ರಾಜ್ಯದಲ್ಲಿ ಲಿಂಗಾಯತ ರಾಜಕೀಯ ಮುಖಂಡರು ಎಡವಿದ್ದೆಲ್ಲಿ ?

ರಾಜ್ಯದಲ್ಲಿ ಲಿಂಗಾಯತ ರಾಜಕೀಯ ಮುಖಂಡರು ಎಡವಿದ್ದೆಲ್ಲಿ ?

ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಹುಟ್ಟಿದವರು ಸಹಜವಾಗಿಯೇ ಜಾತ್ಯತೀತರಾಗಿರಬೇಕು. ಏಕೆಂದರೆ ಶೋಷಣೆಗೊಳಗಾಗಿದ್ದ ಬಹುತೇಕ ತಳ ಸಮುದಾಯಗಳನ್ನು ಒಳಗೊಂಡೇ ಈ ಧರ್ಮ ರೂಪುಗೊಂಡಿರುವುದು. ದುರದೃಷ್ಟಕರ ವಿಚಾರ ಎಂದರೆ ಎಲ್ಲ ಸಮುದಾಯಗಳ ಮತ ಪಡೆದು ಆಯ್ಕೆಯಾಗಿ ಮುಖ್ಯಮಂತ್ರಿ ಪಟ್ಟಕ್ಕೂ ಏರುವ ಬಹುತೇಕ ಲಿಂಗಾಯತ ರಾಜಕೀಯ ಮುಖಂಡರು ತಮ್ಮ ಒಡ್ಡೋಲಗದಲ್ಲಿ ಲಿಂಗಾಯತ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಾರೆ. ಇದು ಬಸವಣ್ಣನ ಕನಸಿನ ಲಿಂಗಾಯತ ಧರ್ಮಕ್ಕೆ ಬಗೆಯುವ ದ್ರೋಹ ಎನ್ನುತ್ತಾರೆ ಡಾ.ಜೆ.ಎಸ್.ಪಾಟೀಲ

 

ಕರ್ನಾಟಕದ ರಾಜಕೀಯ ಕ್ಷೇತ್ರವನ್ನು ಅಕ್ಷರಶಃ ನಿಯಂತ್ರಿಸಿದವರು ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗದವರು. ಸ್ವಾತಂತ್ರ್ಯಾ ನಂತರದಲ್ಲಿ ಕೆ ಸಿ ರೆಡ್ಡಿ ಆದಮೇಲೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆಂಗಲ್ ಹನುಮಂತಯ್ಯ ಮತ್ತು ಕಡಿದಾಳ ಮಂಜಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾದರೆ ಆನಂತರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್.ನಿಜಲಿಂಗಪ್ಪ ˌ ಬಿ ಡಿ ಜತ್ತಿ ˌ ಎಸ್ ಆರ್ ಕಂಠಿ ಮತ್ತು ವೀರೇಂದ್ರ ಪಾಟೀಲರು ಸತತವಾಗಿ ಸುಧೀರ್ಘ ಅವಧಿಗೆ ಮುಖ್ಯಮಂತ್ರಿಗಳಾಗಿದ್ದಾರೆ. ಅಪವಾದವೆಂಬಂತೆ ಅರಸುˌ ಬಂಗಾರಪ್ಪ ˌ ಮೊಯ್ಲಿˌ ಧರ್ಮಸಿಂಗ್ ಮತ್ತು ಇತ್ತೀಚಿಗೆ  ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದ ಹಿಂದುಳಿದ ಸಮುದಾಯದವರು. ಇದರ ನಡುವೆ ಮತ್ತೆ ಲಿಂಗಾಯತ ಸಮುದಾಯದ ಬೊಮ್ಮಾಯಿˌ ಜೆ ಹೆಚ್ ಪಟೇಲ್ˌ ಯಡಿಯೂರಪ್ಪ  ಮತ್ತು ಜಗದೀಶ್ ಶೆಟ್ಟರ ಹಾಗೂ ಒಕ್ಕಲಿಗ ಸಮುದಾಯದ ಎಚ್.ಡಿ.ದೇವೇಗೌಡˌ ಎಸ್.ಎಂ.ಕೃಷ್ಣ ˌ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಗಳಾದರು. ಈ ರೀತಿಯಾಗಿ ವಿವಿಧ ಅವಧಿಗೆ ಎಂಟು ಜನ ಲಿಂಗಾಯತರುˌ ಆರು ಜನ ಒಕ್ಕಲಿಗರು ಮುಖ್ಯಮಂತ್ರಿಗಳಾದರೆ ಮೇಲ್ವರ್ಗದ ಬ್ರಾಹ್ಮಣರಾದ ಗುಂಡುರಾವ ಮತ್ತು ರಾಮಕ್ರಷ್ಣ ಹೆಗಡೆ ಕೂಡ ಮುಖ್ಯಮಂತ್ರಿಗಳಾಗಿದ್ದರು. ಮುಖ್ಯಮಂತ್ರಿ ಹುದ್ದೆ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡವರು ಲಿಂಗಾಯತ ಸಮುದಾಯದ ರಾಜಶೇಖರಮೂರ್ತಿಯವರು. ಇದರ ಹೊರತಾಗಿ ಈ ಎರಡೂ ಸಮುದಾಯಕ್ಕೆ ಸೇರಿದ ಶಾಸಕರ ಸಂಖ್ಯೆ ಸದನದ ಒಟ್ಟು ಶಾಸಕರ ಸಂಖ್ಯೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಿತ್ತು. ಇದು ರಾಜ್ಯದ ಪ್ರಬಲ ಸಮುದಾಯದವರ ರಾಜಕೀಯ ಚಿತ್ರಣ. 

