ಮೋದಿ ಸಂಪುಟದಲ್ಲಿ ಪ್ರಬಲರು, ಪ್ರಭಾವಿಗಳಿಗೆ ಲಕ್: ದಲಿತರಿಗೆ ಕೊಕ್!

ಮೋದಿ ಸಂಪುಟದಲ್ಲಿ ಪ್ರಬಲರು, ಪ್ರಭಾವಿಗಳಿಗೆ ಲಕ್: ದಲಿತರಿಗೆ ಕೊಕ್!

ಕರ್ನಾಟಕದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲದಿರುವ ಕಾಲವೊಂದಿತ್ತು ಆದರೆ ಹತ್ತು ವರ್ಷಗಳ ಹಿಂದೆ ಕುಮಾರಸ್ವಾಮಿಯ ಎಡವಟ್ಟುಗಳಿಂದ ಬಿಜೆಪಿ ರಾಜ್ಯದಲ್ಲಿ ಭದ್ರ ಬುನಾದಿ ಹಾಕಿಕೊಳ್ಳುವಂತಾಯಿತು. ಅದರಲ್ಲೂ ಲೋಕಸಭೆಯ ಎಸ್.ಸಿ ಮತ್ತು ಎಸ್.ಟಿಯ ಎಲ್ಲಾ 7 ಮೀಸಲು ಕ್ಷೇತ್ರದಲ್ಲೂ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಹಂತಕ್ಕೆ ಬಿಜೆಪಿ ಬೆಳೆದಿದೆ. ಇದು ಬಿಜೆಪಿಗೆ ಆ ಕ್ಷೇತ್ರಗಳ ಮತದಾರ ಕೊಟ್ಟ ದೊಡ್ಡ ಉಡುಗೊರೆಯೇ ಸರಿ.


ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಈ ಮೀಸಲು ಕ್ಷೇತ್ರಗಳಲ್ಲಿ ಗೆದ್ದಿರುವ ಒಬ್ಬ ಸಂಸದನಿಗೂ ತಮ್ಮ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡದೆ ಇರುವುದು ನಿಜಕ್ಕೂ ಅನ್ಯಾಯ.


ರಾಜ್ಯದ ಪ್ರಬಲ ಜಾತಿಗಳಾದ ಲಿಂಗಾಯಿತ, ಒಕ್ಕಲಿಗ ಮತ್ತು ಪ್ರಭಾವಿ ಬ್ರಾಹ್ಮಣ ಸಮುದಾಯಕ್ಕೆ ತಲಾ ಒಂದು ಸ್ಥಾನ ನೀಡಲಾಗಿದೆ ಆದರೆ ದಲಿತ ಸಮುದಾಯದ ಒಬ್ಬರಿಗೂ ಮಂತ್ರಿ ಸ್ಥಾನ ನೀಡದೆ ಇರುವುದು ಆಶ್ಚರ್ಯ ಮತ್ತು ಖಂಡನೀಯ.


ಈಗಾಗಲೇ ಪ್ರಬಲ ಜಾತಿ ಮತ್ತು ನಾಯಕರಾಗಿ ಸ್ಥಾಪನೆಯಾಗಿರುವವರಿಗೇ ಸಚಿವ ಸ್ಥಾನ ನೀಡುವುದಾದರೇ ಬಲಿಷ್ಠ ಜಾತಿಗಳಿಂದ ಶೋಷಣೆಗೆ, ತುಳಿತಕ್ಕೆ ಒಳಗಾಗಿರುವ ಸಮುದಾಯಗಳ ಪಾಡೇನು? ಆ ಸಮುದಾಯಗಳು ಅಧಿಕಾರದ ಪಾಲು ಪಡೆಯಬಾರದೇ? 


ಭಾರತದಂಥ ಒಕ್ಕೂಟ ರಾಷ್ಟ್ರದಲ್ಲಿ ಪ್ರತಿಯೊಂದು ವಿಷಯವೂ ಜಾತಿ ಆಧಾರದ ಮೇಲೆ ನಡೆಯುತ್ತದೆ, ಅದರಲ್ಲೂ ರಾಜಕೀಯ, ಅಧಿಕಾರಗಳಲ್ಲಿ ಜಾತಿ ವಿಷಯ ಇಲ್ಲದೇ ಇರಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಲಿತ ಸಮುದಾಯದವನ್ನು ಬಿಜೆಪಿ ಕಡೆಗಣಿಸುತ್ತಲೇ ಇದೆ, ಬಿಜೆಪಿಯಲ್ಲಿರುವ ಕೆಲವರು ದಲಿತರಿಗೆ ಆ ಪಕ್ಷದ ಕೊಡುಗೆ ಏನು ಎಂದು ಕೇಳಿದರೆ ಸಾಕು , ರಾಷ್ಟ್ರಪತಿಗಳು ದಲಿತರಲ್ಲವೇ ಎಂಬ ಉಡಾಫೆಯ ಉತ್ತರ ನೀಡುತ್ತಾರೆ. ಆದರೆ ಆ ಪಟ್ಟ ರಬ್ಬರ್ ಸ್ಟಾಂಪ್ ಎಂದು 8 ನೇ ತರಗತಿಯಲ್ಲಿ  ರಾಜ್ಯಶಾಸ್ತ್ರ ಓದುವ ವಿದ್ಯಾರ್ಥಿಗೂ ತಿಳಿದಿದೆ ಎಂಬುದು ಇವರಿಗೆ ಗೊತ್ತಿಲ್ಲವೇ? 


