ಮುಟ್ಟು ಸೂತಕವಲ್ಲ, ಫಲವಂತಿಕೆಯ ಪ್ರತೀಕ  

ಮಹಿಳೆಯ ಮುಟ್ಟಿನ ರಕ್ತವನ್ನು ಹೊಲ ಗದ್ದೆಗಳಲ್ಲಿ ಚೆಲ್ಲುವುದರ ಮೂಲಕ ಹೆಣ್ಣನ್ನು ಮತ್ತು ಅವಳ ಮುಟ್ಟನ್ನು ಶ್ರೇಷ್ಠವೆಂದು ಜನಪದರು ಭಾವಿಸಿದ್ದರು.  

ಮುಟ್ಟು ಸೂತಕವಲ್ಲ, ಫಲವಂತಿಕೆಯ ಪ್ರತೀಕ  

“ಮುಡುಚೆಟ್ಟಿನೊಳ ಬಂದು ಮುಟ್ಟಿ ತಟ್ಟಿ ಅಂತೀರಿ
ಮುಡಚೆಟ್ಟು ಎಲ್ಲಾದ ಹೇಳಣ್ಣ?
ಮುಟ್ಟಾದ ಮೂರು ದಿನಕ ಹುಟ್ಟಿ ಬರತಿರಿ ನೀವು
ಮುಡಚೆಟ್ಟು ಎಲ್ಲ್ಯಾದ ಹೇಳಣ್ಣ..?”

ಇದು ಹೈದ್ರಾಬಾದ ಕರ್ನಾಟಕದ  ತತ್ವಪದಕಾರ ಕಡಿಕೋಳ ಮಡಿವಾಳಪ್ಪನವರು ಹೆಣ್ಣಿನ ಮುಟ್ಟು ಸೂತಕವೆಂದು ಹಾಗೂ ಅವಳು ಮೈಲಿಗೆ ಎಂದು ಹೇಳುವ  ಮೂಢರಿಗೆ ಮುಟ್ಟಿನಿಂದಲೆ ಹುಟ್ಟಿ ಬಂದಿರಲ್ಲಪ್ಪ ನೀವು  ಮುಡಚೆಟ್ಟು ಎಲ್ಲ್ಯಾದ ಹೇಳಿ ಎಂದು ಕೇಳಿದ ಪ್ರಶ್ನೆ.

ಹೆಣ್ಣೆಂದರೆ ಸೂತಕ ಎನ್ನುವ  ಈ ಸಮಾಜದ ಪುರುಷಪ್ರಧಾನ ಕುಟುಂಬದ ಕುಡಿಗಳೆಲ್ಲರೂ  ಹೆಣ್ಣಿನ 9 ತಿಂಗಳ ಮುಟ್ಟಿನ ಪ್ರಾಡಕ್ಟ್ ಗಳೇ.  ಹೌದು ಮುಟ್ಟು ಮೈಲಿಗೆ ಎಂದು ಭಾವಿಸುವ ಪ್ರತಿಯೊಬ್ಬರು ಹೆಣ್ಣಿನ 9 ತಿಂಗಳು ರಕ್ತದ ಮಾಂಸದುಂಡೆಗಳಾಗಿ ಜೀವ ಪಡೆದವರೇ..

ಮೈಸೂರು ದಸರಾಕ್ಕೆ ಚಾಲನೆ ನೀಡಿದ ಎಸ್.ಎಲ್.ಭೈರಪ್ಪ ಎಂಬ ಸಾಹಿತಿ “ ಮಹಿಳೆಯರು ಮುಟ್ಟಾದಾಗ  ಆಫೀಸಿಗೆ ಹೋಗಬಹುದು ಅದು ಅವರಿಗೆ ಸಂಬಂಧಪಟ್ಟಿದ್ದು ಆದರೆ ದೇವಸ್ಥಾನಕ್ಕೆ ಹೋಗಬಾರದು. ಮುಟ್ಟಿರುವ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಸ್ಥಾನ ಪ್ರವೇಶಿಸಬಾರದು ಎಂಬುದು ಒಂದು ನಂಬಿಕೆ” ಎಂದು ಮುಟ್ಟು ಸೂತಕವೇ ಎಂಬ ರೀತಿಯಲ್ಲಿ  ಹೇಳಿದ್ದಾರೆ.

