ಮನುಷ್ಯರೊಳಗೊಬ್ಬ 'ಮಹಾತ್ಮ'ನನ್ನು ಕಾಣುವುದೆಂದರೆ..?

"ನೀವು ಬಡವರಲ್ಲೇ ಬಡವರಂತೆ ಕಾಣುತಿದ್ದೀರಿ ಆದ್ದರಿಂದ ನಿಮಗೇ ಹುಂಡಿಯನ್ನು ವಾಪಸ್ಸು ಕೊಡುತ್ತೇನೆ.." ಎಂದು ಹುಂಡಿಯನ್ನು ಗಾಂಧೀಜಿಯವರಿಗೇ ಹಿಂದಿರುಗಿಸಿದೆ. ಗಾಂಧೀಜಿ ನೆಮ್ಮದಿಯಿಂದ ಹೊರಟರು. ಆದರೆ ಅಲ್ಲಿ ಯಾಕೋ ನಾನು ಗಾಂಧೀಜಿಯನ್ನು ಕಾಣಲೇ ಇಲ್ಲ! ಅದರ ಬದಲಿಗೆ ಒಬ್ಬ ವ್ಯಾಪಾರಸ್ಥನನ್ನು ಕಂಡೆ.! ಗಾಂಧೀಜಿಯವರದು ವ್ಯಾಪಾರಸ್ಥ ಬನಿಯಾ ಜಾತಿಯಲ್ಲವೆ? ..‌"

ಮನುಷ್ಯರೊಳಗೊಬ್ಬ 'ಮಹಾತ್ಮ'ನನ್ನು ಕಾಣುವುದೆಂದರೆ..?

ಗಾಂಧೀಜಿಯವರ ಕುರಿತಂತೆ ಆಚಾರ್ಯ ರಜನೀಶ್ ರವರು ಬರೆದಿದ್ದನ್ನು ಓದುತಿದ್ದೆ. ಗಾಂಧೀಜಿಯವರ ಬಗ್ಗೆ ಪ್ರೀತಿ, ಗೌರವ, ಮೆಚ್ಚುಗೆ ತೋರುತ್ತಲೇ ಕೊಂಚ ಭಿನ್ನವಾಗೂ ಯೋಚಿಸುವ ಓಶೋ ರವರು ಗಾಂಧೀಜಿಯವರನ್ನು ಸ್ವಲ್ಪ ಟೀಕೆಗೂ ಒಳಪಡಿಸುತ್ತಾರೆ!? ತಮಾಷೆಯೂ ಮಾಡುತ್ತಾರೆ! ಮೂಲತಃ ಓಶೋ ಅವರದು ನೇರ, ನಿಷ್ಟುರ ಮತ್ತು ತುಂಟತನದ ಸ್ವಭಾವ. ಇದೇ ರೀತಿ ಲಂಕೇಶರು ಗಾಂಧೀಜಿಯವರನ್ನು ಗ್ರಹಿಸಿದ್ದನ್ನು ಕೂಡ ನಾವು ಹತ್ತಿರದಿಂದ ನೋಡಿದ್ದೇವೆ.

ಓಶೋ ತಮ್ಮ ಬಾಲ್ಯದ ಒಂದೆರಡು ನೆನಪುಗಳನ್ನು ಬಿಚ್ಚಿಡುತ್ತಾ ಅವರದೇ ಮಾತುಗಳಲ್ಲಿ ಹೀಗೆ ಹೇಳುತ್ತಾರೆ... 

