ಲೆಸ್ಲಿ ಮಿಲ್ಲರ್ ವರದಿ: ಮೀಸಲಾತಿಗೆ ನೂರು ವರ್ಷ!

ಲೆಸ್ಲಿ ಮಿಲ್ಲರ್ ವರದಿ: ಮೀಸಲಾತಿಗೆ ನೂರು ವರ್ಷ!

ಈ ದೇಶದಲ್ಲಿ ಅತ್ಯಂತ ಚರ್ಚಿತ ವಿಷಯ ಮತ್ತು ಸದಾ ವಿವಾದಿತ ವಿಷಯ 'ಮೀಸಲಾತಿ'ಯೇ ಎನಿಸುತ್ತದೆ! ಈ ಶಬ್ದ ಕೇಳಿದ ತಕ್ಷಣ ಈ ದೇಶದ ಜಾತಿ ವ್ಯವಸ್ಥೆಯ ಕಿವಿ ನಿಮಿರುತ್ತದೆ! ಅದು ಪರ ಅಥವಾ ವಿರೋಧ ಏನೇ ಆಗಿರಬಹುದು. ಆಶ್ಚರ್ಯವೆಂದರೆ ಅಸ್ಪೃಶ್ಯರು ಅಥವಾ ದಲಿತರಲ್ಲದ, ಅನಾಯಾಸವಾಗಿ ಮೀಸಲಾತಿ ಪಡೆಯುವ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಸ್ಪೃಷ್ಯರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಬಲಿಷ್ಟ ಜಾತಿಗಳವರೂ ಕೂಡ ಮೀಸಲಾತಿ ವಿರುದ್ದ ಉಗ್ರವಾಗಿ ವಾದ ಮಾಡಿ ಮೇಲ್ಜಾತಿಗಳನ್ನು ಓಲೈಸುತ್ತಾ ಅವರ ಕಣ್ಣಲ್ಲಿ 'ಪ್ರತಿಭೆ'ಯ ಪ್ರತಿಪಾದಕರಾಗಿ ಬಿಡುತ್ತಾರೆ!! 

ಇಲ್ಲಿ ಜಾತಿಯ ಪ್ರಶ್ನೆ ಡಾಳಾಗಿ ಬರುವುದರಿಂದ ಅನೇಕ ಜನ 'ಜಾತ್ಯತೀತರು' ತಮ್ಮ ಹೆಸರಿನ ಪಕ್ಕದಲ್ಲೇ ಜಾತಿಸೂಚಕವನ್ನು ಇಟ್ಟುಕೊಂಡಿದ್ದರೂ, ಸದಾ ಜಾತಿಯನ್ನೇ ಉಸಿರಾಡಿ, ಉಂಡು, ಹಾಸಿ,ಹೊದ್ದು, ವಿಧವಿಧವಾದ ಜಾತಿ ರಾಜಕಾರಣ ಮಾಡುತಿದ್ದರೂ "ನೀವು ಸದಾ ಜಾತಿ ಬಗ್ಗೆ ಮಾತಾಡುತ್ತೀರಿ.." ಎಂದು ಆಕ್ಷೇಪ ಎತ್ತಿ, ನಮ್ಮಂತವರನ್ನು ಜಾತಿವಾದಿಗಳನ್ನಾಗಿ ಹಣೆಪಟ್ಟಿ ಕಟ್ಟಿ ಅವರು 'ಜಾತ್ಯತೀತ'ರಾಗೇ ಇರಲು ಇಷ್ಟಪಡುತ್ತಾರೆ!!

