ಶಾಸಕರು ರೇಸಾರ್ಟನಲ್ಲಿ.......ಅಧಿಕಾರಿಗಳು ಎಸಿ ರೂಂನಲ್ಲಿ....ಸರ್ಕಾರ ಕೋಮಾದಲ್ಲಿ.... ಹಿಂಗಾದ್ರ ಹೆಂಗ್ಯ...!

ಶಾಸಕರು ರೇಸಾರ್ಟನಲ್ಲಿ.......ಅಧಿಕಾರಿಗಳು ಎಸಿ ರೂಂನಲ್ಲಿ....ಸರ್ಕಾರ ಕೋಮಾದಲ್ಲಿ.... ಹಿಂಗಾದ್ರ ಹೆಂಗ್ಯ...!

  ಎಲ್ಲಾ ಮಾಯಾ... ಇಲ್ಲಿ ಎಲ್ಲಾ ಮಾಯಾ...
  ನಾಳೆ ನೀವು ಮಾಯಾ... ನಾಳೆ ನಾವು ಮಾಯಾ
  ವಿಧಾನಸೌಧವು ಮಾಯಾ! ಇಲ್ಲಿ ಎಲ್ಲಾ ಮಾಯಾ
  ಪರಂಗಿಯವರು  ಮತ್ತೆ ಬಂದರು 
  ಜನರ ಪಾಲಿಗೆ ಕಟುಕರಾದರು...
  ಇಲ್ಲಿ ಎಲ್ಲಾ ಮಾಯಾ.. ನಾಳೆ ನಾವು ಮಾಯಾ... ನೀವು ಮಾಯಾ....

ಲೇ...ಲೇ.. ಬಸ್ಯಾ ಇದೇನ್ಲೇ ಯಾರಲೇ ಈ "ಮಾಯಾ"! ಅಕಿನ್ಯಾಕ ಹಿಂಗ್ ಹಾಡಿನ್ಯಾಗ ಬೆನ್ನತ್ತೀ?. "ಈ ಮಾಯಾ ಯಾಕ್ ಬಂದ್ಲೂ, ಯಾವಗ್ ಬಂದ್ಲೂ, ಏನ್ ಕತಿ ಇಕೀದು"....?

ಕಾಕಾರ..... "ಮಾಯಾ ಅಂದ್ರ ನಿಮ್ಗ ಕಣ್ಣು-ಕಿವಿ ಎಷ್ಟ  ಅಗ್ಲ ಆಗ್ಯಾವ್ರೀ"..! "ಹುಣ್ಸಿ ಮರಾ ಮುಪ್ಪಾದ್ರು ಅದ್ರ ಹುಳಿ ಮುಪ್ಪಲ್ಲಾ ಅನ್ನೋದನ್ನ ನೀವು ಖರೆಮಾಡಾಕ ಹೊಂಟ್‍ಂಗೈತಿ."..?. ಏನ್ ನಿಮ್ಮ ಹಕಿಕತ್ತು?.

ಅಲ್ಲಲೇ "ಏಳರ್ಯಾಗ ಹುಟ್ಟಿದವ್ನ್"!, "ಮಾಯಾ... ಮಾಯಾ.. ಅಂತ್ ಮಾಯಾಳ ಹೆಸ್ರ ಜಪಾ ಮಾಡ್ಯಾಕ ಹತ್ತಿದಾವ್ ನೀ.., ಈಗ ನೋಡಿದ್ರ ನನ್ನ ಮ್ಯಾಗ ಹಾಕಾಕ್ ಹತ್ತಿಯೇನು, ಏನ್ ನಿನ್ನ ಹಕಿಕತ್ತು"?.