"ಆಗ ನನಗೆ ಹತ್ತು ವರ್ಷ ವಯಸ್ಸು ನಮ್ಮ ಗ್ರಾಮಕ್ಕೆ ಹತ್ತಿರದ ರೈಲ್ವೆ ಸ್ಟೇಷನ್ ಮೂಲಕ ಗಾಂಧೀಜಿಯವರು ಹೋಗಲಿದ್ದು ನಾನು‌ ಗಾಂಧೀಜಿಯವರನ್ನು ನೋಡಲು ಹೊರಟೆ. ಹತ್ತಿರವೆಂದರೆ ಹತ್ತಿರವಲ್ಲ, ಹತ್ತಾರು ಮೈಲು ದೂರ. ನನ್ನ ಅಜ್ಜಿ ನನಗೆ ಮಸ್ಲಿನ್ ಬಟ್ಟೆ ತೊಡಿಸಿ ಜೇಬಲ್ಲಿ ಮೂರು ರೂಪಾಯಿ ಇಟ್ಟು ಕಳಿಸಿದರು. ಆಗಿನ ಕಾಲಕ್ಕೆ ಮೂರು ರೂಪಾಯಿ ಅಂದರೆ ದೊಡ್ಡ ಹಣ! ರೈಲು ಸರಿಯಾದ ಸಮಯಕ್ಕೆ ಬಾರದೆ ಇದ್ದರೆ, ಗಾಂಧೀಜಿ ಬರುವುದು ತಡವಾದರೆ ಹಸಿದುಕೊಂಡಿರಬಾರದಲ್ಲವೆ? ಅದಕ್ಕೆ ಊಟ ತಿಂಡಿಗಾಗಿ ಅಜ್ಜಿ ಮೂರು ರೂಪಾಯಿ ನನಗೆ ಕೊಟ್ಟಿದ್ದರು. ಗಾಂಧೀಜಿಯನ್ನು ನೋಡಲು ಬಂದಿದ್ದ ಕೆಲವರೊಂದಿಗೆ ಕಾಯುತಿದ್ದಾಗ ಅವರು ನನಗೆ ಹಣ್ಣು ಬಿಸ್ಕತ್ ಕೊಟ್ಟ ಕಾರಣಕ್ಕೆ ನಾನು ಆ ಹಣವನ್ನು ಖರ್ಚು ಮಾಡದೆ ಹಾಗೇ ಇಟ್ಟುಕೊಂಡಿದ್ದೆ. ಗಂಟೆಗಟ್ಟಲೆ ಕಾದರೂ ರೈಲು ಬರಲಿಲ್ಲ. ಈ ಕಾರಣಕ್ಕೆ ಜನ ಎಲ್ಲಾ ಒಬ್ಬೊಬ್ಬರಾಗಿ ಹೊರಟು ಹೋದರು. ನಾನು ಹಠಮಾರಿಯಾದ್ದರಿಂದ ಗಾಂಧೀಜಿಯವರನ್ನು ನೋಡಲೇಬೇಕೆಂದು ತೀರ್ಮಾನಿಸಿ ಒಬ್ಬನೇ ಸ್ಟೇಷನ್ ನಲ್ಲಿ ಉಳಿದೆ.  ಸುಮಾರು ಹದಿಮೂರು ಗಂಟೆ ತಡವಾಗಿ ಬಂದ ರೈಲು ಬೆಳಗಿನ ಜಾವ ನಾಲ್ಕೂವರೆಗೆ ನಾವಿದ್ದ ನಿಲ್ದಾಣಕ್ಕೆ ಬಂತು. ಅದು ಮೂರನೇ ಧರ್ಜೆಯ ಬೋಗಿ ಅಂದರೆ ಥರ್ಡ್ ಕ್ಲಾಸ್ ಕಂಪಾರ್ಟಮೆಂಟ್, ಗಾಂಧೀಜಿಯವರು ಥರ್ಡ್ ಕ್ಲಾಸ್ ಬೋಗಿಯಲ್ಲಿ ಓಡಾಡುವುದೇ ಅವರ ಸರಳತೆಯ ಸಿದ್ದಾಂತ. ಅದಕ್ಕೆ ಅವರು ಥರ್ಡ್ ಕ್ಲಾಸಿನಲ್ಲೇ ಬಂದರು. ಸುಮಾರು ಅರವತ್ತು ಜನ ಕೂರುವ ಬೋಗಿಯಲ್ಲಿ ಗಾಂಧೀಜಿಯವರು, ಅವರ ಸಹಾಯಕ ಮತ್ತು ಕಸ್ತೂರಿ ಬಾ ಮಾತ್ರ ಇದ್ದರು! ಇಡೀ ಬೋಗಿಯನ್ನು ಅವರು ಮೂವರಿಗಾಗೇ ಮೀಸಲಿರಿಸಲಾಗಿತ್ತು. ಆ ಮೂರನೇ ದರ್ಜೆ ಬೋಗಿ ಗಾಂಧೀಜಿಯವರು ಪ್ರಯಾಣಿಸುವ ಕಾರಣಕ್ಕೆ ಬಹಳ ನಾಜೂಕಾಗಿತ್ತು, ಅದು ಒಂದನೇ ದರ್ಜೆಗಿಂತಲೂ ಚೆನ್ನಾಗಿತ್ತು, ಒಂದು ರೀತಿಯಲ್ಲಿ ಒಂದನೇ ದರ್ಜೆಗಿಂತಲೂ ವಿಶೇಷವಾಗಿದ್ದಂತಿತ್ತು! ಅಂತಹ ಬೋಗಿಗೆ 'ಮೂರನೆ ದರ್ಜೆ' ಎಂಬ ಫಲಕ ಹಾಕಿ ಗಾಂಧೀಜಿಯವರ ಸರಳತೆಯ ಸಿದ್ದಾಂತವನ್ನು ಕಾಪಾಡಲಾಗಿತ್ತು"