ಕರ್ನಾಟಕದ ಮಟ್ಟಿಗೆ ಮಾತನಾಡುವುದಾದರೆ ಈಗ ನೀಡಿರುವ ಮಂತ್ರಿಗಿರಿ ಕೇವಲ ಮೇಲ್ಜಾತಿಗಳಿಗೆ ಮೀಸಲಾಗಿದೆಯೇ ಹೊರತು ಮೀಸಲು ಕ್ಷೇತ್ರದಲ್ಲಿ ಗೆದ್ದಿರುವವರಿಗಲ್ಲ. 


ಮಲ್ಲಿಕಾರ್ಜುನ ಖರ್ಗೆಯಂಥ ಪ್ರಮುಖ ದಲಿತ ನಾಯಕರನ್ನು ಸೋಲಿಸಿ,ಕೇಂದ್ರದಲ್ಲಿ ಆಡಳಿತ ಸರ್ಕಾರದ ವೈಪಲ್ಯಗಳ ವಿರುದ್ಧ ಗಟ್ಟಿ ದನಿ ಇಲ್ಲದ ಹಾಗೆ ಮಾಡಿರುವ ಬಿಜೆಪಿಯ ಉಮೇಶ್ ಜಾಧವ್ ರಂತಹ ಎಡಬಿಡಂಗಿಯನ್ನು ಗೆಲ್ಲಿಸಿಕೊಂಡರೂ ಅವರಿಗೂ ಸ್ಥಾನ ನೀಡಿಲ್ಲ, ಕಳೆದ ಬಾರಿ ಮೋದಿ ಸಂಪುಟದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವರಾಗಿದ್ದ ಬಿಜಾಪುರ ಮೀಸಲು ಕ್ಷೇತ್ರದ ರಮೇಶ್ ಜಿಗಜಿಣಗಿ ಈ ಬಾರಿ ಇನ್ನಷ್ಟು ಹೆಚ್ಚು ಮತಗಳೊಂದಿಗೆ ಗೆಲುವು ಸಾಧಿಸಿದ್ದರೂ ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ, ವಾಜಪೇಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಕೆಲಸ ನಿರ್ವಹಿಸಿದ್ದ, ಹಾಗೂ ಹಳೆ ಮೈಸೂರು ಪ್ರಾಂತ್ಯದಲ್ಲಿ ಸಿದ್ದರಾಮಯ್ಯನವರ ಶಕ್ತಿಯನ್ನು ಕುಂದಿಸಿ, ಬಿಜೆಪಿ ಶಕ್ತಿಯನ್ನು ಹೆಚ್ಚಿಸಿರುವ ಶ್ರೀನಿವಾಸ ಪ್ರಸಾದ್ ಗೂ ಸಚಿವ ಸ್ಥಾನ ನೀಡಿಲ್ಲ, ಪ್ರಸಾದ್ ಮಂತ್ರಿಗಿರಿಗೆ ಲಾಬಿ ಮಾಡುವುದಿಲ್ಲ ಎಂದು ಹೇಳಿರಬಹುದು, ಆದರೆ ಆ ಸ್ಥಾನವನ್ನು ಕೊಟ್ಟರೆ ಬೇಡ ಎನ್ನುವಷ್ಟು ರಾಜಕೀಯ ವೈರಾಗ್ಯ ಅವರಿಗೆ ಇಲ್ಲ.

 
ಎಸ್.ಟಿ. ಮೀಸಲಿನಲ್ಲಿ ಗೆದ್ದಿರುವ ಒಬ್ಬ ಸಂಸರಿಗಾದರೂ ಮಂತ್ರಿ ಸ್ಥಾನವನ್ನು ನೀಡುವಂತೆ ಹೈಕಮಾಂಡ್ ಮೇಲೆ ರಾಜ್ಯ ಬಿಜೆಪಿ ಒತ್ತಡ ಹೇರಬಹುದಿತ್ತು ಆದರೆ ಈ ಕೆಲಸವನ್ನು ಮಾಡದೆ ಇರುವುದರಿಂದ ಬಿಜೆಪಿ ದಲಿತ ವಿರೋಧಿ ಎಂಬ ಅದರ ವಿರೋಧಿಗಳ ಹೇಳಿಕೆಗೆ ಪುಷ್ಠಿ ನೀಡುವಂತೆ ಮಾಡಿಕೊಂಡಿದೆ.


