ಲಿಂಗಾಯತ ಧರ್ಮ : ಕನ್ನಡ ಮಣ್ಣಿನಲ್ಲಿ ಹುಟ್ಟಿದ ಜೀವಪರ ಚಿಂತನೆಯ ಮಧ್ಯಮ ಮಾರ್ಗ

ಲಿಂಗಾಯತ ಧರ್ಮ : ಕನ್ನಡ ಮಣ್ಣಿನಲ್ಲಿ ಹುಟ್ಟಿದ ಜೀವಪರ ಚಿಂತನೆಯ ಮಧ್ಯಮ ಮಾರ್ಗ

ಕೆಲವು ವಿದ್ವಾಂಸರು ಗೌತಮ ಬುದ್ಧನು ಮೊಟ್ಟಮೊದಲಿಗೆ  ಮಧ್ಯಮ ಮಾರ್ಗವನ್ನು ನೀಡಿದ ಎಂದು ವಾದಿಸುತ್ತಾರೆ. ಆದರೆ ಸನಾತನಿಗಳದ್ದು ದೇವರನ್ನು ವೈಭವೀಕರಿಸುವ ಅತಿರೇಕದ ಆಸ್ತಿಕ ವಾದವಾದರೆ ಬುದ್ದನದ್ದು ದೇವರನ್ನು ನಿರಾಕರಿಸುವ ಶುಷ್ಕ ನಾಸ್ತಿಕವಾದ. ಇವೆರಡರ ಸರಿಸಮಾನ ಮಧ್ಯದಲ್ಲಿ ಸಮತೋಲಿತ ಚಿಂತನೆಯನ್ನು ಪ್ರತಿಪಾದಿಸಿದ ಶರಣರ ಲಿಂಗಾಯತ ಮಾರ್ಗವೇ ಮಧ್ಯಮ ಮಾರ್ಗ ಎನ್ನುತ್ತಾರೆ ಡಾ.ಜೆ.ಎಸ್.ಪಾಟೀಲ