ಹಿಂದಿನ ಕಾಲದಲ್ಲಿ ಕೃಷಿಕರು ರೈತಾಪಿ ಜನರಿಗೆ ಹೆಣ್ಣಿನ ಮುಟ್ಟು ಶ್ರೇಷ್ಠ  ಮತ್ತು ಫಲವಂತಿಕೆಯ ಸಂಕೇತವಾಗಿತ್ತು. ಒಂದು ಜೀವಕ್ಕೆ ಜೀವ ಕೊಡುವುದು ಮಹಿಳೆ. ಅವಳೇ ಶ್ರೇಷ್ಠವೆಂದು ಅನೇಕ ಬುಡಕಟ್ಟು ಜನಾಂಗದವರ ನಂಬಿಕೆಯೂ ಆಗಿತ್ತು. ಹಾಗಾಗಿ ಮಹಿಳೆ ಮತ್ತು ಅವಳ ಮುಟ್ಟಿನ ರಕ್ತಕ್ಕೆ ಬಹಳ ಪ್ರಮುಖ್ಯವನ್ನು ಕೊಡುತ್ತಿದ್ದರು.  ಮಹಿಳೆಯ ಮುಟ್ಟಿನ ವೇಳೆ ಸ್ರಾವವಾಗುವ ಆ ರಕ್ತವನ್ನು ಹೊಲಗದ್ದೆಗಳಲ್ಲಿ ಚೆಲ್ಲಿದರೆ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಮಹಿಳೆಯ ಮುಟ್ಟಿನ ರಕ್ತವನ್ನು ಹೊಲ ಗದ್ದೆಗಳಲ್ಲಿ ಚೆಲ್ಲುವುದರ ಮೂಲಕ ಹೆಣ್ಣನ್ನು ಮತ್ತು ಅವಳ ಮುಟ್ಟನ್ನು ಶ್ರೇಷ್ಠವೆಂದು ಜನಪದರು ಭಾವಿಸಿದ್ದರು.

ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ಹೋಗಬಾರದು ಎಂಬ ವಾದ ಮಾಡುವವರೆಲ್ಲ ಅರಿತು ಕೊಳ್ಳಲೇಬೇಕು. ಅಸ್ಸಾಂ ರಾಜ್ಯದ ಗುವಾಹತಿಯ ನೀಲಾಚಲ ಬೆಟ್ಟದ ಮೇಲೆ ಕಾಮ್ಯಕ ದೇವಿ ಎಂಬ ಮುಟ್ಟಿನ ದೇವತೆಯ ದೇವಸ್ಥಾನವಿದೆ ಹಾಗೂ ಅಸ್ಸಾಂ ನ  ಬ್ರಹ್ಮಪುತ್ರ ನದಿಯ ತೀರದಲ್ಲಿ ಯೋನಿದೇವತೆ ದೇವಸ್ಥಾನವೂ ಇದೆ. ಮಹಿಳೆಯ ಮೈಲಿಗೆ ಸೂತಕವೆಂಬುವವರು ಮಹಿಳೆಯೆಂದರೆ ಒಂದು ಜೀವಕ್ಕೆ ಜೀವಕೊಡುವ ಜನನಿ. ಅವಳ ಮುಟ್ಟು ಫಲವಂತಿಕೆಯ ಸಂಕೇತವೆಂಬುವುದನ್ನು ಅರ್ಥ ಮಾಡಿಕೊಳ್ಳಬೇಕು.

ಹೆಣ್ಣಿನ ಮುಟ್ಟಿನ ಬಗ್ಗೆ ನಮಗೆಲ್ಲ ತಪ್ಪು ಕಲ್ಪನೆಗಳೇ ಹೆಚ್ಚಾಗಿವೆ. ಅದರಿಂದ ಹೊರ ಬಂದು ವೈಜ್ಞಾನಿಕವಾಗಿ ನೋಡಬೇಕು ಮುಟ್ಟಿನ ಸಮಯದಲ್ಲಿ ಮಹಿಳೆಯಲ್ಲಾಗುವ ಮಾನಸಿಕ ತೊಳಲಾಟಗಳು, ಕೋಪ, ,ಅಸಹಾಯಕತೆ, ನಿರಾಸಕ್ತಿ, ಹೊಟ್ಟೆನೋವು ಎಲ್ಲವೂ  ಒಮ್ಮೆಲೇ ಅವಳ ಮೇಲೆ ಅಲೆಗಳಂತೆ ಅಪ್ಪಳಿಸುತ್ತಾವೆ. ಆ ಸಮಯದಲ್ಲಿ ಅವಳಿಗೆ  ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳಬೇಕಾದ ಮನೆಯವರು ಸೂಕತವೆಂದು ಭಾವಿಸಿ ಮನೆ ಹೊರಗೆ ಇಡುತ್ತಾರೆ. ದೇವರ ಮನೆ ಅಡುಗೆ ಮನೆ ಪ್ರವೇಶಿಸಲು ಬಿಡುವುದಿಲ್ಲ.