 

ಇಲ್ಲಿ ಪ್ರಶ್ನೆ ಲಿಂಗಾಯತ ಮತ್ತು ಒಕ್ಕಲಿಗರ ರಾಜಕೀಯ ದರ್ಬಾರಿನದಲ್ಲ. ಪ್ರಶ್ನೆ ಇರುವುದು ಇವರಲ್ಲಿ ಎಷ್ಟು ಜನರಿಗೆ ದಮನಿತರ ಕುರಿತು ಕಾಳಜಿ ಇತ್ತು ಅನ್ನುವುದು. ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಿಂಗಾಯತ ಸಮುದಾಯ ಹರಡಿಕೊಂಡರೆ ಒಕ್ಕಲಿಗರು ದಕ್ಷಿಣದ ಹಳೇ ಮೈಸೂರು ಪ್ರಾಂತˌ ಮಧ್ಯ ಕರ್ನಾಟಕ ಮತ್ತು ಕರಾವಳಿ ಸೇರಿ ಒಟ್ಟು ಹತ್ತು ಹನ್ನೆರಡು ಜಿಲ್ಲೆಗಳಲ್ಲಿ ಮಾತ್ರ ಹರಡಿಕೊಂಡಿದ್ದಾರೆ. ಎರಡೂ ಸಮುದಾಯದವರು ಭೂಹಿಡುವಳಿದಾರರುˌ ಆರ್ಥಿಕ ಹಾಗೂ ಶೈಕ್ಷಣಿಕ ಸಬಲರು. ಹೋಲಿಕೆ ಮಾಡಿ ನೋಡಿದರೆ ಉತ್ತರ ಕರ್ನಾಟಕದ ಲಿಂಗಾಯತರು ತಕ್ಕಮಟ್ಟಿಗೆ ಜಾತ್ಯಾತೀತರಾದರೆ ದಕ್ಷಿಣದ ಲಿಂಗಾಯತರು ಅಲ್ಲಿನ ಉಳಿದ ಸಮುದಾಯದವರಂತೆ ಅಪ್ಪಟ ಜಾತಿವಾದಿಗಳು. ಬಸವಾದಿ ಶರಣರ ತತ್ವ ಚಿಂತನೆಗಳ ನೆಲವಾದ ರಾಜ್ಯದ ಉತ್ತರದ ಭಾಗ ಇಲ್ಲಿನ ಒಟ್ಟಾರೆ ಸಮುದಾಯಗಳನ್ನು ಒಂದಷ್ಟು ಜಾತ್ಯತೀತವಾಗಿಟ್ಟಿದೆ ಎನ್ನುವ ಸಂಗತಿ ನನ್ನ ಗಮನಕ್ಕೆ ಬಂದಿರುವಂತದ್ದು. ಹಾಗೆ ಉತ್ತರದಿಂದ ಆಯ್ಕೆಯಾಗಿ ದಕ್ಷಿಣದ ತುದಿಯಲ್ಲಿರುವ ಅಧಿಕಾರದ ಶಕ್ತಿ ಕೇಂದ್ರಕ್ಕೆ ಮುಖ್ಯಮಂತ್ರಿˌ ಮಂತ್ರಿಗಳಾಗಿ ಹೋದಾಗ ಸಹಜವಾಗಿ ಉತ್ತರ ಭಾಗದ ನಾಯಕರನ್ನು ಸುತ್ತುವರೆಯುವವರು ದಕ್ಷಿಣದ ಜಾತಿವಾದಿ ಸ್ವಜನರು. ಇವರು ಆಡಳಿತˌ ಅಧಿಕಾರ ಮತ್ತು ಇನ್ನಿತರ ಎಲ್ಲ ವ್ಯವಹಾರಗಳಲ್ಲೂ ಸ್ವಜನರನ್ನೇ ಸುತ್ತುವರಿಸಿಕೊಳ್ಳುವ ಪರಿಪಾಠವಿಟ್ಟುಕೊಳ್ಳುವಂತ ವಾತಾವರಣ ಸೃಷ್ಟಿಸುವರು. ಹೀಗಾಗಿ ಅಷ್ಟೊಂದು ಜಾತಿವಾದಿಗಳಲ್ಲದ ವೀರೇಂದ್ರ ಪಾಟೀಲˌ ಬೊಮ್ಮಾಯಿ ಮತ್ತು ಮಧ್ಯ ಕರ್ನಾಟಕದ ಪಟೇಲರಂಥವರೂ ಕೂಡ ದಕ್ಷಿಣದ ಸ್ವಜನರ ಪ್ರಭಾವದಿಂದ ಸ್ವಜಾತಿಯ ಅಧಿಕಾರಿಗಳನ್ನೇ ತಮ್ಮ ಸುತ್ತಲು ಗುಡ್ಡೆ ಹಾಕಿಕೊಂಡು ಸ್ವಜನ ಪಕ್ಷಪಾತದ ರಾಜಕೀಯ ಮಾಡಿದವರು. 