ರಾಜ್ಯದಲ್ಲಿ ಬಿಜೆಪಿಗೆ ನಿರೀಕ್ಷಿಸಿದ ಸ್ಥಾನಕ್ಕಿಂತಲೂ ಹೆಚ್ಚು ಸ್ಥಾನವನ್ನು ಗೆದ್ದಿರುವುದು ಅಚ್ಚರಿ, ಅದರಲ್ಲೂ 7 ಏಳು ಮೀಸಲು ಕ್ಷೇತ್ರದಲ್ಲೂ ಗೆಲುವು ಸಾಧಿಸಿರುವುದು ಬಿಜೆಪಿ ಗೆ ದಲಿತ ಮತಗಳು ಕೈ ಹಿಡಿದಿದೆ ಎಂದೇ ಭಾವಿಸಲಾಗಿದೆ. ಯಡಿಯೂರಪ್ಪ ಮತ್ತು ಮೋದಿ ಮುಖವನ್ನು ನೋಡಿ ಮತ ಹಾಕಿದ್ದರೂ ಕಾಂಗ್ರೆಸ್ ಮೇಲಿನ ಕೋಪ ಮತ್ತು ಕೆಲವು ಅಭ್ಯರ್ಥಿಗಳ ವಿರುದ್ಧ ಇದ್ದ ಅಸಹನೆ ಬಿಜೆಪಿಯ ಈ ದಿಗ್ವಿಜಯಕ್ಕೆ ಕಾರಣವಾಗಿತ್ತು. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ ಆದ ನಂತರ ಮಂತ್ರಿಗಿರಿ ಯಾರ್ಯಾರಿಗೆ ಸಿಗಬಹುದು ಎಂಬ ಲೆಕ್ಕಚಾರ ಪ್ರಾರಂಭವಾಗಿತ್ತು, ಅದರಲ್ಲಿ ಈ ಮೀಸಲು ಕ್ಷೇತ್ರಗಳ ಸಂಸದರುಗಳಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗಬಹುದು ಎಂಬ ಭರವಸೆ ಆ ಸಮುದಾಯದ ಜನರಲ್ಲಿ ಮೂಡಿತ್ತು. 


ಆದರೆ ರಾಜ್ಯದ ಪಾಲಿಗೆ ಬಂದಿರುವ 4 ಮಂತ್ರಿ ಸ್ಥಾನಗಳಲ್ಲಿ ಒಂದು ರಾಜ್ಯ ಸಭಾ ಸದಸ್ಯರಿಗೆ, ಇನ್ನುಳಿದ ಮೂರು ಸ್ಥಾನಗಳು ಪ್ರಬಲ ಜಾತಿಗಳ ನಾಯಕರಗಳಿಗೆ ಮೀಸಲಾಗಿ ದಲಿತ ಸಮುದಾಯದ ಒಬ್ಬರಿಗೂ ಸಚಿವ ಸ್ಥಾನವನ್ನು ನೀಡದೆ ಆ ಸಮುದಾಯಕ್ಕೆ ಬಿಜೆಪಿ ದ್ರೋಹ ಬಗೆದಿದೆ ಎಂದೇ ಹೇಳಬಹುದು.


ಮುಂದೆ ರಾಜ್ಯ ಸಚಿವ ಸ್ಥಾನವನ್ನು ಈ ಕ್ಷೇತ್ರಗಳ ಯಾರಿಗಾದಾರೂ ನೀಡಿದರೂ ಅದು ಸಂಪುಟ ದರ್ಜೆಯಷ್ಟು ಪ್ರಾಮುಖ್ಯ ಪಡೆಯುವುದಿಲ್ಲ. ಅದು ಸರಿಯೂ ಅಲ್ಲ. 


ಇದರ ಬಗ್ಗೆ ಕಾಂಗ್ರೆಸ್ ನ ಯಾವೊಬ್ಬ ನಾಯಕನೂ ತುಟಿ ಬಿಚ್ಚದೆ ಇರುವುದು ಅವರ ಉಡಾಫೆಗೆ ಮತ್ತೊಂದು ಕೈಗನ್ನಡಿ, ಬಿಜೆಪಿಯಲ್ಲಿರುವ ದಲಿತ ನಾಯಕರು ಸಹ ಈ ವಿಷಯದ ಬಗ್ಗೆ, ತಮ್ಮ ಸ್ಥಾನಗಳಿಗೆ ಕುತ್ತು ಬರಬಹುದು ಎಂಬ ಭಯದಿಂದ ತುಟಿ ಬಿಚ್ಚುತ್ತಿಲ್ಲ ಎನಿಸುತ್ತದೆ. 

ಹೋಗಲಿ ಗೆದ್ದ ಸಂಸದರಾದರೂ ದಲಿತ ಕೋಟದಲ್ಲಿ ನಮಗೊಂದು ಸಚಿವ ಸ್ಥಾನ ನೀಡಿ ಅನ್ನುವಷ್ಟು ಅಸಹಾಯಕತೆ ಉಂಟಾಗಿದೆಯೇ?                                                                                                                                                                                                                                                                           - ಪ್ರದೀಪ್ ಚಿಕ್ಕಾಟಿ