ಈ ದೇಶದ ಜಾತಿ ವ್ಯವಸ್ಥೆಯ ವಾಸ್ತವ ಮತ್ತು ಇತಿಹಾಸಗಳನ್ನರಿಯದವರು, ಜಾತಿಯನ್ನು ಒಂದು ಒಪ್ಪಿತ ಮೌಲ್ಯವನ್ನಾಗಿ ತಮಗೆ ತಾವೇ ಒಪ್ಪಿಸಿಕೊಂಡು 'ಮೀಸಲಾತಿ' ಬಗ್ಗೆ ಮಾತ್ರ ಅತ್ಯಂತ ಕಟುವಾಗಿರ್ತಾರೆ. ಇಂತವರು ಮೀಸಲಾತಿಯ ಐತಿಹಾಸಿಕ ಹಿನ್ನೆಲೆಯನ್ನು ಅರಿತರೆ ಇವರ ಆರೋಗ್ಯ ಸುಧಾರಿಸುತ್ತದೆ ಮತ್ತು ಒಂದಷ್ಟು ಜಾಗೃತಿಯಾಗಿ ಗುಣಮುಖರಾಗುತ್ತಾರೆ!

ನಿಜಕ್ಕೂ ಇದನ್ನು 'ಮೀಸಲಾತಿ' ಎನ್ನುವುದು ತಪ್ಪು. ಇದನ್ನು‌ ಸರಿಯಾಗಿ ಗುರುತಿಸಬೇಕಾದುದು 'ಪ್ರಾತಿನಿಧ್ಯ' ಎಂಬ ಶಬ್ದದಿಂದ. 'ಮೀಸಲಾತಿ' ಎಂಬ ಶಬ್ದ ಹೆಚ್ಚು ಬಳಕೆಯಲ್ಲಿರುವುದರಿಂದ ನಮ್ಮಂತವರೂ ಈ ಶಬ್ದವನ್ನೇ ಬಳಸುತ್ತಿರುತ್ತೇವೆ.

ನಿಜಕ್ಕೂ ಮೀಸಲಾತಿಯ ಪರಿಕಲ್ಪನೆ ಆರಂಭವಾದುದು ಮನುಧರ್ಮ ಶಾಸ್ತ್ರದಿಂದ!? ಕುಲವೃತ್ತಿಗಳನ್ನು ಆಧಾರಿಸಿ ಜಾತಿಪದ್ದತಿಯನ್ನು ಜಾರಿಗೆ ತಂದು, ಜನರನ್ನು ಜಾತೀವಾರುಗಳಾಗಿ ವಿಭಾಗಿಸಿ, ಜಾತಿಯ ಆಧಾರದ ಮೇಲೆಯೇ ಅಗ್ರಹಾರ, ಲಿಂಗಾಯಿತರ ಓಣಿ, ಗೌಡರ ಹಟ್ಟಿ, ಹೊಲೆಯರ ಹಟ್ಟಿ, ಮಾದಿಗರ ಹಟ್ಟಿ, ಬ್ಯಾಡರ ಹಟ್ಟಿ, ಕುರುಬರ ಹಟ್ಟಿ, ಮೇದರ ಹಟ್ಟಿ ಮುಂತಾಗಿ ಆಯಾ ಜಾತಿಗಳು ಬದುಕುವ ಜಾಗಗಳನ್ನೇ ಹಟ್ಟಿ, ಓಣಿ, ವಾಡೆ, ಮೊಳೆ, ಮೊಹಲ್ಲ ಮುಂತಾಗಿ ಮೀಸಲು ಮಾಡಿ, ಅವರಿಗೆ ಜಾತಿಯ ಕಟ್ಟುಪಾಡುಗಳನ್ನು ವಿಧಿಸಿ ಜಾತೀಯ ಕಟಕಟೆಯಲ್ಲಿ ಶಾಶ್ವತವಾಗಿ ಮೀಸಲಿರಿಸಿದ್ದೇ 'ಮೀಸಲಾತಿ'.   