ಏನ್ರೀ ಕಾಕಾರ ನಾನು ಹೋರಾಟದ ಪದಾನ ಗುನ್ಗಾಕ ಹತ್ತಿದ್ದೆ, "ಅದು ಮಾಯಾಳ ಹೆಸ್ರರಲ್ರೀ. ಮಾಯಾ ಆಗೋದೂ, ಅಂದ್ರ ಮಟಾ-ಮಂತ್ರ ಅಂತಾರಲ್ಲ ಅದು"..! "ರಾಜ್ಯದಾಗ ನಡದೈತಲ್ರೀ ಕಣ್ಣಾ -ಮುಚ್ಚಾಲೆ ಆಟಾ, ಅದ್ರ ಬಗ್ಗೆ ನಾ  ಪದಾ ಅನ್ನಾಕ ಹತ್ತಿದ್ದೆ.....ಅದ್ನ ನೀವು ತಪ್ಪಾಗಿ ತಿಳ್ಕಂಡ್ರ್ ನಾ ಏನ್ ಮಾಡ್ಲೀ"?. 

ಲೇ.. ಲೇ.. ನೀನೂ ನಿನ್ನ ಹಾಡೋ? ನನ್ಗಂತೂ ಒಂದು ಗೊತ್ತಾಗೋದಿಲ್ಲ!. ನಿ ಬಿಡ್ಸಿ ಹೇಳಿದ್ರ ನನ್ಗ ತಿಳಿತೈತಿ!.

ಇದ್ರಾಗ ಬಿಡ್ಸಿ ಹೇಳೋದೇನೈತ್ರೀ?, ಎಲ್ಲಾರಿಗೂ ಗೊತ್ತಿರೋದ ಐತಿ...?.

ನೀ ಹೇಳ್ಯಾಕ ಹತ್ತಿದ್ದು, ನಮ್ಮ ರಾಜ್ಯದ ರಾಜಕೀಯಾದ ವಿಷ್ಯಾ ಹೌದಲ್ಲ....?

ಹೌದ್ರೀ ಹೌದೂ...., ನಿಮ್ಮ ಮಾತು ನೂರಕ್ಕ ಮನ್ನೂರು ಕರೆ!. "ಮೂರು ಪಕ್ಷದ ಶಾಸಕರು ರೇಸಾರ್ಟನ್ಯಾಗ ಸೇರ್ಕೋಂಡು ಮಜಾ ಮಾಡಾಕ ಹತ್ಯಾರ"!. "ಅಧಿಕಾರಿಗಳೂ ಏಸಿ ರೂಂನ್ಯಾಗ ಕುತಗಂಡಾರ", "ಸರ್ಕಾರ ಕೋಮಾದಾಗ ಐತಿ"....!, "ಜನ್ರು ಜನಪ್ರತಿನಿಧಿಗಳ್ನ ಹುಡ್ಕಿಕೊಂಡು ವಿಧಾನಸೌಧಕ್ಕ, ಶಾಸಕರ ಭವನಕ್ಕ  ಹೋದ್ರ ಅಲ್ಲೆ ಎಂಎಲ್‍ಎಗಳು ಸಿಗವಲ್ರು...?.  ಮಂತ್ರಿಗಳು ಸಿಗವಲ್ರೂ"..?. 

ಅಲ್ಲಲೇ, ಬಸ್ಯಾ... ಪ್ರಶ್ನೇನೂ ನೀನ ಕೇಳ್ತಿ?. ಉತ್ರಾನೂ ನೀನ ಹೇಳ್ತಿ, ಹಿಂಗಾದ್ರ ಹೆಂಗ್ಯ್.! "ನಿಮ್ಮ ಯಡೆಯೂರ್ಸ್ ಹೊಸ ಅಂಗಿ-ಚೊಣ್ಣಾ ಹೊಲ್ಸಿಗೊಂಡು ಸಿಎಂ ಕುರ್ಚೆಮ್ಯಾಗ್ ಕುಂಡ್ರಾಕ ಚಟಪಡ್ಸಾಕ ಹತ್ತೇತಿ"!, "ನಿಗಿ ನಿಗಿ ಕಂಡದಂಗ್ ಇರ್ತಿದ್ದ ಅದ್ರ ಮುಖ ಈಗ ನೋಡಿದ್ರ ಸಿಎಂ ಕುರ್ಚೆಕ್ ಮೂರಗೇಣ ಹತ್ರ ಅಂತ್ ಲಕಾ ಲಕಾ ಹೋಳ್ಯಾಕ ಹತ್ತೇತಿ"!.  