"ಸ್ಟೇಷನ್ ಮಾಸ್ಟರ್ ಹಾಗೂ ನನ್ನನ್ನು ಹೊರತುಪಡಿಸಿದರೆ ಇನ್ಯಾರೂ ನಿಲ್ದಾಣದಲ್ಲಿ ಇರಲಿಲ್ಲ. ಬೆಳಿಗ್ಗೆಯಿಂದ ನಾನು ಗಾಂಧೀಜಿಗಾಗಿ ಕಾಯುತಿದ್ದಿದ್ದನ್ನು ನೋಡಿದ್ದ ಸ್ಟೇಷನ್ ಮಾಸ್ಟರ್ ನನ್ನನ್ನು ಗಾಂಧೀಜಿಯವರ ಬಳಿ ಕರೆದೊಯ್ದರು. ನಾನು ಬೆಳಿಗ್ಗೆಯಿಂದಲೂ ಅವರಿಗಾಗಿ ಕಾದಿರುವ ಬಗ್ಗೆ ಗಾಂಧೀಜಿಯವರಿಗೆ ಹೇಳಿದರು. ಗಾಂಧೀಜಿಯವರು ನನ್ನನ್ನು ಹತ್ತಿರ ಕರೆದರು, ನಾನು ಹತ್ತಿರ ಹೋದೆ. ಗಾಂಧೀಜಿಯವರು ನನ್ನ ಮುಖ ನೋಡದೇ ನೇತಾಡುತಿದ್ದ ನನ್ನ ಜೇಬು ನೋಡಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತು! ಜೇಬನ್ನು ನೋಡಿ "ಇದೇನಿದು..?" ಅಂದರು,  "ಮೂರು ರೂಪಾಯಿ" ಅಂದೆ. "ಅದನ್ನು ಈ ಹುಂಡಿಗೆ ಹಾಕು.." ಅಂದರು.‌ ಅದೊಂದು ನಾಣ್ಯ ಹಾಕುವಷ್ಟು ತೂತಿರುವ ಹುಂಡಿ, ನಾವು ಹಾಕಿದ ನಾಣ್ಯ ಆ ತೂತಿನ ಒಳಗೆ ಬಿದ್ದರೆ ಹುಂಡಿಯಲ್ಲಿನ‌ ಕತ್ತಲಲ್ಲಿ ಕರಗಿ ಹೋಗುತ್ತದೆ.‌ ಅದು ಹೊರಬರುವುದು ಗಾಂಧೀಜಿ ಬಳಿ ಇರುವ ಬೀಗದ ಕೈಯಿಂದ ಬೀಗ ತೆಗೆದಾಗ ಮಾತ್ರ."

"ನನ್ನ ಹಣವನ್ನು ನಿಮ್ಮ ಹುಂಡಿಗೆ ಯಾಕೆ ಹಾಕಬೇಕು..?" ಎಂದೆ.‌ "ಈ ಹಣ ಬಡವರಿಗಾಗಿ ವಿನಿಯೋಗವಾಗುತ್ತೆ‌" ಅಂದರು. "ಹಾಗಾದರೆ ಸರಿ" ಎಂದ ನಾನು, ಮೂರು ರೂಪಾಯಿ ನಾಣ್ಯಗಳನ್ನು ಹುಂಡಿಗೆ ಹಾಕಿ ಆ ಹುಂಡಿಯನ್ನೇ ಕೈಯಲ್ಲಿಡಿದು ಹೊರಡಲು ಅನುವಾದೆ! ಗಾಂಧೀಜಿ‌ "ಏನು ಮಾಡ್ತಿದೀಯ..? ಅದು ಬಡವರಿಗಾಗಿ ಇಟ್ಟ ಹಣ..!" ಎಂದು ಗಾಬರಿಯಾದರು "ನಮ್ಮ ಊರಿನಲ್ಲೂ ಬಡವರಿದ್ದಾರೆ.. ಈ ಹುಂಡಿ ಹಣವನ್ನು ಅವರಿಗೇ ಕೊಡುತ್ತೇನೆ.." ಎಂದೆ, ಗಾಂಧೀಜಿಗೆ ಪೇಚಾಟಕ್ಕಿಟ್ಟುಕೊಂಡಿತು! ತನ್ನ ಸಹಾಯಕನ ಮುಖ ನೋಡಿದರು ಆತ ಮುಖದಲ್ಲೇ ಅಸಹಾಯಕತೆ ವ್ಯಕ್ತಪಡಿಸಿದ, ಪತ್ನಿ ಕಸ್ತೂರಿ ಬಾ ಕಡೆ ನೋಡಿದರು " ಹೋಗ್ಲಿ ಬಿಡಿ ನಿಮ್ಮಂತವನೇ ನಿಮಗೆ‌ ಸಿಕ್ಕ.. ನೀವು ಬೇರೆಯವರನ್ನು ವಂಚಿಸಿ ಹಣ ಸಂಗ್ರಹಿಸುತಿದ್ದಿರಿ ಇವನು ಈ ಹುಂಡಿಯನ್ನೇ ಕೊಂಡೊಯ್ಯುತಿದ್ದಾನೆ.. ಒಳ್ಳೆಯದೇ ಆಯಿತು.. ನನಗೂ ಅನೇಕ ವರ್ಷಗಳಿಂದ ಆ ಹುಂಡಿಯನ್ನು ನೋಡಿ ನೋಡಿ ಸಾಕಾಗಿತ್ತು.. ಅದು ಸದಾ ನಿಮ್ಮ ಬಳಿ ಇನ್ನೊಬ್ಬ ಹೆಂಡತಿಯಂತಿರುತಿತ್ತು..."ಎಂದರು. ಗಾಂಧೀಜಿ ಚಿಂತಿಸತೊಡಗಿದರು. "ನೀವು ಬಡವರಲ್ಲೇ ಬಡವರಂತೆ ಕಾಣುತಿದ್ದೀರಿ ಆದ್ದರಿಂದ ನಿಮಗೇ ಹುಂಡಿಯನ್ನು ವಾಪಸ್ಸು ಕೊಡುತ್ತೇನೆ.." ಎಂದು ಹುಂಡಿಯನ್ನು ಗಾಂಧೀಜಿಯವರಿಗೇ ಹಿಂದಿರುಗಿಸಿದೆ. ಗಾಂಧೀಜಿ ನೆಮ್ಮದಿಯಿಂದ ಹೊರಟರು. ಆದರೆ ಅಲ್ಲಿ ಯಾಕೋ ನಾನು ಗಾಂಧೀಜಿಯನ್ನು ಕಾಣಲೇ ಇಲ್ಲ! ಅದರ ಬದಲಿಗೆ ಒಬ್ಬ ವ್ಯಾಪಾರಸ್ಥನನ್ನು ಕಂಡೆ.! ಗಾಂಧೀಜಿಯವರದು ವ್ಯಾಪಾರಸ್ಥ ಬನಿಯಾ ಜಾತಿಯಲ್ಲವೆ? ..‌"

