ದಸರಾ ಸಂಭ್ರಮಕ್ಕೆ ಮತ್ತಷ್ಟು ಕಿಕ್ಕೇರಿಸಿದ ಕಿಸ್!

ದಸರಾ ಸಂಭ್ರಮಕ್ಕೆ ಮತ್ತಷ್ಟು ಕಿಕ್ಕೇರಿಸಿದ ಕಿಸ್!

ಯಾವುದೇ ಸಿನಿಮಾ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವಾಗಲೇ ಹಬ್ಬ, ರಜೆಗಳು ಶುರುವಾದರೆ ಅದರ ಪಾಲಿಗೆ ಶುಕ್ರದೆಸೆ ಶುರುವಾಯಿತೆಂದೇ ಅರ್ಥ. ವಾರದ ಹಿಂದಷ್ಟೇ ಬಿಡುಗಡೆಯಾಗಿದ್ದ ಎಪಿ ಅರ್ಜುನ್ ನಿರ್ದೇಶನದ ಕಿಸ್ ಚಿತ್ರಕ್ಕೂ ಈಗ ದಸರೆಯ ಸಂದರ್ಭದಲ್ಲಿ ಅಂಥಾದ್ದೊಂದು ಶುಕ್ರ ದೆಸೆ ನಿಜಕ್ಕೂ ಆರಂಭವಾಗಿದೆ. ಬಿಡುಗಡೆಯ ದಿನದಂದೇ ಕಿಸ್‍ಗೆ ಭರಪೂರ ಬೆಂಬಲ ಸಿಕ್ಕಿತ್ತು. ಅದಾಗಿ ಮಾರನೇ ದಿನದ ಹೊತ್ತಿಗೆಲ್ಲಾ ಸಿನಿಮಾ ಅದ್ಭುತವಾಗಿದೆ ಎಂಬ ಅಭಿಪ್ರಾಯ ಊರಿಡೀ ಹರಡಿಕೊಂಡ ಪರಿಣಾಮ ಹೆಚ್ಚು ಹೆಚ್ಚು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಜಮೆಯಾಗಲಾರಂಭಿಸಿದ್ದರು. ಇದೀಗ ದಸರಾ ನಿಮಿತ್ತವಾಗಿ ಸಾಲು ಸಾಲು ರಜೆಗಳಿರೋದರಿಂದ ಕಿಸ್ ಮತ್ತಷ್ಟು ಆವೇಗದೊಂದಿಗೆ ಪ್ರದರ್ಶನ ಕಾಣುತ್ತಿದೆ.

ಕೇವಲ ಬೆಂಗಳೂರಿನಂಥಾ ನಗರಗಳಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಎಲ್ಲ ಸೆಂಟರುಗಳಲ್ಲಿಯೂ ಕಿಸ್ ಭರ್ಜರಿ ಪ್ರದರ್ಶನವನ್ನೇ ಕಾಣುತ್ತಿದೆ. ಎಪಿ ಅರ್ಜುನ್ ಈ ಮೂಲಕ ನಿರ್ದೇಶಕರಾಗಿ ಮತ್ತೊಂದು ಮಹಾ ಗೆಲುವನ್ನು ತಮ್ಮದಾಗಿಸಿಕೊಂಡು ನಿರ್ಮಾಪಕರಾಗಿ ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದಾರೆ. ಇದು ಅವರ ಪಾಲಿಗೆ ನಿಜಕ್ಕೂ ವೀರೋಚಿತ ಗೆಲುವು. ಹೊಸಾ ನಾಯಕ ನಾಯಕಿಯೊಂದಿಗೆ ಕಥೆಯ ಬಲದೊಂದಿಗೇ ಗೆಲ್ಲೋದೆಂದರೆ ಅದು ಸಾಮಾನ್ಯ ಸಂಗತಿಯಲ್ಲ. ಈ ನಿಟ್ಟಿನಲ್ಲಿ ಕಿಸ್‍ಗೆ ಒಲಿದಿರೋದು ಮಹಾ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬಹುತೇಕ ಪ್ರೇಕ್ಷಕರೀಗ ಕಿಸ್‍ನತ್ತ ಆಕರ್ಷಿತರಾಗಿದ್ದಾರೆ. ದಸರಾ ಸಂಭ್ರಮವನ್ನು ಕಿಸ್‍ನೊಂದಿಗೆ ಎಂಜಾಯ್ ಮಾಡಲು ಚಿತ್ರಮಂದಿರಗಳತ್ತ ಸಾಗಿ ಬರುತ್ತಿದ್ದಾರೆ.

ಕಿಸ್ ಎಂಬ ಶೀರ್ಷಿಕೆ ಕೇಳಿದಾಕ್ಷಣ ಇದು ಯುವ ಹುಮ್ಮಸ್ಸಿನ ಚಿತ್ರವೆಂಬ ಚಿತ್ರಣ ಸ್ಪಷ್ಟವಾಗಿಯೇ ಮೂಡಿಕೊಳ್ಳುತ್ತದೆ. ಅದು ಈಗ ನಿಜವಾಗಿದೆ. ಪ್ರೀತಿಯೆಂಬುದು ಇಡೀ ಚಿತ್ರದ ಜೀವಾಳ. ಆದರೆ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿಯೇ ಗ್ರಹಿಸಿಕೊಂಡಿರೋ ಅರ್ಜುನ್, ಇಡೀ ಚಿತ್ರವನ್ನು ವಯಸ್ಸಿನ ಹಂಗಿಲ್ಲದೆ ಕುಟುಂಬ ಸಮೇತರಾಗಿ ಕೂತು ನೋಡುವಂತೆ ರೂಪಿಸಿದ್ದಾರೆ. ಇಂದಿನದ್ದು ಸ್ಪೀಡ್ ದುನಿಯಾ. ಇಲ್ಲಿ ಎಲ್ಲವೂ ಬೇಗನೆ ಘಟಿಸುತ್ತವೆ. ಪ್ರೀತಿಯಂತೂ ಒಂದೇ ದಿನದಲ್ಲಿ ಹುಟ್ಟಿ ಮರುದಿನದ ಹೊತ್ತಿಗೆಲ್ಲ ಮುರುಟಿಕೊಳ್ಳುತ್ತೆ. ಅಂಥಾದ್ದರ ನಡುವೆ ಕಷ್ಟಪಟ್ಟು ಹುಡುಕಾಡಿದರೆ ಒಂದಾದರೂ ಪವಿತ್ರವಾದ ಪ್ರೀತಿ ಇದ್ದೇ ಇರುತ್ತೆ. ಅಂಥಾ ಅಪರೂಪದ, ಗಟ್ಟಿಯಾದ ಬಂಧ ಹೊಂದಿರುವ ಪ್ರೇಮದ ಬಿಂದುವಿನಿಂದಲೇ ಕಿಸ್ ಕಥೆ ಹರಡಿಕೊಂಡಿದೆ. ಇದರ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ನೀವಿನ್ನೂ ಈ ಚಿತ್ರ ನೋಡಿಲ್ಲವಾದರೆ ಈ ದಸರಾವನ್ನು ಕಿಸ್‍ನೊಂದಿಗೆ ಸಂಭ್ರಮಿಸಿ...