ಲೇಡಿ ಪೊಲೀಸರ ಲೋಕ ಮತ್ತು ಅದೇ ಸಮಸ್ಯೆಗಳ ಶ್ಲೋಕ!

ಲೇಡಿ ಪೊಲೀಸರ ಲೋಕ ಮತ್ತು ಅದೇ ಸಮಸ್ಯೆಗಳ ಶ್ಲೋಕ!

ಪೊಲೀಸರು ಎಂದರೇನೇ ಯಾವುದೋ ಅನ್ಯ ಗ್ರಹದಿಂದ ಬಂದಿಳಿದ ಜೀವಿಗಳೆಂಬಂತೆ ನೋಡಲಾಗುತ್ತದೆ. ಪೊಲೀಸರ ಸ್ನೇಹವೂ ಬೇಡ-ದ್ವೇಷವೂ ಬೇಡ ಎಂಬ ಮಾತೂ ಇದೆ. ಅವರು ನಮ್ಮ ಸಂಸ್ಕೃತಿಯ ಭಾಗವಾಗದಿರುವುದು ಮತ್ತು ಅವರೇ ಭಿನ್ನ ‘ಖಾಕಿ’ ಜನಾಂಗದಂತೆ ರೂಪುಗೊಂಡಿರುವುದು ಇದಕ್ಕೆ ಮುಖ್ಯ ಕಾರಣವಿರಬಹುದು. ಮಕ್ಕಳಿಗೆ ಕೇಳಿ ನೋಡಿ-`ದೊಡ್ಡವ(ಳಾ)ನಾದ ಮೇಲೆ ಏನಾಗ್ತೀಯ?’-ಎಂದು. ಥಟ್ಟನೆ ಮಕ್ಕಳ ಬಾಯಲ್ಲಿ ಬರುವ ಉತ್ತರ `ಪೊಲೀಸ್’ ಆಗಿರುವುದಿಲ್ಲ. ಬದಲಿಗೆ ಡಾಕ್ಟರೋ..., ಇಂಜಿನಿಯರೋ ಆಗಿರುತ್ತದೆ! ನಾವು ಮಕ್ಕಳನ್ನು ಬೆಳೆಸುವ, ಅವರ ಮೆದುಳಿನಲ್ಲಿ ತುಂಬುವ ಕನಸುಗಳಲ್ಲಿ `ಪೊಲೀಸ್’ ಇರುವುದೇ ಇಲ್ಲ. ಗಂಡು ಮಕ್ಕಳನ್ನು ಒಂದು ಹಂತದಲ್ಲಿ ಸಮಗ್ರವಾಗಿ ಬೆಳೆಸುವ ನಾವು, ಹೆಣ್ಣುಮಕ್ಕಳ ವಿಚಾರದಲ್ಲಿ ಅತ್ಯಂತ ಸೂಕ್ಷ್ಮತೆ ವಹಿಸುತ್ತೇವೆ. ಹಾಗೆ, ಅತಿ ಕಾಳಜಿಯಿಂದಲೇ ಪೊಲೀಸ್ ಆಗುವ ಕನಸಿನಿಂದ ಬಹು ದೂರವೇ ಈ ನಮ್ಮ ಹೆಣ್ಣು ಮಕ್ಕಳನ್ನು ಇಟ್ಟಿಯೂ ಬಿಟ್ಟಿರುತ್ತೇವೆ.

ಹಾಗೆ, ಸಾಧನೆಯ ಹಾದಿಯಲ್ಲಿ ಬಹುದೂರವೇ ಇರುವ ಅತ್ಯಂತ ಕಠಿಣ ಕನಸನ್ನೂ ಬದುಕಿಬಿಡುವ, ಬದುಕುತ್ತಿರುವ ಅದೆಷ್ಟೋ ಮಹಿಳೆಯರು ನಮ್ಮ ನಡುವೆಯೇ ಇದ್ದಾರೆ. ಪುರುಷ ಪೊಲೀಸರನ್ನೇ ‘ಬೇರೊಂದು ಜೀವಿಗಳು’ ಎಂಬಂತೆ ನೋಡುವ ನಾವು, ಮಹಿಳಾ ಪೊಲೀಸರನ್ನು ನೋಡುವ ಪರಿ ಹೇಗಿರುತ್ತದೆ? ಸಂಪ್ರದಾಯಸ್ಥ ಕುಟುಂಬಗಳು ಹತ್ತಲೇಬಾರದೆಂದು ನಿರ್ಧರಿಸುವ ಪೊಲೀಸ್ ಠಾಣೆಗಳ ಮೆಟ್ಟಿಲನ್ನೇರಿ, ಪೊಲೀಸ್ ಅಧಿಕಾರಿಗಳಾಗೋ, ಪೊಲೀಸ್ ಪೇದೆಗಳಾಗೋ ಜನರ ಸೇವೆಯಲ್ಲಿ ತೊಡಗಿಕೊಳ್ಳುವ ಮಹಿಳಾ ಪೊಲೀಸರ ಆತಂಕ, ಸ್ಥಿತಿ-ಗತಿ ಹೇಗಿದೆ? ಅವರಿಂದ ನಿಜವಾಗಲೂ ತೊಂದರೆ ಅನುಭವಿಸುತ್ತಿರುವ ಹೆಣ್ಣುಮಕ್ಕಳಿಗೆ ತಮ್ಮ ನೋವುಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಸಿಕ್ಕಿದೆಯೇ? ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಮಹಿಳಾ ಪೊಲೀಸರಿಂದ ಕಾನೂನಿನ ನಿಜವಾದ ನೆರವು ಸಿಕ್ಕಿದೆಯೇ? ಸ್ವತಃ ಮಹಿಳಾ ಪೊಲೀಸರಾಗಿ ದುಡಿಯುತ್ತಿರುವವರಿಗೆ ಕಾನೂನಿನ ರಕ್ಷಣೆ ಇದೆಯೇ? ಮಹಿಳಾ ಪೊಲೀಸರು ಮಹಿಳಾ ಠಾಣೆಗಳಲ್ಲಿ ಮಾತ್ರ ಕೆಲಸ ಮಾಡುತ್ತಿದ್ದಾರೆಯೇ? ಪುರುಷ ಪೊಲೀಸರ ಅಧಿಪತ್ಯವಿರುವ ಬಹುತೇಕ ಠಾಣೆಗಳಲ್ಲಿ ಮಹಿಳಾ ಪೊಲೀಸರ ದಿನನಿತ್ಯದ ಪರಿಸ್ಥಿತಿ ಹೇಗಿದೆ? ಮಹಿಳಾ ಪೊಲೀಸರ ಕುಟುಂಬ ನಿರ್ವಹಣೆ, ಜವಾಬ್ದಾರಿ, ತಾಯಿಯಾಗುವ ಸಂದರ್ಭದ ಅವರ ಕರ್ತವ್ಯದ ಸ್ಥಿತಿ, ಋತುಚಕ್ರದಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಮಹಿಳಾ ಪೊಲೀಸರ ಮಾನಸಿಕ ತಯಾರಿ... ಸಾವಿರದೆಂಟು ಸಮಸ್ಯೆಗಳಲ್ಲಿಯೇ ಇರುವ ಮಹಿಳಾ ಪೊಲೀಸರದು ಬರೆದಷ್ಟು ಭೀಕರ ಜಗತ್ತು. ಕೇಳಿದಷ್ಟು ಕುತೂಹಲದ ಕಥೆಗಳ ಆಗರ.

