ನಿಷ್ಪ್ರಯೋಜಕರು, ಭಟ್ಟಂಗಿಗಳ ನಡುವೆ ನೆನಪಾಗುವ ಅನಂತ್ ಕುಮಾರ್ 

ನಿಷ್ಪ್ರಯೋಜಕರು, ಭಟ್ಟಂಗಿಗಳ ನಡುವೆ ನೆನಪಾಗುವ ಅನಂತ್ ಕುಮಾರ್ 

ಬಿಜೆಪಿ ನಾಯಕ ದಿವಂಗತ ಅನಂತ ಕುಮಾರ್ ಇದ್ದಿದ್ದರೆ ಅವರಿಗೆ. ಕಳೆದ ಜುಲೈ 22 ಕ್ಕೆ 60 ವರ್ಷವಾಗಿರುತ್ತಿತ್ತು. ಆದರೆ ಅವರು ಮೃತಪಟ್ಟು ಬರುವ ನವಂಬರ್ 12ಕ್ಕೆ ಒಂದು ವರ್ಷವಾಗುತ್ತಿದೆ. ಈಗ ಅನಂತಕುಮಾರ್ ನನ್ನನ್ನು ಕಾಡುವುದಕ್ಕೂ ಕಾರಣವಿದೆ. ರಾಜ್ಯ ಬಿಜೆಪಿಯಲ್ಲಿ ನಿಜಕ್ಕೂ ಅವರು ಸೃಷ್ಟಿಸಿರುವ ಶೂನ್ಯದ ಅನುಭವ ನನಗಂತೂ ಆಗುತ್ತಿದೆ. ನನ್ನ ಅವರ ಪರಿಚಯಕ್ಕೆ ಪತ್ರಕರ್ತನಾಗಿ ಸುಮಾರು ಮೂರು ದಶಕಗಳ ಇತಿಹಾಸವಿದೆ. ಆದರೆ ಅದಕ್ಕೂ ಮೊದಲಿನಿಂದಲೂ ನಾನು ಅವರನ್ನು ವಿದ್ಯಾರ್ಥಿ ಪರಿಷತ್ ದಿನಗಳಿಂದಲೂ ಬಲ್ಲೆ. ಅವರಿದ್ದ ಪಕ್ಷಕ್ಕೂ, ನನ್ನ ವಿಚಾರಗಳಿಗೂ ಅಜಗಜಾಂತರ. ಜನಸಮೂಹದ ನಾಯಕ ಯಡಿಯೂರಪ್ಪ ಮತ್ತು ಪ್ರಭಾವಿ ಜಾತಿಯ ಕಾರಣ, ಮಾಧ್ಯಮಗಳ ಸಹಕಾರ ಮತ್ತು ಸಂಘ ಪ್ರಭಾವದ ಕೃಪೆಯಿಂದ ನಾಯಕರಾದ ಅನಂತ್ ಕುಮಾರ್ ನಡುವೆ ನನ್ನ ಆಯ್ಕೆ ಸಹಜವಾಗಿಯೇ ಯಡಿಯೂರಪ್ಪ. ಹೀಗಾಗಿಯೋ ಏನೋ ಅವರನ್ನು ಮೆಚ್ಚಿ ಬರೆದಿದ್ದು ನನಗೆ ಗೊತ್ತೇ ಇಲ್ಲ.  ಹಾಗೆಂದು ಅನಂತ್ ಕುಮಾರ್ ಒಬ್ಬ ನಿರ್ಲಕ್ಷಿಸಬಹುದಾದ ರಾಜಕಾರಣೆ ಎಂದು ನಾನೆಂದೂ ಭಾವಿಸಿರಲಿಲ್ಲ. 

