ಕಟ್ಟಡ ನಿರ್ಮಾಣ ಕಂಪನಿಗಳ ಖಜಾನೆ ತುಂಬುತ್ತಿರುವ ಕೆ.ಎಚ್.ಬಿ. ಅಧಿಕಾರಿಗಳು : ಸರ್ಕಾರಿ ಕಾಲೇಜು ಕಟ್ಟಡ ಕಾಮಗಾರಿಯಲ್ಲೂ ಭಾರೀ ಪಾಲು

ಸರ್ಕಾರಿ ಕಾಲೇಜುಗಳ ಕಟ್ಟಡ ಕಾಮಗಾರಿಗೆ ಬಿಡುಗಡೆಯಾಗಿರುವ ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ(ರೂಸಾ)ದ ಅನುದಾನವನ್ನು ಕಟ್ಟಡ ನಿರ್ಮಾಣ ಕಂಪನಿಗಳ ಖಜಾನೆಗೆ ತುಂಬಿಸುವ ಕೆಲಸವನ್ನು ಕೆ ಎಚ್ ಬಿ ಅಧಿಕಾರಿಗಳು ‘ನಿಷ್ಠೆ’ಯಿಂದ ಮಾಡುತ್ತಿದ್ದಾರೆ.

ಕಟ್ಟಡ ನಿರ್ಮಾಣ ಕಂಪನಿಗಳ ಖಜಾನೆ ತುಂಬುತ್ತಿರುವ ಕೆ.ಎಚ್.ಬಿ. ಅಧಿಕಾರಿಗಳು : ಸರ್ಕಾರಿ ಕಾಲೇಜು ಕಟ್ಟಡ ಕಾಮಗಾರಿಯಲ್ಲೂ ಭಾರೀ ಪಾಲು

ರಾಷ್ಟ್ರೀಯ ಉಚ್ಛತರ್‌ ಶಿಕ್ಷಾ ಅಭಿಯಾನ್‌(ರೂಸಾ) ಅನುದಾನದಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ಕಾಮಗಾರಿಗೆ ಕರೆದಿದ್ದ ಟೆಂಡರ್‌ನಲ್ಲಿ ಭಾರೀ ಅಕ್ರಮ ನಡೆದಿದೆ. ನಿರ್ಮಾಣ ಕಂಪನಿಗಳು ನಮೂದಿಸಿರುವ ಮೊತ್ತವು ಟೆಂಡರ್‌ ಗೆ ನಿಗದಿಪಡಿಸಿದ್ದ ಕನಿಷ್ಠ ಮೊತ್ತ ಮತ್ತು ಚಾಲ್ತಿ ದರಕ್ಕಿಂತಲೂ ಹೆಚ್ಚಳವಾಗಿದ್ದರೂ ಅದನ್ನು ಲೆಕ್ಕಿಸದೇ ಕರ್ನಾಟಕ ಗೃಹ ಮಂಡಳಿ ಒಪ್ಪಿಗೆ ನೀಡಿರುವುದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಕರುಣಿಸಿರುವ ಪ್ರಕರಣದಲ್ಲಿ ಮಂಡಳಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ.!

