ಅನಿಶ್ಚಿತತೆಯ ರೋಚಕತೆಗೆ ಹಾತೊರೆಯೋಣ 

ಅನಿಶ್ಚಿತತೆಯ ರೋಚಕತೆಗೆ ಹಾತೊರೆಯೋಣ 

ಕ್ರಿಕೆಟನ್ನು ಅದೃಷ್ಟದ ಆಟವೆಂತಲೂ, ಅನಿಶ್ಚಿತತೆಗಳಿಗೆ ಖ್ಯಾತಿಯಾದ ಕ್ರೀಡೆಯೆಂತಲೂ ಕರೆಯುತ್ತಾರೆ. ಈ ಎರಡೂ ಅಂಶಗಳೂ ಎಲ್ಲಾ ಕ್ರೀಡೆಗಳಿಗೂ, ಅಷ್ಟೇ ಯಾಕೆ, ಬದುಕಿಗೂ ಅನ್ವಯಿಸುತ್ತದೆ. ಹಾಗಾಗಿ, ಅಂತಿಮವಾಗಿ ಗೆಲ್ಲುವ ತಂಡ ಯಾವುದು ಅಥವಾ ಫೈನಲ್ ಹಂತ ಮುಟ್ಟುವ ಎರಡು ತಂಡಗಳಾವುವು ಎಂಬುದರ ಬಗ್ಗೆ ನಾನಂತೂ ಜ್ಯೋತಿಷ್ಯ ನುಡಿಯಲಾರೆ. ಅನಿಶ್ಚಿತತೆ ಒದಗಿಸುವ ರೋಚಕತೆಯನ್ನು ಎದುರು ನೋಡುವುದರಲ್ಲೇ ಖುಷಿಯಿದೆ ಎನ್ನುತ್ತಾರೆ ಪಿ.ಎಂ.ವಿಜಯೇಂದ್ರ ರಾವ್.

ಆತಿಥೇಯ ಇಂಗ್ಲೆಂಡ್ ತಂಡ ವಿಶ್ವ ಕಪ್ಪನ್ನು ಬುಟ್ಟಿಗೆ ಹಾಕಿಕೊಳ್ಳುವ ವಿಶ್ವಾಸವನ್ನು ನುರಿತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ವ್ಯಕ್ತಪಡಿಸಿದ್ದಾರೆ. ಸೆಮಿಫೈನಲ್ಸ್ ಹಂತವನ್ನು ಯಾವ್ಯಾವ ತಂಡಗಳು ತಲುಪುತ್ತವೆ ಎನ್ನುವ ಲೆಕ್ಕಾಚಾರ ಸಹಜವಾಗಿಯೇ  ಕಪ್ಪನ್ನು ಯಾರು ಗೆಲ್ಲುತ್ತಾರೆ ಎನ್ನುವ ಭವಿಷ್ಯಕ್ಕಿಂತಲೂ ಸರಳವಾದದ್ದು.

ಪ್ರಬಲ ತಂಡಗಳಾದ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿಶ್ವ ಕಪ್ ಸೆಮಿಫೈನಲ್ಸ್ ಪ್ರವೇಶಿಸುತ್ತವೆಂದು ಸರಣಿ ಅರಂಭಕ್ಕೆ ಮುನ್ನವೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಪರಿಣತ ಕ್ರಿಕೆಟ್ ವಿಶ್ಲೇಷಕ ನಾಸಿರ್ ಹುಸೇನ್ ಅಂದಾಜು ಮಾಡಿದ್ದಾರೆ. ಕಳೆದ ವಿಶ್ವ ಕಪ್ ಫೈನಲ್ ನಲ್ಲಿ ಸೋತ ನ್ಯೂಜಿಲ್ಯಾಂಡ್ ಸೆಮಿಫೈನಲ್ ಪ್ರವೇಶಿಸಿದರೆ ಆಶ್ಚರ್ಯವಿಲ್ಲ ಎಂದೂ ನುಡಿದ್ದಾರೆ. 
  