ಸತ್ತವರೆಂದು ಮೆಚ್ಚುಗೆ ಮಾತುಗಳನ್ನಾಡುವುದು ನನಗೆ ಬರುವುದಿಲ್ಲ. ತೋರಿಕೆಗಾಗಿ, ಯಾರೋ ಏನೋ ಅಂದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಹೊಂದದ ಪದಪುಂಜಗಳ ಮಾಲೆಯನ್ನು ಸೂಕ್ತವಲ್ಲದವರಿಗೆ ತೊಡಿಸುವ ಕಾಯಕ ನನ್ನದಲ್ಲ. ಆದರೂ ಅನಂತಕುಮಾರ್ ಈಗ ಇದ್ದಿದ್ದರೆ ಎಂದು ಕೇಳಿಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಹಣವೇ ಇಲ್ಲವೆಂದು ಮುಖ್ಯಮಂತ್ರಿ ಯಡಿಯೂರಪ್ಪ ಗೋಳಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಆ ಬಗ್ಗೆ ತಲೆ ಕೆಡಿಸಿಕೊಂಡಿರಲೇ ಇಲ್ಲ. ರಾಜ್ಯಾದ್ಯಂತ ಕನ್ನಡಿಗರು ಮೋದಿ ವಿರುದ್ಧ ಸಿಡಿದೆದ್ದಿದ್ದರು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಎಂಬ ಸಂಸದ ರಾಜ್ಯದಲ್ಲಿ ಪರಿಹಾರ ಒದಗಿಸಲು ಸಾಕಷ್ಟು ಹಣವಿದೆ, ಕೇಂದ್ರದ ನೆರವು ಅಗತ್ಯ ಇಲ್ಲ ಎಂದು ಫರ್ಮಾನು ಹೊರಡಿಸಿದ್ದರು. ಈ ಮನುಷ್ಯನಿಗೆ ರಾಜ್ಯದ ಸಂತ್ರಸ್ತರ ಸಂಕಷ್ಟಕ್ಕಿಂತ ಮೋದಿಗೆ ಭಟ್ಟಂಗಿತನ ಮೆರೆಯುವುದೇ ಮುಖ್ಯವಾದಂತಿತ್ತು. ಹಾಗಾದರೆ ಸಂಸದನ ಸ್ಥಾನವಾದರೂ ಈತನಿಗೆ ಏಕಾದರೂ ಬೇಕಿತ್ತು? ಒಂದು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡಿ ಕಳಿಸುವ ಜನಪ್ರತಿನಿಧಿ ಆ ಕ್ಷೇತ್ರದ ಅಭಿವೃದ್ಧಿಯಷ್ಟೇ ಅಲ್ಲದೇ ತನ್ನ ನಾಡಿನ ದನಿಯಾಗಿ ಸಂಸತ್ತಿನಲ್ಲಿರುವುದು ಆತನ ಕರ್ತವ್ಯ. ಈ ಪ್ರಾಥಮಿಕ ತಿಳಿವಳಿಕೆಯೂ ಈ ಹುಡುಗನಿಗೆ ಇದ್ದಂತಿಲ್ಲ. 

ಈತನಷ್ಟೇ ಅಲ್ಲ. ರಾಜ್ಯದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಂಪುಟದಲ್ಲಿ ಸಚಿವರೂ ಆಗಿರುವ ಡಿ.ವಿ.ಸದಾನಂದಗೌಡ, ಪ್ರಲ್ಹಾದ್ ಜೋಷಿ, ಸುರೇಶ್ ಅಂಗಡಿ, ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ತಮಿಳು ಮಹಿಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಜ್ಯದ ಪ್ರವಾಹ ಹಾನಿ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಪರಿಹಾರ ಕಾರ್ಯಕ್ಕಾಗಿ ಅಗತ್ಯ ಇರುವಷ್ಟು ಹಣವನ್ನು ಬಿಡುಗಡೆ ಮಾಡುವಂತೆ ನರೇಂದ್ರ ಮೋದಿಯ ಮೇಲೂ ಒತ್ತಡ ಹಾಕಿ ಪರಿಹಾರ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದರೆ ಅವರು ಕನ್ನಡ ನೆಲದ  ಪ್ರತಿನಿಧಿಗಳಾಗಿ ಉಳಿಯುವುದಾದರೂ ಹೇಗೆ? ಇಲ್ಲಿನ ನೆಲ,ಜಲ, ಭಾಷೆ, ಸಂಸ್ಕೃತಿ ಸೇರಿದಂತೆ ಕನ್ನಡಿಗರ ಬದುಕಿಗೆ ಉಸಿರಾಗದವರು ಹೇಗೆ ತಾನೇ ಕನ್ನಡವನ್ನು ಪ್ರತಿನಿಧಿಸುತ್ತಾರೆ? 