ಪ್ರಸ್ತುತ ಚಾಲ್ತಿಯಲ್ಲಿರುವ 2018-19ನೇ ಸಾಲಿನ ಲೋಕೋಪಯೋಗಿ ಇಲಾಖೆಯ ದರಪಟ್ಟಿಗೆ ಹೋಲಿಸಿದಾಗ ಟೆಂಡರ್‌ಗಿಟ್ಟ ಮೊತ್ತವೂ ಶೇಕಡವಾರು 10ರಿಂದ 15ಕ್ಕಿಂತಲೂ ಹೆಚ್ಚಿಗೆ ಇರುವುದು ಗೊತ್ತಾಗಿದೆ.  ಬಿಡ್‌ ಮೊತ್ತ ಹೆಚ್ಚಿಸಿರುವ ಗುತ್ತಿಗೆದಾರರೊಂದಿಗೆ ನೆಪ ಮಾತ್ರಕ್ಕೆ ದರ ಸಂಧಾನ ಮಾಡಿರುವ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು, ಕಡೆಗೆ ಗುತ್ತಿಗೆದಾರರು ನಮೂದಿಸಿರುವ ದರವನ್ನೇ ಒಪ್ಪಿ ಕಾಲೇಜು ಶಿಕ್ಷಣ ಇಲಾಖೆಯ ಅನುಮೋದನೆಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳು 'ಡೆಕ್ಕನ್‌'ನ್ಯೂಸ್‌ಗೆ ಲಭ್ಯವಾಗಿವೆ.

ರೂಸಾ ಯೋಜನೆಯಡಿಯಲ್ಲಿ 2015-16ನೇ ಸಾಲಿಗೆ ರಾಜ್ಯದ ಒಟ್ಟು 21 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಸಲು ಕರ್ನಾಟಕ ಗೃಹ ಮಂಡಳಿ 2019ರ ಫೆಬ್ರುವರಿ, ಜೂನ್‌, ಜುಲೈನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಿತ್ತು. ಟೆಂಡರ್‌ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಕರ್ನಾಟಕ ಗೃಹ ಮಂಡಳಿ, 2019ರ ಸೆಪ್ಟಂಬರ್‌, ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಆರ್ಥಿಕ ಬಿಡ್‌ನಲ್ಲಿ ಯಶಸ್ವಿಯಾಗಿರುವ ನಿರ್ಮಾಣ ಕಂಪನಿಗಳ ಪಟ್ಟಿ ಮಾಡಿತ್ತು. ಇದೀಗ ನಿರ್ಮಾಣ ಕಂಪನಿಗಳಿಗೆ ಗುತ್ತಿಗೆ ನೀಡಲು  ಅನುಮತಿ ಕೋರಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದೆ.

ಆನೇಕಲ್‌, ತೀರ್ಥಹಳ್ಳಿ, ಹೊಸಕೋಟೆ, ಹಾವೇರಿಯ ಅಕ್ಕಿಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸಿದ್ಧಿ ಕನ್ಸ್‌ಟ್ರಕ್ಷನ್ಸ್‌, ಶಿವ ಎಂಟರ್‌ಪ್ರೈಸೆಸ್‌, ಎಲ್‌ಟಿಜಿ ಇನ್ಪ್ರಾಸ್ಟಕ್ಚರ್ಸ್‌ , ಶ್ರೀ ಬಿಲ್ಡರ್ಸ್‌, ಎಚ್‌ ಆರ್‌ ರವಿಕುಮಾರ್‌ ಕಟ್ಟಡ ನಿರ್ಮಾಣ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದವು.

ಟೆಂಡರ್‌ನಲ್ಲಿ ಭಾಗವಹಿಸಿದ್ದ ಗುತ್ತಿಗೆದಾರರ ಆರ್ಥಿಕ ಬಿಡ್‌ನ್ನು 2019ರ ಜುಲೈ, ಸೆಪ್ಟಂಬರ್‌ನಲ್ಲಿ ಕರ್ನಾಟಕ ಗೃಹ ಮಂಡಳಿ ತಾಂತ್ರಿಕ ಬಿಡ್‌ ತೆರೆದಿತ್ತು. ಇದರಲ್ಲಿ ಅರ್ಹವಾಗಿದ್ದ ನಿರ್ಮಾಣ ಕಂಪನಿಗಳ ಆರ್ಥಿಕ ಬಿಡ್‌ನ್ನು ತೆರೆದಿದ್ದ ಕೆಎಚ್‌ಬಿ ಶೇಕಡವಾರು ಮೊತ್ತವನ್ನು ಲೆಕ್ಕಾಚಾರ ಮಾಡಿತ್ತು.

