ಹುತಾತ್ಮ ಅರಣ್ಯ ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ: ಯಡಿಯೂರಪ್ಪ

ಹುತಾತ್ಮ ಅರಣ್ಯ ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ:  ಯಡಿಯೂರಪ್ಪ

ಬೆಂಗಳೂರು: ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿದ್ದು ಮೃತರಾದರೆ ಅಂತಹ ಹುತಾತ್ಮರಿಗೆ  30 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ನಗರದ ಅರಣ್ಯ ಭವನದಲ್ಲಿ ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೇ. 22 ರಷ್ಟು ಮಾತ್ರ ಅರಣ್ಯ ಪ್ರದೇಶ ಉಳಿದಿದ್ದು, ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಸಿಬ್ಬಂದಿಯು ಕರ್ತವ್ಯದ ಮೇಲಿದ್ದಾಗ ಮೃತರಾದರೆ ಈವರೆಗೆ ಅವರ ಕುಟುಂಭಕ್ಕೆ 20 ಲಕ್ಷ ರೂ.ಗಳ ಪರಿಹಾರ ನೀಡುತ್ತಿದ್ದು, ಇನ್ನು ಮುಂದೆ 30 ಲಕ್ಷ ರೂ.ಗಳ ಪರಿಹಾರ ನೀಡಲಾಗುತ್ತದೆ. ಹುತಾತ್ಮರ ಕುಟುಂಬದ ಕ್ಷೇಮಾಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ ಎಂದರು.

ಅರಣ್ಯ ಸಂಪತ್ತು ರಕ್ಷಣೆಯಲ್ಲಿ ಪಿ ಶ್ರೀನಿವಾಸ್ ನಂತಹ ಅಧಿಕಾರಿಗಳು ವೀರಪ್ಪನ್ ಮೋಸದ ಬಲೆಗೆ ಮೃತರಾಗಿದ್ದಾರೆ. ಕಳ್ಳಕಾಕರ ಹಾಗೂ ವನ್ಯಜೀವಿಗಳ ದಾಳಿಗೂ ತುತ್ತಾಗಿದ್ದಾರೆ. ಸಿಬ್ಬಂದಿ ಜೊತೆಹಗೆ ಸರ್ಕಾರ ಸದಾ ಇರುತ್ತದೆ. ಇಲಾಖೆಯಲ್ಲಿ ಖಾಲಿ ಇರುವ  ಅಧಿಕಾರಿಗಳ ಹಾಗೂ ಸಿಬ್ಬಂದಿಯ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಬೇಟೆ ಹಾಗೂ ಅರಣ್ಯ ಅಕ್ರಮ  ಚಟುವಟಿಕೆಗಳ ನಿಯಂತ್ರಣಕ್ಕೆ ಅತ್ಯಾಧುನಿಕ ಸಲಕರಣೆ, ವಾಹನ ಸೌಕರ್ಯ ಒದಗಿಸಲಾಗುತ್ತದೆ ಎಂದರು.

ಕಾವೇರಿ ವನ್ಯಜೀವಿ ವಿಭಾಗದ ಕ್ಷೇಮಾಭಿವೃದ್ಧಿ ನೌಕರ ಅಲಗಾ ಹಾಗೂ ಹಾಸನ ವಿಭಾಗದ ಎಲ್.ಎಸ್. ಅಣ್ಣೇಗೌಡ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.