ಕುಮಾರಣ್ಣ ಸಾಲಿಮನ್ಯಾಗ ಮಕ್ಕಂಡ್ರ.. ಯಡೆಯೂರಣ್ಣಗ್ ಯಾಕ ಹೊಟ್ಟಿಉರಿ

ಕುಮಾರಣ್ಣ ಸಾಲಿಮನ್ಯಾಗ ಮಕ್ಕಂಡ್ರ.. ಯಡೆಯೂರಣ್ಣಗ್ ಯಾಕ ಹೊಟ್ಟಿಉರಿ

ಏನ್ ಬಸಣ್ಣಾ.... "ಸವಾರಿ ಎಜ್ಗೇ ಹೊಂಟೈತಲ್ಲ..? ಚೀಲಾನೂ ದೊಡ್ಡದೈತಿ"...! "ಹೊರ್ದೇಶಕ್ಕೇನರ ಹೊಂಟಿ ಏನ್ ಮತ್ತ"...? ನಿನ್ನ ಹಕಿಕತ್ ತಿಳೆಂಗಿಲ್ಲ....? "ಬೆಳಿಗ್ಗೆ ಬೆಂಗ್ಳೂರಾಗ್ ಇದ್ರ, ಸಂಜಿಮುಂದ್ ದಿಲ್ಯಾಗ ಇರ್ತೀ. ದಿಲ್ಯಾಗ ಅದಾನ ಅನ್ನದ್ರಾಗ ಹೊಳ್ಳಿ ಊರಾಗ ಇರ್ತೀ! ಏನೋ ನಿನ್ನ ಮಹಿಮಾ".!


ಕಾಕಾರ "ನಿಮ್ಮ ಜೊತಿ ಮಾತಾಡಾಕ ನನ್ಗ ಪುರಸೊತ್ತಿಲ್ಲ", ನಾನು ಅರ್ಜಂಟಾಗಿ ಈಗ ಕಲಬುರ್ಗಿಗೆ ಹೋಗಬೇಕಾಗೇತಿ....? ಬಸ್ ಕರೆಕ್ಟ್ ಟೈಮ್‍ಗೆ ಬರತೈತಿ ಅಂತ್ ಕಂಡಕ್ಟರ್ ಪೋನ್ ಮಾಡಿ ಹೇಳ್ಯಾನಾ..... ಊರಿಂದ ಬಂದ್ ಮ್ಯಾಕ್ ನಿಮ್ಗ ಎಲ್ಲಾ ವಿಷ್ಯಾ ಹೇಳ್ತನಿ, ಈಗ ನನ್ನ ಬಿಡ್ರೀ.....!


ಲೇ ಪುರಸೊತ್ತಗೇಡಿ, ಹಂಗ್ಯಾಕ ಆರತಿಂಗಳ್ಗೆ ಹುಟ್ಟಿದಾವ್  ಆಡದಂಗ್ ಮಾಡ್ತೀ. ! ನಿ... ಹೋಗೋದು ಬ್ಯಾಡಗಿ-ಕಲಬುರ್ಗಿ ಬಸ್ ಹೌದಲ್ಲ....? ಆ ಬಸ್ಸು ಮೋಟೆಬೆನ್ನೂರ ಹತ್ರ ಕೆಟ್ಟ ನಿಂತಗಂಡೈತಿ ಬಾ.... "ಈಗ ನನ್ನ ಮಗಾ ಬ್ಯಾಡ್ಗಿಂದ ಬರೋ ಹೊತ್ತಿನ್ಯಾಗ ಮೊಟೆಬೆನ್ನೂರು ಹತ್ರಾ ಆ ಬಸ್ಸು ಕೆಟ್ಟ ನಿಂತಿದ್ದ ನೋಡಿದ್ದೆ ಅಂತ ಅವ್ನ ನನ್ಗ ಹೇಳ್ದಾ".  ಇನ್ನು ಒಂದ್ ತಾಸು ಬಸ್ ತಡಾ ಆಕೈತಂತ್ ಬಾ,  ಲಗೂ ಹೋಗಿ ಬಸ್ ಸ್ಟಾಂಡಿನ್ಯಾಗ ಯಾಕ್ ಸೊಳ್ಳಿಕಡ್ಸಿಗೆಂತ ಕುಂದ್ರತಿ... ಆ ಬಸ್ ಬರೋಮಟ ಅಡ್ಕಿ-ಎಲಿ ಹಾಕ್ಕೋ, ನಿ.. ಕಲಬುರ್ಗಿಗೆ ಯಾಕ ಹೊಂಟಿ....?ಅದರ ಹಿಂದಿನ ಮರ್ಮ ಏನೋ? ಅನ್ನೋದನ್ನು ಹೇಳು, ಹಿಡಿ, ಅಡ್ಕಿ ಹಾಕ್ಕೋ.