ಎಲ್‌ 1 ಬಿಡ್‌ದಾರರು ನಮೂದಿಸಿದ್ದ ಮೊತ್ತವು ಟೆಂಡರ್‌ಗಿಟ್ಟಿದ್ದ ಮೊತ್ತಕ್ಕಿಂತಲೂ ಶೇ.15ಕ್ಕಿಂತಲೂ ಹೆಚ್ಚಿತ್ತು. ಪ್ರಸ್ತುತ ಚಾಲ್ತಿಯಲ್ಲಿರುವ ದರಪಟ್ಟಿಗೆ ಹೋಲಿಸಿದಾಗ ಶೇಕಡವಾರು ಪ್ರಮಾಣದಲ್ಲಿ ದರ ಹೆಚ್ಚಿಗೆ ಇದ್ದದ್ದಕ್ಕೆ ಟೆಂಡರ್‌ ಪರಿಶೀಲನಾ ಸಮಿತಿ ತಕರಾರು ತೆಗೆದಿತ್ತಾದರೂ ಬಿಡ್‌ದಾರರೊಂದಿಗೆ ನಡೆಸಿದ್ದ ಸಂಧಾನ ಬಿದ್ದು ಹೋಗಿತ್ತು.  ಕಡೆ ಹಂತದಲ್ಲಿ ದರದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿರುವ ಟೆಂಡರ್‌ ಪರಿಶೀಲನಾ ಸಮಿತಿಯು ಟೆಂಡರ್‌ಗಿಟ್ಟ ಮೊತ್ತಕ್ಕಿಂತಲೂ ಶೇಕಡವಾರು ಹೆಚ್ಚಿರುವ ಮೊತ್ತವನ್ನೇ ಅನುಮೋದಿಸುವಂತೆ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನ ಡಾ ಎಸ್‌ ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಮೇಲ್ದರ್ಜೆ ಮತ್ತು ನವೀಕರಣ ಕಟ್ಟಡ ಕಾಮಗಾರಿಯ ಆರ್ಥಿಕ ಬಿಡ್‌ನಲ್ಲಿ ಪ್ರಸಿದ್ಧಿ ಕನ್ಸ್‌ಟ್ರಕ್ಷನ್ಸ್‌ ಅವರು 50,81,000 ರು.ಗಳನ್ನು ನಮೂದಿಸುವ ಮೂಲಕ ಎಲ್‌ 1 ಬಿಡ್‌ದಾರರಾಗಿದ್ದರು. ಈ ಮೊತ್ತವು ಟೆಂಡರ್‌ಗಿಟ್ಟ ಮೊತ್ತ 44,18,343 ರು.ಗಳಿಗಿಂತ ಶೇ.15ರಷ್ಟು ಹೆಚ್ಚಿಗೆಯಾಗಿತ್ತು.

ಸಂಬಂಧ 2019ರ ಸೆ.24ರಂದು ಬಿಡ್‌ದಾರರೊಂದಿಗೆ ಟೆಂಡರ್‌ ಪರಿಶೀಲನಾ ಸಮಿತಿ ದರ ಸಂಧಾನ ನಡೆಸಿತ್ತು. ಬಿಡ್‌ದಾರರು ತಾವು ನಮೂದಿಸಿರುವ ದರವೇ ಕಡಿಮೆ ಇದೆ, ಇನ್ನು ಕಡಿಮೆ ಮಾಡದಿರಲು ಕೋರಿದ್ದರು. ಆದರೆ ಬಿಡ್‌ದಾರರು ನಮೂದಿಸಿದ್ದ ಮೊತ್ತವು ಪ್ರಸ್ತುತ ಚಾಲ್ತಿಯಲ್ಲಿರುವ 2018-19ನೇ ಸಾಲಿನ ಪಿಡಬ್ಲ್ಯೂಡಿ ದರಪಟ್ಟಿಗೆ ಹೋಲಿಸಿದಾಗ ಟೆಂಡರ್‌ಗಿಟ್ಟ ಮೊತ್ತವು 46,36,315 ರೂ.ಗಳಿಗೆ ಪರಿಷ್ಕೃತಗೊಂಡಿತ್ತು.