ಸದಾನಂದಗೌಡರಂತೂ ಅನಾಯಾಸ ನಾಯಕ. ಸ್ಥಳೀಯ ಸಂಸ್ಥೆಯ ಸದಸ್ಯನಾಗುವುದಕ್ಕೂ ನಾಲಾಯಕ್ ಆಗಿರುವ ಮನುಷ್ಯನೊಬ್ಬ ಕಾಲದ ಅಗತ್ಯಗಳಿಗೆ ತಕ್ಕಂತೆ ರೂಪುಗೊಂಡ ಹೊಂದಾಣಿಕೆ ರಾಜಕಾರಣದ ಫಲವಾಗಿ ‘ನಾಯಕ’ ನೆಂದು ದಾಖಲೆಗಳಲ್ಲಿ ಗುರುತಿಸಿಕೊಂಡಿದ್ದಾರಷ್ಟೇ. ನಿಜಕ್ಕೂ ಅಧಿಕಾರದ ಮೆಟ್ಟಲುಗಳನ್ನು ಹೋರಾಟ, ಶ್ರಮ, ಪ್ರತಿಭೆ, ದಿಟ್ಟತನ, ಕ್ರಿಯಾಶೀಲತೆ, ಪ್ರಾಮಾಣಿಕತೆ, ದಕ್ಷತೆಯಿಂದ ಜನನಾಯಕನಾಗಿ ರೂಪುಗೊಂಡು ಏರಿದವರಲ್ಲ. ಆತನ ಆಯ್ಕೆಗೆ ಬಿಜೆಪಿ ಹವೆ ಕಾರಣವಾಯಿತು. ಅಧಿಕಾರದ ಮೆಟ್ಟಲುಗಳನ್ನು ಏರಲು ಯಡಿಯೂರಪ್ಪ ಅವರ ಕೃಪೆ ಕಾರಣವಾಯಿತು. ರಾಜ್ಯದಲ್ಲಿ ಮೊದಲ ಸಲ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿಜೆಪಿ ಅಧ್ಯಕ್ಷರಾಗಿದ್ದ ಸದಾನಂದಗೌಡರ ಶಕ್ತಿಯೇ ಕಾರಣವೆಂದು ವರಿಷ್ಠರು ಭ್ರಮಿಸಿದ ಫಲವಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿಬಿಟ್ಟರು. ಅತ್ಯಂತ ನಿಷ್ಪ್ರಯೋಜಕ ವ್ಯಕ್ತಿಯೂ ಆಗಿರುವ ಸದಾನಂದ ಗೌಡರಂತೆ ಪ್ರಲ್ಹಾದ್ ಜೋಷಿಯ ಕತೆ ಭಿನ್ನವೇನಲ್ಲ. ಪ್ರಭಾವಿ ಜಾತಿಯ ಕಾರಣದಿಂದ ಅಧಿಕಾರದ ಅಂಗಳದಲ್ಲಿ ಓಡಾಡುವ ಅದೃಷ್ಟ ಪಡೆದ ಮಹಾನುಭಾವನೀತ. ಸುರೇಶ್ ಅಂಗಡಿ ಎಂಥವರೆಂಬುದು ನನಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ನರೇಂದ್ರ ಮೋದಿ, ಅಮಿತ್ ಶಾ ಬಳಿ ಹೋಗಿ ಕರ್ನಾಟಕಕ್ಕೆ ಪರಿಹಾರ ಬಿಡುಗಡೆ ಮಾಡಿ ಎಂದು ದನಿ ಏರಿಸುವ ಛಾತಿಯಂತೂ ಈ ಮನುಷ್ಯನಿಗೆ ಇದ್ದಂತಿಲ್ಲ. ಈಗಾಗಲೇ ಕೇಂದ್ರದಲ್ಲಿ ಸಚಿವರಾಗಿ ಅನುಭವ ಇರುವ ಸದಾನಂದಗೌಡರಿಗೇ ಸಾಧ್ಯವಿಲ್ಲದ್ದನ್ನು ಸುರೇಶ್ ಅಂಗಡಿಯಿಂದ ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ಹಾಗೊಂದು ವೇಳೆ ತೋರಿಕೆಯನ್ನೇ ನಂಬಬಹುದಾದರೆ ನಿರ್ಮಲಾ ಸೀತಾರಾಮನ್ ಈ ಕೆಲಸ ಮಾಡಬಹುದಿತ್ತು. ಆದರೆ ಆಕೆ ಕೂಡ ಮೋದಿ ಸರ್ಕಾರದ ಗುಮಾಸ್ತರಂತೆ ಕಾಣುತ್ತಿದ್ದಾರೆ, ಕೆಲವೊಮ್ಮೆ ನಿಷ್ಠಾವಂತ ವಕ್ತಾರರಂತೆ ಕಾಣುತ್ತಾರೆ. ಕನ್ನಡದ ಋಣ ತೀರಿಸುವ ಅವಕಾಶವನ್ನು ಅವರು ಬಳಸಿಕೊಳ್ಳಲಿಲ್ಲ ಎಂದರೆ ಅವರಿಗೆ ಈ ನೆಲದ ಬಗ್ಗೆ ನಿಷ್ಠೆ ಇಲ್ಲ ಅಥವಾ ಈ ವಿಷಯದಲ್ಲಿ ಮನಸ್ಸಿಲ್ಲ ಎಂದೇ ಅರ್ಥ.