"ಕಲಬುರ್ಗಿ ಮರ್ಮ ಏನೂ ಇಲ್ರೀ.... ಎಲ್ಲಾ ನನ್ನ ಕರ್ಮ".... "ನಿಮ್ಮಂತವ್ರು ಊರಿಗೆ ಒಬ್ಬರಿದ್ರ ಸಾಕು, ಊರ ಉದ್ದಾರಾದಂಗ್".! ಅಲ್ರೀ.... ಕಾಕಾರ "ನಿಮ್ಗ ವಯಸ್ಸಾಗೇತಿ ಹೊರ್ತು ಬುದ್ದಿಗೆ ವಯಸ್ಸಾಗಿಲ್ಲ,! ಇನ್ನು ಹುಡ್ರು ಆಡಿದಂಗ್ ಆಡ್ತೀರಿ ನೋಡ್ರೀ."

 "ನಿ...ಏನೇನರ್ ಹೇಳಿ ವಿಷ್ಯಾ ಮರ್ಸಬ್ಯಾಡ, ಅದೇನು ಕಲಬುರ್ಗಿ ಮರ್ಮಾ ಹೇಳಲೇ"....?

ಏ ಅಂತಾ ಮರ್ಮಾ ಏನು ಇಲ್ರೀ,! "ನಮ್ಮ ಕುಮಾರಣ್ಣ ಮತ್ತ ಗ್ರಾಮ ವಾಸ್ಥವ್ಯ ಮಾಡಾಕ ಹೊಂಟಾರ್ರೀ",..!

ಯಾವ್ ಕುಮಾರಣ್ಣ,! ಮೂಲಿಮನಿ ಕುಮಾರಣ್ಣನು ....? "ಮತ್ಯಾಕ  ಹಳ್ಳಿಕಡಿಗೆ ಹೊಂಟಾನಲೇ ಅವಾ, ಏನರ್ ಒಂದ್ ಯಡವಟ್ಟ ಮಾಡ್ತಾನ ಅವಾ".


ಅವಾ ಯಾಕ್ರೀ ಗ್ರಾಮವಾಸ್ಥವ್ಯ ಮಾಡ್ತಾನ...? ಅವಾ  ಹಳ್ಳಿ ಬಿಟ್ಟು ಬಾಳಾ ವರ್ಷ ಆಗೇವು, "ಕೆಟ್ಟು ಪಟ್ಣಾ ಸೇರು ಅನ್ನೊಹಂಗ್" ಮತ್ತಯಾಕ್ ಅವಾ ಹಳ್ಳಿಗೆ ಹೊಕ್ಕಾನ..! "ಅವ್ರ ಅವ್ವ.....ಅಪ್ಪಾ ತೀರಿಕೊಂಡಾರ, ಇನ್ನ ಅವ್ನ ಅಣ್ಣ-ತಮ್ಮಂದ್ರು ಅವ್ರು ಊರು ಬಿಟ್ಟು ಪಟ್ನಾ ಸೇರ್ಯಾರ, ಊರಾಗ ಯಾರದಾರಂತ ಹೋಗಬೇಕು".? "ಈ ಮೂಲಿಮನಿ ಕುಮಾರಣ್ಣ, ವರ್ಷಕ್ಕೊಮ್ಮೆ ಯುಗಾದಿ ಮುಂದ ಹಳ್ಳಿಗೆ ಹೋಗಿ ಹೊಲಾನ ಲಾವಣಿಹಾಕಿ ರೊಕ್ಕಾ ಇಸ್ಕಂಬರ್ತಾನ್,.ನಿಮ್ಮದೊಳ್ಳೆಕತಿಯಾತು", "ಗ್ರಾಮವಾಸ್ಥವ್ಯ ಮಾಡೋದು ನಮ್ಮ ಕುಮಾರಣ್ಣರೀ... ಸಿಎಂ ಕುಮಾರಣ್ಣ... ತಿಳಕ್ಕೊಳ್ಳರ್ರೀ".