2015 ರ ವಿಶ್ವ ಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಪರಸ್ಪರ ಎದುರಾಗುವುದೆಂದು ಕರಾರುವಕ್ಕಾಗಿ ಎಣಿಸಿದ್ದ ವಿಶ್ಲೇಷಕ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವಾಷಿಂಗ್ಟನ್ ವರದಿಗಾರ ಚಿದು ರಾಜ್ಘಟ್ಟ. ಅವರು ಪ್ರಮುಖವಾಗಿ ರಾಜಕಾರಣದ ಬಗ್ಗೆ ಬರೆಯುತ್ತಾರಾದ್ದರಿಂದ ಆ ಭವಿಷ್ಯವನ್ನು ಅವರ ಪತ್ರಿಕೆಯಲ್ಲಿ ಬರೆದರೋ ಏನೋ ಗೊತ್ತಿಲ್ಲ, ಆದರೆ, ಅವರ ಫೇಸ್ ಬುಕ್ ಖಾತೆಯಲ್ಲಿ ಬರೆದದ್ದು ಓದಿದ್ದೇನೆ. ಅದು ಅವರ ಅನುಭವದಿಂದ ಮತ್ತು ವಿಶ್ಲೇಷಣಾ ಸಾಮರ್ಥ್ಯದಿಂದ ಮಾಡಿದ ಎಣಿಕೆ. 

ಇಂಗ್ಲೆಂಡ್ ತಂಡವನ್ನು ಫೇವರಿಟ್ ಆಗಿ ಪರಿಗಣಿಸಲಿಕ್ಕೆ ಹಲವು ಮುಖ್ಯ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದದ್ದು: ಕೇವಲ ಎರಡು ವರ್ಷಗಳ ಹಿಂದೆ ಟ್ರೆಂಟ್ಬ್ರಿಡ್ಜ್ನಲ್ಲಿ ನಡೆದ ಏಕದಿವಸೀಯ ಪಂದ್ಯವೊಂದರಲ್ಲಿ ಪ್ರಬಲ ಪಾರಂಪರಿಕ ಪ್ರತಿಸ್ಪರ್ಧಿ ಆಸ್ಟ್ರೇಲಿಯಾ ತಂಡವನ್ನು 242 ರನ್ ಗಳ ಭಾರಿ ಅಂತರದಿಂದ ಮಣಿಸಿದ ದಾಖಲೆ. ಹಾಲಿ ವಿಶ್ವ ಚಾಂಪಿಯನ್ ವಿರುದ್ಧದ ಆ ಪಂದ್ಯದಲ್ಲಿ ಇಂಗ್ಲೆಂಡ್ ಸುನಾಮಿ ರೂಪದ 481 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿತು. ಕೇವಲ ಮೂರು ವರ್ಷಗಳ ಹಿಂದೆ ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ 444 ರನ್ ಗಳಿಸಿ ನಿರ್ಮಿಸಿದ್ದ ತನ್ನದೇ ದಾಖಲೆಯನ್ನು ಹಪ್ಪಳದಂತೆ ಮುರಿದುಹಾಕಿತು. 

ಮೊನ್ನೆ ಮೊನ್ನೆ ನಡೆದ ಪಾಕಿಸ್ತಾನ ವಿರುದ್ಧದ ಏಕದಿವಸೀಯ ಸರಣಿಯಲ್ಲಿ ಪಾಕಿಸ್ತಾನವನ್ನು ಅನಾಮತ್ತಾಗಿ ಕೆಡವಿ ತನ್ನ ಪ್ರತಿಭೆ, ಸಾಮರ್ಥ್ಯ, ಹಾಗೂ ಫಾರ್ಮ್ ಗಳನ್ನು ಜಗಜ್ಜಾಹೀರುಗೊಳಿಸಿದೆ. ಸದರಿ ಸರಣಿಯ ಆರಂಭಿಕ ಪಂದ್ಯದಲ್ಲೇ ಕ್ರಿಕೆಟ್ ದೈತ್ಯ ದಕ್ಷಿಣ ಆಫ್ರಿಕಾ ತಂಡವನ್ನು ಲೀಲಾಜಾಲವಾಗಿ ಮಣಿಸಿದೆ. 