ಈ ಕಾರಣದಿಂದಲೇ ಈಗ ಅನಂತ್ ಕುಮಾರ್ ನನ್ನನ್ನು ಬಡಿದೆಬ್ಬಿಸುತ್ತಲೇ ಇದ್ದಾರೆ. ಅನಂತಕುಮಾರ್ ಮತ್ತು ಯಡಿಯೂರಪ್ಪನವರ ನಡುವಿನ ಭಿನ್ನಾಭಿಪ್ರಾಯಗಳೇನೇ ಇರಲಿ. ಒಂದು ಕಾಲದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ್ ಒಗ್ಗೂಡಿ ಓಡಾಡುತ್ತಿದ್ದವರು. ಸ್ನೇಹಿತರಂತಿದ್ದವರು. ಯಡಿಯೂರಪ್ಪನವರ ಎಲ್ಲ ಸಮಸ್ಯೆಗಳಿಗೂ ಅನಂತಕುಮಾರ್ ಕಾರಣ ಎನ್ನುವಷ್ಟು ಟೀಕೆಗೆ ಒಳಗಾಗಿದ್ದವರು. ಹಾಗಿದ್ದರೂ ಅನಂತಕುಮಾರ್ ಬಿಜೆಪಿಯ ನಿಷ್ಠಾವಂತ ನಾಯಕ. ಅಡ್ವಾಣಿಯವರ ಮಾನಸ ಪುತ್ರ. ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಅವರ ಜನಸಮೂಹದ ನಾಯಕ ಎಂಬ ಭಾವ ಕಾರಣವಾಗಿರುವ ಜತೆ ಅನಂತಕುಮಾರ್ ಅವರ ಕಾರ್ಯತಂತ್ರವೂ ಪ್ರಮುಖ ಪಾತ್ರ ವಹಿಸಿತ್ತು. ಕೇಂದ್ರದಲ್ಲಿ ಸಚಿವರಾಗಿದ್ದರೂ ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಅವರಲ್ಲಿ ಪ್ರಬಲವಾಗಿತ್ತು. ಅವರು ಬುದ್ಧಿವಂತರಾಗಿದ್ದರಿಂದಲೇ ಬಾಯಿಚಪಲದ ರಾಜಕಾರಣಿಯಾಗಿರಲಿಲ್ಲ. ಬಾಯಿಗೆ ಬಂದಂತೆ ಅವರು ಮಾತಾಡುತ್ತಿರಲಿಲ್ಲ. ಬಿಜೆಪಿ ಪೋಷಿತ ವಿಚಾರಧಾರೆಯನ್ನೂ ತಮ್ಮ ಬಾಯಿಂದ ಅನಾಗರಿಕವಾಗಿ ಎಸೆಯುವುದು ಅವರಿಗೆ ಬೇಕಿರಲಿಲ್ಲ. ರಾಜ್ಯದಲ್ಲಿ ಅವರು ದೇವೇಗೌಡ, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು. ಕೇಂದ್ರದಲ್ಲಿ ಸಚಿವರಾಗಿದ್ದಾಗ ಅವರು ಕರ್ನಾಟಕದ ಮುಖವಾಗಿದ್ದರು. ಕರ್ನಾಟಕದಿಂದ ಹೋದವರನ್ನು ನಿರಾಶೆಗೊಳಿಸಿದ್ದೇ ಇಲ್ಲ ಎಂಬ ಪ್ರತೀತಿಯೂ ಇದೆ. ನಾಡಿನ ನೆಲ, ಜಲ, ಭಾಷೆಯ ವಿಷಯ ಬಂದಾಗ ತಮ್ಮ ಪ್ರಭಾವದ ವ್ಯಾಪ್ತಿಯಲ್ಲಿ ಮಾಡಬೇಕಾದ್ದೆಲ್ಲವನ್ನೂ ಋಣ ತೀರಿಸುವಂತೆ ಮಾಡಬೇಕೆನ್ನು ಛಲ ತೊಟ್ಟು ಮಾಡುತ್ತಿದ್ದರು. ಎಷ್ಟೋ ಸಲ ಈ ಕಾರಣದಿಂದ ಅವರು ಸುದ್ದಿಯಾಗದಿರಬಹುದು. ಇಂಥ ಎಲ್ಲ ಕೆಲಸಗಳನ್ನೂ ತಮ್ಮ ಭವಿಷ್ಯದ ಲೆಕ್ಕಾಚಾರದಿಂದಲೇ ಮಾಡಿರಬಹುದು ಎಂದು ಸಂದೇಹಿಸುವುದು ಅಷ್ಟು ಸರಿಯಲ್ಲ.