ಹಾಗೆ ನೋಡಿದರೆ ಈ 'ಮೀಸಲಾತಿ' ಎಂಬ ಅಸಮಾನತೆಯ ವಿರುದ್ದ ಧ್ವನಿಯೆತ್ತಿದ ಈ ನೆಲದ ಸಂತರು, ಸಮಾಜ ಸುಧಾರಕರು, ಸುಧಾರಣಾವಾದಿಗಳು, ಸಮಾತಾವಾದಿಗಳು ಪ್ರತಿಪಾದಿಸಿದ ಪ್ರತಿಧ್ವನಿಯೇ 'ಪ್ರಾತಿನಿಧ್ಯ'! ಆದ್ದರಿಂದಲೇ ಸಂವಿಧಾನ ಕಟ್ಟಿಕೊಟ್ಟ ಡಾ.ಅಂಬೇಡ್ಕರ್ ಅವರನ್ನೂ ಸೇರಿಸಿದಂತೆ ನಮ್ಮ ಪರಿವರ್ತನಾ ಚಳುವಳಿಯ ನೇತಾರರೆಲ್ಲಾ ಈ ಸಮಾನತೆಯ ಶಾಸನವನ್ನು 'ಪ್ರಾದಿನಿಧ್ಯ'(representation) ಎಂದೇ ಪ್ರಜ್ಞಾಪೂರ್ವಕವಾಗಿ ಕರೆಯುತ್ತಾರೆ. 

'ಪ್ರಾತಿನಿಧ್ಯ' ಎಂಬ ಪರಿಕಲ್ಪನೆ ಭಾರತ ಮಟ್ಟದಲ್ಲಿ ನೋಡಿದಾಗ ಇದು ಭಗವಾನ್ ಬುದ್ದರಲ್ಲೇ ಸೂಕ್ಷ್ಮವಾಗಿ ಕಾಣ ಸಿಗುತ್ತದೆ. ನಂತರ ಇದು ಜ್ಯೋತಿಬಾ ಪುಲೆ, ಸಾವಿತ್ರಿ ಬಾಪುಲೆ, ಸಾಹು ಮಹಾರಾಜ್ ರಲ್ಲಿ ಹರಳುಗಟ್ಟಿದರೆ, ಡಾ. ಅಂಬೇಡ್ಕರ್ ಅವರಲ್ಲಿ ಶಾಸನವಾಗಿ ರೂಪುಗೊಳ್ಳುತ್ತದೆ. ಅದೇ ರೀತಿ ಕರ್ನಾಟಕದಲ್ಲೂ ಈ 'ಪ್ರಾತಿನಿಧ್ಯ'ವೆಂಬ ಸಾಮಾಜಿಕ  ನ್ಯಾಯದ ಐತಿಹಾಸಿಕ ಪರಂಪರೆಯಲ್ಲಿ ಇದು ಮೊದಲು ಅಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಸುಲ್ತಾನ್ ಟಿಪ್ಪುವಿನಲ್ಲಿ, ಮತ್ತೇ ಈ ಪ್ರಾತಿನಿಧ್ಯ ಹರಳುಗಟ್ಟುವುದು ನಾಲ್ವಡಿ ಕೃಷ್ಣರಾಜ ಒಡೆಯರ್ ರವರಲ್ಲಿ! ಇದಕ್ಕೆ ಶಾಸನ ರೂಪದ ಮಹತ್ವ ಸಿಗುವುದು 'ಲೆಸ್ಲಿ ಮಿಲ್ಲರ್ ಸಮಿತಿ' ಎಂಬ ಐತಿಹಾಸಿಕ ವರದಿಯಲ್ಲಿ! ಇಂದು ಈ ಮಿಲ್ಲರ್ ಸಮಿತಿಯ ವರದಿಗೆ ನೂರು ವರ್ಷವಾಗುತ್ತಿದೆ! ಇದರಿಂದಾಗಿ ಅನೇಕ ತಳ ಸಮುದಾಯಗಳ ಬದುಕಿನಲ್ಲಿ ಬೆಳಕು ಕಂಡಿದೆ! ಈ ಕಾರಣಕ್ಕೇ ಇದನ್ನು ನೆನೆಯುವ ಐತಿಹಾಸಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಜಸ್ಟೀಸ್ ಲೆಸ್ಲಿ ಮಿಲ್ಲರ್ ರವರು ನಾಲ್ವಡಿ ಕೃಷ್ಣರಾಜ ಒಡೆಯರ್ ಬಹುದ್ದೂರ್ ಆಳ್ವಿಕೆಯ ಮೈಸೂರು ಸರ್ಕಾರದ ಅವಧಿಯಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರು.  ನಾಲ್ವಡಿಯವರು ಕೊಲ್ಲಾಪುರದ ಶಾಹು ಮಹಾರಾಜರ ಆಪ್ತರಾಗಿದ್ದರು. ಸಾಮಾಜಿಕ ಪರಿವರ್ತನೆಯಲ್ಲಿ ನಾಲ್ವಡಿಯವರ ಮೇಲೆ ಶಾಹು ಮಹಾರಾಜರ ಪ್ರಭಾವ ಗಾಡವಾಗಿ ಬೀರಿದ್ದು, ನಾಲ್ವಡಿಯವರು ಅನೇಕ ಸಮಾಜ ಸುಧಾರಣಾ ನಿರ್ಣಯಗಳನ್ನು ತೆಗೆದುಕೊಳ್ಳಲು ಪರೋಕ್ಷ ಕಾರಣವಾಗಿತ್ತು. ಶಾಹು ಮಹಾರಾಜರು 1902ರಲ್ಲೇ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ  ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡು ಸರ್ಕಾರಿ ಆದೇಶ ಹೊರಡಿಸಿ ಜಾರಿಗೆ ತಂದರು! ಈ ವಿಷಯದಲ್ಲಿ ಶಾಹು ಅವರ ಮೇಲೆ ಪ್ರಭಾವ ಬೀರಿದವರು ಪ್ರಜಾ ಪರಿವರ್ತನಾ ಚಳುವಳಿಯ ನೇತಾರ ಜ್ಯೋತಿಬಾಪುಲೆ! ಮತ್ತು ಸಾವಿತ್ರಿ ಬಾಪುಲೆ ದಂಪತಿಗಳು! ಮತ್ತು ನಿಸ್ಸಂಶಯವಾಗಿ ಡಾ.ಅಂಬೇಡ್ಕರ್ ಅವರು!