 

ನಾನು ಇಲ್ಲಿ ವಿಶೇಷವಾಗಿ ಲಿಂಗಾಯತ ನಾಯಕರ ಜಾತಿವಾದದ ಕುರಿತು ಬರೆಯುತ್ತಿದ್ದೇನೆ. ಲಿಂಗಾಯತ ಧರ್ಮವು ವರ್ಣ-ವರ್ಗ-ಲಿಂಗಬೇಧ ರಹಿತ ಸಮ ಸಮಾಜದ ಗಹನ ಉದ್ದೇಶವಿಟ್ಟುಕೊಂಡು ಹುಟ್ಟಿಕೊಂಡದ್ದು. ಬಸವಣ್ಣನವರಿಂದ ಸ್ಥಾಪನೆಯಾದ ಲಿಂಗಾಯತ ಧರ್ಮವನ್ನು ಅಂದು ಕಟ್ಟಿದವರು ತಳವರ್ಗದಿಂದ ಬಂದಿದ್ದ ಬಸವಣ್ಣನವರ ಸಮಕಾಲಿನ ಶರಣರು. ಹಾಗಾಗಿ ಲಿಂಗಾಯತ ಸಮುದಾಯವು ಬೇರೆಲ್ಲ ಸಮುದಾಯಗಳಿಗಿಂತ ಜಾತ್ಯತೀತವಾಗಿ ಬದುಕಬೇಕೆಂಬ ದಮನಿತ ಸಮುದಾಯಗಳ ನಿರೀಕ್ಷೆ ಸಹಜವಾದದ್ದು. ಆದರೆ ನಮ್ಮ ಲಿಂಗಾಯತ ನಾಯಕರು ದಕ್ಷರುˌ ಪ್ರಾಮಾಣಿಕರುˌ ಸೋಗಲಾಡಿಗಳುˌ ಭೋಗಜೀವಿಗಳುˌ ಏನೇ ಆಗಿರಲಿ ಜಾತ್ಯತೀತರಾಗಿರಬೇಕು ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದ ಜೆ ಎಚ್ ಪಟೇಲರು ಕೂಡ ತಮ್ಮ ಅಧಿಕಾರವಧಿಯಲ್ಲಿ ಲಿಂಗಾಯತ ಅಧಿಕಾರಿಗಳ ಒಡ್ಡೋಲಗವನ್ನೇ ನಿರ್ಮಿಸಿಕೊಂಡಿದ್ದು ವಿಪರ್ಯಾಸ. ಉಳಿದ ಒಕ್ಕಲಿಗರೋ ಅಥವ ಇನ್ನಾರೋ ಸಮುದಾಯದ ನಾಯಕರ ಜಾತಿವಾದ ನನಗಷ್ಟು ವಿಚಲಿತಗೊಳಿಸಲಾರದು. 

