'ಡೆಕ್ಕನ್ ನ್ಯೂಸ್’ ವರದಿ ಆಧರಿಸಿ 19 ಮಂದಿ ಶಾಸಕರ ವಿರುದ್ಧ ಸಭಾಧ್ಯಕ್ಷರಿಗೆ ದೂರು

ಶಾಸಕರ ಭವನದ ಕಾರುಗಳನ್ನು ಶಾಸಕರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ‘ಡೆಕ್ಕನ್ ನ್ಯೂಸ್’ ನಲ್ಲಿಇತ್ತೀಚೆಗಷ್ಟೇ ಪ್ರಕಟವಾಗಿದ್ದ ಜಿ.ಮಹಂತೇಶ್ ಅವರ ತನಿಖಾ ವರದಿ ಆಧರಿಸಿ ಸ್ಪೀಕರ್ ಕಚೇರಿ ಮೆಟ್ಟಿಲೇರಿರುವ ಜನಾಧಿಕಾರ ಸಂಘರ್ಷ ಪರಿಷತ್ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ.

'ಡೆಕ್ಕನ್ ನ್ಯೂಸ್’ ವರದಿ ಆಧರಿಸಿ 19 ಮಂದಿ ಶಾಸಕರ ವಿರುದ್ಧ ಸಭಾಧ್ಯಕ್ಷರಿಗೆ ದೂರು

ಬೆಂಗಳೂರಿನ ಶಾಸಕರ ಭವನದಿಂದ ವಾಹನಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೀಡಾಗಿರುವ 19 ಮಂದಿ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಸ್ಪೀಕರ್‌ಗೆ ದೂರು ನೀಡಿದೆ.

ಅಧಿವೇಶನಕ್ಕೆ ಹಾಜರಾದ ದಿನದಂದೇ ಬೆಂಗಳೂರಿನ ಶಾಸಕರ ಭವನದಿಂದ ಶಾಸಕರು ಕಾರುಗಳನ್ನು ಪಡೆದು ಬಳಸಿರುವುದನ್ನು ಪತ್ತೆ ಹಚ್ಚಿದ್ದ  'ಡೆಕ್ಕನ್' ನ್ಯೂಸ್ ಬಗ್ಗೆ ತನಿಖಾ ವರದಿ ಪ್ರಕಟಿಸಿತ್ತು. ವರದಿ ಆಧರಿಸಿ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಮತ್ತು ಪ್ರಕಾಶ್‌ ಬಾಬು ಎಂಬುವರು ಸ್ಪೀಕರ್‌ ಕೆ ಆರ್‌ ರಮೇಶ್‌ಕುಮಾರ್‌ ಅವರಿಗೆ ದೂರು ಸಲ್ಲಿಸಿದ್ದಾರೆ.

ಶಾಸಕರ ಭವನದಲ್ಲಿನ ವಾಹನಗಳನ್ನು ಶಾಸಕರ ಬಳಕೆಗೆಂದೇ ಮೀಸಲಿಟ್ಟಿದ್ದರೂ ಅವು ದುರ್ಬಳಕೆ ಆಗುತ್ತಿವೆ. ಅದರಲ್ಲೂ ತುಂಬಾ ಮುಖ್ಯವಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿದ್ದ ಅಧಿವೇಶನದಲ್ಲಿ ಹಾಜರಾಗಿದ್ದ ದಿನದಂದೇ  19 ಮಂದಿ ಶಾಸಕರು ಬೆಂಗಳೂರು ಶಾಸಕರ ಭವನದಿಂದ ವಾಹನಗಳನ್ನು ಪಡೆದು ಬಳಸಿದ್ದಾರೆ. ಅಲ್ಲದೆ "ನಿರ್ಲಜ್ಜೆಯ, ಯಾವುದಕ್ಕೂ ಹೇಸದ ಮತ್ತು  ನೀತಿ ನಿಷ್ಠೆಗಳಿಲ್ಲದ ವ್ಯಕ್ತಿಗಳಿಂದ ದುರ್ಬಳಕೆ ಆದಂತಾಗಿದೆ," ಎಂದು ಜನಾಧಿಕಾರ ಸಂಘರ್ಷ ಪರಿಷತ್ ದೂರಿನಲ್ಲಿ ವಿವರಿಸಿದೆ. 

ಹಾಗೆಯೇ ಇದು ಗಂಭೀರವಾದ ದುರ್ನಡತೆ ಆಗಿದೆಯಲ್ಲದೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018 ಮತ್ತು ಐಪಿಸಿ ಕಲಂ 1860 ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಸರ್ಕಾರಿ ಆಸ್ತಿ ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಗಂಭೀರ ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿದೆ.