ಹೌದ್..ಅಲ್ಲಲೇ "ಈಹಿಂದ್ ಕುಮಾರಣ್ಣ ಸಿಎಂ ಆಗಿದ್ದ ಸಂದರ್ಭದಾಗ ಗ್ರಾಮವಾಸ್ಥವ್ಯ ಮಾಡಿದ್ನಲ್ಲ.! "ಮತ್ಯಾಕ ಈಗ ಅದ್ನ ಸುರುವು ಹಚಗೆಂಡ್ಯಾನ"...? "ಈ ಹಿಂದ್ ಮನ್ಯಾಗ ಉಳಕೊಂಡಿದ್ದ, ಈಬಾರಿ ಮಠದಾಗ ವಾಸ್ಥವ್ಯಮಾಡ್ತಾನೇನೂ, ಮತ್ತ"...?

"ಮಠಾನು ಇಲ್ಲಾ, ಮನಿನೂ ಇಲ್ಲಾ" ಸಾಲ್ರೀ,  "ಸರಕಾರಿ ಸಾಲಿ. ಸರಕಾರಿ ಸಾಲಿಒಳ್ಗ ಕುಮಾರಣ್ಣ ವಾಸ್ಥವ್ಯ ಮಾಡ್ತಾರ", "ಅಲ್ಲೆ ಜನ್ರಕಷ್ಟ -ಸುಖಾ ಕೇಳಿ ಸುತ್ತಮುತ್ತ ಹತ್ತಹಳ್ಳಿ ಸಮಸ್ಯೆನ ಬಗಿ ಹರ್ಸಿ ಬರ್ತಾರ".....!


"ಸಾಲಿ ಒಳ್ಗ ವಾಸ್ಥವ್ಯ ಮಾಡೋದು ಬರೋಬ್ಬರಿ ಬಿಡು", ಅದ್ಸರೀ....ನಿನ್ ಪುರಾಣ ಹೇಳು, "ಕುಮಾರಸ್ವಾಮಿ ಗ್ರಾಮವಾಸ್ಥವ್ಯ ಮಾಡೋದ್ಕೂ, ನಿ   ಕಲಬುರ್ಗಿಗೆ ಹೊಂಟಿದ್ಕೂ ಏನ್ ಸಂಬಂಧ"...!

ಏ ಸಂಬಂಧ ಕೇಳ್ತೀರಲ್ರೀ,  "ನಮ್ಮ ಕುಮಾರಣ್ಣ ಮೊನ್ನೆ ಪೊನ್ ಮಾಡಿ ಹಲೋ ಬ್ರದರ್, ಹೇಗಿದ್ದೀರಾ,"?, "ನಾನು ಮತ್ತೆ ಗ್ರಾಮವಾಸ್ಥವ್ಯ ಆರಂಭಿಸುತ್ತಿರುವೆ", "ನೀವು ಕಲಬುರ್ಗಿ ಜಿಲ್ಲೆಯಲ್ಲಿ ಸಂಚರಿಸಿ ಜಿಲ್ಲೆಯಲ್ಲಿನ ಸರಕಾರಿ ಶಾಲೆಗಳ ಸ್ಥಿತಿ-ಗತಿ ತಿಳ್ಸಿ",, "ಆ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಪಟ್ಟಿಮಾಡು ಬ್ರದರ್" ಅಂತ ಹೇಳಿದ್ಕ ನಾನು ಕಲಬುರ್ಗಿ ಜಿಲ್ಲೆಕ ಹೊಂಟೇನಿ ನೋಡ್ರೀ....