"ಯಡೆಯೂರಪ್ಪ ಅಂದ್ರ ಏನಂತ್ ತಿಳ್ಕಂಡಿರೀ"? ಕಾಕಾ. ಹಳೇ ಹುಲಿ ಅದು, "ಹಂಗ್ ಗುಟುರ್ ಹಾಕಿದ್ರ ವಿಧಾನಸೌಧಾನ ಅಲ್ಲಾಡತೈತಿ?". 

ಹೌದ್ಪಾ... "ನಿಮ್ಮ ಯಡೆಯೂರ್ಸ್ ಹಿಂದ್ ಮೂರುವರಿ ವರ್ಷ ಮುಖ್ಯಮಂತ್ರಿಯಾಗಿದ್ದಾಗ ಏನೇನ್ ಕಡ್ದ್ ಕಟ್ಟಿಹಾಕಿತ್ತು ಅಂತ್ ಜಗತ್ತಿಗೆ ಗೊತ್ತೈತಿ"?. ಹೆಚ್ಗಿ ಕೊಚೆಗ್ಯಾಬ್ಯಾಡ.  

ನೋಡ್ಪಾ ಬಸಣ್ಣ "ನಿಮ್ಮ ದೇವ್ರ ದಯಾದಿಂದ ಯಡೆಯೂರ್ಸ್ ಮುಖ್ಯಮಂತ್ರಿ ಆಗಾಕ ಹತ್ತಿಲ್ಲ"!, "ಕಾಂಗ್ರೆಸ್ಸು-ಜೆಡಿಎಸ್ ಪಕ್ಷದ ಮುಖಂಡರ ಮ್ಯಾಲ್, ಕುಮಾರಸ್ವಾಮಿ, ರೇವಣ್ಣನ ಮ್ಯಾಲ್ ಸೆಟಗೊಂಡು ರಾಜೀನಾಮೆ ಕೊಟ್ಟಾರಲ್ಲ ಎಮ್‍ಎಲ್‍ಎಗಳೂ, ಅವ್ರ ದೊಡ್ಡತನದಿಂದಾನೋ, ದುಡ್ಡ ತನದಿಂದಾನೋ, ದಡ್ಡತನದಿಂದಾನೋ ಒಟ್ನಾಗ್ ಸಿಎಂ ಕುರ್ಚೆಕ ಹತ್ರ ಬಂದ್ ನಿಂತೈತಿ".  "ಅವ್ರ ಪೋಟೋಗಳನ್ನ ನಿಮ್ಮ ಯಡೆಯೂರ್ಸ್  ಮನ್ಯಾಗ ಇಟ್ಟು ದಿನಾನು ಉದಿನಕಡ್ಡಿ ಹಚ್ಚಬೇಕು? ಹೌದಲ್ಲ..?. ಹಂಗ್ಯಾಕ ಅಂತಿರೀ, "ಉದಿನಕಡ್ಡಿ ಹಚ್ಚಾಕ ಅವ್ರೇನ್ ಹೋಗೇ ಬಿಟ್ಟರಂಗ್ ಆಡ್ತಿರಲ್ಲ"....?