"ಗಾಂಧೀಜಿಯವರು ಭಗವದ್ಗೀತೆಯನ್ನು ನನ್ನ ತಾಯಿ ಎಂದು ಹೇಳುತ್ತಲೇ "ನನ್ನ ಪಾಲಿಗೆ ಹಿಂದೂ ಮುಸ್ಲಿಂ ಒಂದೇ ತಾಯಿಯ ಮಕ್ಕಳು.." ಎನ್ನುತ್ತಾರೆ. ನನಗಾಗ ಹದಿನೇಳು ವರ್ಷ ವಯಸ್ಸು..  ಗಾಂಧೀಜಿಯವರಿಗೆ ನಾನೊಂದು ಪತ್ರ ಬರೆದು "ಭಗವದ್ಗೀತೆ ಹಿಂದುಗಳ ಧರ್ಮಗ್ರಂಥ, ಅದು ನಿಮ್ಮ ತಾಯಿಯಾದರೆ ಖುರಾನ್ ನಿಮ್ಮ ತಂದೆಯೇ..? ಚಿಕ್ಕಪ್ಪನೇ, ದೊಡ್ಡಪ್ಪನೇ ಹೇಳಿ?" ಎಂದು ಬರೆದೆ, ಅವರು ಉತ್ತರಿಸಲಿಲ್ಲ! ಅವರ ಮಗ ರಾಮದಾಸ್ ನನ್ನ ಗೆಳೆಯ, ಆತನನ್ನು ನನ್ನ ಪತ್ರದ ಬಗ್ಗೆ ಕೇಳಿದೆ "ತಂದೆಯವರಿಗೆ ನಿಮ್ಮ ಪತ್ರ ಸಿಕ್ಕಿದೆ, ಅವರಿಗೆ ಉತ್ತರಿಸಲಾಗುತ್ತಿಲ್ಲ.." ಎಂದ. "ಅಹಿಂಸೆಯನ್ನು ಬೋಧಿಸುವ ನೀವು ಹಿಂಸೆಗೆ ಪ್ರಚೋದನೆ ನೀಡುವ ಗೀತೆಯನ್ನು ಯಾಕೆ ನಂಬುತ್ತೀರಿ.‌." ಎಂದು ಮತ್ತೊಂದು ಪತ್ರ ಬರೆದೆ, ಅದಕ್ಕೂ  ನನಗೆ ಗಾಂಧೀಜಿ ಉತ್ತರಿಸಲಿಲ್ಲ.!"