ಭಾರೀ ಆತು ಬಿಡಲೇ, "ಈ ಗ್ರಾಮವಾಸ್ಥವ್ಯ ಅನ್ನೋ ವಿಚಾರ ಬಾಳ ಚಲೋದು ನೋಡ್ಪಾ". "ಇದ್ರಿಂದಾ ಜನ್ರ ನಾಡಿಮಿಡ್ತಾ ತಿಳಕೊಳ್ಳೋದು ಬಳಾ ಸರಳ"!.  "ಅಲ್ದ ಜನ್ರ ಕಷ್ಟನಾ ಕೇಳಾಕ ರಾಜ್ಯದ ದೊರೆನ ಜನ್ರ ಹತ್ರಾ ಬರ್ತಾನ ಅಂದ್ರ, ಬೆಂಗಳೂರ್ಗೆ ಹೋಗಿ ಕಷ್ಟಾ ಹೇಳಿಕೊಳ್ಳಾಕ ಆಗ್ದ ಜನ್ರು ತಮ್ಮ ಹತ್ರಾ ಬರೋ ದೊರಿ ಹತ್ರ ತಮ್ಮ ಕಷ್ಟ ಹೇಳಿಕೊಳ್ಳತಾರ'.  ಮತ್ತ "ಸಿಎಂ ಊರಿಗೆ ಬರಾಕ ಹತ್ಯಾನ ಅಂದ್ರ ಸುತ್ತಮುತ್ಲು ಹತ್ತಹಳ್ಳಿ ರಸ್ತೆಗಳು ಟಾರ್ ಕಾಣ್ತಾವು...! ಹಂಚು ವಡ್ದ ಮಳಿಗಾಲ್ದಾಗ್ ಸೋರೋ ಸಾಲಿಮನಿ ದುರಸ್ತಿ ಆಗ್ತಾವು", "ಇದರಿಂದ ಊರಿಗೆ ಒಳ್ಳೇದಾಕ್ಕೇತಿ". "ನಾಲ್ಕ ಜನ್ರಿಗೆ ಉಪಕಾರ ಆಕ್ಕೇತಿ. ಆಗ್ಲಿ ಬಿಡು....! ಆದ್ರ "ನಮ್ಮ ಸಿದ್ದ್ರಾಮಣ್ಣ, ಯಡೆಯೂರಣ್ಣ ಯಾವೂರಾಗ ವಾಸ್ಥವ್ಯ ಮಾಡ್ತಾರಂತ್"....

"ಅವ್ರಾಕ್ರೀ ಗ್ರಾಮವಾಸ್ಥವ್ಯ ಮಡ್ಬೇಕು"...? "ಸಿದ್ದ್ರಾಮಣ್ಣ ಅರಸ್ರ ನಂತ್ರ ಐದ್ ವರ್ಷ ಮುಖ್ಯಮಂತ್ರಿ ಆಗಿದ್ದು ನಾನ ಅಂತ್ ಹೇಳ್ತಿರತಾರ, "ಪುಗಸಟ್ಟೆ ಅಕ್ಕಿಕೊಟ್ಟೆ, ಸಾಲಮನ್ನಾ ಮಾಡ್ದೆ, ಶಾಲಾ ಮಕ್ಕಳಿಗೆ ಹಾಲುಕೊಟ್ಟೆ, ತತ್ತಿಕೊಟ್ಟೆ, ಶೂ, ಸಾಕ್ಸು ಕೊಟ್ಟೆ, ನಾನಾ ನಮೂನಿ ಯೋಜನೆ ಜಾರಿಗೆ ತಂದೆ, ಆದ್ರ ಜನಾ ಮಾತ್ರ ಚುನಾವಣೆ ಒಳ್ಗ ನನ್ನ ಕೈಹಿಡಿಲಿಲ್ಲ ಅನ್ನೋ ಕೊರಗನ್ಯಾಗ ಅವ್ರು ಅದಾರ". ಇನ್ನ ಅವ್ರ ಚಮ್ಚಾಗಳು, ಸೌಟುಗಳು....