ಲೇ ...ಲೇ  ನಿಮ್ಮ "ಯಡೆಯೂರ್ಸ್ ಮುಖ್ಯಮಂತ್ರಿ ಆಗ್ಯಾಕ ಅವ್ರು ತಮ್ಮ ರಾಜಕೀಯ ಜೀವ್ನಾನ ತ್ಯಾಗಾಮಾಡ್ಯಾರೋ ತಮ್ಮಾ"!. ಅವ್ರು "ಎಂಎಲ್‍ಎ ಆಗೋದ್ಕ ಎಷ್ಟ ಕಷ್ಟಪಾಟ್ಟಾರ"?, "ಎಷ್ಟ ಜನ್ರ ಕೈಕಾಲ ಹಿಡ್ದಾರ"?, "ಎಷ್ಟ ದೇವ್ರ ಗುಡಿಗೆ ಕೈಮುಗ್ದಾರ್"!, "ಅಡ್ಡ ಬಿದ್ದಾರ್, ಉದ್ದಬಿದ್ದಾರ್", "ಕ್ಯಾವಿ ಮಂದಿ ಕಾಲ ಹಿಡ್ದಾರ್, ಒಳೊಳ್ಗ ರೊಕ್ಕಾ ಸುರದಾರ್." ತಮ್ಮ ಜಾತಿ ಮಂದಿನ್ ಹೆಂಗ್ಯ ಎತ್ತಿಕಟ್ಟೀದ್ರೂ, ಬ್ಯಾರೇ ಜಾತಿಯರ್ನ್ ಹೆಂಗ್ಯ ಒಡದ್ರು"..!. ಅಷ್ಟಾದ್ರೂ ಇವ್ರ ಆರ್ಸಿ ಬಂದದ್ದೂ ಎಷ್ಟ ಹೋಟಿನ್ಯಾಗ ಅಂತೀ!. "ಸಾವಿರ ಹೋಟಿನ್ಯಾಗ ಆರ್ಸಿ ಬಂದಾರ್"!." ಆರ್ಸಿ ಬಂದ್ ವಂದವರ್ಷದ ಮ್ಯಾಲ್ ಎರ್ಡತಿಂಗ್ಳಾಗೇತಿ, ಅಷ್ಟ್ರಾಗ್ ಈಗ ರಾಜೀನಾಮೆ ಕೊಟ್ಯಾರ್. ಮುಂದ್ ಇವ್ರು ಎಂಎಲ್‍ಎ ಆಕ್ಕಾರಂತ್ ಗ್ಯಾರಂಟಿ ಇಲ್ಲ..?.  "ಅತ್ಲಾಗ್ ಕೈನೂ ಹೋತು, ಇತ್ಲಾಗ್ ಕಮಲಾನು ಹೋತೂ ಅನ್ನೋಸ್ಥಿತಿಗೆ ಬಂದ್ರು ಆಶ್ಚರ್ಯ ಪಡಬ್ಯಾಡ"!. 

"ಕೈ-ಕಮಲಾ ಹೋದ್ರ ಏನಾತ್ರೀ... ಸಾಯೋಮಟಾ ಕುತಗಂಡ್ ತಿಂದ್ರು ಕರಗದಷ್ಟ ಐತಿ ಇವ್ರಹತ್ರಾ..?. "ಕೈಗೆ ಇವ್ರು ಕೈಕೊಟ್ಟಿರೋದ್ರಿಂದಾ ಕೈಪಕ್ಷದವ್ರು ಇವ್ರನ ಕೈಬಿಡಬಹುದು, ಆದ್ರ ಕಮಲಪಕ್ಷದವ್ರು ಬಿಡೋಂಗಿಲ"!್ಲ. ಯಾಕಂದ್ರ "6ಬಾರಿ ಅಧಿಕಾರ ಹಿಡ್ಕೊಳ್ಳಾಕ ಹೋಗಿ ಕೈಸುಟಗಂಡಿದ್ದ ಯಡೆಯೂರ್ಸ್ ಆಂಡ್ ಕಂಪನಿಗೆ ಬೆಳ್ಳಿ ತಟ್ಯಾಗ ಅಧಿಕಾರ ಸಿಗಾಕ ಕಾರ್ಣ ಇವ್ರಾಗ್ಯಾರ, ಅದ್ಕ ಇವ್ರನ ಕಮಲಕ್ಷದವ್ರು ಕೈಬಿಡೋದಿಲ್ಲ".

ಅಲ್ಲೋ ....., "ಕಮಲಪಕ್ಷದಾಗ್ ಮಂತ್ರಿ ಆಗೋರ ಪಾಳೆ ಬಾಳಾ ದೊಡ್ಡದೈತಿ"?, "10 ಮಂತ್ರಿಗಳನ್ನು ಹೊರ್ಗಿಂದಾ ಬಂದೋರ್ನ ಮಾಡ್ತಾರ್"  , "ನನ್ಗು ಮಂತ್ರಿ ಪಟ್ಟಬೇಕು ಅಂತ್ ಕಮಲಪಕ್ಷದಾಗಿನ ಎಂಎಲ್‍ಎಗಳು ಸೆಟಗಳ್ಳಾಕ ಹತ್ತಿದ್ರ ಅವ್ರನ್ ಹೆಂಗ್ಯ ಸಮಾದಾನ ಮಾಡ್ತಾರ ಇವ್ರು. ಆವಾಗಾದ್ರು ಬೆಂಕಿ ಹತ್ತೋದ".....!