"ಬಿಹಾರದಲ್ಲಿ ಭೂಕಂಪವಾದಾಗ ಗಾಂಧೀಜಿಯವರು 'ಮನುಷ್ಯ ಮಾಡುತ್ತಿರುವ ಪಾಪಕ್ಕೆ ದೈವ ಮುನಿಸು ತೋರಿಸುತ್ತಿದೆ' ಎಂಬ ಹೇಳಿಕೆ ನೀಡಿದ್ದರು. ನಾನು ಮತ್ತೊಂದು ಪತ್ರ ಬರೆದು " ಪಾಪ ಮಾಡುವವರು ಕೇವಲ ಬಿಹಾರಿನಲ್ಲಿ ಮಾತ್ರ ಇದ್ದಾರೆಯೇ..? ಜಗತ್ತಿನಲ್ಲಿ ಪಾಪ ಮಾಡುವವರು ಇಲ್ಲವೆ..? ಅಂತವರಿಗೆ ಶಿಕ್ಷೆ ನೀಡಲು ಇಡೀ ಜಗತ್ತಿನಲ್ಲೇಕೆ ಭೂಕಂಪ ಸಂಭವಿಸಲಿಲ್ಲ.‌.?" ಎಂದು ಕೇಳಿದ್ದೆ. ಅದಕ್ಕೂ ಗಾಂಧೀಜಿ ಉತ್ತರಿಸಲಿಲ್ಲ! ಅವರ ಮಗನನ್ನು ಮತ್ತೇ ನನ್ನ ಪತ್ರದ ಬಗ್ಗೆ ಕೇಳಿದಾಗ "ನಿನ್ನ ಪತ್ರವನ್ನು ನಮ್ಮ ತಂದೆ ಓದಿ, ಹರಿದು ಕಿಟಕಿಯಲ್ಲಿ ಬಿಸಾಕಿದರು" ಎಂದ"

ಹೀಗೆ ಓಶೋ ಸಣ್ಣವರಿದ್ದಾಗ ಗಾಂಧೀಜಿಯವರಿಗೆ ಮುಜುಗರ ಮಾಡಿ ಗೋಳು ಹೊಯ್ದುಕೊಳ್ಳುತಿದ್ದುದನ್ನು ದಾಖಲಿಸುತ್ತಾ, ನಂತರದಲ್ಲಿ ಓಶೋ ಪ್ರಬುದ್ದರಾದ ಮೇಲೂ ಗಾಂಧೀಜಿಯವರನ್ನು ನಿಕಷಕ್ಕೊಡ್ಡಿ ಅವರಲ್ಲಿನ‌ "ಮಹಾತ್ಮ" ನನ್ನು ನೋಡಲು ಪ್ರಯತ್ನಿಸುತ್ತಾರೆ. ಇದು ನನ್ನಂತವರಿಗೆ ಇಷ್ಟವಾಯಿತು.

ಗಾಂಧೀಜಿಯ ನೂರೈವತ್ತು ವರ್ಷಗಳ ಜನ್ಮದಿನಾಚರಣೆಯನ್ನು ಮಾಡುತ್ತಿರುವ ಈ ಸಂಧರ್ಭದಲ್ಲಿ. ಗಾಂಧೀಜಿ ಮೇಲಿನ ವಿಶೇಷ ಬರಹಗಳನ್ನು ನೋಡುತ್ತಿದ್ದೆ. ಗಾಂಧೀಜಿಯವರನ್ನು ವೈಭವೀಕರಿಸುವುದರಲ್ಲಿ ಪೈಪೋಟಿಗೆ ಬಿದ್ದಂತೆ ಗಾಂಧೀವಾದಿಗಳು ಬರೆಯುತ್ತಿರುವುದನ್ನು ಹೋಲಿಸಿದಾಗ ಓಶೋ ಅಂತವರು ಪ್ರೀತಿ, ಮೆಚ್ಚುಗೆಗಳೊಂದಿಗೆ ಒಂದಷ್ಟು ತಮಾಷೆ, ತುಂಟತನಗಳಿಂದ  ಗಾಂಧೀಜಿಯವರನ್ನು ನೋಡುವುದನ್ನು ಓದಿದ್ದೆ ಖುಷಿ ನೀಡಿತು, ಮನಸ್ಸಿಗೆ ಮುದ ನೀಡಿತು! ಇಂದು ಭಾನುವಾರ ಗಾಂಧೀ ಜಯಂತಿಗೆ ಇನ್ನೂ ಮೂರುನಾಲ್ಕು ದಿನಗಳಿವೆ, ಆದರೆ ಕನ್ನಡದ ಪ್ರಮುಖ ಪತ್ರಿಕೆಯೊಂದು ಇಂದಿನ ಇಡೀ ಪುರವಣಿಯನ್ನು ಗಾಂಧೀಸ್ಮರಣೆಗಾಗಿ ಮೀಸಲಿಟ್ಟಿದ್ದು ಸ್ವಾಗತಾರ್ಹ,  ಆದರೆ ಇಲ್ಲಿ ಗಾಂಧೀಜಿಯವರನ್ನು ಮಹಾತ್ಮರನ್ನಾಗಿ ಹೊರತುಪಡಿಸಿ, ಒಬ್ಬ ಮನುಷ್ಯರನ್ನಾಗಿ ಕಾಣುವ ನೋಟವೇ ಇರಲಿಲ್ಲ! ಓಶೋ ಅವರು ಗಾಂಧೀಜಿಯಲ್ಲಿ ಒಬ್ಬ ಮಹಾತ್ಮ ಮತ್ತು ಬನಿಯನನ್ನು ನೋಡಿದಂತೆ ಯಾರೂ ವಾಸ್ತವದ ಕಣ್ಣಿಂದ ನೋಡದೆ ಗಾಂಧೀಜಿಯವರನ್ನು ವೈಭವೀಕರಿಸುತ್ತಿರುವವರನ್ನು ಕಂಡರೆ ನಮಗೂ ಅನೇಕ ಅನುಮಾನಗಳು ಬಾರದಿರವು!? ಗಾಂಧೀಜಿ ಬನಿಯಾ ಆಗಿರದಿದ್ದರೆ ಇವರ ಬರಹಗಳು ಹೇಗಿರುತ್ತಿದ್ದವು? ಈ ಕಾರಣಕ್ಕೆ ಈ ಬರಹಗಾರರ ಜಾತಿಗಳು ಅನಿವಾರ್ಯವಾಗಿ ಕಣ್ಣಮುಂದೆ ಬಂದವು!  ಕಳೆದ ವರ್ಷ ಡಾ.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಂಕದಂದು ಡಾ.ಅಂಬೇಡ್ಕರ್ ಬಗ್ಗೆ ಒಂದು‌ ಅಕ್ಷರವನ್ನೂ ಬರೆಯದ ಕನ್ನಡದ ಪ್ರಮುಖ ದಿನ ಪತ್ರಿಕೆಯೊಂದು ಅಂದೂ ಕೂಡ ಗಾಂಧೀಜಿಯವರನ್ನು ಕುರಿತೇ ಲೇಖನ ಪ್ರಕಟಿಸುತ್ತೆ! ಪತ್ರಿಕೆಗಳ ಪೂರ್ವಾಗ್ರಹಗಳನ್ನು ತೋರಿಸಲು ಈ ಮಾತುಗಳನ್ನು ಹೇಳುತಿದ್ದೇನೆ. 