ಲೇ ಲೇ ಬಸ್ಯಾ ಮಗನ್ ನಿ ಹಂಗ್ "ಅವ್ರ ಹಿಂಬಾಲಕರನ್ನ ಚಮ್ಚಾಗಳು, ಸೌಟುಗಳು. ಅಂತ್ ಕರ್ದಿ ಅಂದ್ರ ಮಗನ ಅವ್ರು ನಿನ್ನ ಸಿಮ್ಮನ್ ಬಿಡಂಗಿಲ್ಲ" 
ನಾ ಏಲ್ಲಿ ಅಂದನೀ, ಎಲ್ಲ ನಮ್ಮ ಅಡ್ವಿ ವಿಶ್ವನಾಥ್ ಹಂಗ್ ಅಂತ್ ಹೇಳ್ಯಾರ್. ಲೇ "ಅವ್ರು ಅಡ್ವಿ ವಿಶ್ವನಾಥ್ ಅಲ್ಲೋ, ಅಡಗೂರು ವಿಶ್ವನಾಥ ಅಂತ್. ನೀ ಹಿಂಗೆಲ್ಲಾ ಹೆಂಗೆಗರ ಕರಿಬ್ಯಾಡ್."ಮತ್ತ ನಮ್ಮ ಸಿದ್ದ್ರಾಮಣ್ಣ ಸಿಎಂ ಆಗ್ಲಿ ಅಂತ್ ಕಂಡಕಂಡಲ್ಲೆ ಭಾಷ್ಣಮಾಡಿಕೊಂತ ಹೊಂಟಾರ " ಇತ್ಲಾಗ ನೋಡಿದ್ರ ಆ "ಅಡವಿ ವಿಶ್ವನಾಥು ಸಿದ್ದ್ರಾಮಣ್ಣ ತನ್ನ ಚಮ್ಚಾಗಳ ಮೂಲ್ಕ ಸಿದ್ದ್ರಾಮಣ್ಣ ಮತ್ತ ಮುಖ್ಯಮಂತ್ರಿ ಆಗಬೇಕು ಅಂತ್ ಹೇಳ್ಸಾಕ ಹತ್ಯಾನ ಅಂತ್ ಕಾಲು ಏಳ್ಯಾಕ ಹತ್ತೇತಿ".  "ಅತ್ಲಾಗ ರೇಷನ್ ಬೇಗ್ ಸಿದ್ದ್ರಾಮಣ್ಣನಿಂದ್ ಕಾಂಗ್ರೆಸ್ ಸೋತತಿ, ಅದು ಹಂಗ್ -ಹಿಂಗ್ ಅಂದು ಸಿದ್ದ್ರಾಮಣ್ಣನ ಮ್ಯಾಲ ಮುರಕಂಡ ಬಿದ್ದೈತಿ"...


ಲೇ..ಲೇ "ಅವ್ನ ಹೆಸ್ರು ರೇಷನ್‍ಬೇಗ್ ಅಲ್ಲೋ ರೋಷನ್‍ಬೇಗ್ ಅಂತ", ನಿ ಹಿಂಗೆಲ್ಲಾ ತಪ್ಪತಪ್ಪಾಗಿ ಹೆಸ್ರ್ ಹೇಳಬ್ಯಾಡ ಮತ್ತ.

ಆತು ಬಿಡ್ರೀ ನಂದು ನಾಲಿಗೆ ಲಗೂನ ಹೊಳ್ಲೋದಿಲ್ಲ, ತಿದ್ದಿಕೊಳ್ಳ್ರೀ..."ಲೋಕಸಭಾ ಚುನಾವಣೆ ಒಳ್ಗ ಕಾಂಗ್ರೆಸ್ ಬಕಬಾರ್ಲೆ ಬಿದ್ದಮ್ಯಾಕ ಸಿದ್ದ್ರಮಾಣ್ಣ ಎಲ್ಲಿ ಹೊರ್ಗ ಕಾಣಾಕ ವಲ್ರು".....  ಅವರ್ನ ಗ್ರಾಮವಾಸ್ಥವ್ಯ ಮಾಡ್ರೀ ಅಂದ್ರ "ಏ ಬುದ್ದಿಗೇಡಿ ಬಸ್ಯಾ ನಡಿ" ಅಂತ ಗದ್ರಸ್ತಾರ. ನಾನು ರೆಡ್ಡಿಗಳ ವಿರುದ್ಧ ವಿಧಾನಸಭೆಯಲ್ಲಿ ತೊಡೆತಟ್ಟಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆಮಾಡಿದ ವಿಷ್ಯಾ ನಿನಗೆ ಗೊತ್ತಿಲ್ಲವೇ? ಎಂದು ನನ್ನ ಹೋರ್ಗ ಕಳಿಸಿದ್ರು..!