ಬಯಲು ಅಥವಾ ಶೂನ್ಯ ಎಂಬ ಪರಿಕಲ್ಪನೆ ಲಿಂಗಾಯತ ಚಳವಳಿಯ ಧರ್ಮ ಸಾಹಿತ್ಯವಾಗಿರುವ ವಚನಗಳಲ್ಲಿ ಹೇರಳವಾಗಿ ಪ್ರಸ್ತಾಪವಾಗುತ್ತದೆ. ಅತ್ತ ಭಯಂಕರ ದೈವ ಕಲ್ಪನೆಯ ನಶೆಯೊಳಗೆ ಮರುಳರಾಗಬಹುದಾದ ಆಸ್ತಿಕತೆ ಮತ್ತು ಇತ್ತ ದೇವರ ಅಸ್ತಿತ್ವವನ್ನೇ ನಿರಾಕರಿಸುವ ಶುಷ್ಕ ನಾಸ್ತಿಕತೆಗಳ ನಡುವೆ ದೇವರು ಎನ್ನುವ ಒಂದು ಅಗೋಚರ ಶಕ್ತಿಯನ್ನು ಸ್ವೀಕರಿಸುತ್ತಲೇ ಅದರಿಂದಾಗುವ ಅನಾಹುತಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಸೂಚಿಸುವ ಮಧ್ಯಮ ಮಾರ್ಗವೇ ಲಿಂಗಾಯತ ಚಳುವಳಿಯ ಬಹುಮುಖ್ಯ ವಿಶೇಷತೆ. ಈ ಮಧ್ಯಮ ಮಾರ್ಗವನ್ನು ಸಹಜವಾಗಿ ಬದುಕಿನಲ್ಲಿ ಅಳವಡಿಸಿಕೊಂಡ ಲಿಂಗಾಯತ ತಾತ್ವಿಕತೆಯ ಅಗಣಿತ ಸಾಧಕರು ನಮ್ಮ ನಾಡಿನಲ್ಲಿ ಆಗಿಹೋಗಿದ್ದಾರೆ. ಲಿಂಗಾಯತ ಧರ್ಮದ ಅನುಭಾವ ಸಾಧನೆಯನ್ನು ತಿಳಿದುಕೊಳ್ಳುವ ಕುತೂಹಲಿಗಳು ಸಮಗ್ರ ವಚನ ಸಂಪುಟ ಮತ್ತು ಶೂನ್ಯ ಸಂಪಾದನೆಗಳನ್ನು ಓದಿ ಅರ್ಥೈಸಿಕೊಂಡರೆ ಸಾಕು. ಅದರಲ್ಲೂ ಅಷ್ಟಾವರಣˌ ಪಂಚಾಚಾರ ಮತ್ತು ಬಹು ವಿಶೇಷವಾಗಿ ಷಟಸ್ಥಳದ ವಚನಗಳು ಲಿಂಗಾಂಗ ಯೋಗ/ಶಿವಯೋಗ ಮತ್ತು ಅನುಭಾವ ಸಾಧನೆಯ ಕುರಿತು ಉಪಯುಕ್ತ ಮಾಹಿತಿಯನ್ನೊದಗಿಸಬಲ್ಲವು. ಈಗಾಗಲೇ ಅನೇಕ ಬಗೆಯ ಸಾಧನೆಗಳ ಮಾಹಿತಿಯನ್ನು ಗುಡ್ಡೆ ಹಾಕಿಕೊಂಡು ಗಲಿಬಿಲಿಗೊಳ್ಳುವ ಜನರಿಗೆ ಶರಣರ ಅನುಭಾವ ಸಾಧನೆಯ ಮಾರ್ಗ ಸೂಕ್ತವಾದುದ್ದಲ್ಲ. ಶರಣಮಾರ್ಗ ಸಕಲವನ್ನು ಕಲಸುಮೇಲೋಗರ ಮಾಡಿಕೊಂಡು ದ್ವಂದ್ವದಲ್ಲಿ ಬೀಳುವುದಲ್ಲ ˌ ಅದು ಆ ಸಾಧನೆಯಿಂದ ಪಡೆದು ಅಲ್ಲಿಯೇ ವಿಸರ್ಜಿಸಿ ಹೋಗುವ ಒಂದು ಪಯಣ. ಈಗಾಗಲೇ ಸಂಗ್ರಹಿಸಿಕೊಂಡ ಒಂದಷ್ಟು ಸಾಧನಾ ಮಾರ್ಗಗಳೊಂದಿಗೆ ಇದೊಂದನ್ನು ಸೇರಿಸಿಕೊಳ್ಳುವ ಮಾರ್ಗದ ವ್ಯಾಪ್ತಿಗೆ ಶರಣರ ಅನುಭಾವ ಸಾಧನೆ ಒಳಗೊಳ್ಳುವುದಿಲ್ಲ. ಅದು ಉಳಿದ ಸಾಧನಾ ಮಾರ್ಗಗಳಲ್ಲಿರದ ಹೊಸ ಸಾಧನಾ ಮಾದರಿಯನ್ನು ವಿವರಿಸಿ ಹೇಳುವ ವಿವೇಕ ಮಾರ್ಗ. ಶರಣರ ಅನುಭಾವ ಮಾರ್ಗವು ಈಗಾಗಲೇ ಅಸ್ಥಿತ್ವದಲ್ಲಿರುವ ಅನೇಕ ಆಚರಣೆಗಳ ಸಂಗಡ ಜೋಡಿಸಿಕೊಳ್ಳುವ ಇನ್ನೊಂದು ಸಾಧನಾ ಮಾರ್ಗವಲ್ಲ. ಬದಲಿಗೆ ಅದು ನಮಗೆ ಕೆಡುಕನ್ನುಂಟು ಮಾಡುವ ಸಾಧನಾ ಮಾರ್ಗಗಳ ನಿರಾಕರಣೆಯ ಬಯಲು ಅಥವ ಶೂನ್ಯ ಮಾರ್ಗ. ಶೂನ್ಯದಿಂದ ಏನೂ ಮೌಲ್ಯವಿಲ್ಲದ ಮತ್ತು ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಬೇಕಾದ ಮೌಲ್ಯವುಳ್ಳ ಸಂಖ್ಯೆಗಳನ್ನು ಬರೆಯಬಹುದಾದ್ದರಿಂದ ಈ ಬಯಲು ಅಥವ ಶೂನ್ಯ ಮಾರ್ಗವನ್ನು ಮಧ್ಯಮ ಮಾರ್ಗವೆನ್ನುತ್ತೇವೆ. ಶರಣರು ತಿಳಿಸಿದಂತೆ ಶೂನ್ಯ ಅಥವ ಬಯಲು ಎಂದರೆ ಏನೂ ಇಲ್ಲದ ನಿರ್ವಾತವಲ್ಲ; ಅದು ಏನೂ ಇಲ್ಲದಂತಿರುತ್ತಲೇ ಎಲ್ಲವನ್ನೂ ಒಳಗೊಂಡ ಮಹಾಶಕ್ತಿ. ಆದ್ದರಿಂದ ಶೂನ್ಯ ಮಾರ್ಗವು ಸಾಧನೆಯನ್ನು ಅಹ್ವಾನಿಸಿ ಪಡೆದು ಇಲ್ಲಿಯೇ ಬಿಟ್ಟುಹೋಗುವ ಮೂಲಕ ಲೌಕಿಕ ಮತ್ತು ಪಾರಮಾರ್ಥಿಕ ವ್ಯವಹಾರಗಳ ನಡುವಿನ ವ್ಯತ್ಯಾಸಗಳ ಸತ್ಯವನ್ನು ತಿಳಿಸಿಕೊಡುವುದರಿಂದ ದೊರಕುವ ಲೋಕಗ್ರಹಿಕೆಯ ಕ್ರಮ.

 

ಕೆಲವು ವಿದ್ವಾಂಸರು ಗೌತಮ ಬುದ್ಧನು ಮೊಟ್ಟಮೊದಲಿಗೆ ಈ ಮದ್ಯಮ ಮಾರ್ಗವನ್ನು ನೀಡಿದ ಎಂದು ವಾದಿಸುತ್ತಾರೆ. ಆದರೆ ಸನಾತನಿಗಳದ್ದು ದೇವರನ್ನು ವೈಭವೀಕರಿಸುವ ಅತಿರೇಕದ ಆಸ್ತಿಕವಾದವಾದರೆ ಬುದ್ದನದ್ದು ದೇವರನ್ನು ನಿರಾಕರಿಸುವ ಶುಷ್ಕ ನಾಸ್ತಿಕವಾದ. ಇವೆರಡರ ಸರಿಸಮಾನ ಮಧ್ಯದಲ್ಲಿ ಸಮತೋಲಿತ ಚಿಂತನೆಯನ್ನು ಪ್ರತಿಪಾದಿಸಿದ ಶರಣರ ಲಿಂಗಾಯತ ಮಾರ್ಗವೇ ಮಧ್ಯಮ ಮಾರ್ಗವೆನ್ನುವುದು ನನ್ನ ಖಚಿತ ಅಭಿಪ್ರಾಯ. ಬೌದ್ಧ ವಿದ್ವಾಂಸರು ಕನ್ನಡಿಗ ನಾಗಾರ್ಜುನನು ಮೊದಲ ಬಾರಿಗೆ ಬೌದ್ಧ ಮಧ್ಯಮ ಮಾರ್ಗವನ್ನು ವಿವರಿಸಿದ್ದಾನೆ ಎನ್ನುತ್ತಾರೆ. ಈ ಬೌದ್ಧ ವಿದ್ವಾಂಸರ ಪ್ರಕಾರ ಕನ್ನಡಿಗ ನಾಗಾರ್ಜುನ ಬೌದ್ಧ ಮಧ್ಯಮ ಮಾರ್ಗವನ್ನು ವಿವರಿಸಿಕೊಡುವ ಮೂಲಕ ಮಹಾಯಾನವನ್ನು ಪ್ರವರ್ತಿಸಿದನು. ನಾಗಾರ್ಜುನನ ಪ್ರಕಾರ ಬೌದ್ಧ ಮಧ್ಯಮ ಮಾರ್ಗವು ಬೇರೆ ಧರ್ಮಗಳ ರೀತಿಯಲ್ಲಿ ‘ಮಾಡಬೇಕಾದ ಮತ್ತು  ಮಾಡಬಾರದವುಗಳ’ ಪಟ್ಟಿಯನ್ನು ನೀಡುವುದಿಲ್ಲ. ಬದಲಿಗೆ ಅದು ಈ ಕ್ಷಣಕ್ಕೆ ಸಾಧಕನೆದುರಿಗಿರುವ ಲೋಕ ಮತ್ತು ಅದರ ಸಂಬಂಧದಲ್ಲಿ ತಮ್ಮನ್ನು ತಾವು ಅರಿತುಕೊಳ್ಳುವ ಕ್ರಮವನ್ನು ತಿಳಿಸುತ್ತದೆ. ಹೀಗೆ ಸರಿಯಾಗಿ ಅರಿತುಕೊಂಡಾಗ ಮಾತ್ರ ಸಾಧಕನು ಸರಿಯಾಗಿ ಸಾಧನೆ ನಿರ್ವಹಿಸಲು ಸಾಧ್ಯವಾಗುತ್ತದೆ ಎನ್ನುವುದು ಅವರ ವಾದ. ಆದರೆ ಶರಣರ ಅನುಭಾವ ಮಾರ್ಗ ಮಾಡಬಾರದ ಮತ್ತು ಮಾಡಬೇಕಾದ ಸಾಧನಾ ಮಾರ್ಗದ ಸೂಚನೆಗಳನ್ನು ಖಂಡಿತ ನೀಡುತ್ತದೆ. ನಾವು ಒಂದನ್ನು ಅಲ್ಲಗಳೆಯಬೇಕಾದರೆ ಅದಕ್ಕಿಂತ ಉತ್ತಮವಾದ ಇನ್ನೊಂದನ್ನು