ಆಸ್ಟ್ರೇಲಿಯಾ ವಿರುದ್ಧ ಪರ್ವತದಂತಹ ಸ್ಕೋರ್ ಆದ 434 ರನ್ ಗಳನ್ನು ಬೆನ್ನತ್ತಿ ಜಯಗಳಿಸಿದ ಕೀರ್ತಿಯನ್ನು ದಕ್ಷಿಣ ಆಫ್ರಿಕಾ ಹನ್ನೊಂದು ವರ್ಷಗಳ ಹಿಂದೆಯೇ ಸಾಧಿಸಿತು. 400ಕ್ಕೂ ಮಿಗಿಲಾದ ಸ್ಕೋರ್ ಪೇರಿಸುವಲ್ಲಿ ದಕ್ಷಿಣ ಆಫ್ರಿಕಾ ತಂಡ ಎತ್ತಿದ ಕೈ. 

ಆ ಮಟ್ಟಿಗೆ ಸಾಧನೆಯ ಶಿಖರಗಳನ್ನೇರಿದ ಅನುಭವ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳಿಗೂ ಇದೆ ನಿಜ. ಆದರೆ, 44 ವರ್ಷದ ಇತಿಹಾಸವಿರುವ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ನ್ಯೂನತೆ ಇಂಗ್ಲೆಂಡ್ಗಿದೆ. ಕಾಲಾಂತರದಲ್ಲಿ, ವರ್ಣಭೇದ ಕಳಂಕದಿಂದ ಹೊರಬಂದು ಅಂತರ ರಾಷ್ಟ್ರೀಯ ಕ್ರಿಕೆಟ್ ಬಯಲಿಗಿಳಿದ ದಕ್ಷಿಣ ಆಫ್ರಿಕಾ ಚೋಕರ್ಸ್ ಎಂಬ ಹೊಸ ಕಳಂಕವನ್ನು ಅಂಟಿಸಿಕೊಂಡಿದೆ. ಮಗು ಹಾಡು, ನೃತ್ಯ ಮುಂತಾದ ಏನೆಲ್ಲಾ ಪ್ರತಿಭೆಗಳನ್ನು ಹೆತ್ತವರ ಮುಂದೆ ಪ್ರದರ್ಶಿಸಿ ಭೇಷ್ ಅಂತ ಬೆನ್ನು ತಟ್ಟಿಸಿಕೊಂಡು ಅತಿಥಿಗಳ ಮುಂದೆ ಮುಖಹೇಡಿಗಳಾಗುವಂತೆ ಈ ಎರಡೂ ಪ್ರಬಲ ತಂಡಗಳಿಗೂ ಅದೇನು ಶಾಪವೋ ಗೊತ್ತಿಲ್ಲ. ಇಂಗ್ಲೆಂಡ್, ಕೊನೇ ಪಕ್ಷ ಫೈನಲ್ ಹಂತ ತಲುಪಿ ಅಲ್ಲಿ ಮುಗ್ಗರಿಸಿದೆ. 

ಈ ಎರಡೂ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋತದ್ದು ಆತಂಕಕಾರಿಯಲ್ಲ, ಸೋತ ಅಂತರ ಅದರ ವರ್ಲ್ಡ್ ಕಪ್ ಅದೃಷ್ಟಹೀನತೆಗೆ ಬರೆದ ವ್ಯಾಖ್ಯೆಯಾಗಿದೆ. ನೆನ್ನೆ ಭಾನುವಾರ ಕೂಡಾ, ಸಂಪ್ರದಾಯದಂತೆ, ದಕ್ಷಿಣ ಆಫ್ರಿಕಾ ಎಡವಿದೆ. ಬ್ಯಾಟಿಂಗ್ ಪಿಚ್ ನಲ್ಲಿ ಬಾಂಗ್ಲಾದೇಶವನ್ನು ಬ್ಯಾಟ್ ಮಾಡಲು ಆಹ್ವಾನಿಸಿದ ಡು ಪ್ಲೆಸ್ಸಿ ತನ್ನ ನೆಚ್ಚಿನ ಬೌಲರ್ಗಳ ಅಸಮಪರ್ಕ ಸಾಧನೆಯಿಂದ ಬಾಂಗ್ಲಾ ತಂಡ 330 ರನ್ ಬಾರಿಸುವುದನ್ನು ಅಸಹಾಯಕನಾಗಿ ನಿಂತು ನೋಡಿದರು. ಜಾಂಟಿ ರೋಡ್ಸ್ ನಂಥ ಅಸಾಮಾನ್ಯ ಫೀಲ್ಡರ್ನನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ದೇಶ ಇದೇನೇ ಎಂದು ಸಂಶಯ ಮೂಡಿಸುವಂಥ ಫೀಲ್ಡಿಂಗ್ ಪ್ರದರ್ಶನ ದಕ್ಷಿಣ ಆಫ್ರಿಕಾ ನೀಡಿತು.  

