ಲಕ್ಷ್ಮಿ ಕಟಾಕ್ಷ: ‘ಒಂದೇ’ ಆಸ್ತಿ ಮೇಲೆ ಡಿಸಿಸಿ ಬ್ಯಾಂಕ್ ಗಳಿಂದ 335 ಕೋಟಿ ರೂ.ಸಾಲ! 

ರಾಜಕೀಯ ಪ್ರಭಾವಳಿ ಇದ್ದಲ್ಲಿ ನೂರಾರು ಕೋಟಿ ರು.ಸಾಲ ಪಡೆಯಬಹುದು ಎಂಬುದಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶಕರಾಗಿರುವ ಹರ್ಷ ಶುಗರ್ಸ್ ಲಿಮಿಟೆಡ್ ಉತ್ತಮ ನಿದರ್ಶನ.

ಲಕ್ಷ್ಮಿ ಕಟಾಕ್ಷ: ‘ಒಂದೇ’ ಆಸ್ತಿ ಮೇಲೆ ಡಿಸಿಸಿ ಬ್ಯಾಂಕ್ ಗಳಿಂದ 335 ಕೋಟಿ ರೂ.ಸಾಲ! 

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ದೇಶಕರಾಗಿರುವ ಹರ್ಷ ಶುಗರ್ಸ್ ಲಿಮಿಟೆಡ್ ರಾಜ್ಯದ ವಿವಿಧ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳಿಂದ 335 ಕೋಟಿ ರು .ಮೊತ್ತದಲ್ಲಿ ಸಾಲ ಎತ್ತಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಸಾಲ ನೀಡಿರುವ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ)ಬ್ಯಾಂಕ್ ಗಳು, ಹರ್ಷ ಶುಗರ್ಸ್ ಲಿಮಿಟೆಡ್ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಹೊಂದಿದೆ ಎನ್ನಲಾಗಿರುವ 1.69 ಕೋಟಿ ರೂ. ಮೌಲ್ಯದ 51 ಎಕರೆ ಜಾಗವನ್ನು ಭದ್ರತೆಯನ್ನಾಗಿಸಿಕೊಂಡಿದೆ.

ಇಷ್ಟೊಂದು ದೊಡ್ಡ ಮೊತ್ತದಲ್ಲಿ ಸಾಲ ನೀಡಲು ಇದೊಂದೇ ಜಾಗವನ್ನು ಭದ್ರತೆಯನ್ನಾಗಿಸಿಕೊಂಡಿರುವ ಹಲವು ಡಿಸಿಸಿ ಬ್ಯಾಂಕ್ ಗಳ ಆಡಳಿತ ಮಂಡಳಿಗಳ  ನಿರ್ಧಾರಗಳು ಅಚ್ಚರಿ ಮೂಡಿಸಿವೆ. 

ವಿಶೇಷವೆಂದರೆ ಹರ್ಷ ಶುಗರ್ಸ್ ಲಿಮಿಟೆಡ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳ ಕಾರ್ಯ ವ್ಯಾಪ್ತಿಯಿಂದ ಹೊರಗಿರುವುದು. ಆದರೂ ಕೋಟ್ಯಂತರ ರು.ಮೊತ್ತದಲ್ಲಿ ಡಿಸಿಸಿ ಬ್ಯಾಂಕ್ ಗಳು ಸಾಲ ನೀಡಿವೆ. ಹರ್ಷ ಶುಗರ್ಸ್ ಲಿಮಿಟೆಡ್ ಗೆ ಸಾಲ ನೀಡಿರುವ ಡಿಸಿಸಿ ಬ್ಯಾಂಕ್ ಗಳು ಮತ್ತು ಇದರ ಆಡಳಿತ ಮಂಡಳಿಯ ನಿರ್ಧಾರಗಳನ್ನು ಜಾರಿ ನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೊಂದಿರುವ ಆಸ್ತಿಯ ದಾಖಲೆಗಳನ್ನು ಪರಿಶೀಲಿಸುತ್ತಿರುವ  ಜಾರಿ ನಿರ್ದೇಶನಾಲಯ, ಹರ್ಷ ಶುಗರ್ಸ್ ಲಿಮಿಟೆಡ್ ಪಡೆದಿರುವ ಸಾಲ ಮತ್ತು ಉದ್ದೇಶಿತ ಸಕ್ಕರೆ ಕಾರ್ಖಾನೆಯಲ್ಲಿ ಹೂಡಿಕೆ ಆಗಿದೆಯೇ ಅಥವಾ ಅನ್ಯ ಉದ್ದೇಶಕ್ಕೆ ಬಳಕೆ ಆಗಿದೆಯೇ ಎಂಬುದರ ಹಿಂದೆಯೂ ಬೆನ್ನು ಬಿದ್ದಿದೆ.

ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ನ ಅಧ್ಯಕ್ಷರೂ ಆಗಿರುವ ಕೆ ಎನ್ ರಾಜಣ್ಣ ಅವರಿಗೆ ಜಾರಿ ನಿರ್ದೇಶನಾಲಯ ನೀಡಿರುವ ನೋಟೀಸ್ ನ ಹಿಂದೆ  ಹರ್ಷ ಶುಗರ್ಸ್ ಲಿಮಿಟೆಡ್ ಪಡೆದಿರುವ ಸಾಲದ ಪ್ರಕರಣವೇ ಮೂಲ ಕಾರಣ ಎಂದು ತಿಳಿದು ಬಂದಿದೆ.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿಯೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು ಹರ್ಷ ಶುಗರ್ಸ್ ಲಿಮಿಟೆಡ್ ಗೆ ಸಾಲ ನೀಡಿರುವುದು ಲಭ್ಯ ಇರುವ ದಾಖಲೆಗಳಿಂದ ಗೊತ್ತಾಗಿದೆ.

ಹರ್ಷ ಶುಗರ್ಸ್ ಲಿಮಿಟೆಡ್, 2019ರ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು 335 ಕೋಟಿ ರು. ಸಾಲ ಪಡೆದಿರುವುದರ ಹಿಂದೆ ಲಕ್ಷ್ಮಿ ಹೆಬ್ಬಾಳಕರ್ ಅವರ ವೈಯಕ್ತಿಕ ಪ್ರಭಾವ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗಿನ ರಾಜಕಾರಣದ ನಿಕಟತನದ ಪಾಲೂ ಇದೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 45 ಕೋಟಿ ರು., ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 40 ಕೋಟಿ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 25 ಕೋಟಿ, ಕೆನರಾ ಡಿಸಿಸಿ ಬ್ಯಾಂಕ್ 25 ಕೋಟಿ ರು., ತುಮಕೂರು ಡಿಸಿಸಿ ಬ್ಯಾಂಕ್ 25 ಕೋಟಿ ರು., ಭಟ್ಕಳದ  ಸೊಸೈಟಿವೊಂದು 25 ಕೋಟಿ ರು., ಅಪೆಕ್ಸ್ ಬ್ಯಾಂಕ್ 155 ಕೋಟಿ ರು. ಸೇರಿದಂತೆ ಒಟ್ಟು 335 ಕೋಟಿ ರು.ಸಾಲ ನೀಡಿದೆ. ಪಡೆದಿರುವ ಒಟ್ಟು ಸಾಲದ ಪೈಕಿ ಕೇವಲ 38 ಕೋಟಿ ರು.ಮಾತ್ರ ಮರುಪಾವತಿಸಿರುವ ಹರ್ಷ ಶುಗರ್ಸ್ ಲಿಮಿಟೆಡ್ ಇನ್ನೂ 297 ಕೋಟಿ ರು.ಬಾಕಿ ಉಳಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ಬ್ಯಾಂಕ್ ಗಳು  ಆಸ್ತಿಯ ಮೌಲ್ಯ ಆಧರಿಸಿ ಸಾಲ ನೀಡುತ್ತವೆ. ಅಂದರೆ ಆಸ್ತಿಯ ಮೌಲ್ಯ ಶೇ. 10 ರಿಂದ ಗರಿಷ್ಠ ಶೇ. 50 ಇದ್ದಲ್ಲಿ ಶೇ. 100 ರಷ್ಟು ಸಾಲ ನೀಡುತ್ತವೆ. ಆದರೆ ಹರ್ಷ ಶುಗರ್ಸ್ ಲಿಮಿಟೆಡ್, ಆಸ್ತಿ ಮೌಲ್ಯದ 200 ಪಟ್ಟು ಹೆಚ್ಚಿನ ಮೊತ್ತದ ಸಾಲ ನೀಡಿವೆ.

ವೈದ್ಯನಾಥನ್ ಸಮಿತಿ ನೀಡಿದ್ದ ಶಿಫಾರಸ್ಸುಗಳನ್ನು ಮುಂದಿಟ್ಟುಕೊಂಡಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು, ರಾಜಕೀಯ ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಒದಗಿಸಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೀಡಿರುವ ಒಟ್ಟು 113.94 ಕೋಟಿ ರು.ಸಾಲದ ಪೈಕಿ ಸಕ್ಕರೆ ಕಂಪನಿ ಉದ್ದೇಶದ ಹೆಸರಿನಲ್ಲಿ 71.44 ಕೋಟಿ ರು. ಸಾಲ ವಿತರಿಸಿರುವುದು ದಾಖಲೆಯಿಂದ ಗೊತ್ತಾಗಿದೆ.