ಹೇಳಲೇಬೇಕಾಗುತ್ತದೆ. ಶರಣರು ಸನಾತನಿಗಳಲ್ಲಿದ್ದ ಅತಿರೇಕದ ಭಕ್ತಿಮಾರ್ಗದ ನ್ಯೂನ್ಯತೆಗಳನ್ನು ಖಂಡಿಸುತ್ತಲೇ ಹೊಸ ಸಾಧನಾ ಮಾರ್ಗವನ್ನು ವಿವರಿಸುತ್ತಾರೆ. ಕನ್ನಡಿಗ ನಾಗಾರ್ಜುನನನ್ನು ಬೌದ್ಧ ಮಧ್ಯಮ ಮಾರ್ಗದ ಆಚಾರ್ಯನೆಂದು ಗುರುತಿಸುವ ಬೌದ್ದ ವಿದ್ವಾಂಸರು ಬೌದ್ಧ ಶೂನ್ಯಮಾರ್ಗವನ್ನೇ  ಮಧ್ಯಮಮಾರ್ಗವೆಂದು ವಾದಿಸುತ್ತ ಅದು ಆತ ಜಗತ್ತಿಗೆ ವಿವರಿಸಿಕೊಟ್ಟು ಮಹಾಯಾನವನ್ನು ಪ್ರವರ್ತಿಸಿದ ಎರಡನೆಯ ಬುದ್ಧನೆಂದು ಗೌರವಿಸುತ್ತಾರೆ. ಗಣಿತೀಯ ಮಾರ್ಗವಾದ ಸರಳೀಕರಣದಿಂದ ಅಸಂಗತತೆ(ಲ್ಯಾಟಿನ್‌ನಲ್ಲಿ Reductio ad absurdum ) ಮೂಲಕ ಲೋಕಾಭಿವ್ಯಕ್ತಿಯ ಮಹಾಮಾರ್ಗವಾದ ಚತುಷ್ಕೋಟಿ ತತ್ವವನ್ನು ನಾಗಾರ್ಜುನ ವಿವರಿಸಿದ ಕುರಿತು ಬಹುತೇಕ ಬೌದ್ಧ ವಿದ್ವಾಂಸರು ಪ್ರಸ್ಥಾಪಿಸುತ್ತಾರೆ. ಈ ವಾದದ ಪ್ರಕಾರ ನಾವೆಲ್ಲರನ್ನೊಳಗೊಂಡ ಈ ಲೋಕದ ಅಸ್ಥಿತ್ವವು ಇದೆ ಎಂದಾಗಲಿˌ ಇಲ್ಲವೆಂದಾಗಲಿˌ ಇದೆ-ಇಲ್ಲ ಎರಡೂ ನಿಜ ಅಥವ ಇದೆ-ಇಲ್ಲ ಎರಡೂ ಸುಳ್ಳು ಎಂದಾಗಲಿ ಹೇಳಲಾಗದು ಎಂದು ನಾಗಾರ್ಜುನನ ಅಭಿಪ್ರಾಯ. ಆದರೆ ಶರಣರ ಅನುಭಾವ ಮಾರ್ಗ ಈ ಲೋಕದ ಅಸ್ಥಿತ್ವ ನಿಜವೆಂತಲೂ ಮತ್ತು ಸ್ವರ್ಗ-ನರಕಗಳ ಪರಿಕಲ್ಪನೆ ಮಾತ್ರ ಹುಸಿ ಎಂತಲೂ ಪ್ರತಿಪಾದಿಸುತ್ತದೆ. ನಾಗಾರ್ಜುನನ ಈ ಖಚಿತಾಭಿಪ್ರಾಯವು ಹೀಗೆ ಬೇರೆ ಇನ್ನಾವುದೇ ನಿಲುವುಗಳ ಸಹಾಯ ಪಡೆಯದೆ ಈ ನಾಲ್ಕೂ ನಿಲುವುಗಳು ಅಂತಿಮ ಸತ್ಯವಲ್ಲ ಎಂದು ಸಾಧಿಸಿ ಅವು ಅಸಂಗತ ಎಂದು ತೋರಿಸಿಕೊಟ್ಟುದುದರಿಂದ ಈ ಸಿದ್ಧಾಂತವನ್ನು reductio ad absurdum ಎಂದು ಗುರುತಿಸಿದ್ದಾರೆ. 

