ಆರ್ಯರ ಸಂಚಿಗೆ ಬಲಿಯಾದ ರಾಜ ಮಹಿಷ!?

ಮಹಿಷ ಬೌದ್ದ ಧರ್ಮ ಅನುಸರಿಸಿದ್ದ ಈ ನೆಲದ ರಾಜ. ಆರ್ಯರು ಇವರ ಜನಪ್ರಿಯತೆ ಸಹಿಸಲಾಗದೆ ಕುಲೀನ ಮಹಿಳೆಯ ಜತೆ ಮದುವೆ ಮಾಡಿ, ಒಂಬತ್ತನೇ ದಿನದಂದು ಆಕೆಯೇ ಆತನನ್ನ ಕೊಲ್ಲುವಂತೆ ಮಾಡಿದರು ಎನ್ನುವಂಥ ಮಾತುಗಳು ಜೆಎನ್ ಯು ವಿನಲ್ಲಿ ಹಂಚಿದ ಕರಪತ್ರಗಳಲ್ಲಿದ್ದವು. 

ಆರ್ಯರ ಸಂಚಿಗೆ ಬಲಿಯಾದ ರಾಜ ಮಹಿಷ!?

ಮೈಸೂರು ದಸರಾದ ಬಣ್ಣಬಣ್ಣದ ಥಳುಕುಬಳುಕು ಕಂಗೊಳಿಸಲು ಶುರುವಾಗುತ್ತಿರುವ ಬೆನ್ನಲ್ಲೇ, ಇದು ಮಹಿಷನನ್ನ ನೆನಪಿಸುವ ದಸರಾ ಆಗಬೇಕೆಂಬ ಕೂಗು ಮತ್ತೆ ಮುನ್ನಲೆಗೆ ಬಂದಿದೆ.

ದೇವಿ ಮಹಾತ್ಮೆ ಹಾಗು ದಸರಾ ಹಿನ್ನೆಲೆಗೆ ತರಹೇವಾರಿ ಕತೆಗಳಿವೆ, ಇತಿಹಾಸವೂ ಇದೆ. ಅದರಂತೆಯೇ ಈ ನೆಲದ ಮೂಲವಾಸಿಗಳ ಕಥಾನಕವೂ ಮಹಿಷಾಸುರನ ಬಗ್ಗೆ ಇವೆ. ಉತ್ತರ ಬಂಗಾಳ ಭಾಗದಲ್ಲಿ 50 ಕುಟುಂಬದಷ್ಟಿರುವ ಅಸುರ ಮತ್ತು ಸಂತಾಲ ಬುಡಕಟ್ಟು ಜನಾಂಗ ಈಗಲೂ ಮಹಿಷನನ್ನ ತಮ್ಮ ಪೂರ್ವಜ ಎಂದೇ ಭಾವಿಸುತ್ತಾರೆ. ವಿಜಯದಶಮಿ ನಂತರದ ಎರಡು ದಿನ ಮಾಂಸಾಹಾರ, ದಾದಿಯಾಕಂ ಎಂಬ ಸ್ಥಳೀಯ ಮದ್ಯಸೇವಿಸಿ ಮಹಿಷ ಹುತಾತ್ಮನಾದ ದಿನ ಆಚರಿಸುತ್ತಾರೆ.