ಮೈಸೂರಿನ "ಪ್ರಜಾ ಮಿತ್ರ ಮಂಡಳಿ" ಬ್ಯಾನರ್ ಅಡಿಯಲ್ಲಿ ಪ್ರಾತಿನಿದ್ಯ ವಂಚಿತ ಹಿಂದುಳಿದ ಸಮುದಾಯಗಳು ನೇಮಕಾತಿ ಮತ್ತು ಶಿಕ್ಷಣದಲ್ಲಿ ತಮಗೆ ಪ್ರಾತಿನಿದ್ಯ ನೀಡಬೇಕೆಂದು ಆಂದೋಲನ ಪ್ರಾರಂಭಿಸಿ, ನಾಲ್ವಡಿಯವರ ಮೇಲೆ ಒತ್ತಡ ಹೇರತೊಡಗಿದವು. ಅಂತೆಯೇ  ಮೈಸೂರು ರಾಜ್ಯದಲ್ಲೂ ತಾಂಡವಾಡುತ್ತಿದ್ದ ಸಾಮಾಜಿಕ ಅಸಮಾನತೆಯನ್ನು ಹತ್ತಿರದಿಂದ ಗಮನಿಸಿದ್ದ ನಾಲ್ವಡಿಯವರಲ್ಲಿ  ಹಿಂದುಳಿದವರಿಗೆ ಪ್ರಾತಿನಿದ್ಯ ನೀಡಬೇಕೆಂಬ ಕಾಳಜಿಯೂ  ಜಾಗೃತಗೊಂಡಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಲು ಜಸ್ಟೀಸ್ ಲೆಸ್ಲಿ ಮಿಲ್ಲರ್ ಅವರ ನೇತೃತ್ವದ ಸಮಿತಿಯನ್ನು ರಚಿಸಿದರು. ಆ ಸಮಿತಿಯಲ್ಲಿ ಸಿ.ಶ್ರೀಕಂಠೇಶ್ವರ ಅಯ್ಯರ್, ಹೆಚ್.ಚನ್ನಯ್ಯ, ಎಂ.ಬಸವಯ್ಯ, ಗುಲಾಂ ಅಹಮದ್ ಕಲಾಮಿ, ಎಂ.ಮುತ್ತಣ್ಣ ಅವರನ್ನು ಸದಸ್ಯರನ್ನಾಗಿ ಸೇರಿಸಿದರು. ಇದು ಸಾರ್ವಜನಿಕ ಸೇವೆಯಲ್ಲಿ ಎಲ್ಲಾ ಅವಕಾಶ ವಂಚಿತ ಸಮುದಾಯಗಳ ಸಮರ್ಪಕ ಪ್ರಾತಿನಿದ್ಯಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ನಿಯಮಗಳನ್ನು ಯೋಚಿಸಿ ಪರಿಗಣಿಸಲು ನಿರ್ದಿಷ್ಟ ಉದ್ದೇಶಕ್ಕಾಗಿಯೇ ನೇಮಕಗೊಂಡ ಸಮಿತಿಯಾಗಿತ್ತು. ಈ ಸಮಿತಿ 1918ರ ಆಗಸ್ಟ್ 23 ರಂದು ಸರ್ಕಾರಿ ಆದೇಶ ಸಂಖ್ಯೆ ಇಎಜಿ 308 ರ ಅಡಿಯಲ್ಲಿ ರಚಿಸಲಾಯಿತು.