ಖಾಕಿ ಬಟ್ಟೆ ತೊಟ್ಟು ಠಾಕು- ಠೀಕಾಗಿ ಕಾಣುವ ಪೊಲೀಸರ ಅಂತರಾತ್ಮವನ್ನೊಮ್ಮೆ ಕೆದಕಿ ನೋಡಬೇಕು; ಅದರಲ್ಲೂ ಮಹಿಳಾ ಪೊಲೀಸರ ಆಂತರ್ಯದ ವಾಸ್ತವಗಳು ತೀರಾ ಭಿನ್ನ. ತಮ್ಮ ಮೈ, ಮನಸ್ಸು, ಕುಟುಂಬವನ್ನು ಸಂಭಾಳಿಸುತ್ತಲೇ, ಅದರ ಬೆಂಕಿಯೊಳಗೆ ಬೇಯುತ್ತಲೇ ಮೈಮೇಲೆ ಹಾಕಿಕೊಂಡ ಖಾಕಿಬಟ್ಟೆಗಳಿಗೆ ಮರ್ಯಾದೆ ತಂದುಕೊಟ್ಟ ಮಹಿಳಾ ಪೊಲೀಸರಿದ್ದಾರೆ. ಓರ್ವ ಹೆಣ್ಣು ಪೊಲೀಸ್ ಅಧಿಕಾರಿಯಾದರೆ ಅಪರಾಧಿಗಳ ಜಗತ್ತನ್ನು ಹೇಗೆ ಸ್ವರ್ಗದಂತೆ ನಿರ್ಮಿಸಬಲ್ಲಳು ಎಂಬುದಕ್ಕೆ ನಮ್ಮ ನಡುವೆಯೇ ಇದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತೋರಿಸಿಕೊಟ್ಟಿದ್ದರು. ಮೆದುಳಲ್ಲಿ ಕಟ್ಟಾ ಸಂಪ್ರದಾಯವಾದಿಗಳಾಗಿದ್ದ ಕುಟುಂಬದಿಂದ ಶ್ರಮಪಟ್ಟು ಪೊಲೀಸ್ ಇಲಾಖೆ ಸೇರಿಕೊಂಡು ಹೆಸರು ಮಾಡಿದ ಮಹಿಳಾ ಅಧಿಕಾರಿ ಅದೆಷ್ಟೋ ಜನರಿಗೆ ದಾರಿದೀಪವಾದ ಉದಾಹರಣೆಯೂ ನಮ್ಮ ಕಣ್ಣಮುಂದೆಯೇ ಇದೆ. ಪೊಲೀಸ್ ಅಧಿಕಾರಿಯಾದ ಒಬ್ಬೊಬ್ಬ ಹೆಣ್ಣು ಮಗಳೂ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಭಿನ್ನ-ವಿಭಿನ್ನ ಹೆಜ್ಜೆಗುರುತು ಮೂಡಿಸಿದ್ದಾರೆ ಎಂಬುದೇ ಸಮಾಧಾನದ ವಿಷಯ.

ಹೆಣ್ಣು ಮಕ್ಕಳಿಗೆ ತಾವು ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸು ಬೀಳುವುದೇ ಅತ್ಯಪರೂಪ. ಹಾಗಾದರೆ, ಅಂಥ ಕನಸು ಕಟ್ಟಿಕೊಂಡು ಪೊಲೀಸರಾದ ಹೆಣ್ಣುಮಕ್ಕಳ ಸಂಖ್ಯೆ ಎಷ್ಟು? ನಿಜವಾಗಲೂ ತೃಪ್ತಿದಾಯಕವಾಗಿದೆಯೇ?-ಇಲ್ಲವೇ ಇಲ್ಲ ಎನ್ನುತ್ತವೆ ಅಂಕಿಸಂಖ್ಯೆಗಳು. ಒಂದು ಕಡೆ ಖಾಲಿ ಇದ್ದಷ್ಟು ಸ್ಥಾನಗಳನ್ನು ಮಹಿಳಾ ಪೊಲೀಸರಿಂದ ಭರ್ತಿಮಾಡಲು ಹರಸಾಹಸವನ್ನೇ ಪಡಬೇಕಾದ ಪರಿಸ್ಥಿತಿಯಿದೆ. ಇನ್ನೊಂದು ಕಡೆ ಮಹಿಳಾ ಪೊಲೀಸರಿಂದ ಆಗುವ ಕೆಲಸಗಳೇ ಕಡಿಮೆ. ಆಕೆ ಅಪರಾಧಿಗಳ ಬೆನ್ನುಹತ್ತಲಾರಳು, ರಾತ್ರಿ ಗಸ್ತು ಮಾಡಲಾರಳು, ನಕ್ಸಲ್ ಬಾಧಿತ ಪ್ರದೇಶ/ಕಾಡುಗಳಲ್ಲಿ ಕೆಲಸಮಾಡಲಾರಳು, ಭೀಕರ ಅಪರಾಧಗಳನ್ನು ತಡೆಯಲಾರಳು... ಹೀಗೆ, ಇತ್ಯಾದಿ ಇತ್ಯಾದಿ ನಿರ್ಲಕ್ಷ್ಯತನದ ಮಾತುಗಳು ಕೂಡ ಇವೆ. ಇಷ್ಟೆಲ್ಲ ಮೂಗಿನ ನೇರದ ಮಾತುಗಳ ನಡುವೆಯೂ ಆಯಾ ರಾಜ್ಯಗಳ, ಆಯಾ ದೇಶಗಳ ಸರ್ಕಾರಗಳು ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇವೆ ಎಂಬುದೇನೋ ಸಂತೋಷದ ವಿಚಾರವೇ. ಆದರೂ ಪೊಲೀಸ್ ಇಲಾಖೆ ಸೇರುವ ಆತ್ಮಸ್ಥೈರ್ಯ, ಮನಸ್ಸು ಮಾತ್ರ ಮಹಿಳೆಯರಲ್ಲಿ ಮೂಡುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಅಂತಹ ಆಕರ್ಷಣೆ ಇಲ್ಲದ್ದು ಕಾರಣವೋ ಅಥವಾ ಕಾಲಮಿತಿ ಇಲ್ಲದೇ ದುಡಿಯುವ ಕೆಲಸವೆಂದೋ- ಬಹಳಷ್ಟು ಮಹಿಳೆಯರು ದೂರದಿಂದಲೇ ಪೊಲೀಸ್ ಇಲಾಖೆಗೆ ದೊಡ್ಡ ನಮಸ್ಕಾರ ಹೊಡೆದುಬಿಡುತ್ತಾರೆ.