 

ನಾಗಾರ್ಜುನನ ಪ್ರಕಾರ ಬೌದ್ಧ ಶೂನ್ಯ ಸಾಧಕನಿಗೆ ಯಾವ ಪ್ರತಿಜ್ಞೆಯೂ ಇಲ್ಲ, ಹಾಗಾಗಿ ಅತ ಸ್ಥಾಪಿಸಬೇಕಾದದ್ದು ಏನೂ ಇಲ್ಲ. ನಾಗಾರ್ಜುನನ ಶೂನ್ಯಮಾರ್ಗ ಬೇರೆಲ್ಲವನ್ನೂ ನಿರಾಕರಿಸುತ್ತ ಅದಕ್ಕೆ ಪರ್ಯಾಯವಾದ ಮತ್ತೊಂದನ್ನೂ ಹೇಳದೆ ಹೋಗುವ ನಕಾರಾತ್ಮಕ ಸಿದ್ಧಾಂತ ಶರಣರ ಅನುಭಾವ ಮಾರ್ಗ ಒಪ್ಪುವುದಿಲ್ಲ. ಲೋಕವು ಇಲ್ಲˌ ದೇವರೂ ಇಲ್ಲ ಎಂದು ನಿರಾಕರಿಸಿದಾಗ ಅದಕ್ಕೆ ಪರ್ಯಾಯವಾಗಿ ಏನುಂಟು ಅಥವ ಅವು ಯಾಕಿಲ್ಲ ಎನ್ನುವುದು ನಾಗಾರ್ಜುನ ಹೇಳುವ ಶೂನ್ಯ ಮಾರ್ಗದಲ್ಲಿ ಸ್ವಷ್ಟವಾಗಿಲ್ಲ. ಶರಣರು ದೇವರ ಇರುವಿಕೆಯ ಕುರಿತು ಸನಾತನಿಗಳಿಗಿಂತ ಭಿನ್ನವಾಗಿ ಮತ್ತು ವೈಜ್ಞಾನಿಕವಾಗಿ ಪ್ರತಿಪಾದಿಸುತ್ತಾರೆ ಮತ್ತು ಸ್ವರ್ಗ-ನರಕಗಳಿಗೆ ಪರ್ಯಾಯವಾಗಿ ಆಚಾರವೇ ಸ್ವರ್ಗˌ ಅನಾಚಾರವೇ ನರಕವೆಂದು ಸ್ಪಷ್ಟಪಡಿಸುತ್ತಾರೆ. ಶರಣರು ಸನಾತನಿಗಳ ಸಿದ್ಧಾಂತಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ನಮ್ಮ ಜೀವನಕ್ರಮವನ್ನು ನಿರ್ದೇಶಿಸುತ್ತಿರುವ ಈ ಸನಾತನಿಗಳ ಕರ್ಮ ಸಿದ್ಧಾಂತದೊಳಗಿನ ದೋಷವೇ ನಮ್ಮ ಬದುಕಿನ ಸಂಕಟಕ್ಕೆ ಕಾರಣವಾಗಿದೆ ಎಂದು ಅರಹುತ್ತಾರೆ. ಬಹುಸಂಖ್ಯಾತ ಭಾರತಿಯರ ಇಂದಿನ ಬದುಕಿನ ಸಂಕಟಗಳಿಗೂ ಕರ್ಮಠ ಸನಾತನಿಗಳು ನೆಟ್ಟ ಈ ಕೈಮರಗಳೇ ಕಾರಣವಾಗಿವೆ ಎನ್ನುವುದು ಸತ್ಯಸ್ಯಸತ್ಯ. ಬೌದ್ದ ಶೂನ್ಯವಾದವು ಈಗಿರುವ ಅನೇಕ ಮಾರ್ಗಗಳ ಗುಂಪಿಗೆ ತನ್ನದೇ ಮತ್ತೊಂದು ಪರ್ಯಾಯ ಮಾರ್ಗ ಸೇರಿಸುವುದರಿಂದ ಈ ಸಮಸ್ಯೆ ನೀಗಲಾರದೆಂದು ಹೇಳುತ್ತ ಕೇವಲ ಜನರ ನೆಮ್ಮದಿಯ ಬದುಕಿಗೆ ಕಂಟಕಪ್ರಾಯವೆನ್ನಿಸಿದ ಕರ್ಮ ಸಿದ್ಧಾಂತದ ದೃಷ್ಟಿವಾದ ಮಾತ್ರ   ನಿರಾಕರಿಸುತ್ತದೆ. ಆದರೆ ಶರಣರು ಇಂತಹ ದೃಷ್ಟಿವಾದಗಳ ಕೈಮರಗಳನ್ನು ಬುಡಸಮೇತ ಕಿತ್ತುಹಾಕಿ ತಾವು ಅನುಸರಿಸಬೇಕಾದ ಮಾರ್ಗವನ್ನು ‘ಬಯಲು’ ಎಂದು ಕರೆಯುತ್ತಾರೆ. ಈ ಬಯಲನ್ನೇ ಮಹಾಕವಿ ಕುವೆಂಪು ಅವರು ‘ಅನಿಕೇತನ’ ತತ್ವವೆಂದೂ, ವಿಶ್ವಮಾರ್ಗವೆಂದೂ ಹೇಳುತ್ತಾರೆ. ಗೌತಮ ಬುದ್ಧನು ಆತ್ಮˌ ಬ್ರಹ್ಮ ಮುಂತಾದ ನಿರರ್ಥಕ ಸಂರಚನೆಗಳನ್ನು ನಿರಾಕರಿಸಿ ಅನಾತ್ಮವಾದˌ ಅನಿತ್ಯತಾವಾದಗಳ ಮುಖೇನ ಲೋಕವನ್ನು ವಿವರಿಸಿದರೆ ಶರಣರು ಸನಾತನಿಗಳು ಹೇಳಿದ ಮೌಢ್ಯಯುಕ್ತ ಪೊಳ್ಳು ಸಂಹರಚನೆಗಳನ್ನು ವೈಜ್ಞಾನಿಕ ಬುನಾದಿಯ ಮೇಲೆ ನಿಲ್ಲಿಸಿ ಅರ್ಥೈಸುತ್ತಾರೆ. ಆದ್ದರಿಂದ ಶರಣರು ಪ್ರತಿಪಾದಿಸಿದ ಅನುಭಾವ ಮಾರ್ಗವು ನೈಜ ಮಧ್ಯಮ ಮಾರ್ಗವೆಂದೆನಿಸುತ್ತದೆ.

 

ಇತರ ಪರ್ಯಾಯ ಸಾಧನಾ ಪರಂಪರೆಗಳು

 