ಉಲ್ಲೇಖಿತ ನಿಯಮಗಳ(terms of reference)ಪ್ರಕಾರ ಸಾರ್ವಜನಿಕ ಸೇವೆಯಲ್ಲಿ ಬ್ರಾಹ್ಮಣ ಸಮುದಾಯ ತನ್ನ ಜನಸಂಖ್ಯೆಯ ಪ್ರಮಾಣದ ಅನುಗುಣವನ್ನು ಮೀರಿ ಅತಿಹೆಚ್ಚು ಪ್ರಮುಖ ಸ್ಥಾನಗಳನ್ನು ಹೊಂದಿದೆ, ಇದೇ ರೀತಿ ಇತರೆ ಅವಕಾಶ ವಂಚಿತ ಸಮುದಾಯಗಳೂ ಪ್ರತಿನಿಧಿಸಬೇಕೆಂಬುದು ಇದರ ಉದ್ದೇಶ. ಈ ದಿಸೆಯಲ್ಲಿ ನೇಮಕಾತಿ ನಿಯಮಗಳಲ್ಲಿ ಅಗತ್ಯ ಬದಲಾವಣೆ ತರುವುದು, ಹಿಂದುಳಿದ ಸಮುದಾಯಗಳಲ್ಲಿ ಉನ್ನತ ಮತ್ತು ವೃತ್ತಿಪರ ಶಿಕ್ಷಣವನ್ನು ಉತ್ತೇಜಿಸಲು ಕೈಗೊಳ್ಳಬೇಕಾದ ವಿಶೇಷ ಸೌಲಭ್ಯಗಳನ್ನು ರೂಪಿಸುವುದು, ಇದರಿಂದಾಗಿ ಸದರಿ ಸಮುದಾಯಗಳ ಪ್ರಾತಿನಿದ್ಯವನ್ನು ಹೆಚ್ಚಿಸಲು ತೆಗೆದುಕೊಳ್ಳಬೇಕಾದ ವಿಶೇಷ ಆದ್ಯತೆಗಳು, ದಕ್ಷತೆಗೆ ಧಕ್ಕೆಯಾಗದಂತೆ ವಹಿಸಬೇಕಾದ ಕ್ರಮಗಳು ಮುಂತಾಗಿ ನಿಯಮಗಳನ್ನು ರೂಪಿಸಲಾಯಿತು.