ಹಾಗಂತ ತೀರಾ ನಿರಾಶದಾಯಕ ಸ್ಥಿತಿಯೂ ಇಲ್ಲ. ಭಾರತದ ಇತ್ತೀಚಿನ ಒಂದಿಷ್ಟು ಅಂಕಿ- ಅಂಶಗಳನ್ನೇ ಗಮನಿಸಬಹುದು. ಭಾರತದ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೊಲೀಸರು ಶೇ.5.3ರಷ್ಟು ಪ್ರಮಾಣದಲ್ಲಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಚಂಡೀಘಡದಲ್ಲಿ ಉತ್ತಮ ರೀತಿಯಲ್ಲಿ ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಸೇರುತ್ತಿದ್ದಾರೆ. ತಮಿಳುನಾಡು 1997ರಲ್ಲಿಯೇ ಪೊಲೀಸ್ ಇಲಾಖೆಯಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಘೋಷಿಸಿತ್ತು.

ಭಾರತದಲ್ಲಿ ಶೇ.5.3ರಷ್ಟು ಮಹಿಳಾ ಪೊಲೀಸರಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ಶೇ.29, ಯು.ಎಸ್.ಎ.ನಲ್ಲಿ ಶೇ.14ರಷ್ಟು, ಆಸ್ಟ್ರೇಲಿಯಾದಲ್ಲಿ ಶೇ.30, ಕೆನಡಾದಲ್ಲಿ ಶೇ,18ರಷ್ಟು ಮಹಿಳಾ ಪೊಲೀಸರಿದ್ದಾರೆ. ದುರಂತ ನೋಡಿ, ಅಂತರಾಷ್ಟ್ರೀಯ ಮಟ್ಟದ ಸಂಶೋಧನೆಗಳು ಇಂತಹ ಆಧುನಿಕ ಯುಗದಲ್ಲೂ ಮೂಢನಂಬಿಕೆಯನ್ನೇ ಪ್ರಚುರಪಡಿಸುತ್ತಿವೆ. `ಪೊಲೀಸ್ ವೃತ್ತಿಗೆ ಮಹಿಳೆ ಸೂಕ್ತಳಲ್ಲ’ ಎಂಬ ಮೂಢನಂಬಿಕೆ ಅದರಲ್ಲೊಂದು. ಆದರೆ, ಮಹಿಳಾ ಪೊಲೀಸರು ಆ ಮೂಢನಂಬಿಕೆಗಳನ್ನೆಲ್ಲ ಧ್ವಂಸಮಾಡಿ ಎಂತಹ ಕ್ಲಿಷ್ಟ ವಾತಾವರಣವನ್ನೂ ಎದುರಿಸಬಲ್ಲೆವು ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಾಬೀತು ಪಡಿಸುತ್ತಲೂ ಇದ್ದಾರೆ.Women officers use less physical force ಎನ್ನುವವರಿಗೆ ತಮ್ಮ ಪೊಲೀಸ್ ಕೆಲಸದ ಮೂಲಕವೇ ನಿಖರವಾದ ಉತ್ತರವನ್ನೂ ನೀಡುತ್ತಿದ್ದಾರೆ. ಪುರುಷ ಪೊಲೀಸರಿಗಿಂತ ಹೆಚ್ಚಾಗಿ ಕಾನೂನು ಕಾಪಾಡುತ್ತಿದ್ದಾರೆ. ಆರಕ್ಷಣೆ ಎಂದರೇನು ಎಂದು ತೋರಿಸುತ್ತಲೂ ಇದ್ದಾರೆ.

ಪ್ರತಿಕ್ಷಣ ಮಹಿಳಾ ದೌರ್ಜನ್ಯದ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗೆ, ದೌರ್ಜನ್ಯಕ್ಕೊಳಗಾದ ಮಹಿಳೆಯರು ಎಡತಾಕುವುದು ಪೊಲೀಸ್ ಠಾಣೆಗಳಿಗೆ. ಪುರುಷ ಪ್ರಧಾನ ವ್ಯವಸ್ಥೆಯ ಪ್ರತೀಕದಂತಿರುವ ಈ ಪೊಲೀಸ್ ಠಾಣೆಗಳಲ್ಲಿ ಹೆಚ್ಚಾಗಿ ಪುರುಷ ಅಧಿಕಾರಿ, ಪುರುಷ ಪೊಲೀಸರೇ ಇರುತ್ತಾರೆ. ಇದ್ದರೂ ಒಂದೆರಡು ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ಕಾಣಬಹುದು. ಬಹುತೇಕ ಠಾಣೆಗಳಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರು ದೌರ್ಜನ್ಯದ ವಿವರಗಳನ್ನು ನೀಡುವುದೂ ದುಸ್ತರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮ ದುಃಖ-ದುಮ್ಮಾನ ಕೇಳಲು ಮಹಿಳಾ ಪೊಲೀಸರು ಇದ್ದಿದ್ದರೆ ಎಂಬ ಭಾವನೆ ಮೂಡಬಹುದು.

ಮಹಿಳಾ ಪೊಲೀಸ್ ಅಧಿಕಾರಿಯಾಗಲೀ, ಮಹಿಳಾ ಪೊಲೀಸ್ ಪೇದೆಗಳಾಗಲೀ ಮಹಿಳಾ ದೌರ್ಜನ್ಯದ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸ್ಪಂದಿಸಿದ ರೀತಿ, ಹೇಳಿದ ಸಾಂತ್ವನ, ತೆಗೆದುಕೊಂಡ ಕ್ರಮಗಳ ಬಗ್ಗೆ ಬಹುತೇಕ ಕಡೆ ಒಳ್ಳೆಯ ಅಭಿಪ್ರಾಯಗಳೇ ಕೇಳಿಬಂದಿವೆ. ಇಲ್ಲಿ ಪುರುಷ ಪೊಲೀಸ್ ಸ್ಪಂದಿಸುವ ರೀತಿಗೂ ಮಹಿಳಾ ಪೊಲೀಸ್ ಸ್ಪಂದಿಸುವ ರೀತಿಗೂ ಅಜಗಜಾಂತರ  ಕಾಣಬಹುದು.

