಿನ್‍ ಸೆಟಿ ಸ್ಪಷ್ಟಪಡಿಸುತ್ತಾನೆ.

"ಮೊನಾಲಿಸಾಳ ಕಣ್ಣುಗಳ ಗುಡ್ಡೆಯಲ್ಲಿ ಸೀಕ್ರೆಟ್ ಮೆಸೇಜ್‍ಗಳಿವೆ. ಸಾಮಾನ್ಯವಾಗಿ ಜನರು ಅವಳ ಮುಗುಳ್ನಗೆಯ ಹಿಂದಿರುವ ರಹಸ್ಯ ಭೇದಿಸುವಲ್ಲಿ ಮಗ್ನರಾಗಿರುತ್ತಾರೆ. ಅವಳ ಕಣ್ಣುಗಳ ಗುಡ್ಡೆಯಲ್ಲಿ ಐಗಿ ಎಂಬ ಇಂಗ್ಲೀಷ್ ಅಕ್ಷರಗಳೂ, 4. 18. 22. 5. 39. 47... 13. ಎಂಬ ಸಂಖ್ಯೆಗಳೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದನ್ನೆಲ್ಲ ನಾವು ಬರಿಗಣ್ಣಿಂದ ನೋಡಲು ಸಾಧ್ಯವಿಲ್ಲ. ವಿಶೇಷವಾದ ಮ್ಯಾಗ್ನಿಫೈಯಿಂಗ್ ಕನ್ನಡಿಯಿಂದ ಮಾತ್ರ ನೋಡಲು ಸಾಧ್ಯ” ಎಂದು ವಿವರಿಸುತ್ತಾನೆ ವಿನ್‍ ಸೆಟಿ.

"ಮೊನಾಲಿಸಾಳ ಬಲಗಣ್ಣಿನ ಗುಡ್ಡೆಯಲ್ಲಿ ಐಗಿ ಎಂಬ ಇಂಗ್ಲೀಷ್ ಅಕ್ಷರಗಳಿವೆ. ಐಗಿ ಎಂದರೆ ಲಿಯೋನಾರ್ಡೋ ಡಾವಿಂಚಿ ಎಂದಿರಬಹುದು. ಶಾರ್ಟ್‍ಫಾರ್ಮ್‍ನಲ್ಲಿ ಡಾವಿಂಚಿ ಐಗಿ ಎಂದು ಬರೆದಿರಬಹುದು. ಅವಳ ಎಡಗಣ್ಣಿನ ಗುಡ್ಡೆಯಲ್ಲಿ ಒಂದಿಷ್ಟು ನಿಗೂಢ ಸಂಕೇತಗಳಿವೆ. 4. 18. 22. 5. 39. 47... 13. ಎಂಬ ಸಂಖ್ಯೆಗಳ ರಾಶಿಯಿದೆ... ಮೊನಾಲಿಸಾ ಕಲಾಕೃತಿ ಸೃಷ್ಟಿಯಾಗಿ 500 ವರ್ಷಗಳೇ ಕಳೆದಿವೆ. ಆದರೆ, ಈ ಸತ್ಯ ಬಹಿರಂಗವಾಗಿರುವುದು ಈಗ ಎಂದು ವಿನ್‍ ಸೆಟಿ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ"

ಮೊನಾಲಿಸಾಳ ಕಣ್ಣುಗಳಲ್ಲಿರುವ ಅಂಕಿಸಂಖ್ಯೆ, ಸಂಕೇತಗಳು ಕಲಾವಿದನ ಮಿಸ್ಟೇಕ್‍ಗಳಲ್ಲ. ಆತ ಬೇಕಂತಲೇ, ಯಾವುದೋ ಮಹತ್ವದ ಉದ್ದೇಶಗಳನ್ನು ಮುಂದಿಟ್ಟುಕೊಂಡೇ ಮೊನಾಲಿಸಾಳ ಕಣ್ಣುಗಳಲ್ಲಿ ಸಂಕೇತಗಳನ್ನು ಬಚ್ಚಿಟ್ಟಿದ್ದಾನೆ. ಇದು ಪ್ರಾಥಮಿಕ ಹಂತದ ಸಂಶೋಧನೆ, ಇನ್ನೂ ಸಂಶೋಧನೆ ಗಂಭೀರವಾಗಬೇಕಿದೆ. ಮೊನಾಲಿಸಾಳ ಕಣ್ಣುಗಳಲ್ಲಿ ಇರುವ ಅಂಕಿ-ಸಂಖ್ಯೆಗಳು, ಸಂಕೇತಗಳು ನಿಜವಾಗಲೂ ಹೇಳುತ್ತಿರುವ ಕತೆಯಾದರೂ ಏನು?``ಡಾವಿಂಚಿಯ ಪ್ರೇಮಕಥೆಯದಾ!’’ ಇದ್ದರೂ ಇರಬಹುದು ಎಂಬ ಅನುಮಾನದಲ್ಲಿದ್ದಾರೆ ಕಲಾ ಇತಿಹಾಸತಜ್ಞರು.