ಆದರೂ ಪರಿಷ್ಕೃತ ಟೆಂಡರ್‌ ಮೊತ್ತವನ್ನು ಗುತ್ತಿಗೆದಾರರು ನಮೂದಿಸಿರುವ ಮೊತ್ತಕ್ಕೆ ಹೋಲಿಸಿದಾಗ ಶೇ.9.59ರಷ್ಟು ಹೆಚ್ಚಾಗಿತ್ತು. ಕಡೆಗೆ ಇದೇ ಮೊತ್ತಕ್ಕೇ ಟೆಂಡರ್‌ ಪರಿಶೀಲನಾ ಸಮಿತಿ ಒಪ್ಪಿಗೆ ಸೂಚಿಸಿರುವುದು ಕರ್ನಾಟಕ ಗೃಹ ಮಂಡಳಿ ಆಯುಕ್ತ ಶಾಂತರಾಮ್‌ ಅವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ 2019ರ ನವೆಂಬರ್‌ 2ರಂದು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಟೆಂಡರ್‌ನಲ್ಲಿಯೂ  ಪ್ರಸಿದ್ಧಿ ಕನ್ಸ್‌ಟ್ರಕ್ಷನ್ಸ್‌ ಎಲ್‌ 1 ಬಿಡ್‌ದಾರರಾಗಿ ಹೊರಹೊಮ್ಮಿದ್ದರು. ಈ ಕಂಪನಿ ಬಿಡ್‌ ಮಾಡಿದ್ದ 68,57,737 ಮೊತ್ತ, ಟೆಂಡರ್‌ಗಿಟ್ಟಿದ್ದ 59,11,844 ರೂ.ಗಳಿಗಿಂತಲೂ ಶೇ.16ರಷ್ಟು ಹೆಚ್ಚಿಗೆ ಇತ್ತು.

ದರ ಸಂಧಾನ ಮಾಡಲು 2019ರ ಅಕ್ಟೋಬರ್‌ 21ರಂದು ಸಭೆ ನಡೆಸಿದ್ದ ಕರ್ನಾಟಕ ಗೃಹ ಮಂಡಳಿಯ ಟೆಂಡರ್‌ ಪರಿಶೀಲನಾ ಸಮಿತಿಯು 67,39,502 ರೂ.ಗಳಿಗಿಳಿಸುವುದರಲ್ಲಿ ಯಶಸ್ವಿಯಾಗಿತ್ತು. ಆದರೆ ಸಮಿತಿ ಒಪ್ಪಿದ್ದ ಮೊತ್ತವು ಕೂಡ ಟೆಂಡೆರ್‌ಗಿಟ್ಟಿದ್ದ 59,11,844 ರು.ಗಳಿಗೆ ಹೋಲಿಸಿದಾಗ ಶೇ.14ರಷ್ಟು ಹೆಚ್ಚಿಗೆ ಇತ್ತು. ಆದರೂ 67,39,502 ರು.ಗೆ ಒಪ್ಪಿಗೆ ನೀಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಆದರೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ 2019ರ ಡಿಸೆಂಬರ್‌ 13ರಂದು ಬರೆದಿರುವ ಪತ್ರದಲ್ಲಿ ಒಟ್ಟು ಮೊತ್ತ 3 ಲಕ್ಷ ರೂ.ಗಳಿಗೇರಿರುವುದು ಅನುಮಾನಕ್ಕೆ ಕಾರಣವಾಗಿದೆ. ಒಟ್ಟು 70,00,000 ರು.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಕೋರಿದ್ದಾರೆ.