ಭಾರತದಲ್ಲಿ ಮಹಿಳಾ ಪೊಲೀಸರು ಹೆಜ್ಜೆಗುರುತುಗಳನ್ನು ಮೂಡಿಸುತ್ತಿರುವುದೇನೋ ಸರಿ. ಆ ಹೆಜ್ಜೆಗುರುತುಗಳನ್ನು ಮೂಡಿಸುವ ಮಹಿಳಾ ಪೊಲೀಸರ ಸಂಖ್ಯೆಯಾದರೂ ಎಷ್ಟು? ಇಡೀ ಭಾರತದಲ್ಲಿ ಮಹಿಳಾ ಪೊಲೀಸರು ಇರುವುದೇ 1,05,325 ಜನ. ಒಟ್ಟಾರೆ ಪೊಲೀಸರ ಸಂಖ್ಯೆ 17,22,786. ಮಹಿಳಾ ಕಾನ್ಸ್ ಟೇಬಲ್ ಗಳು-85,696, ಮಹಿಳಾ ಹೆಡ್ ಕಾನ್ಸ್ ಟೇಬಲ್ ಗಳು-8,246, ಸಹಾಯಕ ಮಹಿಳಾ ಸಬ್ ಇನ್ಸ್ ಸ್ಪೆಕ್ಟರ್ ಗಳು-3,553, ಮಹಿಳಾ ಸಬ್ಇನ್ಸ್ ಸ್ಪೆಕ್ಟರ್ ಗು-3,558, ಮಹಳಾ ಇನ್ಸ್ ಸ್ಪೆಕ್ಟರ್ ಗಳು-5,668, ಹೆಚ್ಚುವರಿ ಅಥವಾ ಡೆಪ್ಯೂಟಿ ಎಸ್.ಪಿ.ಗಳು-658, ಎಸ್ಎಸ್ಪಿ/ಎಸ್ಪಿ/ಕಮಿಷನರ್ ಗಳು-190, ಡೆಪ್ಯೂಟಿ ಇನ್ಸ್ ಸ್ಪೆಕ್ಟರ್ ಜನರಲ್ ಗಳು-20, ಮಹಿಳಾ ಇನ್ಸ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸರು-44, ಮಹಿಳಾ ಡಿಜಿಪಿ/ಸ್ಪೆಷಲ್ ಡಿಜಿ-16... ಹೀಗೆ ಸಾಗುತ್ತದೆ ಮಹಿಳಾ ಪೊಲೀಸರ ಜಗತ್ತಿನ ಅನಾವರಣ. ಇದು ಪುರುಷ ಪೊಲೀಸರ ಸಂಖ್ಯೆಗೆ ಹೋಲಿಸಿದರೆ ಶೇ.6ರಷ್ಟು ಪ್ರಮಾಣವಷ್ಟೇ!

ಒಂದು ಉದಾಹರಣೆಯನ್ನು ಗಮನಿಸಿ- ಉತ್ತರ ಪ್ರದೇಶದ ಸರ್ಕಾರ ತನ್ನ ಪೊಲೀಸ್ ಸರ್ವಿಸ್ ರಿಕ್ರ್ಯೂಟ್ಮೆಂಟ್ ಅಂಡ್ ಪ್ರಮೋಷನ್ ಬೋರ್ಡ್ ಮೂಲಕ ಶೇ.20 ರಷ್ಟನ್ನಾದರೂ ಮಹಿಳಾ ಸಬ್ಇನ್ಸ್ ಸ್ಪೆಕ್ಟರ್ ಗಳನ್ನು ಆಯ್ಕೆಮಾಡಿಕೊಳ್ಳಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡಿತು. ಇದು ನಡೆದಿದ್ದು 2015ರ ಮೇ-ಜೂನ್ ತಿಂಗಳಿನಲ್ಲಿ. ಕೊನೆಗೂ ಪುರುಷ-ಮಹಿಳಾ ಸಬ್ಇನ್ಸ್ ಸ್ಪೆಕ್ಟರ್ ಗಳ ಆಯ್ಕೆ ನಡೆಯಿತು. 3,493 ಅಭ್ಯರ್ಥಿಗಳು ಆಯ್ಕೆಯಾದರು. ಇಷ್ಟು ಸಂಖ್ಯೆಯ ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 261 ಮಾತ್ರ. ಅಂದರೆ, ಶೇ.8ಕ್ಕಿಂತ ಕಡಿಮೆ. ಇದೇ ಸಂದರ್ಭದಲ್ಲಿ ಆಯ್ಕೆಯಾದ 35 ಸಾವಿರ ಕಾನ್ಸ್ ಟೇಬಲ್ ಗಳ ಪೈಕಿ ಮಹಿಳೆಯರು ಆಯ್ಕೆಯಾಗಿದ್ದು 5,382 ಜನ. ಅಂದರೆ, ಶೇ.15ಕ್ಕಿಂತ ಕಡಿಮೆ. ಇದು ಕೇವಲ ಉತ್ತರಪ್ರದೇಶ ರಾಜ್ಯದ ಕಥೆಯಲ್ಲ. ಬಹುತೇಕ ಎಲ್ಲಾ ರಾಜ್ಯಗಳದ್ದು ಇದೇ ಸಮಸ್ಯೆ. ಆದರೂ, ಮಹಿಳೆಯರನ್ನು ಪೊಲೀಸ್ ಇಲಾಖೆಗೆ ಸೇರಿಕೊಳ್ಳುವಂತಹ ಸ್ಫೂರ್ತಿದಾಯಕ ಜಾಗೃತಿ ಕಾರ್ಯಕ್ರಮಗಳೇ ನಡೆಯುತ್ತಿಲ್ಲ ಎಂಬುದು ವಿಷಾದದ ಸಂಗತಿ.

