'ಮೀನುಗಾರರು ಕೂಡ ಮಧ್ಯಮ ವರ್ಗದವರು':ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

'ಮೀನುಗಾರರು ಕೂಡ ಮಧ್ಯಮ ವರ್ಗದವರು':ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ದೆಹಲಿ: ಕೊರೋನಾ ಲಾಕ್ ಡೌನ್ ನಂತರ ಕೇಂದ್ರ ಸರ್ಕಾರ ಪ್ರಕಟಿಸಿರುವ ಆರ್ಥಿಕ ಪ್ಯಾಕೇಜ್ ತೀರಾ ಕಡಿಮೆಯಾಗಿದೆ ಎಂದು ಟೀಕಿಸಿದವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಉತ್ತರ ಕೊಟ್ಟಿದ್ದಾರೆ.

ಸಂಸ್ಥೆಗಳ ಮೂಲಕ ಆರ್ಥಿಕತೆಯನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಲು ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಪಡೆದಿದೆ. ದ್ರವ್ಯತೆ ಹರಿವು ಜೂನ್ 1ರಿಂದ ಆರಂಭವಾಗಲಿದ್ದು ಬ್ಯಾಂಕ್ ಅಧಿಕಾರಿಗಳಲ್ಲಿ ಭೀತಿಯನ್ನು ಹುಟ್ಟಿಸಿದ ಅನೇಕ ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದರು.

ಬ್ಯಾಂಕ್ ಅಧಿಕಾರಿಗಳಲ್ಲಿ 3ಸಿಗಳ ಬಗ್ಗೆ(ಸಿಬಿಐ, ಸಿವಿಸಿ ಮತ್ತು ಸಿಎಜಿ) ಭಯವಿದೆ. ಅದನ್ನು ಸಭೆಯಲ್ಲಿ ಚರ್ಚೆ ನಡೆಸಿ ಆದೇಶಗಳು ಮತ್ತು ಅಧಿಸೂಚನೆಗಳನ್ನು ಗುರುತಿಸಲಾಗಿದೆ. ಬ್ಯಾಂಕಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ರೀತಿಯ ತಪ್ಪುಗ್ರಹಿಕೆಗಳು ನಡೆಯಬಾರದು ಎಂದು ಇವುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಜೊತೆಗೆ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ.

ಕೊರೋನಾ ವೈರಸ್ ಆರ್ಥಿಕತೆ ಮೇಲೆ ಬೀರುವ ಪರಿಣಾಮ ಬಗ್ಗೆ ಈಗಲೇ ಹೇಳುವುದು ಕಷ್ಟ. ಉದ್ಯಮಿಗಳ ಮೇಲೆ ತಮಗೆ ವಿಶ್ವಾಸವಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನೂ ಹತ್ತು ತಿಂಗಳ ಕಾಲಾವಕಾಶ ಇದೆ, ಮುಂದೆ ಹೋಗುತ್ತಾ, ಹೋಗುತ್ತಾ ಏನಾಗುತ್ತದೆ ಎಂದು ನೋಡೋಣ ಎಂದರು.

ಈ ಸಂದರ್ಭದಲ್ಲಿ ನಳಿನ್ ಕೊಹ್ಲಿ ಮಧ್ಯಮ ವರ್ಗದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ತೆರಿಗೆಗಳನ್ನು ಈ ಸಮಯದಲ್ಲಿ ಕಟ್ಟಿಸುವುದೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದಾಗ ನಗರ ಪ್ರದೇಶಗಳಲ್ಲಿರುವ ತಿಂಗಳ ವೇತನದಾರರನ್ನು ಮಾತ್ರ ಮಧ್ಯಮ ವರ್ಗದವರೆಂದು ನಾವು ಇಲ್ಲಿ ಹೇಳಲು ಆಗುವುದಿಲ್ಲ. ನಮ್ಮ ಪ್ರಕಾರ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು, ಕೃಷಿ ಸಂಬಂಧಿತ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೆಲಸಗಳಲ್ಲಿ ತೊಡಗಿರುವವರು ಕೂಡ ಮಧ್ಯಮ ವರ್ಗಗಳಲ್ಲಿ ಬರುತ್ತಾರೆ. ವೇತನ ವರ್ಗದವರ ಇಎಂಐ ಪಾವತಿ ಬಗ್ಗೆ ಆರ್ ಬಿಐ ಕ್ರಮ ಕೈಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ರಾಜ್ಯ ಸರ್ಕಾರಗಳು ಕೂಡ ಆರ್ಥಿಕ ದುಸ್ಥಿತಿ ಅನುಭವಿಸುತ್ತಿವೆ, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವ ರೀತಿ ನೆರವು ನೀಡುತ್ತದೆ, ಜಿಎಸ್ಟಿ ಪರಿಹಾರಗಳನ್ನು ರಾಜ್ಯಕ್ಕೆ ನೀಡುವ ಬಗ್ಗೆ ಪ್ರಸ್ತಾಪಿಸಿದಾಗ ಕಳೆದ ಡಿಸೆಂಬರ್-ಜನವರಿ, ಫೆಬ್ರವರಿ-ಮಾರ್ಚ್  ತಿಂಗಳ ಜಿಎಸ್ ಟಿ ಪರಿಹಾರವನ್ನು ನೀಡಿಲ್ಲ. ಕೇಂದ್ರಕ್ಕೆ ಆದಾಯ ಸಂಗ್ರಹವಾದಾಗ ನೀಡಲಾಗುವುದು ಎಂದರು.