ತಮ್ಮನ್ನು ಗಾಂಧೀವಾದಿಗಳೆಂದು ಕರೆದುಕೊಳ್ಳುವ ಕೆಲ ಗಾಂಧೀವಾದಿಗಳು ತಮ್ಮ ಗಾಂಧೀಪ್ರೀತಿಯನ್ನು ಕೇವಲ ಗಾಂಧೀಜಿಯ ಪ್ರಶಂಸೆಯ ಬರಹಕ್ಕೆ, ತಾವು ತೊಡುವ ಖಾದಿಗೆ, ಸರಳತೆ ಕುರಿತ ಭಾಷಣಕ್ಕೆ ಸೀಮಿತಗೊಳಿಸುತ್ತಾರೆ. ಬಹುತೇಕ ಮೇಲ್ಜಾತಿಗೆ ಸೇರಿದ ಇವರು ಗಾಂಧೀಜಿಯ ಬಗ್ಗೆ ಮಾತನಾಡುವಾಗ ಅತ್ಯಂತ ಎಚ್ಚರದಿಂದ ಅಂಬೇಡ್ಕರ್ ಅವರನ್ನು ಕೇವಲ ಉಪ್ಪಿನಕಾಯಂತೆ ಬಳಸುತ್ತಾರೆ! ಇಲ್ಲಿ ಅಂಬೇಡ್ಕರ್ ಅವರು ಕಂಡೂ ಕಾಣದಂತಿರಬೇಕು! ಗಾಂಧೀಜಿಯವರನ್ನು ಮಾರ್ಕ್ಸ್ ಮತ್ತು ಲೋಹಿಯಾ ಜತೆ ಇಟ್ಟು ದಾರಾಳವಾಗಿ ತೂಗಿ ನೋಡುವ ಪ್ರಜ್ಞೆ ಅಂಬೇಡ್ಕರ್ ಅವರೊಂದಿಗೆ ನೋಡಬೇಕಾದಾಗ ಇರುವುದಿಲ್ಲ! 'ಪೂನಾ ಪ್ಯಾಕ್ಟ್' ನ ಸತ್ಯ ಕಣ್ಣ ಮುಂದೆ ಇದ್ದಾಗಲೂ ಇದನ್ನು ಕನಿಷ್ಟ ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಇಲ್ಲದಿದ್ದಲ್ಲಿ ಸಾಂದರ್ಭಿಕವಾಗಿಯಾದರೂ ವಿಶ್ಲೇಷಿಸುವ ಕಡೆಗೂ ಯೋಚಿಸದೆ ತಣ್ಣಗೆ  ಗಾಂಧೀ ಭಜನೆ ಮಾಡುತ್ತಾರೆ! ಇಲ್ಲಿ ಗಾಂಧೀಜಿ ಅವರಿಗೆ ಹಿಂದೂ ಮನಸ್ಸಿನ ಸಾರ್ವತ್ರಿಕ ವಲಯ ಹೇಗೆ ಯಶಸ್ಸನ್ನು ತಂದು ಕೊಟ್ಟಿತು ಎನ್ನಲಿಕ್ಕೆ ಇವು ಉದಾಹರಣೆಗಳಷ್ಟೇ. ಇದೇ ಕಾರಣಕ್ಕೇ ದಲಿತ ಮನಸ್ಸು ಇದನ್ನು ಸಂದೇಹದಿಂದ ನೋಡುವಂತೆಯೂ ಮಾಡಿತು!  ಆದರೆ ಈ ಸಂದೇಹಗಳ ನಿವಾರಣೆಗೆ ಬದಲು ಪ್ರಶ್ನೆ ಮಾಡುವ ಅಂಬೇಡ್ಕರ್ ಯುವ ಅಬಿಮಾನಿಗಳ ಪ್ರಶ್ನೆಯಲ್ಲಿನ ತಾತ್ವಿಕತೆಗೆ ಉತ್ತರಿಸದೆ ಆ ಹುಡುಗರ ಭಾವುಕ ಭಾಷೆಯನ್ನೇ ತಪ್ಪಾಗಿ ತೋರಿಸಿ ಆ ಹುಡುಗರಿಗೆ ಕಪ್ಪು ಮಸಿ ಬಳಿಯುತ್ತಾರೆ!