ಮತ್ತೊಂದು ವಿಶೇಷ ಸಂಗತಿ ಎಂದರೆ 70.00 ಲಕ್ಷ ರು.ಗಳ ಅಂದಾಜು ಪಟ್ಟಿಗೆ 2019ರ ಮಾರ್ಚ್‌ 5ರಂದೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಆಡಳಿತಾತ್ಮಕ ಅನುಮೋದನೆಯ ಆದೇಶ ಹೊರಡಿಸಿದ್ದರು. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಆದೇಶ ಹೊರಡಿಸಿರುವುದು ಮತ್ತು ಆಯುಕ್ತರು ಇದೇ ಮೊತ್ತದ ಪ್ರಸ್ತಾವನೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ದಿನಾಂಕದ ಮಧ್ಯೆ 8 ತಿಂಗಳ ವ್ಯತ್ಯಾಸವಿದೆ. ಆಡಳಿತಾತ್ಮಕ ಅನುಮೋದನೆ ಆದೇಶ ಹೊರಡಿಸಿದ 8 ತಿಂಗಳ ನಂತರ ಪ್ರಸ್ತಾವನೆ ಮೇಲೆ ಕ್ರಮ ಕೈಗೊಳ್ಳಲು ಬರೆದಿರುವ ಪತ್ರವೇ ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿಗೆ ಪುಷ್ಠಿ ನೀಡಿದೆ.

ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿಯ ಟೆಂಡರ್‌ನದ್ದು ಇದೇ ಕಥೆ. ಕಾಲೇಜು ಕಾಮಗಾರಿಗಳಿಗೆ 41.37 ಲಕ್ಷ ರು.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಟೆಂಡರ್‌ನಲ್ಲಿ ಎಲ್‌ 1 ಬಿಡ್‌ದಾರರಾಗಿ ಹೊರಹೊಮ್ಮಿರುವ ಎಲ್‌ಟಿಜಿ ಇನ್ಫ್ರಾಸ್ಟಕ್ಚರ್‌ ಲಿಮಿಟೆಡ್‌ ಆರ್ಥಿಕ  ಬಿಡ್‌ನಲ್ಲಿ 35,26,136 ರು.ಗಳನ್ನು ನಮೂದಿಸಿತ್ತು. ಆದರೆ ಮೊತ್ತವು ಟೆಂಡರ್‌ಗಿಟ್ಟ ಮೊತ್ತ 30,95,854 ರೂ.ಗಿಂತ ಶೇ.13.90ರಷ್ಟು ಹೆಚ್ಚಿಗೆ ಇತ್ತು.

ಸಂಬಂಧ 2019ರ ಜುಲೈ 23ರಂದು ಟೆಂಡರ್ ಪರಿಶೀಲನಾ ಸಮಿತಿ ದರ ಸಂಧಾನ ನಡೆಸಿತ್ತು. ಆದರೆ ಗುತ್ತಿಗೆದಾರರು ತಾವು ಸಲ್ಲಿಸಿದ್ದ ಬಿಡ್‌ ಮೊತ್ತವು ಕಡಿಮೆ ಇದೆ. ಜಿಎಸ್‌ಟಿ ಶೇ.18ರಷ್ಟು ಇರುವ ಕಾರಣ ಬಿಡ್‌ ಮೊತ್ತ ಸಮಂಜಸವಾಗಿದೆ ಎಂದು ಸಮರ್ಥನೆ ನೀಡಿತ್ತು. ಇದನ್ನೇ ಒಪ್ಪಿಕೊಂಡಿರುವ ಟೆಂಡರ್‌ ಪರಿಶೀಲನಾ ಸಮಿತಿ, 35.00 ಲಕ್ಷ ರು.ಗೆ ಅನುಮೋದನೆ ನೀಡಲು ಕಾಲೇಜು ಶಿಕ್ಷಣ ಇಲಾಖೆಗೆ 2019ರ ಆಗಸ್ಟ್‌ 26ರಂದು ಪತ್ರ ಬರೆದಿದೆ.