ಮೋದಿ ಪ್ರಧಾನಿಯಾದ ನಂತರ ರಸಗೊಬ್ಬರ ಸಚಿವರಾಗಿ ನಿರ್ಲಕ್ಷ್ಯಕ್ಕೆ ಒಳಗಾದರು ಎಂದುಕೊಳ್ಳುವಷ್ಟರಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಎಲ್ಲ ಪಕ್ಷಗಳ ನಾಯಕರ ನಡುವೆ ಸಮನ್ವಯ ಸಾಧಿಸಿ ಸುಗಮ ಸಂಸತ್ ಕಲಾಪಕ್ಕೆ ಪ್ರಾಮಾಣಿಕವಾಗಿ ಪ್ರಯತ್ತಿಸುತ್ತಿದ್ದ ಬಗ್ಗೆ ವಿಪಕ್ಷಗಳ ನಾಯಕರಿಗೂ ಅನಂತಕುಮಾರ್ ಬಗ್ಗೆ ಮೆಚ್ಚುಗೆ ಇತ್ತು. ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಮೊದಲ ಎನ್.ಡಿ.ಎ. ಸರ್ಕಾರದಲ್ಲಿ ಹಿರಿತನದ ಕಾರಣದಿಂದ ಮಂತ್ರಿಯಾದ ಧನಂಜಯಕುಮಾರ್ ಅವರನ್ನು ಕ್ರಮೇಣ ಓವರ್ ಟೇಕ್ ಮಾಡಿ ಅನಂತ ಕುಮಾರ್ ಮಂತ್ರಿಯಾಗಿದ್ದು ಅವರ ಬುದ್ಧಿವಂತಿಕೆಯನ್ನು ಪ್ರತಿಫಲಿಸಿತ್ತು. ಅನಂತಕುಮಾರ್ ವೇಗದ ಎದುರು ಧನಂಜಯಕುಮಾರ್ ಅವರದು ಏದುಸಿರು ಬಿಡುವ ವ್ಯಕ್ತಿತ್ವವಾಗಿತ್ತು. 

ಇಂಥ ಅನಂಥ ಕುಮಾರ್ ಕೇಂದ್ರ ಸಂಸ್ಕೃತಿ ಸಚಿವರಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಾಗ ನಾನೂ ಅಲ್ಲಿ ಹಾಜರಿದ್ದೆ. ಆಗ ಪತ್ರಕರ್ತ ವಿಶ್ವೇಶ್ವರ ಭಟ್ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನನ್ನನ್ನು ಆಹ್ವಾನಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಅನಂತಕುಮಾರ್ ಆಡಿದ ಮಾತುಗಳು ಭಾರತದ ನಿಜ ಸಂಸ್ಕೃತಿಗೆ ಹೇಗೆ ಹಾನಿ ಉಂಟುಮಾಡುತ್ತದೆ ಎಂದು ಲಂಕೇಶ್ ಪತ್ರಿಕೆಯಲ್ಲಿ ನಾನು ಬರೆದ ವರದಿ ಕಟುವಾಗಿದ್ದರೂ ಅವರು ಹಗುರವಾಗಿ, ಅನಾಗರಿಕವಾಗಿ ಪ್ರತಿಕ್ರಿಯಿಸಿರಲಿಲ್ಲ. ಸಾರ್ವಜನಿಕವಾಗಿ ಹೇಗಿರಬೇಕೆನ್ನುವುದು ಅವರಿಗೆ ಗೊತ್ತಿತ್ತು. ಇಷ್ಟೆಲ್ಲ ನಾನು ಹೇಳುತ್ತಿದ್ದೇನೆ ಅಂದ ಮಾತ್ರಕ್ಕೆ ಅವರೊಬ್ಬ ಶ್ರೇಷ್ಠ ನಾಯಕ ಅಥವಾ ಜನನಾಯಕ  ಎಂದು ನಾನು ಹೇಳುತ್ತಿಲ್ಲ. ಈಗ ಅನಂತಕುಮಾರ್ ಇದ್ದು ಕೇಂದ್ರದಲ್ಲಿ ಸಚಿವರಾಗಿದ್ದಿದ್ದರೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ಪರಿಹಾರದ ವಿಷಯದಲ್ಲಿ ಅವರು ತಮ್ಮ ಕ್ಷೇತ್ರವನ್ನೇ ಪ್ರತಿನಿಧಿಸಿರುವ ತೇಜಸ್ವಿ ಸೂರ್ಯನಂತೆ ಬೇಜವಾಬ್ದಾರಿಯಿಂದ ಮಾತಾಡುತ್ತಿರಲಿಲ್ಲ.ರಾಜ್ಯದ ಎಲ್ಲ ಪಕ್ಷಗಳ ನಾಯಕರ ನಡುವೆ ಸಮನ್ವಯ ಸಾಧಿಸಿ ನರೇಂದ್ರ ಮೋದಿ ಬಳಿಗೆ ನಿಯೋಗವೊಂದನ್ನು ಕರೆದೊಯ್ಯುವ ಪ್ರಯತ್ನವನ್ನಂತೂ ಮಾಡುತ್ತಿದ್ದರು. ತಮ್ಮ ನಾಗಪುರ ಸಂಪರ್ಕದ ಪ್ರಭಾವ ಬಳಸಿ ರಾಜ್ಯದ ಜನಾಗ್ರಹಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವಂತೆ ಮಾಡುವುದು ಅವರಿಗೆ ಸಾಧ್ಯವಿತ್ತು. ಇದು ಯೂಸ್ ಲೆಸ್ ಸದಾನಂದಗೌಡ, ಮೋದಿ ಭಟ್ಟಂಗಿ ಸಂಸದ, ಪ್ರಲ್ಹಾದ್ ಜೋಷಿ ತರಹದವರಿಂದ ಸಾಧ್ಯವಾಗುತ್ತಿರಲಿಲ್ಲ.  ಯಾಕೆಂದರೆ ಇವರ್ಯಾರಿಗೂ ಬೆನ್ನು ಮೂಳೆಯೇ ಇಲ್ಲ. ಅರಚುರೋಗದ ಅನಂತಕುಮಾರ್ ಹೆಗಡೆಯಿಂದ ಇಂಥ ಒಳ್ಳೆ ಕೆಲಸಗಳು ಸಾಧ್ಯವಾಗುವುದಿಲ್ಲ.

ಕೇಂದ್ರ ಸಚಿವರಾಗಿ ಅನಂತ ಕುಮಾರ್ ವಿರುದ್ಧ ಇದ್ದ ಭ್ರಷ್ಟಾಚಾರದ ಆರೋಪಗಳು ನನಗೆ ಗೊತ್ತಿಲ್ಲದ್ದೇನಲ್ಲ. ಆದರೆ ಕರ್ನಾಟಕದ ವಿಷಯಕ್ಕೆ ಬಂದಾಗ ಅವರು ನಡೆದುಕೊಳ್ಳುತ್ತಿದ್ದ ರೀತಿ ಈಗಲೂ ನನ್ನ ಕಣ್ಣ ಮುಂದೆಯೇ ಇದೆ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅಂಥವರನ್ನೇ ನಿಷ್ಕ್ರಿಯಗೊಳಿಸಿರುವ ‘ಮೋಶಾ’ ಅನಂತಕುಮಾರ್ ವಿಚಾರದಲ್ಲಿ ಹಾಗೆ ನಡೆದುಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ಎಷ್ಟೆಂದರೂ ಬಿಜೆಪಿ ಆಡಳಿತದಲ್ಲಿ ದೆಹಲಿಯಲ್ಲಿ ಕನ್ನಡದ ಪ್ರಭಾವ ಬೀರುವ ಅನಂತಕುಮಾರ್ ಅವರಂಥ ಇನ್ನೋರ್ವ ನಾಯಕ ಕಾಣುತ್ತಿಲ್ಲ. ಕಾಣುತ್ತಿರುವವರೆಲ್ಲ ಚಿಲ್ಲರೆಗಳು, ಪಾಪಾಸು ಕಳ್ಳಿಗಳು!