ಗಾಂಧೀಜಿಯವರ ಬಗ್ಗೆ ಕ್ರಿಟಿಕಲ್ ಆಗಿರುವವರು ಈಗಷ್ಟೇ ಇಲ್ಲ. ಸ್ವಾತಂತ್ರ ಸಂಗ್ರಾಮದ ಕಾಲದಲ್ಲೂ ಗಾಂಧೀಜಿಯವರ ವಿರುದ್ದದ ವಿಭಿನ್ನ ಧ್ವನಿ ಇತ್ತು. ಭಗತ್ ಸಿಂಗ್, ರಾಜಗುರು, ಸುಖದೇವ್ ಅಂತಹ ಯುವ ಕ್ರಾಂತಿಕಾರಿಗಳೊಂದಿಗೆ  ನೇತಾಜಿ ಸುಭಾಶ್ಚಂದ್ರ ಬೋಸ್, ರಾಮಮನೋಹರ ಲೋಹಿಯಾ, ಪೆರಿಯಾರ್ ಇದ್ದಂತೆ ಬಾಬಾಸಾಹೇಬ ಅಂಬೇಡ್ಕರ್ ಅವರೂ ಕ್ರಿಟಿಕಲ್ ಆಗಿ ನೋಡುತಿದ್ದರು. ಆದರೆ ಅಂಬೇಡ್ಕರ್ ಅವರು ಎಂದೂ ಗಾಂಧೀಜಿಯವರನ್ನು ದ್ವೇಷಿಸಲಿಲ್ಲ.  ಪ್ರತ್ಯೇಕ ಚುನಾಯಿಕೆಗಳ ವಿಷಯದಲ್ಲಿ ಉಪವಾಸ ಕುಂತ ಗಾಂಧೀಜಿಯವರ ಪ್ರಾಣ ಉಳಿಸಲು ಅಂಬೇಡ್ಕರ್ ಅವರು ತಮ್ಮ ಬದುಕಿನ ಬಹುಮುಖ್ಯ ಕಾಳಜಿಯನ್ನೇ ಕೈಬಿಟ್ಟರು! ಗಾಂಧೀಜಿಯವರ ಬಗ್ಗೆ ಪ್ರೀತಿ, ಕಾಳಜಿಗಳು ಇಲ್ಲದಿದ್ದರೆ ಬಾಬಾಸಾಹೇಬರು ಇಂತಹ ತ್ಯಾಗ ಮಾಡಲು ಸಾಧ್ಯವಾಗುತಿತ್ತೆ?