ಮಹಿಳಾ ಪೊಲೀಸರು ಮತ್ತು ಠಾಣೆಗಳು

ಕರ್ನಾಟಕ ಕೂಡ ಮಹಿಳಾ ಪೊಲೀಸರ ವಿಚಾರದಲ್ಲಿ ಕೊರಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆಂಬುದನ್ನು ಒಪ್ಪಿಕೊಳ್ಳೋಣ. ಪೊಲೀಸ್ ಇಲಾಖೆಯ ವಿಚಾರದಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿರುವುದು ಬೆರಳೆಣಿಕೆಯಷ್ಟು ಮಾತ್ರ. ಮಹಿಳಾ ಪೊಲೀಸರ ನೇಮಕಾತಿ ವಿಚಾರ ಭಾರತದ ಬೇರೆ ಬೇರೆ ರಾಜ್ಯಗಳನ್ನು ಕಾಡಿದಂತೆಯೇ ಕರ್ನಾಟಕಕ್ಕೂ ಕಾಡುತ್ತಿದೆ. ಕರ್ನಾಟಕದಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಕೇವಲ ಶೇ.6ಕ್ಕಿಂತ ಕಡಿಮೆ. ಕನಿಷ್ಟ ಶೇ.20ಕ್ಕೆ ಈ ಸಂಖ್ಯೆಯನ್ನು ಏರಿಸಲು ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಒಲವು ಇದೆ ಎಂಬ ಮಾತಿದೆ. ಅದಕ್ಕಾಗಿ ಗಿರಿಜನ ಮಹಿಳೆಯರಲ್ಲಿಯೂ ಜಾಗೃತಿ ಮೂಡಿಸಿ ಪೊಲೀಸ್ ಇಲಾಖೆಯತ್ತ ಸೆಳೆದುಕೊಳ್ಳಲು ಸರ್ಕಾರ ಯೋಜಿಸುತ್ತಿದೆ ಎಂದು ತಿಳಿದವರು ಹೇಳುತ್ತಾರೆ. ಅಷ್ಟಾದರೆ ಗುರಿ ತಲುಪಲಾದೀತೆ? ಕರ್ನಾಟಕ ರಾಜ್ಯದ ಕ್ರೈಂ ರೆಕಾರ್ಡ್ ಬ್ಯೂರೋ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಮಹಿಳಾ ಪೊಲೀಸರಿರುವುದು ಕೇವಲ 3,661 ಜನ. 10 ಮಹಿಳಾ ಅಧಿಕಾರಿಗಳು ಹೆಚ್ಚುವರಿ ಎಸ್ಪಿ/ಎಸ್ಪಿ, 17 ಡಿವೈಎಸ್ಪಿ, 28 ಮಹಿಳಾ ಪೊಲೀಸ್ ಇನ್ಸ್ ಸ್ಪೆಕ್ಟರ್ ಗಳು, 87 ಸಬ್ಇನ್ಸ್ ಸ್ಪೆಕ್ಟರ್ ಗಳು, 191 ಸಹಾಯಕ ಸಬ್ಇನ್ಸ್ ಸ್ಪೆಕ್ಟರ್ ಗಳು, 533 ಮಹಿಳಾ ಹೆಡ್ ಕಾನ್ಸ್ ಟೇಬಲ್ ಗಳು, 2,794 ಜನ ಮಹಿಳಾ ಕಾನ್ಸ್ ಟೇಬಲ್ ಗಳು ಇದ್ದಾರೆ. ಇದು ದಿನ ಕಳೆದಂತೆ ಒಂದಿಷ್ಟು ಸಂಖ್ಯೆ ಹೆಚ್ಚಲೂಬಹುದು, ಕಡಿಮೆಯಾಗಲೂಬಹುದು. 

ಮಹಿಳಾ ಪೊಲೀಸರ ವಿಚಾರದಲ್ಲಿ ಕರ್ನಾಟಕಕ್ಕೆ 8ನೇ ಸ್ಥಾನ. ಮಹಾರಾಷ್ಟ್ರ ಮತ್ತು ತಮಿಳುನಾಡು ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಇದೆ. ಈ ರಾಜ್ಯಗಳಲ್ಲಿ 10 ಸಾವಿರಕ್ಕಿಂತ ಹೆಚ್ಚಿನ ಮಹಿಳಾ ಪೊಲೀಸರಿದ್ದಾರೆ. ಮಹಾರಾಷ್ಟ್ರದಲ್ಲಿ 17 ಸಾವಿರಕ್ಕಿಂತ ಹೆಚ್ಚಿನ ಮಹಿಳಾ ಪೊಲೀಸರಿದ್ದರೆ, ತಮಿಳುನಾಡಲ್ಲಿ ಈ ಸಂಖ್ಯೆ 12 ಸಾವಿರ ದಾಟಿದೆ. ರಾಜಸ್ಥಾನದಲ್ಲಿ 4,900ಕ್ಕಿಂತ ಹೆಚ್ಚಿನ, ರಾಜಧಾನಿ ದೆಹಲಿ ಮತ್ತು ಪಂಜಾಬಿನಲ್ಲಿ ಕ್ರಮವಾಗಿ 4,600ಕ್ಕಿಂತ ಹೆಚ್ಚು, ಒಡಿಸ್ಸಾದಲ್ಲಿ 3,700ಕ್ಕಿಂತ ಹೆಚ್ಚಿನ ಮಹಿಳಾ ಪೊಲೀಸರಿದ್ದಾರೆ. ಇದು ರಾಷ್ಟ್ರೀಯ ಕ್ರೈಂ ರೆಕಾಡ್ರ್ಸ್ ಬ್ಯೂರೋ ಬಹಿರಂಗಪಡಿಸಿರುವ ಅಂಕಿ-ಅಂಶಗಳು. 

ಇಡೀ ಭಾರತದಲ್ಲಿ ಮಹಿಳಾ ಪೊಲೀಸರೇ ಕಡಿಮೆ. ನೇಮಕವಾದ ಮಹಿಳಾ ಪೊಲೀಸರ ಪರಿಸ್ಥಿತಿಯಂತೂ ಹೇಳತೀರದಷ್ಟು ಚಿಂತಾಜನಕವಾಗಿದೆ. ನಾಲ್ಕು ಜನರ ಕೆಲಸವನ್ನು ಒಬ್ಬೊಬ್ಬ ಮಹಿಳಾ ಪೊಲೀಸ್ ಮಾಡುತ್ತಿದ್ದಾರೆ. ಹಾಗೆಂದು, ಈ ಮಹಿಳಾ ಪೊಲೀಸರು ತಮ್ಮ ತಮ್ಮ ಕರ್ತವ್ಯ ನಿಭಾಯಿಸಲು ಸಂಪೂರ್ಣವಾಗಿ ಮಹಿಳಾ ಪೊಲೀಸ್ ಠಾಣೆಗಳನ್ನೇ ಹೊಂದಿಲ್ಲ ಎಂಬ ಭೀಕರ ಸತ್ಯವೂ ಕೂಡ ಇದೆ. 