ಭಾರತದ ನೆಲದಲ್ಲಿ ಸನಾತನಿಗಳ ಕಪೋಲಕಲ್ಪಿತ ಸಿದ್ಧಾಂತಗಳಿಗೆ ಪರ್ಯಾಯವಾಗಿ ಶೈವˌ ಶಾಕ್ಯˌ  ಸಿದ್ಧˌ ಅಚಲˌ ಆರೂಢˌ ಅವಧೂತˌ ನಾಥˌ ಬಹಿರಂಗಿˌ ಬೌದ್ಧ ˌ ಮುಂತಾದ ಸಾಧನಾ ಪರಂಪರೆಗಳು ಜನ್ಮತಳೆದಿವೆ. ದಕ್ಷಿಣ-ಪೂರ್ವ ಕರ್ನಾಟಕದ ಆಂಧ್ರಪ್ರದೇಶದ ಸೀಮೆಗಳಾದ ಕೋಲಾರ ಮತ್ತು ತುಮಕೂರು ಜಿಲ್ಲೆಯ ಪಾವಗಡಗಳಲ್ಲಿ ಅಚಲಿಗ ಪರಂಪರೆಯ ಸಾಧಕರು ಕಾಣಸಿಗುತ್ತಾರೆ. ಬದುಕಿನ ಪ್ರತಿ ಮಗ್ಗಲುಗಳಷ್ಟೇ ಅಲ್ಲದೆ ಮನಸ್ಸಿನ ಮೂಲೆಯಲ್ಲೂ ಕೂಡ ಜಗತ್ತಿಗೆ ಕಾಣದಂತೆ ಏನನ್ನಾದರು ಹುದುಗಿಸಿಟ್ಟುಕೊಂಡು ಬಾಳಬಾರದೆಂಬ ನಂಬಿಕೆಯುಳ್ಳವರನ್ನು ‘ಬಹಿರಂಗಿಗಳು’ ಎಂದು ಗುರುತಿಸುತ್ತಾರೆ. ದಕ್ಷಿಣಾಮೂರ್ತಿˌ ಬೇರಿಕೆ ಬುಟ್ಟಪ್ಪ ˌ ರಾಮಾವಧೂತರು ಮುಂತಾದ ಸಾಧಕರು ಈ ಸಾಧನಾ ಗುಂಪಿಗೆ ಸೇರಿದವರು. ಆಂಧ್ರಪ್ರದೇಶದ  ನಾಗಾರ್ಜುನಕೊಂಡˌ ಶ್ರೀಶೈಲಗಳಿಂದ ಬೇರ್ಪಟ್ಟ ಈ ಪರಂಪರೆಯ ತಾತ್ವಿಕ ಆಕರ ಮೂಲವೆಂದರೆ ನಾಗಾರ್ಜುನನ ‘ದಶಭೂಮಿಶಾಸ್ತ್ರ’. ಬೌದ್ಧ ಧರ್ಮವು ಈ ಜಗತ್ತನ್ನು ಸಾಧಕರು ಗ್ರಹಿಸಬೇಕಾದ ಕ್ರಮ ಮತ್ತು ಸಾಧನೆಯ ವಿವಿಧ ಮಜಲುಗಳನ್ನು ಹತ್ತು ಹಂತಗಳಲ್ಲಿ ವಿವರಿಸುತ್ತದೆ. ಆ ವಿವಿಧ ಹಂತಗಳೆಂದರೆ  ಪ್ರಮುದಿತ, ವಿಮಲ, ಪ್ರಭಾಕರಿ, ಅರ್ಚಿಷ್ಮತಿ, ಸುದುರ್ಜಯ, ಅಭಿಮುಖಿ, ದೂರಾಗಮ, ಅಚಲ, ಸಾಧುಮತಿ ಮತ್ತು ಧರ್ಮಮೇಘ. 

 

ಪ್ರಮುದಿತ : ಬಯಲು ಅಥವ ಶೂನ್ಯದೊಡನೆ ನೇರ ಅನುಸಂಧಾನಗೈಯುವ ಅವಧೂತರು ಸುಖ-ದುಃಖಗಳನ್ನು ಮೀರಿದಾಗ ಉಂಟಾಗುವ ಅನುಭವವನ್ನು ಪ್ರಮುದಿತ ಎನ್ನಲಾಗುತ್ತದೆ.

ವಿಮಲ : ಈ ಹಂತವು ಸಾಧಕನು ಎಲ್ಲ ರೀತಿಯ ಕೆಡುಕುಗಳಿಂದ ಮುಕ್ತವಾಗಿ ಬದುಕುವ ಸ್ಥಿತಿ ತಲುಪುದನ್ನು ಹೇಳುತ್ತದೆ.

ಪ್ರಭಾಕರಿ : ಇದು ಸಾಧಕನಲ್ಲಿ ನಿರಂತರ ಜಾಗೃತವಾಗಿರುವ ನಿಸರ್ಗ ವಿವೇಕವನ್ನು ಪ್ರತಿನಿಧಿಸುತ್ತದೆ.

ಅರ್ಚಿಷ್ಮತಿ : ಇದು ಬರಬಹುದಾದ ಕೆಡುಕುಗಳನ್ನು ನೀಗುವ ಸಾಧಕನ ತಾಕ್ಷಣಿಕ ನಡೆಯನ್ನು ಹೇಳುತ್ತದೆ.

ಸುದುರ್ಜಯ : ಇದು ಸಾಧಕನು ಮಧ್ಯಮ ಮಾರ್ಗದ ನಿರಂತರ ನಡೆಯನ್ನು ಕಾಪಾಡಿಕೊಳ್ಳುವ ಬಗೆಯನ್ನು ಹೇಳುತ್ತದೆ.

ಅಭಿಮುಖಿ : ಈ ಹಂತವು ಸಾಧಕನ ಪ್ರಜ್ಞಾಪಾರಮಿತದ ಅನುಸಂಧಾನವನ್ನು ಪ್ರತಿನಿಧಿಸುತ್ತದೆ.