ಗಾಂಧೀಜಿಯವರ ರೇಖಾಚಿತ್ರವನ್ನು ಬರೆಯಲು ಕಲಾವಿದರೆ ಬೇಕಿಲ್ಲ, ಗೆರೆ ಎಳೆಯುವುದನ್ನು ಅರಿತ ಒಂದು ಸಣ್ಣ ಮಗು ಸಾಕು! ಗಾಂಧೀಜಿಯವರನ್ನು ಸುಂದರವಾಗಿ ಚಿತ್ರಿಸಬಲ್ಲದು, ಗಾಂಧೀಜಿಯೆಂದರೆ ಹೊರನೋಟಕ್ಕೆ ಅಷ್ಟು ಸರಳ! ಆದರೆ ಗಾಂಧೀಜಿಯ ಒಳ ವ್ಯಕ್ತಿತ್ವ ಅರಿಯಲು ಜನ ಸಾಮಾನ್ಯರಿಗೆ ಸಾಧ್ಯವಿಲ್ಲ!? ಅದಕ್ಕೊಬ್ಬ ಮುತ್ಸದ್ದಿ ಚಿಂತಕ, ಆಳಗಳನ್ನು ಕೆದಕಬಲ್ಲ ಮಹಾ ಸಾಹಿತಿ, ಎಲ್ಲಾ ಪಟ್ಟುಗಳನ್ನು ಬಲ್ಲ ರಾಜಕಾರಣಿ, ಅಸಮಾನ್ಯ  ಸಾಮಾಜಿಕ ಕಾರ್ಯಕರ್ತ, ಮನುಷ್ಯನ ಆಳದ ಸ್ಥಿತ್ಯಂತರಗಳನ್ನು ಅರಿತ ಮನಶಾಸ್ತ್ರಜ್ಞ, ಮಾನವ ಗುಣಾವಗುಣಗಳನ್ನು ಆಳವಾಗಿ ಅರಿತ  ಮಾನವಶಾಸ್ತ್ರಜ್ಞ ಎಲ್ಲರೂ ಬೇಕು!? 

ಗಾಂಧೀಜಿಯ ಗೊಂಬೆಗೆ ಅಥವಾ ಚಿತ್ರಕ್ಕೂ ಗುಂಡುಹೊಡೆದು ನೆತ್ತರು ಸುರಿಸುವ ವಿಕೃತ ರಕ್ತಪಿಪಾಸುಗಳ ಕಾಲಘಟ್ಟದಲ್ಲಿ ಗಾಂಧೀಜಿಯವರ 150ನೇ ಹುಟ್ಟುಹಬ್ಬವನ್ನು ಆಚರಿಸುತಿದ್ದೇವೆ. ಇದೇ ಸಮಯದಲ್ಲಿ ಗಾಂಧೀಜಿಯ ಹಂತಕ ಪೂಜಾರ್ಹನಾಗಿ, ದೇಶಭಕ್ತನಾಗಿ, ಪ್ರಶಂಶಾತ್ಮನಾಗಿ ದೇಶವನ್ನು ಆಕ್ರಮಿಸಿಕೊಳ್ಳುತಿದ್ದಾನೆ! ಇದನ್ನು ತೀವ್ರವಾಗಿ ಖಂಡಿಸುವುದರೊಂದಿಗೆ ಇದು ಚರ್ಚೆಗೂ ಅರ್ಹವಲ್ಲ ಎಂದು ಇದನ್ನು ಬದಿಗಿಟ್ಟು ನಿರಾಕರಿಸಿ, ನಿಜವಾಗಿಯೂ ನಮಗೆ ಬೇಕಾದ ಗಾಂಧೀಜಿಯ ಕಡೆ ನಾವು ನೋಡಬೇಕಿದೆ. ಆದರೆ ನಮಗೆ ಕಾಣುತ್ತಿರುವುದು ಗಾಂಧೀಜಿಯವರನ್ನು ಅಪ್ಪಟ ಗಾಂಧೀವಾದಿಗಳು ಮತ್ತು ಗಾಂಧೀಜಿಯವರ ಭಕ್ತಗಣ ಹೇಗೆ ನೋಡುತ್ತಿದೆ ಎಂಬುದಷ್ಟೇ! ಇಲ್ಲಿ ನಮಗೆ ಗಾಂಧೀಜಿ ಕಾಣುತ್ತಿಲ್ಲ! ನಾವು ಗಾಂಧೀಜಿಯವರನ್ನು ನಿಷ್ಕಲ್ಮಷವಾಗಿ, ನೇರವಾಗಿ ನೋಡಬೇಕು ನಾವು ಗಾಂಧೀಜಿಯವರನ್ನು ಕೇವಲ ಉಪಮೆಗಳಲ್ಲಿ ಅರಿಯಲು ಸಾಧ್ಯವಿಲ್ಲ. ಗಾಂಧೀಜಿಯವರನ್ನು ನಾವು ಮನುಷ್ಯರನ್ನಾಗಿ ನೋಡುತ್ತಾ ಮಹಾತ್ಮರನ್ನಾಗಿ ಗ್ರಹಿಸಬೇಕು, ಮನನ ಮಾಡಿಕೊಳ್ಳಬೇಕು, ಅರ್ಥಮಾಡಿಕೊಳ್ಳಬೇಕು ಎಂಬ ಕಾಳಜಿಯಿಂದ, ನಮ್ಮೊಳಗೆ ಗಾಂಧೀಜಿ ಎಷ್ಟು ನೆಲೆಯೂರಿದ್ದಾರೆ, ಎಷ್ಟು ಉಳಿದಿದ್ದಾರೆ ಎನ್ನುವುದನ್ನು ನಮ್ಮೊಳಗೆ ನಾವು ನೋಡಿಕೊಳ್ಳಲು ನಮಗೆ ಸಾಧ್ಯವಾಗಬೇಕು.