ಬಾಂಗ್ಲಾದ ಉತ್ತಮ ಎನ್ನಬಹುದಾದ ಗುರಿಯನ್ನು ದಾಟಲು ಹೋರಾಟ ದಕ್ಷಿಣ ಆಫ್ರಿಕಾ ಮೂರನೇ ಗೇರನ್ನು ಬದಲಾಯಿಸುವ ಪ್ರಯತ್ನವನ್ನೇ ಮಾಡಲಿಲ್ಲ. ನಾಯಕ ಡು ಪ್ಲಸ್ಸಿ ಅರ್ಧ ಶತಕ ಗಳಿಸಿದ್ದು ಬಿಟ್ಟರೆ, ಮುನ್ನೂರ ಮೂವತ್ತೊಂದು ರನ್ ಗಳಿಸಲು ತೋರಬೇಕಾದ ಆತುರ, ಆಕ್ರಮಣಕಾರೀ ಪ್ರವೃತ್ತಿ ಯಾವ ಬ್ಯಾಟ್ಸಮನ್ ಕೂಡಾ ತೋರಲಿಲ್ಲ. ಏರಬೇಕಾದ ಬೆಟ್ಟ ಬೆಳೆಯುತ್ತಲೇ ಹೋಯಿತು, ಆರೋಹಿಗಳ ಉಸಿರು ಉಡುಗುತ್ತಲೇ ಹೋಗಿ, ಕೊನೆಗೆ ನಿಂತೇ ಹೋಯಿತು. ದಕ್ಷಿಣ ಆಫ್ರಿಕಾ ತಂಡವನ್ನು ಚೋಕರ್ಸ್  ಕರೆಯುವುದು ಈ ಕಾರಣಕ್ಕಾಗೇ. 

ತಮ್ಮದೇ ಹಿತ್ತಲಲ್ಲಿ ಆಸ್ಟ್ರೇಲಿಯಾದಂಥ ದೈತ್ಯರು ಪೇರಿಸಿದ 434 ರನ್ ಗಳನ್ನು ದಾಟಿ ಇನ್ನೂ ಒಂದು ಬಾಲ್ ಇರುವಂತೆ 438 ಗಳಿಸಿದ ಕೀರ್ತಿ ದಕ್ಷಿಣ ಆಫ್ರಿಕಾದ್ದು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ತಾರೆ ರಿಕಿ ಪಾಂಟಿಂಗ್ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಅವರನ್ನೂ, ದಕ್ಷಿಣ ಆಫ್ರಿಕಾದ ಹರ್ಶೆಲ್ ಗಿಬ್ಸ್ ಇಬ್ಬರನ್ನೂ ಜಂಟಿಯಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಯಿತು, ಆದರೆ ಗಿಬ್ಸ್ರ ಪ್ರಚಂಡ ಆಟವನ್ನು ನೋಡಿ ಬೆರಗಾಗಿದ್ದ ಪಾಂಟಿಂಗ್ ಅವರೊಬ್ಬರೇ ಆ ಪ್ರಶಸ್ತಿಗೆ ಭಾಜನರು ಎಂದು ದೊಡ್ಡಗುಣ ಪ್ರದರ್ಶಿಸಿ ಅದನ್ನು ತಾವು ಹಂಚಿಕೊಳ್ಳಲಿಲ್ಲ. 