ಹಿಂದುಳಿದ ಸಮುದಾಯಗಳು ಯಾರು ಎಂಬ ಬಗ್ಗೆಯೂ ವ್ಯಾಖ್ಯಾನಗಳನ್ನು ನೀಡಲಾಯಿತು. 1911ರ ಜಾತಿ ಜನಗಣತಿಯಲ್ಲಿನ ಸಾಕ್ಷರತೆ, ಉದ್ಯೋಗದಲ್ಲಿನ ಪ್ರಾತಿನಿದ್ಯವನ್ನು   ಗಮದಲ್ಲಿಟ್ಟುಕೊಂಡು ಸಮಿತಿ ಕೆಲಸ ಮಾಡತೊಡಗಿತು. ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿವೇತನ, ಸಾರ್ವಜನಿಕ ಸೇವಾ ನೇಮಕಾತಿಗಳಿಗೆ ವಯೋಮಿತಿಯನ್ನು ಸಡಿಲಿಸುವುದು ಮತ್ತು ಅರ್ಹತೆಯನ್ನೇ ಮಾನದಂಡವಾಗಿಟ್ಟುಕೊಂಡು ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಮಾಡಬೇಕಾದ ಬದಲಾವಣೆಗಳ ಕುರಿತೂ ಸಮಿತಿ ವಿಶ್ಲೇಷಿಸತೊಡಗಿತು. ಸಮರ್ಪಕ ಪ್ರಾತಿನಿದ್ಯ, ಪ್ರಾಥಮಿಕ, ಮಾಧ್ಯಮಿಕ, ಪ್ರೌಡ ಶಿಕ್ಷಣದಲ್ಲಿ ಇಂಗ್ಲೀಷ್ ಮಾಧ್ಯಮದಿಂದಾಗಿ ಹಿಂದುಳಿದ ಮತ್ತು ಬ್ರಾಹ್ಮಣ ಸಮುದಾಯದ ನಡುವಿನ ಅಂತರ, ಉದ್ಯೋಗದಲ್ಲಿ ದಕ್ಷತೆಯ ಮಾನದಂಡಗಳು, ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ನಿಲಯಗಳೇ ಮುಂತಾಗಿ ಅನೇಕ ವಿಷಯಗಳ ಬಗ್ಗೆ ಮಿಲ್ಲರ್ ಸಮಿತಿ  ಚರ್ಚಿಸಿ ವ್ಯಾಖ್ಯಾನಗಳನ್ನು ನೀಡಿದೆ. ಇದರ ಆಧಾರದ ಮೇಲೆ ಹಿಂದುಳಿದ ಅಥವಾ ಬ್ರಾಹ್ಮಣೇತರ ಸಮುದಾಯಗಳಿಗೆ ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಪ್ರಾತಿನಿದ್ಯ ನೀಡಬೇಕೆಂದು ಈ ಸಮಿತಿ ಶಿಫಾರಸ್ಸು ಮಾಡುತ್ತದೆ.

ಈ ಶಿಫಾರಸ್ಸುಗಳಲ್ಲಿ ಕೆಲವನ್ನು ಒಪ್ಪಿಕೊಳ್ಳದ ಸಮಿತಿಯಲ್ಲಿದ್ದ ಶ್ರೀಕಂಠೇಶ್ವರ ಅಯ್ಯರ್ ಮತ್ತು ರಂಗ ಅಯ್ಯಂಗಾರ್ ರವರು ಅಸಮ್ಮತಿಯ ಟಿಪ್ಪಣಿ(descent note)ಹಾಕಿದ್ದಾರೆ. ಇದು ಕಡತಗಳಲ್ಲಿ ದಾಖಲಾಗಿದೆ.