ದೂರಾಗಮ : ಎಲ್ಲ ಪ್ರಾಪಂಚಿಕ ವೈರುಧ್ಯಗಳನ್ನು ದಾಟಿ ನಿಲ್ಲುವ ಹಂತ.

ಅಚಲ : ಸಾಧಕನು ತನ್ನ ಮನಸ್ಸಿನಲ್ಲಿ ನೆಲೆಗೊಂಡಿರುವ ಸಂರಚನೆಗಳಿಂದ ಮುಕ್ತನಾಗಿ ನಡೆದುಕೊಳ್ಳುವುದು.

ಸಾಧುಮತಿ : ತನಗೆ ಸಿದ್ಧಿಸಿದ ಜ್ಞಾನ ಅಥವ ಅರಿವನ್ನು ತಾರತಮ್ಯವಿಲ್ಲದೆ ಸಮೂಹಕ್ಕೆ ಹಂಚುವ ಸ್ಥಿತಿ.

ಧರ್ಮಮೇಘ : ಸಮಷ್ಠಿ ಲೋಕವನ್ನು ಕರುಣೆ ಮೈತ್ರಿಯಿಂದ ಕಂಡು ಬಾಳಿಸುವುದು ಅಂತಿಮ ಹಂತ.

 

ಮೇಲಿನವುಗಳಲ್ಲಿ ಎಂಟನೆಯ ಹಂತದ ಸಾಧಕರನ್ನು ಅಚಲಿಗರು ಎಂದು ಕರೆಯುತ್ತಾರೆ. ನಮ್ಮ ಮನಸ್ಸಿನಲ್ಲಿ ನೆಲೆಗೊಂಡ ಸ್ಥಾಪಿತ ಸಂರಚನೆಗಳು ಮನುಷ್ಯನ ತಪ್ಪು ಗ್ರಹಿಕೆಗೆ ಮತ್ತು ಪ್ರಮಾದದ ನಡೆಗೆ ಕಾರಣಗಳು ಎಂದು ನಂಬಿ ಮತ್ತು ಆ ತಪ್ಪು ಸಂರಚನೆಗಳ ದುಷ್ಪರಿಣಾಮಗಳಿಗೆ ಬಲಿಯಾಗದೆˌ ನಮ್ಮ ಮನಸ್ಸನ್ನು ನಿಯಂತ್ರಿಸಿ ನಿರ್ದೇಶಿಸುವ ಸಂದೇಶಗಳನ್ನು ತಕ್ಷಣ ಒಪ್ಪಿಕೊಳ್ಳದೆ ಅವನ್ನು ಕೂಲಂಕುಷ ವಿಶ್ಲೇಷಣೆಗೊಳಪಡಿಸಿ ನಿರ್ಧರಿಸಿ ನಡೆದುಕೊಳ್ಳುವ ಪರಿಯನ್ನು ‘ಅಚಲ’ ಎನ್ನುತ್ತೇವೆ.

ಈ ಅಚಲ ಹಂತವನ್ನು ಕೋಲಾರದ ಸಾಧಕ ದಕ್ಷಿಣಾಮೂರ್ತಿಗಳು ಹೀಗೆ ವ್ಯಾಖ್ಯಾನಿಸುತ್ತಾರೆ : ಯಾರು ತನ್ನ ಮನಸ್ಸಿನಲ್ಲಿ ನೆಲೆಗೊಂಡ ವಿಕೃತಿಗಳಿಂದ ವಿಚಲಿತನಾಗುವುದಿಲ್ಲವೋ ಅವನು ಅಚಲ. ಈ ಅಚಲಿಗರನ್ನು ಬೌದ್ಧ ಮಧ್ಯಮ ಮಾರ್ಗಿಗಳೆಂದು ಗುರುತಿಸಲಾಗಿದೆ. ಅಚಲಿಗರು ಯಾವುದೇ ಧಾರ್ಮಿಕ ಸಂಕೇತಗಳ ನಿಬಂಧನೆಗೊಳಗಾಗದೇ ಬಯಲಿನ ಸಾಧಕರು ಎಂತಲೂ ಬೌದ್ಧ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

 

ಈ ಮೇಲಿನ ಬೌದ್ಧ ಸಾಧನಾ ಮಾರ್ಗಗಳನ್ನು ಅವಲೋಕಿಸಿದಾಗ ಶರಣರು ಅನುಸರಿಸಿದ ಶೂನ್ಯ ಸಾಧನಾ ಮಾರ್ಗ ಅನನ್ಯವೆನ್ನಿಸುತ್ತದೆ. ಬೌದ್ಧರ ಮೇಲಿನ ಹತ್ತು ಸಾಧನೆಯ ಹಂತಗಳಂತೆ ಶರಣರಲ್ಲೂ ಷಟಸ್ಥಲಗಳೆಂಬ ಆರು ಸಾಧನಾ ಹಂತಗಳನ್ನು ನೋಡಬಹುದು. ಶರಣರು ಸಾಧನೆಯ ಕೊನೆಯ ಹಂತವೇ ಐಕ್ಯಸ್ಥಳ. ಅತ್ತ ಬೆಳಕನ್ನೂ ಒಪ್ಪದೆˌ ಇತ್ತ ಕತ್ತಲೆಯನ್ನೂ ಸ್ವೀಕರಿಸದೆ ಎರಡರ ನಡುವಿನ ಸ್ಥಿತಿಯನ್ನು ಬಚ್ಚ ಬಯಲು ಎಂದು ಶರಣರು ವಿವರಿಸುತ್ತಾರೆ. ಅದೇ ಮಧ್ಯಮ ಸಾಧನಾ ಮಾರ್ಗ. ಅದನ್ನು ಅಲ್ಲಮ ಪ್ರಭು ದೇವರ ಕೆಳಗಿನ ವಚನದಲ್ಲಿ ಕಾಣಬಹುದು :