ನಾಡನ್ನಾಳಿದ ತಮ್ಮ ಪೂರ್ವಿಕ ಮಹಿಷಾಸುರನನ್ನ ಮೋಸದಿಂದ ಕೊಲ್ಲಲಾಯಿತು ಎಂಬ ಕತೆಗಳು ಇವರಲ್ಲಿವೆ. 2011 ಮತ್ತು 2014 ರಲ್ಲೂ ದೆಹಲಿಯ ಜೆಎನ್‍ಯು ನಲ್ಲಿ ಕರಪತ್ರಗಳನ್ನ ಹಂಚಲಾಗಿತ್ತು. ಅದರಲ್ಲಿ ಮಹಿಷ ಬೌದ್ದ ಧರ್ಮ ಅನುಸರಿಸಿದ್ದ ಈ ನೆಲದ ರಾಜ. ಆರ್ಯರು ಇವರ ಜನಪ್ರಿಯತೆ ಸಹಿಸಲಾಗದೆ ಕುಲೀನ ಮಹಿಳೆಯ ಜತೆ ಮದುವೆ ಮಾಡಿ, ಒಂಬತ್ತನೇ ದಿನದಂದು ಆಕೆಯೇ ಆತನನ್ನ ಕೊಲ್ಲುವಂತೆ ಮಾಡಿದರು , ಮಹಿಷ ಹುತಾತ್ಮನಾದ ದಿನವನ್ನ ಆಚರಿಸಲು ಬುಡಕಟ್ಟಿಗರು, ದಲಿತರು ಒಂದಾಗಬೇಕು ಎಂಬರ್ಥದ ಒಕ್ಕಣಿಕೆಗಳು ಅದರಲ್ಲಿದ್ದವು, ಇದನ್ನ ಸಂಸತ್ತಿನ ಕಲಾಪದಲ್ಲೇ ಓದಿದ್ದ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಇವರೆಲ್ಲ  ರಾಷ್ಟ್ರವಿರೋಧಿಗಳು, ಇಂಥ ಆಚರಣೆಗೆಲ್ಲ ಅವಕಾಶವಿಲ್ಲ ಎಂದಿದ್ದರು. 

ಇದರಂತೆಯೇ ಒಡಿಶಾ, ಅಸ್ಸಾಂ, ಛತ್ತೀಸಘಡ ಇತ್ಯಾದಿ ರಾಜ್ಯಗಳಲ್ಲೆಲ್ಲ ಮಹಿಷನನ್ನ ಹುತಾತ್ಮನೆಂದೂ, ಆರ್ಯರ ಸಂಚಿನ ಭಾಗವಾಗಿ ಈತನ ಅಂತ್ಯವಾಯಿತು ಎಂದೇ  ನಂಬಿ ಆರಾಧಿಸುವಂಥದ್ದೂ ಇದೆ.

ತಮಿಳುನಾಡಿನ ಕಾಂಚೀವರಂ ಜಿಲ್ಲೆಯ ಮಮ್ಮುಲಪುರಂನಲ್ಲೂ ಪಲ್ಲವ ಆಳ್ವಿಕೆ ಅವಧಿಯಲ್ಲೇ ಮಹಿಷಮರ್ಧಿನಿ ಮಂಟಪ ಇದೆ. ಬೆಟ್ಟದ ಮೇಲಿರುವ ಇದಕ್ಕೆ ಯಮಪುರಿ ಎಂಬ ಮತ್ತೊಂದುಹೆಸರೂ ಇದ್ದು, ಇದರ ಇತಿಹಾಸ ಏಳನೇ ಶತಮಾನದಿಂದಲೂ ಇದೆ. ಹಾಗೇ ಕೇರಳದಲ್ಲೂ ಮಹಿಷಮರ್ಧಿನಿ ದೇವಾಲಯಗಳಿವೆ.

ಮೈಸೂರಿನ ಚಾಮುಂಡಿ ಬೆಟ್ಟ ಹಾಗು ಮಹಿಷಾಸುರನ ಕುರಿತ ಪುರಾಣ ಕತೆಗಳು ಇದ್ದು, ಮೈಸೂರನ್ನಾಳಿದ ಯದು ಕುಲದವರು ಚಾಮುಂಡೇಶ್ವರಿಯನ್ನ ತಮ್ಮ ಕುಲದೇವತೆಯನ್ನಾಗಿಸಿಕೊಂಡಿದ್ದಾರೆ. ಹಾಗೆಯೇ ಮಹಿಷನೂರು ಎಂದೇ ಬಳಸುತ್ತಿದ್ದುದೂ ಇತ್ತು. 1449 ರಲ್ಲಿ ಚಿಕ್ಕದೇವರಾಜ ಒಡೆಯರ್ ಬೆಟ್ಟದಲ್ಲಿ ಮಹಿಷಾಸುರನ ವಿಗ್ರಹ ಇಡಿಸಿದ್ದೂ ಉಂಟು.