ದುರಂತವೆಂದರೆ ನಾಲ್ವಡಿಯವರಿಗೆ ಅತ್ಯಂತ ಆಪ್ತರಾಗಿದ್ದ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರು ಮಿಲ್ಲರ್ ಸಮಿತಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿದ್ಯ ನೀಡಬೇಕೆಂಬ ಶಿಫಾರಸ್ಸನ್ನು ವಿರೋಧಿಸಿ ತಮ್ಮ ದಿವಾನ್ ಗಿರಿಗೆ ರಾಜೀನಾಮೆ ನೀಡುವುದರ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಾರೆ! ನಾಲ್ವಡಿಯವರು ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿತ್ಯ ನೀಡುವ ಕಾರಣಕ್ಕಾಗಿ ತಮ್ಮ ಆಪ್ತರಾದ ಸರ್.ಎಂ.ವಿಶ್ವೇಶ್ವರಯ್ಯನವರಂತಹ ಮುತ್ಸದ್ದಿಯನ್ನು ಕೂಡ ಕಳಕೊಳ್ಳಲು ತಯಾರಾಗುತ್ತಾರೆ. ಅವರ ಬದ್ದತೆ, ಕಾಳಜಿಗಳು ಅಂತಹವು!!

ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮಿಲ್ಲರ್ ಸಮಿತಿ ಮೂಲಕ  ಹಿಂದುಳಿದ ವರ್ಗಗಳಿಗೆ ನೀಡಿದ 'ಸಾಮಾಜಿಕ ಪ್ರಾತಿನಿದ್ಯ' ಈ ನಾಡಿನಲ್ಲಿ ಸಾಮಾಜಿಕ ನ್ಯಾಯದ ಅನುಷ್ಟಾನಕ್ಕೆ  ಒಂದು ಐತಿಹಾಸಿಕ ಪ್ರಕ್ರಿಯೆಯಾಗುತ್ತದೆ, ಸಾಮಾಜಿಕ ನ್ಯಾಯದ ಪರಂಪರೆಗೆ ನಾಂದಿಯಾಗುತ್ತದೆ. ಮಿಲ್ಲರ್ ಸಮಿತಿಯ ಯಶಸ್ಸಿನ ನಂತರ ನಾಗನಗೌಡ ಸಮಿತಿ ಅನುಷ್ಟಾನಕ್ಕೆ ಬರುತ್ತದೆ. ಈ ಚಾರಿತ್ರಿಕ ಕಾಲಘಟ್ಟದ ಕೂಸಾಗಿ ದೇವರಾಜ ಅರಸರು ಈ ನಾಡಿನ ಮುಖ್ಯಮಂತ್ರಿಯಾಗುತ್ತಾರೆ. ನಾಲ್ವಡಿಯವರು ಆರಂಭಿಸಿದ ಸಾಮಾಜಿಕ ನ್ಯಾಯದ ಪ್ರಯಾಣವನ್ನು ಅರಸುರವರು ಮುಂದುವರೆಸುತ್ತಾರೆ. ಅರಸುರವರು ಹಾವನೂರು ಆಯೋಗವನ್ನು ನೇಮಿಸಿ ಹಿಂದುಳಿದವರಿಗೆ ಕಣ್ಣು ನೀಡುತ್ತಾರೆ. ನಂತರ ವೆಂಕಟಸ್ವಾಮಿ ಆಯೋಗ, ಜಸ್ಟೀಸ್ ಚಿನ್ನಪ್ಪರೆಡ್ಡಿ ಆಯೋಗ ಹೀಗೆ ಅಂದು ನಾಲ್ವಡಿಯವರು ಹಚ್ಚಿದ ಜ್ಯೋತಿ ಇಂದಿಗೂ ನಮಗೆ ಅನೇಕ‌ ಆಯೋಗಗಳ ಮೂಲಕ ಬೆಳಕು ತೋರುತ್ತಾ ಮುನ್ನಡೆಸುತ್ತಿದೆ...