ಮ್ಯಾಚ್ ಉಳಿಸಿಕೊಳ್ಳಲು ಆಸ್ಟ್ರೇಲಿಯಾದ ಟ್ರವೋರ್ಡ್ ಚಾಪೆಲ್ ಪಿಂಡ ಉರಿಳಿಸಿ, ತಮಗೂ, ತಮ್ಮ ತಂಡಕ್ಕೂ, ತಮ್ಮ ದೇಶಕ್ಕೂ ಅಗೌರವ ತಂದುಕೊಂಡದ್ದರ ಬಗ್ಗೆ ಈ ಮುಂಚೆ ಪ್ರಸ್ತಾಪಿಸಿದ್ದೆ. ಆ ಅಸಹ್ಯ ಪ್ರಸಂಗದ ಬೆನ್ನಿನಲ್ಲೇ ದಕ್ಷಿಣ ಆಫ್ರಿಕಾದ ಒಬ್ಬ ಕ್ರಿಕೆಟಿಗ ಪಿಚ್ ಮೇಲೆ ಉರುಳಿಸಲಾದ ಚೆಂಡನ್ನು ಸಹಾ ಹೇಗೆ ಬಡಿದು ಸಿಕ್ಸರ್ ಗಳಿಸಬಹುದೆಂದು ಆಡಿ ತೋರಿಸಿದ್ದ. ಅಂತಹ ಅದ್ಭುತ ಕ್ರಿಕೆಟ್ ಇತಿಹಾಸವಿರುವ ದಕ್ಷಿಣ ಆಫ್ರಿಕಾ "ಯಾಕಿಲ್ಲಿ ಜನರು ಬಂದುಳಿಯಲಾರು, ಏನಿದರ ಗುಟ್ಟು ಸಾರು" ಎಂಬ ಹಾಡಿನಂತೆ ವಿಶ್ವ ಕಪ್ ಟೂರ್ನಿಯಲ್ಲಿ ಗಾಬರಿಪಡುವುದೇಕೆ ಎಂಬ ರಹಸ್ಯವನ್ನು ಸಂಶೋಧಿಸಬೇಕಿದೆ. 

ವಿಶ್ವ ಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾ ಅಚ್ಚರಿಯ ರೀತಿಯಲ್ಲಿ ಪ್ರಬಲ ಎದುರಾಳಿಗಳನ್ನು ಬಗ್ಗು ಬಡಿರುವುದು ಇದೇ ಮೊದಲಲ್ಲ. ಕಳೆದೆರಡು ಆವೃತ್ತಿಗಳಲ್ಲಿ ಇಂಗ್ಲೆಂಡಿಗೆ ಮಣ್ಣು ಮುಕ್ಕಿಸಿದ್ದರೆ, ವೆಸ್ಟ್ ಇಂಡೀಸ್ನಲ್ಲಿ ನಡೆದ ವಿಶ್ವ ಕಪ್ನಲ್ಲಿ ಭಾರತ, ದಕ್ಷಿಣ ಆಫ್ರಿಕಾಗಳೆರಡನ್ನೂ ಮಣಿಸಿದ್ದರು. ಬಾಂಗ್ಲಾ ತಂಡ ಬೆಳೆಯುತ್ತಿರುವ ಹುಲಿ. ಸದರಿ ಕಪ್ಪನ್ನು ಅದು ಗಳಿಸಿಕೊಳ್ಳುವಷ್ಟು ಹಲ್ಲುಗಳಿನ್ನೂ ಅದಕ್ಕೆ ಮೂಡಿಲ್ಲ, ಆದರೆ ಪ್ರಬಲ ತಂಡಗಳ ಕಪ್ ಅವಕಾಶಗಳನ್ನು ಹಾಳು ಗೆಡುವಷ್ಟು ಪ್ರಾಬಲ್ಯವಂತೂ ಇದ್ದೇ ಇದೆ. ಅಂತಹ ಒಂದು ಪ್ರದರ್ಶನ ನೆನ್ನೆ ಮತ್ತೊಮ್ಮೆ ನೀಡಿದೆ. ಇದೇ ಮಾತು ತಕ್ಕಮಟ್ಟಿಗೆ ಸಿದ್ಧತಾ ಪಂದ್ಯವೊಂದರಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿದ ಅಫ್ಘಾನಿಸ್ತಾನಕ್ಕೂ ಅನ್ವಯಿಸುತ್ತದೆ.  