ಕಳೆದ ನಾಲ್ಕು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಮಹಿಳಾ ಪೊಲೀಸ್ ಪರವಾದ ಆಶಾಕಿರಣವೊಂದು ಕಂಡುಬಂದಿತ್ತು. ಪ್ರತಿ ಜಿಲ್ಲೆಗೊಂದರಂತೆ ಪೂರ್ಣ ಪ್ರಮಾಣದ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿಕೊಂಡಿತ್ತು. 20 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸುವುದಾಗಿ ಪ್ರಸ್ತಾಪಿಸಿತ್ತು. ಈ 20ರಲ್ಲಿ 10 ಮಹಿಳಾ ಪೊಲೀಸ್ ಠಾಣೆಗಳ ನಿರ್ಮಾಣದ ಮಾತಿದೆ. ಕರ್ನಾಟಕದಲ್ಲಿ ಇದ್ದ 10 ಮಹಿಳಾ ಪೊಲೀಸ್ ಠಾಣೆಗಳ ಜೊತೆ ಮತ್ತೆ 10 ಮಹಿಳಾ ಪೊಲೀಸ್ ಠಾಣೆಗಳು ತಲೆಯೆತ್ತಿ ಮಹಿಳಾ ಪೊಲೀಸರ ಸಂಖ್ಯಾವೃದ್ಧಿಗೆ ಸಹಕಾರವಾಗುತ್ತದೆಂದೇ ನಂಬಲಾಗಿತ್ತು. ಬೆಂಗಳೂರು 2 ಮಹಿಳಾ ಪೊಲೀಸ್ ಠಾಣೆಗಳನ್ನು ಹೊಂದಿದ್ದರೆ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕುಂದಾಪುರ, ಗುಲ್ಬರ್ಗಾ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಈಗಾಗಲೇ ಮಹಿಳಾ ಪೊಲೀಸ್ ಠಾಣೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಜಿಲ್ಲಾ ಕೇಂದ್ರಗಳಲ್ಲಿ ಇರುವ ಈ ತಲಾ ಒಂದೊಂದು ಮಹಿಳಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಬ್ಇನ್ಸ್ ಸ್ಪೆಕ್ಟರ್ ಗಳ ಹಾಗೂ ಸಿಬ್ಬಂದಿಗಳ ಕೊರತೆ ಮಾತ್ರ ಎದ್ದು ಕಾಣುತ್ತಲೇ ಇದೆ. ಈ ಕೊರತೆಯಿರುವ ಮಹಿಳಾ ಸಿಬ್ಬಂದಿಗಳ ಜಾಗದಲ್ಲಿಯೂ ಪುರುಷ ಪೊಲೀಸರು ಅಧಿಪತ್ಯ ಸಾಧಿಸಿದ್ದಾರೆ; ಅದೂ ಮಹಿಳಾ ಪೊಲೀಸ್ ಠಾಣೆಗಳಲ್ಲಿ! ಪುರುಷಮುಕ್ತ ಮಹಿಳಾ ಪೊಲೀಸ್ ಠಾಣೆಗಳಂತೂ ಇದ್ದಂತಿಲ್ಲ. ಇದಕ್ಕೆ ಮಹಿಳಾ ಪೊಲೀಸರ ಕೊರತೆಯಲ್ಲದೆ ಮತ್ತೇನು ಕಾರಣವಿದ್ದೀತು? 

ಇನ್ನೊಂದು ಗಮನಿಸಬೇಕಾದ ವಿಚಾರವಿದೆ. ಪುರುಷ ಪ್ರಧಾನ ಪೊಲೀಸ್ ಠಾಣೆಗಳು ನಗರಮಟ್ಟದಲ್ಲಿಯೇ ನಾಲ್ಕಾರು ಇರುತ್ತವೆ. ಆದರೆ, ಮಹಿಳಾ ಪೊಲೀಸ್ ಠಾಣೆ ಜಿಲ್ಲೆಗೆ ಒಂದೇ ಒಂದು! ಹಾಗಾದರೆ, ಜಿಲ್ಲೆಯ ಏಕೈಕ ಇಂತಹ ಮಹಿಳಾ ಠಾಣೆಗೆ ಬರುವ ದೂರುಗಳ ಸಂಖ್ಯೆಯಾದರೂ ಕಡಿಮೆಯಿರಲು ಸಾಧ್ಯವೇ? ಲಭ್ಯವಿರುವ ಅಂಕಿ-ಅಂಶಗಳನ್ನೇ ಗಮನಿಸಿ; 2012ರಲ್ಲಿ ಈ ಮೇಲ್ಕಾಣಿಸಿದ ಹತ್ತೂ ಮಹಿಳಾ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು 955. 2013ರಲ್ಲಿಯೂ ಈ ಸಂಖ್ಯೆ 1,326ಕ್ಕೆ ಏರುತ್ತೆ. 2018ರಲ್ಲಿ 2,122 ತಲುಪುತ್ತೆ. ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಡೀ ರಾಜ್ಯದ ಮಹಿಳಾ ಪೊಲೀಸ್ ಠಾಣೆಗಳಿಗಿಂತ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಾ ಬಂದಿವೆ. 2012ರಲ್ಲಿ ಈ ಠಾಣೆಯಲ್ಲಿ 212 ಹಾಗೂ 2016ರಲ್ಲಿ 305 ಪ್ರಕರಣಗಳು ದಾಖಲಾಗಿದ್ದವು. ಇದು ಮುಂದಿನ ವರ್ಷಗಳಲ್ಲಿ ತನ್ನ ಗ್ರಾಫನ್ನು ಏರಿಸಿಕೊಳ್ಳುತ್ತಲೇ ಹೋಗಿದೆ. ಬೆಂಗಳೂರಿನ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ 2012ರಲ್ಲಿ 143, ಹಾಗೂ 2018ರಲ್ಲಿ 248 ಪ್ರಕರಣಗಳು ದಾಖಲಾಗಿದ್ದವು. ಆ ನಂತರದ ವರ್ಷಗಳಲ್ಲಿ ಈ ಸಂಖ್ಯೆ ಯಾವತ್ತಿಗೂ ಇಳಿಮುಖ ಕಾಣಲೇ ಇಲ್ಲ. ಕುಂದಾಪುರ ಮಹಿಳಾ ಠಾಣೆಯಲ್ಲಿ ರಾಜ್ಯದಲ್ಲಿಯೇ ಅತೀ ಕಡಿಮೆ ಪ್ರಕರಣಗಳು ದಾಖಲಾಗುತ್ತಾ ಬಂದಿವೆ. 2012ರಲ್ಲಿ ಇಲ್ಲಿ ಕೇವಲ 39 ಪ್ರಕರಣಗಳು ದಾಖಲಾಗಿವೆ. ಈಗಲೂ ಕೂಡ ಇಲ್ಲಿ ಹೆಚ್ಚೇನೂ ಪ್ರಕರಣಗಳು ದಾಖಲಾಗುತ್ತಿಲ್ಲ. ಬೆಳಗಾವಿ ಮಹಿಳಾ ಠಾಣೆಯಲ್ಲಿಯೂ ಕೂಡ 2016ರಲ್ಲಿ 41 ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಈಗ ಈ ಠಾಣೆಯಲ್ಲಿ 50ರ ಆಜುಬಾಜುವಿನಲ್ಲಿಯೇ ಪ್ರಕರಣಗಳು ದಾಖಲಾಗುತ್ತಿವೆ. ಇಲ್ಲಿ ದಾಖಲಾಗುವ ಪ್ರಕರಣಗಳನ್ನು ಆದಷ್ಟು ಮುತುವರ್ಜಿಯಿಂದಲೇ ಮಹಿಳಾ ಪೊಲೀಸರು ಬಗೆಹರಿಸಿದ ರೀತಿಯೂ ವಿಶಿಷ್ಟ. ಈ ಮಹಿಳಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳಿಗೆ ಒಂದು ಮಿತಿಯೂ ಇದೆ. ಕಳ್ಳತನ, ದರೋಡೆ, ವಂಚನೆಯಂತಹ ಪ್ರಕರಣಗಳಿಗಿಂತ ಹೆಚ್ಚಾಗಿ ಈ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರುವುದು ವರದಕ್ಷಿಣೆ ಕಿರುಕುಳ, ಅತ್ಯಾಚಾರ, ವರದಕ್ಷಿಣೆಗಾಗಿ ಕೊಲೆಯಂಥ ಪ್ರಕರಣಗಳು ಇಂತಹ ಸೂಕ್ಷ್ಮ ಮತ್ತು ಸಾಮಾಜಿಕ ಪಿಡುಗು ರೂಪದ ಪ್ರಕರಣಗಳನ್ನು ಅತ್ಯಂತ ಮುತುವರ್ಜಿ ವಹಿಸಿ, ಅಷ್ಟೇ ಸೂಕ್ಷ್ಮವಾಗಿ ಬಗೆಹರಿಸುವ ತಾಳ್ಮೆ ಮಹಿಳಾ ಪೊಲೀಸರಿಗೆ ಮಾತ್ರ ಸಾಧ್ಯವಾದೀತು. ಅಂತಹ ಹಲವು ಉದಾಹರಣೆಗಳನ್ನು ನೇರವಾಗಿಯೂ ಆಯಾ ಮಹಿಳಾ ಪೊಲೀಸ್ ಠಾಣೆಗಳಲ್ಲಿ ನೋಡಬಹುದಾಗಿದೆ. 