ಮಿಲ್ಲರ್ ಸಮಿತಿಯಲ್ಲಿ ಹಿಂದುಳಿದವರು, ಬ್ರಾಹ್ಮಣೇತರರು ಎಂದು ವಿಭಾಗಿಸಿದಾಗ‌ ಇದರಲ್ಲಿ ಲಿಂಗಾಯಿತರು, ಒಕ್ಕಲಿಗರು, ಈಡಿಗರು, ನಾಯಕರು, ಕುರುಬರೇ ಮುಂತಾದ ಅಸಂಖ್ಯಾತ ಹಿಂದುಳಿದ ಸಮುದಾಯಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು ಕೂಡ ಸೇರುತ್ತಾರೆ. ಇದು ಅರಸು ಅವರ ಕಾಲದಲ್ಲಿ ಒಳ ವರ್ಗೀಕರಣ ನಡೆದು ಕ್ರಮೇಣ ಪರಿಶಿಷ್ಟ ಜಾತಿ, ಪರಿಷಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಾಗಿ ವಿಂಗಡನೆಯಾಯಿತು. ಇದಕ್ಕೆ ಕಾರಣ ಅಂದು ಮಿಲ್ಲರ್ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ವಿಭಾಗಿಸಿದಂತೆ ಹಿಂದುಳಿದ ವರ್ಗಗಳಲ್ಲಿದ್ದ ಬಲಿಷ್ಟ ಸಮುದಾಯದವರಾದ ಲಿಂಗಾಯಿತರು, ಒಕ್ಕಲಿಗರು ಹೆಚ್ಚು ಅವಕಾಶಗಳನ್ನು ಪಡೆದರು ಅನ್ನುವುದು. ಅದೇ ರೀತಿ ಅಂದು ಲಿಂಗಾಯಿತರು ಮತ್ತು ಒಕ್ಕಲಿಗರಿಂದ ಬೇರಾಗಿ ಹಾವನೂರು ವರದಿಯ ಆಧಾರದ ಮೇಲೆ ಹಿಂದುಳಿದ ವರ್ಗದ ಪಟ್ಟಿಯ ಪ್ರವರ್ಗ ಒಂದು ಮತ್ತು ಪ್ರವರ್ಗ 2(a) ರಲ್ಲಿ ಸೇರಿಕೊಂಡವರೂ ಕೂಡ ಇಂದು ಹಿಂದುಳಿದ ವರ್ಗಗಳಲ್ಲೇ ಅತಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿರುವುದು ಢಾಳಾಗಿ ಕಾಣುತ್ತಿದೆ! ಇದರಿಂದಾಗಿ ಸದರಿ ಪಟ್ಟಿಗಳಲ್ಲಿನ ಅಸಂಘಟಿತ ಹಾಗೂ ಅಸಹಾಯಕ ಸಮುದಾಯಗಳು ತಮ್ಮ ಪಾಲು ದೊರಕದೆ ಕಂಗಾಲಾಗಿವೆ! ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಅಸಮಾನತೆಯನ್ನು ಗುರುತಿಸಿ ಹೋಗಲಾಡಿಸಲು ಸದಾಶಿವ ಆಯೋಗದ ವರದಿ ನಮ್ಮ ಮುಂದಿದೆ. ಆದರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಅಸಮಾನತೆಯನ್ನು‌ ಗುರುತಿಸಲು ಒಬ್ಬ ನಾಲ್ವಡಿ ರೂಪಿಸಿದ ಲೆಸ್ಲಿ ಮಿಲ್ಲರ್ ಅಥವ ಒಬ್ಬ ಅರಸು ರೂಪಿಸಿದ ಎಲ್.ಜೆ.ಹಾವನೂರರ‌ ಆಗಮನಕ್ಕಾಗಿ ದಲಿತ ಮತ್ತು ಹಿಂದುಳಿದ ವರ್ಗಗಳಲ್ಲಿನ‌ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳೊಂದಿಗೆ ಆದಿವಾಸಿಗಳು, ಅಲೆಮಾರಿಗಳು ಜಾತಕ ಪಕ್ಷಿಗಳಂತೆ ಕಾಯುತಿದ್ದಾರೆ..!!
                        ‌‌‌