"ಇಲ್ನೋಡು ಸರ್ಕಾರಕ್ಕ ಆರ್ ತಿಂಗ್ಳಾ ತುಂಬಮಟಾ ಏನೂ ತೊಂದ್ರಿ ಆಗೋದಿಲ್ಲ"!. "ಆರತಿಂಗ್ಳ ಒಳ್ಗ ಖಾಲಿಯಾಗಿರೋ ಎಮ್‍ಎಲ್‍ಎ ಸೀಟ್ಗೆ ಎಲೆಕ್ಷನ್ ಮಾಡಾಕ ಬೇಕು....ಅವಾಗ ಬ್ಯಾನಿ ಸುರುವಾಕ್ಕಾವು"....! "ಈ ಹಿಂದ್ ನಡ್ದ ಚುನಾವಣೆ ಒಳ್ಗ  ಇವ್ರು ಬಿಜೆಪಿಯವ್ರ್ನ ವಿರೋಧ ಕಟಿಗೊಂಡು ಇಲೇಕ್ಷನ್ ಮಾಡಿ ವಿಧಾನಸೌಧದ ಮೆಟ್ಲ ಹತ್ತಿದ್ರ್"..... "ಈಗ ನೋಡಿದ್ರ ಇವ್ರು ಬಿಜೆಪಿಯವ್ರ ಬಾಗಿಲದೋಳ್ಗ ಕೈಕಟಿಗೊಂಡು ನಿಲ್ಲಂತ ಪರಿಸ್ಥಿತಿ ಬಂದೈತಿ!". "ನಾಳೇ ಬರೋ ಉಪ ಚುನಾವಣೆ ಒಳ್ಗ ಬಿಜೆಪಿ ಮುಖಂಡ್ರು, ಕಾರ್ಯಕರ್ತರು ಇವ್ರ ಆರ್ಸಿತರಬೇಕಲ್ಲ...!. "ಈಗ ಒಮ್ಮೇಕ ಬಿಜೆಪಿಗೆ ಬಂದು ಚುನಾವಣೆಗೆ ನಿತ್ಗೊಂಡು ನನ್ಗ ಹೋಟಹಾಕ್ರೀ, ಹೋಟಹಾಕ್ಸರಿ ಅಂದ್ರ ಹತ್ತಾರ ವರ್ಷದಿಂದ ಪಕ್ಷಕ್ಕ ಕಲ್ಲ ಹೊತ್ತೋರೂ  ಗತಿ ಹೆಂಗ್ಯ"?. "ಪಾಪಾ ಮೂಲ ಪಕ್ಷ ಕಟ್ಟಿದವ್ರಿಗೆ ಹೆಂಗ್ಯ ಆಗಬ್ಯಾಡ್"!. ಹೊಸ್ದಾಗಿ ಪಕ್ಷಕ್ ಬಂದೋರು, ಪಕ್ಷಕ್ಕ್ ಮೂಲ ಆಗೋದಲ್ದ್ ಮೂಲ ಪಕ್ಷಾ ಕಟ್ಟದವ್ರನ್ ಮೂಲಿಗೆ ಸೇರ್ಸಿಬಿಡ್ತಾರ್...?.

ಅಬಾಬಾ ಎಷ್ಟ ವಿಷ್ಯಾ ತಿಳ್ಕಂಡಿರೀ ಕಾಕಾ....! ನೀವು ಇಲ್ಲಿರಬಾರ್ದಿತ್ತೂ.?

ಅಂದ್ರ "ಚಂದ್ರಲೋಕಕ್ಕ ಹೋಗಬೇಕಿತ್ತು ಅಂತಿಯೇನೂ"..? "ಲೇ ..ಲೇ. ನಾ... ಇನ್ನು ನಾಕ ಒಪ್ಪತ್ತೂ ಇರಬೇಕಂತನೀ. ನೀ ನೋಡಿದ್ರ ಲಗೂನ ನನ್ನ ಕಳ್ಸಬೇಕಂತಿಯಲ್ಲೋ"...!