ಶಾಸನ ರೂಪಿಸುವ ಚುನಾಯಿತ ಜನಪ್ರತಿನಿಧಿಗಳು ಕಾನೂನನ್ನು ಉಲ್ಲಂಘಿಸಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಹಾಜರಾದ ದಿನದಂದೇ ಬೆಂಗಳೂರಿನ ಶಾಸಕರ ಭವನ ವಾಹನಗಳನ್ನು ಪಡೆದು ಬಳಸಿರುವುದೇ ಇದಕ್ಕೆ ಸಾಕ್ಷಿ. ಶಾಸಕರ ಭವನ ವಾಹನಗಳ ಬಳಕೆ ಸಂಬಂಧ ಸಚಿವಾಲಯ ಹೊರಡಿಸಿದ್ದ ಪ್ರಕಟಣೆಯನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಳೆದ ಡಿಸೆಂಬರ್(2018)ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನಕ್ಕೆ ಹಾಜರಾಗಿದ್ದ ಶಾಸಕರ ಪೈಕಿ ಕೆಲವು ಶಾಸಕರು, ಅಧಿವೇಶನಕ್ಕೆ ಹಾಜರಾದ ದಿನದಂದೇ ಬೆಂಗಳೂರಿನ ಶಾಸಕರ ಭವನದಿಂದ ವಾಹನಗಳನ್ನು ಪಡೆದು ಬಳಸಿದ್ದು ಚರ್ಚೆಗೆ ಗ್ರಾಸವಾಗಿತ್ತು. 

19 ಮಂದಿ ಶಾಸಕರು ಬೆಂಗಳೂರಿನ ಶಾಸಕರ ಭವನದ  ಕಾರುಗಳನ್ನು ಉಪಯೋಗಿಸಿದ್ದರು. ಅಧಿವೇಶನಕ್ಕೆ ಹಾಜರಾಗಿ ಅಲ್ಲಿಯೂ ಸಹಿ ಮಾಡಿ ಹಾಜರಾತಿ ಭತ್ಯೆ ಪಡೆದಿರುವ ಶಾಸಕರು, ಅದೇ ದಿನದಂದು ಬೆಂಗಳೂರಿನ ಶಾಸಕರ ಭವನದಿಂದ ಕಾರುಗಳನ್ನು ಪಡೆದು ಬಳಸಿ ಅಚ್ಚರಿ ಮೂಡಿಸಿದ್ದರು.

ಶಾಸಕರ ಪಟ್ಟಿ ಇಲ್ಲಿದೆ

ಮಾಜಿ ಸ್ಪೀಕರ್‌ ಹಾಗೂ ಹಾಲಿ ಶಾಸಕ ಕೆ.ಜಿ.ಬೋಪಯ್ಯ, ಸಿ.ಎಸ್‌.ಶಿವಳ್ಳಿ ವಿನಿಷ ನಿರೋ, ನಾಗನಗೌಡ ಕಂದಕೂರು, ಬಿ. ಶಿವಣ್ಣ, ಅರವಿಂದ ಚಂದ್ರಕಾಂತ ಬೆಲ್ಲದ್‌, ಈಶ್ವರ್‌ ಬಿ ಖಂಡ್ರೆ, ಯಶವಂತರಾಯಗೌಡ ಪಾಟೀಲ್‌, ಬಸವನಗೌಡ ದದ್ದಲ್, ಎಚ್‌ ವಿಶ್ವನಾಥ್‌, ದೇವಾನಂದ ಚೌಹಾಣ್‌, ಟಿ. ರಘುಮೂರ್ತಿ, ಡಿ ಎಸ್‌ ಹೂಲಗೇರಿ, ಎಸ್‌ ಅಂಗಾರ, ಈ ತುಕಾರಾಂ, ಖನಿಜಾ ಫಾತಿಮಾ, ವಿನಿಷಾ ನಿರೋ, ತನ್ವೀರ್‌ ಸೇಠ್‌, ಗೋವಿಂದ ಕಾರಜೋಳ ಅವರು ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡ ದಿನದಂದೇ ಬೆಂಗಳೂರಿನ ಶಾಸಕರ ಭವನದ ಕಾರುಗಳನ್ನು ಬಳಸಿರುವುದನ್ನು  ಜನಾಧಿಕಾರ ಸಂಘರ್ಷ ಪರಿಷತ್‌  ದಾಖಲೆ ಸಮೇತ ಸ್ಪೀಕರ್‌ಗೆ ಸಲ್ಲಿಸಿದೆ. 

ಡಿಸೆಂಬರ್‌ 15 ಮತ್ತು 16ರ ಶನಿವಾರ ಮತ್ತು ಭಾನುವಾರದಂದು ಶಾಸಕರ ಭವನದ ಕಾರುಗಳನ್ನು ಸರಿ ಸುಮಾರು 20  ಮಂದಿ ಶಾಸಕರು 45 ಬಾರಿ ಉಪಯೋಗಿಸಿರುವುದನ್ನು ದೂರಿನಲ್ಲಿ ಉಲ್ಲೇಖಿಸಿದೆ.