ಮಹಿಳಾ ಪೊಲೀಸರು ಮತ್ತು ಜವಾಬ್ದಾರಿ

ಆಕೆಯ ಹೆಸರು ಸುಷ್ಮಾ(ಕಾಲ್ಪನಿಕ ಹೆಸರು). ಇತ್ತೀಚೆಗೊಮ್ಮೆ ಬೆಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ಮಧ್ಯಾಹ್ನ 2.30ರ ಹೊತ್ತಿಗೆ ಹೋಗುತ್ತಾಳೆ. ಸಾಕಷ್ಟು ನೊಂದಿದ್ದ ಅವಳು ಕಳೆದ ಹದಿನೈದು ದಿನಗಳ ಹಿಂದೆಯೂ ಇದೇ ಪೊಲೀಸ್ ಠಾಣೆಗೆ ಆಗಮಿಸಿ ಒಂದು ದೂರನ್ನು ದಾಖಲಿಸಿದ್ದಳು. ತನ್ನ ಗಂಡ ಹಿಂಸಿಸುತ್ತಿದ್ದಾನೆ. ಸೂಕ್ತ ರಕ್ಷಣೆ ಕೊಡಿ ಎಂದು ಆ ದೂರಿನಲ್ಲಿ ಇತ್ತು. ಮಹಿಳಾ ಪೊಲೀಸರು ಇದಕ್ಕೆ ಸ್ಪಂದಿಸಿ ಸುಷ್ಮಾಳ ಗಂಡನನ್ನು ಠಾಣೆಗೆ ಕರೆಸಿಕೊಂಡರು. ಇಬ್ಬರ ಕೌನ್ಸಿಲಿಂಗ್ ನಡೆಯಿತು. ಮರಳಿ ಇಬ್ಬರನ್ನೂ ಮನೆಗೆ ಕಳಿಹಿಸಿದರು. ಆದರೆ, ಸುಷ್ಮಾಳ ಸಮಸ್ಯೆ ಬಗೆಹರಿಯಲೇ ಇಲ್ಲ. ಮತ್ತೆ ಗಂಡನ ಹಿಂಸೆ. ಮತ್ತೆ ಬೇಸತ್ತ ಸುಷ್ಮಾ ಮತ್ತೊಂದು ದೂರಿನಲ್ಲಿ ಅದೇ ಮಹಿಳಾ ಠಾಣೆಗೆ ಬಂದಿದ್ದಳು. 