ಈ ಹಿಂದೆ ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ಕೋಳಗುಂದದ  ಗೊಲ್ಲರಹಟ್ಟಿಯಲ್ಲಿ ಪ್ರತಿ ತಿಂಗಳು ಋತುಮತಿಯಾಗುವ ಹೆಣ್ಣು ಮಕ್ಕಳನ್ನು ಹಾಗೂ ಬಾಣಂತಿಯರಿಗೆ ಊರಿಂದ ಹೊರಗೆ ಗುಡಿಸಲು ಹಾಕಿ ಊರ ಹೊರಗೆ ಇಡುವಂತಹ ಅನಿಷ್ಟ ಪದ್ಧತಿ ಆಚರಣೆಯಲ್ಲಿತ್ತು. 2015ರಲ್ಲಿ ಈ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಟ ಮಾಡಿ ಮುಟ್ಟಿನ ಮೌಢ್ಯದಿಂದ  ಮೆಟ್ಟಿ ನಿಂತು ಗ್ರಾಮಸ್ಥರೆಲ್ಲರೂ ಈ ಕೆಟ್ಟ ಪದ್ದತಿಯನ್ನು ಆಚರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದರು.  ಜನಸಾಮನ್ಯರಿಗೆ ಮುಟ್ಟು ಎಂಬುವುದೊಂದು ನೈಸರ್ಗಿಕ ಪ್ರಕ್ರಿಯೆ ಇದು ಪ್ರಕೃತಿ ಸಹಜವಾದದ್ದು ಎಂದು ಅರಿವು ಮೂಡಿಸಬೇಕಾದ ಪ್ರಜ್ಞಾವಂತ ಹಾಗೂ ನಾಡಿನ ಹಿರಿಯ ಸಾಹಿತಿಗಳಾದ ಎಸ್ ಎಲ್ ಬೈರಪ್ಪನವರು  ಮುಟ್ಟಿನ ಸಮಯದಲ್ಲಿ ದೇವಸ್ಥಾನ ಪ್ರವೇಶಿಸಬಾರದೆಂದು ಬಹಳ ಸೂಕ್ಷ್ಮವಾಗಿಯೇ ಮಹಿಳಾ ವಿರೋಧಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಯಾಕೆ ಮಹಿಳೆಯರು ಮುಟ್ಟಿನ ಸಮಯದಲ್ಲಿ ದೇವಸ್ಥಾನ ಪ್ರವೇಶಿಸಬಾರದು? ಆ ದೇವರಗಳು ಹುಟ್ಟಿ ಬಂದಿರೋದು ಆ ಮುಟ್ಟಿನಿಂದಲೇ ಅಲ್ವಾ ಎಂಬ ನೂರಾರು ಪ್ರಶ್ನೆಗಳು ಕಣ್ಮುಂದೆ ಮಿಂಚಿನ ಹಾಗೆ ಬಂದು ಹೋಗುತ್ತವೆ.  ಇನ್ನೂ ಮುಟ್ಟಿನ ಮೌಢ್ಯತೆಯಿಂದ ಹೊರಬರದೆ ಇರುವವರೆಲ್ಲ ಮುಟ್ಟು ತಾಯ್ತತನದ ಸಂಕೇತವೆಂದು ಅರಿತುಕೊಂಡರೆ ಮಾತ್ರ ಈ ಮುಟ್ಟನ್ನು ಮೆಟ್ಟಿ ನಿಲ್ಲಬಹುದು. ಮಹಿಳೆಯ ಮುಟ್ಟು ಸೂತಕವಲ್ಲ, ಫಲವಂತಿಕೆಯ ಪ್ರತೀಕ.