ಅದೇ ರೀತಿ ಇದೇ ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ(ಪ್ಯಾಕೇಜ್‌-9)ರ ಟೆಂಡರ್‌ ಪ್ರಸ್ತಾವನೆಗೆ ನೀಡಿರುವ ಅನುಮೋದನೆಯಲ್ಲಿಯೂ ಅಕ್ರಮಗಳು ನಡೆದಿರುವ ಗುಮಾನಿಗಳಿವೆ. ಮತ್ತೊಂದು ಪ್ಯಾಕೇಜ್‌ನಲ್ಲಿ ಎಲ್‌ 1 ಬಿಡ್‌ದಾರರಾಗಿ ಹೊರಹೊಮ್ಮಿದ್ದ ಎಲ್‌ಟಿಜಿ ಇನ್ಫ್ರಾಸ್ಟಕ್ಚರ್‌ ಲಿಮಿಟೆಡ್‌ ಪ್ಯಾಕೇಜ್‌-9ರ ಕಾಮಗಾರಿಗೆ 64,65,765 ರೂ.ಗಳನ್ನು ನಮೂದಿಸಿತ್ತು.

ಇದು ಕೂಡ ಟೆಂಡರ್‌ಗಿಟ್ಟ ಮೊತ್ತ 57,21,948 ರು.ಗಳಿಗಿಂತ ಶೇ.12.99ರಷ್ಟು ಹೆಚ್ಚಿಗೆ ಇತ್ತು. ದರಕ್ಕೆ ಸಂಬಂಧಿಸಿದಂತೆ ಮರು ಸಂಧಾನ ನಡೆಸಿದ ನಂತರ 62,79,838 ರು.ಗಳಿಗೆ ಮರು ಪ್ರಸ್ತಾವನೆ ಸಲ್ಲಿಸಲಾಗಿತ್ತು. 2019ರ ಜುಲೈ 10ರಂದು ನಡೆದ ಮತ್ತೊಂದು ದರ ಸಂಧಾನ ಕುರಿತು ನಡೆದಿದ್ದ ಸಭೆಯಲ್ಲಿ 62,79,838 ರು.ಗಳಿಗೆ ಕಾಮಗಾರಿ ನಿರ್ವಹಿಸಲು ನಿರ್ಮಾಣ ಕಂಪನಿ ಒಪ್ಪಿಗೆ ಪತ್ರ ನೀಡಿತ್ತು. ಆದರೆ ಮೊತ್ತವು ಕೂಡ ಟೆಂಡರ್‌ಗಿಟ್ಟ ಮೊತ್ತ 57,21,948 ರೂ.ಗಳಿಗಿಂತಲೂ ಶೇ.9.75ರಷ್ಟು ಹೆಚ್ಚಿಗೆ ಇತ್ತು. ಆದರೂ ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡಬೇಕು ಎಂದು ಕೋರಿರುವುದು ಗೃಹ ಮಂಡಳಿ ಆಯುಕ್ತರು 2019ರ ಜುಲೈ 18ರಂದು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ನಿರ್ಮಾಣ ಕಾಮಗಾರಿಯ ಟೆಂಡರ್‌ ಪ್ರಸ್ತಾವನೆಯಲ್ಲಿಯೂ ಅಕ್ರಮ ನಡೆದಿರುವ ಶಂಕೆಗಳಿವೆ. ಈ ಕಾಲೇಜಿನ ನಿರ್ಮಾಣ ಕಾಮಗಾರಿಗೆ 47.13 ಲಕ್ಷ ರು.ಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಈ ಕಾಮಗಾರಿ ನಿರ್ವಹಿಸಲು ಭಾಗವಹಿಸಿದ್ದ ಇಬ್ಬರು ಗುತ್ತಿಗೆದಾರರ ಪೈಕಿ ಎಚ್‌ ಆರ್‌ ರವಿಕುಮಾರ್‌ ಎಂಬುವರು 46,04,489 ರು.ಗಳನ್ನು ನಮೂದಿಸಿ ಎಲ್‌ 1 ಬಿಡ್‌ದಾರರಾಗಿ ಹೊರಹೊಮ್ಮಿದ್ದರು.