 

ಆ ಉಳಿದ ಸಮುದಾಯಗಳಿಗೆ ಲಿಂಗಾಯತ ಧರ್ಮಕ್ಕಿರುವಷ್ಟು ಸೈದ್ಧಾಂತಿಕ ಸ್ಪಷ್ಟತೆಯಾಗಲಿˌ ಜಾತ್ಯತೀತ ಹಿನ್ನೆಲೆಯಾಗಲಿˌ ಉದಾತ್ತ ತತ್ವ ಚಿಂತನೆಗಳಾಗಲಿ ಇರದಿರುವುದೇ ನನ್ನ ಅಚಲತೆಗೆ ಕಾರಣವಾಗುವ ಅಂಶಗಳು. ಹಾಗಾಗಿ ಲಿಂಗಾಯತ ನಾಯಕನು ಆದಷ್ಟು ಜಾತ್ಯತೀತˌ ಪರಧರ್ಮ ಸಹಿಷ್ಣುˌ ದಕ್ಷˌ ಪ್ರಾಮಾಣಿಕˌ ಮೌಢ್ಯಗಳ ವಿರೋಧಿˌ ಅದರಲ್ಲೂ ವಿಶೇಷವಾಗಿ ದಮನಿತರ ಮತ್ತು ಸಾಮಾಜಿಕ ನ್ಯಾಯದ ಪರವಾಗಿರುವನು ಆಗಿರಬೇಕು ಎಂದು ನಿರೀಕ್ಷಿಸುವುದು ಸಹಜˌ ಅದು ಸ್ವಾಭಾವಿಕ ಕೂಡ.  ಅಪ್ಪಟ ಸಮಾಜವಾದಿಗಳಾಗಿದ್ದ ಜೆ ಎಚ್ ಪಟೇಲರು ತಮ್ಮ ದಿಟ್ಟತನದಿಂದ ಜಿಲ್ಲಾ ಪುನರ್ವಿಂಗಡಣೆಯ ಕಾರ್ಯವನ್ನು ಪೂರೈಸಿದವರು. ಆದರೆ ಪಟೇಲರು ಚಾಮರಾಜನಗರ ಜಿಲ್ಲೆಯನ್ನು ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕುಳಿತು ಉದ್ಘಾಟಿಸಿದ್ದು ಮಾತ್ರ ಅವರ ಬೌದ್ಧಿಕ ದಿವಾಳಿತನದ ಪರಮಾವಧಿಯಂತಿತ್ತು. ಚಾಮರಾಜನಗರಕ್ಕೆ ಭೇಟಿಕೊಟ್ಟರೆ ಅಧಿಕಾರ ಹೋಗುತ್ತದೆ ಎನ್ನುವ ಮೌಢ್ಯವನ್ನು ಹುಟ್ಟಿಸಿದ್ದ ಪಟ್ಟಭದ್ರರ ಭ್ರಮೆಗೆ ಸಮಾಜವಾದಿ ಪಟೇಲರು ಬಲಿಯಾಗಿದ್ದರು. 