ಹಂಗ್ಯಾಕಂತಿರೀ ಕಾಕಾ...,  ನೀವು ಚಂದ್ರಲೋಕಕ್ಕ ಹೋದ್ರ ನನ್ಗ ಸಿಗದಾದ್ರು ಏನು?. ಮಾತಿಗೆ ಹಂಗ್ ಅಂದೆ.....ಅಲ್ರೀ ಕಾಕಾ ನೀವು ಹಿರೇರೂ, ಮುಂದ್ ಏನಾಕೈತಿ ಅಂತಿರೀ...?

ಇಷ್ಟತನ್ಕಾ ಕತಿ ಹೇಳಿದ್ನೇನು ಮಗ್ನ!, ಎಲ್ಲಾ ಬಿಡ್ಸೆ ಹೇಳೇನಲ್ಲಲೇ, ಇವೊಂದೋಳ್ಳೆ ಕತಿಯಾತು. ಬಿಡ್ಸಿ ಹೇಳ್ರೀ ಅಂದ್ರ ಅರ್ಧಾ ಅಷ್ಟ ಹೇಳಿರೀ.... "ರಾಜೀನಾಮೆ ಕೊಟ್ಟಹೋಗ್ಯಾರಲ್ಲ ಅವ್ರೋಳ್ಗ  ಬಿಜೆಪಿ ಸರ್ಕಾರದಾಗ ಎಷ್ಟ ಮಂದಿಗೆ ಗೂಟದಕಾರು ಸಿಗ್ತಾವು"..? "ಎಷ್ಟಮಂದಿಗೆ ಗೂಟ ಲೆಸ್ ಕಾರ ಸಿಗ್ತಾವು" ಅನ್ನೋದ ಹೇಳಿಲ್ಲಾ....!

ಅದೇಲ್ಲಾ ಟಾಪ್ ಸಿಕ್ರೇಟೋ ತಮ್ಮಾ..... ನನ್ಗ ಬಂದ್ ಮಾಹಿತಿ ಪ್ರಕಾರ, "ಈ ರಾಜೀನಾಮೆ ಕೊಟ್ಟಿರೋ ಒಂದುವರಿ ಡಜನ್ ಮಂದಿ ಒಳ್ಗ 10ಮಂದಿಗೆ ಗೂಟದ ಕಾರು ಸಿಗ್ತಾವೇನ್ಪಾ"....!. "ಆರ್ ತಿಂಗಳಂತು ಇವ್ರು ಉರುಣಗಿ, ಮೆರವಣ್ಗಿಗೆ ಏನು ತೊಂದ್ರಿ ಇಲ್ಲಾ?". ಮುಂದ "ಇವ್ರು ಆರ್ಸಿ ಬಂದ್ರ ಎಲ್ಲಾ ನಿಟ್ಟಗ ಇರತೈತಿ ಒಂದ್ ವೇಳ್ಯಾ ಸೋತ್ರೂ ಅಂದ್ರ ಇವ್ರ ಕತಿ ಮುಗ್ದಂಗ್". "ಅಷ್ರಾಗ ಬಿಜೆಪಿ ಸರ್ಕಾರದಾಗೂ ಒಂದ ನಮೂನಿ ಬ್ಯಾನಿ ಸುರವಾಗಿಬಿಡತಾವು, ಅವಾಗ ಇವ್ರ ಪಾಡೂ ಪುರಿಸಿದ್ದೇಶ್ವರನ ಬಲ್ಲ.... 

ಆತು ಬೀಡ್ರೀ, "ಇನ್ನು ಗುರುವಾರ ಮಟಾ ಟೈಮೈತಿ, ಅಲ್ಲಿಮಟಾ ಏನಾದ್ರು ಮೈಲಾರಲಿಂಗನ ಪವಾಡಾದ್ರ  ಈಜಂಟಿ ಸರ್ಕಾರ ಬದಕತೈತಿ ಇಲ್ಲಾಂದ್ರ ನಿಗರಿಕೊಂಡು ಹೊಕ್ಕೈತಿ.." ಯಾಕೋ ಗುರುವಾರ ಅನ್ನಾಕ ಹತ್ತೀ.... 