ಇನ್ನು ನೀವು ಹೇಳ್ದಂಗ್ "ಯಡೆಯೂರಣ್ಣ ಲೋಕಸಭೆ ಚುನಾವಣ್ಯಾಗ 22 ಸಿಟ್ ಗೆಲ್ತವಿ ಅಂತ ಹೇಳಿದ್ದಾ", "ಇಗ ನೋಡಿದ್ರ 25 ಸೀಟು ಗೆದ್ದಾವು", ಆದ್ರು ಪಾಪ ನಮ್ಮ "ಯಡೆಯೂರಣ್ಣಗ್ ಬಾಳಾ ಬೇಕಾದ ಜಾದವ್,ಶೋಭಕ್ಕ, ಜಿಗಜಿಣಗಿ ಅವ್ರಿಗೆ ಕೇಂದ್ರದಾಗ ಮಂತ್ರಿ ಪಟ್ಟಾ ಸಿಗಲಿಲ್ಲ  ಅಂತ್ ಮುಸಡಿ ಸೊಟ್ಟಗಮಾಡಿಕೊಂಡು ಕುಂತೈತಿ"..!,   


ಎಲ್ಲೆ ಅದಿಯೋ ಬಸಣ್ಣ, "ಕುಮಾರಣ್ಣ ಗ್ರಾಮವಾಸ್ಥವ್ಯ ಮಾಡ್ತಾನ ಅಂತ ಅದ್ರ ಪ್ರಚಾರ-ವಿಚಾರ-ಗಿಚಾರ, ಜೆಡಿಎಸ್‍ಗೆ, ಕುಮಾರಣ್ಣಗ ಹೊಕೈತಿ, ಅದ್ಕು ಮೊದ್ಲ ನಾನು ಗ್ರಾಮವಾಸ್ಥವ್ಯ ಮಾಡ್ತನಿ ಅಂತ ಯಡೆಯೂರಣ್ಣ ಈಗಾಗಲೇ ಗಂಟು ಮೋಟಿ ಕಟಿಗೊಂಡು ಗ್ರಾಮಸಂಚಾರ ಅಂತ ಹೊಂಟೇತಿ ನೋಡು. ಇವತ್ತಿನ ಪೇಪರನ್ಯಾಗ ಹಂಗ್ ಅಂತ ಸುದ್ದಿ ಬಂದೈತಿ".! 


ಹೌದೇನ್ರೀ....ನನಗ ಗೊತ್ತ ಇರಲಿಲ್ಲ ನೋಡ್ರೀ,  "ಅಲ್ಲಾ ನಮ್ಮ ಕುಮಾರಣ್ಣ ಸಾಲಿಮನಿ ವಾಸ್ಥವ್ಯ ಮಾಡಿದ್ರ ಈ ಯಡೆಯೂರಣ್ಣ-ಸಿದ್ದ್ರಾಮಣ್ಣಗ ಯಾಕ ಹೊಟ್ಟಿ ಉರಿ ಅಂತೇನಿ"..?


"ಸಿದ್ದ್ರಾಮಣ್ಣ ಎಲ್ಲೆ ಹೊಟ್ಟಿಉರಕಂಡಾನ, ಏನಾದ್ರು ಮಾಡಿಕೊಂಡೂ ಹೋಗು ಅಂತ ಸುಮ್ಮಕ ಮನಹಿಡ್ದಕುಂತಾನ".."ರಾಜಕಾಣ್ಣೋ ತಮ್ಮ ಇಂತಾವೆಲ್ಲ ನಿನಗ್ಗ-ನನಗ್ಗ ತಿಳಿಂಗಿಲ್ಲ ನಡಿ... ನಡಿ. ನಿನ್ನ "ಬಸ್ ರಿಪೇರಿಯಾಗಿ ಬಂದಿರಬೇಕು", ನಡಿ , ಹಾಂ ತಡಿಪಾ ಹೆಂಗ್ಯೂ   ನಿಮ್ಮ "ಕುಮಾರಣ್ಣ ಕಲಬುರ್ಗಿಗೆ ವಾಸ್ಥವ್ಯಕ್ಕ ಹೊಕ್ಕಾರ ಅಂತಿದಿ, ಹಂಗ್ ನಮ್ಮ "ಖರ್ಗೆ ಸಾಹೇಬ್ರನ ಮಾತಾಡ್ಸಿಗೊಂಡು ಅವ್ರಕಷ್ಟಾ-ಸುಖ ಕೇಳಿಕೊಂಡ ಬಾ ಅಂತ ಹೇಳ್ಪಾ".