ಸದರೀ ಟೂರ್ನಮೆಂಟ್ ನಲ್ಲಿ ಈ ವರೆವಿಗೂ ಆಡಿದ ಏಷ್ಯಾ ಖಂಡದ ಇತರೆ ತಂಡಗಳಾದ ಪಾಕಿಸ್ತಾನ, ಶ್ರೀಲಂಕಾ, ಮತ್ತು ಅಫ್ಘಾನಿಸ್ತಾನ ನೆಲಕಚ್ಚಿವೆ. ಏಷ್ಯಾ ಖಂಡದ ತಂಡಗಳ ಸೋಲಿನ ಸರಣಿಗೆ ಬಾಂಗ್ಲಾ ಮುಕ್ತಾಯ ಹಾಡಿದೆ. ನಾಳಿದ್ದು, ಏಷ್ಯಾದ ಮತ್ತೊಂದು ತಂಡವಾದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.   

ನಾಳೆ ಇಂಗ್ಲೆಂಡನ್ನು ಎದುರಿಸಲಿರುವ ಪಾಕಿಸ್ತಾನ ಈಗಾಗಲೇ ವಿಂಡೀಸ್ ವಿರುದ್ಧ ಎಡವಿ ಬಿದ್ದಿದೆ. ಹಾಗೆಂದು ಆ ತಂಡವನ್ನು ತಳ್ಳಿಹಾಕುವಂತಿಲ್ಲ. ಪ್ರತಿಭಾವಂತ ಪಾಕಿಸ್ತಾನ ವಿಂಡೀಸ್ ವಿರುದ್ಧ ಅದು ಹೇಗೆ ಹೀನಾಯವಾಗಿ ಸೋತಿತು ಎಂಬುದು ಆಶ್ಚರ್ಯಕರ. ಆ ಅಪಜಯದಿಂದ ಚೇತರಿಸಿಕೊಂಡಿದೆಯೇ ಇಲ್ಲವೇ ಎಂಬುದು ನಾಳೆ ಗೊತ್ತಾಗಲಿದೆ. (1992ರ ಒಂದು ಪಂದ್ಯದಲ್ಲಿ ಹತ್ತು ವಿಕೆಟ್ ಸೋಲು ಅನುಭವಿಸಿದ ನಂತರವೂ ಪಾಕಿಸ್ತಾನ ಕಪ್ ಗೆದ್ದಿತು ಎಂಬುದು ಮರೆಯುವಂತಿಲ್ಲ). ಪಾಕಿಸ್ತಾನವನ್ನು ಹುರಿದು ಮುಕ್ಕಿದ ವೆಸ್ಟ್ ಇಂಡೀಸ್ ಅನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಕಪ್ ಗೆದ್ದು ನಾಲ್ಕು ದಶಕಗಳು ಸಂದಿವೆ. ಹಾಗಾಗಿ ಆ ತಂಡದ ಹಸಿವೂ ಉಲ್ಬಣವಾಗಿದೆ. ಅಂತಹ ಭೀಕರ ಹಸಿವನ್ನು ನೀಗಿಸಿಕೊಳ್ಳುವ ಸಾಮರ್ಥ್ಯವನ್ನೂ ಮತ್ತೆ ಗಳಿಸಿಕೊಂಡಿದೆ.

ಕ್ರಿಕೆಟನ್ನು ಅದೃಷ್ಟದ ಆಟವೆಂತಲೂ, ಅನಿಶ್ಚಿತತೆಗಳಿಗೆ ಖ್ಯಾತಿಯಾದ ಕ್ರೀಡೆಯೆಂತಲೂ ಕರೆಯುತ್ತಾರೆ. ಈ ಎರಡೂ ಅಂಶಗಳೂ ಎಲ್ಲಾ ಕ್ರೀಡೆಗಳಿಗೂ, ಅಷ್ಟೇ ಏಕೆ, ಬದುಕಿಗೂ ಅನ್ವಯಿಸುತ್ತದೆ. ಹಾಗಾಗಿ, ಅಂತಿಮವಾಗಿ ಗೆಲ್ಲುವ ತಂಡ ಯಾವುದು ಅಥವಾ ಫೈನಲ್ ಹಂತ ಮುಟ್ಟುವ ಎರಡು ತಂಡಗಳಾವುವು ಎಂಬುದರ ಬಗ್ಗೆ ನಾನಂತೂ ಜ್ಯೋತಿಷ್ಯ ನುಡಿಯಲಾರೆ. ಅನಿಶ್ಚಿತತೆ ಒದಗಿಸುವ ರೋಚಕತೆಯನ್ನು ಎದುರುನೋಡುವುದರಲ್ಲೇ ಖುಷಿಯಿದೆ.