ಹೌದ್ರೀ "ನಮ್ಮ ಸ್ಪೀಕರ್ ಸಾಹೇಬ್ರು ಬಹುಮತಾ ತೋರ್ಸಾಕ ಗುರುವಾರ ವೇಳ್ಯಾ ಪಿಕ್ಸ್ ಮಾಡ್ಯಾರ್", ಅವತ್ತ ಈಮೈತ್ರಿ ಸರ್ಕಾರಕ್ಕ ಬಹುಮತ್ ಐತಿ ಅನ್ನೋದನ್ನ ಕುಮಾರಸ್ವಾಮಿ, ಸಿದ್ದ್ರಾಮಣ್ಣ ಸಾಬೀತ ಪಡ್ಸಬೇಕು". "ಸಾಬೀತಾಗಲಿಲ್ಲಾಂದ್ರ ಸರ್ಕಾರ ಸತ್ತಹೊಕ್ಕೈತಿ. ಮುಂದ್ ಹೊಸಾ ಸರ್ಕಾರ ಬರೋಮಟಾ ರಾಜ್ಯದ ಆಡಳಿತಕ್ಕ ಗರ ಬಡೆದಂತೂ ಕಾಯಂ.  ಅಷ್ಟ್ರಾಗ ಇನ್ನೂ ಏನೇನೂ ಪವಾಡಾಕ್ಕಾವೋ ಏನೋ ಒಂದು ಗೊತ್ತಾಗವಲ್ದು!"

"ಸುಪ್ರೀಂ ಕೋರ್ಟ ತೀರ್ಪು ಕೊಟ್ಟೈತಲ್ಲೋ, ಇನ್ನೇಲ್ಲಿ ಪವಾಡ ತರ್ತೀತಿ"....! "ಈ ತೀರ್ಪಿನಿಂದಾಗಿ ಸ್ಪೀಕರ ರಮೇಶ್ ಕುಮಾರ್ ಗ ಏನು ಮಾಡಾಕ ಬರದಂಗ್ ಕಮಲದೊಳ್ಗ ಐಕ್ಯ ಆಗೀರೋ ಶಾಸಕರ ಗೆದ್ದಬಿಟ್ಟಾರ"!. 

ಹಂಗಂತೀರಿ, "ಗುರುವಾರ ಕುಮಾರಣ್ಣ ಖುರ್ಚೆ ಕಾಲಿ ಮಾಡೋದ ನಿಕ್ಕಿ ಅಂದಂಗಾತು"..?

ಹೌದೋ , "ನಿಮ್ಮ ಕುಮಾರಣ್ಣ ಅವಿಶ್ವಾಸಕ್ಕೂ ಮೊದ್ಲ ಸಿಎಂ ಸ್ಥಾನಕ್ಕ ರಾಜೀನಾಮೆ ಕೊಡ್ತಾರೋ, ಅವಿಶ್ವಾಸ ಆದನಂತ್ರ ರಾಜೀನಾಮೆ ಕೊಡ್ತಾರೋ ಕಾಯಬೇಕು"?. 

ಆತು ಬಿಡ್ಪಾ ಅಂತು "ನಿಮ್ಮ ಯಡೆಯೂರ್ಸ್‍ಗ ಮತ್ತ ಕೆಲವು ಅತೃಪ್ತ ಆತ್ಮಗಳಿಗೆ ಒಟ್ಟಿನ್ಯಾಗ ಈ ತೀರ್ಪಿನಿಂದ ಅವ್ರ ಆತ್ಮಕ್ಕ ಶಾಂತಿ ಸಿಗತೈತಲ್ಲ!, ಅಷ್ಟ ಸಾಕ ಬಿಡೂ".. ಎನ್ನುತ್ತ ಇಬ್ಬರು ಮಾತಿಗೆ ಪೂರ್ಣ ವಿರಾಮ ನೀಡಿದರು.