ಕ್ರಿ.ಪೂ. 245 ರ ಅವಧಿಯಲ್ಲಿನ ಮೌರ್ಯ ಆಳ್ವಿಕೆಯ ಸಾಮ್ರಾಟ್ ಅಶೋಕನ ತಂದೆ ಬಿಂದುಸಾರನ ಅವಧಿಯಲ್ಲೇ ಬುದ್ದ ಅನುಯಾಯಿಯಾಗಿದ್ದ ಬುಡಕಟ್ಟಿಗೆ ಸೇರಿದ ಜನಾನುರಾಗಿ ಮಹಿಷನ ಊರು ಇತ್ತು ಎಂಬ ಉಲ್ಲೇಖಗಳನ್ನು ಪತ್ತೆ ಹಚ್ಚಲಾಗಿದೆ. ಇದೆಲ್ಲ ಹಿನ್ನೆಲೆಯಲ್ಲೇ ಮಹಿಷ ಎಂಬಾತ ಬುಡಕಟ್ಟಿನ ಆಳ್ವಿಕೆದಾರ, ಅವನ ಜನಪ್ರಿಯತೆ ಸಹಿಸದೆ ಮೇಲ್ವರ್ಗದವರು ಹೆಂಗಸಿನ ಮೂಲಕ ಹತ್ಯೆ ಮಾಡಿಸಿದರು ಎಂಬುದು ವಾದಾಂಶಗಳಾಗಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಪ್ರಗತಿಪರರು ಮೈಸೂರು ದಸರಾ ವೇಳೆಯಲ್ಲಿ ಸಾಂಕೇತಿಕವಾಗಿ ಮಹಿಷ ದಸರ ಆಚರಿಸುತ್ತಿದ್ದಾರೆ. ವರ್ಷವರ್ಷಕ್ಕೂ ಇದರ ಕಿಮ್ಮತ್ತು ಹೆಚ್ಚುತ್ತಿದ್ದು, ಚಾಮುಂಡೇಶ್ವರಿಯನ್ನ ದೇವತೆಯನ್ನಾಗಿಸಿ, ಮಹಾಬಲಾದ್ರಿ ಎಂಬ ಹೆಸರಿದ್ದ ಬೆಟ್ಟವನ್ನ ಚಾಮುಂಡಿ ಬೆಟ್ಟವನ್ನಾಗಿಸಿ, ನಾಡದೇವತೆಯಾಗಿಸಿರುವುದನ್ನ ಟೀಕಿಸಲಾಗುತ್ತಿದೆ.

ಬುದ್ದತತ್ವ ಪ್ರತಿಪಾದಕ ಬುಡಕಟ್ಟು ರಾಜನನ್ನ ಹಣಿದು, ಮೇಲ್ವರ್ಗ ಅದಕ್ಕೊಂದು ಪುರಾಣ, ಇತಿಹಾಸದ ಕತೆ ಕಟ್ಟಿದೆ. ಇದು ಸಲ್ಲದು. ಮಹಿಷನ ದಸರಾ ಆಚರಣೆಯಾಗಬೇಕು, ಕಟ್ಟುಕತೆಗಳನ್ನ ಮೂಲೆಗಿಡಬೇಕು ಎಂಬ ಧ್ವನಿಗಳು ಕೂಡ, ದಸರೆಯ ರಂಗು ರಂಗಿನ ನಡುವೆಯೇ ಮೊಳಗುತ್ತಿವೆ.