 

ಅಷ್ಟೇ ಅಲ್ಲದೆ ಪಟೇಲರ ಕೊನೆಗಾಲದಲ್ಲಿ ಅಸಹಜ ಹುಟ್ಟಿನ ಖ್ಯಾತಿಯ ಶಬರಿಮಲೈ ಅಯ್ಯಪ್ಪನ ಮಾಲೆ ಹಾಕಿ ಜೀವನದುದ್ದಕ್ಕೂ ತಾವು ಕಾಯ್ದುಕೊಂಡು ಬಂದಿದ್ದ ಸಮಾಜವಾದಿ ಇಮೇಜಿಗೆ ಮಣ್ಣುಕೊಟ್ಟುಕೊಂಡವರು. ಪಟೇಲರ ಇನ್ನೊಂದು ಮಹಾ ಪ್ರಮಾದವೆಂದರೆ ರಾಮಕೃಷ್ಣ ಹೆಗಡೆ ಮತ್ತು ಜಾರ್ಜ್ ಫರ್ನಾಂಡಿಸರ ಸ್ನೇಹಕ್ಕೆ ಮಣಿದು ಸೈದ್ಧಾಂತಿಕ ಭಿನ್ನತೆ ಇರುವ ಬಿಜೆಪಿಯೊಂದಿಗೆ ಸಂಯುಕ್ತ ಜನತಾದಳ ಗುರುತಿಸಿಕೊಳ್ಳುವ ಮೂಲಕ ಕೋಮುವಾದಿಗಳೊಂದಿಗೆ ಕೈಜೋಡಿಸಿದ್ದು. ನಾನು ಇಲ್ಲಿ ಯಡಿಯೂರಪ್ಪ ˌ ಶೆಟ್ಟರಗಳಂತ ಅಪ್ಪಟ ಜಾತಿವಾದಿಗಳ ಕುರಿತು ಬರೆಯಲು ಇಚ್ಛಿಸುವುದಿಲ್ಲ. ಅವರು ತಾಂತ್ರಿಕವಾಗಿ ಹುಟ್ಟಿನ ಕಾರಣಕ್ಕೆ ಜಾತಿ ಲಿಂಗಾಯತರಾದವರೆ ಹೊರತು ಬಸವ ಪ್ರಣೀತ ಉದಾತ್ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಫ್ರೇಮಿನಲ್ಲಿ ಇವರು ಕೂಡಲಾರದವರು. ಅಷ್ಟೇ ಅಲ್ಲದೆ ಆರಂಭದಿಂದಲೂ ಲಿಂಗಾಯತ ತತ್ವ ಸಿದ್ಧಾಂತಗಳಿಗೆ ವ್ಯತಿರಿಕ್ತವಾದ ಜೀವವಿರೋಧಿ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು. ಅಂಥವರು ಕೇವಲ ಲಿಂಗಾಯತರಾಗಿದ್ದಾರೆಂದು ನಾವು ಅವರಲ್ಲಿ ಜಾತ್ಯತೀತ ಗುಣಗಳು ಹುಡುಕುವುದು ಸಮಂಜಸವಾದುದಲ್ಲ.

 

ಕರ್ನಾಟಕದ ಮಣ್ಣಿನಲ್ಲಿ ಬಸವಾದಿ ಶರಣರು ಅಂದು ರೂಪಿಸಿದ ಸಮಸಮಾಜ ನಿರ್ಮಾಣದ ಸಮಾಜೋ-ಧಾರ್ಮಿಕ ಚಳುವಳಿಯ ಉತ್ಪನ್ನವೇ ಲಿಂಗಾಯತ ಧರ್ಮ. ಈ ಧರ್ಮದ ನೈಜ ಅನುಯಾಯಿಗಳಾದವರು ಸಮಾಜದಲ್ಲಿನ ದಮನಿತರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಹೊಣೆಗಾರಿಕೆಯವರಾಗಿರಬೇಕು. ಕರ್ನಾಟಕದ ಸಾಮಾಜಿಕˌ ಶೈಕ್ಷಣಿಕˌ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಭಾವಶಾಲಿಗಳಾಗಿರುವ ಲಿಂಗಾಯತ ಧರ್ಮಿಯರು ನಿಜವಾಗಿಯೂ ಬಸವಾದಿ ಶರಣರ ಆಶಯಗಳಿಗೆ ಅನುಗುಣವಾಗಿ ನಡೆದುದ್ದಾದರೆ ಕರ್ನಾಟಕವು ಮತ್ತೊಮ್ಮೆ ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗುವುದಲ್ಲದೆ ಲಿಂಗಾಯತರು ಇಡೀ ದೇಶಕ್ಕೆ ಮಾದರಿ ಸಮುದಾಯದವರಾಗುವುದರಲ್ಲಿ ಸಂಶಯವಿಲ್ಲ.