ಸುಷ್ಮಾಳ ಸಮಸ್ಯೆಯಂಥದ್ದೇ ಪ್ರಕರಣಗಳು ದಿನನಿತ್ಯ ಲೆಕ್ಕವಿಲ್ಲದಷ್ಟು ಈ ಮಹಿಳಾ ಪೊಲೀಸ್ ಠಾಣೆಗಳಿಗೆ ಬರುತ್ತಲೇ ಇರುತ್ತವೆ. ಇಂತಹ ಸಮಸ್ಯೆಗಳು ಹೆಚ್ಚಾಗಿ ಠಾಣೆಯ ಮೆಟ್ಟಿಲೇರಿದಾಗಲೆಲ್ಲಾ ಆ ಮಹಿಳಾ ಪೊಲೀಸ್ ಠಾಣೆಗಳು ಗಂಡ-ಹೆಂಡತಿ ಜಗಳದ ಮೂಲ ಹುಡುಕುವ ಕೌನ್ಸಿಲಿಂಗ್ ಸೆಂಟರ್ ಗಳಾಗಿ ರೂಪಾಂತರಗೊಳ್ಳುವುದೇ ಹೆಚ್ಚು. ಇಂತಹ ಸಮಾಜ ಪರ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಶೇ.46ರಷ್ಟು ಮಹಿಳಾ ಸಿಬ್ಬಂದಿಗಳ ಕೊರತೆ ಎದ್ದುಕಾಣುತ್ತಿದೆ. ಹಾಲಿ ಇರುವ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರತಿಕ್ಷಣವೂ ನಾಲ್ಕಾರು ಪಾತ್ರಗಳನ್ನು ಇಲ್ಲಿ ನಿಭಾಯಿಸಲೇಬೇಕಾಗಿದೆ. ಅಂತಹ ದುಃಸ್ಥಿತಿ ಇಲ್ಲಿದೆ. ಇದು ಕೇವಲ ಯಾವುದೋ ಒಂದು ಮಹಿಳಾ ಪೊಲೀಸ್ ಠಾಣೆಯ ಕಥೆಯಂತೂ ಅಲ್ಲವೇ ಅಲ್ಲ; ಎಲ್ಲೆಲ್ಲಿ ಮಹಿಳಾ ಪೊಲೀಸರಿದ್ದಾರೋ, ಎಲ್ಲೆಲ್ಲಿ ಮಹಿಳಾ ಠಾಣೆಗಳಿವೆಯೋ ಅಲ್ಲಲ್ಲಿನ ವಾಸ್ತವ ವ್ಯಥೆಗಳು. ಮಹಿಳಾ ಪೊಲೀಸರೆಂದರೆ `ಕಾಪ್ ಕಂ ಕೌನ್ಸಿಲರ್’! ಜೊತೆಗೆ ಕಂಪ್ಯೂಟರ್ ಕೆಲಸಗಾರರು!! ಅದರ ಜೊತೆಜೊತೆಗೆ ಪ್ರತಿದಿನ ನಾಲ್ಕಾರು ಗಂಟೆ ಮಟ್ಟಸವಾಗಿ ಕುಳಿತು, ಕಿವಿ ನಿಮಿರಿಸಿಕೊಂಡು ಬಂದ ದೂರುದಾರರ ಸಂಪೂರ್ಣ ಕಥೆ ಆಲಿಸುವ ಕಾರ್ಮಿಕರು!!! ಈ ಮಹಿಳಾ ಪೊಲೀಸ್ ಠಾಣೆಗಳಿಗೆ ಬರುವ ಕನಿಷ್ಟ 10 ಪ್ರಕರಣಗಳಲ್ಲಿ 9 ಪ್ರಕರಣಗಳು ಮಹಿಳಾ ಕೇಂದ್ರಿತವೇ ಆಗಿರುತ್ತವೆ ಅಥವಾ ಮಹಿಳೆಯರದ್ದೇ ಆಗಿರುತ್ತವೆ ಎಂಬುದೊಂದು ವಿಶೇಷ. ಹಾಗೆಂದು, ಬಂದ ದೂರುಗಳನ್ನೆಲ್ಲಾ ದಾಖಲಿಸುತ್ತಾ, ಎಫ್ಐಆರ್ ಹರಿಯುತ್ತಾ, ಆರೋಪಿಗಳನ್ನು ಹಿಡಿಯುತ್ತಾ, ಕೋರ್ಟಿಗೆ ರವಾನಿಸುತ್ತಾ ಕುಳಿತುಬಿಟ್ಟರೆ ಈ ಸಮಾಜ ಉದ್ಧಾರವಾಗುವುದುಂಟೆ? 

ಮಹಿಳಾ ಪೊಲೀಸ್ ಸಬ್ಇನ್ಸ್ ಸ್ಪೆಕ್ಟರ್ ರೊಬ್ಬರು ಹೇಳುವುದನ್ನೇ ನೋಡಿ- `ಬಂದ ದೂರುಗಳ ಮೇಲೆ ಕಣ್ಣಾಡಿಸಿ, ದೂರು ಕೊಟ್ಟವರನ್ನು ಮತ್ತು ಆರೋಪಿಗಳನ್ನು ಕರೆಸಿ ಕೌನ್ಸಿಲಿಂಗ್ ಮಾಡುತ್ತೇವೆ. ಗಂಡ-ಹೆಂಡತಿ ಮಧ್ಯೆ ಮೂಡಿರಬಹುದಾದ ಅನುಮಾನಗಳನ್ನು ಪರಿಹರಿಸುವತ್ತ ಪ್ರಯತ್ನಿಸುತ್ತೇವೆ. ಇಬ್ಬರಲ್ಲೂ ವಿಶ್ವಾಸ ಮೂಡಿಸುವ ಪ್ರಯತ್ನ ನಮ್ಮದು. ಹಾಗೆ, ಅವರಲ್ಲಿ ವಿಶ್ವಾಸ ಮೂಡಿಬಿಟ್ಟರೆ ಅದೇ ನಮ್ಮ ದೊಡ್ಡ ಯಶಸ್ಸು. ದೂರು ಬಂದ ಕೂಡಲೇ ಪ್ರಕರಣ ದಾಖಲಿಸುವುದು ದೊಡ್ಡ ಮಾತಲ್ಲ. ಇದರಿಂದ ಯಾವ ಸಂಬಂಧಗಳೂ ಉಳಿಯಲು ಸಾಧ್ಯವಿಲ್ಲ. ಸಂಧಾನದಂತಹ ಇಂತಹ ಮನವೀಯ ಕೆಲಸವನ್ನು ಮಹಿಳಾ ಪೊಲೀಸರಿಗಿಂತ ಚೆನ್ನಾಗಿ ಮತ್ಯಾರು ಮಾಡಲು ಸಾಧ್ಯ! ಇದರಿಂದ ಸಂಬಂಧಗಳೂ ಉಳಿಯುತ್ತವೆ, ಸಮಾಜವೂ ಗಟ್ಟಿಯಾಗುತ್ತದೆ. ಎಲ್ಲಾ ಪ್ರಯತ್ನ ಮೀರಿಯೂ ಸಂಬಂಧ ಶಿಥಿಲವೇ ಇದ್ದರೆ ಅಂತಹ ಸಂದರ್ಭಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲೇಬೇಕಾಗುತ್ತದೆ. ಇನ್ನು ಕೆಲವು ಪ್ರಕರಣಗಳಿರುತ್ತವೆ. ಅತ್ಯಾಚಾರ, ಅತ್ಯಾಚಾರಕ್ಕೆ ಯತ್ನ, ಕೊಲೆ ಸೇರಿದಂತೆ ಬಹಳ ಗಂಭೀರವಾದ ಪ್ರಕರಣಗಳಲ್ಲಿ ನಾವು ಮಾನವೀಯತೆ ಮೆರೆಯುತ್ತಾ ಕೂರಲು ಸಾಧ್ಯವಿಲ್ಲ. ಅಮಾನವೀಯವಾಗಿ ನಡೆದುಕೊಂಡ ಆರೋಪಿಯ ವಿರುದ್ಧ ನಾವೂ ‘ಪೊಲೀಸರ ದಂಡ’ ಉಪಯೋಗಿಸಲೇಬೇಕಾಗುತ್ತದೆ’. 

ಖಾಕಿಯೊಳಗಿನ ಮಹಿಳಾ ಪೊಲೀಸರನ್ನು ಬೇರೊಂದು ಲೋಕದ ಜೀವಿಗಳಂತೆ ನೋಡುವುದನ್ನು ಬಿಟ್ಟು ಈಗಲಾದರೂ ನಾವು ಅವರ ಸೇವೆಗೆ ಸೆಲ್ಯೂಟ್ ಹೊಡೆಯಬೇಕಿದೆ.