 

" ವೇದ ದೈವವೆಂದು ನುಡಿವರು

ಶಾಸ್ತ್ರ ದೈವವೆಂದು ನುಡಿವರು,

ಪುರಾಣ ದೈವವೆಂದು ನುಡಿವರು, 

ಕಲ್ಲು ದೈವವೆಂದು ನುಡಿವರು,

ಕಾಷ್ಠ ದೈವವೆಂದು ನುಡಿವರು,

ಪಂಚಲೋಹ ದೈವವೆಂದು ನುಡಿವರು,

ಇವರೆಲ್ಲ ಸಕಲದಲಾದ ಸಂದೇಹವನೆ ಪೂಜಿಸಿ ಸತ್ತು ಹೊದರಲ್ಲಾ!

ಸಮಸ್ತ ಪ್ರಾಣಿಗಳೂ-ತಾಯನರಿಯದ ತರ್ಕಿಗಳು,

ತಂದೆಯನರಿಯದ ಸಂದೇಹಿಗಳು !

ತನು ಪೃಥ್ವಿಯಿಂದಲಾಯಿತ್ತು, ಮನ ವಾಯುವಿನಿಂದಾಯಿತ್ತು,

ಕಲ್ಲು ಕಾಷ್ಠ ಸಕಲ-ನಿಷ್ಕಲದಿಂದಲಾಯಿತ್ತು,

ವಾಯುವಾಧಾರದ ಪವನಸಂಯೊಗದ ಅನಾಹತ ಚಕ್ರದಿಂದ ಮೇಲಣ ಆಜ್ಞಾ ಚಕ್ರದಲ್ಲಿ ನಿಂದು;

ಅನಂತಕೋಟಿ ಬ್ರಹ್ಮಾಂಡಗಳ ಮೆಟ್ಟಿ-ಕಾಯದ ಕಣ್ಣ ಮುಚ್ಚಿ, 

ಜ್ಞಾನ ಕಣ್ಣ ತೆರೆದು ನೋಡಲ್ಕೆ

ಅಲ್ಲಿ ಒಂದು ನಿರಾಕಾರ ಉಂಟು.

ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ,

ಅಲ್ಲಿ ಒಂದು ನಿಶೂನ್ಯವುಂಟು.

ಆ ನಿಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ,

ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ." 

 

 

" ಅರಿದೆನೆಂಬುದು ತಾ ಬಯಲು,

ಅರಿಯೆನೆಂಬುದು ತಾ ಬಯಲು,

ಅರುಹಿನ ಕುರುಹಿನ ಮರಹಿನೊಳಗೆ

ಗುಹೇಶ್ವರನೆಂಬುದು ತಾ ಬಯಲು."

 

ಯಥಾಸ್ಥಿತಿವಾದಿ ಸನಾತನಿಗಳು ಹೇಳುವ ವೇದˌ ಆಗಮˌ ಪುರಾಣˌ ಕಲ್ಲು ಮಣ್ಣಿನ ದೇವರುಗಳನ್ನು ಶರಣರು ಸ್ಪಷ್ಟವಾಗಿ ದಿಕ್ಕರಿಸುತ್ತಾರೆ. ಈ ಜಗತ್ತಿನಲ್ಲಿ ನರನಿಗೆ ನಾರಾಯಣನಿಲ್ಲದೆ ಅಸ್ತಿತ್ವವೇ ಇಲ್ಲ ಎನ್ನುವುದನ್ನು ನಿರಾಕರಿಸುವ ಶರಣರು ನರನಲ್ಲಿಯೇ ನಾರಾಯಣನನ್ನು ಗುರುತಿಸುತ್ತಾರೆ. ಮೇಲಿನ ಪ್ರಭುದೇವರ ವಚನದಲ್ಲಿ " ಕತ್ತಲೆಯಲ್ಲ ˌ ಬೆಳಕಲ್ಲ ಬರೀ ಬಚ್ಚ ಬಯಲು " ಎನ್ನುವ ನುಡಿ ಸಾಧನೆಯ ಕೊನೆಯ ಹಂತ ಸಂಧಿಸಿದ ಸಾಧಕನ ಸಂತ್ರಪ್ತಿಯ ಉವಾಚದಂತೆ ಗೋಚರಿಸುತ್ತದೆ. ಅದುವೆ ಶರಣರು ಕಂಡುಕೊಂಡ ಶೂನ್ಯ ಪರಂಪರೆಯ ಮಧ್ಯಮ ಮಾರ್ಗ.