ಮೊತ್ತವು ಕೂಡ ಟೆಂಡರ್‌ಗಿಟ್ಟ ಮೊತ್ತ 39,69,362 ರೂ.ಗಳಿಗಿಂತ ಶೇ.16ರಷ್ಟು ಹೆಚ್ಚಿಗೆ ಇತ್ತು. ಜಿಎಸ್‌ಟಿ ಶೇ.18ರಷ್ಟು ಹೆಚ್ಚಿಗೆ ಇರುವ ಕಾರಣ ಬಿಡ್‌ ಮೊತ್ತ ಸಮಂಜಸವಾಗಿದೆ ಎಂದು ಬಿಡ್‌ದಾರರ ಸಮರ್ಥನೆಯನ್ನೇ ಒಪ್ಪಿಕೊಂಡಿರುವ ಮಂಡಳಿ, 46.00 ಲಕ್ಷ ರು.ಗಳಿಗೆ ಒಪ್ಪಿಗೆ ನೀಡಲು 2019ರ ಆಗಸ್ಟ್‌ 28ರಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದೆ.

ಇದೇ ರೂಸಾದಡಿಯಲ್ಲಿ 9 ವಿಶ್ವವಿದ್ಯಾಲಯಗಳಿಗೆ ಮಂಜೂರಾಗಿದ್ದ  ಮೂಲಭೂತ ಸೌಕರ್ಯಗಳ ಅನುದಾನಡಿಯಲ್ಲಿ 3ನೇ ಕಂತಿನ ಅನುದಾನ 45,00,00,000 ರು.ಗಳು ಮತ್ತು ಮತ್ತು 71 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 39,25,00,000 ರು. ಸೇರಿದಂತೆ 3ನೇ ಕಂತಿನಲ್ಲಿ ಒಟ್ಟಾರೆಯಾಗಿ 90,75,00,000 ಗಳಲ್ಲಿ ಕೇಂದ್ರದ ಪಾಲು 54,45,00,000 ರು.ಬಿಡುಗಡೆ ಮಾಡಿ 2019ರ ಜುಲೈ 17ರಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.

ಉನ್ನತ ವಿದ್ಯಾ ಸಂಸ್ಥೆಗಳಿಗೆ ಸಮಾನ ಅಭಿವೃದ್ದಿ ಒದಗಿಸಲು ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದೌರ್ಬಲ್ಯಗಳನ್ನು ಸರಿಪಡಿಸುವುದು, ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹಣ ಒದಗಿಸುವುದು ರೂಸಾ ಯೋಜನೆಯ ಗುರಿ.
ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ 2015-16ನೇ ಸಾಲಿನಲ್ಲಿ ಒಟ್ಟು 90 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇದುವರೆಗೂ ಆಯ್ಕೆಗೊಂಡಿವೆ.  ಸದರಿ ಕಾಂಪೋನೆಂಟ್-7ರಡಿಯಲ್ಲಿ ಆಯ್ಕೆಯಾದ ಕಾಲೇಜುಗಳಿಗೆ ತಲಾ ರೂ.2.00 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ರೂ.63,96,92,280 ಗಳಲ್ಲಿ ಇದುವರೆವಿಗೂ ರೂ.60.00 ಕೋಟಿಗಳಷ್ಟು ಅನುದಾನ ಕಾಲೇಜುಗಳಿಗೆ ಬಿಡುಗಡೆಯಾಗಿದೆ.