ಮೆಡಿಕಲ್ ಸೀಟು ಬ್ಲಾಕಿಂಗ್ ಪ್ರಕರಣ : ಪ್ರತಿಷ್ಠಿತ ಕಾಲೇಜುಗಳ ವಿರುದ್ಧ ಯಡಿಯೂರಪ್ಪ ಕ್ರಮ ಕೈಗೊಳ್ಳುತ್ತಾರೆಯೇ?

2018-19ನೇ ಸಾಲಿನ ಮೆಡಿಕಲ್ ಸೀಟು ಬ್ಲಾಕಿಂಗ್ ಪ್ರಕರಣವನ್ನು 'ಡೆಕ್ಕನ್ ನ್ಯೂಸ್’ ದಾಖಲೆಗಳ ಸಮೇತ ಅನಾವರಣ ಮಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತಂತೆ ಕಾಣುತ್ತಿದೆ. ಈ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ, ವೀರಣ್ಣ ಚರಂತಿಮಠ ಮತ್ತಿತರರ ಪ್ರಭಾವಿಗಳು ಟ್ರಸ್ಟಿಗಳಾಗಿರುವ 17 ವೈದ್ಯಕೀಯ ಕಾಲೇಜುಗಳೂ ಇವೆ.

ಮೆಡಿಕಲ್ ಸೀಟು ಬ್ಲಾಕಿಂಗ್ ಪ್ರಕರಣ : ಪ್ರತಿಷ್ಠಿತ ಕಾಲೇಜುಗಳ ವಿರುದ್ಧ ಯಡಿಯೂರಪ್ಪ ಕ್ರಮ ಕೈಗೊಳ್ಳುತ್ತಾರೆಯೇ?

ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ನಡೆದಿರುವ ಮೆಡಿಕಲ್ ಸೀಟ್ ಬ್ಲಾಕಿಂಗ್ ಪ್ರಕರಣದ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ನಡುವೆ 17 ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ 212 ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕಳಿಸಿರುವ ಪಟ್ಟಿಯಲ್ಲಿಯೇ ವ್ಯತ್ಯಾಸ ಇದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಒಪ್ಪಿಕೊಂಡಿದೆ.

ಇನ್ನು, ಸರ್ಕಾರದ ಅನುಮತಿ ಮೇರೆಗೆ ಪರೀಕ್ಷೆ ಬರೆದಿರುವ 212 ವಿದ್ಯಾರ್ಥಿಗಳ ಫಲಿತಾಂಶವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತಡೆಹಿಡಿದಿದೆಯಲ್ಲದೆ, ಫಲಿತಾಂಶವನ್ನು ಬಿಡುಗಡೆ ಮಾಡಲು ಸರ್ಕಾರದ ನಿರ್ದೇಶನಕ್ಕಾಗಿ ಎದುರು ನೋಡುತ್ತಿದೆ. ಫಲಿತಾಂಶವನ್ನು ತಡೆ ಹಿಡಿದಿರುವ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ನಡೆಯೇ ವೈದ್ಯಕೀಯ ಸೀಟುಗಳ ಹಂಚಿಕೆ ಮತ್ತು ಪ್ರವೇಶ ದಾಖಲಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಮತ್ತಷ್ಟು ಬಲಗೊಳಿಸಿದೆ.

ಮೆಡಿಕಲ್ ಸೀಟ್ ಬ್ಲಾಕಿಂಗ್ ಎಂದು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಈ . ತುಕಾರಾಂ ಪರಿಗಣಿಸಿದ್ದರೂ ಪ್ರಕರಣದಲ್ಲಿ ಭಾಗಿ ಆಗಿವೆ ಎಂಬ ಆರೋಪಕ್ಕೆ ಗುರಿಯಾಗಿರುವ ಪ್ರತಿಷ್ಠಿತ 17 ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ಹಿಂದೇಟು ಹಾಕಿದೆ. ಪ್ರಕರಣದಲ್ಲಿ ತಮ್ಮ ಹಂತದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವಿದ್ದರೂ ಇದಕ್ಕೆ ಸಂಬಂಧಿಸಿದ ಕಡತವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಚೇರಿಗೆ ರವಾನಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ನಡೆ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

‘ಡೆಕ್ಕನ್ ನ್ಯೂಸ್’ ಈ ಪ್ರಕರಣವನ್ನು ಹೊರಗೆಡವುತ್ತಿದ್ದಂತೆ ಇಂದು ಬೆಳಗ್ಗೆ (05,9.2019) ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಪ್ರಕರಣದ ಬಗ್ಗೆ ಪ್ರಸ್ತಾಪವಾಗಿದೆಯಾದರೂ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿಲ್ಲ. ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಸಚ್ಚಿದಾನಂದ ಮತ್ತಿತರ ಅಧಿಕಾರಿಗಳಿಗೆ ಸೂಚಿಸಿ ಕೈತೊಳೆದುಕೊಂಡಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

ಸಭಾ ನಡಾವಳಿಯ ಪ್ರತಿ

2018-19ನೇ ಸಾಲಿನ ಪ್ರವೇಶ ದಾಖಲಾತಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಕಳಿಸಿದ್ದ ಪಟ್ಟಿ ಮತ್ತು 17 ವೈದ್ಯಕೀಯ ಕಾಲೇಜುಗಳು ಪಟ್ಟಿಯಲ್ಲಿಯೇ ವ್ಯತ್ಯಾಸವಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಕಳಿಸಿದ್ದ ಪಟ್ಟಿಯಲ್ಲಿ 212 ವಿದ್ಯಾರ್ಥಿಗಳ ಹೆಸರುಗಳು ಇರಲಿಲ್ಲ. ಪ್ರವೇಶ ದಾಖಲಾತಿಗೆ ಸಂಬಂಧಿಸಿದಂತೆ ಆಗಿರುವ ಒಪ್ಪಂದವೂ ಪಾರದರ್ಶಕವಾಗಿರಲಿಲ್ಲ ಎಂಬ ಸಂಗತಿಯೂ  ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಪ್ರಕರಣದ ಹಿನ್ನಲೆ: ಬಿಜಾಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜು(6) ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಇನ್ಸಿಟಿಟ್ಯೂಟ್ ಅಫ್ ಮೆಡಿಕಲ್ ಸೈನ್ಸ್,(24)ಈಸ್ಟ್ ಪಾಯಿಂಟ್ ಮೆಡಿಕಲ್ ಸೈನ್ಸ್(26) ಮಂಗಳೂರಿನ ಫಾ.ಮುಲ್ಲರ್ಸ್ ಮೆಡಿಕಲ್ ಕಾಲೇಜು(2)ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜು(15), ಮಂಗಳೂರು ಕಣಚೂರು ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(14) ದಕ್ಷಿಣ ಕನ್ನಡ ಸುಳ್ಯದ ಕೆವಿಜೆ ಮೆಡಿಕಲ್ ಕಾಲೇಜು(4) ಗುಲ್ಬರ್ಗಾದ ಎಂ ಆರ್ ಮೆಡಿಕಲ್ ಕಾಲೇಜು(9) ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು(10) ದಾವಣಗೆರೆಯ ಎಸ್ ಎಸ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(17)  ಬೆಂಗಳೂರಿನ ಸಪ್ತಗಿರಿ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(21) ಬಾಗಲಕೋಟೆಯ ಬಿವಿವಿ ಸಂಘದ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜು(22) ಮಂಗಳೂರಿನ ಶ್ರೀನಿವಾಸ ಇನ್ಸಿಟಿಟ್ಯೂಟ್ ಆಫ್  ಮೆಡಿಕಲ್ ಸೈನ್ಸ್(11) ಶಿವಮೊಗ್ಗದ ಸುಬ್ಬಯ್ಯ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(14) ಬೆಂಗಳೂರಿನ ವೈದೇಹಿ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(14) ಮಂಗಳೂರಿನ ಎ ಜೆ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(2), ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜುಗಳಿಗೆ ಒಟ್ಟು 212 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿತ್ತು.  

ಹಾಗೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೀಟು ಹಂಚಿಕೆ ಮಾಡಿ ಹೊರಡಿಸಿದ್ದ ಪ್ರವೇಶ ದಾಖಲಾತಿಯ ಆದೇಶದ ಪ್ರತಿಯನ್ನು 17 ಮೆಡಿಕಲ್ ಕಾಲೇಜುಗಳು ಸಲ್ಲಿಸಿರಲಿಲ್ಲ. 212 ವಿದ್ಯಾರ್ಥಿಗಳ ಪೈಕಿ ಕರ್ನಾಟಕ ರಾಜ್ಯಕ್ಕೆ ಸೇರಿದ 16 ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಉಳಿದ ವಿದ್ಯಾರ್ಥಿಗಳು ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಪಂಜಾಬ್, ನವ ದೆಹಲಿ, ತ್ರಿಪುರಾ, ಹರಿಯಾಣ ರಾಜ್ಯಕ್ಕೆ ಸೇರಿದ್ದರು.

ಈ ಪ್ರಕರಣದಲ್ಲಿ 212 ವಿದ್ಯಾರ್ಥಿಗಳು ಭಾಗಿ ಆಗಿರುವುದು ಸಹ ನನ್ನ ಗಮನಕ್ಕೆ ಬಂದಿರುತ್ತದೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಸಮಿತಿಯಿಂದ ವರದಿ ಪಡೆಯಲು ಸಮಯದ ಅಭಾವವಿರುವುದರಿಂದ ಸಮಿತಿಯ ಅಂತಿಮ ಶಿಫಾರಸ್ಸಿಗೆ ಬದ್ಧರಾಗುವ ಷರತ್ತಿಗೊಳಪಟ್ಟು ಪರೀಕ್ಷೆಗೆ ಹಾಜರಾಗಲು ಕ್ರಮ ವಹಿಸಲು ಆದೇಶಿಸಿದೆ,' ಎಂದು ಹಿಂದಿನ ಸಚಿವ ತುಕಾರಾಂ ಅವರು ಆದೇಶಿಸಿದ್ದನ್ನು ಸ್ಮರಿಸಬಹುದು.

ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಗೆ ಸೇರಿರುವ ಜೆಜೆಎಂ ಮೆಡಿಕಲ್ ಕಾಲೇಜು ಮತ್ತು ಎಸ್ ಎಸ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಂಸ್ಥೆಗಳಿಗೆ ಸೇರಿವೆ. ಅದೇ ರೀತಿ ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜು ಆದಿಕೇಶವಲು ಸಮೂಹಕ್ಕೆ, ಶಾಸಕ ವೀರಣ್ಣ ಚರಂತಿಮಠ ಅವರು ಕಾರ್ಯಾಧ್ಯಕ್ಷರಾಗಿರುವ ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ಸೇರಿದ ಮೆಡಿಕಲ್ ಕಾಲೇಜು ಕೂಡ ಈ ಪಟ್ಟಿಯಲ್ಲಿರುವುದು ವಿಶೇಷ.